Thursday, January 21, 2010

ಸಾಯಿ ಮಹಾ ಭಕ್ತ - ಶ್ರೀ ಆಚಾರ್ಯ ಎಕ್ಕಿರಾಲ ಭಾರದ್ವಾಜ (೩೦ ನೇ ಅಕ್ಟೋಬರ್ ೧೯೩೮ ರಿಂದ ೧೨ ನೇ ಏಪ್ರಿಲ್ ೧೯೮೯) - ಕೃಪೆ - ಸಾಯಿಅಮೃತಧಾರಾ.ಕಾಂ

ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ೩೦ ನೇ ಅಕ್ಟೋಬರ್ ೧೯೩೮ ರಂದು ಶ್ರೀ ಎಕ್ಕಿರಾಲ ಅನಂತಾಚಾರ್ಯ ಮತ್ತು ವೆಂಕಟ ಲಕ್ಷ್ಮೀ ಯವರ ಪುತ್ರನಾಗಿ ಆಂಧ್ರಪ್ರದೇಶದ ಬಾಪಟ್ಲ ಎಂಬಲ್ಲಿ ಜನಿಸಿದರು. ಇವರು ತಮ್ಮ ತಾಯಿಯವರನ್ನು ಬಹಳ ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡರು. ಇವರ ತಂದೆಯವರು ಪುರಾತನ ಹಿಂದೂ ಶಾಸ್ತ್ರಗಳಲ್ಲಿ ಹಾಗೂ ವೇದಗಳಲ್ಲಿ ಅಪಾರ ಪಾಂಡಿತ್ಯವನ್ನು  ಪಡೆದಿದ್ದರು.

೧೯೫೯ ರಲ್ಲಿ ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ಇಂಗ್ಲೀಷ್ ಸಾಹಿತ್ಯದಲ್ಲಿ ಪೋಸ್ಟ್ ಗ್ರಾಜುಯೇಶನ್ ಮುಗಿಸಿದರು. ನಂತರದಲ್ಲಿ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು. ೧೯೬೧ ರಲ್ಲಿ ಐ.ಎ.ಎಸ್ ಪರೀಕ್ಷೆಗೆ ಕುಳಿತು ಅದರಲ್ಲಿ ಉತ್ತೀರ್ಣರಾದರು. ಆದರೆ, ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ಅದನ್ನು ತಿರಸ್ಕರಿಸಿದರು. ೯ ನೇ ಫೆಬ್ರವರಿ ೧೯೬೩ ರಲ್ಲಿ ಶಿರಡಿಯ ಸಮಾಧಿ ಮಂದಿರದಲ್ಲಿ ಇವರಿಗೆ ಸಾಯಿಬಾಬಾರವರ ಸಾಕ್ಷತ್ಕಾರವಾಗಿ ಸಂಪೂರ್ಣ ಬದಲಾದ ಮನುಷ್ಯನಾದರು.

ನಂತರ ೧೯೬೮ ರಲ್ಲಿ ಇವರು ತಮ್ಮ ಪ್ರಾಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ೧ ವರ್ಷದ ಕಾಲ ಆಶ್ರಮ ಜೀವನ ನಡೆಸಿದರು. ನಂತರ ಸಾಯಿಬಾಬಾರವರ ಆದೇಶದ ಮೇರೆಗೆ ಆಶ್ರಮವನ್ನು ಬಿಟ್ಟು ಪುನಃ ವಿದ್ಯಾನಗರದಲ್ಲಿ ಪ್ರಾಧ್ಯಾಪಕ ವೃತ್ತಿಗೆ ಸೇರಿದರು. ಆ ಸಮಯದಲ್ಲಿ ಇವರಿಗೆ ಜೀವನದ ಬಗ್ಗೆ ಜಿಗುಪ್ಸೆ ಶುರುವಾಗಿ ಅಧ್ಯಾತ್ಮಿಕದತ್ತ ಒಲವು ಹೆಚ್ಚಾಯಿತು. ಆಗ ಸಾಯಿಬಾಬಾರವರನ್ನು ತಾವಿರುವ ಸ್ಥಳದಲ್ಲಿ ಸತ್ಸಂಗ ನಡೆಯಲು ಅವಕಾಶ ಮಾಡಿಕೊಡುವಂತೆ ಪ್ರಾರ್ಥನೆ ಮಾಡಿದರು. ಈ ರೀತಿ ಪ್ರಾರ್ಥನೆ ಮಾಡಿದ ಕೆಲವೇ ತಿಂಗಳಲ್ಲಿ ಒಬ್ಬ ಕ್ರಿಶ್ಚಿಯನ್ ಹುಡುಗ ಇವರಿರುವ ಸ್ಥಳಕ್ಕೆ ಬಂದು ಕೇವಲ ಮಾನವನಾದ ಸಾಯಿಬಾಬಾರವರನ್ನು ಪೂಜಿಸುವುದರ ಬಗ್ಗೆ ಕೇವಲವಾಗಿ ಮಾತನಾಡಿದನು. ಇದು ಬಹು ದೊಡ್ಡ ಚರ್ಚೆಗೆ ಗ್ರಾಸವಾಯಿತು. ಅನೇಕ ದಿನಗಳು ಇದರ ಬಗ್ಗೆ ಚರ್ಚೆ ನಡೆಯಿತು. ಚರ್ಚೆ ನಡೆಯುವಾಗ ಬಹಳ ಜನ ವಿಧ್ಯಾರ್ಥಿಗಳು ಬಂದು ಚರ್ಚೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಇವರಲ್ಲಿ ಕೆಲವು ವಿಧ್ಯಾರ್ಥಿಗಳು ವಾರದಲ್ಲಿ ಒಂದು ದಿನ ಈ ರೀತಿಯ ಸತ್ಸಂಗ ನಡೆಸಲು ತೀರ್ಮಾನಿಸಿ ಗುರುವಾರದ ದಿನ ಸತ್ಸಂಗ ಹಾಗೂ ಭಜನೆ ಕಾರ್ಯಕ್ರಮವನ್ನು ಶುರು ಮಾಡಿದರು. ಹೀಗೆ ಭಜನೆ ಮತ್ತು ಸತ್ಸಂಗ ನಡೆಯುವ ಸಂದರ್ಭದಲ್ಲಿ ಅನೇಕ ಸಾಧು ಸಂತರುಗಳು ಬಂದು ಆಶೀರ್ವದಿಸಿದ್ದಾರೆ. ಅವರುಗಳಲ್ಲಿ ಪ್ರಮುಖರು ಗುಂಟೂರ್ ನ ಸಂತ ಶ್ರೀ ರಂಗಣ್ಣ ಬಾಬು ಹಾಗೂ ಹರಿಹರದ ಶ್ರೀ ಸಮರ್ಥ ನಾರಾಯಣ ಮಹಾರಾಜ್.

ಈ ರೀತಿ ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ದೇಶದ ಉದ್ದಗಲಕ್ಕೂ ಸಂಚರಿಸಿ ಸತ್ಸಂಗ ಹಾಗೂ ಭಜನೆಯ ಕೇಂದ್ರಗಳನ್ನು ಸ್ಥಾಪಿಸಿ ಸಾಯಿ ಪ್ರಚಾರವನ್ನು ಮಾಡಲು ಪ್ರಾರಂಭಿಸಿದರು. ಎಲ್ಲ ಶಿಷ್ಯರೂ ಸೇರಿ ವಿಚಾರ ವಿನಿಮಯ ಮಾಡಿಕೊಂಡು "ಸಾಯಿ ಬಾಬಾ ಮಿಶನ್" (ಈಗಿನ ಶ್ರೀ ಮಾಸ್ಟರ್ ಯುನಿವೆರ್ಸಲ್ ಟ್ರಸ್ಟ್ ) ಪ್ರಾರಂಭಿಸಿ ಅದರ ಮೂಲಕ ಸಾಯಿ ಪ್ರಚಾರವನ್ನು ಪುಸ್ತಕಗಳ ಮೂಲಕ ಮಾಡಲು ಶುರು ಮಾಡಿದರು. ಅದರ ಮುಖ್ಯಸ್ತರಾಗಿ ಪೂಜ್ಯ ಆಚಾರ್ಯ ಎಕ್ಕಿರಾಲ ಭಾರದ್ವಾಜರವರನ್ನು ನೇಮಿಸಿದರು. ೧೯೮೧ ರಲ್ಲಿ ಎಲ್ಲ ಭಕ್ತರ ಸಹಕಾರದಿಂದ ವಿದ್ಯಾನಗರದಲ್ಲಿ ಒಂದು ಭವ್ಯ ಸಾಯಿಬಾಬಾರವರ ಮಂದಿರವನ್ನು ಪ್ರಾರಂಭಿಸಿದರು.

೧೯೭೩ ರಲ್ಲಿ ಶಿರಡಿಗೆ ತೆರಳಿದಾಗ ಸಾಯಿಬಾಬಾರವರು ಇವರ ಕನಸಿನಲ್ಲಿ ಬಂದು ಮದುವೆಯಾಗಿ ಸಂಸಾರದ ಎಲ್ಲ ಕರ್ಮಗಳನ್ನು ಮಾಡಲು ಪ್ರೇರೇಪಣೆ ನೀಡಿದರು. ಸಾಯಿಯವರ ಆದೇಶದಂತೆ ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ೬ನೇ ಮಾರ್ಚ್ ೧೯೭೫ ರಂದು ಶ್ರೀಮತಿ ಅಲಿವೆಲು ಮಂಗ ತಾಯರ್   (ಪ್ರೀತಿಯಿಂದ ಭಕ್ತರು ಇವರನ್ನು ಅಮ್ಮಗಾರು ಎಂದು ಕರೆಯುತ್ತಾರೆ) ನ್ನು ವಿವಾಹವಾದರು.

೧೯೮೧ ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಪೂರ್ಣ ಸಮಯವನ್ನು ಅಧ್ಯಾತ್ಮಿಕ ಕಾರ್ಯಗಳಿಗಾಗಿ ಮೀಸಲಿಟ್ಟರು. ಈ ಸಮಯದಲ್ಲಿ ಅವರು ದೇಶದ ಉದ್ದಗಲಕ್ಕೂ ಸಂಚರಿಸಿ ಅನೇಕ ಸಾಧು ಸಂತರನ್ನು ಮುಖತಃ ಭೇಟಿ ಮಾಡಿ ಅವರ ಜೀವನ ಚರಿತ್ರೆಯನ್ನೆಲ್ಲ ತಿಳಿದುಕೊಂಡರು. ವಿಜ್ಞಾನದ ೭ ಅಂಗಗಳನ್ನು ಹಾಗೂ ಪ್ರಪಂಚದ ೫ ಪ್ರಮುಖ ಧರ್ಮಗಳನ್ನು (ಭೌದ್ದ, ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಹಾಗೂ ತೋವಿಸಮ್) ಅಭ್ಯಾಸ ಮಾಡಿದರು. ೧೯೮೩ ರಲ್ಲಿ "ಸಾಯಿಬಾಬಾ" ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿದರು. ಸಾಯಿಬಾಬಾರವರ ಸಮಕಾಲೀನರನ್ನೆಲ್ಲ ಮುಖತಃ ಭೇಟಿ ಮಾಡಿ ಅವರಿಂದ ಸಾಯಿಬಾಬಾರವರ ಬಗ್ಗೆ ಅವರ ಎಲ್ಲ ಅನುಭವಗಳನ್ನು ಟಿಪ್ಪಣಿ ಮಾಡಿಕೊಂಡರು. ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಲ್ಲಿ ಅನೇಕ ಸಂತರ ಬಗ್ಗೆ ಗ್ರಂಥಗಳನ್ನು ರಚಿಸಿದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಶಿರಡಿಯ ಸಾಯಿಬಾಬಾ, ಅಕ್ಕಲ್ ಕೋಟೆಯ ಸ್ವಾಮಿ ಸಮರ್ಥ, ನಾಗ್ಪುರ್ ನ ತಾಜುದ್ದೀನ್ ಬಾಬಾ ರವರ ಬಗ್ಗೆ ಬರೆದ ಪುಸ್ತಕಗಳು.

ಈ ವೇಳೆಗೆ ಅವರಿಗೆ ಒಬ್ಬ ಮಗ ಹಾಗೂ ಒಬ್ಬಳು ಮಗಳು ಹುಟ್ಟಿದ್ದರು. ಸಂಸಾರ ತಾಪತ್ರಯಗಳ ನಡುವೆಯೂ ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ತಮ್ಮ ಆಧ್ಯಾತ್ಮಿಕ ಕಾರ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಮುಂದುವರಿಸಿದರು. ಅನೇಕ ಬಡ ವಿದ್ಯಾರ್ಥಿಗಳಿಗೆ ತಮ್ಮ ಹಣವನ್ನು ಖರ್ಚು ಮಾಡಿ ಓದಿಸಿದರು. ಅನೇಕ ಬಡವರಿಗೆ ಧನ ಸಹಾಯ ಮಾಡಿದರು. ಇವರನ್ನು ಭೇಟಿ ಮಾಡಿದ ಹಲವರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡಿ ಸುಲಭವಾಗಿ ಆಧ್ಯಾತ್ಮಿಕ ಕೇಂದ್ರಗಳನ್ನು ಪ್ರಾರಂಭಿಸಿ ಒಳ್ಳೆಯ ಜೀವನ ನಡೆಸುವುದನ್ನು ಕಲಿಸಿದರು. ಹೆಸರಾಂತ ಕ್ರಿಶ್ಚಿಯನ್ ಪಾದ್ರಿ ಪೌಲ್ ರೆಪ್ಸ್ (ಸೀಟಾಲ್, ಅಮೇರಿಕ) ಇವರ ಮಾರ್ಗದರ್ಶನದಲ್ಲಿ ಸಾಯಿಬಾಬಾರವರ ಬಗ್ಗೆ ಪುಸ್ತಕಗಳನ್ನು ಓದಿ ಅರಿತ ನಂತರ ಹೇಗೆ ಕ್ರೈಸ್ಟ್ ಮತ್ತು ಕ್ರಿಶ್ಚಿಯನ್ ಧರ್ಮ ಅರಿಯಲು ಸಹಾಯವಾಯಿತು ಎಂದು ತಮ್ಮ ಬರಹಗಳಲ್ಲಿ ತಿಳಿಸಿದ್ದಾರೆ.

ಪೂಜ್ಯ ಆಚಾರ್ಯ ಎಕ್ಕಿರಾಲ ಭಾರದ್ವಾಜರವರು ೧೨ ನೇ ಏಪ್ರಿಲ್ ೧೯೮೯ ರಂದು ಮಹಾಸಮಾಧಿ ಹೊಂದಿದರು. ಆದರೆ ಅವರ ಭಕ್ತರಿಗೆ ಈಗಲೂ ಮಾರ್ಗದರ್ಶನ ಮಾಡುತ್ತಿದ್ದಾರೆ.

ಆಚಾರ್ಯ ಎಕ್ಕಿರಾಲ ಭಾರದ್ವಾಜರವರ ಬಗ್ಗೆ ಹಿಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವೆಬ್ ಸೈಟ್ ಜೋಡಣೆಯನ್ನು ಕ್ಲಿಕ್ಕ್ ಮಾಡಿ:

No comments:

Post a Comment