Thursday, January 21, 2010

ಸಾಯಿ ಮಹಾ ಭಕ್ತ - ಶ್ರೀ.ಶಿವನೇಶನ್ ಸ್ವಾಮೀಜಿ (12ನೇ ಏಪ್ರಿಲ್ 1927 ರಿಂದ 12ನೇ  ಫೆಬ್ರವರಿ 1996) - ಕೃಪೆ - ಸಾಯಿಅಮೃತಧಾರಾ.ಕಾಂ


ಶ್ರೀ.ಶಿವನೇಶನ್ ಸ್ವಾಮೀಜಿಯವರು ಶಿರಡಿ ಯಾತ್ರೆಗೆ ಬರುವ ಭಕ್ತರೆಲ್ಲರಿಗೂ ಚಿರಪರಿಚಿತರು. ಇವರು ಶಿರಡಿಯಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ನೆಲೆಸಿ ಸಾಯಿಬಾಬಾರವರ ಸೇವೆಯನ್ನು ಮಾಡಿದರು.

ಪರಮ ಪೂಜ್ಯ ಶ್ರೀ. ಶಿವನೇಶನ್ ಸ್ವಾಮೀಜಿಯವರು ಶ್ರೀಮತಿ ಅಲಮೇಲು ಮತ್ತು ಶ್ರೀ ಮುತ್ತಯ್ಯನವರ 3ನೇ ಹಾಗೂ ಕೊನೆಯ ಮಗನಾಗಿ 12ನೇ ಏಪ್ರಿಲ್ 1927 ರಂದು ರಾಮನವಮಿಯ ದಿವಸ ಜನಿಸಿದರು. ಆಗ ತಾನೇ ಹುಟ್ಟಿದ ಮಗುವಿಗೆ "ಎರಡು ಮುಂದಿನ ಹಲ್ಲುಗಳು" ಹಾಗೂ ತಲೆಯ ಹಿಂಭಾಗದಲ್ಲಿ "ಜಟೆ" ಇತ್ತೆಂದು ಹೇಳಲಾಗಿದೆ. ಇವರ ಜಾತಕವನ್ನು ಪರಿಶೀಲಿಸಿದ ಜ್ಯೋತಿಷಿಗಳು ಇವರು ಸಂಸಾರಿಕ ಜೀವನ ನಡೆಸದೆ ಸನ್ಯಾಸಿಗಳಾಗುತ್ತಾರೆ  ಎಂದು ಭವಿಷ್ಯ ನುಡಿದರು ಎಂದು ಹೇಳಲಾಗಿದೆ.

ಅವರ ಬಾಲ್ಯದ ದಿನಗಳಲ್ಲೇ ಶ್ರೀ ಶಿವನೆಶನ್ ಸ್ವಾಮಿಯವರು ಈ ಪ್ರಾಪಂಚಿಕ ಜೀವನದಿಂದ ಹೊರಗೆ ಹೋಗುವ ಎಲ್ಲ ಲಕ್ಷಣಗಳನ್ನು ತೋರಿಸಿದರು. ಅವರು ಸದಾಕಾಲ ಒಂಟಿಯಾಗಿ ಯಾರೊಂದಿಗೂ ಹೆಚ್ಚು ಮಾತನಾಡದೆ ಶಾಂತಿಯಿಂದ ಮತ್ತು ಧ್ಯಾನಸಕ್ತರಾಗಿ ಇರುತ್ತಿದ್ದರು ಮತ್ತು ಯಾವುದಾದರೂ ಏಕಾಂತ ಸ್ಥಳಕ್ಕೆ ಹೋಗಿ ಊಟ-ತಿಂಡಿಗಳನ್ನು ಮರೆತು ಕುಳಿತುಬಿಡುತ್ತಿದ್ದರು. ಮನೆಯವರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡುತ್ತಲೇ ಇರಲಿಲ್ಲ. ಏಕೆಂದರೆ ಅವರು ಊಟದ ಸಮಯದಲ್ಲಿ ಮನೆಯಲ್ಲೇ ಇರುತ್ತಿರಲಿಲ್ಲ. ಇವರು ತಮ್ಮ ತಾಯಿಯವರ ತಾಯಿಯ (ಅಜ್ಜಿ) ಮನೆಯಲ್ಲಿ ಬಾಲ್ಯದ ಕೆಲವು ಸಂತೋಷದ ಕ್ಷಣಗಳನ್ನು ಕಳೆದರೆಂದು ಹೇಳಲಾಗಿದೆ. ಅಲ್ಲದೆ, ಇವರ ತಂದೆಯ ಸಹೋದರನ ಮನೆಯಲ್ಲಿ ಕೂಡ ಅನೇಕ ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತ ತಮ್ಮ ಬಾಲ್ಯವನ್ನು ಕಳೆದರೆಂದು ಹೇಳಲಾಗುತ್ತದೆ.

ತಮ್ಮ ತಾಯಿಯವರು ಕಾಲವಾದ ನಂತರ ಆಧ್ಯಾತ್ಮಿಕ ಜೀವನವನ್ನು ಹುಡುಕುತ್ತ ಮನೆಯನ್ನು ಬಿಟ್ಟು ಹೊರಟು ಮುಂಬೈ ಸೇರಿದರು. ಮತ್ತೆ ಮನೆಗೆ ಹಿಂತಿರುಗಲೇ ಇಲ್ಲ. ಮುಂಬೈನಲ್ಲಿ ಹೆಚ್ಚು ದಿನಗಳು ಇರಲಾಗಲಿಲ್ಲ. ಮತ್ತೆ ಅಲ್ಲಿ ಇಲ್ಲಿ ಅಲೆದಾಡುತ್ತಾ ಸ್ವಾಮಿ ನಿತ್ಯಾನಂದರ ವಾಸಸ್ಥಾನವಾದ ವಜ್ರೇಶ್ವರಿಗೆ ಬಂದರು. ಅಲ್ಲಿ ಸ್ವಾಮಿ ನಿತ್ಯಾನಂದರನ್ನು ಪೂಜಿಸಲು ಆರಂಭಿಸಿದರು. ಅವರ ದಿವ್ಯ ಸನ್ನಿಧಾನದಲ್ಲಿದ್ದು ಅವರು ಹೇಳಿಕೊಟ್ಟ ಆಧ್ಯಾತ್ಮಿಕ ಶಿಕ್ಷಣವನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡರು.

ನಂತರ ಅಲ್ಲಿಂದ ನಾಸಿಕ್ ಗೆ ಬಂದು ಅಲ್ಲಿಂದ ಕೊನೆಯದಾಗಿ ಶಿರಡಿಗೆ 1953 ರಲ್ಲಿ ಬಂದರು. ಆಗ  ಅವರಿಗೆ ತಮಗೆ ಸಾಯಿಬಾಬಾರವರ ಸಾಕ್ಷಾತ್ಕಾರ ಆಗಿರುವ ಅರಿವಾಯಿತು. ಸಾಯಿಬಾಬಾರವರು ಶಿವನೇಶನ್ ಸ್ವಾಮೀಜಿಯವರನ್ನು ಸಂಪೂರ್ಣವಾಗಿ ಅನುಗ್ರಹಿಸಿದ್ದರು. ನಂತರ ಶಿವನೇಶನ್ ಸ್ವಾಮೀಜಿಯವರ ಮತ್ತು ಸಾಯಿಬಾಬಾರವರ ನಡುವೆ ಹೆಚ್ಚಿನ ಪ್ರೀತಿ ಮತ್ತು ಬಾಂಧವ್ಯ ಬೆಳೆದು ಅವರು ಶಿರಡಿ ಬಿಟ್ಟು ಎಲ್ಲಿಗೂ ಹೋಗಲೇ ಇಲ್ಲ.

ಶಿವನೇಶನ್ ಸ್ವಾಮೀಜಿಯವರು ಶಿರಡಿಯಲ್ಲಿ ಸದಾಕಾಲ ಸೇವೆಯನ್ನು ಮಾಡುತ್ತಾ ಕಳೆಯುತ್ತಿದ್ದರು. ಶಿರಡಿಯಲ್ಲಿನ ಎಲ್ಲಾ ದೇವಾಲಯಗಳನ್ನು ಗುಡಿಸಿ ಶುಭ್ರಗೊಳಿಸುತ್ತಿದ್ದರು. ಆದರೆ ಇವರಿಗೆ ಬಹಳ ಇಷ್ಟವಾದ ಸ್ಥಳ ದ್ವಾರಕಾಮಾಯಿ ಆಗಿತ್ತು. ಪ್ರತಿನಿತ್ಯವೂ ದ್ವಾರಕಾಮಾಯಿಯಲ್ಲಿನ ದೀಪಗಳನ್ನು ಚೆನ್ನಾಗಿ ಒರೆಸಿ ಫಳಫಳ ಹೊಳೆಯುವಂತೆ ನೋಡಿಕೊಳ್ಳುತ್ತಿದ್ದರು. ಇವರನ್ನು ಚಾವಡಿಯನ್ನು ನೋಡಿಕೊಳ್ಳುವಂತೆ ನೇಮಕ ಮಾಡಲಾಯಿತು. ಶಿವನೇಶನ್ ಸ್ವಾಮೀಜಿಯವರು ಚಾವಡಿಯನ್ನು ಬಹಳ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದರು. ಆದರೆ, ದ್ವಾರಕಾಮಾಯಿಯನ್ನು ನೋಡಿಕೊಳ್ಳುವುದನ್ನು ಬಿಡಲಿಲ್ಲ. ಸಮಯ ಸಿಕ್ಕಾಗಲೆಲ್ಲಾ ದ್ವಾರಕಾಮಾಯಿಯನ್ನು ಸಂಪೂರ್ಣವಾಗಿ ಗುಡಿಸಿ ಒರೆಸುತ್ತಿದ್ದರು.

ಶಿವನೇಶನ್ ಸ್ವಾಮೀಜಿಯವರು ಸದಾ ಬಿಳಿಯ ಬಟ್ಟೆಯನ್ನೇ ಧರಿಸುತ್ತಿದ್ದರು. ಯಾರಾದರೂ ಇವರಿಗೆ ಹಣವನ್ನು ನೀಡಿದರೆ ಅದರಿಂದ ಕೂಡಲೇ ಪುಸ್ತಕಗಳನ್ನು ಅಥವಾ ಹಸಿದವರಿಗೆ ನೀಡಲು ಆಹಾರವನ್ನು ಕೊಳ್ಳುತ್ತಿದ್ದರು. ಶಿವನೇಶನ್ ಸ್ವಾಮೀಜಿಯವರು ತಮ್ಮ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವುದರಲ್ಲಿ ಮಗ್ನರಾಗಿರುತ್ತಿದ್ದರು. ಇವರಿಗೆ ಸರಿ ಸುಮಾರು 10 ಭಾಷೆಗಳಲ್ಲಿ ಪಾಂಡಿತ್ಯವಿತ್ತು. ಹೀಗಾಗಿ, ಶಿರಡಿಗೆ ಬರುವ ಭಕ್ತರ ಜೊತೆ ಸತ್ಸಂಗ ನಡೆಸುತ್ತ ಅವರವರ ಮಾತೃ ಭಾಷೆಯಲೇ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು ಮತ್ತು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. ಇವರಿಗೆ ಪ್ರದಕ್ಷಿಣೆ ಮಾಡುವುದೆಂದರೆ ಬಹಳ ಇಷ್ಟ. ಪ್ರತಿದಿನ ಬೆಳಗಿನ ಜಾವ ಸುಮಾರು 3 ಘಂಟೆಗೆ ಎದ್ದು ಮೊದಲು ಗುರುಸ್ಥಾನ ಪ್ರದಕ್ಷಿಣೆ ಮಾಡಿ ನಂತರ ಲೇಂಡಿಬಾಗ್ ಮತ್ತು ದತ್ತ ಮಂದಿರವನ್ನು ಪ್ರದಕ್ಷಿಣೆ ಮಾಡುತ್ತಿದ್ದರು. ಆಲ್ಲದೇ, ತಮ್ಮ ಬಳಿ ಬರುವ ಎಲ್ಲಾ ಭಕ್ತರಿಗೂ ಅವರ ಅಧ್ಯಾತ್ಮಿಕ ಪ್ರಗತಿ ಮತ್ತು ಒಳ್ಳೆಯ ಆರೋಗ್ಯಕ್ಕಾಗಿ ಪ್ರದಕ್ಷಿಣೆ ಮಾಡುವಂತೆ ಸಲಹೆ ನೀಡುತ್ತಿದ್ದರು. ಚಾವಡಿ ಸಂಜೆ ಆರತಿಯ ನಂತರ ಸುಮಾರು ಒಂದು ಘಂಟೆಗಳ ಕಾಲ ಭಜನೆಯನ್ನು ಮಾಡುತ್ತಿದ್ದರು. ಇವರ ಇಷ್ಟವಾದ ಭಜನೆ "ಸಾಯಿ ಭವಾನಿ". ಈ ಭಜನೆಯು ಪ್ರಪಂಚದಾದ್ಯಂತ ಎಲ್ಲಾ ಸಾಯಿ ಭಕ್ತರೂ ಹಾಡುತ್ತಾರೆ.

ಶಿವನೇಶನ್ ಸ್ವಾಮೀಜಿಯವರು ಪ್ರತಿ ದಿನ ಧುನಿ ಪೂಜೆಯನ್ನು ತಪ್ಪದೆ ಮಾಡುತ್ತಿದ್ದರು. ಇವರ ಬಳಿ ಹೋದ ಪ್ರತಿಯೊಬ್ಬರಿಗೂ ಕೂಡ ಬಾಬಾರವರ ಉಧಿ ಮತ್ತು ತೀರ್ಥವನ್ನು ಕೊಡದೆ ಕಳುಹಿಸುತ್ತಿರಲಿಲ್ಲ. ಇವರ ಬಳಿ ಹೋದ ಯಾರೂ ಬರಿಗೈನಲ್ಲಿ ವಾಪಸಾಗುತ್ತಿರಲಿಲ್ಲ. ಆದರೆ ಶಿರಡಿಯಲ್ಲಿ ಇವರಿಗೆ ಜೀವನ ನಡೆಸುವುದು ಬಹಳ ಕಷ್ಟವಾಗುತ್ತಿತ್ತು. ಅನೇಕ ದಿನಗಳು ಇವರು ತಿನ್ನಲು ಆಹಾರ ಸಿಗದೇ ಮತ್ತು ಮಲಗಲು ಸ್ಥಳ ಸಿಗದೇ ಬಹಳ ಕಷ್ಟಪಟ್ಟರು. ಆದರೆ ಎಂದೂ ಧೃತಿಗೆಡಲಿಲ್ಲ. ಬದಲಿಗೆ ಕಷ್ಟಗಳು ಅವರಿಗೆ ಮತ್ತಷ್ಟು ಹೆಚ್ಚು ಶಕ್ತಿಯನ್ನು ನೀಡಿದವು ಎಂದೇ ಹೇಳಬಹುದು.

ಶಿವನೇಶನ್ ಸ್ವಾಮೀಜಿಯವರು ಸಾಯಿಬಾಬಾರವರ ಕೀರ್ತಿಯನ್ನು ಪ್ರಪಂಚದಾದ್ಯಂತ ಹರಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಇವರ ಬಳಿ ಬರುವ ಭಕ್ತರಿಗೆ ಸಾಯಿ ಮಂದಿರಗಳನ್ನು ಕಟ್ಟುವಂತೆ, ಸಾಯಿಯವರ ನಾಮ ಜಪ, ಸತ್ಸಂಗ ಮತ್ತು ಅವರ ಲೀಲೆಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಣೆ ಮಾಡುತ್ತಿದ್ದರು.


ಈ ರೀತಿಯಲ್ಲಿ ಸಾಯಿಬಾಬಾರವರ ಸೇವೆಯನ್ನು ಅನವರತವಾಗಿ 50 ವರ್ಷಗಳ ಕಾಲ ಮಾಡುತ್ತಾ  ತಮ್ಮ ಕೊನೆಯ ದಿನಗಳಲ್ಲಿ ಸ್ವಲ್ಪ ಅಸ್ವಸ್ಥರಾಗಿ ಕೋಣೆಗೆ  12ನೇ ಫೆಬ್ರವರಿ 1996 ರಂದು ಮಹಾ ಸಮಾಧಿ ಹೊಂದಿದರು.  ಇವರ ಸಮಾಧಿಯು ಶಿರಡಿಯಿಂದ  2 ಕಿಲೋಮೀಟರ್ ದೂರದಲ್ಲಿ ಪಿಂಪಲ್ ವಾಡಿ ರಸ್ತೆಯಲ್ಲಿದೆ. ಸದ್ಗುರು ಶಿವನೇಶನ್ ಸ್ವಾಮೀಜಿಯವರ ಗುರುಕುಲ, ಅವರ ಸಮಾಧಿ ಮತ್ತು ವಸ್ತು ಸಂಗ್ರಹಾಲಯವನ್ನು ಮೆಹರ್ ಧುನ್ ದತ್ತಿ ಟ್ರಸ್ಟ್ (ನೋಂದಣಿ) ನವರು ಸಾರ್ವಜನಿಕ ದತ್ತಿ ಸಂಸ್ಥೆಯನ್ನಾಗಿ ಮಾಡಿಕೊಂಡು ನೋಡಿಕೊಳ್ಳುತ್ತಿದ್ದಾರೆ.




ಶಿವನೇಶನ್ ಸ್ವಾಮೀಜಿಯವರ ಆಶ್ರಮದ ವಸ್ತು ಸಂಗ್ರಹಾಲಯದಲ್ಲಿ ಅವರ ಕೆಲವು ಹಳೆಯ ಅಪರೂಪದ ಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಬಟ್ಟೆಗಳು, ಪುಸ್ತಕಗಳು, ವಿಗ್ರಹಗಳು ಮತ್ತು ಇನ್ನು ಹಲವಾರು ವಸ್ತುಗಳನ್ನು ನೋಡಬಹುದು.


ಇಂದು ಶಿವನೇಶನ್ ಸ್ವಾಮೀಜಿಯವರು ನಮ್ಮೊಂದಿಗೆ ಇಲ್ಲ. ಆದರೆ, ಅವರ ಪ್ರೀತಿ ಮತ್ತು ಅವರ ಸಂಪ್ರದಾಯಗಳ ಆಚರಣೆಯು ಇನ್ನು ಜೀವಂತವಾಗಿ ನಮ್ಮೊಂದಿಗೆ ಇದೇ. ಕರ್ನಾಟಕದ ಗಾಣಗಾಪುರದಲ್ಲಿ "ದತ್ತಗುರು ಭಂಡಾರ ಟ್ರಸ್ಟ್ (ನೋಂದಣಿ)" (http://dattagurubhandara.org/pujyasri.html) ನವರು ಶಿವನೇಶನ್ ಸ್ವಾಮಿಜಿಯವರ ಹೆಸರಿನಲ್ಲಿ ಟ್ರಸ್ಟ್ ನ್ನು ಸ್ಥಾಪಿಸಿರುವುದಷ್ಟೇ ಆಲ್ಲದೇ, ನಿರಂತರವಾಗಿ ವರ್ಷದ 365 ದಿನಗಳೂ 24 ಘಂಟೆಗಳೂ ಸಾಯಿ ನಾಮ ಜಪ ಮತ್ತು ನಿತ್ಯ ಅನ್ನದಾನ ಕಾರ್ಯಕ್ರಮವನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ. ಅಷ್ಟೇ ಆಲ್ಲದೇ, ಇಂದಿಗೂ ಪೂಜ್ಯ ಶಿವನೇಶನ್ ಸ್ವಾಮೀಜಿಯವರು ತಮ್ಮ ಅನೇಕ ಭಕ್ತರಿಗೆ ಕನಸಿನಲ್ಲಿ ದರ್ಶನವನ್ನು ನೀಡಿ ಸಾಯಿಬಾಬಾರವರ ಸೇವೆಯನ್ನು ಮಾಡುವಂತೆ ಪ್ರಚೋದಿಸುತ್ತಿದ್ದಾರೆ. 

ಶಿವನೇಶನ್ ಸ್ವಾಮಿಜಿಯವರ ಸಮಾಧಿ ಮಂದಿರವು ಪ್ರತಿದಿನ ಬೆಳಿಗ್ಗೆ 5:30 ರಿಂದ ರಾತ್ರಿ 11 ಘಂಟೆಯವರೆಗೆ  ದರ್ಶನಕ್ಕೆ ತೆರೆದಿರುತ್ತದೆ.

ಆರತಿಯ ಸಮಯ 
ಕಾಕಡಾ ಆರತಿ 
5:30 AM
ಮಧ್ಯಾನ್ಹ ಆರತಿ 
12:00 Noon
ಧೂಪಾರತಿ 
6:30 PM
ಶೇಜಾರತಿ 
10:00 PM

ಗುರುಕುಲದಲ್ಲಿ ಆಚರಿಸುವ ವಿಶೇಷ ಉತ್ಸವದ ದಿನಗಳು 
  1. ಪ್ರತಿ ವರ್ಷದ 12ನೇ ಏಪ್ರಿಲ್ - ಶಿವನೇಶನ್ ಸ್ವಾಮೀಜಿಯವರ ಹುಟ್ಟುಹಬ್ಬ.  
  2. ಪ್ರತಿ ವರ್ಷದ 12ನೇ ಫೆಬ್ರವರಿ - ಶಿವನೇಶನ್ ಸ್ವಾಮೀಜಿಯವರ ಪುಣ್ಯತಿಥಿ.
  3. ದತ್ತ ಜಯಂತಿ. 
  4. ಶ್ರೀರಾಮನವಮಿ. 
  5. ವಿಜಯದಶಮಿ. 
  6. ಗುರುಪೂರ್ಣಿಮಾ - ಪಲ್ಲಕಿ ಉತ್ಸವ.
ಹೆಚ್ಚಿನ ವಿವರಗಳಿಗೆ ಶ್ರೀ.ಶಿವನೇಶನ್ ಸ್ವಾಮೀಜಿಯವರ ಆಶ್ರಮವನ್ನು ಸಾಯಿಭಕ್ತರು ಸಂಪರ್ಕಿಸಬಹುದು. ಅದರ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ: 

ಶ್ರೀ.ಸದ್ಗುರು ಶಿವನೇಶನ್ ಸ್ವಾಮೀಜಿ ಗುರುಕುಲಂ, 
ಪಿಂಪಲ್ ವಾಡಿ ರಸ್ತೆ, ಶಿರಡಿ. 
ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ.ದಿನೇಶ್ ಪಾಂಡೆ 
ದೂರವಾಣಿ ಸಂಖ್ಯೆ: +9198920 47031


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment