Thursday, June 26, 2014

ಶ್ರೀ ಶಿರಡಿ ಸಾಯಿಬಾಬಾರವರಿಗೆ ಬಹಳ ಪ್ರಿಯವಾದ ತುಕಾರಾಂ ರವರ ಅಭಂಗಗಳನ್ನು ಹಾಡಿದ ಖಾನ್ ಸಾಹೇಬ್ ಅಬ್ದುಲ್ ಕರೀಂ ಖಾನ್ - ಕೃಪೆ: ಸಾಯಿಅಮೃತಧಾರಾ.ಕಾಂ


ಬಾಬಾರವರು ಆಗಾಗ್ಗೆ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ಮೈಮರೆತು ಕುಣಿಯುತ್ತಿದ್ದರು. ಅವರು ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು.  ಈ ಕೆಳಗೆ ಬರುವ ಲೀಲೆಯು ಶಿರಡಿಯಲ್ಲಿ ಹತ್ತು ದಿನಗಳ ಕಾಲ ಬಾಬಾರವರು ಇರಿಸಿಕೊಂಡಿದ್ದ ಖ್ಯಾತ ಹಿಂದೂಸ್ತಾನಿ ಗಾಯಕರಿಗೆ ಸಂಬಂಧಿಸಿದ್ದಾಗಿದೆ. .

ಹಲವಾರು ಸಂಗೀತಗಾರರು, ಗಾಯಕರು ಹಾಗೂ ಇನ್ನು ಅನೇಕ ಪ್ರತಿಭೆಗಳನ್ನು ಹೊಂದಿದ್ದವರು ಬಾಬಾರವರ ದರ್ಬಾರಿಗೆ ಬಂದು ತಮ್ಮ ಕಲೆಯನ್ನು ಪ್ರದರ್ಶಿಸುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. ಬಾಬಾರವರಿಗೆ ಸಂಗೀತದ ಬಗ್ಗೆ ಹೆಚ್ಚಿನ ಒಲವು ಹಾಗೂ ಪರಿಜ್ಞಾನ ಇತ್ತು. ಖಾನ್ ಸಾಹೇಬ್ ಅಬ್ದುಲ್ ಕರೀಂ ಖಾನ್  ಅಂತಹ ಒಬ್ಬ ಮಹಾನ್ ಗಾಯಕರಾಗಿದ್ದರು. ಇವರು ಕಿರಾನಾ ಘರಾನ ದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪದವಿಯನ್ನು ಪಡೆದಿದ್ದರು. ಈ ಪ್ರತಿಭಾನ್ವಿತ ಗಾಯಕರು ಕಂಚಿನ ಕಂಠವನ್ನು ಹೊಂದಿದ್ದರು. ಅಲ್ಲದೇ ಬಹಳ ಬುದ್ಧಿವಂತರೂ ಕೂಡ ಆಗಿದ್ದರು.  ಇವರ ಹೆಸರು ದೇಶದ ಉದ್ದಗಲಕ್ಕೂ ಹರಡಿತ್ತು. 

1914ನೇ ಇಸವಿಯಲ್ಲಿ ಖಾನ್ ಸಾಹೇಬ್ ಅಬ್ದುಲ್ ಕರೀಂ ಖಾನ್ ರವರನ್ನು ಪ್ರತಾಪ್ ಶೇಟ್ ಎಂಬುವರು ಕಾರ್ಯಕ್ರಮವನ್ನು ನೀಡುವ ಸಲುವಾಗಿ ಅಮಲನೇರೆಗೆ ಬರಮಾಡಿಕೊಂಡಿದ್ದರು. ಆ ಕಾರ್ಯಕ್ರಮಕ್ಕೆ ಬಂದಿದ್ದ ಬಾಪುಸಾಹೇಬ್ ಬೂಟಿ ಮತ್ತಿತರ ಭಕ್ತರು ಅವರನ್ನು ಶಿರಡಿಗೆ ಬರುವಂತೆ ಆಹ್ವಾನಿಸಿದರು. ಹಾಗಾಗಿ ಖಾನ್ ಸಾಹೇಬ್ ತಮ್ಮ ಮಿಕ್ಕ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ  ಶಿರಡಿಗೆ ಭೇಟಿ ನೀಡಲು ನಿರ್ಧರಿಸಿದರು. ಅವರಿಗೆ ಸಂತರೆಂದರೆ ಮೊದಲಿನಿಂದಲೂ ಬಹಳ ಗೌರವವಿತ್ತು. ಹಾಗಾಗಿ ಶಿರಡಿಗೆ ತೆರಳಿ ಬಾಬಾರವರನ್ನು ಭೇಟಿ ಮಾಡಿ ಅವರಿಗೆ ತಮ್ಮ ಪ್ರಣಾಮಗಳನ್ನು ಸಲ್ಲಿಸಲು ನಿರ್ಧರಿಸಿದರು.  

ಅಂತೆಯೇ ಅವರು, ಅವರ ಶಿಷ್ಯ ವೃಂದ ಹಾಗೂ ಇತರ ಸಂಗೀತಗಾರರು ಶಿರಡಿಗೆ ಭೇಟಿ ನೀಡಿದರು. ಅಲ್ಲಿ ಅವರು ತಾತ್ಯಾ ಕೋತೆ ಪಾಟೀಲ್ ರವರ ಮನೆಯ ಹಜಾರದಲ್ಲಿ ಬೀಡು ಬಿಟ್ಟರು. ಆದಿನ ಸಂಜೆ ಎಂದಿನಂತೆ ದ್ವಾರಕಾಮಾಯಿಯಲ್ಲಿ ಭಜನೆ ನಡೆಯುತ್ತಿದ್ದಾಗ ಖಾನ್ ಸಾಹೇಬ್ ತಮ್ಮ ಸಹಗಾಯಕರ ಪಕ್ಕದಲ್ಲಿ ಕುಳಿತುಕೊಂಡಿದ್ದರು. ನಂತರ ಖಾನ್ ಸಾಹೇಬ್ ರವರು ಬಾಬಾರವರ ದರ್ಶನಕ್ಕೆಂದು  ತೆರಳಿದರು. ಬಾಬಾರವರು ಅವರನ್ನು ಆಶೀರ್ವದಿಸಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು. ನಂತರ ಬಾಬಾರವರು ತುಕಾರಾಂ ರವರ ಮರಾಠಿ ಅಭಂಗವೊಂದನ್ನು ಹಾಡುವಂತೆ ತಿಳಿಸಿದರು. ಆಗ ಖಾನ್ ಸಾಹೇಬ್ ರವರು ತಮ್ಮ ಸುಮಧುರ ಧ್ವನಿಯಲ್ಲಿ "ಹೇಚಿ ದಾನ ದೇಗ ದೇವಾ" ಎಂಬ ಸುಂದರ ಅಭಂಗವನ್ನು ಹಾಡಿದರು:



ಖಾನ್ ಸಾಹೇಬರು ಪೀಲು ರಾಗದಲ್ಲಿ ಹಾಡಿದ ಮೇಲಿನ ಈ ಅಭಂಗವನ್ನು ಬಾಬಾರವರು ಕಣ್ಣು ಮುಚ್ಚಿಕೊಂಡು ತನ್ಮಯರಾಗಿ ಆಲಿಸಿದರು. ನಂತರ ಬಾಬಾರವರು "ನಿನಗೇನು ವರ ಬೇಕು ಅದನ್ನು ಕೇಳಿಕೋ. ಈಗಲೇ ಶಿರಡಿಯನ್ನು ಬಿಟ್ಟು ಹೋಗುವ ಯೋಚನೆ ಮಾಡಬೇಡ. ನಿನ್ನ ಸಂಸಾರದ ಚಿಂತೆಯನ್ನು ಬಿಡು. ಎಲ್ಲವೂ ಒಳ್ಳೆಯದಾಗುತ್ತದೆ" ಎಂದು ನುಡಿದರು. ನಂತರ ತಾತ್ಯಾ ಕೋತೆ ಪಾಟೀಲರ ಕಡೆಗೆ ತಿರುಗಿ ಬಾಬಾರವರು "ಇವರೆಲ್ಲರಿಗೂ ಶಿರಡಿಯಲ್ಲಿ ಇರುವ ತನಕ ದೊರೆಗಳಿಗೆ ಆದರಿಸುವಂತೆ ಆದರಿಸು" ಎಂದು ಆದೇಶಿಸಿದರು. 

ಮಾರನೇ ದಿನ ಖಾನ್ ಸಾಹೇಬರಿಗೆ ಅವರ ಪತ್ನಿ ತಹರಾಬಾಯಿಯವರಿಂದ ಅವರ ಮಗಳಾದ ಗುಲಾಬಕಲಿಗೆ ಬಹಳವೇ ಹುಷಾರಿಲ್ಲವೆಂದು ಹಾಗೂ ಕೂಡಲೇ ಹೊರಟು ಬರುವಂತೆ ತಂತಿ ಬಂತು. ಖಾನ್ ಸಾಹೇಬರು ಆ ತಂತಿಯನ್ನು ಹಿಡಿದುಕೊಂಡು ಬಾಬಾರವರ ಬಳಿಗೆ ಬಂದವರೇ ಆ ತಂತಿಯನ್ನು ಅವರಿಗೆ ನೀಡಿದರು. ಬಾಬಾರವರು ಖಾನ್ ಸಾಹೇಬರಿಗೆ ಅಭಯವನ್ನು ನೀಡಿ ಅವರ ಪರಿವಾರದ ಸದಸ್ಯರನ್ನು ಶಿರಡಿಗೆ ಬರಹೇಳುವಂತೆ ತಿಳಿಸಿದರು. ಅಂತೆಯೇ ಖಾನ್ ಸಾಹೇಬರ ಪತ್ನಿ ಹಾಗೂ ಅವರ ಮಗಳು ಶಿರಡಿಗೆ ಬಂದರು.  ಖಾನ್ ಸಾಹೇಬರು ಸಾವಿನ ದವಡೆಯಲ್ಲಿದ್ದ ತಮ್ಮ ಮಗಳನ್ನು ಎತ್ತಿಕೊಂಡು ಬಂದವರೇ ಬಾಬಾರವರ ಚರಣಗಳಲ್ಲಿ ಇರಿಸಿದರು. 

ಬಾಬಾರವರು ತಮ್ಮ ಚಿಲುಮೆಯಿಂದ ಸ್ವಲ್ಪ ಬೂದಿಯನ್ನು ಹೊರ ತೆಗೆದು ಅದನ್ನು ಬೆಲ್ಲದೊಡನೆ ಬೆರೆಸಿದರು. ನಂತರ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಖಾನ್ ಸಾಹೇಬರ ಮಗಳಿಗೆ ಕುಡಿಯಲು ನೀಡಿದರು. ಈ ರೀತಿ ಎರಡು ದಿನಗಳು ಚಿಕಿತ್ಸೆಯನ್ನು ನೀಡಿದ ನಂತರ ಗುಲಾಬಕಲಿ ಎದ್ದು  ಓಡಾಡತೊಡಗಿದಳು. ಬಾಬಾರವರು ಖಾನ್ ಸಾಹೇಬ್ ಹಾಗೂ ಅವರ ಪರಿವಾರದವರನ್ನು ಹತ್ತು ದಿನಗಳ ಕಾಲ ಶಿರಡಿಯಲ್ಲೇ ಇರಿಸಿಕೊಂಡರು. 

ಈ ನಡುವೆ ಖಾನ್ ಸಾಹೇಬರು ಇತರ ಭಕ್ತರ ಬಳಿ "ಬಾಬಾರವರು ಇಷ್ಟಪಡುವ ಭಜನೆಗಳು ಯಾವುವು?" ಎಂದು ವಿಚಾರಿಸಿದರು. ನಂತರ ಆ ಭಜನೆಯಗಳನ್ನು ಕಲಿತು ಬಾಯಿಪಾಠ ಮಾಡಿಕೊಂಡು ಬಾಬಾರವರ ಮುಂದೆ ಹಾಡಲು ಸಿದ್ಧರಾದರು. 

ಖಾನ್ ಸಾಹೇಬರ ತಂಡದಲ್ಲಿ ಸುಮಾರು ಇಪ್ಪತ್ತು ಶಿಷ್ಯರು, ಗಾಯಕರು ಹಾಗೂ ವಾದ್ಯಗಾರರು ಇದ್ದರು. ಅವರೆಲ್ಲರೂ ತಾತ್ಯಾ ಕೋತೆ ಪಾಟೀಲರ ಮನೆಯಲ್ಲಿ ಬೀಡು ಬಿಟ್ಟಿದ್ದರು. ಹಾಗಾಗಿ ತಹರಾಬಾಯಿ ಶ್ರೀಮತಿ.ಕೋತೆ ಪಾಟೀಲರಿಗೆ ಅಡುಗೆ ಮತ್ತು ಮನೆ ಕೆಲಸದಲ್ಲಿ ಸಹಾಯ ಮಾಡುವುದಾಗಿ ಹೇಳಿ ಮುಂದೆ ಬಂದರು.  ಅದಕ್ಕೆ ಶ್ರೀಮತಿ.ಕೋತೆ ಪಾಟೀಲರು "ನೀವು ಹೇಳುವುದೇನೋ ಸರಿ. ಆದರೆ ನಿಮ್ಮ ಯೋಗಕ್ಷೇಮ ನೋಡಿಕೊಳ್ಳಬೇಕೆಂದು ಬಾಬಾರವರಿಂದ ನಮಗೆ ಆಜ್ಞೆಯಾಗಿದೆ. ನಿಮಗೇನು ಅಡುಗೆ ಇಷ್ಟವೆಂದು ತಿಳಿಸಿದಲ್ಲಿ ಅದನ್ನೇ ಮಾಡಿ ನಿಮಗೆ ಬಡಿಸುತ್ತೇನೆ" ಎಂದು ತಿಳಿಸಿದರು. ಆ ರಾತ್ರಿಯಂದು ತಹರಾಬಾಯಿಯವರು ದ್ವಾರಕಾಮಾಯಿಯಲ್ಲಿ ಬಾಬಾರವರ ಮುಂದೆ ಕೆಲವು ಭಜನೆಗಳನ್ನು ಹಾಡಿ ನಂತರ ಆರತಿಯಲ್ಲಿ ಬರುವ  "ಗಾಲೀನ ಲೋಟಾಂಗಣ" ವನ್ನು ಹಾಡಿ ತಮ್ಮ ಭಜನೆಯ ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಿದರು. ಇದರಿಂದ ಬಾಬಾರವರಿಗೆ ಬಹಳ ಸಂತೋಷವಾಯಿತು. 

ಶಿರಡಿಯಲ್ಲಿದ್ದಾಗ ಖಾನ್ ಸಾಹೇಬರಿಗೆ ಪುಣೆಯಲ್ಲಿದ್ದ ತಮ್ಮ ಸಂಗೀತ ಶಾಲೆಯ ಬಗ್ಗೆ ಚಿಂತೆ ಶುರುವಾಯಿತು. ಆಗ ಬಾಬಾರವರು ಅವರಿಗೆ ಅಭಯವನ್ನು ನೀಡಿ ಶಿರಡಿಯಿಂದ ಹೊರಡಲು ಅನುಮತಿ ನೀಡಿದರು. ಅವರು ಶಿರಡಿಯನ್ನು ಬಿಟ್ಟು ಹೊರಡುವಾಗ "ನಿನಗೆ ಶಿರಡಿಯನ್ನು ಬಿಟ್ಟು ಹೊರಡಲು ಅವಸರ ಇರುವಂತಿದೆ. ಆದರೆ, ನೀನು ಇಲ್ಲಿಂದ ಪುಣೆಗೆ ಹೋಗಬೇಡ. ಬದಲಿಗೆ ವರಾಹಡ್ ಗೆ ಹೋಗಿ ನೆಲೆಸು. ಏಕೆಂದರೆ ಅಲ್ಲಿ ಹತ್ತಿಯ ಗಿಡಗಳು ಚೆನ್ನಾಗಿ ಬೆಳೆದು ಒಳ್ಳೆಯ ಫಸಲನ್ನು ನೀಡುತ್ತಿದೆ" ಎಂದು ನುಡಿದರು. ನಂತರ ಖಾನ್ ಸಾಹೇಬರು ಬಾಬಾರವರ ಮುಂದೆ ಅವರು ಇಷ್ಟ ಪಡುವ ಹಲವು ಭಜನೆಗಳನ್ನು ಹಾಡಿದರು. ಅದರಲ್ಲೂ ಬಾಬಾರವರಿಗೆ ಅತ್ಯಂತ ಪ್ರಿಯವಾದ "ಜೇ ಕಾ ರಂಜಲೇ ಗಾಂಜಲೆ" ಎಂಬ ತುಕಾರಾಂ ರವರ ಅಭಂಗವನ್ನು ಹಾಗೂ "ಜೋಗಿಯ" ಎಂಬ ಅಕ್ಷರಗಳಿಂದ ಪ್ರಾರಂಭವಾಗುವ ಭಜನೆಗಳನ್ನು ಹಾಡಿದರು.


ಖಾನ್ ಸಾಹೇಬರು ಹೊರಡುವಾಗ ಬಾಬಾರವರು ಅವರ ಮೈದಡವಿ ಆಶೀರ್ವದಿಸಿ ಅವರಿಗೆ ಒಂದು ಬೆಳ್ಳಿಯ ನಾಣ್ಯವನ್ನು ನೀಡುತ್ತಾ "ಈ ಹಣವನ್ನು ಖರ್ಚು ಮಾಡದೇ ಸದಾ ನಿನ್ನ ಅಂಗಿಯ ಜೇಬಿನಲ್ಲಿ ಇರಿಸಿಕೋ" ಎಂದು ಹೇಳಿದರು. ನಂತರ ಅವರು ತಹರಾಬಾಯಿಯವರಿಗೆ 5 ರೂಪಾಯಿಗಳನ್ನು ನೀಡಿ ಅದನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಇರಿಸಿ ಜೋಪಾನ ಮಾಡುವಂತೆ ತಿಳಿಸಿದರು. ನಂತರ ಬಾಬಾರವರು ಸಿಹಿ ಪೇಡಾಗಳನ್ನು ತಮ್ಮ ಕೈಗೆತ್ತಿಕೊಂಡು ಆಕೆಯ ಸೀರೆಯ ಉಡಿಯಲ್ಲಿ ಹಾಕಿದರು.  “ಉಡಿ" ತುಂಬುವ ಸುಂದರ ಸಂಪ್ರದಾಯವು ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಪ್ರಚಲಿತದಲ್ಲಿದೆ. ಹಿರಿಯರು ಅಥವಾ ಗುರು ಸ್ವರೂಪರು ಮಹಿಳೆಯರ ಸೀರೆಯ ಉಡಿಯನ್ನು ತುಂಬಿ ಆಶೀರ್ವದಿಸುತ್ತಾರೆ. ಆ ಸಮಯದಲ್ಲಿ ಮಹಿಳೆಯರು ತಮ್ಮ ತಲೆಯನ್ನು ಸೀರೆಯ ಅಂಚಿನಿಂದ ಮುಚ್ಚಿಕೊಂಡು ಆ ಹಿರಿಯರಿಗೆ ತಮ್ಮ ಗೌರವವನ್ನು ಸೂಚಿಸುತ್ತಾರೆ. ಅಲ್ಲದೇ ಆ ಮಹಿಳೆಯರು ಕಿಬ್ಬೊಟ್ಟೆಯನ್ನು ಮುಚ್ಚುವ ಸೀರೆಯ ಭಾಗದ ಕೆಳ ಭಾಗವನ್ನು  ತಮ್ಮ ಎರಡೂ ಕೈಗಳಿಂದ ಹಿಡಿದುಕೊಂಡು ಆಶೀರ್ವಾದ ನೀಡುವಂತೆ ಮುಂದೆ ಮಾಡುತ್ತಾರೆ. ಆಗ ಆ ಹಿರಿಯರು ಅಥವಾ ಗುರುಗಳು ತೆಂಗಿನಕಾಯಿ ಅಥವಾ ಮತ್ಯಾವುದಾದರೂ ವಸ್ತುವನ್ನು ನೀಡಿ ಆಶೀರ್ವದಿಸುತ್ತಾರೆ. ಅಂತೆಯೇ ಇಲ್ಲಿ ಸಾಯಿಬಾಬಾರವರು ತಹರಾಬಾಯಿಯವರ ಉಡಿಯಲ್ಲಿ  ಅನೇಕ ಸಿಹಿ ಪೇಡಾವನ್ನು ಹಾಕಿ ಆಶೀರ್ವದಿಸಿದರು. (ಆಧಾರ: ವಿನ್ನಿ ಚಿಟ್ಲೂರಿಯವರ ಆಂಗ್ಲ ಗ್ರಂಥವಾದ ಬಾಬಾ'ಸ್  ವಾಣಿ).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment