Saturday, April 16, 2011

ಕಣ್ಣಿಗೆ ಗೋಚರಿಸದ ಶಿರಡಿ ಸಾಯಿಬಾಬಾ - ಕೃಪೆ: ಸಾಯಿಅಮೃತಧಾರಾ.ಕಾಂ  

ಈ ವಿಸ್ಮಯ ಘಟನೆ ಶಿರಡಿಯಲ್ಲಿ 1912 ರಲ್ಲಿ ನಡೆಯಿತು. ಸಾಯಿಬಾಬಾರವರ ಭಕ್ತನಾದ ಗೋಪಾಲ್ ದಿನಕರ ಜೋಷಿ ಎಂಬುವರು ಈ ಛಾಯಾಚಿತ್ರವನ್ನು ತೆಗೆದಿರುತ್ತಾರೆ. ಪ್ರತಿದಿನ ಬೆಳಿಗ್ಗೆ ಉಪಹಾರವಾದ ನಂತರ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ಹೋಗಿಬರುವ ಪರಿಪಾಠ ಇಟ್ಟುಕೊಂಡಿದ್ದರು. ಸಾಥೆವಾಡಾದಲ್ಲಿ ತಂಗಿದ್ದ ಸಾಯಿಭಕ್ತರು  ಪ್ರತಿನಿತ್ಯ ಸಾಯಿಬಾಬಾರವರು ಸಾಥೆವಾಡಾದ ಕೊನೆಗೆ ಬರುವುದನ್ನೇ ಎದುರು ನೋಡುತ್ತಿದ್ದರು ಮತ್ತು ಅಲ್ಲಿ ಹೋಗಿ ಸಾಯಿಬಾಬಾರವರ ದರ್ಶನ ಪಡೆಯುತ್ತಿದ್ದರು. ಸಾಯಿಬಾಬಾರವರು ಕೂಡ ಸಾಥೆವಾಡಾದ ಅಂಚಿಗೆ ಬಂದಾಗ ಸ್ವಲ್ಪ ಹೊತ್ತು ನಿಂತು ತಮ್ಮ ಭಕ್ತರ  ಆಸೆಯನ್ನು  ಈಡೇರಿಸಿ ಹೋಗುತ್ತಿದ್ದರು. 


ಜೋಷಿಯವರಿಗೆ ಸಾಯಿಬಾಬಾರವರ ಛಾಯಾಚಿತ್ರವನ್ನು ತೆಗೆಯಬೇಕೆಂಬ ಆಸೆ ಹೆಚ್ಚಾಗಿತ್ತು. ಆದ್ದರಿಂದ ಒಂದು ದಿನ ಸಾಯಿಬಾಬಾರವರು ಬರುವ ಲೇಂಡಿಯ  ದಾರಿಯಲ್ಲಿ ಕ್ಯಾಮೆರವನ್ನು ಇಟ್ಟುಕೊಂಡು ಸಾಯಿಯವರು ಲೇಂಡಿ ಯಿಂದ  ಹಿಂತಿರುಗಿ ಬರುವುದನ್ನೇ  ಕಾಯುತ್ತಿದ್ದರು ಮತ್ತು ಮುಂಚಿತವಾಗಿಯೇ ಸಾಯಿಯವರ ಬಳಿ ಛಾಯಾಚಿತ್ರ ತೆಗೆಯಲು ಅನುಮತಿಯನ್ನು ಕೋರಿದ್ದರು. ಆಗ ಬಾಬಾರವರು "ನನ್ನ ಛಾಯಾಚಿತ್ರವನ್ನು ತೆಗೆಯುವ ಅವಶ್ಯಕತೆಯಿಲ್ಲ. ಆದರೆ ನನ್ನ ಜೊತೆ ಬರುವ ಭಕ್ತರ ಛಾಯಾಚಿತ್ರವನ್ನು ನೀನು ಖಂಡಿತವಾಗಿ ತೆಗೆಯಬಹುದು" ಎಂದು ಸೂಕ್ಷ್ಮವಾಗಿ ಹೇಳಿದ್ದರು. 

ಅದರಂತೆ ಒಂದು ದಿನ ಸಾಯಿಬಾಬಾರವರು ಲೇಂಡಿಯಿಂದ ಬರುತ್ತಾ ಸಾಥೆವಾಡಾದ ಕೊನೆಯಲ್ಲಿ ಬಂದು ಸ್ವಲ್ಪ ಕಾಲ ನಿಂತುಕೊಂಡಾಗ ಜೋಷಿಯವರು ಸ್ವಲ್ಪವೂ ತಡ ಮಾಡದೆ ಸಾಯಿಯವರ ಛಾಯಾಚಿತ್ರವನ್ನು ತೆಗೆದರು. ಇದನ್ನು ನೋಡಿದ ಶ್ಯಾಮರವರು ಜೋಷಿಯವರು ಛಾಯಾಚಿತ್ರವನ್ನು ತೆಗೆದ ವಿಷಯವನ್ನು ಬಾಬಾರವರಿಗೆ ತಿಳಿಸಿದರು. ಆಗ ಬಾಬಾರವರು "ನನಗೆ ನನ್ನ ಛಾಯಾಚಿತ್ರದ ಅವಶ್ಯಕತೆಯಿಲ್ಲ. ಅದನ್ನು ತೆಗೆದುಕೊಂಡು ನಾನೇನು ಮಾಡಲಿ" ಎಂದು ಉತ್ತರಿಸಿದರು. 

ಜೋಷಿಯವರು ಆ ಛಾಯಾಚಿತ್ರವನ್ನು ಅಚ್ಚು ಹಾಕಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. ಆ ಚಿತ್ರದಲ್ಲಿ ಸಾಯಿಬಾಬಾರವರು ಕಾಣುತ್ತಲೇ ಇರಲಿಲ್ಲ,  ಬದಲಿಗೆ ಸಾಯಿಯವರ ಪಾದಗಳು ಮಾತ್ರ ಗೋಚರಿಸುತ್ತಿದ್ದವು. ಶ್ವೇತಛತ್ರ, ಭಾಗೋಜಿ ಶಿಂಧೆ ಮತ್ತು ಇತರ ಸಾಯಿಭಕ್ತರ ಮುಖಗಳು ಸ್ಪಷ್ಟವಾಗಿ ಕಾಣುತ್ತಿದೆ, ಆದರೆ ಸಾಯಿಯವರು ನಿಂತಿದ್ದ ಜಾಗದಲ್ಲಿ ಒಂದು ದಿವ್ಯವಾದ ಬೆಳಕು ಮತ್ತು ಅವರ ಪಾದಗಳು ಮಾತ್ರ ಗೋಚರಿಸುತ್ತಿವೆ (ಹೆಚ್ಚಿನ ವಿವರಗಳಿಗೆ ಸಾಯಿಭಕ್ತರು 4ನೇ ವರ್ಷದ ಜ್ಯೇಷ್ಠ ಮತ್ತು ಆಷಾಢ ಮಾಸದ  ಶಕೆ  1848 ಇಸವಿ  1826 ರ ಸಾಯಿಲೀಲಾ ಮಾಸ ಪತ್ರಿಕೆಯ 4-5 ನೇ ಸಂಚಿಕೆಯನ್ನು ನೋಡುವುದು) 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment