Friday, January 15, 2010

ಸಾಯಿ ಮಹಾ ಭಕ್ತೆ - ಲಕ್ಷ್ಮೀ ಭಾಯಿ ಶಿಂಧೆ - ಕೃಪೆ - ಶ್ರೀ ಅರುಣ್ ಗಾಯಕ್ವಾಡ್


ಲಕ್ಷ್ಮೀ ಭಾಯಿ ಶಿಂಧೆ ಮಧ್ಯ ವಯಸ್ಸಿನ ನಿರಕ್ಷರಸ್ಥ ಮಹಿಳೆಯಾಗಿದ್ದರು. ಇವರು ಸಾಯಿಬಾಬಾರವರ ಅನನ್ಯ ಭಕ್ತೆಯಾಗಿದ್ದರು. ಸಾಯಿಬಾಬಾರವರು ಯಾವಾಗಲು ಪ್ರೀತಿಯಿಂದ ಲಕ್ಷ್ಮೀ ಭಾಯಿ ಶಿಂಧೆಯವರಿಂದ ಆಹಾರವನ್ನು ಕೇಳುತ್ತಿದ್ದರು. ಸಾಯಿಬಾಬಾರವರು "ಲಕ್ಷ್ಮೀ, ನನಗೆ ಬಹಳ ಹಸಿವಾಗುತ್ತಿದೆ. ನನಗೆ ಸ್ವಲ್ಪ ರೊಟ್ಟಿಯನ್ನು ನೀಡುವೆಯಾ" ಎಂದು ಕೇಳುತ್ತಿದ್ದರು. ಲಕ್ಷ್ಮೀ ಭಾಯಿ ಶಿಂಧೆಯವರು ಕೂಡಲೇ ಸ್ವಲ್ಪವೂ ತಡ ಮಾಡದೆ ರೊಟ್ಟಿಯನ್ನು ಮಾಡಿ ಮಸೀದಿಗೆ ತರುತ್ತಿದ್ದರು. ಒಮ್ಮೆ ಸಾಯಿಬಾಬಾರವರು ತಮಗೆ ಹಸಿವಾಗಿದೆ ಎನ್ನಲು ಲಕ್ಷ್ಮೀ ಭಾಯಿ ಶಿಂಧೆಯವರು ಕೂಡಲೇ ಮನೆಗೆ ತೆರಳಿ ರೊಟ್ಟಿಯೊಡನೆ ಮಸೀದಿಗೆ ಬಂದರು. ಸಾಯಿಬಾಬಾರವರು ಲಕ್ಷ್ಮೀ ಭಾಯಿ ಶಿಂಧೆ ಬಂದ ಕೂಡಲೇ ಅವರಿಂದ ರೊಟ್ಟಿಯನ್ನು ತೆಗೆದುಕೊಂಡು ಅಲ್ಲಿದ್ದ ನಾಯಿಗೆ ಅದನ್ನು ನೀಡಿದರು. ಇದನ್ನು ಕಂಡ ಲಕ್ಷ್ಮೀ ಭಾಯಿ ಶಿಂಧೆಯವರು "ಬಾಬಾ ಇದೇನು ಮಾಡಿದಿರಿ. ನಿಮಗೋಸ್ಕರ ನಾನು ಬಿಸಿಯಾಗಿ ರೊಟ್ಟಿಯನ್ನು ಮಾಡಿಕೊಂಡು ಬಂದರೆ, ನೀವು ಅದನ್ನು ನಾಯಿಗೆ ಹಾಕುತ್ತಿದ್ದೀರಲ್ಲ" ಎಂದು ಕೇಳಿದರು. ಅದಕ್ಕೆ ಸಾಯಿಬಾಬಾರವರು "ಲಕ್ಷ್ಮೀ, ನೀನು ನಾಯಿಗೆ ರೊಟ್ಟಿಯನ್ನು ನೀಡಿದರೆ ನನಗೆ ನೀಡಿದಂತೆ. ನಾನು, ನಾಯಿ ಬೇರೆ ಬೇರೆಯಾಗಿರಬಹುದು. ಆದರೆ, ಹಸಿವು ಒಂದೇ ಅಲ್ಲವೇ" ಎಂದರು. ಹೀಗೆ ಸಾಯಿಬಾಬಾರವರು ಆಧ್ಯಾತ್ಮಿಕದ ನೈಜ ಸ್ವರೂಪವನ್ನು ತಮ್ಮ ಆಚರಣೆಯಲ್ಲಿ ತೋರಿಸಿದರು. ಈ ರೀತಿಯಲ್ಲಿ ಲಕ್ಷ್ಮೀ ಭಾಯಿ ಶಿಂಧೆಯವರು  ಪ್ರತಿದಿನವೂ ಸಾಯಿಬಾಬಾರವರಿಗೆ ಆಹಾರವನ್ನು ನೀಡುತ್ತಿದ್ದರು. ಸಾಯಿಬಾಬಾರವರು ಲಕ್ಷ್ಮೀ ಭಾಯಿ ಶಿಂಧೆಯವರನ್ನು "ಲಕ್ಷ್ಮೀ ಮಾ" ಎಂದು ಕರೆಯುತ್ತಿದ್ದರು. ಲಕ್ಷ್ಮೀ ಭಾಯಿ ಶಿಂಧೆಯವರ ನಿಸ್ವಾರ್ಥ ಸೇವೆಯನ್ನು ಕಂಡು ಸಂತುಷ್ಟರಾದ ಸಾಯಿಬಾಬಾರವರು ತಮ್ಮ ಕೃತಜ್ಞತೆಯನ್ನು ತೋರಿಸಲು ತಮ್ಮ ಅಂತ್ಯ ಕಾಲದಲ್ಲಿ ಮೊದಲು ೫ ಆನಂತರ ೪ ರುಪಾಯಿಗಳನ್ನು ಒಟ್ಟು ೯ ರುಪಾಯಿಗಳನ್ನು ತಮ್ಮ ಸ್ವಹಸ್ತದಿಂದ ದಾನ ಮಾಡಿದರು. ಈ ಒಂಬತ್ತು ರೂಪಾಯಿಗಳ ಕೊಡುಗೆಯನ್ನು ಲಕ್ಷ್ಮೀ ಭಾಯಿ ಶಿಂಧೆಯವರು ಎಂದಿಗೂ ಮರೆಯಲಿಲ್ಲ. ಈ ೯ ರೂಪಾಯಿಗಳು ನವವಿಧ ಭಕ್ತಿಯನ್ನು ಸೂಚಿಸುತ್ತದೆ.

ಲಕ್ಷ್ಮೀ ಭಾಯಿ ಶಿಂಧೆಯವರ ಕುಟೀರವು ದ್ವಾರಕಮಾಯಿಯ ಎದುರುಗಡೆ ರಸ್ತೆಯಲ್ಲಿ ಜೈನ್ ಸ್ಥಾನಕ್ ನ ಬಳಿ ಇರುತ್ತದೆ. ಅಲ್ಲಿ ಲಕ್ಷ್ಮೀ ಭಾಯಿ ಶಿಂಧೆಯವರ  ಸಮಾಧಿ ಕೂಡ ಇದ್ದು ಭಕ್ತರು ಶಿರಡಿಗೆ ಹೋದರೆ ತಪ್ಪದೆ ನೋಡಬಹುದು.

    
ಈ ನವವಿಧ ಭಕ್ತಿಗಳು ಯಾವುವೆಂದರೆ ಶ್ರವಣ, ಕೀರ್ತನ, ಸ್ಮರಣ, ಪಾದ ಸೇವನ, ಅರ್ಚನ, ನಮನ, ದಾಸ್ಯ, ಸಖ್ಯ ಮತ್ತು ಆತ್ಮ ನಿವೇದನ.  ಇದರ ಬಗ್ಗೆ ಶ್ರೀ ಸಾಯಿ ಸಚ್ಚರಿತ್ರೆ, ೪೨ನೆ ಅಧ್ಯಾಯದಲ್ಲಿ ವಿವರಿಸಲಾಗಿದೆ.

೧೯೬೩ ರಲ್ಲಿ ಲಕ್ಷ್ಮೀ ಭಾಯಿ ಶಿಂಧೆಯವರು ಕಾಲವಾದರು. ಅವರು ಕಾಲವಾಗುವ ಮುಂಚೆ ಈ ಪವಿತ್ರ ೯ ರುಪಾಯಿಗಳನ್ನು ತಮ್ಮ ಸೊಸೆಯಾದ ಸೋನು ಭಾಯಿಯವರಿಗೆ ನೀಡಿದರು. ಈಗ ಈ ಪವಿತ್ರ ೯ ರೂಪಾಯಿಗಳು ಲಕ್ಷ್ಮೀ ಭಾಯಿ ಶಿಂಧೆಯವರ ಮೊಮ್ಮಗಳಾದ ಹಾಗೂ ಸೋನು ಭಾಯಿಯವರ ಮಗಳಾದ ಶೈಲಜಾ ಮಾ ರವರ ಬಳಿಯಿದೆ. ಈ ೯ ಪವಿತ್ರ ರುಪಾಯಿಗಳನ್ನು ಶಿರಡಿಗೆ ಹೋದರೆ ಭಕ್ತರು ಲಕ್ಷ್ಮೀ ಭಾಯಿಯವರ ಮನೆಯಲ್ಲಿ ನೋಡಬಹುದು.

ಸಾಯಿಭಾಕ್ತೆ ಲಕ್ಷ್ಮೀ ಭಾಯಿ ಶಿಂಧೆ ಟ್ರಸ್ಟ್, ಶಿರಡಿಯವರು ಲಕ್ಷ್ಮೀ ಭಾಯಿ ಶಿಂಧೆ ಹಾಗೂ ಸೋನು ಭಾಯಿ ಯವರ ನೆನಪಿಗಾಗಿ ಈ ಪವಿತ್ರ ೯ ರೂಪಾಯಿಗಳ ಮಂದಿರವನ್ನು ಕಟ್ಟಬೇಕೆಂದು ತೀರ್ಮಾನ ಮಾಡಿರುತ್ತಾರೆ. ಈ ಮಂದಿರದಲ್ಲಿ ಒಂದು ಧ್ಯಾನ ಮಂದಿರ ಹಾಗೂ ನಿತ್ಯ ಅನ್ನದಾನಕ್ಕಾಗಿ ಒಂದು ಭೋಜನಾಲಯವನ್ನು ಕೂಡ ಕಟ್ಟಬೇಕೆಂದು ಸಂಕಲ್ಪ ಮಾಡಿರುತ್ತಾರೆ. ಸಾಯಿಭಾಕ್ತೆ ಲಕ್ಷ್ಮೀ ಭಾಯಿ ಶಿಂಧೆ ಟ್ರಸ್ಟ್ ನ ವಿಳಾಸ ಈ ಕೆಳಕಂಡಂತೆ ಇದೆ:

ಶ್ರೀ ಅರುಣ್ ಗಾಯಕ್ವಾಡ್, ಟ್ರಸ್ಟೀ,                                                                                                             
ಸಾಯಿಭಕ್ತೆ ಲಕ್ಷ್ಮೀ ಭಾಯಿ ಶಿಂಧೆ ಟ್ರಸ್ಟ್
ಬ-೨೦೧, ಡಾ. ಗೊಂಡಕರ್ ಕಾಂಪ್ಲೆಕ್ಸ
ಹೋಟೆಲ್ ಇಶೋಸಾನ್ಸ್ ಪ್ಯಾಲೇಸ ಪಕ್ಕ
ಆಂಧ್ರ ಬ್ಯಾಂಕ್ ಹತ್ತಿರ, ಪಿಂಪಲ್ವಾಡಿ ರಸ್ತೆ
ಶಿರಡಿ-೪೨೩ ೧೦೯.
ಅಹಮದ್ ನಗರ್ ಜಿಲ್ಲೆ, ಮಹಾರಾಷ್ಟ್ರ
ಫೋನ್ : ೦೨೪೨೩-೩೨೪೩೦೯/೨೫೫ ೩೮೮/೦೯೩೭೦೩ ೦೯೮೮೮/೦೯೯೬೦೨ ೬೫೮೧೯
ಇಮೇಲ್: arung_shirdi@yahoo.com

ಈ ಪವಿತ್ರ ೯ ರೂಪಾಯಿಗಳ ಮಂದಿರವನ್ನು ಜನವರಿ ೨೦೧೧ ರೊಳಗೆ ಪೂರ್ಣಗೊಳಿಸಲು ಪ್ರಯತ್ನ ಸಾಗಿರುವುದಾಗಿ ಶ್ರೀಯುತ.ಅರುಣ್ ಗಾಯಕ್ವಾಡ್ ರವರು ತಿಳಿಸಿದ್ದಾರೆ.


No comments:

Post a Comment