Wednesday, January 13, 2010

ಸಾಯಿ ಮಹಾಭಕ್ತ  - ನಾನಾ ಸಾಹೇಬ್ ಚಂದೋರ್ಕರ್ - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ


ನಾನಾ ಸಾಹೇಬ್ ಚಂದೋರ್ಕರ್ ರವರು ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದರು. ಇವರು ಜಿಲ್ಲಾಧಿಕಾರಿಗಳಿಗೆ ಆಪ್ತ ಸಹಾಯಕರಾಗಿದ್ದರು. ಇವರು ಸಂಸ್ಕೃತ ಪಂಡಿತರಾಗಿದ್ದು ಭಗವದ್ಗೀತಾ, ಜ್ಞಾನೇಶ್ವರಿ ಹಾಗೂ ಇನ್ನು ಹಲವು ಧಾರ್ಮಿಕ ಗ್ರಂಥಗಳ್ಳನ್ನು ಓದಿ ತಿಳಿದುಕೊಂಡಿದ್ದರು. ಚಂದೋರ್ಕರ್ ರವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕುಲಕರ್ಣಿ ಎಂಬುವರ ಕೈಲಿ ಸಾಯಿಬಾಬಾರವರು ಹಲವು ಬಾರಿ ನಾನಾ ಸಾಹೇಬ್ ಚಂದೋರ್ಕರ್ ರವರಿಗೆ ಮಸೀದಿಗೆ ಬಂದು ತಮ್ಮನ್ನು ಕಾಣಲು ಹೇಳಿ ಕಳುಹಿಸಿದ್ದರು. ಹಲವು ಬಾರಿ ಹೇಳಿ ಕಳುಹಿಸಿದರೂ ಕೂಡ ನಾನಾ ಮಸೀದಿಗೆ ಹೋಗಿ ಬಾಬಾರವರನ್ನು ಕಾಣಲು ಇಷ್ಟ ಪಡಲಿಲ್ಲ ಹಾಗೂ ಆ ಕರೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಏಕೆಂದರೆ, ನಾನಾರವರಿಗೆ ಸಾಧು ಸಂತರ ಮೇಲೆ ನಂಬಿಕೆ ಇರಲಿಲ್ಲ.  ನಾನಾ ಸಾಹೇಬ್ ಚಂದೋರ್ಕರ್ ರವರು ಸಾಧು ಸಂತರು ಯಾವುದೇ ದೈವಿಕ ಶಕ್ತಿ ಹೊಂದಿರುವುದಿಲ್ಲ ಮತ್ತು ಹಣಕ್ಕಾಗಿ ತಾವು ಕಲಿತ ಯಕ್ಷಿಣಿ ವಿದ್ಯೆಯಿಂದ ಅಮಾಯಕ ಜನರನ್ನು ಮೊಸಗೊಳಿಸುತ್ತಾರೆ ಎಂದು ನಂಬಿದ್ದರು ಮತ್ತು ಅವುಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳು ಇರುವುದಿಲ್ಲ ಎಂದು ತಿಳಿದಿದ್ದರು.  

ಆದರೆ ಕಟ್ಟಕಡೆಗೆ ಒಮ್ಮೆ ನಾನಾರವರು ಶಿರಡಿಗೆ ಬಂದರು. ಸಾಯಿಬಾಬಾರವರು ನಾನಾರವರನ್ನು ಸಂತೋಷದಿಂದ ಬರಮಾಡಿಕೊಂಡರು ಮತ್ತು ಹೀಗೆ ಹೇಳಿದರು. "ನಾನಾ, ಪ್ರಪಂಚದಲ್ಲಿನ ಸಾವಿರಾರು ನಾನರನ್ನು ಬಿಟ್ಟು ನಿಮ್ಮನ್ನೇ ಏಕೆ ನಾನು ವಿಶೇಷವಾಗಿ ಆಹ್ವಾನಿಸಿದೆ ಎಂದು ನಿಮಗೆ ತಿಳಿದಿಲ್ಲ" ಎಂದರು. ನಂತರ ಬಾಬಾರವರ ಸಮ್ಮುಖದಲ್ಲಿ ಭಗವದ್ಗೀತೆಯ ಬಗ್ಗೆ ಸುದೀರ್ಘ ಚರ್ಚೆಯನ್ನು ನಡೆಸಿದರು ಮತ್ತು ಭಗವದ್ಗೀತೆಗೆ ಸಾಯಿಬಾಬಾರವರು ನೀಡಿದ ಹೊಸ ಮತ್ತು ನಿಜವಾದ ವ್ಯಾಖ್ಯಾನವನ್ನು ಕಂಡು ಅಚ್ಚರಿಗೊಂಡರು.

ಒಮ್ಮೆ ನಾನಾ ಅವರ ಮಗಳು ಮೈನಾತಾಯಿ ಜಾಮನೇರಿನಲ್ಲಿ ಪ್ರಸವ ವೇದನೆಯಿಂದ ನರಳುತ್ತಿದ್ದಾಗ ಅದನ್ನು ತಮ್ಮ ದಿವ್ಯ ದೃಷ್ಟಿಯಿಂದ ತಿಳಿದ ಸಾಯಿಬಾಬಾರವರು ಕೂಡಲೇ ಮಸೀದಿಯಲ್ಲಿದ್ದವರೊಬ್ಬರಿಗೆ ಆರತಿಯನ್ನು ಬರೆಯಲು ಹೇಳಿ ಅದನ್ನು ಉಧಿಯ ಜೊತೆಗೆ ಕೊಟ್ಟು ಸಮಯಕ್ಕೆ ಸರಿಯಾಗಿ ಕಳುಹಿಸಿದರು. ಉಧಿಯನ್ನು ಮೈನಾ ತಾಯಿಗೆ ಕೊಟ್ಟು ಆರತಿಯನ್ನು ಹಾಡಲಾಯಿತು. ಸಾಯಿಬಾಬಾರವರ ಆಶೀರ್ವಾದದಿಂದ ಪ್ರಸೂತಿ ನಿರ್ವಿಘ್ನವಾಗಿ ನೆರವೇರಿತು ಮತ್ತು ಮೈನಾ ತಾಯಿಗೆ ಯಾವುದೇ ತೊಂದರೆ ಆಗಲಿಲ್ಲ. ಕಾಲಾನಂತರದಲ್ಲಿ, ನಾನಾ ಸಾಹೇಬ್ ಚಂದೋರ್ಕರ್ ಮತ್ತು ಅವರ ಸಹಾಯಕನಾದ ದಾಸಗಣು ಒಡಗೂಡಿ ಸಾಯಿಬಾಬಾರವರ ಪ್ರಚಾರವನ್ನು ಕೈಗೊಂಡರು ಹಾಗೂ ಸಾಯಿಬಾಬಾರವರ ತತ್ವವಾದ ದೇವನೊಬ್ಬನೆ (ಸಬ್ ಕಾ ಮಾಲಿಕ್ ಏಕ ಹೇ) ಎಂಬ ನುಡಿಯನ್ನು ಜನರಲ್ಲಿ ತಿಳಿಯಪಡಿಸಿದರು.

No comments:

Post a Comment