Tuesday, January 19, 2010

ಸಾಯಿ ಮಹಾ ಭಕ್ತ - ಶ್ರೀ ಸಾಯಿಪಾದಾನಂದ ರಾಧಾಕೃಷ್ಣ ಸ್ವಾಮೀಜಿ (೧೫-೦೪-೧೯೦೬ ಇಂದ ೧೪.೦೧.೧೯೮೦) - ಕೃಪೆ - ಸಾಯಿಅಮೃತಧಾರಾ.ಕಾಂ


ಶ್ರೀ ಸಾಯಿಪಾದಾನಂದ ರಾಧಾಕೃಷ್ಣ ಸ್ವಾಮೀಜಿಯವರು ತಮಿಳುನಾಡಿನ ತಿರುಚಿ ಜಿಲ್ಲೆಯ ಕುಳಿತಲೈ ತಾಲ್ಲೂಕಿನ ಪೊಯ್ಯಮನಿ ಎಂಬ ಗ್ರಾಮದಲ್ಲಿ ೧೫.೦೪.೧೯೦೬ ರಲ್ಲಿ ಜನಿಸಿದರು. ಶ್ರೀ.ಪುಡುಕ್ಕುಡಿ ಡಿ ವೆಂಕಟರಾಮ ಅಯ್ಯರ್ ಹಾಗೂ ಶ್ರೀಮತಿ.ಲಕ್ಷ್ಮೀ ಅಮ್ಮಾಳ್ ರವರ ೫ನೇ ಮಗನಾಗಿ ಇವರು ಜನಿಸಿದರು. ಚಿಕ್ಕಂದಿನಿಂದಲೇ ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ದೈವಿಕ ಶಕ್ತಿಯನ್ನು ಹೊಂದಿದ್ದರು. ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ನಿಸರ್ಗ ಪ್ರೇಮಿಯಾಗಿದ್ದರಿಂದ ಅದು ಅವರ ಆಧ್ಯಾತ್ಮಿಕ ಬೆಳವಣಿಗೆಗೆ ಇನ್ನು ಹೆಚ್ಚು ಸಹಕಾರಿಯಾಯಿತು. ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ಭಾರತದಾದ್ಯಂತ ಸಾಧು ಸಂತರನ್ನು ಭೇಟಿಯಾಗುತ್ತಿದ್ದರು, ದೇಗುಲಗಳ ದರ್ಶನ ಮಾಡುತ್ತಿದ್ದರು, ಧರ್ಮ, ಅಧ್ಯಾತ್ಮಿಕ ಮತ್ತು ಸಂತರ ಬಗ್ಗೆ ಬರೆದ ಮಹಾನ್ ಗ್ರಂಥಗಳನ್ನು ಓದುತ್ತಿದ್ದರು.

ಕಂಚಿ ಶೃಂಗೇರಿ ಪೀಠ ಹಾಗೂ ಕಂಚಿ ಜಗದ್ಗುರುಗಳು ಶ್ರೀ ರಾಧಾಕೃಷ್ಣ ಸ್ವಾಮೀಜಿಯವರ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಸಹೋದರನ ಜೊತೆಯಲ್ಲಿ ಪುಣೆಯಲ್ಲಿದ್ದಾಗ ಒಂದು ಗುಹೆಯಲ್ಲಿ ೪೮ ದಿನಗಳ ಕಾಲ ವಾಸ ಮಾಡುತ್ತಿದ್ದು ೪೬ನೇ ದಿವಸ ಇವರಿಗೆ ದತ್ತಾತ್ರೇಯ ದರ್ಶನನೀಡಿ ಲೋಕ ಕಲ್ಯಾಣ ಕಾರ್ಯ ಮಾಡುವಂತೆ ಪ್ರೇರೇಪಣೆ ನೀಡಿದರೆಂದು ತಿಳಿದುಬಂದಿದೆ.           

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ಸದಾಕಾಲ ಬಹಳ ಚುರುಕಾಗಿ ಮತ್ತು ಉತ್ಸಾಹದಿಂದ ಓಡಾಡುತ್ತಿದ್ದರು ಮತ್ತು ಬಹಳ ಪರಿಪೂರ್ಣ ಜೀವನವನ್ನು ನಡೆಸಿದರು. ಇವರು ದೇಶದ ಉದ್ದಗಲಕ್ಕೂ ಸಂಚರಿಸಿ ಶಿರಡಿ ಸಾಯಿಬಾಬಾರವರ ಹಾಗೂ ಅವರ ತತ್ವವನ್ನು ಪ್ರಚಾರ ಮಾಡಿದರು. ಇವರು ದಿನದ ೨೪ ಘಂಟೆಗಳೂ ಸಾಯಿಬಾಬಾರವರೊಡನೆ ಏಕತಾನತೆಯಿಂದ ಇದ್ದರು ಹಾಗೂ ಅವರ ಕಾರ್ಯಗಳೆಲ್ಲವೂ ಅವರಿಂದ ಪ್ರೇರೇಪಿತವಾಗಿದ್ದವು. ಶ್ರೀ ರಾಧಾಕೃಷ್ಣ ಸ್ವಾಮೀಜಿಯವರ ಭಕ್ತರೆಲ್ಲರಿಗೂ ಸ್ವಾಮೀಜಿಯವರು ಆಧ್ಯಾತ್ಮಿಕವಾಗಿ ಹಾಗೂ ಪ್ರಾಪಂಚಿಕವಾಗಿ ಅನುಗ್ರಹಿಸಿದ್ದಾರೆ. ಇವರ ಅನುಗ್ರಹ ಪಡೆಯದವರೇ ಇಲ್ಲವೆಂದು ನಾವು ಹೇಳಬಹುದು. ತಮ್ಮ ಸಮಾಧಿಯ ನಂತರವೂ ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ತಮ್ಮ ಭಕ್ತರನ್ನು ಅನುಗ್ರಹಿಸುತ್ತಲೇ ಇದ್ದಾರೆ. ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ತಮ್ಮ ಮರಣದ ದಿನವನ್ನು ಮೊದಲೇ ನಿಗದಿ ಮಾಡಿಕೊಂಡಿದ್ದಂತೆ ತೋರುತ್ತದೆ. ಏಕೆಂದರೆ, ಅವರು ಉತ್ತರಾಯಣಕ್ಕಾಗಿ ಕಾಯುತ್ತಿದ್ದರು. ೧೪ನೇ ಜನವರಿ ೧೯೮೦ ರಂದು ತಮ್ಮ ದೇಹತ್ಯಾಗ ಮಾಡಿ ಸಾಯಿಬಾಬಾರವರೊಡನೆ ಲೀನವಾದರು. ತಮ್ಮ ಭಕ್ತರೊಡನೆ ವಿಷ್ಣು ಸಹಸ್ರನಾಮ ಹಾಗೂ ಓಂ ನಮೋ ನಾರಾಯಣಾಯ ಮಂತ್ರಗಳನ್ನು ಪಠನ ಮಾಡುತ್ತಾ ತಮ್ಮ ಕೊನೆಯ ಘಳಿಗೆಯವರೆಗೂ ಎಚ್ಚರವಾಗಿದ್ದು ಸುಮಾರು ರಾತ್ರಿ ೧೦.೪೦ ರ ವೇಳೆಗೆ ಇಹಲೋಕವನ್ನು ತ್ಯಜಿಸಿದರು. ಮಾರನೆಯ ದಿನ ಅವರ ಅಂತ್ಯ ಸಂಸ್ಕಾರವನ್ನು ವೇದಘೋಷಗಳ ನಡುವೆ ಅತ್ಯಂತ ಶ್ರದ್ದೆಯಿಂದ ಭಕ್ತರೆಲ್ಲ ಸೇರಿ ನಡೆಸಿಕೊಟ್ಟರು.

ಈಗಲೂ ಅವರ ಭಕ್ತರಿಗೆ ಆಗಾಗ್ಗೆ ಸ್ವಪ್ನದಲ್ಲಿ ದರ್ಶನ ನೀಡುತ್ತ, ಅವರ ಕಷ್ಟಗಳಿಗೆ ಪರಿಹಾರವನ್ನು ನೀಡುತ್ತ ಇದ್ದರೆಂದು ಸ್ವತಃ ಅವರ ಭಕ್ತರೆ ಹೇಳುತ್ತಾರೆ. ಅವರ ಭಕ್ತರ ಮನೆಯಲ್ಲಿನ ಅವರ ಚಿತ್ರಪಟದಿಂದ ಮಾರ್ಗದರ್ಶನ ನೀಡುವಂತೆ ಕಾಣುವ ಅವರ ಕೈಗಳು ಮತ್ತು ಅತ್ಯಂತ ಪ್ರೀತಿಯನ್ನು ಸೂಸುವ ಅವರ ಕಣ್ಣುಗಳನ್ನು ನೋಡಿದಾಗ ಶಿರಡಿ ಸಾಯಿಬಾಬಾರವರ " ನಾನು ಇಲ್ಲಿರುವಾಗ ನಿಮಗೇಕೆ ಭಯ" ಎಂಬ ಉಕ್ತಿ ನೆನಪಿಗೆ ಬರುತ್ತದೆ.

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ತಿರುವಣ್ಣಾಮಲೈ ಗೆ ತೆರಳಿ ಶ್ರೀ ರಾಮನ ಮಹರ್ಷಿಗಳನ್ನು ಮತ್ತು ಶ್ರೀ ಶೇಷಾದ್ರಿ ಸ್ವಾಮಿಗಳನ್ನು ಭೇಟಿ ಮಾಡಿದ್ದರು. ಶ್ರೀ ಶೇಷಾದ್ರಿ ಸ್ವಾಮಿಗಳು ಇವರಿಗೆ ಮೂರು ಕಲ್ಲುಗಳನ್ನು ಕೊಟ್ಟು ಅದನ್ನು ತಿನ್ನಲು ಹೇಳಿದರು. ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ಅದನ್ನು "ಸತ್ವ, ರಾಜಸ ಹಾಗೂ ತಾಮಸ" ಎಂಬ ಮೂರು ಗುಣಗಳೆಂದು ಅರ್ಥೈಸಿದ್ದೆ ಅಲ್ಲದೆ ನಾವುಗಳು ಗುಣಾತೀತರಾಗಲು ಪ್ರಯತ್ನಿಸಬೇಕು ಎಂದು ಹೇಳುತ್ತಾರೆ.

೧೯೨೭ ರಲ್ಲಿ ಇವರು ಊಟಿಯ ಬಳಿಯಿರುವ ಖೇಡ್ ಗಾವ್ ನ ಶ್ರೀ ನಾರಾಯಣ ಮಹಾರಾಜರನ್ನು ಭೇಟಿ ಮಾಡಿ ಅವರಿಂದ ದತ್ತ ಮಂತ್ರದ ಉಪದೇಶವನ್ನು ಪಡೆದರು. ಅದೇ ವರ್ಷದಲ್ಲಿ ತಮ್ಮ ತಾಯಿಯ ಸಂಬಂಧಿಯಾದ ಪಾರ್ವತಿ ಎಂಬುವರನ್ನು ಮನೆಯವರ ಒತ್ತಾಯದ ಮೇರೆಗೆ ವಿವಾಹವಾದರು. ಆದರೆ ಕಮಲದ ಮೇಲಿನ ನೀರಿನಂತೆ ಯಾವುದೇ ಉತ್ಸಾಹವಿಲ್ಲದೆ ಜೀವನ ನಡೆಸಿದರು. ಅನೇಕ ವರ್ಷಗಳ ಸಂಸಾರದ ನಂತರ ಸನ್ಯಾಸವನ್ನು ಸ್ವೀಕರಿಸಿದರು ಮತ್ತು ಅವರ ಮನೆಯವರಿಗೆಲ್ಲ ದೊಡ್ಡ ಆಘಾತವನ್ನೇ ನೀಡಿದರು. ಅವರ ಧರ್ಮಪತ್ನಿಯವರು ಒಂಟಿ ಜೀವನ ನಡೆಸಿ ಪುನಃ ಸ್ವಾಮೀಜಿಯವರನ್ನು ಭೇಟಿ ಮಾಡದೆ ೧೯೭೯ರಲ್ಲಿ ಮರಣ ಹೊಂದಿದರು.

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ೧೯೪೩-೪೪ ರಲ್ಲಿ ತಮ್ಮ ಗುರುವನ್ನು ಶ್ರೀ ನರಸಿಂಹ ಸ್ವಾಮೀಜಿಯವರಲ್ಲಿ ಕಂಡು ಅವರ ಶಿಷ್ಯರಾದರು ಮತ್ತು ತಮ್ಮ ಗುರುಗಳಿಗೆ ಸಂಪೂರ್ಣ ಶರಣಾಗತರಾಗಿ ಅವರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು.

೧೯೫೨ ರಲ್ಲಿ ಗುರುಗಳು ಶ್ರೀ ರಾಧಾಕೃಷ್ಣ ಸ್ವಾಮೀಜಿಯವರನ್ನು ಸಾಯಿ ಪ್ರಚಾರ ಕಾರ್ಯಕ್ಕಾಗಿ ಬೆಂಗಳೂರಿಗೆ ಕಳುಹಿಸಿದರು. ೧೯೫೩ ರಲ್ಲಿ ಶ್ರೀ ನರಸಿಂಹ ಸ್ವಾಮೀಜಿಯವರು ಇವರಿಗೆ "ಸಾಯಿಪಾದಾನಂದ" ಎಂದು ಬಿರುದು ನೀಡಿ ಗೌರವಿಸಿದರು. ೧೯.೧೦.೧೯೫೬ ರ ಹುಣ್ಣಿಮೆಯ ದಿವಸ ಶ್ರೀ ನರಸಿಂಹ ಸ್ವಾಮೀಜಿಯವರು ಸಮಾಧಿ ಹೊಂದಿದರು. ಅದಕ್ಕೆ ಸ್ವಲ್ಪ ಸಮಯದ ಮುಂಚೆ ತಮ್ಮ ಎಲ್ಲ ಆಧ್ಯಾತ್ಮಿಕ ಶಕ್ತಿಗಳನ್ನು ತಮ್ಮ ಪ್ರಿಯ ಶಿಷ್ಯರಾದ ಶ್ರೀ ರಾಧಾಕೃಷ್ಣ ಸ್ವಾಮೀಜಿಯವರಿಗೆ ಧಾರೆಯೆರೆದರು.

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ತಮ್ಮ ಸತತ ಪರಿಶ್ರಮದಿಂದ ಸಾಯಿ ಆಧ್ಯಾತ್ಮಿಕ ಕೇಂದ್ರವನ್ನು ಬೆಂಗಳೂರಿನ ತ್ಯಾಗರಾಜನಗರದಲ್ಲಿ ೧೭ ನೇ ಜೂನ್ ೧೯೬೫ ರಂದು ಪ್ರಾರಂಭಿಸಿದರು.

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ೪ ಪ್ರಮುಖ ಸೂತ್ರಗಳನ್ನು ತಮ್ಮ ಭಕ್ತರಿಗೆ ಉಪದೇಶಿಸಿದ್ದರೆ. ಅವು ಯಾವುವೆಂದರೆ  ೧. ಪ್ರೀತಿ ೨. ಗುರುವಿನಲ್ಲಿ ಭಕ್ತಿ ೩. ದೇವರಲ್ಲಿ ಭಕ್ತಿ ೪. ಸತ್ಸಂಗ.

ಶ್ರೀ ರಾಧಾಕೃಷ್ಣ ಸ್ವಾಮೀಜಿಯವರು ಒಂದು ಸುಂದರವಾದ ವಿಶ್ವ ಶಾಂತಿ ಪ್ರಾರ್ಥನೆಯನ್ನು ಭಕ್ತರಿಗೆ ಹೇಳಿಕೊಟ್ಟಿದ್ದಾರೆ. ಅದು ಈ ಕೆಳಕಂಡಂತೆ ಇದೆ:

ದುಷ್ಟರು ಶಿಷ್ಟರಾಗಲಿ
ಶಿಷ್ಟರು ಶಾಂತಿಯನ್ನು ಪಡೆಯಲಿ
ಶಾಂತರಾದವರು ಎಲ್ಲ ಬಂಧಗಳಿಂದ ಮುಕ್ತರಾಗಲಿ
ಬಂಧಮುಕ್ತರಾದವರು ಇತರರನ್ನು ಉದ್ದರಿಸಲಿ
ಎಲ್ಲರು ಸಂತೋಷವಾಗಿರಲಿ
ಎಲ್ಲರು ಆರೋಗ್ಯವಂತರಾಗಿರಲಿ
ಎಲ್ಲರು ಅದೃಷ್ಟವಂತರಾಗಿರಲಿ
ಯಾರೂ ಕಷ್ಟಕ್ಕೆ ಒಳಗಾಗದಿರಲಿ
ಎಲ್ಲರ ತೊಂದರೆಗಳು ಪರಿಹಾರವಾಗಲಿ
ಎಲ್ಲರಿಗೂ ಒಳ್ಳೆಯ ಅದೃಷ್ಟವು ಪ್ರಾಪ್ತವಾಗಲಿ
ಎಲ್ಲರಿಗೂ ತಮ್ಮ ಆಶಯಗಳು ಫಲಿಸಲಿ
ಎಲ್ಲರೂ ಎಲ್ಲೆಡೆಯಲ್ಲೂ ಹರ್ಷವಾಗಿರಲಿ

No comments:

Post a Comment