Tuesday, June 3, 2014

ಸಾಯಿಭಕ್ತಾಗ್ರಗಣ್ಯ, ಕಲಿಯುಗ ಕರ್ಣ ಶ್ರೀ.ಕೆ.ವಿ.ರಮಣಿ - ಕೃಪೆ: ಸಾಯಿಅಮೃತಧಾರಾ.ಕಾಂ


ತಮ್ಮ ಹತ್ತಿರದ ಬಂಧು-ಬಳಗದವರು ಹಾಗೂ ಸ್ನೇಹಿತರ ನಡುವೆ  "ಕೆ.ವಿ.ಆರ್." ಎಂದೇ ಪ್ರಸಿದ್ಧರಾಗಿರುವ ಶ್ರೀ.ಕೆ.ವಿ.ರಮಣಿಯವರು ಓರ್ವ ಯಶಸ್ವಿ ವಾಣಿಜ್ಯೋದ್ಯಮಿ, ಮಾರ್ಗದರ್ಶಿ, ಮಹಾನ್ ಸಾಯಿ ಭಕ್ತರೂ ಹಾಗೂ ಎಲ್ಲಕ್ಕಿಂತಲೂ ಹೆಚ್ಚಾಗಿ ಲೋಕೋಪಕಾರಿಗಳಲ್ಲೇ ಸರ್ವಶ್ರೇಷ್ಟರಾಗಿದ್ದಾರೆ. ಇವರು ಮಾಡುತ್ತಿರುವ ಲೋಕೋಪಕಾರಗಳಿಗಾಗಿ ಇವರು ಪ್ರಪಂಚದಾದ್ಯಂತ ಹರಡಿರುವ ಶಿರಡಿ ಸಾಯಿಬಾಬಾ ಮಂದಿರಗಳು ಹಾಗೂ ಸಾಯಿ ಭಕ್ತರುಗಳಿಗೆ ಅತ್ಯಂತ ಚಿರಪರಿಚಿತರಾಗಿದ್ದಾರೆ.   

ಶ್ರೀ.ಕೆ.ವಿ.ರಮಣಿಯವರು ಚೆನ್ನೈ ನಿವಾಸಿಯಾಗಿದ್ದು ಸಾಫ್ಟ್ ವೇರ್ ನಿಪುಣರು  ಹಾಗೂ ಯಶಸ್ವಿ ಕೈಗಾರಿಕೋದ್ಯಮಿಯಾಗಿದ್ದಾರೆ. ಆದರೆ ತಮ್ಮನ್ನು ತಾವು ಸಾಯಿ ಭಕ್ತರೆಂದು ಕರೆದುಕೊಳ್ಳಲು ಬಹಳ ಇಷ್ಟಪಡುತ್ತಾರೆ. 

ಶ್ರೀ.ಕೆ.ವಿ.ರಮಣಿಯವರು ಚೆನ್ನೈನಲ್ಲಿಯೇ ಹುಟ್ಟಿ ಬೆಳೆದರು. ಇವರ ತಂದೆಯವರಾದ ದಿವಂಗತ ಶ್ರೀ.ಕೃಷ್ಣಮುರ್ತಿ ಅಯ್ಯರ್ ರವರು ಪ್ರಖ್ಯಾತ ವಕೀಲರಾಗಿದ್ದರು. ಇವರು ಚೆನ್ನೈನ ಪಿ.ಎಸ್.ಪ್ರೌಢಶಾಲೆಯಲ್ಲಿ ಹಾಗೂ ವಿವೇಕಾನಂದ ಕಾಲೇಜ್, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗವನ್ನು ಮಾಡಿದರು. ಇವರು ಚೆನ್ನೈನ ಮೈಲಾಪುರದಲ್ಲಿ ನೆಲೆಸಿದ್ದರಿಂದ ಸಹಜವಾಗಿಯೇ ಅಲ್ಲಿನ ಸಾಯಿಬಾಬಾ ಮಂದಿರ, ಶ್ರೀ ಕಪಾಲೀಶ್ವರ, ಕರ್ಪಗಂಬಾಳ್ ಶಿವ ಮಂದಿರ, ಗಣೇಶ ಹಾಗೂ ಆಂಜನೇಯ ದೇವಾಲಯಗಳು ಇವರ ಮನವನ್ನು ತಮ್ಮೆಡೆ  ಆಕರ್ಷಿಸಿದ್ದವು. ಇವರ ಮನೆದೇವರು ವೆಂಕಟೇಶ್ವರ ಹಾಗೂ ಪದ್ಮಾವತಿ ದೇವರುಗಳಾದ್ದರಿಂದ ಆಗಾಗ್ಗೆ ಇವರು ತಿರುಪತಿಗೂ ಹೋಗಿಬರುವ ಪರಿಪಾಠ ಇಟ್ಟುಕೊಂಡಿದ್ದರು. 

ಶ್ರೀ.ಕೆ.ವಿ.ರಮಣಿಯವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಗಳಿಸಿದರು. ಅಲ್ಲದೆ ಸಾಫ್ಟ್ ವೇರ್ ಇಂಜಿನಿಯರಿಂಗ್, ಸಂವಹನ ತಂತ್ರಜ್ಞಾನ, ಹಾಗೂ ಸಾಮಾನ್ಯ ನಿರ್ವಹಣಾ ವಿಭಾಗಗಳಲ್ಲಿ ಹಲವಾರು ಸ್ನಾತಕೋತ್ತರ ಪದವಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಶ್ರೀ.ಕೆ.ವಿ.ರಮಣಿಯವರು ಸಿದ್ಧಾಂತಗಳಿಗೆ ಹಾಗೂ ತತ್ವಗಳಿಗೆ ಹೆಚ್ಚು ಒಟ್ಟು ನೀಡುವ ಭಾವಜೀವಿಯಾಗಿದ್ದು ಅವರು ಮಹಾನ್ ತಂತ್ರಜ್ಞಾನ ಸಂಸ್ಥೆಯನ್ನು ಪ್ರಾರಂಭಿಸಿ ಎತ್ತರಕ್ಕೆ ಬೆಳೆಸುವಲ್ಲಿ ನಿಸ್ಸೀಮರು ಎಂಬುದರಲ್ಲಿ ಎರಡು ಮಾತಿಲ್ಲ.  

ಎತ್ತರದ ನಿಲುವನ್ನು ಹೊಂದಿದ್ದು, ಕನ್ನಡಕಧಾರಿಯಾದ ಶ್ರೀ.ಕೆ.ವಿ.ರಮಣಿಯವರು ಯಾವಾಗಲೂ ತಮ್ಮ ಸುತ್ತಲೂ ಸಂತೋಷ ಹಾಗೂ ಶಕ್ತಿಯನ್ನು ಪಸರಿಸುತ್ತಾರೆ ಹಾಗೂ ಜನರ ಗುಂಪಿನಲ್ಲಿ ಎದ್ದು ಕಾಣುವ ವ್ಯಕ್ತಿತ್ವವನ್ನು ಹೊಂದಿದಾರೆ. ಜನರೊಂದಿಗಿದ್ದಾಗ ಹಾಸ್ಯ ಚಟಾಕಿಗಳನ್ನು ಸಿಡಿಸುವುದಕ್ಕೆ ಹೆಸರುವಾಸಿಯಾಗಿರುವ ಇವರು ತಾವು  ಭೇಟಿ ಮಾಡಿದ ವ್ಯಕ್ತಿಗಳ ಮುಖ ಹಾಗೂ  ಹೆಸರುಗಳನ್ನು ಬಹಳ ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದು ಹದಿಹರೆಯದ ಯುವಕ ಯುವತಿಯರ ಮನಗೆದ್ದಿದ್ದಾರೆ.  

ಸಂವಹನಕ್ಕೆ ಅನ್ವರ್ಥನಾಮರಾಗಿರುವ ಶ್ರೀ.ಕೆ.ವಿ.ರಮಣಿಯವರು ತಮ್ಮ ಪದ ಲಹರಿಯ ಮುಖಾಂತರ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿಬಿಡುತ್ತಾರೆ. ಇವರ ಈ ಗುಣವನ್ನು ಕಂಡು ಪ್ರಖ್ಯಾತ ಶಿಕ್ಷಣ ತಜ್ಞರುಗಳು ಹಾಗೂ ರಾಜಕೀಯ ವ್ಯಕ್ತಿಗಳೂ ಹೊಟ್ಟೆಕಿಚ್ಚುಪಡುವಂತಾಗುತ್ತದೆ. 

ಗಾಂಭೀರ್ಯಕ್ಕೆ ಮತ್ತೊಂದು ಹೆಸರಾಗಿರುವ ಶ್ರೀ.ಕೆ.ವಿ.ರಮಣಿಯವರು ತಮ್ಮ ದಿನನಿತ್ಯದ ಬಿಡುವಿಲ್ಲದ ಕೆಲಸಗಳ ನಡುವೆಯೂ  ತಮ್ಮ ಕುಟುಂಬದವರೊಡನೆ ಬಹಳ ದೂರದವರೆಗೆ ಕಾಲ್ನಡಿಗೆಯಲ್ಲಿ ತೊಡಗಿಸಿಕೊಳ್ಳುವುದು, ಹುಚ್ಚು ಜನಜಂಗುಳಿಯಿಂದ ಹೊರಬಂದು ದೂರದ ಸ್ಥಳಗಳಿಗೆ ಕಾರು ಚಾಲನೆ ಮಾಡಿಕೊಂಡು ಹೋಗುವುದು, ಶಾಸ್ತ್ರೀಯ ಸಂಗೀತ ಕೇಳುವ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ. 

ಶ್ರೀ.ಕೆ.ವಿ.ರಮಣಿಯವರು ತಮ್ಮ ಕುಟುಂಬದೊಂದಿಗಿನ ಸಂಬಂಧಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಬಹಳ ದೊಡ್ಡದಾದ ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದ ಕಾರಣ ಶ್ರೀ.ಕೆ.ವಿ.ರಮಣಿಯವರು ದೀರ್ಘ ಕಾಲ ಬೆಸೆದ ಬಾಂಧವ್ಯಗಳು ಸಂಬಂಧಗಳನ್ನು ಬಲಪಡಿಸುತ್ತವೆ ಎಂದು ನಂಬುತ್ತಾರೆ ಹಾಗೂ ಇದೇ ತತ್ವವನ್ನು ತಮ್ಮ ಸಂಸ್ಥೆಯಲ್ಲೂ ಅಳವಡಿಸಿದ್ದಾರೆ. ಧೈವಾಧೀನರಾದ ಇವರ ತಾಯಿಯವರು ಮತ್ತು ಇವರ ಧರ್ಮಪತ್ನಿ ಶ್ರೀಮತಿ.ಲಕ್ಷ್ಮಿಯವರು ಇವರ ಎಲ್ಲಾ ಕೆಲಸಗಳಿಗೂ ಹಾಗೂ ಸಾಧನೆಗಳಿಗೂ  ಸ್ಫೂರ್ತಿ ನೀಡುವುದಷ್ಟೇ ಅಲ್ಲದೇ ಎಲ್ಲಾ ರೀತಿಯ  ಸಹಾಯ, ಸಹಕಾರ ಹಾಗೂ ಪ್ರೋತ್ಸಾಹ  ನೀಡಿದ್ದಾರೆ. ಶ್ರೀಮತಿ. ಲಕ್ಷ್ಮಿ ಹಾಗೂ ಶ್ರೀ.ರಮಣಿಯವರಿಗೆ ಕುಮಾರಿ ಸಾಯಿ ಜನನಿ ಎಂಬ ಮುದ್ದಾದ ಒಬ್ಬ ಮಗಳಿದ್ದಾಳೆ. 

ಯಾವ ರೀತಿಯ ಪ್ರಚಾರವನ್ನೂ ಇಷ್ಟ ಪಡದ ಶ್ರೀ.ಕೆ.ವಿ.ರಮಣಿಯವರೊಂದಿಗೆ ಸಂವಾದಕ್ಕೆ ತೊಡಗುವುದು ಬಹಳ ಮುದ ನೀಡುತ್ತದೆ. ಶ್ರೀ.ರಮಣಿಯವರ ಮತ್ತೊಂದು ಮಹೋನ್ನತ ಗುಣವೆಂದರೆ ಅವರು ದಾನ-ಧರ್ಮ ಮಾಡುವುದರಲ್ಲಿ ಎತ್ತಿದ ಕೈ.

ಶ್ರೀ.ಕೆ.ವಿ.ರಮಣಿಯವರು ಮೈಲಾಪುರದ ಸಾಯಿಬಾಬಾ ಮಂದಿರಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರೂ ಸಹ ಬಾಬಾರವರ ಪೂಜೆಯನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ 1977ನೇ ಇಸವಿಯಲ್ಲಿ  ಶ್ರೀ.ಕೆ.ವಿ.ರಮಣಿಯವರ ಜೀವನವು ಬಹಳವೇ ಮಹತ್ವದ ತಿರುವನ್ನು ಪಡೆಯಿತು. ಅವರ ಸಂಬಂಧಿಕರೊಬ್ಬರು ತೀವ್ರ ಖಾಯಿಲೆಗೆ ತುತ್ತಾಗಿ ಒಂದು ವಾರಗಳ ಕಾಲದಿಂದ  ಹಾಸಿಗೆ ಹಿಡಿದಿದ್ದರು. ತಜ್ಞ ವೈದ್ಯರುಗಳನ್ನು ಕರೆಯಿಸಿ ಅವರುಗಳು ಅತ್ಯುತ್ತಮ ಚಿಕಿತ್ಸೆಯನ್ನು ನೀಡಿದರೂ ಸಹ ಯಾವುದೇ ಉಪಯೋಗವಾಗಲಿಲ್ಲ. ಕೊನೆಗೆ ವೈದ್ಯರುಗಳು ಅವರು ಬದುಕುಳಿಯುವ ಎಲ್ಲಾ ಭರವಸೆಯನ್ನೂ ಕಳೆದುಕೊಂಡರು.  ಆದರೆ ಹೇಗಾದರೂ ಮಾಡಿ ಆ ಬಂಧುವನ್ನು ಸಾವಿನ ದವಡೆಯಿಂದ ಪಾರು ಮಾಡಲೇ ಬೇಕಾಗಿತ್ತು. ಆದರೆ ಕುಟುಂಬದವರಿಗೆ ಏನು ಮಾಡಬೇಕೆಂದು ತೋಚಲಿಲ್ಲ.  ಆಗ ಶ್ರೀ.ಕೆ.ವಿ.ರಮಣಿಯವರ ಮನದಲ್ಲಿ  ಬಾಬಾರವರಲ್ಲಿ ಪ್ರಾರ್ಥನೆ ಮಾಡಿ ಮೊರೆ ಹೋಗುವ ಆಲೋಚನೆ ಮಿಂಚಿನಂತೆ ಹೊಳೆಯಿತು.  ಅಂತೆಯೇ ಶ್ರೀ.ಕೆ.ವಿ.ರಮಣಿಯವರು ಸ್ವಲ್ಪವೂ ತಡಮಾಡದೆ ತಮ್ಮ ಹೃದಯಾಂತರಾಳದಿಂದ ಸಾವಿನ ದವಡೆಯಲ್ಲಿರುವ  ತಮ್ಮ ಬಂಧುವನ್ನು ಉಳಿಸುವಂತೆ ಬಾಬಾರವರನ್ನು ಬೇಡಿಕೊಂಡರು.  ಅಲ್ಲದೇ  ಹಾಗೇನಾದರೂ ತಮ್ಮ ಬಂಧುವು ಬದುಕುಳಿದಲ್ಲಿ ಪ್ರತಿ ಗುರುವಾರ ಬಾಬಾ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸುವೆನೆಂದು ಹರಕೆಯನ್ನು ಸಹ ಮಾಡಿಕೊಂಡರು. ಅಗೋ! ಸಾಯಿಬಾಬಾರವರು ಶ್ರೀ.ಕೆ.ವಿ.ರಮಣಿಯವರ ಪ್ರಾರ್ಥನೆಗೆ ಕೂಡಲೇ ಸ್ಪಂದಿಸಿ ಅವರ ಬಂಧು ಸಂಪೂರ್ಣವಾಗಿ ಗುಣಮುಖರಾದರು. ಇನ್ನೂ ಆಶ್ಚರ್ಯದ ವಿಷಯವೇನೆಂದರೆ ಶ್ರೀ.ಕೆ.ವಿ.ರಮಣಿಯವರು ಆ ದಿನ ಸಂಜೆ 6 ಗಂಟೆಯ ಸಮಯದಲ್ಲಿ ಬಾಬಾರವರಿಗೆ ಪ್ರಾರ್ಥನೆ ಸಲ್ಲಿಸಿದರು. ಹಾಗೆ ಅವರು ಪ್ರಾರ್ಥನೆ ಸಲ್ಲಿಸಿ ಕೇವಲ ಎರಡು ಗಂಟೆಗಳ ನಂತರ ಅಂದರೆ 8 ಗಂಟೆಗೆ ಅವರ ಬಂಧುವು ಸಂಪೂರ್ಣ ಗುಣಮುಖರಾಗಿ ಅದೇ ದಿನ ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರು. 

ಆ ದಿನದಿಂದಲೇ ಶ್ರೀ.ಕೆ.ವಿ.ರಮಣಿಯವರಿಗೆ ಸಾಯಿಬಾಬಾರವರ ಮೇಲಿದ್ದ ಭಕ್ತಿ ನೂರ್ಮಡಿಯಾಯಿತು. ಆಗಿನಿಂದ ಅವರು ಪ್ರತಿ ಗುರುವಾರ ತಪ್ಪದೇ ಬಾಬಾ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಅವರು ವಿದೇಶಕ್ಕೆ ಹೋಗಬೇಕಾದ ಸಂದರ್ಭಗಳಲ್ಲಿ ಹಾಗೂ ಅನಿವಾರ್ಯ ಕಾರಣಗಳಿಂದಾಗಿ  ಗುರುವಾರದಂದು  ಸಾಯಿ ಮಂದಿರಕ್ಕೆ ಹೋಗಲು ಆಗದೇ ಇದ್ದಾಗ ಅವರಿರುವ ಸ್ಥಳದಿಂದಲೇ ಬಾಬಾರವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ತಾವು ಬಾಬಾರವರ ಭಕ್ತರಾಗಿ ರೂಪುಗೊಳ್ಳುವುದಕ್ಕೆ ಮೊದಲು ಅವರ ವ್ಯಕ್ತಿತ್ವವು ಬೇರೆಯೇ ಆಗಿತ್ತೆಂದೂ   ಹಾಗೂ ಸಾಯಿಬಾಬಾರವರು ತಮ್ಮ ಜೀವನದಲ್ಲಿ ಪ್ರವೇಶಿಸಿ ತಾವು ಬಾಬಾರವರ ಪೂಜೆಯನ್ನು ಮಾಡಲು ಪ್ರಾರಂಭಿಸಿದ ಮೇಲೆ ಅವರ ವ್ಯಕ್ತಿತ್ವವು ಸಂಪೂರ್ಣವಾಗಿ ಬೇರೆಯೇ ಆಗಿರುವುದಾಗಿ ಅವರು ಒಪ್ಪಿಕೊಳ್ಳುತ್ತಾರೆ.

ಶ್ರೀ.ಕೆ.ವಿ.ರಮಣಿಯವರ ತಂದೆಯವರ ತಮ್ಮನವರಾದ ಶ್ರೀ.ರಾಮಮುರ್ತಿಯವರು ಸಿಕಂದರಾಬಾದ್ ನಲ್ಲಿ ವಾಸಿಸುತ್ತಿದ್ದು ಅನನ್ಯ ಸಾಯಿ ಭಕ್ತರಾಗಿದ್ದಾರೆ ಹಾಗೂ ಪ್ರತಿ ಗುರುವಾರಗಳಂದು ತಮ್ಮ ಸ್ವಗೃಹದಲ್ಲಿಯೇ ಬಾಬಾರವರ ಪೂಜೆ, ಭಜನೆ ಹಾಗೂ ಆರತಿಯನ್ನು ತಪ್ಪದೇ ಮಾಡುತ್ತಾ ಬಂದಿದ್ದಾರೆ.

ಶ್ರೀ.ಕೆ.ವಿ.ರಮಣಿಯವರು 1970ನೇ ಇಸವಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. 1971 ರಿಂದ  1985 ರವರೆಗೆ ಸಾಫ್ಟ್ ವೇರ್ ದಿಗ್ಗಜರಾದ  ಐ.ಬಿ.ಎಂ.ನಲ್ಲಿ ಸಾಫ್ಟ್ ವೇರ್ ಸಿಸ್ಟಮ್ಸ್ ಅನಾಲಿಸಿಸ್ ಅಂಡ್ ಡಿಜೈನ್ ನಲ್ಲಿ  ಪ್ರೋಗ್ರಾಮರ್ ಆಗಿ ಸೇರಿಕೊಂಡು ದಿನೇ ದಿನೇ ಬೆಳೆಯುತ್ತಾ ಹೋಗಿ ಬಹಳ ಬೇಗನೇ ಮ್ಯಾನೇಜರ್ ಹುದ್ದೆಯನ್ನು ಅಲಂಕರಿಸಿದರು. ನಂತರ 1985ನೇ ಇಸವಿಯಲ್ಲಿ ದೂರಸಂಪರ್ಕ ಮತ್ತು ನೆಟ್ ವರ್ಕಿಂಗ್ ಸಾಫ್ಟ್ ವೇರ್  ಉತ್ಪನ್ನಗಳು ಹಾಗೂ ಸಲುಶನ್ಸ್ ಅನ್ನು ನೀಡುವ ಸಲುವಾಗಿ  ಫ್ಯೂಚರ್ ಸಾಫ್ಟ್ ವೇರ್ (FutureSoft) ಎಂಬ ಹೆಸರಿನ ತಮ್ಮದೇ ಆದ  ಸಂಸ್ಥೆಯನ್ನು ಹುಟ್ಟುಹಾಕಿದರು. ಬಳಿಕ 1990ನೇ ಇಸವಿಯಲ್ಲಿ ಅಮೇರಿಕಾದ ಸಾಫ್ಟ್ ವೇರ್ ದಿಗ್ಗಜರಾದ ಹ್ಯೂಸ್  ಸಾಫ್ಟ್ ವೇರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ದೂರಸಂಪರ್ಕ ತಂತ್ರಾಂಶ ಸಂಸ್ಥೆಯಾದ  "ಹ್ಯೂಸ್ ಸಾಫ್ಟ್ ವೇರ್ ಸಿಸ್ಟಮ್ಸ್" ಅನ್ನು ದೆಹಲಿಯಲ್ಲಿ ಪ್ರಾರಂಭಿಸಿದರು. 

ಈ ನಡುವೆ 1989ನೇ ಇಸವಿಯಲ್ಲಿ ಆರು ಸಾಫ್ಟ್ ವೇರ್ ಸಂಸ್ಥೆಗಳ ದಿಗ್ಗಜರೊಂದಿಗೆ ಸೇರಿಕೊಂಡು ಶ್ರೀ.ಕೆ.ವಿ.ರಮಣಿಯವರು ಸಾಫ್ಟ್ ವೇರ್ ಉದ್ಯಮದ ಬೆಳವಣಿಗೆಗೆ  ಸಹಾಯ ಮತ್ತು ಸಹಕಾರ ನೀಡುವ ನಿಟ್ಟಿನಲ್ಲಿ ನಾಸ್ಕಾಮ್ NASSCOM ಅನ್ನು ಪ್ರಾರಂಭಿಸಲು ಕಾರಣಕರ್ತರಾದರು. ಭಾರತವು ಪ್ರಪಂಚದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಇಂದು ಒಳ್ಳೆಯ ಹೆಸರು ಮಾಡಿರುವುದಕ್ಕೆ ಪ್ರಮುಖ ಕಾರಣವಾಗಿ ಈ ನಾಸ್ಕಾಮ್ NASSCOM ಕಾರಣೀಭೂತವಾಗಿರುವುದು ಬಹಳ ಸಂತೋಷದ ವಿಷಯವಾಗಿದೆ.  ಈ ರೀತಿಯಲ್ಲಿ ಶ್ರೀ.ಕೆ.ವಿ.ರಮಣಿಯವರು  1997-98 ರಲ್ಲಿ ನಾಸ್ಕಾಮ್ ನ  NASSCOM ಸಂಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಶ್ರೀ.ಕೆ.ವಿ.ರಮಣಿಯವರು ನಾಸ್ಕಾಮ್ ನ ಅಧ್ಯಕ್ಷರಾಗಿರುವ ಸಮಯದಲ್ಲಿ ಅವರು ಸಾಫ್ಟ್ ವೇರ್ ಸಂಸ್ಥೆಗಳು ಸಾಫ್ಟ್ ವೇರ್ ಉತ್ಪನ್ನಗಳನ್ನು ಮಾಡುವ ನಿಟ್ಟಿನಲ್ಲಿ ಹೆಚ್ಚಿನ  ಗಮನ ಹರಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಆ ಸಮಯದಲ್ಲಿ ಶ್ರೀ.ಕೆ.ವಿ.ರಮಣಿಯವರ ಹಾಗೂ ಅವರ ಸಂಸ್ಥೆಯ ಹೆಸರು ಆಕಾಶದ ಎತ್ತರಕ್ಕೆ  ಏರಿತ್ತು. ಆದರೆ ಶ್ರೀ. ರಮಣಿಯವರು ಆ ಸಮಯದಲ್ಲಿ ತಾವು ಹಾಗೂ ತಮ್ಮ ಸಂಸ್ಥೆ ಗಳಿಸಿದ ಹೆಸರಿಗೆ ಕೇವಲ ಸಾಯಿಬಾಬಾರವರ ಆಶೀರ್ವಾದ ಹಾಗೂ ಅನುಗ್ರಹ ಮಾತ್ರವೇ ಕಾರಣವೆಂದು  ನಮ್ರತೆಯಿಂದ ಹೇಳುತ್ತಾರೆ. "ಸಾಯಿಬಾಬಾರವರು ಸದ್ಗುರುವಾಗಿ ತಮ್ಮ ಭಕ್ತರನ್ನು ಒಂದೊಂದೇ ಹೆಜ್ಜೆ ಬೆಳೆಸುತ್ತಲೇ ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡಿ ಅವರು ತಮ್ಮ ಜೀವನದಲ್ಲಿ ಯಶಸ್ಸು ಕಾಣುವಂತೆ ಮಾಡುತ್ತಾರೆ" ಎಂದು ವಿನೀತ ಭಾವದಿಂದ ಶ್ರೀ.ರಮಣಿಯವರು ನುಡಿಯುತ್ತಾರೆ.

ಜನವರಿ 2001 ರಿಂದ ಮಾರ್ಚ್ 2003 ರವರೆಗೆ ಶ್ರೀ.ಕೆ.ವಿ.ರಮಣಿಯವರು ಚೆನ್ನೈನ ದಿ ಇಂಡಸ್ ಎಂಟರ್ ಪ್ರೈಸಸ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.  ಈ ಸಂಸ್ಥೆಯ ಮುಖಾಂತರ ಅವರು ತಮಿಳುನಾಡು ರಾಜ್ಯದಲ್ಲಿ ಹೊಸ ವಾಣಿಜ್ಯೋದ್ಯಮಿಗಳು ಹೊರಬರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಅಷ್ಟೇ ಅಲ್ಲದೇ ತಮಿಳುನಾಡು ರಾಜ್ಯದಾದ್ಯಂತ ಹಲವಾರು ಧಾರ್ಮಿಕ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

 ಶಿರಡಿ ಸಾಯಿಬಾಬಾರವರ ಜೀವನ ಹಾಗೂ ತತ್ವಗಳನ್ನು ಪ್ರಚಾರ ಮಾಡುವ ಸಲುವಾಗಿ ಶ್ರೀ.ಕೆ.ವಿ.ರಮಣಿಯವರು  ಚೆನ್ನೈನಲ್ಲಿ ಶ್ರೀ ಸಾಯಿ ಟ್ರಸ್ಟ್ ಹಾಗೂ ಶಿರಡಿ ಸಾಯಿ ಟ್ರಸ್ಟ್ ಎಂಬ ಹೆಸರಿನಲ್ಲಿ ಎರಡು ಟ್ರಸ್ಟ್ ಗಳನ್ನು ಸ್ಥಾಪಿಸಿದ್ದಾರೆ. ಶ್ರೀ ಸಾಯಿ ಟ್ರಸ್ಟ್ ಅನ್ನು 1993 ರಲ್ಲಿ ಪ್ರಾರಂಭಿಸಿದರೆ ಶಿರಡಿ ಸಾಯಿ ಟ್ರಸ್ಟ್ ಅನ್ನು 1996 ರಲ್ಲಿ ಪ್ರಾರಂಭಿಸಲಾಯಿತು. ಈ ಎರಡೂ ಟ್ರಸ್ಟ್ ಗಳನ್ನು ಅವರು ತಮ್ಮ ಧರ್ಮ ಹಾಗೂ ಕರ್ಮಗಳನ್ನು ಪೂರ್ಣಗೊಳಿಸುವ ಸಲುವಾಗಿ ಸಾಯಿಬಾಬಾರವರ ಆಜ್ಞೆಯ ಮೇರೆಗೆ ಪ್ರಾರಂಭಿಸಿದ್ದಾರೆ. ಅಂತೆಯೇ ಅವರು ಬಾಬಾರವರ ಆಜ್ಞೆಯಂತೆ  ತಮಗೆ ಪ್ರತಿ ತಿಂಗಳೂ ಬರುವ ವರಮಾನದ ಒಂದು ಭಾಗವನ್ನು ಬೇರೆಯೇ ತೆಗೆದಿರಿಸಿ ಈ ಟ್ರಸ್ಟ್ ಗಳ ಮುಖಾಂತರ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮೊದಲಿಗೆ ಟ್ರಸ್ಟ್ ನ ಕೆಲಸಗಳನ್ನು ಶನಿವಾರ ಮತ್ತು ಭಾನುವಾರಗಳಂದು ತಮ್ಮ ಮನೆಯಿಂದಲೇ ಮಾಡುತ್ತಿದ್ದರು. ಆದರೆ ಟ್ರಸ್ಟ್ ನ ಕಾರ್ಯಚಟುವಟಿಕೆಗಳು ಹೆಚ್ಚಾದಂತೆಲ್ಲಾ ಮನೆಯಿಂದ ಮಾಡುವುದು ಕಷ್ಟವಾಗತೊಡಗಿತು. ಹಾಗಾಗಿ ಅವರು ತಮ್ಮ ಟ್ರಸ್ಟ್ ಅನ್ನು ಕೃಷ್ಣನ್ ಕರಣೈ ಎಂಬ ಸ್ಥಳಕ್ಕೆ ವರ್ಗಾಯಿಸಿ ಅದಕ್ಕೆ ಬೇಕಾದ ಸಿಬ್ಬಂದಿಗಳನ್ನು ನೇಮಕ ಮಾಡಿ ಅವರ ಸಹಾಯದಿಂದ ತಮ್ಮ ಆಧ್ಯಾತ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅಲ್ಲದೇ ಚೆನ್ನೈ ಬಳಿಯಿರುವ ಕೃಷ್ಣನ್ ಕರಣೈನಲ್ಲಿ ಸಾಯಿಬಾಬಾರವರ ಬೃಹತ್  ಧ್ಯಾನ ಮಂದಿರವನ್ನು ನಿರ್ಮಾಣ ಮಾಡಲಾಗಿದ್ದು ಅದು  3ನೇ ಏಪ್ರಿಲ್ 2003 ಅಂದು ಉದ್ಘಾಟನೆಗೊಂಡಿತು. 

ಟ್ರಸ್ಟ್ ಗಳನ್ನು ಹುಟ್ಟುಹಾಕಿದ ದಿನದಿಂದ ಶ್ರೀ.ರಮಣಿಯವರು ತಮ್ಮ ಮಾಸಿಕ ವರಮಾನದ ಒಂದು ಭಾಗವನ್ನು ಟ್ರಸ್ಟ್ ಗೆ ನೀಡುತ್ತಾ ಬಂದಿದ್ದಾರೆ. ಅಲ್ಲದೇ ಸಾಯಿಬಾಬಾರವರ ಆಜ್ಞೆಯ ಮೇರೆಗೆ ಬೇರೆ ಯಾವುದೇ ಟ್ರಸ್ಟ್ ಗಳಿಂದಾಗಲೀ ಅಥವಾ ವ್ಯಕ್ತಿಗಳಿಂದಾಗಲೀ  ಈ ಎರಡೂ ಟ್ರಸ್ಟ್ ಗಳನ್ನೂ ನಡೆಸುವ ಸಲುವಾಗಿ ಇವರು ದೇಣಿಗೆಯನ್ನು ಸ್ವೀಕರಿಸುತ್ತಿಲ್ಲ. 2004ನೇ ಇಸವಿಯಲ್ಲಿ ತಮ್ಮ ಎರಡೂ ಸಾಫ್ಟ್ ವೇರ್ ಸಂಸ್ಥೆಗಳಲ್ಲಿನ ತಮ್ಮ ಒಡೆತನವನ್ನು ಬಹಳ ಒಳ್ಳೆಯ ಬೆಲೆಗೆ ಮಾರಿದರು. ಸಾಯಿಬಾಬಾರವರ ಆಶೀರ್ವಾದದಿಂದ ಮುಂದಿನ 3 ಪೀಳಿಗೆಗೆ ಆಗುವಷ್ಟು ಸಂಪತ್ತು ಇವರ ಬಳಿ ಇರುವ ಕಾರಣದಿಂದಾಗಿ ತಮ್ಮ ಆ ಸಂಸ್ಥೆಗಳಿಂದ ಬಂದ ಲಾಭದ ಹಣದ ಶೇಕಡಾ 80 ರಷ್ಟನ್ನು ಟ್ರಸ್ಟ್ ಗೆ ದಾನವಾಗಿ ನೀಡಿ ಉಳಿದ ಶೇಕಡಾ 20 ರಷ್ಟನ್ನು ತಮ್ಮ ಕುಟುಂಬದ ನಿರ್ವಹಣೆಗಾಗಿ ಇಟ್ಟುಕೊಂಡಿದ್ದಾರೆ. ಎರಡೂ ಟ್ರಸ್ಟ್ ಗಳಿಗೆ ಈ ರೀತಿಯಲ್ಲಿ ಬಹಳ ದೊಡ್ಡ ಮೊತ್ತದ ಹಣ ಹರಿದುಬಂದಿದ್ದರಿಂದ ಟ್ರಸ್ಟ್ ಗಳು ಆರ್ಥಿಕ ಸಬಲತೆಯನ್ನು ಗಳಿಸಿದವು. 

ಶಿರಡಿ ಸಾಯಿ ಟ್ರಸ್ಟ್ ಭಾರತದಲ್ಲಿ ಸಾಯಿಬಾಬಾ  ಮಂದಿರವನ್ನು ನಿರ್ಮಾಣ ಮಾಡಬೇಕೆಂದಿರುವ ಸಾರ್ವಜನಿಕ  ಸಂಸ್ಥೆಗಳು ಹಾಗೂ ಸಾಮಾಜಿಕ ಸಂಸ್ಥೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅವರಿಗೆ ಸಹಾಯ ಮಾಡುತ್ತಾ ಬಂದಿದೆ. ಇಲ್ಲಿಯವರೆಗೂ ಭಾರತದಾದ್ಯಂತ ಸುಮಾರು  450 ಸಾಯಿಬಾಬಾ ಮಂದಿರಗಳಿಗೆ ಭಾಗಶಃ ದನಸಹಾಯ ಮಾಡಿ ಅವುಗಳು  ತಲೆ ಎತ್ತುವಲ್ಲಿ ಶಿರಡಿ ಸಾಯಿ ಟ್ರಸ್ಟ್ ಪ್ರಮುಖ ಪಾತ್ರವನ್ನು ವಹಿಸಿದೆ. ಅಲ್ಲದೆ ಅನೇಕ ಬಾಬಾ ಮಂದಿರಗಳಿಗೆ ಸಾಯಿಬಾಬಾರವರ ವಿಗ್ರಹವನ್ನು ಟ್ರಸ್ಟ್ ನೀಡಿರುತ್ತದೆ. ಅಲ್ಲದೆ ಈ ಸಾಯಿಬಾಬಾ ಮಂದಿರಗಳ ಮುಖಾಂತರ ಬಡಬಗ್ಗರಿಗೆ  ಅನ್ನದಾನ, ವಿದ್ಯಾದಾನ ಹಾಗೂ ವೈದ್ಯಕೀಯ ಸಹಾಯವನ್ನು ಟ್ರಸ್ಟ್ ನೀಡುತ್ತಿದೆ. ಪ್ರಸ್ತುತ ಸುಮಾರು 10,000 ಬಡಬಗ್ಗರಿಗೆ ಪ್ರತಿನಿತ್ಯ  ಬೆಳಿಗ್ಗೆ ಹಾಗೂ ರಾತ್ರಿ ಭೋಜನವನ್ನು ಟ್ರಸ್ಟ್ ವ್ಯವಸ್ಥೆ ಮಾಡಿರುತ್ತದೆ. ಟ್ರಸ್ಟ್ ನಿಗದಿತ ಕೆಲವು ಸಾಯಿಬಾಬಾ ಮಂದಿರಗಳು, ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳು, ವೃದ್ಧಾಶ್ರಮಗಳು ಹಾಗೂ ಅನಾಥಾಶ್ರಮಗಳ ಮುಖಾಂತರ ಶಿಕ್ಷಣ ಮತ್ತು ವೈದ್ಯಕೀಯ ಸಹಾಯವನ್ನು ಬಡತನದೆ ರೇಖೆಗಿಂತ ಕೆಳಗಿರುವ ಜನರಿಗಾಗಿ ನೀಡುತ್ತಿದೆ. ಈ ರೀತಿಯ ಸಹಾಯವನ್ನು ನೇರವಾಗಿ ವ್ಯಕ್ತಿಗಳಿಗೆ ನೀಡದೆ ಬದಲಿಗೆ ಸಾಯಿಬಾಬಾ ಮಂದಿರಗಳು, ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳು, ವೃದ್ಧಾಶ್ರಮಗಳು ಹಾಗೂ ಅನಾಥಾಶ್ರಮಗಳು ಸರಿಯಾಗಿ ಪರಿಶೀಲನೆ ಮಾಡಿದ ನಂತರ ಚೆನ್ನೈ ನ ಶಿರಡಿ ಸಾಯಿ ಟ್ರಸ್ಟ್ ನ ಪದಾಧಿಕಾರಿಗಳು ಕೂಡ ಪರಿಶೀಲನೆ ಮಾಡಿದ ನಂತರವಷ್ಟೇ ನೀಡುವ ಒಳ್ಳೆಯ ಸಂಪ್ರದಾಯವನ್ನು ಟ್ರಸ್ಟ್ ಬೆಳೆಸಿಕೊಂಡು ಬಂದಿದೆ. ಈ ರೀತಿಯ ಸಹಾಯವನ್ನು ಅರ್ಹತೆ ಹಾಗೂ ಅಗತ್ಯತೆಯ ಆಧಾರದ ಮೇಲೆ ಕಷ್ಟದಲ್ಲಿರುವವರಿಗೆ ಮಾತ್ರ ನೀಡಲಾಗುತ್ತಿದೆ.

ಶ್ರೀ.ಕೆ.ವಿ.ರಮಣಿಯವರು ಶಿರಡಿ ಸಾಯಿ ಟ್ರಸ್ಟ್, ಚೆನ್ನೈನ ಮುಖಾಂತರ ಶಿರಡಿಗೆ ಬರುವ ಯಾತ್ರಿಕರು ಉಳಿದುಕೊಳ್ಳಲು ಅನುಕೂಲವಾಗಲೆಂದು ನಿರ್ಮಿಸಿದ "ಸಾಯಿ ಆಶ್ರಮ"  ಹಂತ- I ಮತ್ತು ಹಂತ-II ನ್ನು ನಿರ್ಮಾಣ ಮಾಡುವ ಸಲುವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ  112 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ದೇಣಿಗೆಯಾಗಿ ನೀಡಿರುವುದು ಒಂದು ವಿಶ್ವದಾಖಲೆಯೇ ಸರಿ!  ಶ್ರೀ ಸಾಯಿಬಾಬಾ ಸಂಸ್ಥಾನವು ಅದಕ್ಕೆ ಬೇಕಾದ ಭೂಮಿಯನ್ನು ಒದಗಿಸುವುದಷ್ಟೇ ಅಲ್ಲದೇ ತನ್ನ ಕಡೆಯಿಂದ ಬಾಹ್ಯ ಸೌಕರ್ಯ ಹಾಗೂ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿಗಳನ್ನು ನೀಡಿದೆ. ಶ್ರೀ.ಕೆ.ವಿ.ರಮಣಿಯವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ಸಹ ಪ್ರಾರಂಭವಾದ ದಿನದಿಂದ ಕೊನೆಯವರೆಗೂ ತಾವೇ ಸ್ವತಃ  ನಿಂತು ನಿರ್ಮಾಣ ಕಾರ್ಯದ ಮೇಲ್ವಿಚಾರಣೆಯನ್ನು ಖುದ್ದಾಗಿ ಪರಿಶೀಲಿಸಿ, ಯಶಸ್ವಿಯಾಗಿ ಪೂರ್ಣಗೊಳಿಸಿ 24ನೇ ಅಕ್ಟೋಬರ್ 2012 ರ ಪರಮ ಪವಿತ್ರ ವಿಜಯದಶಮಿಯ ದಿನದಂದು ಮಧ್ಯಾನ್ಹ ಬಾಬಾರವರ ನಿರ್ವಾಣ ಸಮಯಕ್ಕೆ ಸರಿಯಾಗಿ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರ ಮಾಡಿರುತ್ತಾರೆ. ಆಶ್ಚರ್ಯದ ವಿಷಯವೇನೆಂದರೆ ಶ್ರೀ.ಕೆ.ವಿ.ರಮಣಿಯವರು ಅಷ್ಟು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದರೂ ಸಹ ತಮಗಾಗಲೀ ಅಥವಾ ತಮ್ಮ ಟ್ರಸ್ಟ್ ಗಾಗಲೀ ಒಂದೇ ಒಂದು ಕೊಠಡಿಯನ್ನು ಸಹ ಕಾದಿರಿಸದೇ ಬದಲಿಗೆ ಸಂಪೂರ್ಣ ಆಡಳಿತ, ಕೋಣೆಯ ಕಾದಿರಿಸುವಿಕೆ ಹಾಗೂ ಸಂಪೂರ್ಣ ನಿರ್ವಹಣೆಯನ್ನು ಯಾವುದೇ ಷರತ್ತುಗಳಿಲ್ಲದೆ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ! 

ಸಾಯಿ ಆಶ್ರಮ  ಹಂತ- I  ರಲ್ಲಿ 1536  ಕೊಠಡಿಗಳಿದ್ದು  ಅದರಲ್ಲಿ  384 ಹವಾ ನಿಯಂತ್ರಿತ ಹಾಗೂ 1152 ಸಾಮಾನ್ಯ ಕೊಠಡಿಗಳಿರುತ್ತವೆ. ಏಕಕಾಲಕ್ಕೆ ಸುಮಾರು 9000 ಯಾತ್ರಿಕರು ಈ ಕೊಠಡಿಗಳಲ್ಲಿ ತಂಗಬಹುದಾಗಿದೆ. ಸಾಯಿ ಆಶ್ರಮ ಹಂತ-II ರಲ್ಲಿ 192 ದೊಡ್ಡ ಹಾಲ್  ಗಳಿದ್ದು ಸುಮಾರು 5000 ಯಾತ್ರಿಕರು ಇಲ್ಲಿ ಉಳಿದುಕೊಳ್ಳಬಹುದಾಗಿದೆ.

ಈ ರೀತಿಯಲ್ಲಿ ಸಾಯಿಬಾಬಾರವರು ಶ್ರೀ.ಕೆ.ವಿ.ರಮಣಿ ಎಂಬ ಗುಬ್ಬಚ್ಚಿಯನ್ನು ತಮ್ಮೆಡೆ ಸೆಳೆದುಕೊಂಡು ಕಳೆದ 36ಕ್ಕೂ ಹೆಚ್ಚು ವರ್ಷಗಳಿಂದ  ಅವರ ಲೌಕಿಕ ಹಾಗೂ ಆಧ್ಯಾತ್ಮಿಕ ಯೋಗಕ್ಷೇಮವನ್ನು ಎಡಬಿಡದೆ ನೋಡಿಕೊಳ್ಳುತ್ತಿದ್ದಾರೆ. 

ಕೊನೆಯದಾಗಿ ಹೇಳಬೇಕೆಂದರೆ  ಶ್ರೀ.ಕೆ.ವಿ.ರಮಣಿಯವರು ಸಾಯಿಭಕ್ತಾಗ್ರಗಣ್ಯ ಹಾಗೂ ಕಲಿಯುಗ ಕರ್ಣ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಸಾಯಿ ಭಕ್ತರ ಪರಂಪರೆಯು ಮತ್ತಷ್ಟು ಹೆಚ್ಚು ಬೆಳೆಯಲಿ ಎಂದು ನಾವುಗಳೆಲ್ಲರೂ ಆಶಿಸೋಣವೇ?

(ಆಧಾರ: ಶ್ರೀ ಸಾಯಿ ಲೀಲಾ ಪತ್ರಿಕೆ, ನವೆಂಬರ್-ಡಿಸೆಂಬರ್ 2013 ಸಂಚಿಕೆ ಮತ್ತು  http://kvramani.com/index.php)

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment