Wednesday, January 20, 2010

ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆ -ಶಿವಮ್ಮ ತಾಯಿ  - ಕೃಪೆ - ಸಾಯಿಅಮೃತಧಾರಾ.ಕಾಂ

ಶಿವಮ್ಮ ತಾಯಿಯವರ ಭಾವಚಿತ್ರ

ತಮಿಳುನಾಡಿನ ಕೊಯಮತ್ತೂರಿನ ಬಳಿಯ ಪಾಪನಾಯಕನ ಪಾಳ್ಯ ಎಂಬ ಗ್ರಾಮದಲ್ಲಿ ತಂಗವೇಲ್ ಗೌಂಡರ್ ಎಂಬ ರಾಜಯೋಗಿಗಳಿದ್ದರು. ಅವರ ತಮ್ಮ ವೆಟ್ರಿವೇಲ್ ರವರು. ವೆಟ್ರಿವೇಲ್ ರವರ ಪತ್ನಿಯೇ ಪುಷ್ಪಾವತಮ್ಮನವರು. ಇವರ ಪುತ್ರಿಯೇ ಶಿವಮ್ಮ ತಾಯಿಯವರು. ಇವರು ವೆಲ್ಲಾಳ್ ಗೌಂಡರ್ ಜನಾಂಗಕ್ಕೆ ಸೇರಿದವರು. ವೆಟ್ರಿವೇಲ್ ರವರು ವ್ಯವಸಾಯದಿಂದ ಜೀವನ ನಡೆಸುತ್ತಿದರು. ಇವರಿಗೆ 4 ಎಕರೆ ಜಮೀನಿತ್ತು. ಅದರಲ್ಲಿ ತೋಟ ಮಾಡಿಕೊಂಡು ಜೀವನ ಮಾಡುತ್ತಿದ್ದರು. ತಮಗೆ ಇದ್ದ ಆ ಸ್ವಲ್ಪ ಜಮೀನಿನಲ್ಲೆ ಬೆಳೆ ತೆಗೆದು ತೃಪ್ತಿಯಿಂದ ಜೀವನ ನಡೆಸುತ್ತಿದ್ದರು. ಈ ಕುಟುಂಬದಲ್ಲಿ 29-05-1889 ರಂದು ಮನೆಯ ಹಿರಿಯ ಮಗಳಾಗಿ ಶಿವಮ್ಮ ತಾಯಿಯವರು ಜನಿಸಿದರು.  ಇವರಿಗೆ ತಂದೆ ತಾಯಿಗಳು ರಾಜಮ್ಮ ಎಂದು ನಾಮಕರಣ ಮಾಡಿದರು. ಆ ದಂಪತಿಗಳ ಮುದ್ದಿನ ಮಗಳಾಗಿ ಶಿವಮ್ಮ ತಾಯಿಯವರು ಬೆಳೆಯುತ್ತಿದ್ದರು. ಕಾಲಾನಂತರದಲ್ಲಿ ಆ ಸಂಸಾರಕ್ಕೆ ಇನ್ನು 3 ಜನ ಮಕ್ಕಳು ಸೇರ್ಪಡೆಯಾದರು. ಅವರಲ್ಲಿ ಶಿವಮ್ಮ ತಾಯಿಯವರಿಗೆ ಒಬ್ಬಳು ತಂಗಿ ಮತ್ತು ಇನ್ನಿಬ್ಬರು ತಮ್ಮಂದಿರು.

ಅಂದಿನ ಕಾಲದಲ್ಲಿ ಮದರಾಸು ರಾಜ್ಯದಲ್ಲಿ ಆಂಗ್ಲರ ಆಡಳಿತವಿತ್ತು. ವಿದ್ಯೆ ಕಲಿಯಲು ಸಾಕಷ್ಟು ಅನುಕೂಲ ಇರಲಿಲ್ಲ. ಇದರಿಂದ ಶಿವಮ್ಮ ತಾಯಿಯವರು ಸಹ ಪ್ರಾಪಂಚಿಕ ವಿದ್ಯೆ ಕಲಿಯಲು ಸಾಧ್ಯವಾಗಲಿಲ್ಲ. ಆದರೆ ಆ ಗ್ರಾಮದಲ್ಲಿದ್ದ ಕೂಲಿ ಮಠವೊಂದರಲ್ಲಿ ಒಬ್ಬ ನಾಯ್ಡು ಜನಾಂಗದವರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಅದೇ ಸ್ಥಳದಲ್ಲಿ ಶಿವಮ್ಮ ತಾಯಿಯವರು ಕೂಡ ಅಕ್ಷರಾಭ್ಯಾಸ ಮಾಡಿ 3ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ, ತಮಿಳಿನಲ್ಲಿ ಸ್ವಲ್ಪ ಮಟ್ಟಿಗೆ ಓದಲು ಮತ್ತು ಬರೆಯಲು ಕಲಿತರು.

ಮನೆಯ ಹಿರಿಯ ಮಗಳಾಗಿ ತಂದೆ ತಾಯಿಗಳಿಗೆ ತೋಟದ ಕೆಲಸದಲ್ಲಿ ನೆರವಾಗುತ್ತಿದ್ದರು. ತಂಗಿ ತಮ್ಮಂದಿರನ್ನು ನೋಡಿಕೊಳ್ಳುವ ಕೆಲಸವನ್ನು ಕೂಡ ಮಾಡುತ್ತಿದ್ದರು. ತಾಯಿಯವರು ತೋಟದ ಕೆಲಸಕ್ಕೆ ಹೋದಾಗ ಅಡಿಗೆ ಕೆಲಸ, ಬಡಿಸುವ ಕೆಲಸ ಮತ್ತು ಗ್ರಾಮದ ಹೆಂಗಸರೊಡನೆ ಒಡನಾಟ ಮಾಡುತ್ತಾ ವ್ಯವಹಾರಿಕ ಜ್ಞಾನವು ಚೆನ್ನಾಗಿ ಲಭ್ಯವಾಯಿತು. ತಾಯಿತಂದೆಯವರು ಮೃದುಸ್ವಭಾವದವರಾಗಿದ್ದರಿಂದ ಶಿವಮ್ಮ ತಾಯಿಯವರಿಗೂ ಸಹಜವಾಗಿ ಮೃದು ಸ್ವಭಾವ ರಕ್ತಗತವಾಗಿ ಬಂದಿತ್ತು.

ಶಿವಮ್ಮ ತಾಯಿಯವರು ವಯಸ್ಸಿಗೆ ಬಂದಾಗ ಇವರ ಮಾತಾ ಪಿತೃಗಳು ಇವರಿಗೆ ವಿವಾಹ ಮಾಡಲು ಯೋಚಿಸಿದರು. ಆಗ ಅವರ ಕುಟುಂಬದಲ್ಲಿ 9ನೇ ವಯಸ್ಸಿಗೆಲ್ಲ ವಿವಾಹ ಮಾಡುತ್ತಿದ್ದರು. ಇವರದು ದೊಡ್ಡ ಕುಟುಂಬವಾದರೂ ಎಲ್ಲರು ಬೇರೆ ಬೇರೆ ವಾಸ ಮಾಡುತ್ತಿದ್ದರು. ಇವರ ಚಿಕ್ಕಪ್ಪ, ದೊಡ್ಡಪ್ಪನವರ ಕುಟುಂಬವನ್ನೆಲ್ಲಾ ಸೇರಿಸಿದರೆ ಒಟ್ಟು ಐವತ್ತು ಮಂದಿ ಆಗುತ್ತಿದ್ದರು. ಅದರಲ್ಲಿ ಹದಿನೈದು ಮಂದಿ ಹೆಣ್ಣು ಮಕ್ಕಳೇ ಇದ್ದರು. ಶಿವಮ್ಮ ತಾಯಿಯವರಿಗೆ 12 ವರ್ಷವಾದರೂ ವಿವಾಹ ಮಾಡಿರಲಿಲ್ಲವಾದ್ದರಿಂದ ಕುಟುಂಬ ವರ್ಗದವರೆಲ್ಲ ಇವರ ಮಾತಾ ಪಿತೃಗಳನ್ನು ಆಕ್ಷೇಪಿಸುತ್ತಿದ್ದರು. ಆದ್ದರಿಂದ ಇವರ ತಂದೆ ತಾಯಿಗಳು ಶಿವಮ್ಮ ತಾಯಿಯವರಿಗೆ ಅತಿ ಶೀಘ್ರದಲ್ಲಿ ವಿವಾಹ ಮಾಡಲು ತೀರ್ವ ಪ್ರಯತ್ನ ಮಾಡುತ್ತಿದ್ದರು. ಪುಷ್ಪಾವತಮ್ಮನವರಿಗೆ ತಮ್ಮ ತಮ್ಮನಿಗೆ ಕೊಟ್ಟು ಶಿವಮ್ಮ ತಾಯಿಯವರನ್ನುವಿವಾಹ ಮಾಡಬೇಕೆಂಬ ಆಸೆಯಿತ್ತು. ವೆಟ್ರಿವೇಲ್ ರವರಿಗೆ ತಮ್ಮ ಅಕ್ಕನ ಮಗನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಇಚ್ಛೆ ಪ್ರಬಲವಾಗಿತ್ತು. ಇವರಿಬ್ಬರ ಇಚ್ಚೆಗೆ ವ್ಯತಿರಿಕ್ತವಾಗಿ ಪಕ್ಕದೂರಿನ ಶ್ರೀ.ಸುಬ್ಬಯ್ಯ ಎಂಬುವರೊದನೆ ಶಿವಮ್ಮ ತಾಯಿಯವರ ವಿವಾಹವು ಇವರ 13ನೇ ವಯಸ್ಸಿನಲ್ಲಿ ನೆರವೇರಿತು.

ಸುಬ್ಬಯ್ಯನವರು ಕೊಯಮತ್ತೂರಿನಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರದು ಸ್ವಲ್ಪ ಕಠಿಣ ಮತ್ತು ಶೀಘ್ರ ಮುಂಗೋಪಿ ಸ್ವಭಾವ. ಇವರು ಯಾರೊಂದಿಗೂ ಕೂಡ ಬೆರೆಯುತ್ತಿರಲಿಲ್ಲ. ತಾನು ಹೇಳಿದ್ದೇ ನಡೆಯಬೇಕೆಂಬ ಸ್ವಭಾವ. ಇವರು ತಮ್ಮ ಅತ್ತೆ ಮತ್ತು ಮಾವನವರೊಂದಿಗೆ ಒಟ್ಟಿಗೆ ಸಂಸಾರ ಮಾಡುತ್ತಿದ್ದರು. ಸಂಸಾರ ಸುಗಮವಾಗಿ ಸಾಗುತ್ತಿದ್ದರೂ ಕೂಡ ಶಿವಮ್ಮ ತಾಯಿಯವರಿಗೆ ಮನಸ್ಸಿಗೆ ಸಮಾಧಾನವಿರಲಿಲ್ಲ. ಸುಬ್ಬಯ್ಯನವರ ಹಠದ ಸ್ವಭಾವ ಶಿವಮ್ಮ ತಾಯಿಯವರಿಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ವಿವಾಹವಾದ 3 ತಿಂಗಳ ನಂತರ ಸುಬ್ಬಯ್ಯ ಮತ್ತು ಶಿವಮ್ಮ ತಾಯಿಯವರು ಬೇರೆ ಮನೆ ಮಾಡಿ ಸಂಸಾರ ಪ್ರಾರಂಭಿಸಿದರು.

ಹೀಗಿರುವಾಗ ಈ ದಂಪತಿಗಳಿಗೆ ಒಂದು ಗಂಡು ಮಗುವಿನ ಜನನವಾಯಿತು. ಆ ಮಗುವಿಗೆ ಮಣಿರಾಜ್ ಎಂದು ನಾಮಕರಣ ಮಾಡಿದರು. ಮಗುವಿನ ಆರೈಕೆಯಲ್ಲಿ ಶಿವಮ್ಮ ತಾಯಿಯವರು ತಮ್ಮ ಮಾನಸಿಕ ಅಶಾಂತಿಯನ್ನು ಮರೆತರು. ಸಂಸಾರ ಸಾಗಿಸುವುದರಲ್ಲಿ ಮಗ್ನರಾದರು.

ಇವರ ದೊಡ್ಡಪ್ಪನವರಾದ ತಂಗವೇಲ್ ಗೌಂಡರ್ ರವರು ಇವರ ಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು. ಅವರ ಮನೆಯಲ್ಲಿ ಸಾಧುಸಂತರ ಸತ್ಕಾರ ಬಹಳವಾಗಿ ನಡೆಯುತ್ತಿತ್ತು. ಅದರ ಪ್ರಭಾವ ಶಿವಮ್ಮ ತಾಯಿಯವರ ಮೇಲೆ ಆಯಿತು. ಹೀಗಾಗಿ ಶಿವಮ್ಮ ತಾಯಿಯವರು ಬಾಲ್ಯದಿಂದಲೇ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು.

ಸಾಯಿಬಾಬಾರವರು ಶಿವಮ್ಮ ತಾಯಿಯವರಿಗೆ ಸ್ವಪ್ನದಲ್ಲಿ ಗಾಯತ್ರಿ ಮಂತ್ರವನ್ನು ಉಪದೇಶಿಸಿದರಲ್ಲದೆ ಒಂದು ಸಣ್ಣ ಹಾಳೆಯಲ್ಲಿ ತಮಿಳಿನಲ್ಲಿ ಗಾಯತ್ರಿ ಮಂತ್ರವನ್ನು ಬರೆದು ಕೊಟ್ಟರು.  ಸಾಯಿಬಾಬಾರವರೇ ಶಿವಮ್ಮ ತಾಯಿಯವರಿದ್ದ ಸ್ಥಳಕ್ಕೆ ಬಂದು ಮಂತ್ರ ಉಪದೇಶ ನೀಡಿದರೆಂದ ಮೇಲೆ ಶಿವಮ್ಮ ತಾಯಿಯವರ ಪೂರ್ವಜನ್ಮದ ಸಂಸ್ಕಾರ ಎಂತದ್ದಿರಬಹುದೆಂದು ನಾವುಗಳೆಲ್ಲ ಉಹಿಸಿಕೊಳ್ಳಬಹುದು.

ಈ ಉಪದೇಶವಾದ ನಂತರ ಶಿವಮ್ಮ ತಾಯಿಯವರು ಶ್ರೀ ಸಾಯಿಬಾಬಾರವರನ್ನು ತಾವು ದರ್ಶಿಸಿರುವುದನ್ನಾಗಲಿ ಅಥವಾ ತಮಗೆ ಉಪದೇಶವಾದ ಮಂತ್ರವನ್ನಾಗಲಿ ಜ್ಞಾಪಕಮಾಡಿಕೊಳ್ಳಲಿಲ್ಲ. ಸಂಪೂರ್ಣವಾಗಿ ಮರೆತುಬಿಟ್ಟರು. ಸಂಸಾರ ಸಾಗರದಲ್ಲಿ ಮುಳುಗಿಹೋದರು. ಮಗ ಪ್ರಾಪ್ತ ವಯಸ್ಕನಾದ ಮೇಲೆ ಅವನಿಗೆ ಮದುವೆ ಮಾಡಿದರು. ಅವನು ಕೊಯಮತ್ತೂರಿನಲ್ಲಿ ಪೋಲಿಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದನು.

ಸುಬ್ಬಯ್ಯನವರಿಗೆ ಸ್ವಲ್ಪ ದಿನಗಳ ನಂತರ ಬೆಂಗಳೂರಿನ ಟಿ.ಆರ್.ಮಿಲ್ ನಲ್ಲಿ ಕೆಲಸ ಸಿಕ್ಕಿ ಅವರು ಬೆಂಗಳೂರಿಗೆ ಶಿವಮ್ಮ ತಾಯಿಯವರೊಂದಿಗೆ ಬಂದು ಸಂಸಾರ ಹೂಡಿದರು. ಮಗ ಮತ್ತು ಸೊಸೆ ಕೊಯಮತ್ತೂರಿನಲ್ಲೇ ವಾಸ ಮುಂದುವರೆಸಿದರು. ಬೆಂಗಳೂರಿಗೆ ಬಂದ 2 ವರ್ಷಗಳ ನಂತರ ಶಿವಮ್ಮ ತಾಯಿಯವರು ತಮ್ಮ ತೌರುಮನೆಗೆ ಹೋಗಿ 15 ದಿನಗಳಿದ್ದು ವಾಪಸಾದರು. ಆ ಕಾಲಕ್ಕೆ ಮಿಲ್ ನವರು ಸುಬ್ಬಯ್ಯನವರಿಗೆ ಚಾಮರಾಜಪೇಟೆಯಲ್ಲಿ ಒಂದು ಸೈಟ್ ನ್ನು ಕೊಟ್ಟರು. ಆ ಸೈಟ್ ನಲ್ಲಿ ಅವರು ಸ್ವಂತ ಮನೆಯನ್ನು ಕಟ್ಟಿಸಿದರು. ಆ ಮನೆ ಈಗಲೂ ಇದೆ.

ಆಗ ತಮ್ಮ ಮನೆಯ ಪಕ್ಕದಲ್ಲಿದ್ದ ವೈಶ್ಯ ಜನಾಂಗದ ಶ್ರೀಮತಿ ರಾಮಕ್ಕ ಎಂಬುವರು ತಾವು ಪಾರಾಯಣ ಮಾಡುತ್ತಿದ್ದ "ಸಟೀಕಾ ಜ್ಞಾನಸಿಂಧು" ಪಾರಾಯಣವನ್ನು ಕೆಲವು ಶಿವಮ್ಮ ತಾಯಿಯವರನ್ನು ಆಹ್ವಾನಿಸಿದರು. ಶಿವಮ್ಮ ತಾಯಿಯವರು ಅವರ ಮನೆಗೆ ಹೋದರು. ಅಲ್ಲಿ ಬ್ರಾಹ್ಮಣರಾದ ಶ್ರೀಮತಿ.ಅಲಮೇಲಮ್ಮ, ಶ್ರೀಮತಿ.ಪದ್ಮಮ್ಮ ಮತ್ತು ಲಿಂಗಾಯಿತ ಜನಾಂಗದ ಶ್ರೀಮತಿ ಶಿವಮ್ಮ ಎಂಬುವರೂ ಸೇರಿದ್ದರು.  ಕ್ರಮೇಣ ಪ್ರತಿನಿತ್ಯ ರಾಮಕ್ಕನವರ ಮನೆಯಲ್ಲಿ ಸಂಜೆಯ ವೇಳೆ ಜ್ಞಾನಸಿಂಧು ಪುಣ್ಯ ಗ್ರಂಥದ ಪಾರಾಯಣ ನಡೆಯಹತ್ತಿತು. ಒಮ್ಮೆ ಪಾರಾಯಣ ಭಾಗಕ್ಕೆ ಅರ್ಥವನ್ನು ವಿವರಿಸುವ ಸಂದರ್ಭ ಶಿವಮ್ಮ ತಾಯಿಯವರಿಗೆ ಒದಗಿಬಂದಿತು. ಆಗ ಶಿವಮ್ಮ ತಾಯಿಯವರು ಯಾವುದೇ ಅಡೆತಡೆಗಳಿಲ್ಲದೆ ಜ್ಞಾನಸಿಂಧುವಿಗೆ ಅರ್ಥವನ್ನು ಬಹಳ ಸೊಗಸಾಗಿ ವಿವರಿಸಿದರು. ಆ ವಿವರಣೆಯನ್ನು ಕೇಳಿ ಅಲ್ಲಿ ನರೆದಿದ್ದ ಎಲ್ಲರಿಗೂ ಬಹಳ ಆಶ್ಚರ್ಯವಾಯಿತು. ಆಗ ರಾಮಕ್ಕನವರು "ನಿಮಗೆ ಯಾವುದಾದರೂ ಗುರುವಿನಿಂದ ದೀಕ್ಷೆ ಆಗಿದೆಯೇ?" ಎಂದು ಕೇಳಿದರು. ಆಗ ಶಿವಮ್ಮ ತಾಯಿಯವರು ಯಾರಿಂದಲೂ ತಮಗೆ ದೀಕ್ಷೆ ಆಗಿಲ್ಲವೆಂದರು. ರಾಮಕ್ಕನವರು ಅದನ್ನು ಅಲ್ಲಗಳೆದು "ಇಲ್ಲ, ನಿಮಗೆ ಯಾರಿಂದಲಾದರೂ ಉಪದೇಶ, ದೀಕ್ಷೆ ಆಗಿರಲೇಬೇಕು" ಎಂದರು. ಶಿವಮ್ಮ ತಾಯಿಯವರು ಅದನ್ನು ಸಂಪೂರ್ಣವಾಗಿ ನಿರಾಕರಿಸಿದರು. ಆಗ ರಾಮಕ್ಕನವರು "ಯಾರಿಂದಲೂ ಉಪದೇಶ ಅಥವಾ ದೀಕ್ಷೆ ಆಗದೆ ಜ್ಞಾನಸಿಂಧುವಿನಂತಹ ಗ್ರಂಥಕ್ಕೆ ವಿವರಣೆ ನೀಡಬಾರದು, ಅರ್ಥ ಹೇಳಬಾರದು" ಎಂದು ಹೇಳಿದರು. ಆಗ ಶಿವಮ್ಮ ತಾಯಿಯವರು "ಹಾಗಾದರೆ ಯಾರಾದರೂ ಅಂತಹ ಗುರುಗಲಿದ್ದರೆ ನಾನು ಖಂಡಿತ ದೀಕ್ಷೆ ತೆಗೆದುಕೊಳ್ಳುತ್ತೇನೆ. ಆದರೆ ಗುರುಗಳು ಹೆಂಗಸರಾಗಿರಬೇಕು" ಎಂದು ಹೇಳಿದರು.

ಆಗ ಅವರಿಗೆ ತಮಗೆ ಶಿರಡಿ ಸಾಯಿಬಾಬಾರವರಂತಹ ಸಂತ ಸದ್ಗುರುವಿನಿಂದ ಉಪದೇಶ ದೀಕ್ಷೆ ಕೊಡಲ್ಪಟ್ಟಿದೆ ಎಂದು ನೆನಪಾಗಲೇ ಇಲ್ಲ. ಹೀಗಿರುವಾಗ ಶಿವಮ್ಮ ತಾಯಿಯವರ ಮನೆಯ ಪಕ್ಕದಲ್ಲಿದ್ದ ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರಾದ ಮೊದಲಿಯಾರ್ ಕುಟುಂಬದವರು ಇವರನ್ನು ಶಿರಡಿ ಸಾಯಿಬಾಬಾರವರ ಪೂಜೆಗೆ ಒಂದು ಗುರುವಾರ ಆಹ್ವಾನಿಸಿದರು. ಅವರ ಮನೆಯಲ್ಲಿದ್ದ ಶಿರಡಿ ಸಾಯಿಬಾಬಾರವರ ಫೋಟೋ ನೋಡಿ ಶಿವಮ್ಮ ತಾಯಿ ಆಕರ್ಷಿತರಾದರು. ಪೂಜೆ ಮುಗಿದ ನಂತರ ಯಾವ ಸಂಕೋಚವೂ ಇಲ್ಲದೆ ಆ ಮನೆಯವರ ಹತ್ತಿರ ಆ ಫೋಟೋ ತಮಗೆ ಬೇಕೆಂದು ಬೇಡಿಕೆ ಇಟ್ಟರು. ಆ ಮೊದಲಿಯಾರ್ ಕುಟುಂಬದವರು ಸಂತೋಷದಿಂದ ಶಿರಡಿ ಸಾಯಿಬಾಬಾರವರ ಫೋಟೋವನ್ನು ಶಿವಮ್ಮ ತಾಯಿಯವರಿಗೆ ಕೊಟ್ಟರು. ಮನೆಯಲ್ಲಿ ಆ ಫೋಟೋವನ್ನಿಟ್ಟು ಶಿವಮ್ಮ ತಾಯಿ ಪೂಜಿಸಲು ಪ್ರಾರಂಭಿಸಿದರು.  ಆಗಲೂ ಕೂಡ ಅವರಿಗೆ ತಮಗೆ ಆದ ಸಾಯಿಯವರ ಉಪದೇಶದ ನೆನಪಾಗಲಿಲ್ಲ.

ಉಪದೇಶ, ದೀಕ್ಷೆ ಕೊಡುವ ಗುರುವಿಗಾಗಿ ರಾಮಕ್ಕ ಎಷ್ಟು ದಿನ ಹುಡುಕಿದರೂ ಅಂತಹವರಾರೂ ಸಿಗಲಿಲ್ಲ. ಶಿವಮ್ಮ ತಾಯಿಯವರು ಒಂದೇ ಸಮನೇ ಒತ್ತಾಯ ಮಾಡುತ್ತಿದ್ದರು. ಒಂದು ದಿನ 15 ವರ್ಷದ ಸುಂದರವಾದ ಬಾಲಕನೊಬ್ಬ ಶಿವಮ್ಮ ತಾಯಿಯವರ ಮನೆಯ ಮುಂದೆ ಬಂದು ನಿಂತುಕೊಂಡು "ಶಿವಮ್ಮ ತಾಯಿಯವರ ಮನೆ ಇದೇನಾ" ಎಂದು ಕೇಳಿದನು. ಶಿವಮ್ಮನವರು ಹೊರಗಡೆ ಬಂದು ತಾವೇ ಶಿವಮ್ಮ ತಾಯಿ ಎಂದು ಹೇಳಿಕೊಂಡರು. ಆಗ ಆ ಬಾಲಕ ಕಡಪದ ರಾಜಯೋಗಿ ಸಚ್ಚಿದಾನಂದ ಯೋಗಿಶ್ವರರು ತಮಿಳಿನಲ್ಲಿ ರಚಿಸಿದ್ದ "ಜನನ ಮರಣ" ಮತ್ತು "ಪಾರಿಜಾತ" ಎಂಬ ಎರಡು ಪುಸ್ತಕಗಳನ್ನು ಶಿವಮ್ಮನವರ ಕೈಗೆ ಕೊಟ್ಟು "ಇವು ನಿಮಗೆ ಯೋಗ್ಯವಾದವು. ನಮ್ಮಂತ ಹುಡುಗರಿಗೆ ಏಕೆ?" ಎಂದು ಹೇಳಿ ಆ ಪುಸ್ತಕಗಳನ್ನು ಇವರ ಕೈಗೆ ಕೊಟ್ಟು ಏನನ್ನು ಕೂಡ ತಿನ್ನದೇ ಹಾಗೆಯೇ ಹೊರಟು ಹೋದವನು ಮತ್ತೆ ಕಾಣಲೇ ಇಲ್ಲ. ಹಾಗಾದರೆ ಬಂದವರು ಸಾಯಿಬಾಬಾರವರೇ?

ಶಿವಮ್ಮ ತಾಯಿಯವರು ಆ ಪುಸ್ತಕಗಳನ್ನು ತೆಗೆದುಕೊಂಡು ದೇವರ ಗೂಡಿನಲ್ಲಿಟ್ಟು ಪುನಃ ಮರೆತುಬಿಟ್ಟರು. ಮುಂದೆ ಒಂದು ದಿನ ಕನಸಿನಲ್ಲಿ ಒಬ್ಬ ಮುದುಕ (ಸಾಯಿಬಾಬಾರವರು) ಅವರ ಕನಸಿನಲ್ಲಿ ಬಂದು "ಜನನ ಮರಣ" ಪುಸ್ತಕ ತೆರೆದು ನೋಡು ಎಂದು ಹೇಳಿದನು.ಬೆಳಿಗ್ಗೆ ಎದ್ದು ಶಿವಮ್ಮನವರು ನಿತ್ಯಕರ್ಮಗಳನ್ನೆಲ್ಲ ಮುಗಿಸಿ ಪೂಜೆ ಮಾಡಿ ಆ ಪುಸ್ತಕವನ್ನು ತೆರೆದು ನೋಡಿದರು. ಆಗ ಅದರಲ್ಲಿ ಈ ಹಿಂದಿ ಸದ್ಗುರು ಶಿರಡಿ ಸಾಯಿಬಾಬಾರವರು ಸ್ವಹಸ್ತದಿಂದ ಬರೆದುಕೊಟ್ಟಿದ್ದ ಗಾಯತ್ರಿ ಮಂತ್ರದ ಚೀಟಿ ಇತ್ತು. ಆ ಚೀಟಿಯನ್ನು ನೋಡಿದ ಕೂಡಲೇ ಶಿವಮ್ಮನವರಿಗೆ ಈ ಹಿಂದೆ ನಡೆದಿದ್ದೆಲ್ಲ ಜ್ಞಾಪಕಕ್ಕೆ ಬಂದಿತು. ಕನಸಿನಲ್ಲಿ ಬಂದಿದ್ದ ಮುದುಕ ಮತ್ತು ಈ ಹಿಂದೆ ತಮನ್ನು ಗುರುತಿಸಿ ಉಪದೇಶ ನೀಡಿದ ಗುರುಗಳು ಒಬ್ಬರೇ ಎಂದು ಅವರಿಗೆ ಅರಿವಾಯಿತು. ಆಗ ಶಿವಮ್ಮನವರಿಗೆ ಅತೀವ ಆನಂದವಾಯಿತು. ಕೂಡಲೇ ಶಿವಮ್ಮ ರಾಮಕ್ಕನವರ ಮನೆಗೆ ಹೋಗಿ ನಡೆದದ್ದನ್ನೆಲ್ಲ ವಿವರಿಸಿ ಹೇಳಿದರು. ರಾಮಕ್ಕನವರು ಕೂಡ ಹರ್ಷಭರಿತರಾಗಿ "ನೀನೇ ಪುಣ್ಯವಂತೆ ತಾಯಿ. ಒಳ್ಳೆಯ ಸದ್ಗುರುವಿನಿಂದಲೇ ನಿನಗೆ ಉಪದೇಶವಾಗಿದೆ. ಇನ್ಯಾವ ಗುರುವಿನಿಂದಲೂ ನಿನಗೆ ಉಪದೇಶದ ಅಗತ್ಯವಿಲ್ಲ" ಎಂದು ತಿಳಿಸಿದರು.

 ಮನೆಗೆ ಬಂದ ಶಿವಮ್ಮ ತಾಯಿಯವರು ಶಿರಡಿ ಸಾಯಿಬಾಬಾರವರ ಈ ಲೀಲೆಯನ್ನು ಕಂಡು ಪುಳಕಿತರಾದರು. ಕಳುವಾದ ಟ್ರಂಕ್ ನಲ್ಲಿದ್ದ ಈ ಚೀಟಿ ಜನನ ಮರಣ ಪುಸ್ತಕದಲ್ಲಿ ಬಂದಿದ್ದು ಹೇಗೆ? ಆ ಪುಸ್ತಕ ತಂದುಕೊಟ್ಟ ಹುಡುಗ ಯಾರು? ಸಾಯಿಬಾಬಾರವರು ತಾವಿದ್ದ ಊರಿಗೆ ಬಂದು ತಮಗೆ ಉಪದೇಶ ನೀಡಲು ಕಾರಣವೇನು? ಪುನಃ ಬಾಬಾರವರೇ ಮುದುಕನ ರೂಪದಲ್ಲಿ ಕನಸಿನಲ್ಲಿ ಬಂದು ತಮಗೆ ಮರೆತಿದ್ದನ್ನು ಜ್ಞಾಪಕ ಮಾಡಲು ಕಾರಣವೇನು? ಎಂದು ಇಡೀ ದಿವಸ ಚಿಂತಿಸಿದರು. ಇದೆಲ್ಲವೂ ಸಾಯಿಬಾಬಾರವರ ಪವಾಡವಲ್ಲದೆ ಮತ್ತಿನ್ನೇನು? ಈ ಘಟನೆಯಿಂದ ಸಾಯಿಬಾಬಾರವರು ತಮ್ಮಿಂದ ಏನನ್ನೋ ಅಪೇಕ್ಷಿಸುತ್ತಿದ್ದಾರೆ ಎಂದು ಮನಗಂಡರು.

 ಆ ದಿನ ರಾತ್ರಿ ಶಿವಮ್ಮ ತಾಯಿಯವರು ಧ್ಯಾನಕ್ಕೆಕುಳಿತು ಮಂತ್ರವನ್ನು ಪಠಣ ಮಾಡಬೇಕೆಂದುಕೊಂಡು ಸಾಯಿಬಾಬಾರವರ ಫೋಟೋಕ್ಕೆ ಎದುರಾಗಿ ಕುಳಿತಿದ್ದಾಗ ಪುನಃ ಸಾಯಿಬಾಬಾರವರು ಕಾಣಿಸಿಕೊಂಡು "ಹರಿ ಇರುವುದು ಯಾವ ದಿಕ್ಕಿಗೆ. ಉತ್ತರ ದಿಕ್ಕಿಗೆ ತಿರುಗಿ ಕುಳಿತುಕೋ" ಎಂದು ಹೇಳಿ ಶಿವಮ್ಮನವರ ಭುಜವನ್ನು ಹಿಡಿದು ಉತ್ತರ ದಿಕ್ಕಿಗೆ ತಿರುಗಿಸಿ ಮಾಯವಾದರು.

ಆ ಗುರುವಾರದ ಪವಿತ್ರ ದಿನದಿಂದಲೇ ಶಿವಮ್ಮ ತಾಯಿಯವರು ತಮ್ಮ ಮನೆಯಲ್ಲೂ ಪ್ರತಿ ಗುರುವಾರ ಶಿರಡಿ ಸಾಯಿಬಾಬಾರವರ ಪೂಜೆಯನ್ನು ಮಾಡಲು ಶುರು ಮಾಡಿದರು. ಸಾಯಿಬಾಬಾರವರು ತೋರಿದ ದಾರಿಯಲ್ಲಿ ನಡೆಯುತ್ತಾ ತಮ್ಮ ತಪೋಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಸಾಯಿಯವರು ಕೂಡ ಇವರಿಗೆ ಮಾರ್ಗದರ್ಶನ ಮಾಡುತ್ತಾ ಹೋದರು. ಸಾಯಿಬಾಬಾರವರ ಕೃಪೆ ತಮ್ಮ ಮೇಲೆ ಇರುವುದನ್ನು ಮನಗಂಡ ಶಿವಮ್ಮ ತಾಯಿಯವರು ತಮ್ಮ ಗುರುವಿಗೆ ಸಂಪೂರ್ಣ ಶರಣಾಗತರಾದರು. ನಿತ್ಯ ತಮ್ಮ ಮನೆಯಲ್ಲಿ ತಮ್ಮ ಪತಿಯೊಡನೆ ಏನೇ ಜಗಳ, ತೊಂದರೆಗಳಾದರೂ ಎಲ್ಲವನ್ನು ಬಾಬಾರವರ ಫೋಟೋದ ಮುಂದೆ ಕುಳಿತು ನಿವೇದಿಸಿಕೊಳ್ಳುತ್ತಿದ್ದರು. ಬಾಬಾರವರು ಏನು ಉತ್ತರ ಕೊಟ್ಟರೆ ಅದರ ಪ್ರಕಾರ ನಡೆಯುತ್ತಿದ್ದರು. ಭಕ್ತರು ಬಂದು ತಮ್ಮ ಕಷ್ಟಗಳನ್ನು ಇವರ ಬಳಿ ಹೇಳಿಕೊಳ್ಳುತ್ತಿದ್ದರು. ಆಗ ಸಾಯಿಬಾಬಾರವರು ಅಪ್ಪಣೆ ಕೊಟ್ಟರೆ ಮಾತ್ರ ಬಾಬಾರವರೇ ಸ್ವತಃ ತಮಗೆ ತಿಳಿಸಿದ್ದನ್ನು ಅವರಿಗೆ ಹೇಳುತ್ತಿದ್ದರು. ಬಾಬಾರವರು ಒಮ್ಮೆ ಇಂಗ್ಲೀಷ್ ನಲ್ಲಿ "ನೋ" ಎಂದು ಹೇಳಿದ್ದನ್ನು ಶಿವಮ್ಮ ತಾಯಿಯವರು ಪ್ರಶ್ನೆಯನ್ನು ಕೇಳಿದ ಭಕ್ತರಿಗೆ ಹಾಗೆಯೇ ಹೇಳಿ ತಮಗೆ ಅದರ ಅರ್ಥ ಗೊತ್ತಿರುವುದಿಲ್ಲ ಅಂದು ಅದರ ಅರ್ಥವನ್ನು ಆ ಭಕ್ತರಿಂದಲೇ ಕೇಳಿ ತಿಳಿದುಕೊಂಡರು.

ಪ್ರತಿ ಗುರುವಾರ ಮನೆಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಸಾಯಿಬಾಬಾರವರ ಪೂಜೆಯನ್ನು ಮಾಡುತ್ತಿದ್ದರು. ಪೂಜೆಗೆ ಅಕ್ಕಪಕ್ಕದ ಮನೆಯವರನ್ನು, ಸಾಧು ಸಂತರನ್ನು ಕೂಡ ಆಹ್ವಾನಿಸುತ್ತಿದ್ದರು. ಪೂಜೆಯ ನಂತರ ಪ್ರಸಾದವಾಗಿ ಪಾನಕ, ಕೋಸಂಬರಿ, ರಸಾಯನ ಮಾಡುತ್ತಿದ್ದರು. ಸಾಧು ಸಂತರಿಗೆ ಊಟವನ್ನು ಹಾಕುತ್ತಿದ್ದರು. ಈ ಕಾರ್ಯದಲ್ಲಿ ಇವರ ಪತಿ ಸುಬ್ಬಯ್ಯನವರು ಕೂಡ ಸಹಕರಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ಶಿವಮ್ಮ ತಾಯಿಯವರಿಗೆ ಶಿರಡಿಗೆ ಹೋಗಿ ಸಾಯಿಯವರ ದರ್ಶನ ಪಡೆಯಬೇಕೆಂಬ ಬಯಕೆ ಶುರುವಾಯಿತು. ಆದರೆ, ಅವರ ಗಂಡನ ಅನುಮತಿಯಿಲ್ಲದೆ ಹೋಗುವ ಹಾಗಿರಲಿಲ್ಲ. ಅವರ ಗಂಡನಿಗೆ ಈ ವಿಷಯವನ್ನು ತಿಳಿಸಿದರು. ಅವರ ಗಂಡನಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ಆಗ ಸುಬ್ಬಯ್ಯನವರು "ಶಿರಡಿಯಲ್ಲಿ ಏನಿದೆ, ಅಲ್ಲಿ ಹೋಗಿ ನೋಡುವುದು ಏನು ಇಲ್ಲ. ಏನು ಬೇಡ" ಎಂದು ಹೇಳಲು, ಶಿವಮ್ಮ ತಾಯಿಯವರು ಮತ್ತೆ ಮತ್ತೆ ಬಲವಂತ ಮಾಡಲಾಗಿ "ನಿನ್ನ ಗುರುವು ನಮ್ಮ ಮನೆಯಲ್ಲಿರುವ ಏಳು ಹಲ್ಲಿನ ಆ ಮುದಿ ಹಸುವನ್ನು ಮಾರಾಟ ಮಾಡಿಸಿದರೆ, ಅದರಿಂದ ಬಂದ ಹಣದಲ್ಲೇ ಶಿರಡಿಗೆ ಹೋಗಿ ಬರೋಣ" ಎಂದರು. "ಹಸು ಮಾರಾಟವಾಗದೆ ಹೋದರೆ ಆ ನಿನ್ನ ಗುರುವಿನ ಫೋಟೋವನ್ನು ತೆಗೆದುಕೊಂಡು ಹೋಗಿ ಕೆಂಪಾಂಬುಧಿ ಕೆರೆಯಲ್ಲಿ ಹಾಕುತ್ತೇನೆ" ಎಂದು ಕಠಿಣವಾಗಿ ನುಡಿದರು. ಸಾಯಿಬಾಬಾರವರ ಫೋಟೋದ ಮುಂದೆ ಶಿವಮ್ಮ ತಾಯಿಯವರು ಆ ಹಸುವನ್ನು ಮಾರಾಟ ಮಾಡಿಸಿಕೊಟ್ಟು ತಮ್ಮನ್ನು ಶಿರಡಿಗೆ ಕರೆಸಿಕೊಳ್ಳುವಂತೆ ಸಾಯಿಯವರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದರು. ಅವರು ಕೇಳಿಕೊಂಡ 3 ದಿನದಲ್ಲಿ ಆ ಹಸುವು ಮಾರಾಟವಾಯಿತು. ಈ ಪವಾಡ ಜರುಗಿದ್ದರಿಂದ ಶಿವಮ್ಮ ತಾಯಿಯವರ ಗಂಡನು ಅವರನ್ನು ಶಿರಡಿಗೆ ಕರೆದುಕೊಂಡು ಹೋಗಲು ಒಪ್ಪಿದರು. ಶಿರಡಿಗೆ ಹೋಗಲು ಸಿದ್ದತೆ ಮಾಡಿಕೊಡು ಒಂದು ಶುಭದಿನ ಶಿರಡಿಗೆ ಇವರು, ಇವರ ಪತಿ ಮತ್ತು ಇವರ ಮನೆಯ ಕೆಲಸ ಮಾಡುತ್ತಿದ್ದ ತಿಮ್ಮಕ್ಕ, ಈ 3 ಜನ ರೈಲಿನಲ್ಲಿ ಶಿರಡಿಗೆ ಹೊರಟರು. ದಾರಿಯಲ್ಲಿ ಒಬ್ಬ ಮುದುಕನ ವೇಷದಲ್ಲಿ ಸಾಯಿಬಾಬಾರವರು ಬಂದು ಎಲೆ ಅಡಿಕೆ ಮತ್ತು ಸುಣ್ಣವನ್ನು ತಿಮ್ಮಕ್ಕನವರಿಗೆ ನೀಡಿ ಬೋಗಿಯಲ್ಲಿದ್ದ ಎಲ್ಲರಿಗೂ ದರ್ಶನ ನೀಡಿ ಕೂಡಲೇ ಅದೃಶ್ಯರಾಗಿದ್ದನ್ನು ಅಲ್ಲಿದ್ದವರೆಲ್ಲ ನೋಡಿದರು. ಶಿರಡಿಗೆ ಬಂದು ಶಿವಮ್ಮ ತಾಯಿಯವರು ಸಾಯಿಬಾಬಾರವರು ತಿರುಗಾಡಿದ, ಕುಳಿತುಕೊಳ್ಳುತ್ತಿದ್ದ ಜಾಗದಲ್ಲೆಲ್ಲ ಓಡಾಡಿ ಆನಂದದಿಂದ ಪುಳಕಿತರಾದರು. ಅಲ್ಲಿಗೆ ಬಂದಿದ್ದ ಭಕ್ತರಿಂದ ಸಾಯಿಬಾಬಾರವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಂಡರು. ಸಾಯಿಯವರು ಇರುತ್ತಿದ್ದ ದ್ವಾರಕಾಮಾಯಿ, ಚಾವಡಿ,ಧುನಿ, ನಂದಾದೀಪ, ಬೇವಿನ ಮರ, ಮಹಾಳಸಪತಿಯವರ ಮನೆಯಲ್ಲಿದ್ದ ಬಾಬಾರವರ ವಿಗ್ರಹ ಮತ್ತು ಪೂಜೆಯ ಸಲಕರಣೆಗಳು, ಲಕ್ಷ್ಮಿಭಾಯಿಯವರಿಗೆ ಸಾಯಿಯವರು ನವವಿಧ ಭಕ್ತಿಯ ಕುರುಹಾಗಿ ನೀಡಿದ 9 ನಾಣ್ಯಗಳು ಎಲ್ಲವನ್ನು ನೋಡಿದರು. ಲಕ್ಷ್ಮೀ ಭಾಯಿಯವರನ್ನು ಕಂಡು ಅವರಿಗೆ ನಮಸ್ಕರಿಸಿ ಅವರಿಂದ ಅನುಗ್ರಹ ಪಡೆದುಕೊಂಡರು. ಅಲ್ಲಿಯೂ ಸಾಯಿಬಾಬಾರವರು ಅನೇಕ ಪವಾಡಗಳನ್ನು ಶಿವಮ್ಮ ತಾಯಿಯವರಿಗೆ ತೋರಿಸಿದರು.

ಶಿರಡಿಯಿಂದ ಹಿಂತಿರುಗಿದ ಮೇಲೆ ಶಿವಮ್ಮ ತಾಯಿಯವರು ಇನ್ನು ಹೆಚ್ಚು ಭಕ್ತಿಯಿಂದ ಪೂಜೆ, ಭಜನೆ, ಧ್ಯಾನ, ಸಾಧು ಸಂತರ ಸೇವೆ, ಅನ್ನದಾನ ಮಾಡಲು ಪ್ರಾರಂಭಿಸಿದರು. ಎಲ್ಲೆಲ್ಲಿ ಗುರು ಪೂಜೆಗಳು ನಡೆದರೂ ಅಲ್ಲಿಗೆ ಹೋಗಿ ಬರುತ್ತಿದ್ದರು. ಅನೇಕ ಸಾಧು ಸಂತರನ್ನು ತಮ್ಮ ಮನೆಗೆ ಆಹ್ವಾನಿಸಿ ಆತಿಥ್ಯ ನೀಡುತ್ತಿದ್ದರು. ಸಾಯಿಯವರು ತಮಗೆ ನೀಡಿದ ಮಾರ್ಗದರ್ಶನದಂತೆ ತಮ್ಮ ಬಳಿ ಬಂದ ಭಕ್ತರ ಕಷ್ಟಗಳನ್ನು ನಿವಾರಿಸುತ್ತಿದ್ದರು. ಅನೇಕ ಭಕ್ತರ ಖಾಯಿಲೆಗಳನ್ನು ಸಾಯಿಬಾಬಾರವರು ನೀಡಿದ ಮಾರ್ಗದರ್ಶನದಂತೆ ಉತ್ತರಿಸಿ ಆ ಭಕ್ತರ ಖಾಯಿಲೆಯನ್ನು ಗುಣಪಡಿಸಿದರು. ಒಂದು ಏಕಾದಶಿ ದಿವಸ ಶಿವಮ್ಮ ತಾಯಿಯವರು ತುಳಸಿ ಪೂಜೆಯನ್ನು ಮಾಡುತ್ತಿದ್ದಾಗ ಒಂದು ಬಟ್ಟೆಯ ಗಂಟು ಇವರ ಹತ್ತಿರ ಬಿದ್ದಿತು. ಆ ಗಂಟನ್ನು ಬಿಚ್ಚಿ ನೋಡಲಾಗಿ ಅದರಲ್ಲಿ ಎರಡು ಸಣ್ಣ ಬೆಳ್ಳಿಯ ಪಾದುಕೆಗಳಿದ್ದವು. ಆ ಬಟ್ಟೆಯು ಪವಿತ್ರ ಭಗವಾದ್ವಜವಾಗಿತ್ತು. ಅಂದಿನಿಂದ ಆ ಪಾದುಕೆಗಳನ್ನು ಪೂಜಗೃಹದಲ್ಲಿ ಇಟ್ಟು ಪೂಜಿಸಲು ಆರಂಭಿಸಿದರು.

ಈ ನಡುವೆ ಮದರಾಸು ಸರ್ಕಾರದಲ್ಲಿ ಪೋಲಿಸ್ ಇಲಾಖೆಯಲ್ಲಿದ್ದ ಇವರ ಮಗ ಮಣಿರಾಜ್ ಒಂದು ಗಂಡು ಮಗುವಾದ ನಂತರ ಅಕಾಲ ಮರಣ ಹೊಂದಿದರು. ಅದನ್ನು ಕಂಡ ಇವರ ಸೊಸೆ ಕೂಡ ವಿಷವನ್ನು ಸೇವಿಸಿ ಮಣಿರಾಜ್ ಎದೆಯ ಮೇಲೆ ತಮ್ಮ ತಲೆಯಿಟ್ಟು ಪ್ರಾಣಬಿಟ್ಟರು. ಮಗುವನ್ನು ಮಣಿರಾಜ್ ಅತ್ತೆ ಮಾವ ನೋಡಿಕೊಳ್ಳುವುದಾಗಿ ಹೇಳಿ ತೆಗೆದುಕೊಂಡು ಹೋದರು. ಮಗ ಸೊಸೆಯರ ಎಲ್ಲಾ ಕರ್ಮಗಳನ್ನು ಮಾಡಿ ಮುಗಿಸಿದ ಮೇಲೆ ಶಿವಮ್ಮ ತಾಯಿಯವರಿಗೆ ಗೃಹತ್ಯಾಗ ಮಾಡಿ ಕಾಶಿಗೆ ಹೊಗಿಬರಬೇಕೆಂದು ಅನ್ನಿಸಿ ತಮ್ಮ ಪತಿಗೆ ಈ ವಿಷಯವನ್ನು ತಿಳಿಸಿದರು. ಅವರ ಪತಿ "ನೀನು ಬೇಕಾದರೆ ಹೋಗು. ನಾನು ಬರುವುದಿಲ್ಲ. ಆದರೆ ನೀನು ಹೋಗುವುದಾದರೆ ನನಗೆ ಇನ್ನೊಂದು ಮದುವೆ ಮಾಡಿ ಹೋಗು" ಎಂದರು. ಆಗ ಅವರ ವಯಸ್ಸು 68 ವರ್ಷ. ಶಿವಮ್ಮ ತಾಯಿಯವರು ಮತ್ತೊಮ್ಮೆ ಗಂಡನನ್ನು ಕೇಳಿ ಆ ವಿಚಾರವನ್ನು ಧೃಡಪಡಿಸಿಕೊಂಡರು. ನಂತರ 1 ತಿಂಗಳಿನಲ್ಲಿ ಹೆಣ್ಣನ್ನು ಹುಡುಕಿ ತನ್ನ ಗಂಡನಿಗೆ ಇನ್ನೊಂದು ವಿವಾಹ ಮಾಡಿದರು. ಈ ವಿಷಯದಲ್ಲೂ ಕೂಡ ಸಾಯಿಬಾಬಾರವರನ್ನು ಕೇಳಿ ಅವರ ಒಪ್ಪಿಗೆಯ ನಂತರವೇ ಶಿವಮ್ಮ ತಾಯಿ ಗೃಹತ್ಯಾಗದ ತೀರ್ಮಾನ ತೆಗೆದುಕೊಂಡರು. ಒಂದು ದಿನ ಪತಿಯ ಜೊತೆಯಲ್ಲಿ ಊಟ ಮಾಡುತ್ತಿದ್ದಾಗ ಶಿವಮ್ಮ ತಾಯಿಯವರು ನಾನು ಕಾಶಿಗೆ ಹೋಗಬಹುದೇ ಎಂದು ಕೇಳಿದಾಗ ಸುಬ್ಬಯ್ಯನವರು ಆಗಬಹುದು ಎಂದರು. ತಾಯಿಯವರಿಗೆ ಅನುಮಾನ ಬಂದು ಪುನಃ ಪ್ರಶ್ನಿಸಿದಾಗ "ಈ ಅನ್ನದ ಸತ್ಯವಾಗಿಯು ಹೋಗಬಹುದು" ಎಂದು ಹೇಳಿದರು. ಆಗ ಶಿವಮ್ಮ ತಾಯಿಯವರಿಗೆ ಆ ಮನೆಯ ಋಣ ಮುಗಿದಿದೆ ಎಂದು ಅರಿವಾಯಿತು. ಅಂದು ಪತಿಯ ಜೊತೆಯಲ್ಲೇ ಊಟ ಮಾಡಿ ಅವರಿಗೆ ಆದರಣೆಯಿಂದ ಎಲೆ ಅಡಿಕೆಯನ್ನು ಮಾಡಿಸಿಕೊಟ್ಟು ತಾವು ಜೊತೆಯಲ್ಲಿ ಹಾಕಿಕೊಂಡರು. ಅಂದು ಗುರುವಾರದ ದಿನ. ಆ ದಿನ ಸಂಜೆಯಾದ ಮೇಲೆ ಪಕ್ಕದ ಮನೆಯವರು ಕೊಟ್ಟು ತಾನು ಪೂಜಿಸುತ್ತಿದ್ದ ಸಾಯಿಬಾಬಾರವರ ಫೋಟೋವನ್ನು ಮತ್ತು ಸಾಯಿಯವರೇ ಸ್ವತಃ ಅನುಗ್ರಹಿಸಿದ ಬೆಳ್ಳಿಯ ಪಾದುಕೆಗಳನ್ನು ತೆಗೆದುಕೊಂಡು ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಹೊರಟರು. ಬೇರೆ ಯಾವ ವಸ್ತುವನ್ನಾಗಲಿ, ಹಣವನ್ನಾಗಲಿ ತೆಗೆದುಕೊಳ್ಳದೆ ಮನೆಯನ್ನು ತ್ಯಜಿಸಿದರು. 

ಆನಂತರ ಶಿವಮ್ಮ ತಾಯಿಯವರು ಬೆಂಗಳೂರು ದಕ್ಷಿಣ ಭಾಗದಲ್ಲಿನ ರೂಪೇನ ಅಗ್ರಹಾರದ ಎನ್.ಜಿ.ಅರ್.ಬಡಾವಣೆಯಲ್ಲಿರುವ ಶ್ರೀ.ಸದ್ಗುರು ಶಿರಡಿ ಸಾಯಿಬಾಬಾ ಮಠ ಎಂಬಲ್ಲಿಗೆ ಬಂದರು.  ಈ ಮಠವು ಮಡಿವಾಳದಿಂದ ಹೊಸೂರಿಗೆ ಹೋಗುವ ಮಾರ್ಗದಲ್ಲಿ ಬಲಭಾಗದಲ್ಲಿ  ಬರುತ್ತದೆ. 
ದೇವಾಲಯದ ರಾಜಗೋಪುರ 

ದೇವಾಲಯದ ನಾಮಫಲಕ

ಈ ದೇವಾಲಯದ ಪ್ರಾಂಗಣದಲ್ಲಿ 3 ದೇವಾಲಯಗಳನ್ನು ಶಿವಮ್ಮ ತಾಯಿಯವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ.

ದೇವಾಲಯದ ಪ್ರಾಂಗಣದಲ್ಲಿ ಸಿಗುವ ಮೊದಲನೇ ದೇವಾಲಯವನ್ನು 20ನೇ  ಮೇ 1970 ರಂದು ಸಾಯಿ ಮಹಾಭಕ್ತೆಯಾದ ಶ್ರೀಮತಿ.ಶಿವಮ್ಮ ತಾಯಿಯವರು ಅವರ ಭಕ್ತರ ಸಹಕಾರದೊಂದಿಗೆ ಉದ್ಘಾಟಿಸಿದರು.  ಈ ದೇವಾಲಯದ ಭೂಮಿಯನ್ನು ದಿವಂಗತ ನಾರಾಯಣ ರೆಡ್ಡಿಯವರು ದಾನವಾಗಿ ನೀಡಿದ್ದಾರೆ. ಈ ದೇವಾಲಯದ ಪ್ರವೇಶ ದ್ವಾರದಲ್ಲಿ ಶಿರಡಿಯಲ್ಲಿ ಇರುವಂತೆ ನಂದಿಯ ವಿಗ್ರಹವಿದೆ. ನಂದಿಯ ವಿಗ್ರಹದ ಬಲಭಾಗಕ್ಕೆ ನವಗ್ರಹ ದೇವರುಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ಶಿರಡಿ ಸಾಯಿಬಾಬಾ, ಗಣಪತಿ ಮತ್ತು ಸುಬ್ರಮಣ್ಯ ದೇವರುಗಳ ವಿಗ್ರಹವಿದೆ. ಸಾಯಿಬಾಬಾರವರ ವಿಗ್ರಹದ ಕೆಳಭಾಗಕ್ಕೆ ಸರಿಯಾಗಿ ನೆಲಮಾಳಿಗೆಯಲ್ಲಿ ಶಿವಮ್ಮ ತಾಯಿಯವರ ಸಮಾಧಿಯನ್ನು ನಿರ್ಮಿಸಲಾಗಿದೆ. 

ದೇವಾಲಯದ ಹೊರನೋಟ 

ನಂದಿಯ ವಿಗ್ರಹ 

ನವಗ್ರಹಗಳು

ಗರ್ಭಗುಡಿಯಲ್ಲಿರುವ ಕಪ್ಪು ಶಿಲೆಯ ಗಣಪತಿ, ಸಾಯಿಬಾಬಾ ಮತ್ತು ಸುಬ್ರಮಣ್ಯ ದೇವರ ವಿಗ್ರಹಗಳು 

ಶಿವಮ್ಮ ತಾಯಿಯವರ ಸಮಾಧಿ 

ದೇವಾಲಯದ ಪ್ರಾಂಗಣದಲ್ಲಿ ಸಿಗುವ ಎರಡನೇ ದೇವಾಲಯವು ಸುಮಾರು 50 ವರ್ಷಗಳಷ್ಟು ಹಳೆಯದಾಗಿದ್ದು ನಿರ್ಮಾಣದ ವರ್ಷದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಈ ಮಂದಿರವನ್ನು ಕೂಡ ಶಿವಮ್ಮ ತಾಯಿಯವರು ಭಕ್ತರ ಸಹಕಾರದೊಂದಿಗೆ ಉದ್ಘಾಟಿಸಿರುತ್ತಾರೆ. ಈ ದೇವಾಲಯದ ಮುಂಭಾಗದಲ್ಲಿ ತುಳಸಿ ಬೃಂದಾವನವಿದೆ. ದೇವಾಲಯದ ದ್ವಾರದಲ್ಲಿ ಶಿವಮ್ಮ ತಾಯಿಯವರು ಕುಳಿತುಕೊಳ್ಳುತ್ತಿದ್ದ ಜಗುಲಿಯಿದೆ. ದೇವಾಲಯದ ಒಳಗಡೆ ಎಡಭಾಗದಲ್ಲಿ ಶಿವಮ್ಮ ತಾಯಿಯವರು ಸದಾಕಾಲ ಇರುತ್ತಿದ್ದ ಹಾಗೂ ಮಲಗಿಕೊಳ್ಳುತ್ತಿದ್ದ ಜಾಗದಲ್ಲಿ ಶಿವಮ್ಮ ತಾಯಿಯವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಈ ಸ್ಥಳದಲ್ಲಿ ಶಿವಮ್ಮ ತಾಯಿಯವರು 9 ವರ್ಷಗಳ ಕಾಲ ತಪಸ್ಸು ಮಾಡಿರುವರೆಂದು ಹೇಳಲಾಗುತ್ತದೆ. ಈ ಮಂದಿರದ ಗರ್ಭಗುಡಿಯಲ್ಲಿ ನಾಗಸಾಯಿಯ ಬೆಳ್ಳಿಯ ವಿಗ್ರಹವಿದೆ.
ತುಳಸಿ ಬೃಂದಾವನ 

ಶಿವಮ್ಮ ತಾಯಿ ಕುಳಿತುಕೊಳ್ಳುತ್ತಿದ್ದ ಜಗುಲಿ


ಶಿವಮ್ಮ ತಾಯಿಯವರು ತಂಗಿದ್ದ ಮತ್ತು ಮಲಗಿಕೊಳ್ಳುತ್ತಿದ್ದ ಸ್ಥಳದಲ್ಲಿರುವ ಅವರ ವಿಗ್ರಹ

ಗರ್ಭಗುಡಿಯಲ್ಲಿರುವ ಬೆಳ್ಳಿಯ ನಾಗಸಾಯಿಯ ವಿಗ್ರಹ

ದೇವಾಲಯದ ಪ್ರಾಂಗಣದಲ್ಲಿ ಸಿಗುವ 3ನೇ ಮಂದಿರವೇ ದ್ವಾರಕಾಮಾಯಿ. ಈ ಪವಿತ್ರ ಸ್ಥಳವನ್ನು 10 ನೇ ಫೆಬ್ರವರಿ 1989 ರಂದು ಸ್ವತಃ ಶಿವಮ್ಮ ತಾಯಿಯವರೇ ಉದ್ಘಾಟನೆ ಮಾಡಿರುತ್ತಾರೆ. ಈ ಸ್ಥಳದಲ್ಲಿ ಪ್ರಪಂಚದಲ್ಲಿ ಎಲ್ಲೂ ಕೂಡ ಕಾಣಸಿಗದ ಸಾಯಿಬಾಬಾರವರ "ಅಮೃತ ಶಿಲೆಯ ಭಿಕ್ಷಾಟನ ವಿಗ್ರಹ" ವನ್ನು ಸ್ಥಾಪಿಸಲಾಗಿದೆ. ಶಿವಮ್ಮ ತಾಯಿಯವರು 1918 ನೇ ಇಸವಿಯಲ್ಲಿ ಸಾಯಿಬಾಬಾರವರು ಜೀವಂತರಾಗಿದ್ದಾಗ ಅವರನ್ನು ಭೇಟಿ ಮಾಡುವ ಸೌಭಾಗ್ಯವನ್ನು ಪಡೆದಿದ್ದ ಸಾಯಿ ಮಹಾಭಕ್ತೆ. ಉದ್ಘಾಟನಾ ಭಾಷಣವನ್ನು ಚಿನ್ಮಯ ಮಿಶನ್ ನ ಸ್ವಾಮಿ ಬ್ರಹ್ಮಾನಂದ ರವರು ಮತ್ತು ದ್ವಾರಕಾ ಬದರಿಕಾಶ್ರಮದ ಸ್ವಾಮಿ ವಿದ್ಯಾ ನಾರಾಯಣ ತೀರ್ಥರವರು ಮಾಡಿದರು. ಸಾಯಿ ಆಧ್ಯಾತ್ಮಿಕ ಕೇಂದ್ರದ ಶ್ರೀ.ಆರ್.ಶೇಷಾದ್ರಿಯವರು ಮತ್ತು ಶ್ರೀ.ಪಿ.ಎಸ್.ನಾರಾಯಣ ರಾವ್ ರವರು ನೆರೆದಿದ್ದ ಸಾಯಿಭಕ್ತರನ್ನು ಉದ್ದೇಶಿಸಿ ಈ ಮಂದಿರದ ವಿಶೇಷತೆಯ ಬಗ್ಗೆ ನುಡಿದರು. ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಹರಿಹರನ್ ರವರಿಂದ ಸುಶ್ರಾವ್ಯವಾದ ಭಜನ ಕಾರ್ಯಕ್ರಮ ನಡೆಯಿತು. ದ್ವಾರಕಾಮಾಯಿಯಲ್ಲಿ ಅಮೃತಶಿಲೆಯ ಭಿಕ್ಷಾಟನ ವಿಗ್ರಹವಲ್ಲದೇ ಮರದ ಪಲ್ಲಕ್ಕಿ, ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಚಿತ್ರಪಟ, ಸಾಯಿಬಾಬಾ ಮತ್ತು ಉಪಾಸಿನಿ ಬಾಬಾರವರ ತೈಲ ಚಿತ್ರಗಳು ಕಂಡುಬರುತ್ತವೆ. 

ದ್ವಾರಕಾಮಾಯಿಯ ಹೊರನೋಟ 

ಶಿವಮ್ಮ ತಾಯಿಯವರು ಭಿಕ್ಷಾಟನೆ ವಿಗ್ರಹದ ಪ್ರತಿಷ್ಟಾಪನೆ ನೆರವೇರಿಸುತ್ತಿರುವುದು

ಪ್ರಪಂಚದ ಏಕೈಕ ಭಿಕ್ಷಾಟನೆ ವಿಗ್ರಹದ ಮನೋಹರ ನೋಟ 

 ಸಾಯಿಬಾಬಾರವರ ಮರದ ಪಲ್ಲಕ್ಕಿ 

ದ್ವಾರಕಾಮಾಯಿ ಸಾಯಿಬಾಬಾನ ಆಳೆತ್ತರದ ಭಾವಚಿತ್ರ 

ಶಿವಮ್ಮ ತಾಯಿ, ಸಾಯಿಬಾಬಾ ಮತ್ತು ಉಪಾಸಿನಿ ಬಾಬಾರವರ ತೈಲಚಿತ್ರಗಳು 

ದೇವಾಲಯದ ಕಾರ್ಯಚಟುವಟಿಕೆಗಳು: 

ಆರತಿಯ ಸಮಯ 
ಆರತಿ
ಸಮಯ
ಕಾಕಡ ಆರತಿ
6:30 am
ಮಧ್ಯಾನ್ಹ ಆರತಿ
12:00 pm
ಧೂಪಾರತಿ
6.15 pm
ಶೇಜಾರತಿ
8:00 pm


ವಿಶೇಷ ಉತ್ಸವದ ದಿನಗಳು: 

೧. ಶಿವರಾತ್ರಿ
೨. ಶ್ರೀರಾಮನವಮಿ
೩. ಶಿವಮ್ಮ ತಾಯಿಯವರ ಹುಟ್ಟಿದ ದಿನ ಪ್ರತಿ ವರ್ಷದ 29ನೇ ಮೇ
೪. ಶಿವಮ್ಮ ತಾಯಿಯವರ ಸಮಾಧಿ ದಿವಸ ಪ್ರತಿ ವರ್ಷದ 11ನೇ ಜುಲೈ
೫. ಗುರುಪೂರ್ಣಿಮೆ
೬. ವಿಜಯದಶಮಿ
೭ ಪ್ರತಿ ವರ್ಷದ ಕಾರ್ತೀಕ ಮಾಸದ ಹುಣ್ಣಿಮೆಯ ದಿನ ಲಕ್ಷದೀಪೋತ್ಸವ

ಸಾಮಾಜಿಕ ಕಾರ್ಯ ಚಟುವಟಿಕೆಗಳು:

೧. ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಶಿವಮ್ಮ ತಾಯಿಯವರು ಆರಂಭಿಸಿದ್ದು ಈಗ ರಾಜ್ಯ ಸರ್ಕಾರದ ಅನುದಾನದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ಶಾಲೆಯ ಹೊರನೋಟ 

೨. ಶ್ರೀಮತಿ ಮುನಿಯಮ್ಮ ತಾಯಿ ವೃದ್ಧಾಶ್ರಮವನ್ನು ಈ ದೇವಾಲಯದ ವತಿಯಿಂದ ನಡೆಸಲಾಗುತ್ತಿದ್ದು 14 ಮಂದಿ ವಯೋವೃದ್ದರಿಗೆ ಉಚಿತ ಊಟ ವಸತಿಯೊಂದಿಗೆ ಆಶ್ರಯ ಕಲ್ಪಿಸಲಾಗಿದೆ.

ವೃದ್ದಾಶ್ರಮದ ಹೊರನೋಟ 

೩. ಪ್ರತಿ ಗುರುವಾರದಂದು ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.

೪. ಪ್ರತಿ ವಿಶೇಷ ಹಬ್ಬದ ಮತ್ತು ಉತ್ಸವದ ದಿನಗಳಂದು ಅನ್ನದಾನ ಕಾರ್ಯಕ್ರಮವಿರುತ್ತದೆ.

ದೇವಾಲಯದ ಸಂಪರ್ಕದ ವಿವರಗಳು: 

ವಿಳಾಸ: 

ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಮಠ
ಎನ್.ಜಿ.ಆರ್.ಬಡಾವಣೆ, ರೂಪೇನ ಅಗ್ರಹಾರ
ಹೊಸೂರು ಮುಖ್ಯ ರಸ್ತೆಯ ಪಕ್ಕ
ಮಡಿವಾಳ ಅಂಚೆ, ಬೆಂಗಳೂರು-560 068.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀಮತಿ ಶಾರದಮ್ಮ (ದಿವಂಗತ ನಾರಾಯಣ ರೆಡ್ಡಿಯವರ ಧರ್ಮಪತ್ನಿ) / ಶ್ರೀ ಗೋಪಾಲ ರೆಡ್ಡಿ / ಶ್ರೀಮತಿ ಕಮಲಮ್ಮ / ಶ್ರೀ.ಸಂಪಂಗಿ (ರಾಮು) / ಶ್ರೀ.ವೆಂಕಟರಾಜು

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 

080 - 25732522 / 080 - 22226465 / 9880133408 / 9945531187

ಈ ಮೇಲ್ ವಿಳಾಸ: 

venkataraju71@gmail.com
 
ಮಾರ್ಗಸೂಚಿ: 

ರೂಪೇನ ಅಗ್ರಹಾರದ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ಈ ದೇವಾಲಯ ಸಿಗುತ್ತದೆ.

ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment