Saturday, June 21, 2014

ಧೂಪಖೇಡಾದ ಸಾಯಿಬಾಬಾ ಮಂದಿರ - ಶ್ರೀ ಸಾಯಿ ಗಣೇಶ ಮಂದಿರ, ಧೂಪಖೇಡಾ, ಪೈಠಾಣ್ ತಾಲೂಕು, ಔರಂಗಾಬಾದ್ ಜಿಲ್ಲೆ, ಮಹಾರಾಷ್ಟ್ರ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು: 


ಶ್ರೀ ಶಿರಡಿ ಸಾಯಿಬಾಬಾರವರ ಈ ಸುಪ್ರಸಿದ್ಧ ಮಂದಿರ ಹಾಗೂ ಪ್ರಪಂಚದ ಪ್ರಪ್ರಥಮ ಸಾಯಿ ಗಣೇಶ ಮಂದಿರವು ಶಿರಡಿ ಸಾಯಿಬಾಬಾರವರ ಪ್ರಕಟ ಭೂಮಿ ಎಂದೇ ಪ್ರಸಿದ್ಧವಾದ ಧೂಪಖೇಡಾ  ಗ್ರಾಮದಲ್ಲಿದೆ.  ಧೂಪಖೇಡಾವು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪೈಠಾಣ್ ತಾಲೂಕಿನಲ್ಲಿದೆ. ಶ್ರೀ ಶಿರಡಿ ಸಾಯಿಬಾಬಾರವರು ಈ ಗ್ರಾಮದಲ್ಲಿ ಸುಮಾರು  9 ವರ್ಷಗಳ ಕಾಲ ಜೀವಿಸಿದ್ದರಿಂದ ಸಾಯಿ ಭಕ್ತರಿಗೆ ಇದೊಂದು ಪವಿತ್ರ ಸ್ಥಳವಾಗಿರುತ್ತದೆ.

ಈ ಮಂದಿರದ ಭೂಮಿ ಪೂಜೆಯನ್ನು 28ನೇ ಫೆಬ್ರವರಿ 2000 ದಂದು ನೆರವೇರಿಸಲಾಯಿತು.

ಈ ಮಂದಿರದ ಉದ್ಘಾಟನೆಯನ್ನು  28ನೇ ಫೆಬ್ರವರಿ  2002 ರಂದು ಮಹಾರಾಷ್ಟ್ರದ ಕೊಲ್ಹಾಪುರದ ಕರವೀರ ಪೀಠದ ಜಗದ್ಗುರುಗಳಾದ ಶ್ರೀ.ವಿದ್ಯಾ ನರಸಿಂಹ ಭಾರತಿಯವರು ನೆರವೇರಿಸಿದರು

ಈ ಮಂದಿರವನ್ನು ಸಾಯಿ ಮಹಾಭಾಕ್ತರಾದ ದಿವಂಗತ ಶ್ರೀ.ಚಾಂದ್ ಭಾಯಿ ಪಾಟೀಲರ ಮರಿ ಮಗನಾದ (ನಾಲ್ಕನೇ ಪೀಳಿಗೆ) ಶ್ರೀ.ಬಾಬುಲಾಲ್ ನಾದಾನ್ ಪಠಾಣ್ ರವರು ಮಂದಿರದ ಟ್ರಸ್ಟ್ ಗೆ ದಾನವಾಗಿ ನೀಡಿದ 47000 ಚದರ ಅಡಿ ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.

ಸಾಯಿ ಸಾಧಕ ಶ್ರೀ.ಬಲದೇವ ಭಾರತಿಯವರು ಈ ಮಂದಿರ ಹಾಗೂ ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಅವರು ಮಂದಿರದ ದಿನ ನಿತ್ಯದ ಆಗು ಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ಅವರು ಸೇವೆ, ಸಾಧನ, ಅನ್ನದಾನ, ಆರೋಗ್ಯ ಹಾಗೂ ಪ್ರಚಾರ/ಪ್ರಸಾರ ಎಂಬ ಐದು ಒಳ್ಳೆಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಮಂದಿರ ಹಾಗೂ ಆಶ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. 

ಮಂದಿರದಲ್ಲಿ ಶ್ರೀ ಸಾಯಿ ಗಣೇಶನ  ಸುಂದರ ಅಮೃತ ಶಿಲೆಯ ವಿಗ್ರಹ ಹಾಗೂ ವಿಗ್ರಹದ ಎದುರುಗಡೆ ಇರುವ ಅಮೃತ ಶಿಲೆಯ ಪಾದುಕೆಗಳನ್ನು ಸಾಯಿ ಭಕ್ತರು ನೋಡಬಹುದಾಗಿದೆ. 

ಮಂದಿರದ ಎದುರುಗಡೆ ನಿರ್ಮಿಸಲಾಗಿರುವ ಪುಟ್ಟ ಮಂದಿರದಲ್ಲಿ ಅಮೃತಶಿಲೆಯ ದತ್ತಾತ್ತ್ರೇಯರ ಸುಂದರವಾದ ವಿಗ್ರಹವನ್ನು ನೋಡಬಹುದಾಗಿದೆ. 

ಶ್ರೀ ಸಾಯಿ ಗಣೇಶ ಮಂದಿರದ ಎಡಭಾಗದಲ್ಲಿ ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮವನ್ನು ನಿರ್ಮಿಸಲಾಗಿದ್ದು ಅಲ್ಲಿ ಅಕ್ಕಲಕೋಟೆ ಮಹಾರಾಜ ಶ್ರೀ ಸ್ವಾಮಿ ಸಮರ್ಥ, ಶ್ರೀ ಶಿರಡಿ ಸಾಯಿಬಾಬಾ ಹಾಗೂ ಶ್ರೀ ಗಜಾನನ ಮಹಾರಾಜ ರವರ ಪುಟ್ಟ ಅಮೃತ ಶಿಲೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮವನ್ನು ಬಡವರು ಹಾಗೂ ಅನಾಥರ ಜೀವನವನ್ನು ಉತ್ತಮಗೊಳಿಸಲು, ಜನರಲ್ಲಿ ಸೌಹಾರ್ದ ಭಾವನೆಯನ್ನು ಬೆಳೆಸಲು ಹಾಗೂ ಸಾಯಿಬಾಬಾರವರ ತತ್ವಗಳನ್ನು ಪ್ರಚಾರ ಮಾಡುವ ಸಲುವಾಗಿ 2000ನೇ ಇಸವಿಯ ಜನವರಿ ತಿಂಗಳಿನಲ್ಲಿ ಪ್ರಾರಂಭಿಸಲಾಯಿತು.

ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮದ ಪಕ್ಕದಲ್ಲಿ ವಿಶಾಲವಾದ ಭೋಜನ ಶಾಲೆಯನ್ನು ನಿರ್ಮಿಸಲಾಗಿದ್ದು ಇಲ್ಲಿ ಪ್ರತಿ ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಅನ್ನದಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.






ಮಂದಿರದ ನಿತ್ಯ ಕಾರ್ಯಕ್ರಮಗಳು: 

ಮಂದಿರದ ಸಮಯ: 

ಮಂದಿರವನ್ನು ದಿನದ 24 ಗಂಟೆಗಳೂ ಸಾಯಿ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗಿರುತ್ತದೆ.

ಆರತಿ ಸಮಯ: 

ಬೆಳಿಗ್ಗೆ  :  7:00
ಸಂಜೆ  :  7:00


ವಿಶೇಷ ಉತ್ಸವದ ದಿನಗಳು:

1.ಹೊಸವರ್ಷದ ಆಚರಣೆ
2.ವಸಂತ ಪಂಚಮಿ
3.ಮಕರ ಸಂಕ್ರಾಂತಿ
4.ಶ್ರೀ ರಾಮ ನವಮಿ
5.ಗುರು ಪೂರ್ಣಿಮಾ 
6.ಗಣೇಶ ಚತುರ್ಥಿ 
7.ವಿಜಯದಶಮಿ 
8.ದತ್ತ ಜಯಂತಿ 
9.ದೀಪಾವಳಿ 
10.ಕ್ರಿಸ್ ಮಸ್ 




ಟ್ರಸ್ಟ್ ನ ಸಾಮಾಜಿಕ ಕಾರ್ಯಚಟುವಟಿಕೆಗಳು:

ಪ್ರತಿ ವರ್ಷ 21ನೇ ಫೆಬ್ರವರಿಯಿಂದ 28ನೇ ಫೆಬ್ರವರಿಯವರೆಗೆ ಮಂದಿರದಲ್ಲಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಆ ಏಳು ದಿನಗಳಲ್ಲಿ ಸಾಯಿ ಸಂಕೀರ್ತನ, ನಿತ್ಯ ಅನ್ನದಾನ, ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣ, ರಕ್ತದಾನ ಶಿಬಿರ ಹಾಗೂ ಶಿರಡಿಗೆ ಪಾದಯಾತ್ರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಪ್ರತಿ ವರ್ಷ ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳ ಶಿಬಿರವನ್ನು ನಡೆಸಲಾಗುತ್ತದೆ.

ಪ್ರತಿ ವರ್ಷ ಮಂದಿರದ ಆವರಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತದೆ.

ಮಂದಿರದ ಟ್ರಸ್ಟ್ ಔರಂಗಾಬಾದ್ ನ ಡಾ.ಸಮೀರ್ ಆರ್.ಗಂಡ್ಲೆ ಮತ್ತು ಅವರ ತಜ್ಞ ವೈದ್ಯರ ತಂಡದ  ಸಹಾಯ ಮತ್ತು ಸಹಕಾರದೊಂದಿಗೆ ಬಡವರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದೆ. 2002ನೇ ಇಸವಿಯ ಅಕ್ಟೋಬರ್ ತಿಂಗಳಿನಲ್ಲಿ ಮಂದಿರದ ಆವರಣದಲ್ಲಿ ಒಂದು ಸಣ್ಣ ಔಷಧಾಲಯವನ್ನು ಶ್ರೀ.ಲಕ್ಷ್ಮಣ ಏಖಾಂಡೆ ಗುರುಜಿಯವರು ನೀಡಿದ ಧನ ಸಹಾಯದಿಂದ ನಿರ್ಮಿಸಲಾಗಿದ್ದು ಇಲ್ಲಿ ಸ್ಥಳೀಯ ಗ್ರಾಮಸ್ಥರು ಹಾಗೂ ಅಗತ್ಯವಿರುವ ರೋಗಿಗಳಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ಮಾಡಲಾಗುತ್ತಿದೆ. ಹಲವಾರು ನುರಿತ ವೈದ್ಯರು ಇಲ್ಲಿಗೆ ಬಂದು ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಬ್ಬ ವೈದ್ಯರನ್ನು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಮಂದಿರದ ಔಷಧಾಲಯದಲ್ಲಿ  ಇರಿಸಬೇಕೆಂದು ಮಂದಿರದ ಟ್ರಸ್ಟ್ ಯೋಚಿಸುತ್ತಿದೆ.

ಮಂದಿರದ ಟ್ರಸ್ಟ್ ಮಂದಿರಕ್ಕೆ ಬರುವ ಸಾಯಿ ಭಕ್ತರಿಗೆ ಹಾಗೂ ಬಡವರಿಗೆ ಉಚಿತವಾಗಿ ಭೋಜನ ಪ್ರಸಾದವನ್ನು ನೀಡುತ್ತಿದೆ. ಪ್ರತಿ ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಮಂದಿರಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ಯಾವುದೇ ಬೇಧ ಭಾವ ತೋರದೆ ಮಹಾಪ್ರಸಾದ ಭೋಜನವನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ದಿರದ ಟ್ರಸ್ಟ್ ಈ ಅನ್ನದಾನವನ್ನು ನಿತ್ಯಾನ್ನದಾನ ಕಾರ್ಯಕ್ರಮವನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿದೆ.

ಮಂದಿರದ ಟ್ರಸ್ಟ್ ನ ವತಿಯಿಂದ ಸಾಯಿ ಭಕ್ತರಿಗೆ "ಶ್ರೀ ಸಾಯಿ ಸಚ್ಚರಿತ್ರೆ" "ಸಾಯಿ ಲೀಲಾಮೃತ", ಮಕ್ಕಳ ಸಾಯಿಬಾಬಾ ಪುಸ್ತಕ, ಆರತಿ ಪುಸ್ತಕ, ಸಾಯಿಬಾಬಾರವರ ಭಾವಚಿತ್ರ, ಸಾಯಿ ರುದ್ರಾಧ್ಯಾಯ ಪುಸ್ತಕ ಹಾಗೂ ಸಾಯಿ ಭಜನೆಯ ಧ್ವನಿ ಸುರಳಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 

ಮಂದಿರದ ಟ್ರಸ್ಟ್ ಸ್ಥಳೀಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಶಾಲಾ  ಮಕ್ಕಳಿಗೆ ಬ್ಯಾಗ್, ನೋಟ್ ಪುಸ್ತಕ, ಪೆನ್ ಹಾಗೂ ಶಾಲಾ ಪುಸ್ತಕಗಳನ್ನೂ ವಿತರಿಸುತ್ತಾ ಬಂದಿದೆ.

ದೇಣಿಗೆಗೆ ಮನವಿ :

ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮವು ತಾನು ಹಮ್ಮಿಕೊಂಡಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಸಾಯಿ ಭಕ್ತರಿಂದ ಹಾಗೂ ದಾನಿಗಳಿಗೆ ದೇಣಿಗೆಯನ್ನು ನೀಡುವಂತೆ ಮನವಿ ಮಾಡಿಕೊಳ್ಳುತ್ತದೆ. ದೇಣಿಗೆಯನ್ನು ಚೆಕ್/ಡಿಡಿ ಮುಖಾಂತರ “ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮ, ಬ್ಯಾಂಕ್ ಆಫ್ ಬರೋಡಾ, ಖಾತೆ ಸಂಖ್ಯೆ: 50190150321, ಶಾಖೆ: ಬಿಡ್ಕಿನ್, ಐ.ಎಫ್.ಎಸ್. ಸಿ ಸಂಕೇತ: BARBOBIDKIN" ಗೆ ಸಲ್ಲುವಂತೆ ಕಳುಹಿಸಬಹುದಾಗಿದೆ. 

ದೇವಾಲಯದ ಸಂಪರ್ಕದ ವಿವರಗಳು: 

ಶ್ರೀ ಸಾಯಿ ಗಣೇಶ ಮಂದಿರ,
ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮ,
ದಿನ್ನಾಪುರ್ ರಸ್ತೆ,
ಧೂಪಖೇಡಾ,
ಪೈಠಾಣ್ ತಾಲೂಕು,
ಔರಂಗಾಬಾದ್ ಜಿಲ್ಲೆ,
ಮಹಾರಾಷ್ಟ್ರ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿ : ಸಾಯಿ ಸಾಧಕ ಶ್ರೀ.ಬಲದೇವ ಭಾರತಿ
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: +91 98812 83070
ಸ್ಥಳ:  ಮಂದಿರವು ಔರಂಗಾಬಾದ್ ನಿಂದ ಪೈಠಾಣಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿದೆ. ರಾಜ್ಯ ಹೆದ್ದಾರಿಯಲ್ಲಿ ಸುಮಾರು 20 ಕಿಲೋಮೀಟರ್ ಕ್ರಮಿಸಿದರೆ ಚಿಟೆಗಾವ್ ಸಿಗುತ್ತದೆ. ಅದೇ ರಸ್ತೆಯಲ್ಲಿ ಸುಮಾರು 6 ಕಿಲೋಮೀಟರ್ ಕ್ರಮಿಸಿದರೆ ಬಿಡಕಿನಗಾವ್ ಸಿಗುತ್ತದೆ. ಮತ್ತೆ 6 ಕಿಲೋಮೀಟರ್ ಕ್ರಮಿಸಿದರೆ ಕೌಡಗಾವ್ ಸಿಗುತ್ತದೆ.  ಅಲ್ಲಿ ಬಲಕ್ಕೆ ತಿರುಗಿ ಸ್ವಲ್ಪ ಮುಂದೆ ಸಾಗಿದರೆ ಒಂದು ಕಮಾನು ಸಿಗುತ್ತದೆ (ಅದರ ಮೇಲೆ ಬಾಬಾರವರ ಭಾವಚಿತ್ರ ಹಾಗೂ ಧೂಪಖೇಡಾ ಮಂದಿರದ ಹೆಸರು ಬರೆಯಲಾಗಿದೆ). ಅದೇ ದಾರಿಯಲ್ಲಿ ಮುಂದೆ ಸುಮಾರು 3 ಕಿಲೋಮೀಟರ್ ಕ್ರಮಿಸಿದರೆ ಶ್ರೀ ಸಾಯಿಬಾಬಾ ವಿಶ್ವಸ್ಥ ಮಂದಿರ ಸಿಗುತ್ತದೆ. ಆ ಮಂದಿರದ ಪಕ್ಕದಲ್ಲಿನ ಸಣ್ಣ ರಸ್ತೆಯಲ್ಲಿ ಸುಮಾರು  800 ಮೀಟರ್ ಕ್ರಮಿಸಿದರೆ ಶ್ರೀ ಸಾಯಿ ಗಣೇಶ ಮಂದಿರ ಹಾಗೂ ಸಾಯಿ ಸಾಧಕ ಶ್ರೀ ಬಲದೇವ ಭಾರತಿಯವರ ಶ್ರೀ ಸಾಯಿಬಾಬಾ ಸೇವಾ ಸಾಧನಾಶ್ರಮ ಸಿಗುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment