Saturday, April 30, 2011

ಮುಂಬೈ ನಗರದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿ ದರ್ಶನ್ ಮಂದಿರ ಟ್ರಸ್ಟ್, ಮಲಾಡ್ ಶಾಪಿಂಗ್ ಸೆಂಟರ್ ನ ಹಿಂಭಾಗ, ಎಸ್.ವಿ.ರೋಡ್, ಮಲಾಡ್  (ಪಶ್ಚಿಮ), ಮುಂಬೈ-400 064, ಮಹಾರಾಷ್ಟ್ರ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವನ್ನು 29 ವರ್ಷಗಳ ಹಿಂದೆ ಅಂದರೆ ಮಾರ್ಚ್ 1982 ರಲ್ಲಿ ಪವಿತ್ರ ಗುಡಿ ಪಾಡ್ವದ ದಿವಸ ಪ್ರಾರಂಭಿಸಲಾಯಿತು. ದೇವಾಲಯದ ಉದ್ಘಾಟನೆಯನ್ನು ಟ್ರಸ್ಟಿ ಶ್ರೀ.ರಾಜಕುಮಾರ್ ಪರಸ್ರಾಮ್ಪುರಿಯಾರವರು ನೆರವೇರಿಸಿದರು. 

ಮೊದಲಿಗೆ ಈ ಮಂದಿರದಲ್ಲಿ ಕೇವಲ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಮಾತ್ರವೇ ಪ್ರತಿಷ್ಟಾಪಿಸಲಾಗಿತ್ತು. ಆದುದರಿಂದಲೇ ದೇವಾಲಯಕ್ಕೆ ಶ್ರೀ ಸಾಯಿ ದರ್ಶನ್ ಮಂದಿರ ಎಂಬ ಹೆಸರು ಬಂದಿತ್ತು. ಕಾಲಾನಂತರದಲ್ಲಿ ಶಿರಡಿ ಸಾಯಿಬಾಬಾರವರ ಆಶೀರ್ವಾದದಿಂದ ಮತ್ತು ಟ್ರಸ್ಟ್ ಸದಸ್ಯರೆಲ್ಲರ ಪರಿಶ್ರಮದಿಂದ ಈಗ ದೇವಾಲಯದ ಆವರಣದಲ್ಲಿ 16 ದೇವರುಗಳ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಇದರಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಒಂದೇ ಕಡೆಯಲ್ಲಿ ಎಲ್ಲ ದೇವಾನುದೇವತೆಗಳ ದರ್ಶನ ಮಾಡುವ ಭಾಗ್ಯ ಒದಗಿಬಂದಿದೆ. 

ದೇವಾಲಯದಲ್ಲಿ ಶ್ರೀ ಬಾಬೋಸ ಮಹಾರಾಜ, ಶನಿದೇವರು, ಹನುಮಂತ, ದತ್ತಾತ್ರೇಯ, ಜಲರಾಂ ಬಪ್ಪಾ, ಪಿತ್ರಾ ದೇವ, ಸಿತ್ಲಾ ಮಾತಾ, ರಾಣಿ ಸತಿ ದಾದಿ, ಭಗವಾನ್ ಶಂಕರ, ಶಿರಡಿ ಸಾಯಿಬಾಬಾ, ಅಂಬೆ ಮಾತಾ, ಗಣೇಶ, ಖಾಟುವಾಲೆ ಶ್ಯಾಮ್ ಬಾಬಾ, ಜಿನ ಮಾತಾ, ಭೈರವನಾಥ, ರಾಮ ಪರಿವಾರ ಮತ್ತು ರಾಧ ಕೃಷ್ಣ ದೇವರುಗಳ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. 

ಮುಂಬೈ ನ ಪಶ್ಚಿಮ ದಿಗ್ಭಾಗದಲ್ಲಿ ದಹಿಸಾರ್ ನಿಂದ ಹಿಡಿದು ಚರ್ಚ್ ಗೇಟ್ ನ ವರೆಗೆ ಖಾಟುವಾಲೆ ಶ್ಯಾಮ್ ಬಾಬಾರವರ ವಿಗ್ರಹವನ್ನು ಈ ಮಂದಿರದಲ್ಲಿ ಮಾತ್ರ ದರ್ಶನ ಮಾಡಬಹುದಾಗಿದೆ. ಹಾಗೆಯೇ, ಜಿನ ಮಾತಾರ ವಿಗ್ರಹವನ್ನು ಈ ದೇವಾಲಯದಲ್ಲಿ ಮಾತ್ರ ಕಾಣಬಹುದಾಗಿದೆ. 


















ದೇವಾಲಯದ ಕಾರ್ಯಚಟುವಟಿಕೆಗಳು 

ದಿನನಿತ್ಯದ ಕಾರ್ಯಕ್ರಮಗಳು 

ದೇವಾಲಯದ ಸಮಯ:
ಬೆಳಿಗ್ಗೆ  6 ಘಂಟೆಯಿಂದ ಮಧ್ಯಾನ್ಹ 12 ಘಂಟೆಯ ವರೆಗೆ
ಸಂಜೆ 4 ಘಂಟೆಯಿಂದ ರಾತ್ರಿ 10 ಘಂಟೆಯವರೆಗೆ 
ಗುರುವಾರದಂದು ಬೆಳಿಗ್ಗೆ 5 ಘಂಟೆಯಿಂದ ಮಧ್ಯರಾತ್ರಿ 12 ಘಂಟೆಯವರೆಗೆ 

ಆರತಿಯ ಸಮಯ: 
ಪ್ರತಿದಿನ ಬೆಳಿಗ್ಗೆ 6 ಘಂಟೆಗೆ ಮತ್ತು ಸಂಜೆ 7:30 ಕ್ಕೆ.

ವಿಶೇಷ ದಿನಗಳು: 
  1. ಪ್ರತಿ ತಿಂಗಳ ಎರಡೂ ಏಕಾದಶಿಯ ದಿನದಂದು ಶ್ಯಾಮ್ ಬಾಬಾ ರವರ ವಿಶೇಷ ಕೀರ್ತನೆ ಮತ್ತು ಭಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. 
  2. ಪ್ರತಿ ತಿಂಗಳ ಅಮಾವಾಸ್ಯೆಯಂದು ರಾಣಿ ಸತಿ ದಾದಿಯವರ ಮಂಗಳ ಪಾಠವನ್ನು ಹಮ್ಮಿಕೊಳ್ಳಲಾಗುತ್ತದೆ. 
  3. ಪ್ರತಿ ತಿಂಗಳ ಅಷ್ಟಮಿಯಂದು ಜಿನ ಮಾತಾರವರ ಮಂಗಳ ಪಾಠವನ್ನು ಹಮ್ಮಿಕೊಳ್ಳಲಾಗುತ್ತದೆ. 
  4. ಪ್ರತಿ ಗುರುವಾರ ರಾತ್ರಿ 9 ಘಂಟೆಯಿಂದ 11 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
  5. ನವರಾತ್ರಿಯ ಸಮಯದಲ್ಲಿ ಅಷ್ಟಮಿಯ ದಿನ ವಿಶೇಷ ಹೋಮ ಹವನ ಕಾರ್ಯಕ್ರಮಗಳು ಮತ್ತು 108 ಕನ್ಯಾಕುಮಾರಿಯರ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. 
ವಿಶೇಷ ಉತ್ಸವದ ದಿನಗಳು: 
  1. ಪ್ರತಿ ವರ್ಷದ ಗುಡಿ ಪಾಡ್ವ ದಿನದಂದು ದೇವಾಲಯದ ವಾರ್ಷಿಕೋತ್ಸವ - ವಿಶೇಷ ಭಜನ ಸಂಧ್ಯಾ ಮತ್ತು ಅನ್ನದಾನವನ್ನು ಹಮ್ಮಿಕೊಳ್ಳಲಾಗುತ್ತದೆ. 
  2. ಶ್ರೀರಾಮನವಮಿ.
  3. ಗೋಕುಲಾಷ್ಟಮಿ.
  4. ನವರಾತ್ರಿ. 
  5. ಗಣೇಶ ಚತುರ್ಥಿ.
  6. ಹನುಮಾನ್ ಜಯಂತಿ.
  7. ಜಲರಾಂ ಜಯಂತಿ. 
  8. ಶಿವರಾತ್ರಿ.
  9. ಹೋಳಿ ಹುಣ್ಣಿಮೆ.
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:
  1. ಪ್ರತಿ ಶನಿವಾರದಂದು ಸರಿ ಸುಮಾರು 700 ಬಡ ಜನರಿಗೆ ಬಾಬಾ ಮಹಾಪ್ರಸಾದವನ್ನು ವಿತರಿಸಲಾಗುತ್ತದೆ. 
  2. ರಕ್ತದಾನ ಶಿಬಿರ.
  3. ಉಚಿತ ನೇತ್ರ ತಪಾಸಣಾ ಶಿಬಿರಗಳು. 
  4. ಅರ್ಹರಿಗೆ ಉಚಿತ ವೈದ್ಯಕೀಯ ಸೌಲಭ್ಯ. 
  5. ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪುಸ್ತಕಗಳು ಮತ್ತು ಸಮವಸ್ತ್ರಗಳ ವಿತರಣೆ. 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಮಲಾಡ್ ಶಾಪಿಂಗ್ ಸೆಂಟರ್ ನ ಹಿಂಭಾಗ, ಎಸ್.ವಿ.ರೋಡ್, ಮಲಾಡ್  (ಪಶ್ಚಿಮ)

ವಿಳಾಸ: 
ಶ್ರೀ ಸಾಯಿ ದರ್ಶನ್ ಮಂದಿರ ಟ್ರಸ್ಟ್,
ಮಲಾಡ್ ಶಾಪಿಂಗ್ ಸೆಂಟರ್ ನ ಹಿಂಭಾಗ,
ಎಸ್.ವಿ.ರೋಡ್, ಮಲಾಡ್  (ಪಶ್ಚಿಮ),
ಮುಂಬೈ-400 064, ಮಹಾರಾಷ್ಟ್ರ



ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ನೀರಜ್ ಕೇತನ್

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+91 22 2888 3377 / +91 97027 ೮೧೪೮೭


ಈ ಮೇಲ್ ವಿಳಾಸ: 


ಅಂತರ್ಜಾಲ ತಾಣ: 

ಮಾರ್ಗಸೂಚಿ: 
ದೇವಾಲಯವು ಮಲಾಡ್ ಶಾಪಿಂಗ್ ಸೆಂಟರ್ ನ ಹಿಂಭಾಗದಲ್ಲಿರುವ ಎಸ್.ವಿ.ರೋಡ್ ನಲ್ಲಿದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, April 26, 2011

ಚೆನ್ನೈ ನಗರದಲ್ಲಿ ಶಿರಡಿ ಸಾಯಿಬಾಬಾ ಚಿತ್ರಾ ಉತ್ಸವ - 26ನೇ ಏಪ್ರಿಲ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಭಕ್ತರು ಕೋರಿಕೆಗಳನ್ನು ಈಡೇರಿಸುತ್ತಿರುವ ಕಲಿಯುಗದ ಕಾಮಧೇನು ಶ್ರೀ ಶಿರಡಿ ಸಾಯಿಬಾಬಾರವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚೆನ್ನೈನ  ಶ್ರೀ ಸಾಯಿ ಪ್ರಚಾರ ಪರಿವಾರವು ಮುಂದಿನ ತಿಂಗಳ 1ನೇ ಮೇ 2011, ಭಾನುವಾರದಂದು ಚೆನ್ನೈ ನಗರದಲ್ಲಿ ಶಿರಡಿ ಸಾಯಿಬಾಬಾ ಚಿತ್ರಾ ಉತ್ಸವವನ್ನು ಹಮ್ಮಿಕೊಂಡಿರುತ್ತದೆ. 

ಬೆಳಗಿನಿಂದ ಸಂಜೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಆಗಮಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಾಯಿ ಪ್ರಚಾರ ಪರಿವಾರದ ಸದಸ್ಯರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಕಾರ್ಯಕ್ರಮದ ವಿವರ ಮತ್ತು ನಡೆಯುವ ಸ್ಥಳದ ವಿವರವನ್ನು ಈ ಕೆಳಗೆ ಕೊಡಲಾಗಿದೆ.

ಕಾರ್ಯಕ್ರಮದ ಸಮಯ: 
ಬೆಳಿಗ್ಗೆ 4:30 ರಿಂದ ಸಂಜೆ 6:30 ರ ವರೆಗೆ 

ಕಾರ್ಯಕ್ರಮ ನಡೆಯುವ ಸ್ಥಳ: 
ಜೈನ್ ಭವನ, 10/1, ಸನ್ನಿಧಿ ರಸ್ತೆ, ವಡಪಳನಿ, ಚೆನ್ನೈ-26.
ದೂರವಾಣಿ: 044-2483 3233 
ಮಾರ್ಗಸೂಚಿ: ವೆಂಗೀಶ್ವರನ್ ದೇವಾಲಯದ ಹತ್ತಿರ.

ಕಾರ್ಯಕ್ರಮದ ವಿವರಗಳು: 
4.30 AM – ಮಹಾ ಗಣಪತಿ ಪೂಜೆ
5.00 AM – ಉಚಿತ ವಿವಾಹ ಕಾರ್ಯಕ್ರಮ 
7.00 AM – 108 ಶ್ರೀ ಸಾಯಿ ಸತ್ಯ ವ್ರತ ಪೂಜೆ
9.00 AM – ನಾಮ ಸಂಕೀರ್ತನೆ
12.00 PM – ಆರತಿ 
12.30 PM – 360 ಮಹಿಳೆಯರಿಗೆ ಸೀರೆ, ಕುಂಕುಮ ವಿತರಣೆ ಮತ್ತು ಅನ್ನದಾನ, ನಲಬಾಗಂ ಮೀನಾಕ್ಷಿಸುಂದರಂ, ಶ್ರೀ ಜನನಿ ಕೇಟರಿಂಗ್ ಸರ್ವೀಸ್ ಇವರಿಂದ.
5.00 PM – ನಾಮ ಸಂಕೀರ್ತನ ನಾಟ್ಯಾಂಜಲಿ ಕಾರ್ಯಕ್ರಮ
6.00 PM – ಆರತಿ 
6.30 PM – ಪ್ರಸಾದ ವಿತರಣೆ

ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ವಿಳಾಸವನ್ನು ಸಾಯಿಭಕ್ತರು ಸಂಪರ್ಕಿಸಬಹುದು. 

ಶ್ರೀ ಸಾಯಿ ಪ್ರಚಾರ ಪರಿವಾರ 
11/11, ಆಂಡವರ ನಗರ, 6ನೇ ರಸ್ತೆ, ಕೋಡಂಬಾಕಂ, ಚೆನ್ನೈ-24.
ದೂರವಾಣಿ ಸಂಖ್ಯೆ: 044-6544 9766 / +91 98408 18595
ಅಂತರ್ಜಾಲ ತಾಣ: www.srisaipracharpariwar.org


ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, April 25, 2011

ಹರಿದ್ವಾರದ ಪ್ರಪ್ರಥಮ ಶಿರಡಿ ಸಾಯಿಬಾಬಾ ಮಂದಿರ- ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್, ಪರಶುರಾಮ ಆಶ್ರಮ (ನೋಂದಣಿ), ಹೃಷಿಕೇಶ ಬೈ ಪಾಸ್ ರಸ್ತೆ, ದುಧಾಧಾರಿ ಮಂದಿರದ ಎದುರು, ಬೂಪಟ್ವಾಲ ಚೌಕ, ಹರಿದ್ವಾರ-249 410, ಉತ್ತರಖಂಡ, ಭಾರತ - ಕೃಪೆ:ಸಾಯಿಅಮೃತಧಾರಾ.ಕಾಂ

ಈ ಶಿರಡಿ ಸಾಯಿಬಾಬಾ ಮಂದಿರವು ಹರಿದ್ವಾರದ ಪ್ರಥಮ ಸಾಯಿಬಾಬಾ ಮಂದಿರವಾಗಿರುತ್ತದೆ. ಈ ಮಂದಿರವನ್ನು 5ನೇ ಮೇ 1994 ರಂದು ಹೃಷಿಕೇಶದ ಶ್ರೀ.ಎ.ಕೆ.ಟೈಲರ್ ರವರು ಉದ್ಘಾಟಿಸಿದರು. ಸಾಯಿಬಾಬಾರವರ ಪವಿತ್ರ ಧುನಿಯನ್ನು ಶಿರಡಿಯಿಂದ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀ.ಕೋಟೆ ಪಾಟೀಲ್ ರವರು ಸ್ವತಃ ತಂದು ಸ್ಥಾಪಿಸಿದರು. 

ಸಾಯಿಬಾಬಾರವರ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ 9 ಹೋಮಕುಂಡಗಳನ್ನು ಬಳಸಲಾಯಿತು. 1 ವಾರಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು 51 ಪುರೋಹಿತರ ನೇತೃತ್ವದಲ್ಲಿ ವೈದಿಕ ಪದ್ದತಿಗೆ ಅನುಗುಣವಾಗಿ ನಡೆಯಿತು. 

45 ಕೆಜಿ ತೂಕದ ಬೆಳ್ಳಿಯ ಸಿಂಹಾಸನವನ್ನು ಮೇ 2001 ರಲ್ಲಿ ಸ್ಥಾಪಿಸಲಾಯಿತು. 

ದೇವಾಲಯವು 3 ಅಂತಸ್ತುಗಳಿಂದ ಕೂಡಿದ್ದು ಕೆಳ ಅಂತಸ್ತಿನಲ್ಲಿ ಧ್ಯಾನ ಮಂದಿರವನ್ನು ಕಟ್ಟಲಾಗಿದ್ದು ಅಲ್ಲಿ 5 ಅಡಿ 4 ಅಂಗುಲ ಉದ್ದದ ಅಮೃತ ಶಿಲೆಯ ಸುಂದರವಾದ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಮೊದಲನೇ ಮಹಡಿಯಲ್ಲಿ ಸುಸಜ್ಜಿತವಾದ 10 ಕೋಣೆಗಳನ್ನು ಹೊರಗಿನಿಂದ ಬರುವ ಸಾಯಿಭಕ್ತರ ಇಳಿದುಕೊಳ್ಳಲು ಅನುಕೂಲ ಆಗಲೆಂದು ಕಟ್ಟಲಾಗಿದೆ.  

ಎರಡನೇ ಮಹಡಿಯಲ್ಲಿ ಸಾಯಿ ಭಕ್ತರಿಗೆ ಮಹಾಪ್ರಸಾದವನ್ನು ವಿತರಿಸಲು ಊಟದ ಹಾಲ್ ನಿರ್ಮಿಸಲಾಗಿದೆ. 

ದೇವಾಲಯದಲ್ಲಿ ಪವಿತ್ರ ಧುನಿಯನ್ನು ಕೂಡ ಸ್ಥಾಪಿಸಲಾಗಿದೆ. 

ದೇವಾಲಯದ ಆವರಣದಲ್ಲಿ 15 ಸುಸಜ್ಜಿತ ಹವಾ ನಿಯಂತ್ರಿತ ಕೋಣೆಯನ್ನು ಹೊಂದಿರುವ "ಸಾಯಿ ಭಕ್ತ ನಿವಾಸ" ವನ್ನು ಕಟ್ಟಲಾಗಿದ್ದು ಪ್ರತಿ ಕೋಣೆಯು ಟಿವಿ, ನೀರಿನ ಗೀಸರ್ ಮತ್ತು ಇತರ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಅತ್ಯಂತ ಕಡಿಮೆ ದರದಲ್ಲಿ ಹೊರ ರಾಜ್ಯದ ಭಕ್ತರಿಗೆ ಉಳಿದುಕೊಳ್ಳಲು ನೀಡಲಾಗುತ್ತಿದೆ. ಅಲ್ಲದೆ, ಇದೇ ದೇವಾಲಯದ ಆವರಣದಲ್ಲಿ  ಸಾಮಾನ್ಯ ಕೋಣೆಗಳನ್ನು ಕೂಡ ಕಟ್ಟಲಾಗಿದ್ದು, ಇವುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 







ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ 
ಕಾಕಡಾ ಆರತಿ - ಬೆಳಿಗ್ಗೆ 5:30 ಕ್ಕೆ 
ಮಧ್ಯಾನ್ಹ ಆರತಿ - 12 ಘಂಟೆಗೆ 
ಧೂಪಾರತಿ - ಸಂಜೆ 6:30 ಕ್ಕೆ 
ಶೇಜಾರತಿ - ರಾತ್ರಿ 9:30 ಕ್ಕೆ 

ವಿಶೇಷ ಉತ್ಸವದ ದಿನಗಳು: 
  1. ಪ್ರತಿ ವರ್ಷದ 3ನೇ ಮೇ ಯಿಂದ 5ನೇ ಮೇ ವರೆಗೆ ಸಾಯಿಮಂದಿರದ ಸ್ಥಾಪನಾ ದಿವಸದ ಅಂಗವಾಗಿ ಸಾಯಿ ಕುಂಭ ಮೇಳವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲಾ 3 ದಿನಗಳಲ್ಲಿ ಪ್ರಸಿದ್ದ ಸಾಯಿ ಭಜನ ಗಾಯಕರಿಂದ ಸಾಯಿಭಜನೆಯನ್ನು ಮತ್ತು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 1008 ಲೀಟರ್ ಹಾಲಿನ ಕೊಡಗಳು ಮತ್ತು ಪವಿತ್ರ ಗಂಗಾ ಜಲದಿಂದ ತುಂಬಿದ್ದ 108 ಕಲಶಗಳನ್ನು ಹರ ಕಿ ಪುರಿಯಿಂದ ಮಹಿಳೆಯರು ಮೆರವಣಿಗೆಯಲ್ಲಿ ತಂದು ಇರಿಸಿ ಮಾರನೇ ದಿನ ಬೆಳಗಿನ ಜಾವ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಮಾಡಿಸಲಾಗುತ್ತದೆ. ಎಲ್ಲರಿಗೂ ಮಹಾಪ್ರಸಾದದ ವ್ಯವಸ್ತೆಯನ್ನು ಕೂಡ ಮಾಡಲಾಗುತ್ತದೆ. 
  2. ಮಹಾಶಿವರಾತ್ರಿ - ರಾತ್ರಿಯೆಲ್ಲಾ ವಿವಿಧ ಸಾಯಿ ಭಜನ ಗಾಯಕರಿಂದ ಸಾಯಿ ಭಜನೆಯ ಕಾರ್ಯಕ್ರಮ. 
  3. ಗುರು ಪೂರ್ಣಿಮೆ - ದಿನವಿಡೀ ಸಾಯಿ ಭಜನೆಯ ಕಾರ್ಯಕ್ರಮ ಮತ್ತು ಅನ್ನದಾನ. 
  4. ಶ್ರೀರಾಮನವಮಿ. 
  5. ವಿಜಯದಶಮಿ - ಸಾಯಿಬಾಬಾ ಮಹಾಸಮಾಧಿ ದಿವಸ - ದಿನವಿಡೀ ಸಾಯಿ ಭಜನೆಯ ಕಾರ್ಯಕ್ರಮ ಮತ್ತು ಅನ್ನದಾನ. 
ಸಾಮಾಜಿಕ ಕಾರ್ಯಚಟುವಟಿಕೆಗಳು:

  1. ದೇವಾಲಯದ ಆವರಣದಲ್ಲಿ ಉಚಿತ ಚಿಕಿತ್ಸಾಲಯವನ್ನು ನಿರ್ಮಿಸಲಾಗಿದ್ದು ತಜ್ಞ ವೈದ್ಯರು ರೋಗಿಗಳ ತಪಾಸಣೆ ನಡೆಸಿ ಔಷಧವನ್ನು ಕೂಡ ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. 
  2. ದೇವಾಲಯಕ್ಕೆ ಬರುವ ಕುಷ್ಟ ರೋಗಿಗಳಿಗೆ ವರ್ಷದಲ್ಲಿ 5 ಬಾರಿ 10 ಕೆಜಿ ಅಕ್ಕಿ, 2 ಕೆಜಿ ಬೇಳೆ, ಬಟ್ಟೆ ಮತ್ತು ಹಣವನ್ನು ನೀಡಲಾಗುತ್ತಿದೆ. 
  3. ಪ್ರತಿನಿತ್ಯ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಅನ್ನದಾನವನ್ನು ಮಾಡಲಾಗುತ್ತಿದೆ. 

ದೇಣಿಗೆಗೆ ಮನವಿ:

ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯು ದೇವಾಲಯದ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ದೇವಾಲಯವನ್ನು ವಿಸ್ತರಿಸುವ ಉದ್ದೇಶಕ್ಕಾಗಿ, ಒಂದೇ ಬಾರಿಗೆ 500 ಜನರಿಗೆ ಸಾಕಾಗುವಷ್ಟು ವಿಶಾಲವಾದ ಊಟದ ಮನೆಯನ್ನು ನಿರ್ಮಿಸಲು, ಫಿಜಿಯೋಥಿರೆಪಿ ಚಿಕಿತ್ಸಾಲಯ ಮತ್ತು ದಂತ ಚಿಕಿತ್ಸಾಲಯವನ್ನು ನಿರ್ಮಿಸಲು ಮತ್ತು ಭಕ್ತರು ಉಳಿದುಕೊಳ್ಳಲು 30 ಹವಾನಿಯಂತ್ರಿತ ಕೋಣೆಗಳನ್ನು ನಿರ್ಮಿಸುವ ಸಲುವಾಗಿ ಸಾಯಿ ಭಕ್ತರಿಂದ ಉದಾರವಾದ ದೇಣಿಗೆಯನ್ನು ನೀಡಲು ಮನವಿ ಮಾಡಿಕೊಳ್ಳುತ್ತದೆ. ದೇಣಿಗೆ ನೀಡಲು ಇಚ್ಚಿಸುವ ಸಾಯಿ ಭಕ್ತರು ಚೆಕ್ ಅಥವಾ ಡಿಡಿ ರೂಪದಲ್ಲಿ ಈ ಕೆಳಕಂಡ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ಕೋರಿಕೊಳ್ಳಲಾಗಿದೆ.


ಬ್ಯಾಂಕ್ ಆಫ್ ಬರೋಡ, ಝೀಲ್, ದೆಹಲಿ-51 – A/c No.21380100001589
ಇಂಡಿಯನ್ ಓವರ್ಸೀಸ್ ಬ್ಯಾಂಕ್ (ಹರಿದ್ವಾರ)-A/c No.169201000000221
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಹರಿದ್ವಾರ)-A/c.No.3129000101130436

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:
ಹೃಷಿಕೇಶ ಬೈ ಪಾಸ್ ರಸ್ತೆ, ದುಧಾಧಾರಿ ಮಂದಿರದ ಎದುರು, ಬೂಪಟ್ವಾಲ ಚೌಕ

ವಿಳಾಸ: 
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್, ಪರಶುರಾಮ ಆಶ್ರಮ (ನೋಂದಣಿ), 
ಹೃಷಿಕೇಶ ಬೈ ಪಾಸ್ ರಸ್ತೆ, ದುಧಾಧಾರಿ ಮಂದಿರದ ಎದುರು, 
ಬೂಪಟ್ವಾಲ ಚೌಕ, ಹರಿದ್ವಾರ-249 410, ಉತ್ತರಖಂಡ, ಭಾರತ 

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಸುಭಾಶ್ ದತ್ತ / ಶ್ರೀ.ಮೋಹಿತ್ ದತ್ತ / ಶ್ರೀ.ಸುನೀಲ್ ನಾಗಪಾಲ್ / ಶ್ರೀ.ಕಪೂರ್ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
 +91 98100 38721 / +91 97607 87616 /+91 95577 47502 /+91 13342 60356 / +91 13342 62835

ಈ ಮೇಲ್ ವಿಳಾಸ: 

ಅಂತರ್ಜಾಲ ತಾಣ: 


ಮಾರ್ಗಸೂಚಿ: 
ಹರಿದ್ವಾರ ರೈಲ್ವೇ ನಿಲ್ದಾಣದ ಬಳಿ ಇಳಿಯುವುದು.ದೇವಾಲಯವು ರೈಲ್ವೇ ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲಿದೆ. ದೇವಾಲಯವು ಹೃಷಿಕೇಶ ಬೈ ಪಾಸ್ ರಸ್ತೆ, ದುಧಾಧಾರಿ ಮಂದಿರದ ಎದುರು, ಬೂಪಟ್ವಾಲ ಚೌಕದ ಬಳಿಯಿದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, April 23, 2011

ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಶೈಲೇಂದ್ರ ಭಾರತಿ - ಕೃಪೆ: ಸಾಯಿಅಮೃತಧಾರಾ.ಕಾಂ  


ಖ್ಯಾತ ಸಾಯಿ ಭಜನ ಗಾಯಕರಾದ ಶ್ರೀ.ಶೈಲೇಂದ್ರ ಭಾರತಿಯವರು ಒಳ್ಳೆಯ ಕಲಾಭಿರುಚಿ ಉಳ್ಳವರು ಮತ್ತು ಮಾಧುರ್ಯಪೂರ್ಣ ಗಾಯನಕ್ಕೆ ಹೆಸರಾದವರು. ಇವರ ಈ ಮಾಧುರ್ಯಪೂರ್ಣ ಗಾಯನದ ಹಿಂದೆ ಅತ್ಯುತ್ತಮರಾದ ಗುರುಗಳ ಬಳಿ ಮಾಡಿದ ಅನೇಕ ವರ್ಷಗಳ ಅವಿರತವಾದ ಸಾಧನೆಯಿದೆ ಎಂದರೆ ತಪ್ಪಾಗಲಾರದು. ಸಂಗೀತಗಾರರ ಮನೆತನದಲ್ಲಿ ಹುಟ್ಟಿದ ಶ್ರೀ.ಶೈಲೇಂದ್ರ ಭಾರತಿಯವರು ಕೇವಲ 8 ವರ್ಷದವರಾಗಿದ್ದಾಗಲೇ ಸಂಗೀತ ಶಿಕ್ಷಣವನ್ನು ತಮ್ಮ ತಂದೆಯವರಾದ ಪಂಡಿತ್ ಶ್ರೀ.ಸಿ.ಆನಂದ ಕುಮಾರ್ ರವರ ಬಳಿ ಕಲಿಯಲು ಪ್ರಾರಂಭಿಸಿದರು. ಮನೆಯಲ್ಲಿದ್ದ ಒಳ್ಳೆಯ ಸಂಗೀತದ ವಾತಾವರಣ ಮತ್ತು ಇವರು ಹುಟ್ಟಿ ಬೆಳೆದ ರಾಜಸ್ಥಾನ ಇವರ ಎಳೆಯ ಮನಸ್ಸಿನ ಮೇಲೆ ಮತ್ತಷ್ಟು ಹೆಚ್ಚಿನ ಪ್ರಭಾವ ಬೀರಿ ಸಂಗೀತ ಶಿಕ್ಷಣವನ್ನು ಇನ್ನೂ ಹೆಚ್ಚು ಶ್ರದ್ಧೆಯಿಂದ ಕಲಿಯುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು. ನಂತರದ ದಿನಗಳಲ್ಲಿ ಇವರು ಹೆಚ್ಚಿನ ಸಂಗೀತ ಶಿಕ್ಷಣವನ್ನು ಖ್ಯಾತ ತಬಲಾ ವಾದಕರು ಮತ್ತು ಸಂಗೀತಗಾರರಾದ ದಿವಂಗತ ಪಂಡಿತ್ ಬನ್ಸಿಲಾಲ್ ರವರ ಬಳಿ ಪಡೆದರು. 

ಇವರ ಸಂಗೀತದ ಮೇಲಿದ್ದ ವ್ಯಾಮೋಹ ಮತ್ತು ಇನ್ನು ಹೆಚ್ಚು ಹೆಚ್ಚು ಕಲಿಯಬೇಕೆಂಬ ಉತ್ಸಾಹ ಇವರನ್ನು ಭಾರತದ ಪ್ರಖ್ಯಾತ ಹಿಂದೂಸ್ತಾನಿ ಘಾರನಾ ಕುನ್ವರ್ ಗೋಸಾಯಿ ಶ್ಯಾಮ್ ಘರಾನಾದ ಗಾಯಕರಾದ ಪಂಡಿತ್ ಮುರಳಿ ಮನೋಹರ್ ಶುಕ್ಲಾರವರ ಬಳಿ ಸಂಗೀತ ಶಿಕ್ಷಣ ಪಡೆಯುವಂತೆ ಪ್ರೇರೇಪಿಸಿತು. ಅದರಂತೆ ಇವರು ಪಂಡಿತ್ ಮುರಳಿ ಮನೋಹರ್ ಶುಕ್ಲಾರವರ ಬಳಿ ಸೇರಿ ಇನ್ನು ಹೆಚ್ಚಿನ ಸಂಗೀತ ಶಿಕ್ಷಣವನ್ನು ಪಡೆದರು. 

ಶ್ರೀ.ಶೈಲೇಂದ್ರ ಭಾರತಿಯವರು ಸಂಗೀತದ ವಿವಿಧ ಪ್ರಕಾರಗಳಾದ ಭಾವಗೀತೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಲಘು ಸಂಗೀತ ಮತ್ತು ಭಾರತೀಯ ಪಾಪ್ ಸಂಗೀತ ವನ್ನು ನಿರರ್ಗಳವಾಗಿ ಹಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. 

ಶ್ರೀ.ಶೈಲೇಂದ್ರ ಭಾರತಿಯವರು ಧಾರಾವಾಹಿಗಳಿಗೆ, ಚಲನಚಿತ್ರಗಳಿಗೆ ಮತ್ತು ಜಾಹೀರಾತುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಭಾರತದ ಯಾವುದೇ ಭಾಷೆಯನ್ನಾದರೂ ಬೇಗನೆ ಗ್ರಹಿಸಿ ಅರ್ಥ ಮಾಡಿಕೊಳ್ಳುವ ಪ್ರೌಢಿಮೆಯನ್ನು ಹೊಂದಿರುವ ಇವರು ಅನೇಕ ಧಾರವಾಹಿಗಳಲ್ಲಿ ಸಂಸ್ಕೃತದ ರಚನೆಗಳನ್ನು ಹಾಡಿದ್ದಾರೆ. ಅಲ್ಲದೆ, ಇವರು ಗುಜರಾತಿ, ಮರಾಟಿ, ರಾಜಸ್ತಾನಿ, ಭೋಜಪುರಿ, ಓರಿಯ, ಬೆಂಗಾಲಿ ಮತ್ತು ತೆಲುಗು ಭಾಷೆಗಳಲ್ಲಿ ಹಾಡಿದ್ದಾರೆ. ಇವರು  ಭಾರತದ ಖ್ಯಾತ ನಾಮರಾದ ಶ್ರೀ.ಆಸ್ರಾಂ ಬಾಪೂಜಿ, ಶ್ರೀ.ಮುರಾರಿ ಬಾಬು, ಶಂಕರಮಠದ ಪರಮಾಚಾರ್ಯರುಗಳು, ರಾಮಕೃಷ್ಣ ಮಠದ ಖ್ಯಾತ ಸಂತರುಗಳು, ಬ್ರಹ್ಮಕುಮಾರಿ ಆಶ್ರಮದ ಗುರುಗಳು, ಇಸ್ಕಾನ್ ದೇಗುಲಗಳ ಆಚಾರ್ಯರು ಮತ್ತು ಇನ್ನು ಹಲವಾರು ದಿಗ್ಗಜರುಗಳ ಎದುರಿನಲ್ಲಿ ತಮ್ಮ ಗಾಯನವನ್ನು ನೀಡಿದ್ದಾರೆ. ಈ ಕಾರಣದಿಂದ ಶ್ರೀ.ಶೈಲೇಂದ್ರ ಭಾರತಿಯವರಿಗೆ ಭಕ್ತಿ ಸಂಗೀತದ ಮೇಲೆ ಹೆಚ್ಚಿನ ಒಲವು ಬೆಳೆದಿರುವುದರಲ್ಲಿ ಆಶ್ಚರ್ಯವೇನು  ಇಲ್ಲ. ಇವರು ತಮ್ಮ ಸುಮಧುರ ಕಂಠವನ್ನು 50ಕ್ಕೂ ಹೆಚ್ಚು ಭಕ್ತಿ ಗೀತೆಗಳ ಅಲ್ಬಮ್ ಗಳಿಗೆ ನೀಡಿದ್ದಾರೆ ಮತ್ತು 75 ಕ್ಕೂ ಹೆಚ್ಚು ಅಲ್ಬಮ್ ಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. 

ಶ್ರೀ.ಶೈಲೇಂದ್ರ ಭಾರತಿಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ಗಾಯಕರ ಹೆಸರು: ಶ್ರೀ.ಶೈಲೇಂದ್ರ ಭಾರತಿ 
ದೂರವಾಣಿ ಸಂಖ್ಯೆ: +91 98201 20302
ಅಂತರ್ಜಾಲ ತಾಣ: http://shailendrabhartti.com
ಆಲ್ಬಮ್ ಗಳು: ಸಾಯಿ ಅಮೃತಧಾರಾ, ಶ್ರೀ.ಸಾಯಿ ಸಹಸ್ರನಾಮಾವಳಿ, ಶ್ರೀ.ಶಿರಡಿ ಸಾಯಿ ಆರತಿ ಸಂಗ್ರಹ, ಓಂ ಶ್ರೀ ಸಾಯಿನಾಥಾಯ ನಮಃ, ಶ್ರೀ.ಸಾಯಿ, ಸಾಯಿ ಶ್ರದ್ಧಾ, ಸಾಯಿ ವಂದನಂ, ಸಾಯಿ ರಕ್ಷಾ ಮಂತ್ರ ಮತ್ತು ಇನ್ನು ಹತ್ತು ಹಲವಾರು ಭಕ್ತಿ ಸಂಗೀತದ ಅಲ್ಬಮ್ ಗಳು. 

ಭಜನೆಯ ತುಣುಕು: 

ಕನ್ನಡ ಅನುವಾದ: ಶ್ರೀಕಂಠ ಶರ್ಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಕೆ ಸಾಯಿಬಾಬಾ ಮಂದಿರ್, ಶಿರಡಿ ಸಾಯಿ ಸೆಂಟರ್ ಆಫ್ ಮೆಡಿಟೇಷನ್, 39ನೇ ಕಿಲೋಮೀಟರ್, ಆವತಿ ಅಂಚೆ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562 110, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು: 

ಈ ಮಂದಿರವು ಬೆಂಗಳೂರಿನ ಅತ್ಯಂತ ಬೃಹತ್ ಸಾಯಿಬಾಬಾ ಮಂದಿರವಾಗಿದ್ದು ಸರಿ ಸುಮಾರು 2 ಎಕರೆ ವಿಸ್ತೀರ್ಣವನ್ನು ಹೊಂದಿರುತ್ತದೆ. 

ದೇವಾಲಯದ ಆವರಣದಲ್ಲಿ ಮೊದಲು ಸಿಗುವುದೇ ಗುರುಸ್ಥಾನ. ಈ ಗುರುಸ್ಥಾನವನ್ನು 1994 ರಲ್ಲಿ ಅತ್ಯಂತ ಪವಿತ್ರ ದಿನವಾದ ಶ್ರಾವಣ ಶುದ್ಧ ಪೌರ್ಣಮಿಯ ದಿನ ಉದ್ಘಾಟಿಸಲಾಯಿತು. 

ಗುರುಸ್ಥಾನದ ಹಿಂಭಾಗದಲ್ಲಿರುವ ದ್ವಾರಕಾಮಾಯಿಯನ್ನು 28ನೇ ಏಪ್ರಿಲ್ 1996 ರಂದು ಪ್ರಾರಂಭಿಸಲಾಯಿತು. 

ಮುಖ್ಯ ದೇವಾಲಯದ ಪಕ್ಕದಲ್ಲಿರುವ ಧ್ಯಾನ ಮಂದಿರವನ್ನು 7ನೇ ಆಗಸ್ಟ್ 1998 ರಂದು ಪ್ರಾರಂಭಿಸಲಾಯಿತು. 

ಪ್ರಮುಖ ದೇವಾಲಯವಾದ ಶಿರಡಿ ಸಾಯಿಬಾಬಾ ಮಂದಿರವನ್ನು 14ನೇ ಜನವರಿ 2006  ಸಂಕ್ರಾಂತಿಯ ಶುಭ ದಿನದಂದು ಪರಮ ಪೂಜ್ಯ ಶ್ರೀ.ಚಂದ್ರಭಾನು ಸತ್ಪತಿಯವರು ಉದ್ಘಾಟಿಸಿದರು.  

ಈ ದೇವಾಲಯವನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳಲಾಗುತ್ತಿದ್ದು ಆರತಿ, ಅಭಿಷೇಕ, ಸಾಯಿಬಾಬಾ ಅಷ್ಟೋತ್ತರ, ಮಂತ್ರಗಳು ಮತ್ತು ಎಲ್ಲಾ ಹಬ್ಬ ಹರಿದಿನಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯಕ್ಕೆ ಶಿರಡಿ ಸಾಯಿಬಾಬಾ ಸಂಸ್ಥಾನದ ದಿನಚರಿಯಂತೆ ಅತ್ಯಂತ ಕಟ್ಟುನಿಟ್ಟಾಗಿ ಆಚರಿಸಲಾಗುತ್ತಿದೆ. 

ಪ್ರಮುಖ ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ರಾರಾಜಿಸುತ್ತಿದೆ. ಈ ಪ್ರಮುಖ ದೇವಾಲಯದ ಪ್ರಾಂಗಣವು ಬಹಳ ದೊಡ್ಡದಾಗಿದ್ದು ಒಂದೇ ಬಾರಿಗೆ ಸರಿ ಸುಮಾರು 5000 ಸಾಯಿಭಕ್ತರು ಒಟ್ಟಿಗೆ ಕುಳಿತು ಆರತಿಯನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ದೇವಾಲಯದ ಜಾಗವು ಬಹಳ ವಿಸ್ತಾರವಾಗಿದ್ದು  (2 ಎಕರೆ) ಸುಮಾರು 50,000 ಭಕ್ತರಿಗೆ ಸ್ಥಳಾವಕಾಶವಿದೆ. 

ಮುಖ್ಯ ದೇವಾಲಯದ ಹಿಂಭಾಗದಲ್ಲಿ ನಂದಾದೀಪವನ್ನು ಸ್ಥಾಪಿಸಲಾಗಿದೆ. ನಂದಾದೀಪದ ಮುಂಭಾಗದಲ್ಲಿ ದುರ್ಗಾದೇವಿಯ ಸುಂದರ ಅಮೃತ ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ದೊಡ್ಡದಾದ ಶ್ರೀಚಕ್ರದ ಚಿತ್ರಪಟವನ್ನು ಮತ್ತು ವಿವಿಧ ಶ್ರೀಚಕ್ರಗಳ ಚಿತ್ರವನ್ನು ಪಕ್ಕದಲ್ಲಿರುವ ಗೋಡೆಯ ಮೇಲೆ ತೂಗುಹಾಕಲಾಗಿದೆ. 

ದ್ವಾರಕಾಮಾಯಿಯು ಗುರುಸ್ಥಾನದ ಹಿಂಭಾಗದಲ್ಲಿದ್ದು ಇಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಅಮೃತ ಶಿಲೆಯ ಸಾಯಿಬಾಬಾ, ದತ್ತಾತ್ರೇಯ ಮತ್ತು ಲಕ್ಷ್ಮೀದೇವಿಯ ವಿಗ್ರಹಗಳನ್ನು ಧುನಿಯ ಮುಂದುಗಡೆ ಇರುವಂತೆ ಸ್ಥಾಪಿಸಲಾಗಿದೆ. 

ಗುರುಸ್ಥಾನವು ದೇವಾಲಯದ ಪ್ರಾಂಗಣದ ಮುಂಭಾಗದಲ್ಲಿದೆ. ಕಪ್ಪು ಶಿಲೆಯ ಸಾಯಿಬಾಬಾರವರ ಪಾದುಕೆಗಳನ್ನು "ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾ" ರವರ ಚಿತ್ರಪಟದ ಕೆಳಗಡೆ ಇರುವಂತೆ ಪ್ರತಿಷ್ಟಾಪಿಸಲಾಗಿದ್ದು ಈ ಪವಿತ್ರ ಪಾದುಕೆ ಮತ್ತು ಚಿತ್ರಪಟವು ಪವಿತ್ರ ಬೇವಿನ ಮರದ ಕೆಳಗಡೆ ಇರುವಂತೆ ಸ್ಥಾಪಿಸಲಾಗಿದೆ. ಈ ಗುರುಸ್ಥಾನವನ್ನು ದೇವಾಲಯ ಪ್ರಾರಂಭಿಸುವುದಕ್ಕೆ ಮೊದಲೇ 1994 ರಲ್ಲಿ ಅತ್ಯಂತ ಪವಿತ್ರ ದಿನವಾದ ಶ್ರಾವಣ ಶುದ್ಧ ಪೌರ್ಣಮಿಯ ದಿನ ಪ್ರಾರಂಭಿಸಲಾಯಿತು. 

ಧ್ಯಾನ ಮಂದಿರವು ಪ್ರಮುಖ ದೇವಾಲಯದ ಪಕ್ಕದಲ್ಲಿ ಮತ್ತು ಪವಿತ್ರ ಬೇವಿನ ಮರ ಮತ್ತು ಅರಳಿ ಮರದ ಎದುರುಗಡೆ ಇರುತ್ತದೆ. ಈ ಧ್ಯಾನ ಮಂದಿರವನ್ನು ಪಿರಮಿಡ್ ಆಕಾರದಲ್ಲಿ ಕಟ್ಟಲಾಗಿದೆ ಮತ್ತು ಎಲ್ಲಾ ಕಡೆಗಳಲ್ಲಿ ಗಾಜಿನ ಹೊದಿಕೆಯನ್ನು ಹೊದಿಸಲಾಗಿದೆ. ಈ ಸ್ಥಳದಲ್ಲಿ ಶಿರಡಿ ಸಾಯಿಬಾಬಾರವರ ಚಿತ್ರಪಟ, ಪವಿತ್ರ ಓಂ ಮತ್ತು ಸಣ್ಣ ದೀಪವನ್ನು ಇರಿಸಲಾಗಿದೆ. ಪಿರಮಿಡ್ ಆಕೃತಿಯು ವಿದ್ಯುತ್ ಮತ್ತು ಅಯಸ್ಕಾಂತ ತರಂಗಗಳನ್ನು ತಡೆಹಿಡಿಯುತ್ತದೆ ಮತ್ತು ಋಣಾತ್ಮಕ ಶಕ್ತಿಗಳನ್ನು ತಡೆಯುತ್ತದೆ, ಅಲ್ಲದೆ, ಪಿರಮಿಡ್ ಆಕೃತಿಯು ಮೆದುಳಿನ ಕಾರ್ಯಚಟುವಟಿಕೆಯಲ್ಲಿ ಬದಲಾವಣೆಯನ್ನು ತರುವುದೇ ಅಲ್ಲದೆ ಮಾನವನ ಮಾನಸಿಕ ಮತ್ತು ದೈಹಿಕ ಕಾರ್ಯಗಳು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಹೊಂದುವುದರಲ್ಲಿ ಸಹಾಯ ಮಾಡುತ್ತದೆ ಎಂದು ಜಗತ್ತಿನ ಪ್ರಖ್ಯಾತ ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ದುರ್ಗಾದೇವಿಯ ದೇವಾಲಯದ ಹಿಂಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ಕರ್ನಾಟಕದ ಸಾಯಿಬಾಬಾ ಮಂದಿರಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 3 ಅಡಿ ಎತ್ತರದ ಸುಂದರ ಅಮೃತ ಶಿಲೆಯ ಅಕ್ಕಲಕೋಟೆ ಮಹಾರಾಜ ಶ್ರೀ ಸ್ವಾಮಿ ಸಮರ್ಥರ ವಿಗ್ರಹವನ್ನು ಅಕ್ಟೋಬರ್ 2011 ರಲ್ಲಿ ಪ್ರತಿಷ್ಟಾಪಿಸಲಾಗಿದೆ.   












ದೇವಾಲಯದ ಕಾರ್ಯಚಟುವಟಿಕೆಗಳು

ದಿನನಿತ್ಯದ ಕಾರ್ಯಕ್ರಮಗಳು: 

ದೇವಾಲಯದ ಸಮಯ: 
6:30 AM to 8:30 PM 

ಆರತಿಯ ಸಮಯ:
ಕಾಕಡಾ ಆರತಿ - ಬೆಳಿಗ್ಗೆ 6 ಘಂಟೆಗೆ 
ಮಧ್ಯಾನ್ಹ ಆರತಿ - 12 ಘಂಟೆಗೆ 
ಧೂಪಾರತಿ - ಸಂಜೆ 6 ಘಂಟೆಗೆ 
ಶೇಜಾರತಿ - ರಾತ್ರಿ 8:30 ಕ್ಕೆ 


ಪ್ರತಿ ತಿಂಗಳ ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆಯನ್ನು ಮಧ್ಯಾನ್ಹ 2:30 ರಿಂದ ಆಚರಿಸಲಾಗುತ್ತದೆ. 


ಪ್ರತಿ ತಿಂಗಳ ಅಮಾವಾಸ್ಯೆಯಂದು ಗಾಯತ್ರಿ ಹೋಮ ಮತ್ತು ಮಹಾ ಮೃತ್ಯುಂಜಯ ಹೋಮಗಳನ್ನು ಮಧ್ಯಾನ್ಹ 2:30 ರಿಂದ ಆಚರಿಸಲಾಗುತ್ತದೆ.

ಪ್ರತಿ ಗುರುವಾರ, ಭಾನುವಾರ ಮತ್ತು ಎಲ್ಲಾ ವಿಶೇಷ ಉತ್ಸವದ ದಿನಗಳಲ್ಲಿ ದೇವಾಲಯಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. 


ವಿಶೇಷ ಉತ್ಸವದ ದಿನಗಳು
  1. ಪ್ರತಿ ವರ್ಷದ ಸಂಕ್ರಾಂತಿಯಂದು ದೇವಾಲಯದ ವಾರ್ಷಿಕೋತ್ಸವ.
  2. ಮಹಾಶಿವರಾತ್ರಿ.
  3. ಶ್ರೀರಾಮನವಮಿ.
  4. ಗುರುಪೂರ್ಣಿಮಾ.
  5. ಗೋಕುಲಾಷ್ಟಮಿ.
  6. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ)
  7. ದತ್ತ ಜಯಂತಿ. 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ
ಸ್ಥಳ: 
39ನೇ ಕಿಲೋಮೀಟರ್ ಬಸ್ ನಿಲ್ದಾಣ, ಆವತಿ ಅಂಚೆ, ಬಳ್ಳಾರಿ ರಸ್ತೆ

ವಿಳಾಸ: 
ಶ್ರೀ ಶಿರಡಿ ಕೆ ಸಾಯಿಬಾಬಾ ಮಂದಿರ್
ಶಿರಡಿ ಸಾಯಿ ಸೆಂಟರ್ ಆಫ್ ಮೆಡಿಟೇಷನ್, 
39ನೇ ಕಿಲೋಮೀಟರ್, ಆವತಿ ಅಂಚೆ, ದೇವನಹಳ್ಳಿ ತಾಲ್ಲೂಕು, 
ಬೆಂಗಳೂರು ಗ್ರಾಮಾಂತರ ಜಿಲ್ಲೆ-562 110, ಕರ್ನಾಟಕ
ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ಅಶೋಕ್ ಫಾತ್ನಾನಿ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+91 80 2222 3150 /+91 80 2222 1610 / +91 80 2558 4915 / +91 80 4112 9956
ಮಾರ್ಗಸೂಚಿ:
ಬಳ್ಳಾರಿ ರಸ್ತೆಯ ಆವತಿ ಅಂಚೆಯ 39ನೇ ಕಿಲೋಮೀಟರ್ ಬಳಿಯಿರುವ ಸಾಯಿಬಾಬಾ ಮಂದಿರದ ಬಸ್ ನಿಲ್ದಾಣದಲ್ಲಿ ಇಳಿಯುವುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, April 22, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ (ನೋಂದಣಿ) ಮತ್ತು ಶ್ರೀ.ಶಿರಡಿ ಸಾಯಿ ಕಲ್ಚರಲ್ ಸೆಂಟರ್, ಸಿಎ-2, ಹೆಚ್.ವಿ.ಆರ್.ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು-560 079, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು:

ಶ್ರೀ.ಶಿರಡಿ ಸಾಯಿ ಕಲ್ಚರಲ್ ಸೆಂಟರ್ ನ್ನು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಒಪ್ಪಿಗೆಯೊಂದಿಗೆ 20ನೇ ಜೂನ್ 2004 ರಂದು ಪ್ರಾರಂಭಿಸಲಾಯಿತು. ಈ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವನ್ನು ಖ್ಯಾತ ಉದ್ಯಮಿ ಮತ್ತು ಸಮಾಜಸೇವಕ ಶ್ರೀ.ಆರ್.ಏನ್.ಶೆಟ್ಟಿಯವರು ಉದ್ಘಾಟನೆ ಮಾಡಿರುತ್ತಾರೆ. 

ಸಾಯಿಬಾಬಾ ಮಂದಿರದ ಪಕ್ಕದಲ್ಲಿರುವ ಉಚಿತ ವೈದ್ಯಕೀಯ ತಪಾಸಣಾ ಕೊಟಡಿಯನ್ನು 2ನೇ ಜುಲೈ 2006 ರಂದು ಕರ್ನಾಟಕ ಸರ್ಕಾರದ ವಿಧಾನಸಭಾ ಸದಸ್ಯರಾದ ಶ್ರೀ.ಎಂ.ಕೃಷ್ಣಪ್ಪನವರು ಉದ್ಘಾಟಿಸಿದರು. 

ಗ್ರಂಥಾಲಯ ಮತ್ತು ಧ್ಯಾನ ಮಂದಿರದ ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು 2ನೇ ಜುಲೈ 2006 ರಂದು ಕರ್ನಾಟಕ ಸರ್ಕಾರದ ವಿಧಾನಸಭಾ ಸದಸ್ಯರಾದ ಶ್ರೀ.ಎಂ.ಕೃಷ್ಣಪ್ಪನವರು ಮಾಡಿದರು. 

ಗ್ರಂಥಾಲಯ ಮತ್ತು ಧ್ಯಾನ ಮಂದಿರದ ಉದ್ಘಾಟನೆಯನ್ನು 7ನೇ ಜುಲೈ 2009 ರಂದು ರಂದು ಕರ್ನಾಟಕ ಸರ್ಕಾರದ ವಿಧಾನಸಭಾ ಸದಸ್ಯರಾದ ಶ್ರೀ.ಎಂ.ಕೃಷ್ಣಪ್ಪನವರು ಉದ್ಘಾಟಿಸಿದರು.

ದೇವಾಲಯದ ಮೊದಲನೇ ಮಹಡಿಯಲ್ಲಿ ವಿಶಾಲವಾದ ದ್ವಾರಕಾಮಾಯಿ ಭವನವನ್ನು ನಿರ್ಮಿಸಲಾಗಿದ್ದು ಇದರ ಉದ್ಘಾಟನೆಯನ್ನು 21ನೇ ಫೆಬ್ರವರಿ 2010 ರಂದು ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳಾದ ಶ್ರೀ.ವಿ.ಸೋಮಣ್ಣನವರು ಮಾಡಿರುತ್ತಾರೆ.

ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತ ಶಿಲೆಯ ವಿಗ್ರಹ ಮತ್ತು ಅಮೃತ ಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ. 











ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು 

ದೇವಾಲಯದ ಸಮಯ: 
ಸೋಮವಾರದಿಂದ ಭಾನುವಾರದವರೆಗೆ ಸಮಯ (ಗುರುವಾರ ಹೊರತುಪಡಿಸಿ) 
6:30 AM to 9:30 AM
6:00 PM to 9:00 PM

 ಗುರುವಾರದ ಸಮಯ: 
5:00 AM to 10:30 AM
5:30 PM to 10:00 PM

ಆರತಿಯ ಸಮಯ:
ಪ್ರತಿದಿನ: ಬೆಳಿಗ್ಗೆ 8 AM ರಾತ್ರಿ 8 PM 
ಗುರುವಾರ: ಬೆಳಿಗ್ಗೆ 6:15 AM ರಾತ್ರಿ 8 PM  

ವಿಶೇಷ ಉತ್ಸವದ ದಿನಗಳು: 
  1. ಪ್ರತಿ ವರ್ಷದ 20ನೇ ಜೂನ್ ದೇವಾಲಯದ ವಾರ್ಷಿಕೋತ್ಸವ.
  2. ಮಹಾಶಿವರಾತ್ರಿ.
  3. ಶ್ರೀರಾಮನವಮಿ. 
  4. ಗುರುಪೂರ್ಣಿಮೆ. 
 ಸಾಮಾಜಿಕ ಕಾರ್ಯಚಟುವಟಿಕೆಗಳು: 

  1. ಆಂಗ್ಲ ಮತ್ತು ಆಯುರ್ವೇದ ತಜ್ಞರಿಂದ ಪ್ರತಿನಿತ್ಯ ಉಚಿತ ವೈದ್ಯಕೀಯ ತಪಾಸಣೆ ಮತ್ತು ಉಚಿತ ಔಷಧ ವಿತರಣೆಯನ್ನು ಸಾಯಿಬಾಬಾ ಮಂದಿರದ ಪಕ್ಕದಲ್ಲಿರುವ ಉಚಿತ ವೈದ್ಯಕೀಯ ತಪಾಸಣಾ ಕೊಟಡಿಯಲ್ಲಿ ನಡೆಸಲಾಗುತ್ತಿದೆ. 
  2. ಜ್ಞಾನ ಜ್ಯೋತಿ ಅಪಾಂಗ ಸಂಸ್ಥೆ (ನೋಂದಣಿ) ಮತ್ತು ಚೆನ್ನೈ ನ ಕಾಗ್ನಿಸೆಂಟ್ ಫೌಂಡೆಶನ್ ನ ಹಣಕಾಸಿನ ನೆರವಿನೊಂದಿಗೆ ದೇವಾಲಯದ ಟ್ರಸ್ಟ್ ನವರು ಶ್ರೀ.ಸಾಯಿ ಚೈತನ್ಯ ಬ್ರೈಲ್ ಪ್ರೆಸ್ ಎಂಬ ಅಂಗ ಸಂಸ್ಥೆಯನ್ನು ಸ್ಥಾಪಿಸಿದ್ದು ಅದರ ಮುಖಾಂತರ ಕರ್ನಾಟಕದ ಅಂಧ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಾ ಬಂದಿರುತ್ತದೆ. 
  3. ಸಿಂಡಿಕೇಟ್ ಬ್ಯಾಂಕ್ ಕಾಲೋನಿಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಶಿಕ್ಷಣ ತರಗತಿಗಳನ್ನು ನಡೆಸುತ್ತಿದೆ. 
  4. ಪ್ರತಿವರ್ಷ ಪದವಿಯನ್ನು ವ್ಯಾಸಂಗ ಮಾಡುತ್ತಿರುವ 50 ಅರ್ಹ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿರುತ್ತದೆ. 
  5. ದೇವಾಲಯದ ಟ್ರಸ್ಟ್ ನ ವತಿಯಿಂದ ಪ್ರತಿವರ್ಷ ದೇವಾಲಯದ ಆವರಣದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. 
  6. ಪ್ರತಿನಿತ್ಯ ದೇವಾಲಯದ ಆವರಣದಲ್ಲಿ ಉಚಿತ ಯೋಗ ತರಗತಿಗಳನ್ನು (3 ಬ್ಯಾಚ್ ಗಳು) ನಡೆಸಲಾಗುತ್ತಿದೆ. 
  7. ದೇವಾಲಯದ ಆವರಣದಲ್ಲಿ ಮಕ್ಕಳ ಬುದ್ಧಿ ವಿಕಸನಕ್ಕಾಗಿ ಉಚಿತ ಶಿಬಿರಗಳನ್ನು ನಡೆಸಲಾಗುತ್ತಿದೆ. ಈ ಶಿಬಿರಗಳಲ್ಲಿ ಚಿತ್ರಕಲೆ, ಭಜನೆ ಮತ್ತು ಶ್ಲೋಕ ತರಗತಿಗಳನ್ನು ನಡೆಸಲಾಗುತ್ತಿದೆ. 
  8. "ಸಾಯಿ ವಿದ್ಯಾನಿಧಿ" ಯ ಅಡಿಯಲ್ಲಿ  ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ನೀಡಲಾಗುತ್ತಿದೆ. 
  9. ಕರ್ನಾಟಕದ ರಂಗನಾಥಪುರದ "ಗುಡ್ಡಣ್ಣ ನಗರಸಭಾ ಶಾಲೆ" ಗೆ ಧನಸಹಾಯ ವನ್ನು ಮಾಡುತ್ತಾ ಬಂದಿರುತ್ತದೆ. 
ದೇವಾಲಯದ ಮುಂದಿನ ಯೋಜನೆಗಳು: 

ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯವರು ದೇವಾಲಯದ ಆವರಣದಲ್ಲಿ ಧುನಿಯನ್ನು ಮತ್ತು ದೇವಾಲಯಕ್ಕೆ ರಾಜಗೋಪುರವನ್ನು ನಿರ್ಮಿಸಲು ಯೋಜನೆಯನ್ನು ಸಿದ್ದಪಡಿಸಿರುತ್ತಾರೆ. 

ದೇಣಿಗೆಗೆ ಮನವಿ: 

ದೇವಾಲಯದ ಎಲ್ಲ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಯೋಜನೆಗಳಿಗಾಗಿ ಧನ ಸಹಾಯವನ್ನು ಮಾಡಲು ಇಚ್ಚಿಸುವ ಸಾಯಿ ಭಕ್ತರು ಚೆಕ್ ಅಥವಾ ಡಿಡಿ ಮುಖಾಂತರ "ಸಿಂಡಿಕೇಟ್ ಬ್ಯಾಂಕ್ ಕಾಲೋನಿ ವೆಲ್ಫೇರ್ ಅಸೋಸಿಏಷನ್" ಇವರಿಗೆ ಸಂದಾಯವಾಗುವಂತೆ ಹಣವನ್ನು ಕಳುಹಿಸಬೇಕೆಂದು ದೇವಾಲಯದ ಆಡಳಿತ ಮಂಡಳಿಯವರು ಈ ಮುಖಾಂತರ ಮನವಿಯನ್ನು ಮಾಡಿಕೊಳ್ಳುತ್ತಾರೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಪ್ರಶಾಂತ ಗಣಪತಿ ದೇವಾಲಯದ ಪಕ್ಕ, ಮಾಗಡಿ ಮುಖ್ಯರಸ್ತೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ

ವಿಳಾಸ: 
ಶ್ರೀ ಶಿರಡಿ ಸಾಯಿ ಮಂದಿರ
ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ (ನೋಂದಣಿ) ಮತ್ತು ಶ್ರೀ.ಶಿರಡಿ ಸಾಯಿ ಕಲ್ಚರಲ್ ಸೆಂಟರ್, 
ಸಿಎ-2, ಹೆಚ್.ವಿ.ಆರ್.ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, 
ಮಾಗಡಿ ಮುಖ್ಯ ರಸ್ತೆ, ಬೆಂಗಳೂರು-560 079, ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಆರ್.ಕುಪ್ಪುಸ್ವಾಮಿ / ಶ್ರೀ.ಎಂ.ಏನ್.ರವಿಕಿರಣ್ / ಶ್ರೀ.ಮಾಧವ ಕಾಮತ್ / ಶ್ರೀ.ಸಾಯಿ ರಾಘವೇಂದ್ರ ಸ್ವಾಮಿ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+91 80 23351681/+91 80 23282777/ +91 93437 00712 / +91 98451 16244 / +91 94485 53286/+91 93428 57607



ಈ ಮೇಲ್ ವಿಳಾಸ: 


ಮಾರ್ಗಸೂಚಿ: 
ಮಾಗಡಿ ಮುಖ್ಯರಸ್ತೆಯಲ್ಲಿ ಹೌಸಿಂಗ್ ಬೋರ್ಡ್ ಬಸ್ ನಿಲ್ದಾಣದಲ್ಲಿ ಇಳಿಯುವುದು. 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಅಸ್ಸಾಂ ಮುಖ್ಯಮಂತ್ರಿ ಶ್ರೀ.ತರುಣ್ ಗೊಗೈ ಶಿರಡಿ ಭೇಟಿ - 22ನೇ ಏಪ್ರಿಲ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಅಸ್ಸಾಂ ಮುಖ್ಯಮಂತ್ರಿ ಶ್ರೀ.ತರುಣ್ ಗೊಗೈರವರು ಇದೇ ತಿಂಗಳ 22ನೇ ಏಪ್ರಿಲ್ 2011 ರಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀ.ಅಶೋಕ್ ಕಂಬೇಕರ್ ರವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆಯವರು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, April 18, 2011

ಶಿರಡಿ ಸಾಯಿಬಾಬಾರವರ ದಿನಚರಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾರವರ ಬಳಿ ಸಾವಿರಾರು ಭಕ್ತರು ಲೌಕಿಕ ಸುಖಗಳಾದ ಹಣ, ಆರೋಗ್ಯ ಮತ್ತು ಸಂತಾನಕ್ಕಾಗಿ ಪ್ರತಿನಿತ್ಯ ಬಂದು ಬೇಡಿಕೊಳ್ಳುತ್ತಿದ್ದರೂ ಕೂಡ ಅವರು ಬಹಳ ಕಠಿಣವಾದ ದಿನಚರಿಯನ್ನು ಆಚರಿಸುತ್ತಿದ್ದರು. ಪ್ರತಿದಿನ ಬೆಳಿಗ್ಗೆ 5 ಘಂಟೆಗೆ ಎದ್ದು ಧುನಿಯ ಮುಂದೆ ಕುಳಿತುಕೊಳ್ಳುತ್ತಿದ್ದರು. ನಂತರ ನಿತ್ಯ ಕರ್ಮಗಳನ್ನು ಮುಗಿಸಿ ಪುನಃ ಧುನಿಯ ಮುಂದೆ ಕುಳಿತುಕೊಳ್ಳುತ್ತಿದ್ದರು. "ಬಾಬಾರವರು ಧುನಿಯ ಮುಂದೆ ಇದ್ದ ಕಂಭಕ್ಕೆ ಒರಗಿಕೊಂಡು ಕುಳಿತುಕೊಂಡು ಏನೋ ಮಾಡುತ್ತಿದ್ದರು" ಎಂದು ಸಾಯಿಭಕ್ತ ಪುರಂದರೆಯವರು ಹೇಳುತ್ತಾರೆ. ಸಾಯಿಯವರು ಧುನಿಯ ಮುಂದೆ ಕುಳಿತಿದ್ದಾಗ ಅವರ ಬಳಿ 50 ಅಡಿಯ ದೂರದಲ್ಲಿ ಯಾರು ಹೋಗಲು ಅವಕಾಶ ನೀಡುತ್ತಿರಲಿಲ್ಲ. ಸಾಯಿಬಾಬಾರವರು "ಯಾದೇ ಹಕ್" (ಅಲ್ಲಾನನ್ನು ಸ್ಮರಿಸಿ), "ಅಲ್ಲಾ ಮಾಲಿಕ್" (ಅಲ್ಲಾನೇ ಗುರುವು), ಮತ್ತು "ಅಲ್ಲಾ ವಲಿ ಹೈ" (ಅಲ್ಲಾನೇ ನಮ್ಮ ಉದ್ಧಾರಕ) ಎಂದು ಆಗಾಗ್ಗೆ ಉಚ್ಚರಿಸುತ್ತಿದ್ದರೆಂದು ತಿಳಿದುಬಂದಿದೆ.  

ಅಬ್ದುಲ್ ಬಾಬಾ ಮತ್ತು ಮಾಧವ ಫಾಸ್ಲೆ ತಮ್ಮ ಪಾಡಿ ತಾವು ಗದ್ದಲ ಮಾಡದೇ ಮಸೀದಿಯನ್ನು ಚೆನ್ನಾಗಿ,ಗುಡಿಸಿ, ತೊಳೆದು , ಒರೆಸಿ, ಶುಭ್ರಗೊಳಿಸಿ ದೀಪಗಳಿಗೆ ಎಣ್ಣೆಯನ್ನು ಹಾಕಿ, ಪವಿತ್ರ ಧುನಿಗೆ  ಕಟ್ಟಿಗೆಯನ್ನು ಹಾಕಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ದ್ವಾರಕಾಮಾಯಿಗೆ ಬಾಬಾರವರ ದರ್ಶನಕ್ಕೆ ಬರುತ್ತಿದ್ದ ಮೊದಲನೇ ಭಕ್ತ ಭಾಗೋಜಿ ಶಿಂಧೆಯವರು. ಭಾಗೋಜಿಯವರು ಪ್ರತಿನಿತ್ಯ ಸರಿಯಾದ ಸಮಯಕ್ಕೆ ಬಂದು ಬಾಬಾರವರ ಬಲಗೈನ್ನು ಚೆನ್ನಾಗಿ ತಿಕ್ಕಿ ಪ್ರೀತಿಯಿಂದ ಅದಕ್ಕೆ ಪಟ್ಟಿಯನ್ನು ಸುತ್ತುತ್ತಿದ್ದರು. ನಗೋಜ್ ಎಂಬ ಹಳ್ಳಿಯ  ಕಮ್ಮಾರನೊಬ್ಬನ ಮಗುವು ಕುಲುಮೆಯಲ್ಲಿ ಆಕಸ್ಮಿಕವಾಗಿ ಬಿದ್ದಾಗ ತಮ್ಮ ಅಂತರ್ಜ್ಞಾನದಿಂದ ತಿಳಿದು ಸಾಯಿಬಾಬಾರವರು ತಮ್ಮ ಬಲ ಕೈಯನ್ನು ಧುನಿಯಲ್ಲಿ ಹಾಕಿ ಮಗುವನ್ನು ರಕ್ಷಿಸುವ ಲೀಲೆಯನ್ನು ಸಾಯಿಸಚ್ಚರಿತ್ರೆಯ 7ನೇ ಅಧ್ಯಾಯದಲ್ಲಿ ನೋಡಬಹುದು. ಅಂದಿನಿಂದ ಭಾಗೋಜಿ ಶಿಂಧೆಯವರೇ ಪ್ರತಿನಿತ್ಯ ಬೆಳಗಿನ ಜಾವ ಮಸೀದಿಗೆ ಬಂದು ಸಾಯಿಬಾಬಾರವರ ಕೈಗಳ ಆರೈಕೆಯನ್ನು ಮಾಡುತ್ತಿದ್ದರು. ಕೈಗಳನ್ನು ಚೆನ್ನಾಗಿ ನೀವಿ ಪಟ್ಟಿಯನ್ನು ಕಟ್ಟಿದ ನಂತರ ಸಾಯಿಬಾಬಾರವರ ಪೂರ್ತಿ ದೇಹವನ್ನು ಚೆನ್ನಾಗಿ ತಿಕ್ಕಿ ಅಂಗಮರ್ಧನ ಮಾಡುತ್ತಿದ್ದರು. ನಂತರ ಹುಕ್ಕಾವನ್ನು ಹೊತ್ತಿಸಿ ಬಾಬಾರವರಿಗೆ ನೀಡುತ್ತಿದ್ದರು. ಸಾಯಿಬಾಬಾರವರು ಒಂದೆರಡು ಬಾರಿ ಅದನ್ನು ಎಳೆದು ಭಾಗೋಜಿಯವರಿಗೆ ನೀಡುತ್ತಿದ್ದರು. ಹೀಗೆ ಸುಮಾರು ಐದಾರು ಬಾರಿ ಇವರಿಬ್ಬರು ಹುಕ್ಕಾವನ್ನು ಒಬ್ಬರಾದ ಮೇಲೆ ಒಬ್ಬರು ಎಳೆಯುತ್ತಿದ್ದರು. ಇದಾದ ನಂತರ ಭಾಗೋಜಿ ಶಿಂಧೆ ಮನೆಗೆ ತೆರಳುತ್ತಿದ್ದರು. 

ನಂತರ ಕೆಲವು ನಿರ್ದಿಷ್ಟ ಸಾಯಿಭಕ್ತರು ಬಂದು ಸಾಯಿಯವರ ಪಾದಗಳನ್ನು ಚೆನ್ನಾಗಿ ನೀವಿ ಆರೈಕೆ ಮಾಡಿ ಹೋಗುತ್ತಿದ್ದರು. ಇದಾದ ನಂತರ ಸಾಯಿಯವರು ತಮ್ಮ ಕೈ,ಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳುತ್ತಿದ್ದರು. ಆಗ ಬಹಳ ನೀರನ್ನು ಬಳಸುತ್ತಿದ್ದರು. ಆ ದೃಶ್ಯವನ್ನು ನೋಡುವುದೇ ಒಂದು ಭಾಗ್ಯವೆಂದು ಹೇಳಬಹುದು. ಸಾಯಿಬಾಬಾರವರು ನಿತ್ಯ ಸ್ನಾನ ಮಾಡುತ್ತಿರಲಿಲ್ಲ. ವಾರಕ್ಕೊಮ್ಮೆ ತಮ ಸ್ಥೂಲ  ಶರೀರದ ಸ್ನಾನವನ್ನು ಮಾಡುತ್ತಿದ್ದರು. ಆದರೆ ಬಾಬಾರವರು ಆಗಾಗ್ಗೆ "ನಾನು ಗಂಗಾ-ಯಮುನಾ ನದಿಯಲ್ಲಿ ಸ್ನಾನ ಮಾಡಿದೆ" ಎಂದು ಹೇಳುತ್ತಿದ್ದರು. ಇದನ್ನು ಅವರು ತಮ್ಮ ಸೂಕ್ಷ್ಮ ಶರೀರದಲ್ಲಿ ಮಾಡುತ್ತಿದ್ದರು. ಇದರಿಂದ ಆ ನದಿಗಳು ಹೆಚ್ಚು ಪವಿತ್ರತೆಯನ್ನು ಪಡೆಯುತ್ತಿದ್ದವು. ಅನೇಕ ಭಕ್ತರು ಸಾಯಿಯವರು ಶಿರಡಿಯಲ್ಲಿ ತಮ್ಮ ಸ್ಥೂಲ ಶರೀರದ ಸ್ನಾನ ಮಾಡಿದಾಗ ಕಾದುಕೊಂಡು ಇದ್ದು ಆ ಪವಿತ್ರ ಸ್ನಾನದ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು ಮತ್ತು ಖಾಯಿಲೆಯಾದಾಗ ಆ ನೀರನ್ನು ಪವಿತ್ರ ತೀರ್ಥವೆಂದು ಬಳಸುತ್ತಿದ್ದರು ಎಂದು ತಿಳಿದುಬಂದಿದೆ. 
ನಂತರ ಸರಿಯಾಗಿ 8 ಘಂಟೆಗೆ ಸಾಯಿಬಾಬಾರವರು 5 ಮನೆಗಳಿಗೆ ಭಿಕ್ಷೆಗೆ ಹೋಗುತ್ತಿದ್ದರು. ಹಾಗೆ ಭಿಕ್ಷೆಗೆ ಹೋದಾಗ ಯಾವಾಗಲೂ ಒಂದೇ ಕಡೆಯಲ್ಲಿ ನಿಂತು ಭಿಕ್ಷೆಗಾಗಿ ಯಾಚಿಸುತ್ತಿದ್ದರು. ಸಾಯಿಯವರು ತಾವು ತಂದ ಭಿಕ್ಷೆಯಲ್ಲಿ ಸ್ವಲ್ಪವೇ ಮಾತ್ರ ತಿಂದು ಮಿಕ್ಕಿದ್ದನ್ನು ಮಸೀದಿಯಲ್ಲಿದ್ದ ಕೊಲಂಬದಲ್ಲಿ ಇಡುತ್ತಿದ್ದರು. ಯಾರು ಬೇಕಾದರೂ ಅದರಿಂದ ತೆಗೆದುಕೊಂಡು ತಿನ್ನಬಹುದಾಗಿತ್ತು. ನಂತರ ಮಸೀದಿಯ ಕಟಕಟೆಯ ಬಳಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಆ ಸಮಯದಲ್ಲಿ ಸಾಯಿಯವರ ಪ್ರಮುಖ ಅಂಕಿತ ಭಕ್ತರು ಬಂದು ನಮಸ್ಕಾರ ಮಾಡಿಕೊಂಡು ಹೋಗುತ್ತಿದ್ದರು. ಆ ನಂತರ ಎಲ್ಲಾ ಭಕ್ತರು ಬಂದು ಬಾಬಾರವರ ದರ್ಶನ ಮಾಡುತ್ತಿದ್ದರು. ಈ ಬೆಳಗಿನ ದರ್ಬಾರು ಸುಮಾರು 9:30 ರ ವರೆಗೆ ನಡೆಯುತ್ತಿತ್ತು. ಈ ಸಮಯದಲ್ಲಿ ಕೆಲವು ಭಕ್ತರು ಸಾಯಿಯವರಿಗೆ ತಮ್ಮ ವಂದನೆ ಸಲ್ಲಿಸಲು ಬಂದರೆ, ಮತ್ತೆ ಕೆಲವರು ಸಾಯಿಯವರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಲು ಬರುತ್ತಿದ್ದರು. ಇನ್ನೂ ಕೆಲವು ಭಕ್ತರು ಸಾಯಿಯವರ ಬಳಿ ಏನಾದರೂ ಬೇಡಲು ಬರುತ್ತಿದ್ದರು. ಈ ದರ್ಬಾರು ನೆಡೆಯುತ್ತಿರುವಾಗ ಅನೇಕ ಬಾರಿ ಸಾಯಿಬಾಬಾರಾರು ತಮ್ಮ ಹಣದಿಂದ ಹಣ್ಣುಗಳನ್ನು ತರಿಸಿ ಕೆಲವು ಭಕ್ತರಿಗೆ ಆಶೀರ್ವಾದವಾಗಿ ನೀಡುತ್ತಿದ್ದರು. ಅಲ್ಲದೆ, ಅರ್ಥಗರ್ಭಿತವಾದ ಅನೇಕ ಕಥೆಗಳನ್ನು, ದೃಷ್ಟಾಂತಗಳನ್ನು ಭಕ್ತರಿಗೆ ಸುಂದರವಾಗಿ ಹೇಳುತ್ತಿದ್ದರು. ಇದರ ಅರ್ಥ ಯಾರಿಗೆ ಅನ್ವಯವಾಗುತ್ತಿತ್ತೋ ಅವರಿಗೆ ಉತ್ತರ ಸಿಕ್ಕುತ್ತಿತ್ತು ಮತ್ತು ಅವರು ಅದರಂತೆ ನಡೆಯುತ್ತಿದ್ದರು. ಮಿಕ್ಕವರಿಗೆ ಇದರಿಂದ ಒಳ್ಳೆಯ ಜ್ಞಾನ ಸಂಪಾದನೆಯಾಗುತ್ತಿತ್ತು. 

ಬೆಳಗಿನ ದರ್ಬಾರ್ ಮುಗಿದ ನಂತರ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ತೆರಳುತ್ತಿದ್ದರು. ಸಾಯಿಯವರೊಂದಿಗೆ ನಾನಾ ಸಾಹೇಬ್ ನಿಮೋನ್ಕರ್, ಗೋಪಾಲ ರಾವ್ ಬೂಟಿಯವರು ತೆರಳುತ್ತಿದ್ದರು. ಭಾಗೋಜಿ ಶಿಂಧೆಯವರು ಸಾಯಿಬಾಬಾರವರಿಗೆ ಶ್ವೇತಛತ್ರವನ್ನು ಹಿಡಿಯುತ್ತಿದ್ದರು. ಲೇಂಡಿ ಉದ್ಯಾನವನದೊಳಗೆ ಸಾಯಿಬಾಬಾ ಒಬ್ಬರೇ ಹೋಗುತ್ತಿದ್ದರು. ಅಲ್ಲಿ ನಂದಾದೀಪಕ್ಕೆ ಬೆನ್ನು ಮಾಡಿಕೊಂಡು ಕುಳಿತುಕೊಳ್ಳುತ್ತಿದ್ದರು. ಅಬ್ದುಲ್ ಬಾಬಾ ಎರಡು ಮಡಿಕೆಗಳಲ್ಲಿ ನೀರನ್ನು ತಂದು ಬಾಬಾರವರ ಮುಂದೆ ಇಡುತ್ತಿದ್ದರು. ಬಾಬಾರವರು ಆ ನೀರನ್ನು ಎಲ್ಲಾ ದಿಕ್ಕುಗಳಲ್ಲಿ ಚೆಲ್ಲುತ್ತಾ ಏನನ್ನೋ ಗೊಣಗುಟ್ಟುತ್ತಿದ್ದರು. ಅಬ್ದುಲ್ ಬಾಬಾರವರಿಗೆ ಸಾಯಿಬಾಬಾ ಏನನ್ನು ಉಚ್ಚರಿಸುತ್ತಿದ್ದರೆಂದು ತಿಳಿಯುತ್ತಿರಲಿಲ್ಲ. ಸುಮಾರು  1 ಘಂಟೆಯ ನಂತರ ಬಾಬಾರವರು ತಮ್ಮ ಜೊತೆಯವರೊಡನೆ ಮೆರವಣಿಗೆಯಲ್ಲಿ ದ್ವಾರಕಾಮಾಯಿಗೆ ವಾಪಸಾಗುತ್ತಿದ್ದರು. 

ಪುನಃ ಬೆಳಿಗ್ಗೆ 10.30 ಕ್ಕೆ ಎರಡನೇ ದರ್ಬಾರ್ ಪ್ರಾರಂಭವಾಗಿ ಸುಮಾರು 1 ಘಂಟೆಗಳ ಕಾಲ ನಡೆಯುತ್ತಿತ್ತು. ಆ ಸಮಯದಲ್ಲಿ ಭಕ್ತರು ತಮ್ಮನ್ನು ಪೂಜಿಸಲು ಮತ್ತು ಆರತಿಯನ್ನು ಮಾಡಲು ಬಾಬಾರವರು ಅನುಮತಿ ನೀಡುತ್ತಿದ್ದರು. 11.30 ಕ್ಕೆ ಸರಿಯಾಗಿ ಮಸೀದಿಯ ಘಂಟೆ ಬಾರಿಸುತ್ತಿತ್ತು. ಆಗ ಮಧ್ಯಾನ್ಹ ಆರತಿಗೆ ಶಿರಡಿಯ ಜನರೆಲ್ಲಾ ದ್ವಾರಕಾಮಾಯಿಗೆ ಬಂದು ಸೇರುತ್ತಿದ್ದರು. ಆರತಿಯ ಸಮಯದಲ್ಲಿ ಭಕ್ತರು ತಂದ ಎಲ್ಲಾ ಭಕ್ಷ್ಯ ಭೋಜ್ಯ, ಹಣ್ಣು ಮತ್ತು ಸಿಹಿತಿನಿಸುಗಳನ್ನು ನೈವೇದ್ಯ ಮಾಡಲಾಗುತ್ತಿತ್ತು. ಆರತಿಯ ನಂತರ ಎಲ್ಲವನ್ನು ಬಾಬಾರವರು ಚೆನ್ನಾಗಿ ಬೆರೆಸುತ್ತಿದ್ದರು. ಆ ಪ್ರಸಾದವನ್ನು ಎಲ್ಲರಿಗೂ ಹಂಚಲಾಗುತ್ತಿತ್ತು. ಸಾಯಿಯವರು ಕೆಲವು ಭಕ್ತರೊಡನೆ ಮಸೀದಿಯ ಒಳಗಡೆ ಕುಳಿತು ಭೋಜನ ಮಾಡುತ್ತಿದ್ದರು. 

ಮಧ್ಯಾನ್ಹ ಊಟವಾದ ನಂತರ 1 ರಿಂದ 2 ಘಂಟೆಯ ತನಕ ಸಾಯಿಯವರು ಒಬ್ಬರೇ ದ್ವಾರಕಾಮಾಯಿಯಲ್ಲಿ ಏಕಾಂತದಲ್ಲಿ ಇರುತ್ತಿದ್ದರು. ಆಗ ದ್ವಾರಕಾಮಾಯಿಯ ತೆರೆಯನ್ನು ಹಾಕಲಾಗುತ್ತಿತ್ತು. ಆ ಸಮಯದಲ್ಲಿ ಸಾಯಿಬಾಬಾರವರು ತಮ್ಮ ಬಳಿಯಿದ್ದ ಹಣದ ಚೀಲದಿಂದ ಒಂದೊಂದೇ ನಾಣ್ಯವನ್ನು ತೆಗೆದುಕೊಂಡು ಅದನ್ನು ತಮ್ಮ ಕೈಗಳಿಂದ ಚೆನ್ನಾಗಿ ತಿಕ್ಕುತ್ತಾ "ಇದು ನಾನಾ ಹಣ, ಇದು ಕಾಕಾನ ಹಣ " ಎಂದು ಉಚ್ಚರಿಸುತ್ತಿದ್ದರು. ಸಾಯಿಯವರು ಹೀಗೆ ಮಾಡುವಾಗ ಯಾರಾದರೂ ಮಸೀದಿಗೆ ಬಂದರೆ ಕೂಡಲೇ ಆ ಹಣದ ಚೀಲವನ್ನು ಒಳಗೆ ಮುಚ್ಚಿಡುತ್ತಿದ್ದರು. 2 ಘಂಟೆಯ ನಂತರ ಸಾಯಿಬಾಬಾರವರು ಪುನಃ ಲೇಂಡಿ ಉದ್ಯಾನವನಕ್ಕೆ ಹೋಗುತ್ತಿದ್ದರು ಮತ್ತು ಸುಮಾರು 1 ಘಂಟೆಗಳ ಕಾಲ ಅಲ್ಲಿ ಕಳೆದ ನಂತರ ಪುನಃ ದ್ವಾರಕಾಮಾಯಿಗೆ ವಾಪಸಾಗುತ್ತಿದ್ದರು. 

ಮಧ್ಯಾನ್ಹ 3 ಘಂಟೆಯಿಂದ ಸಂಜೆ 5 ಘಂಟೆಯ ವರೆಗೆ ದ್ವಾರಕಾಮಾಯಿಯಲ್ಲೇ ಕಳೆಯುತ್ತಿದ್ದರು. ಆಗ ಸಾಯಿಯವರೊಬ್ಬರೇ ಏಕಾಂತದಲ್ಲಿ ಕಳೆಯುತ್ತಿದ್ದರು. ಕೆಲವೊಮ್ಮೆ ತಮ್ಮ ಸಹಾಯಕರನ್ನು ಕರೆದು ಕೆಲವು ನಿರ್ದಿಷ್ಟ ಭಕ್ತರಿಗೆ ದ್ವಾರಕಾಮಾಯಿಗೆ ಬರುವಂತೆ ಹೇಳಿ ಕಳುಹಿಸಿ ಅವರೊಡನೆ ಗುಪ್ತ ಸಮಾಲೋಚನೆ ಮಾಡುತ್ತಿದ್ದರು. 

ಸಂಜೆಯ ದರ್ಬಾರ್ 5 ಘಂಟೆಗೆ ಪ್ರಾರಂಭವಾಗಿ 7 ಘಂಟೆಯವರೆಗೆ ನಡೆಯುತ್ತಿತ್ತು. ನಂತರ ಸಂಜೆಯ ಸಾಯಿಬಾಬಾರವರು ವಾಯು ವಿಹಾರಕ್ಕೆ ಹೊರಡುತ್ತಿದ್ದರು. ದ್ವಾರಕಾಮಾಯಿಯ ಎದುರುಗಡೆ ಇದ್ದ ಸಣ್ಣ ರಸ್ತೆಯಲ್ಲಿ ಅತ್ತಿಂದ ಇತ್ತ ಓಡಾಡುತ್ತಿದ್ದರು ಮತ್ತು ರಸ್ತೆಯ ಬದಿಯ ಒಂದು ಸ್ಥಳದಲ್ಲಿ ತಮ್ಮ ಮೊಣ ಕೈಗಳನ್ನು  ಊರಿಕೊಂಡು ಒರಗಿಕೊಂಡು ಸ್ವಲ್ಪ ಕಾಲ ನಿಲ್ಲುತ್ತಿದ್ದರು. ಆ ಪವಿತ್ರ ಸ್ಥಳದಲ್ಲಿ  ಗೋಡೆಯಲ್ಲಿ ಸಣ್ಣ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ ಮತ್ತು ಸಣ್ಣ ದೇಗುಲವನ್ನು ಕೂಡ ನಿರ್ಮಿಸಲಾಗಿದೆ. 

ರಾತ್ರಿ 8:30 ಕ್ಕೆ ಸರಿಯಾಗಿ ದ್ವಾರಕಾಮಾಯಿಯ ಘಂಟೆ ಆರತಿಯ ಸಮಯವಾಯಿತೆಂದು ಸೂಚಿಸಲು ಬಾರಿಸುತ್ತಿತ್ತು. ಆಗ ಪುನಃ ಶಿರಡಿಯ ಜನರೆಲ್ಲಾ ಬಂದು ದ್ವಾರಕಾಮಾಯಿಯ ಹೊರಗಿದ್ದ ಸಭಾಮಂಟಪದಲ್ಲಿ ಸೇರುತ್ತಿದ್ದರು. ದಿನ ಬಿಟ್ಟು ದಿನ ಸಾಯಿಬಾಬಾರವರು ಚಾವಡಿಯಲ್ಲಿ ಮಲಗುತ್ತಿದ್ದರು. ಅಂದು ಸಾಯಿಯವರು ಚಾವಡಿಯಲ್ಲಿ ಮಲಗುವ ದಿನವಾಗಿದ್ದರೆ, ಕೆಲವು ಭಕ್ತರು ಚಾವಡಿಯಲ್ಲಿ ಸೇರಿ ಅನೇಕ ಪಕ್ಕವಾದ್ಯಗಳೊಡನೆ ಭಜನೆಯನ್ನು ಮಾಡುತ್ತಿದ್ದರು. ಮತ್ತೆ ಕೆಲವು ಸಾಯಿಭಕ್ತರು ಸಾಯಿಬಾಬಾರವರ ಚಾವಡಿ ಮೆರವಣಿಗೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡುತ್ತಿದ್ದರು. ನಂತರ ಚಾವಡಿ ಮೆರವಣಿಗೆ ಆರಂಭವಾಗುತ್ತಿತ್ತು. ಶಿರಡಿಯ ಜನರೆಲ್ಲಾ ಚಾವಡಿ ಮೆರವಣಿಗೆಯಲ್ಲಿ ಭಾಗವಹಿಸಿ ಸಾಯಿಯವರನ್ನು ಮೆರವಣಿಗೆಯಲ್ಲಿ ಚಾವಡಿಗೆ ಕರೆದುಕೊಂಡು ಹೋಗಿ ಅಲ್ಲಿ ಆರತಿಯನ್ನು ಮಾಡುತ್ತಿದ್ದರು. ಆರತಿಯ ನಂತರ ಭಕ್ತರೆಲ್ಲಾ ತಮ್ಮ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದರು. ಚಾವಡಿಯಲ್ಲಿ ಸಾಯಿಬಾಬಾರವರೊಬ್ಬರೇ ಸುಮಾರು 50 ರಿಂದ 60 ಹೊದ್ದಿಗೆಗಳನ್ನು ಜೋಡಿಸಿಕೊಂಡು ಮಲಗುತ್ತಿದ್ದರು. ಮಾರನೇ ದಿನ ಬೆಳಗಿನ ಜಾವ ತಾತ್ಯಾ ಬಂದು ಸಾಯಿಯವರನ್ನು ಎಬ್ಬಿಸಿ ದ್ವಾರಕಾಮಾಯಿಗೆ ಕರೆದುಕೊಂಡು ಹೋಗುವ ತನಕ ಸಾಯಿಯವರು ಚಾವಡಿಯಲ್ಲೇ ಇರುತ್ತಿದ್ದರು. ದ್ವಾರಕಾಮಾಯಿಯಲ್ಲಿ ಸಾಯಿಯವರು ಮಹಾಲ್ಸಾಪತಿ ಮತ್ತು ತಾತ್ಯಾರವರೊಡನೆ ಮಲಗುತ್ತಿದ್ದರು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, April 16, 2011

ಸಾಯಿಬಾಬಾರವರ ಒಪ್ಪಿಗೆ ಪಡೆದು ತೆಗೆದ ಅಪರೂಪದ ಛಾಯಾಚಿತ್ರ - ಕೃಪೆ: ಸಾಯಿಅಮೃತಧಾರಾ.ಕಾಂ  

ಸೀತಾರಾಮ್ ಮತ್ತು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀ.ವಾಸುದೇವ ಸದಾಶಿವ ಜೋಷಿ ಮತ್ತು ಅವರ ಸ್ನೇಹಿತರಾದ ಚಿದಂಬರ ರಾವ್ ಕೆ.ಗದ್ರೆಯವರು ಸಾಯಿಬಾಬಾರವರ ಪರಮ ಭಕ್ತರು. ಅವರಿಬ್ಬರೂ ಆಗಾಗ್ಗೆ ಶಿರಡಿಗೆ ತೆರಳಿ ಸಾಯಿಬಾಬಾರವರ ದರ್ಶನ ಪಡೆದು ಬರುತ್ತಿದ್ದರು. ಒಮ್ಮೆ ಜೋಷಿಯವರು ಶಿರಡಿಗೆ ಹೊರಟಿದ್ದ ತಮ್ಮ ಸ್ನೇಹಿತ ಗದ್ರೆಯವರಿಗೆ ಸಾಯಿಬಾಬಾರವರಿಗೆ ದಕ್ಷಿಣೆಯಾಗಿ ನೀಡಲು 10 ರುಪಾಯಿಗಳನ್ನು ನೀಡಿದರು.  ಅಲ್ಲದೆ, ಸಾಯಿಬಾಬಾರವರ ಒಂದು ಛಾಯಾಚಿತ್ರವನ್ನು ತೆಗೆದು ತಮಗೆ ತಂದುಕೊಡುವಂತೆ ಕೂಡ ಕೋರಿಕೊಂಡರು. ಗದ್ರೆಯವರು ಶಿರಡಿಗೆ ಹೋಗಿ ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರನ್ನು ದರ್ಶನ ಮಾಡಿ ಜೋಷಿಯವರು ನೀಡಿದ 10 ರುಪಾಯಿಗಳ ದಕ್ಷಿಣೆಯನ್ನು ನೀಡಿ ಸಾಯಿಬಾಬಾರವರಿಗೆ ನಮಸ್ಕರಿಸಿದರು.  ಸಾಯಿಬಾಬಾರವರ ಛಾಯಾಚಿತ್ರ ತೆಗೆಯಲು ಅನುಮತಿ ಕೇಳುವ ಧೈರ್ಯ ಸಾಲದೇ ಸುಮ್ಮನೆ ಮೌನವಾಗಿದ್ದರು. ಸಾಯಿಬಾಬಾರವರು ಕೂಡ ಬಹಳ ಹೊತ್ತು ಏನು ಮಾತನಾಡದೆ ಮೌನವಾಗಿದ್ದರು. ಗದ್ರೆಯವರು ಇನ್ನೇನು ದ್ವಾರಕಾಮಾಯಿ ಬಿಟ್ಟು ಹೊರಡುತ್ತಿರುವಾಗ ಸಾಯಿಬಾಬಾರವರು ಅವರನ್ನು ಕರೆದು ಛಾಯಾಚಿತ್ರವನ್ನು ತೆಗೆಯಲು ಅನುಮತಿಯನ್ನು ತಾವಾಗಿಯೇ ನೀಡಿದರು. ಅಲ್ಲದೆ, ಆ ಛಾಯಾಚಿತ್ರವನ್ನು ಲಾಭಕ್ಕಾಗಿ  ಯಾರಿಗೂ ಮಾರಾಟ ಮಾಡಬಾರದೆಂದು ನಿರ್ಭಂದಿಸಿದರು. ಅಲ್ಲದೆ, ಉಧಿ ಮತ್ತು ಪ್ರಸಾದವನ್ನು ಕೂಡ ಗದ್ರೆಯವರಿಗೆ ಕೊಟ್ಟು ಶಿರಡಿಯಿಂದ ಬೀಳ್ಕೊಟ್ಟರು. 


ಕನ್ನಡ ಅನುವಾದ:ಶ್ರೀಕಂಠ ಶರ್ಮ
ಪವಿತ್ರ ಗ್ರಂಥವನ್ನು ಕೈಯಲ್ಲಿ ಹಿಡಿದಿರುವ ಶಿರಡಿ ಸಾಯಿಬಾಬಾ - ಕೃಪೆ: ಸಾಯಿಅಮೃತಧಾರಾ.ಕಾಂ  

ಈ ಚಿತ್ರವು ಸಾಯಿಬಾಬಾರವರು ಪುಸ್ತಕವನ್ನು ಕೈಯಲ್ಲಿ ಹಿಡಿದಿರುವ ಅತ್ಯಂತ ಅಪರೂಪದ ಚಿತ್ರ. ಒಮ್ಮೆ ಗುರುಪೂರ್ಣಿಮೆಯ ದಿವಸ ಅನೇಕ ಸಾಯಿಭಕ್ತರು ಸಾಯಿಬಾಬಾರವರ ಬಳಿಗೆ ದರ್ಶನಕ್ಕೆ ಬಂದರು ಮತ್ತು ತಮ್ಮ ಜೊತೆ ಪುಸ್ತಕವೊಂದನ್ನು ತಂದು ಸಾಯಿಬಾಬಾರವರ ಮುಂದೆ ಇರಿಸಿ ಅದನ್ನು ಸಾಯಿಬಾಬಾರವರು ಆಶೀರ್ವದಿಸಿ ವಾಪಸ್ ನೀಡಿದ ನಂತರ ಓದಬೇಕೆಂದು ಮತ್ತು  ಅದರಿಂದ ಉಪಯೋಗ ಪಡೆಯಬೇಕೆಂದು ಇಚ್ಚಿಸಿದ್ದರು. ಆದರೆ ಸಾಯಿಬಾಬಾರವರು ಒಂದು ಒಬ್ಬ ಭಕ್ತನ ಪುಸ್ತಕವನ್ನು ತೆಗೆದುಕೊಂಡು ಆಶೀರ್ವದಿಸಿ ಅದನ್ನು ಮತ್ತೊಬ್ಬ ಭಕ್ತನಿಗೆ ನೀಡುತ್ತಿದ್ದರು. ಈ ಚಿತ್ರವನ್ನು ಮರಾಟಿ ಸಾಯಿ ಸಚ್ಚರಿತ್ರೆಯ ಪ್ರಥಮ ಆವೃತ್ತಿಯಲ್ಲಿ ಸಾಯಿಭಕ್ತರು ನೋಡಬಹುದು. ಈ ಚಿತ್ರದಲ್ಲಿ ಸಾಯಿಬಾಬಾರವರು ಪವಿತ್ರ "ತುಕಾರಾಮ ಗಾಥಾ" ವನ್ನು ಕೈನಲ್ಲಿ ಹಿಡಿದಿದ್ದಾರೆ. 



ಕನ್ನಡ ಅನುವಾದ: ಶ್ರೀಕಂಠ ಶರ್ಮ
ಕಣ್ಣಿಗೆ ಗೋಚರಿಸದ ಶಿರಡಿ ಸಾಯಿಬಾಬಾ - ಕೃಪೆ: ಸಾಯಿಅಮೃತಧಾರಾ.ಕಾಂ  

ಈ ವಿಸ್ಮಯ ಘಟನೆ ಶಿರಡಿಯಲ್ಲಿ 1912 ರಲ್ಲಿ ನಡೆಯಿತು. ಸಾಯಿಬಾಬಾರವರ ಭಕ್ತನಾದ ಗೋಪಾಲ್ ದಿನಕರ ಜೋಷಿ ಎಂಬುವರು ಈ ಛಾಯಾಚಿತ್ರವನ್ನು ತೆಗೆದಿರುತ್ತಾರೆ. ಪ್ರತಿದಿನ ಬೆಳಿಗ್ಗೆ ಉಪಹಾರವಾದ ನಂತರ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ಹೋಗಿಬರುವ ಪರಿಪಾಠ ಇಟ್ಟುಕೊಂಡಿದ್ದರು. ಸಾಥೆವಾಡಾದಲ್ಲಿ ತಂಗಿದ್ದ ಸಾಯಿಭಕ್ತರು  ಪ್ರತಿನಿತ್ಯ ಸಾಯಿಬಾಬಾರವರು ಸಾಥೆವಾಡಾದ ಕೊನೆಗೆ ಬರುವುದನ್ನೇ ಎದುರು ನೋಡುತ್ತಿದ್ದರು ಮತ್ತು ಅಲ್ಲಿ ಹೋಗಿ ಸಾಯಿಬಾಬಾರವರ ದರ್ಶನ ಪಡೆಯುತ್ತಿದ್ದರು. ಸಾಯಿಬಾಬಾರವರು ಕೂಡ ಸಾಥೆವಾಡಾದ ಅಂಚಿಗೆ ಬಂದಾಗ ಸ್ವಲ್ಪ ಹೊತ್ತು ನಿಂತು ತಮ್ಮ ಭಕ್ತರ  ಆಸೆಯನ್ನು  ಈಡೇರಿಸಿ ಹೋಗುತ್ತಿದ್ದರು. 


ಜೋಷಿಯವರಿಗೆ ಸಾಯಿಬಾಬಾರವರ ಛಾಯಾಚಿತ್ರವನ್ನು ತೆಗೆಯಬೇಕೆಂಬ ಆಸೆ ಹೆಚ್ಚಾಗಿತ್ತು. ಆದ್ದರಿಂದ ಒಂದು ದಿನ ಸಾಯಿಬಾಬಾರವರು ಬರುವ ಲೇಂಡಿಯ  ದಾರಿಯಲ್ಲಿ ಕ್ಯಾಮೆರವನ್ನು ಇಟ್ಟುಕೊಂಡು ಸಾಯಿಯವರು ಲೇಂಡಿ ಯಿಂದ  ಹಿಂತಿರುಗಿ ಬರುವುದನ್ನೇ  ಕಾಯುತ್ತಿದ್ದರು ಮತ್ತು ಮುಂಚಿತವಾಗಿಯೇ ಸಾಯಿಯವರ ಬಳಿ ಛಾಯಾಚಿತ್ರ ತೆಗೆಯಲು ಅನುಮತಿಯನ್ನು ಕೋರಿದ್ದರು. ಆಗ ಬಾಬಾರವರು "ನನ್ನ ಛಾಯಾಚಿತ್ರವನ್ನು ತೆಗೆಯುವ ಅವಶ್ಯಕತೆಯಿಲ್ಲ. ಆದರೆ ನನ್ನ ಜೊತೆ ಬರುವ ಭಕ್ತರ ಛಾಯಾಚಿತ್ರವನ್ನು ನೀನು ಖಂಡಿತವಾಗಿ ತೆಗೆಯಬಹುದು" ಎಂದು ಸೂಕ್ಷ್ಮವಾಗಿ ಹೇಳಿದ್ದರು. 

ಅದರಂತೆ ಒಂದು ದಿನ ಸಾಯಿಬಾಬಾರವರು ಲೇಂಡಿಯಿಂದ ಬರುತ್ತಾ ಸಾಥೆವಾಡಾದ ಕೊನೆಯಲ್ಲಿ ಬಂದು ಸ್ವಲ್ಪ ಕಾಲ ನಿಂತುಕೊಂಡಾಗ ಜೋಷಿಯವರು ಸ್ವಲ್ಪವೂ ತಡ ಮಾಡದೆ ಸಾಯಿಯವರ ಛಾಯಾಚಿತ್ರವನ್ನು ತೆಗೆದರು. ಇದನ್ನು ನೋಡಿದ ಶ್ಯಾಮರವರು ಜೋಷಿಯವರು ಛಾಯಾಚಿತ್ರವನ್ನು ತೆಗೆದ ವಿಷಯವನ್ನು ಬಾಬಾರವರಿಗೆ ತಿಳಿಸಿದರು. ಆಗ ಬಾಬಾರವರು "ನನಗೆ ನನ್ನ ಛಾಯಾಚಿತ್ರದ ಅವಶ್ಯಕತೆಯಿಲ್ಲ. ಅದನ್ನು ತೆಗೆದುಕೊಂಡು ನಾನೇನು ಮಾಡಲಿ" ಎಂದು ಉತ್ತರಿಸಿದರು. 

ಜೋಷಿಯವರು ಆ ಛಾಯಾಚಿತ್ರವನ್ನು ಅಚ್ಚು ಹಾಕಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. ಆ ಚಿತ್ರದಲ್ಲಿ ಸಾಯಿಬಾಬಾರವರು ಕಾಣುತ್ತಲೇ ಇರಲಿಲ್ಲ,  ಬದಲಿಗೆ ಸಾಯಿಯವರ ಪಾದಗಳು ಮಾತ್ರ ಗೋಚರಿಸುತ್ತಿದ್ದವು. ಶ್ವೇತಛತ್ರ, ಭಾಗೋಜಿ ಶಿಂಧೆ ಮತ್ತು ಇತರ ಸಾಯಿಭಕ್ತರ ಮುಖಗಳು ಸ್ಪಷ್ಟವಾಗಿ ಕಾಣುತ್ತಿದೆ, ಆದರೆ ಸಾಯಿಯವರು ನಿಂತಿದ್ದ ಜಾಗದಲ್ಲಿ ಒಂದು ದಿವ್ಯವಾದ ಬೆಳಕು ಮತ್ತು ಅವರ ಪಾದಗಳು ಮಾತ್ರ ಗೋಚರಿಸುತ್ತಿವೆ (ಹೆಚ್ಚಿನ ವಿವರಗಳಿಗೆ ಸಾಯಿಭಕ್ತರು 4ನೇ ವರ್ಷದ ಜ್ಯೇಷ್ಠ ಮತ್ತು ಆಷಾಢ ಮಾಸದ  ಶಕೆ  1848 ಇಸವಿ  1826 ರ ಸಾಯಿಲೀಲಾ ಮಾಸ ಪತ್ರಿಕೆಯ 4-5 ನೇ ಸಂಚಿಕೆಯನ್ನು ನೋಡುವುದು) 

ಕನ್ನಡ ಅನುವಾದ: ಶ್ರೀಕಂಠ ಶರ್ಮ