Thursday, June 26, 2014

ಶಿರಡಿಯ ಸಮಾಧಿ ಮಂದಿರದಲ್ಲಿ ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನ ಮಾಡಿಸುವ ಸಂದರ್ಭದಲ್ಲಿ ನುಡಿಸಲಾಗುವ ಶೆಹನಾಯ್ ನ ಹಿಂದಿರುವ ಕಥೆ - ಕೃಪೆ: ಸಾಯಿಅಮೃತಧಾರಾ.ಕಾಂ


ದಿವಂಗತ ಶ್ರೀ.ಬಿ.ವಿ.ತಾಲೀಮ್ ರವರು ಸುಂದರವಾಗಿ ಕೆತ್ತಿದ ಬಾಬಾರವರ 5-1/2 ಅಡಿ ಎತ್ತರದ ಇಟಾಲಿನ್ ಅಮೃತ ಶಿಲೆಯ ವಿಗ್ರಹವನ್ನು 7ನೇ ಅಕ್ಟೋಬರ್ 1954 ನೇ ಇಸವಿಯ ಪವಿತ್ರ ವಿಜಯದಶಮಿಯಂದು ಶಿರಡಿಯ ಸಮಾಧಿ ಮಂದಿರದಲ್ಲಿ ವಿಧ್ಯುಕ್ತವಾಗಿ ಪ್ರತಿಷ್ಟಾಪಿಸಲಾಯಿತು. ಆ ದಿನದಿಂದ ಪ್ರತಿನಿತ್ಯ ಬೆಳಗಿನ ಕಾಕಡಾ ಆರತಿಯ ನಂತರ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಮಾಡಲು ಪ್ರಾರಂಭಿಸಿದರು. 


ಹೀಗೆ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಮಾಡಿಸುವ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನವು ಪ್ರಸಿದ್ಧ ಶೆಹನಾಯ್ ವಾದಕರಾದ ದಿವಂಗತ ಶ್ರೀ.ಬಿಸ್ಮಿಲ್ಲಾ ಖಾನ್ ರವರ ಶೆಹನಾಯ್ ನಿಂದ ಹೊರಬಂದ ಎರಡು ಪ್ರಸಿದ್ಧ ರಾಗಗಳಾದ ತೋಡಿ ಹಾಗೂ ಲಲಿತ್ ರಾಗಗಳ ಧ್ವನಿಮುದ್ರಿಕೆಯನ್ನು ಹಾಕುತ್ತಾ ಬಂದಿದೆ.  



ಮಹಾರಾಷ್ಟ್ರ ಸಂಪ್ರದಾಯದ ಪ್ರಕಾರ ಶೆಹನಾಯ್ ವಾದ್ಯವನ್ನು ಮದುವೆ ಹಾಗೂ ಇನ್ನಿತರ ಎಲ್ಲಾ ಶುಭ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ ಅದೇ ಮಹಾರಾಷ್ಟ್ರ ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಬರುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಕೂಡ ಪ್ರತಿನಿತ್ಯ ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಮಾಡಿಸುವ ಸಂದರ್ಭದಲ್ಲಿ  ಪ್ರಸಿದ್ಧ ಶೆಹನಾಯ್ ವಾದಕರಾದ ದಿವಂಗತ ಶ್ರೀ.ಬಿಸ್ಮಿಲ್ಲಾ ಖಾನ್ ರವರ ಶೆಹನಾಯ್ ನಿಂದ ಹೊರಬಂದ ಎರಡು ಪ್ರಸಿದ್ಧ ರಾಗಗಳಾದ ತೋಡಿ ಹಾಗೂ ಲಲಿತ್ ರಾಗಗಳ ಧ್ವನಿಮುದ್ರಿಕೆಯನ್ನು ಇಂದಿಗೂ ಹಾಕುತ್ತಾ ಬಂದಿದೆ.  

ಬಹಳ ವರ್ಷಗಳ ಹಿಂದೆ ಸಂಸ್ಥಾನವು ಶ್ರೀ ಸಾಯಿಬಾಬಾರವರ ವಿಗ್ರಹದ ಮಂಗಳ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು, ಹಾಲು ಹಾಗೂ ರೋಸ್ ವಾಟರ್ (ಗುಲಾಬಿ ನೀರು) ಗಳನ್ನು ಯಥೇಚ್ಛವಾಗಿ ಬಳಸುತ್ತಿತ್ತು. ಆದರೆ 2007-2008 ರಲ್ಲಿ ಹೆಚ್ಚಿನ ಭಕ್ತರು ಸಾಯಿಬಾಬಾರವರ ದರ್ಶನವನ್ನು ಪಡೆಯಲು ಸಹಾಯವಾಗಲೆಂದು ಸಂಸ್ಥಾನದವರು  ಆರತಿಯ ಸಮಯವನ್ನು ಬೆಳಿಗ್ಗೆ 5.15 ರಿಂದ 4.30 ಕ್ಕೆ ಬದಲಿಸಿದರು. ಸಾಯಿಬಾಬಾರವರ ವಿಗ್ರಹಕ್ಕೆ ಹಾನಿಯಾಗಬಾರದೆಂಬ ಕಾರಣದಿಂದ ಆಗಿನಿಂದ ಸಂಸ್ಥಾನವು ಹಾಲು ಹಾಗೂ ರೋಸ್ ವಾಟರ್ (ಗುಲಾಬಿ ನೀರು) ಗಳನ್ನು ಉಪಯೋಗಿಸುವುದನ್ನು ನಿಲ್ಲಿಸಿತು.  ಅಲ್ಲದೇ ಅಂದಿನಿಂದ ಸಂಸ್ಥಾನವು ಅತಿ ಕಡಿಮೆ ಉಗುರು ಬೆಚ್ಚಗಿನ ನೀರನ್ನು ಬಳಸಿ ಅತ್ಯಂತ ಕಡಿಮೆ ಸಮಯದಲ್ಲಿ ಮಂಗಳ ಸ್ನಾನವನ್ನು ಪೂರ್ಣಗೊಳಿಸುತ್ತಾ ಬಂದಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment