Saturday, April 23, 2011

ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಕೆ ಸಾಯಿಬಾಬಾ ಮಂದಿರ್, ಶಿರಡಿ ಸಾಯಿ ಸೆಂಟರ್ ಆಫ್ ಮೆಡಿಟೇಷನ್, 39ನೇ ಕಿಲೋಮೀಟರ್, ಆವತಿ ಅಂಚೆ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562 110, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು: 

ಈ ಮಂದಿರವು ಬೆಂಗಳೂರಿನ ಅತ್ಯಂತ ಬೃಹತ್ ಸಾಯಿಬಾಬಾ ಮಂದಿರವಾಗಿದ್ದು ಸರಿ ಸುಮಾರು 2 ಎಕರೆ ವಿಸ್ತೀರ್ಣವನ್ನು ಹೊಂದಿರುತ್ತದೆ. 

ದೇವಾಲಯದ ಆವರಣದಲ್ಲಿ ಮೊದಲು ಸಿಗುವುದೇ ಗುರುಸ್ಥಾನ. ಈ ಗುರುಸ್ಥಾನವನ್ನು 1994 ರಲ್ಲಿ ಅತ್ಯಂತ ಪವಿತ್ರ ದಿನವಾದ ಶ್ರಾವಣ ಶುದ್ಧ ಪೌರ್ಣಮಿಯ ದಿನ ಉದ್ಘಾಟಿಸಲಾಯಿತು. 

ಗುರುಸ್ಥಾನದ ಹಿಂಭಾಗದಲ್ಲಿರುವ ದ್ವಾರಕಾಮಾಯಿಯನ್ನು 28ನೇ ಏಪ್ರಿಲ್ 1996 ರಂದು ಪ್ರಾರಂಭಿಸಲಾಯಿತು. 

ಮುಖ್ಯ ದೇವಾಲಯದ ಪಕ್ಕದಲ್ಲಿರುವ ಧ್ಯಾನ ಮಂದಿರವನ್ನು 7ನೇ ಆಗಸ್ಟ್ 1998 ರಂದು ಪ್ರಾರಂಭಿಸಲಾಯಿತು. 

ಪ್ರಮುಖ ದೇವಾಲಯವಾದ ಶಿರಡಿ ಸಾಯಿಬಾಬಾ ಮಂದಿರವನ್ನು 14ನೇ ಜನವರಿ 2006  ಸಂಕ್ರಾಂತಿಯ ಶುಭ ದಿನದಂದು ಪರಮ ಪೂಜ್ಯ ಶ್ರೀ.ಚಂದ್ರಭಾನು ಸತ್ಪತಿಯವರು ಉದ್ಘಾಟಿಸಿದರು.  

ಈ ದೇವಾಲಯವನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳಲಾಗುತ್ತಿದ್ದು ಆರತಿ, ಅಭಿಷೇಕ, ಸಾಯಿಬಾಬಾ ಅಷ್ಟೋತ್ತರ, ಮಂತ್ರಗಳು ಮತ್ತು ಎಲ್ಲಾ ಹಬ್ಬ ಹರಿದಿನಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯಕ್ಕೆ ಶಿರಡಿ ಸಾಯಿಬಾಬಾ ಸಂಸ್ಥಾನದ ದಿನಚರಿಯಂತೆ ಅತ್ಯಂತ ಕಟ್ಟುನಿಟ್ಟಾಗಿ ಆಚರಿಸಲಾಗುತ್ತಿದೆ. 

ಪ್ರಮುಖ ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ರಾರಾಜಿಸುತ್ತಿದೆ. ಈ ಪ್ರಮುಖ ದೇವಾಲಯದ ಪ್ರಾಂಗಣವು ಬಹಳ ದೊಡ್ಡದಾಗಿದ್ದು ಒಂದೇ ಬಾರಿಗೆ ಸರಿ ಸುಮಾರು 5000 ಸಾಯಿಭಕ್ತರು ಒಟ್ಟಿಗೆ ಕುಳಿತು ಆರತಿಯನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ದೇವಾಲಯದ ಜಾಗವು ಬಹಳ ವಿಸ್ತಾರವಾಗಿದ್ದು  (2 ಎಕರೆ) ಸುಮಾರು 50,000 ಭಕ್ತರಿಗೆ ಸ್ಥಳಾವಕಾಶವಿದೆ. 

ಮುಖ್ಯ ದೇವಾಲಯದ ಹಿಂಭಾಗದಲ್ಲಿ ನಂದಾದೀಪವನ್ನು ಸ್ಥಾಪಿಸಲಾಗಿದೆ. ನಂದಾದೀಪದ ಮುಂಭಾಗದಲ್ಲಿ ದುರ್ಗಾದೇವಿಯ ಸುಂದರ ಅಮೃತ ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ದೊಡ್ಡದಾದ ಶ್ರೀಚಕ್ರದ ಚಿತ್ರಪಟವನ್ನು ಮತ್ತು ವಿವಿಧ ಶ್ರೀಚಕ್ರಗಳ ಚಿತ್ರವನ್ನು ಪಕ್ಕದಲ್ಲಿರುವ ಗೋಡೆಯ ಮೇಲೆ ತೂಗುಹಾಕಲಾಗಿದೆ. 

ದ್ವಾರಕಾಮಾಯಿಯು ಗುರುಸ್ಥಾನದ ಹಿಂಭಾಗದಲ್ಲಿದ್ದು ಇಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಅಮೃತ ಶಿಲೆಯ ಸಾಯಿಬಾಬಾ, ದತ್ತಾತ್ರೇಯ ಮತ್ತು ಲಕ್ಷ್ಮೀದೇವಿಯ ವಿಗ್ರಹಗಳನ್ನು ಧುನಿಯ ಮುಂದುಗಡೆ ಇರುವಂತೆ ಸ್ಥಾಪಿಸಲಾಗಿದೆ. 

ಗುರುಸ್ಥಾನವು ದೇವಾಲಯದ ಪ್ರಾಂಗಣದ ಮುಂಭಾಗದಲ್ಲಿದೆ. ಕಪ್ಪು ಶಿಲೆಯ ಸಾಯಿಬಾಬಾರವರ ಪಾದುಕೆಗಳನ್ನು "ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾ" ರವರ ಚಿತ್ರಪಟದ ಕೆಳಗಡೆ ಇರುವಂತೆ ಪ್ರತಿಷ್ಟಾಪಿಸಲಾಗಿದ್ದು ಈ ಪವಿತ್ರ ಪಾದುಕೆ ಮತ್ತು ಚಿತ್ರಪಟವು ಪವಿತ್ರ ಬೇವಿನ ಮರದ ಕೆಳಗಡೆ ಇರುವಂತೆ ಸ್ಥಾಪಿಸಲಾಗಿದೆ. ಈ ಗುರುಸ್ಥಾನವನ್ನು ದೇವಾಲಯ ಪ್ರಾರಂಭಿಸುವುದಕ್ಕೆ ಮೊದಲೇ 1994 ರಲ್ಲಿ ಅತ್ಯಂತ ಪವಿತ್ರ ದಿನವಾದ ಶ್ರಾವಣ ಶುದ್ಧ ಪೌರ್ಣಮಿಯ ದಿನ ಪ್ರಾರಂಭಿಸಲಾಯಿತು. 

ಧ್ಯಾನ ಮಂದಿರವು ಪ್ರಮುಖ ದೇವಾಲಯದ ಪಕ್ಕದಲ್ಲಿ ಮತ್ತು ಪವಿತ್ರ ಬೇವಿನ ಮರ ಮತ್ತು ಅರಳಿ ಮರದ ಎದುರುಗಡೆ ಇರುತ್ತದೆ. ಈ ಧ್ಯಾನ ಮಂದಿರವನ್ನು ಪಿರಮಿಡ್ ಆಕಾರದಲ್ಲಿ ಕಟ್ಟಲಾಗಿದೆ ಮತ್ತು ಎಲ್ಲಾ ಕಡೆಗಳಲ್ಲಿ ಗಾಜಿನ ಹೊದಿಕೆಯನ್ನು ಹೊದಿಸಲಾಗಿದೆ. ಈ ಸ್ಥಳದಲ್ಲಿ ಶಿರಡಿ ಸಾಯಿಬಾಬಾರವರ ಚಿತ್ರಪಟ, ಪವಿತ್ರ ಓಂ ಮತ್ತು ಸಣ್ಣ ದೀಪವನ್ನು ಇರಿಸಲಾಗಿದೆ. ಪಿರಮಿಡ್ ಆಕೃತಿಯು ವಿದ್ಯುತ್ ಮತ್ತು ಅಯಸ್ಕಾಂತ ತರಂಗಗಳನ್ನು ತಡೆಹಿಡಿಯುತ್ತದೆ ಮತ್ತು ಋಣಾತ್ಮಕ ಶಕ್ತಿಗಳನ್ನು ತಡೆಯುತ್ತದೆ, ಅಲ್ಲದೆ, ಪಿರಮಿಡ್ ಆಕೃತಿಯು ಮೆದುಳಿನ ಕಾರ್ಯಚಟುವಟಿಕೆಯಲ್ಲಿ ಬದಲಾವಣೆಯನ್ನು ತರುವುದೇ ಅಲ್ಲದೆ ಮಾನವನ ಮಾನಸಿಕ ಮತ್ತು ದೈಹಿಕ ಕಾರ್ಯಗಳು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಹೊಂದುವುದರಲ್ಲಿ ಸಹಾಯ ಮಾಡುತ್ತದೆ ಎಂದು ಜಗತ್ತಿನ ಪ್ರಖ್ಯಾತ ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ದುರ್ಗಾದೇವಿಯ ದೇವಾಲಯದ ಹಿಂಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ಕರ್ನಾಟಕದ ಸಾಯಿಬಾಬಾ ಮಂದಿರಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 3 ಅಡಿ ಎತ್ತರದ ಸುಂದರ ಅಮೃತ ಶಿಲೆಯ ಅಕ್ಕಲಕೋಟೆ ಮಹಾರಾಜ ಶ್ರೀ ಸ್ವಾಮಿ ಸಮರ್ಥರ ವಿಗ್ರಹವನ್ನು ಅಕ್ಟೋಬರ್ 2011 ರಲ್ಲಿ ಪ್ರತಿಷ್ಟಾಪಿಸಲಾಗಿದೆ.   












ದೇವಾಲಯದ ಕಾರ್ಯಚಟುವಟಿಕೆಗಳು

ದಿನನಿತ್ಯದ ಕಾರ್ಯಕ್ರಮಗಳು: 

ದೇವಾಲಯದ ಸಮಯ: 
6:30 AM to 8:30 PM 

ಆರತಿಯ ಸಮಯ:
ಕಾಕಡಾ ಆರತಿ - ಬೆಳಿಗ್ಗೆ 6 ಘಂಟೆಗೆ 
ಮಧ್ಯಾನ್ಹ ಆರತಿ - 12 ಘಂಟೆಗೆ 
ಧೂಪಾರತಿ - ಸಂಜೆ 6 ಘಂಟೆಗೆ 
ಶೇಜಾರತಿ - ರಾತ್ರಿ 8:30 ಕ್ಕೆ 


ಪ್ರತಿ ತಿಂಗಳ ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆಯನ್ನು ಮಧ್ಯಾನ್ಹ 2:30 ರಿಂದ ಆಚರಿಸಲಾಗುತ್ತದೆ. 


ಪ್ರತಿ ತಿಂಗಳ ಅಮಾವಾಸ್ಯೆಯಂದು ಗಾಯತ್ರಿ ಹೋಮ ಮತ್ತು ಮಹಾ ಮೃತ್ಯುಂಜಯ ಹೋಮಗಳನ್ನು ಮಧ್ಯಾನ್ಹ 2:30 ರಿಂದ ಆಚರಿಸಲಾಗುತ್ತದೆ.

ಪ್ರತಿ ಗುರುವಾರ, ಭಾನುವಾರ ಮತ್ತು ಎಲ್ಲಾ ವಿಶೇಷ ಉತ್ಸವದ ದಿನಗಳಲ್ಲಿ ದೇವಾಲಯಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. 


ವಿಶೇಷ ಉತ್ಸವದ ದಿನಗಳು
  1. ಪ್ರತಿ ವರ್ಷದ ಸಂಕ್ರಾಂತಿಯಂದು ದೇವಾಲಯದ ವಾರ್ಷಿಕೋತ್ಸವ.
  2. ಮಹಾಶಿವರಾತ್ರಿ.
  3. ಶ್ರೀರಾಮನವಮಿ.
  4. ಗುರುಪೂರ್ಣಿಮಾ.
  5. ಗೋಕುಲಾಷ್ಟಮಿ.
  6. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ)
  7. ದತ್ತ ಜಯಂತಿ. 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ
ಸ್ಥಳ: 
39ನೇ ಕಿಲೋಮೀಟರ್ ಬಸ್ ನಿಲ್ದಾಣ, ಆವತಿ ಅಂಚೆ, ಬಳ್ಳಾರಿ ರಸ್ತೆ

ವಿಳಾಸ: 
ಶ್ರೀ ಶಿರಡಿ ಕೆ ಸಾಯಿಬಾಬಾ ಮಂದಿರ್
ಶಿರಡಿ ಸಾಯಿ ಸೆಂಟರ್ ಆಫ್ ಮೆಡಿಟೇಷನ್, 
39ನೇ ಕಿಲೋಮೀಟರ್, ಆವತಿ ಅಂಚೆ, ದೇವನಹಳ್ಳಿ ತಾಲ್ಲೂಕು, 
ಬೆಂಗಳೂರು ಗ್ರಾಮಾಂತರ ಜಿಲ್ಲೆ-562 110, ಕರ್ನಾಟಕ
ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ಅಶೋಕ್ ಫಾತ್ನಾನಿ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+91 80 2222 3150 /+91 80 2222 1610 / +91 80 2558 4915 / +91 80 4112 9956
ಮಾರ್ಗಸೂಚಿ:
ಬಳ್ಳಾರಿ ರಸ್ತೆಯ ಆವತಿ ಅಂಚೆಯ 39ನೇ ಕಿಲೋಮೀಟರ್ ಬಳಿಯಿರುವ ಸಾಯಿಬಾಬಾ ಮಂದಿರದ ಬಸ್ ನಿಲ್ದಾಣದಲ್ಲಿ ಇಳಿಯುವುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment