Thursday, June 19, 2014

ಶ್ರೀ ಶಿರಡಿ ಸಾಯಿಬಾಬಾರವರ ನಿತ್ಯ ದಿನಚರಿ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ ಶಿರಡಿ ಸಾಯಿಬಾಬಾರವರ ನಿತ್ಯ ದಿನಚರಿಯನ್ನು ವಿವರಿಸುವುದು ಮುರ್ಖತನದ ಪರಮಾವಧಿಯಾಗುತ್ತದೆ. ಏಕೆಂದರೆ, ಶ್ರೀ ಸಾಯಿಬಾಬಾರವರು ಕಾಲ ಮತ್ತು ವ್ಯಾಪ್ತಿಗಳ ಪರಿಮಿತಿಗಳಿಗೆ ಅತೀತರು. ಆದರೂ, ನಮ್ಮ ಪರಿಮಿತಿಗೆ ತಕ್ಕಂತೆ ಶಿರಡಿಯಲ್ಲಿನ ಬಾಬಾರವರ ದಿನಚರಿಯನ್ನು ತಿಳಿದುಕೊಳ್ಳುವ ಒಂದು ಸಣ್ಣ  ಪ್ರಯತ್ನವನ್ನು ಮಾಡೋಣ.

ಬಾಬಾರವರು ಪ್ರತಿನಿತ್ಯ ಬೆಳಗಿನ ಜಾವ ಸೂರ್ಯೋದಯಕ್ಕೆ ಬಹಳ ಮುಂಚೆಯೇ ಏಳುತ್ತಿದ್ದರು. ನಂತರ ಧುನಿಯ ಪಕ್ಕದಲ್ಲಿದ್ದ ಕಂಬಕ್ಕೆ ಒರಗಿ ಕುಳಿತುಕೊಂಡು ಧ್ಯಾನ ಮಾಡುತ್ತಿದ್ದರು. ಆ ಸಮಯದಲ್ಲಿ ದ್ವಾರಕಾಮಾಯಿಯ ಒಳಗಡೆಗೆ ಹೋಗಿ ಬಾಬಾರವರು ಏನು ಮಾಡುತ್ತಿದ್ದಾರೆಂದು ನೋಡಲು ಯಾರಿಗೂ ಅವಕಾಶವಿರಲಿಲ್ಲ. ಬಾಬಾರವರು ,ಆ ಸಮಯದಲ್ಲಿ ಯಾರನ್ನೂ ಹತ್ತಿರ ಬರಗೊಡುತ್ತಿರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಅವರು "ಯಾದೇ ಹಕ್", "ಅಲ್ಲಾ ವಲಿ ಹೇ"  ಹಾಗೂ "ಅಲ್ಲಾ ಮಾಲಿಕ್" ಎಂದು ಮೆಲುದನಿಯಲ್ಲಿ ಹೇಳಿಕೊಳ್ಳುತ್ತಿದ್ದರು. ಅವರು ಹಾಗೆ ಹೇಳಿಕೊಳ್ಳುವಾಗ ಮಧ್ಯದಲ್ಲಿ ಕೆಲವು ಯೋಗಮುದ್ರೆಗಳನ್ನು ಮಾಡುತ್ತಿದ್ದರೆಂದು ಹೇಳಲಾಗುತ್ತದೆ.



ಆ ಸಮಯದಲ್ಲಿ ಕೇವಲ ಅಬ್ದುಲ್ ಬಾಬಾ ಹಾಗೂ ಮಾಧವ ಫಾಸ್ಲೆಯವರು ಮಾತ್ರ ದ್ವಾರಕಾಮಾಯಿಯ ಒಳಗಡೆ ಪ್ರವೇಶಿಸಿ ನೆಲವನ್ನು ಗುಡಿಸಿ, ಸಾರಿಸುತ್ತಿದ್ದರು. ದೀಪದ ಬತ್ತಿಗಳನ್ನು ಸರಿ ಮಾಡಿ ಅದಕ್ಕೆ ಎಣ್ಣೆಯನ್ನು ಹಾಕುತ್ತಿದ್ದರು ಹಾಗೂ ಧುನಿಯ ಹತ್ತಿರ ಕಟ್ಟಿಗೆಗಳನ್ನು ಇರಿಸುತ್ತಿದ್ದರು.

ಬೆಳಗಾಗುತ್ತಿದ್ದಂತೆಯೇ ಭಾಗೋಜಿ ಶಿಂಧೆ ಮಸೀದಿಯನ್ನು ಪ್ರವೇಶಿಸಿ ಬಾಬಾರವರ ಕೈ ಹಾಗೂ ಕಾಲುಗಳನ್ನು ಮೃದುವಾಗಿ ನೀವುತ್ತಿದ್ದರು. 1910ನೇ  ಇಸವಿಯ ಒಂದು ಧನತ್ರಯೋದಶಿಯ ದಿನದಂದು ಅಕ್ಕಸಾಲಿಗನೊಬ್ಬನ ಮಗುವೊಂದು ಬೆಂಕಿಯಲ್ಲಿ ಬೀಳುತ್ತಿದ್ದುದನ್ನು ತಪ್ಪಿಸುವ ಸಲುವಾಗಿ ತಮ್ಮ ಕೈಗಳನ್ನು ಧುನಿಯಲ್ಲಿ ಇರಿಸಿದ್ದರಿಂದ ಅವರ ಕೈ ಸುಟ್ಟುಕೊಂಡಿದ್ದರು.  ಅಂದಿನಿಂದ ಬಾಬಾರವರ ಮಾಹಾಸಮಾಧಿಯವರೆಗೂ ಅನವರತವಾಗಿ ಎಂಟು ವರ್ಷಗಳ ಕಾಲ  ಪ್ರತಿನಿತ್ಯ ಭಾಗೋಜಿ ಶಿಂಧೆಯವರು ಮಸೀದಿಗೆ ಬಂದು ಹಿಂದಿನ ದಿನ ಬಾಬಾರವರ ಕೈಗೆ ಸುತ್ತಿದ್ದ ಪಟ್ಟಿಯನ್ನು ತೆಗೆದು  ಗಾಯವಾಗಿದ್ದ ಸ್ಥಳಕ್ಕೆ ತುಪ್ಪವನ್ನು ಸವರಿ ಚೆನ್ನಾಗಿ ನೀವಿ ಪುನಃ ಹೊಸ ಪಟ್ಟಿಯನ್ನು ಸುತ್ತುತ್ತಿದ್ದರು. ಸ್ವಲ್ಪ ದಿನಗಳ ನಂತರ ಬಾಬಾರವರ ಕೈಗಳಿಗಾಗಿದ್ದ ಗಾಯವು ವಾಸಿಯಾಗಿತ್ತು. ಆದರೆ ಭಾಗೋಜಿ ಶಿಂಧೆಗೆ ತಮ್ಮ ಮೇಲಿದ್ದ ಭಕ್ತಿ ಹಾಗೂ ಪ್ರೀತಿಯನ್ನು ಕಂಡು ಬಾಬಾರವರು ಅವರು ಸೇವೆಯನ್ನು ಮುಂದುವರಿಸಲು ಅನುಮತಿ ನೀಡಿದ್ದರು.ನಿಜ ಹೇಳಬೇಕೆಂದರೆ ಭಾಗೋಜಿ ಶಿಂಧೆಯವರು ಬಹಳ ಅದೃಷ್ಟಶಾಲಿಯೆಂದು ಹೇಳಬೇಕು. 

ಇದಾದ ನಂತರ ಭಾಗೋಜಿ ಶಿಂಧೆಯವರು ಚಿಲುಮೆಯನ್ನು ಸಿದ್ಧಪಡಿಸಿ ತಂದು ಬಾಬಾರವರ ಕೈಗೆ ನೀಡುತ್ತಿದ್ದರು. ಬಾಬಾರವರು ಒಂದೆರಡು ಬಾರಿ ದಮ್ಮು ಎಳೆದು ನಂತರ ಭಾಗೋಜಿಯವರಿಗೆ ಹಿಂತಿರುಗಿಸುತ್ತಿದ್ದರು. ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ಸುಮಾರು 7 ರಿಂದ 7.30  ಗಂಟೆಯಾಗುತ್ತಿತ್ತು . ಅಷ್ಟು ಹೊತ್ತಿಗೆ ಭಕ್ತರು ಬಾಬಾರವರ ದರ್ಶನಕ್ಕೆ ಮಸೀದಿಗೆ ಬಂದು ಸೇರುತ್ತಿದ್ದರು. ಆಗ ಬಾಬಾರವರು ಅವರುಗಳಿಗೆ  ಹಿಂದಿನ ರಾತ್ರಿ  ತಮ್ಮಿಂದ ದೂರದಲ್ಲಿದ್ದ ಭಕ್ತರನ್ನು ಹೇಗೆ ತಾವು ರಕ್ಷಿಸಿದರೆಂದು ಹಾಗೂ ಹಿಂದಿನ ರಾತ್ರಿ ಮರಣವನ್ನಪ್ಪಿದವರನ್ನು ಹೇಗೆ ತಾವು ಸ್ವರ್ಗಕ್ಕೆ ಕರೆದುಕೊಂಡು ಹೋಗಿ ಸುರಕ್ಷಿತವಾಗಿ ತಲುಪಿಸಿದರೆಂದು ವಿವರವಾಗಿ ತಿಳಿಸುತ್ತಿದ್ದರು. ಆ ದೂರದ ಊರುಗಳಿಂದ ಭಕ್ತರುಗಳು ಬಂದು ಬಾಬಾರವರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿ  ಹೇಗೆ ಬಾಬಾರವರು ತಮ್ಮನ್ನು ರಕ್ಷಿಸಿದರೆಂದು ಎಲ್ಲರ ಸಮ್ಮುಖದಲ್ಲಿ ವಿವರಿಸಿದಾಗ ಅವರುಗಳಿಗೆ ನಿಜ ವಿಷಯದ ಅರಿವಾಗುತ್ತಿತ್ತು.

ಈ ರೀತಿಯಲ್ಲಿ ಬಾಬಾರವರು ತಮ್ಮ ಬಳಿಗೆ ಬಂದಿದ್ದ ಭಕ್ತರ ಬಳಿ ಮಾತನಾಡುತ್ತಿರುವಾಗ ಮಾಧವ ಫಾಸ್ಲೆ, ತುಕಾರಾಂ ಹಾಗೂ ಇತರ ಸಹಾಯಕರು ಬಕೆಟ್ ಗಳಿಗೆ ನೀರನ್ನು ತುಂಬಿ ಇರಿಸುತ್ತಿದ್ದರು. ಬಾಬಾರವರು ಎಂದೂ ತಮ್ಮ ಹಲ್ಲುಗಳನ್ನು ಉಜ್ಜಿಕೊಂಡಿದ್ದೇ ಇಲ್ಲ.  ಅವರು ಕೇವಲ ತಮ್ಮ ಬಾಯಿ ಮುಕ್ಕಳಿಸಿ ಕೈಕಾಲು ಮುಖವನ್ನು ತೊಳೆದುಕೊಳ್ಳುತ್ತಿದ್ದರು. ಬಾಬಾರವರು  ಎಷ್ಟು ಕೋಮಲವಾಗಿ ತಮ್ಮ ಮುಖವನ್ನು ತೊಳೆದುಕೊಳ್ಳುತ್ತಿದ್ದರೆಂದರೆ ಆ ಸಮಯದಲ್ಲಿ ಪ್ರತಿಯೊಬ್ಬರೂ ಅವರನ್ನು ನೋಡಲು ಇಷ್ಟಪಡುತ್ತಿದ್ದರು. ಆ ಸಮಯದಲ್ಲಿ ಕುಷ್ಟ ರೋಗದಿಂದ ಬಳಲುತ್ತಿದ್ದ ರೋಗಿಗಳು ಕಾದುಕೊಂಡಿದ್ದು ಬಾಬಾರವರು ಬಾಯಿ ಮುಕ್ಕಳಿಸಿ ಉಗುಳಿದ ನೀರನ್ನು ತೆಗೆದುಕೊಂಡು ತಮ್ಮ ಮೈಮೇಲೆ ಆಗಿದ್ದ ಗಾಯಗಳಿಗೆ ಭಕ್ತಿಯಿಂದ ಹಾಕಿಕೊಳ್ಳುತ್ತಿದ್ದರು. ಅಂತಹ ರೋಗಿಗಳ ಗಾಯವು ಅವರಿಗೆ ಬಾಬಾರವರ ಮೇಲಿದ್ದ ಶ್ರದ್ಧೆ ಹಾಗೂ ಭಕ್ತಿಗೆ ತಕ್ಕಂತೆ ವಾಸಿಯಾಗುತ್ತಿತ್ತು.

ಹೀಗೆ ಬಾಬಾರವರು ಮುಖ ತೊಳೆದುಕೊಳ್ಳುತ್ತಿರುವಾಗ ಭಕ್ತರು ರಾಜದಂಡ, ಬೀಸಣಿಗೆ ಹಾಗೂ ಮತ್ತಿತರ ಔಪಚಾರಿಕ ವಸ್ತುಗಳೊಂದಿಗೆ ಕಾಕಡಾ ಆರತಿಯಲ್ಲಿ ಪಾಲ್ಗೊಳ್ಳಲು ದ್ವಾರಕಾಮಾಯಿಗೆ ಆಗಮಿಸುತ್ತಿದ್ದರು. ಬಾಬಾರವರು ಅವರನ್ನು ತಾಯಿ ತನ್ನ ಮಕ್ಕಳನ್ನು ಬರಮಾಡಿಕೊಳ್ಳುವಂತೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಆರತಿಯಾದ ನಂತರ ಭಕ್ತರು ಬಾಬಾರವರಿಂದ ಉಧಿಯನ್ನು ಸ್ವೀಕರಿಸಿ ತಮ್ಮ ನಿತ್ಯ ಕೆಲಸಗಳಿಗೆ ಹೊರಡುತ್ತಿದ್ದರು. ಕೇವಲ ಕಾಕಡಾ ಆರತಿ ಹಾಗೂ ಶೇಜಾರತಿಯನ್ನು ದಿನಬಿಟ್ಟು ದಿನ ಚಾವಡಿಯಲ್ಲಿ ನೆರವೇರಿಸಲಾಗುತ್ತಿತ್ತು. 

ಬಾಬಾರವರು ಪ್ರತಿನಿತ್ಯ ಸ್ನಾನ ಮಾಡುತ್ತಿರಲಿಲ್ಲ. ಫಕೀರರಿಗೆ ನಿತ್ಯ ಸ್ನಾನ ನಿಷಿದ್ಧ ಎಂದು ಹೇಳಲಾಗಿದೆ.   ಬಾಬಾರವರು ಮೊದಲು ಶಿರಡಿಗೆ ಬಂದಾಗ ಅವರು ಲೇಂಡಿ ಉದ್ಯಾನವನದಲ್ಲಿ ಅಥವಾ ಶಿರಡಿ ಗ್ರಾಮದ ಹೊರಗಿದ್ದ ಪೊದೆಗಳ ಹತ್ತಿರ ತಮ್ಮ ಸ್ನಾನವನ್ನು  ಪೂರೈಸುತ್ತಿದ್ದರು. ನಂತರದ ದಿನಗಳಲ್ಲಿ ಅವರು ಮಸೀದಿಯಲ್ಲಿ ಸ್ನಾನ ಮಾಡಲು ಪ್ರಾರಂಭಿಸಿದರು. ಬಾಬಾರವರ ಸಹಾಯಕರು ಅವರಿಗೋಸ್ಕರವಾಗಿ ಎರಡು ತಾಮ್ರದ ಪಾತ್ರೆಗಳಲ್ಲಿ ಬಿಸಿ ನೀರು ಹಾಗೂ ಮತ್ತೆರಡು ತಾಮ್ರದ ಪಾತ್ರೆಗಳಲ್ಲಿ ತಣ್ಣೀರನ್ನು ತಂದಿರಿಸಿ ಮಸೀದಿಯಲ್ಲಿ ಬಾಬಾರವರು ಸ್ನಾನ ಮಾಡುತ್ತಿದ್ದ ಜಾಗದ ಬಳಿಯಿದ್ದ ಪರದೆಗಳನ್ನು ಇಳಿಬಿಡುತ್ತಿದ್ದರು. ಬಾಬಾರವರು ತಮಗೆ ಸರಿ ಎನಿಸಿದಷ್ಟು ಹದವಾಗಿ ತಣ್ಣೀರು ಹಾಗೂ ಬಿಸಿನೀರನ್ನು ಬೆರೆಸಿಕೊಂಡು ನಿಧಾನವಾಗಿ ಸ್ನಾನ ಮಾಡುತ್ತಿದ್ದರು. ಸಾಮಾನ್ಯವಾಗಿ ಬಾಬಾರವರ ಸ್ನಾನದ ಕಾರ್ಯಕ್ರಮ ಸುಮಾರು ಒಂದೂವರೆ ಗಂಟೆಯವರೆಗೆ ನಡೆಯುತ್ತಿತ್ತು. ಸ್ನಾನವಾದ ನಂತರ ಬಾಬಾರವರು ಧುನಿಯ ಮುಂದೆ ನಿಂತುಕೊಳ್ಳುತ್ತಿದ್ದರು. ಆಗ ಅವರ ಅಂತರಂಗಕ್ಕೆ ಅತ್ಯಂತ ಹತ್ತಿರವಾಗಿದ್ದ ಭಕ್ತರು ಅವರ ಬೆನ್ನು, ಕುತ್ತಿಗೆ ಹಾಗೂ ತಲೆಯನ್ನು ಬಟ್ಟೆಯಿಂದ ಒರೆಸುತ್ತಿದ್ದರು. ಬಾಬಾರವರ ಸ್ನಾನದ ನೀರನ್ನು ಭಕ್ತರು ಅತ್ಯಂತ ಪವಿತ್ರವೆಂದು ಭಾವಿಸಿ ತಮ್ಮ ಖಾಯಿಲೆಗಳನ್ನು ಹೋಗಲಾಡಿಸಿಕೊಳ್ಳಲು ಬಳಸುತ್ತಿದ್ದರು.  ಒಮ್ಮೆ ನಾಸಿಕ್ ನಿಂದ ಶಿರಡಿಗೆ ಬಂದಿದ್ದ ಭಕ್ತನಾದ ರಾಮ್ ಜಿ ಎಂಬುವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಬಾಬಾರವರ ಸ್ನಾನದ ನೀರನ್ನು ಕುಡಿದ ತಕ್ಷಣವೇ ಹುಷಾರಾದರು. ಅದಕ್ಕೆ ಕೃತಜ್ಞತೆ ಸಲ್ಲಿಸಲೆಂದು ಅವರು ಬಾಬಾರವರಿಗೆ ಸ್ನಾನ ಮಾಡುವಾಗ ನಿಂತುಕೊಳ್ಳಲು ಅನುಕೂಲವಾಗಲೆಂದು ಒಂದು ಸ್ನಾನದ ಕಲ್ಲನ್ನು ನೀಡಿದ್ದರು. ಈ ಸ್ನಾನದ ಕಲ್ಲನ್ನು ನಾವು ಈಗಲೂ ಶಿರಡಿಗೆ ಭೇಟಿ ನೀಡಿದಾಗ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ. ಬಾಬಾರವರು ವಾರಕ್ಕೊಮ್ಮೆ ಅಥವಾ ಎಂಟು ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದರು. ಕೆಲವೊಮ್ಮೆಯಂತೂ ಐದಾರು ವಾರಗಳು ಸ್ನಾನ ಮಾಡುತ್ತಲೇ ಇರಲಿಲ್ಲ. ಯಾರಾದರೂ ಭಕ್ತರು ಬಾಬಾರವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವರು "ನಾನು ಈಗಷ್ಟೇ ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಂದಿದ್ದೇನೆ. ಮತ್ತೆ ಏಕೆ ಸ್ನಾನ ಮಾಡಬೇಕು" ಎಂದು ಅವರನ್ನೇ ಪ್ರಶ್ನಿಸುತ್ತಿದ್ದರು.  ಯಾವಾಗಲೂ ಪರಿಶುದ್ಧರಾಗಿರುವವರಿಗೆ ಸ್ನಾನದ ಅವಶ್ಯಕತೆಯಾದರೂ ಏನಿದೆ? ಅಲ್ಲದೇ, ತಾವು ಇಚ್ಛಿಸಿದ ಮಾತ್ರಕ್ಕೇ  ತಮ್ಮ ಪಾದಗಳಿಂದಲೇ  ಗಂಗೆ ಹರಿಯುವಂತೆ ಮಾಡಿದ ಸಾಕ್ಷಾತ್ ಈಶ್ವರನಿಗೆ ಯಾವ ಸ್ನಾನದ ಅವಶ್ಯಕತೆ ಇಲ್ಲ ಅಲ್ಲವೇ?

ಬಾಬಾರವರು ಸ್ನಾನ ಮಾಡದೇ ಇದ್ದ ದಿನದಂದು ಸಹ ನೋಡಲು ಅಚ್ಚುಕಟ್ಟಾಗಿ ಹಾಗೂ ಶುದ್ಧವಾಗಿ ಕಾಣಿಸುತ್ತಿದ್ದರು. ಅವರು ಸ್ನಾನವಾದ ನಂತರ ಹಸಿರು ಬಣ್ಣದ ಬಟ್ಟೆಯನ್ನು ತೊಟ್ಟುಕೊಳ್ಳುತ್ತಿದ್ದರು. ಅಲ್ಲದೇ ತಮ್ಮ ಕಫ್ನಿಯನ್ನು ಒಗೆದು ಒಣಗಲೋಸುಗ ಧುನಿಯ ಹತ್ತಿರ ಇರಿಸುತ್ತಿದ್ದರು. ಕಫ್ನಿ ಒಣಗಿದ ನಂತರ ಅದನ್ನು ಮತ್ತೆ ಧರಿಸುತ್ತಿದ್ದರು. ಸ್ನಾನದ ಸಮಯವನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಸಮಯಗಳಲ್ಲೂ ಕಫ್ನಿಯನ್ನು ಧರಿಸುತ್ತಿದ್ದರು. ಅವರ ಕಫ್ನಿಯು ಒರಟಾದ ಬಟ್ಟೆಯಿಂದ ಮಾಡಲ್ಪಟ್ಟಿರುತ್ತಿತ್ತು. ಆ ಕಫ್ನಿಗಳು ತುಂಬಾ ಹಳೆಯದಾಗಿ ಹರಿದು ಹೋದಾಗ ಭಕ್ತರು ಅದನ್ನು ಬದಲಿಸುವಂತೆ ಬಾಬಾರವರನ್ನು ಬೇಡಿಕೊಳ್ಳುತ್ತಿದ್ದರು. ಆಗಷ್ಟೇ ಬಾಬಾರವರು ಹೊಸದನ್ನು ಧರಿಸುತ್ತಿದ್ದರು. ತಾತ್ಯಾ ಒತ್ತಾಯಪೂರ್ವಕವಾಗಿ ಬಾಬಾ ಹಳೆಯ ಕಫ್ನಿಯನ್ನು ಬಿಸಾಡಿ ಹೊಸದನ್ನು ಧರಿಸಿಕೊಳ್ಳುವಂತೆ ಮಾಡುತ್ತಿದ್ದರು. ಅವರು ಬಾಬಾರವರ ಹತ್ತಿರ ಮಾತಾನಾಡುವ ಸಲುವಾಗಿ ಹತ್ತಿರ ಹೋದಂತೆ ಮಾಡಿ "ಬಾಬಾ ಇದೇನಿದು? ನಿಮ್ಮ ಕಫ್ನಿ ಹರಿದಿದೆಯಲ್ಲಾ?" ಎಂದು ಹೇಳುತ್ತಲೇ ಮೊದಲೇ ಹರಿದು ತೂತಾಗಿರುವ ಜಾಗದಲ್ಲಿ ತಮ್ಮ ಬೆರಳನ್ನು ತೋರಿಸಿ ತೂತನ್ನು ಮತ್ತಷ್ಟು ದೊಡ್ಡದಾಗುವಂತೆ ಮಾಡಿ ಅದು ರಿಪೇರಿ ಆಗದಷ್ಟು ಹರಿದುಬಿಡುತ್ತಿದ್ದರು.  ನಂತರ ಅಮಾಯಕರಂತೆ ನಟಿಸುತ್ತಾ "ಬಾಬಾ ನಿಮ್ಮ ಕಫ್ನಿ ರಿಪೇರಿ ಮಾಡಲಾಗದಷ್ಟು ಹರಿದುಹೋಗಿದೆ. ಈ ಕೂಡಲೇ ನೀವು ಅದನ್ನು ಬದಲಾಯಿಸಲೇಬೇಕು" ಎಂದು ಒತ್ತಾಯ ಮಾಡುತ್ತಿದ್ದರು.  ಆಗ ಬಾಬಾರವರಿಗೆ ಹೊಸ ಕಫ್ನಿ ಧರಿಸದೇ ಬೇರೆ ದಾರಿ ಇರಲಿಲ್ಲ. ಆ ಕೂಡಲೇ ಬಾಬಾರವರು ಬಟ್ಟೆಯ ವ್ಯಾಪಾರಿ ಹಾಗೂ ದರ್ಜಿಯಾದ ಕಾಶೀನಾಥ ಶಿಂಪಿಯನ್ನು ಕರೆದು "ಕಾಶೀನಾಥ, ನನಗೆ ಒಂದು ಕಫ್ನಿಯನ್ನು ಹೊಲೆದು ಕೊಡು" ಎಂದು ಹೇಳುತ್ತಿದ್ದರು.  ಕೂಡಲೇ ಕಾಶೀನಾಥ್ ಹೊಸ ಕಫ್ನಿಯನ್ನು ತಂದು ಕೊಡಲು ಅದರ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಯನ್ನು ಶಿಂಪಿಗೆ ನೀಡುತ್ತಿದ್ದರು. ನಂತರ ಹೊಸ ಕಫ್ನಿಯನ್ನು ಧರಿಸಿ ಹಳೆಯದನ್ನು ಧುನಿಯಲ್ಲಿ ಹಾಕುತ್ತಿದ್ದರು. ಸಾಮಾನ್ಯವಾಗಿ ಬಾಬಾರವರು ಹೊಸ ಕಫ್ನಿಯನ್ನು ಧರಿಸಿದಾಗಲೆಲ್ಲಾ ಮಸೀದಿಗೆ ಬರುತ್ತಿದ್ದ ಬಡ ಫಕೀರರು ಹಾಗೂ ಸಾಧುಗಳಿಗೂ ಸಹ ಹೊಸ ಕಫ್ನಿಯನ್ನು ಹಂಚುತ್ತಿದ್ದರು. ಹಾಗಾಗಿ ಬಾಬಾರವರು ಹೊಸ ಕಫ್ನಿ ಧರಿಸಿದಾಗಲೆಲ್ಲಾ ಅವರುಗಳು ಹಬ್ಬದ ಸಂಭ್ರಮವನ್ನು ಅನುಭವಿಸುತ್ತಿದ್ದರು.  ಒಮ್ಮೆ 1914ನೇ ಇಸವಿಯಲ್ಲಿ ಬಾಬಾರವರು ಫಕೀರರಿಗೆ ಕಫ್ನಿಯನ್ನು ಹಂಚುತ್ತಿದ್ದರು. ಆ ಸಮಯದಲ್ಲಿ ಅಲ್ಲಿಯೇ ನಿಂತಿದ್ದ ನಾರ್ಕೆ ಎಂಬ ಭಕ್ತರಿಗೆ ಬಾಬಾರವರ ಕೈಯಿಂದ ತಮಗೂ ಒಂದು ಕಫ್ನಿಯನ್ನು ಪಡೆಯಬೇಕೆಂಬ ಆಸೆಯಾಯಿತು. ನಾರ್ಕೆಯವರ ಮನಸ್ಸಿನಲ್ಲಿ ಆ ರೀತಿ ಯೋಚನೆ ಸುಳಿಯುತ್ತಿದ್ದಂತೆಯೇ ಬಾಬಾರವರು ಅವರ ಕಡೆ ತಿರುಗಿ "ಇಲ್ಲ. ನೀನು ನನ್ನಿಂದ ಕಫ್ನಿಯನ್ನು ಪಡೆಯುವುದು ಈ ಫಕೀರರಿಗೆ ಒಪ್ಪಿಗೆಯಿಲ್ಲ. ಹಾಗಾಗಿ, ನಾನು ಏನು ತಾನೇ ಮಾಡಲು ಸಾಧ್ಯ?" ಎಂದು ನುಡಿದರು. ಬಾಬಾರವರು ಕೆಲವೊಮ್ಮೆ ಬಾಳಾ ಎಂಬ ಕ್ಷೌರಿಕನನ್ನು ಬರಹೇಳಿ ತಮ್ಮ ಕೇಶ ಮುಂಡನ ಮಾಡಿಸಿಕೊಳ್ಳುತ್ತಿದ್ದರು. ಅಲ್ಲದೇ ಅವನಿಂದ  ತಮ್ಮ ಮೀಸೆಯನ್ನು ಸಹ ಒಪ್ಪ ಮಾಡಿಸಿಕೊಂಡು ಅವನಿಗೆ ಕೈತುಂಬಾ ಹಣವನ್ನು ನೀಡುತ್ತಿದ್ದರು. 

ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಬಾಬಾರವರು ತಮ್ಮ ದೈನಂದಿನ ಭಿಕ್ಷೆಗಾಗಿ ಹೊರಡುತ್ತಿದ್ದರು. ಪ್ರತಿನಿತ್ಯ ಗಣಪತಿ ತಾತ್ಯಾ ಪಾಟೀಲ್  (ಬಾಯಿಜಾಬಾಯಿ), ಅಪ್ಪಾಜಿ ಪಾಟೀಲ್, ಸಖಾರಾಮ್ ಶೆಲ್ಕೆ, ವಾಮನ ಗೋಂದ್ಕರ್ ಮತ್ತು ನಂದೂರಾಮ್ ಮಾರವಾಡಿಯವರ ಮನೆಗಳಿಗೆ ಅವರು  ಭಿಕ್ಷೆಗಾಗಿ ಹೋಗುತ್ತಿದ್ದರು. ಎಲ್ಲಾ ವಿಶ್ವಗಳಿಗೂ ಪೋಷಕರಾದ ಬಾಬಾರವರಿಗೆ ಭಿಕ್ಷೆಯನ್ನು ನೀಡಿ ಪೋಷಿಸುವ ಸುಯೋಗವನ್ನು ಈ ಐವರು ಮಹಾಭಕ್ತರುಗಳು ಹೊಂದಿದ್ದು ಅವರುಗಳ ಅದೃಷ್ಟವಲ್ಲದೇ ಮತ್ತೇನೆಂದು ಹೇಳಬೇಕು. ಬಾಬಾರವರು ಭಿಕ್ಷೆಗೆಂದು ಹೋಗುತ್ತಿದ್ದ ಐದು ಮನೆಗಳಲ್ಲೂ  ಬೇರೆ ಬೇರೆ ರೀತಿಯಲ್ಲಿ ಭಿಕ್ಷೆಯನ್ನು ಬೇಡುತ್ತಿದ್ದರು. ಅವರು "ಅಬಾದ್ ಎ ಅಬಾದ್, ಅಲ್ಲಾ ಭಲಾ ಕರೇಗಾ" ಎಂದು ಹೇಳಿ ಮನೆಯೊಡತಿಯರನ್ನು ಆಶೀರ್ವದಿಸುತ್ತಿದ್ದರು. ಬಾಯಿಜಾಬಾಯಿಯವರ ಮನೆಗೆ ಹೋದಾಗ "ಬಾಯಿಜಾ ಮಾ! ಜೀವನ್ ದೇ! ರೋಟಿ ಲಾವೋ!" ಎಂದು ಬೇಡುತ್ತಿದ್ದರು.  ಅವರು ಅಪ್ಪಾಜಿ ಪಾಟೀಲ್ ಹಾಗೂ ವಾಮನ ಗೋಂದ್ಕರ್ ರವರ ಮನೆಗಳ ಮುಂದೆ ಹೋದಾಗ ಅವರುಗಳ ಹೆಸರನ್ನು ಹಿಡಿದು ಕೂಗಿ ಕರೆದು "ಭಕ್ರಿ ದೇ" ಎಂದು ಬೇಡುತ್ತಿದ್ದರು. ಅವರು ಸಖಾರಾಮ್ ಶೆಲ್ಕೆಯವರ ಮನೆಯ ಮುಂದೆ ಹೋದಾಗ ಅವರ ಹೆಂಡತಿಯನ್ನು ಕೂಗಿ ಕರೆದು "ಇಟ್ಲಾಯಿ ಬಾಯಿ! ರೋಟಿ ಲಾವ್" ಎಂದು ಬೇಡುತ್ತಿದ್ದರು. ಹೀಗೆ ನಾಲ್ಕು ಮನೆಗಳಲ್ಲಿ ಭಿಕ್ಷೆ ಮುಗಿಸಿಕೊಂಡು ನಂತರ ಕೊನೆಯದಾಗಿ ನಂದೂರಾಮ್ ಮಾರವಾಡಿಯವರ ಮನೆಯ ಮುಂದೆ ಹೋಗಿ ನಿಂತುಕೊಂಡು "ನಂದೂರಾಮ್ ಭಕ್ರಿ ದೇ" ಎಂದು ಬೇಡುತ್ತಿದ್ದರು. ಕೆಲವೊಮ್ಮೆ ಅವರ ಪತ್ನಿಯಾದ ರಾಧಾಬಾಯಿಯನ್ನು ಕೂಗಿ ಕರೆದು "ಬೋಪಿಡಿ ಬಾಯಿ, ಭಕ್ರಿ ದೇ" ಎಂದು ಬೇಡುತ್ತಿದ್ದರು. ಮರಾಠಿ  ಭಾಷೆಯಲ್ಲಿ "ಬೋಪಿಡಿ" ಎಂದರೆ "ತೊದಲುವುದು" ಎಂಬ ಅರ್ಥ ಬರುತ್ತದೆ. ನಂದೂರಾಮ್ ರವರ ಹೆಂಡತಿಯಾದ ರಾಧಾಬಾಯಿ ಮಾತನಾಡುವಾಗ ಸ್ವಲ್ಪ ತೊದಲುತ್ತಿದ್ದುದರಿಂದ ಬಾಬಾರವರು ಕೆಲವೊಮ್ಮೆ ಆಕೆಯನ್ನು ಹಾಗೆ ಸಂಬೋಧಿಸುತ್ತಿದ್ದರು. ಕೆಲವೊಮ್ಮೆ ಆಕೆ ಆಹಾರವನ್ನು ತೆಗೆದುಕೊಂಡು ಬರುವುದು ತಡವಾದರೆ  "ಏಕೆ ಅಷ್ಟು ತಡ ಮಾಡುತ್ತಿರುವೆ?" ಎಂದು ಆಕೆಯ ಮೇಲೆ ಹರಿಹಾಯುತ್ತಿದ್ದರು.  ಇನ್ನು ಕೆಲವೊಂದು ದಿನಗಳಂದು ಯಾವುದೇ ವಿಶೇಷ ಹಬ್ಬ ಹರಿದಿನಗಳು ಇಲ್ಲದಿದ್ದರೂ ಸಹ "ಬೋಪಿಡಿ ಬಾಯಿ, ಮಿಠಾಯಿ ಲಾವೋ" ಎಂದು ಹೇಳುತ್ತಿದ್ದರು. ಬಾಬಾರವರು ಹಾಗೆ ಕೇಳಿದಾಗಲೆಲ್ಲಾ ರಾಧಾಬಾಯಿಯವರು ತಾವು ಮಾಡುತ್ತಿದ್ದ ಎಲ್ಲಾ ಕೆಲಸಗಳನ್ನೂ ಪಕ್ಕಕ್ಕೆ ಸರಿಸಿ ಬಾಬಾರವರಿಗೆಂದೇ ವಿಶೇಷವಾಗಿ ಪೂರಣ್ ಪೋಳಿ ಎಂಬ ಸಿಹಿ ತಿಂಡಿಯನ್ನು ಮಾಡಿಕೊಂಡು ಬಂದು ಪ್ರೀತಿಯಿಂದ ನೀಡುತ್ತಿದ್ದರು. ಬಾಬಾರವರು ಸ್ವಲ್ಪ ಸಹಿಯನ್ನು ತಮ್ಮ ಬಾಯಿಗೆ ಹಾಕಿಕೊಂಡು ಉಳಿದಿದ್ದನ್ನು ಅಲ್ಲಿದ್ದ ಇತರ ಭಕ್ತರಿಗೆ ಹಂಚುತ್ತಿದ್ದರು. ಬಾಬಾರವರು ತಮ್ಮ ಸಮಾಧಿಯವರೆಗೂ ಕೇವಲ ಈ ಐದು ಮನೆಗಳಿಗೆ ಮಾತ್ರ ಭಿಕ್ಷೆಗೆಂದು ಪ್ರತಿನಿತ್ಯ ಹೋಗುತ್ತಿದ್ದರು ಹಾಗೂ ಅದೇ ಕ್ರಮದಲ್ಲಿ ಹೋಗುತ್ತಿದ್ದರು. ಆದರೆ ಅವರು ಎಷ್ಟು ಬಾರಿ ಭಿಕ್ಷೆಗೆ ಹೋಗುತ್ತಿದ್ದರೆಂದು ನಿರ್ದಿಷ್ಟವಾಗಿ ಹೇಳಲಾಗುತ್ತಿರಲಿಲ್ಲ. ಏಕೆಂದರೆ ಕೆಲವೊಮ್ಮೆ ಬಾಬಾರವರು ಒಂದೇ ದಿನ ಏಳೆಂಟು ಬಾರಿ ಭಿಕ್ಷೆಗೆ ಹೋಗುವ ಪರಿಪಾಠ ಇಟ್ಟುಕೊಂಡಿದ್ದರು. "ಬಾಬಾರವರು ಶಿರಡಿಗೆ ಬಂದ ಪ್ರಾರಂಭದ 3 ವರ್ಷಗಳಲ್ಲಿ ಪ್ರತಿನಿತ್ಯ ಎಂಟು ಬಾರಿ ಭಿಕ್ಷೆಗೆಂದು ಹೋಗುತ್ತಿದ್ದರು. ನಂತರದ 3 ವರ್ಷಗಳಲ್ಲಿ ದಿನಕ್ಕೆ ನಾಲ್ಕು ಬಾರಿ ಭಿಕ್ಷೆಗೆ ಹೋಗುತ್ತಿದ್ದರು; ನಂತರದ ಹನ್ನೆರಡು ವರ್ಷಗಳಲ್ಲಿ ದಿನಕ್ಕೆ ಎರಡು ಬಾರಿ ಭಿಕ್ಷೆಗೆ ಹೋಗುತ್ತಿದ್ದರು ಹಾಗೂ ತಾವು ಸಮಾಧಿಯಾಗುವುದಕ್ಕೆ ಸ್ವಲ್ಪ ದಿನಗಳ ಮುಂಚೆ ಪ್ರತಿದಿನ ಒಮ್ಮೆ ಮಾತ್ರ ಭಿಕ್ಷೆ ಬೇಡಲು ಹೋಗುತ್ತಿದ್ದರು" ಎಂದು ಶ್ರೀ.ಬಯ್ಯಾಜಿ ಅಪ್ಪಾಕೋತೆ ಪಾಟೀಲರು ಹೇಳುತ್ತಾರೆ.




ಬಾಬಾರವರು ಬಾಯಿಜಾಬಾಯಿಯವರ ಮನೆಗೆ ಭಿಕ್ಷೆಗೆ ತೆರಳಿದಾಗ ಅವರು ಬಾಬಾರವರಿಗೆ ಮನೆಯ ಒಳಗೆ ಬಂದು  ಸ್ವಲ್ಪ ಹೊತ್ತು  ವಿಶ್ರಮಿಸಿಕೊಂಡು ಅಲ್ಲಿಯೇ ಕುಳಿತು ಆಹಾರವನ್ನು ಸ್ವೀಕರಿಸಿ ಬಳಿಕ ಹೋಗುವಂತೆ ಬೇಡಿಕೊಳ್ಳುತ್ತಿದ್ದರು. ಬಾಬಾ ಯಾರ ಮನೆಯ ಒಳಗೆ ಹೋಗುವ ಅಭ್ಯಾಸವನ್ನು ಇಟ್ಟುಕೊಂಡಿರಲಿಲ್ಲ. ಆದರೆ ಬಾಯಿಜಾಬಾಯಿ ಅವರಿಗೆ ತೋರಿಸುತ್ತಿದ್ದ ತಾಯಿಯ ಪ್ರೀತಿಯನ್ನು ನಿರಾಕರಿಸಲು ಸಾಧ್ಯವಾಗದೇ ಕೆಲವೊಮ್ಮೆ  ಅವರ ಮನೆಯ ಹೊರಗಿದ್ದ ಜಗುಲಿಯ ಮೇಲೆ ಸ್ವಲ್ಪ ಹೊತ್ತು ಕುಳಿತುಕೊಂಡು ನಂತರ ಮುಂದಿನ ಮನೆಗೆ ಭಿಕ್ಷೆಗೆಂದು  ಹೊರಡುತ್ತಿದ್ದರು. ಬಾಬಾರವರು ಎಷ್ಟು ಬಾರಿ ಬಾಯಿಜಾಬಾಯಿಯ ಮನೆಗೆ ಭಿಕ್ಷೆಗೆಂದು ಹೋದರೂ ಸರಿಯೇ ಅವರೆಂದೂ ಬಾಬಾರವರನ್ನು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಅವರು ಉತ್ಸುಕತೆಯಿಂದ ಮನೆಯೊಳಗಿನಿಂದ ಹೊರಗೋಡಿ ಬಂದವರೇ ಸ್ವಲ್ಪ ಉಪ್ಪಿನಕಾಯಿ ಅಥವಾ ಹಪ್ಪಳವನ್ನಾದರೂ ಬಾಬಾರವರ ಭಿಕ್ಷಾ ಜೋಳಿಗೆಯಲ್ಲಿ ಹಾಕುತ್ತಿದ್ದರು. ಬಾಬಾರವರು ಆಕೆಯನ್ನು ತಮ್ಮ ಸಹೋದರಿ ಎಂದು ಕರೆಯುತ್ತಿದ್ದರು. ನಿಜವಾಗಿಯೂ ಹೇಳಬೇಕೆಂದರೆ ಆಕೆ ಪುಣ್ಯವಂತೆಯೇ ಎಂದು ಹೇಳಬೇಕಾಗುತ್ತದೆ. ಪ್ರಾರಂಭದ ದಿನಗಳಲ್ಲಿ ಇಡೀ ಪ್ರಪಂಚವೇ ಬಾಬಾರವರ ಬಗ್ಗೆ ಏನೂ ತಿಳಿಯದೆ ಇರುವಂತಹ ಸಂದರ್ಭದಲ್ಲಿ ಆಕೆ ಬಾಬಾರವರ ಹಿರಿಮೆ ಹಾಗೂ ವೈಭವವನ್ನು ಬಹಳ ಚೆನ್ನಾಗಿಯೇ ಅರ್ಥ ಮಾಡಿಕೊಂಡು ಬಾಬಾರವರಿಗೆ ಆಹಾರ ನೀಡದೇ ಅದಕ್ಕೆ ಮೊದಲು ತಾವು ಏನನ್ನೂ ತಿನ್ನುತ್ತಿರಲಿಲ್ಲ. ಆಕೆಗೆ ಬಾಬಾರವರ ಬಗ್ಗೆ ಅಷ್ಟು ಒಳನೋಟ ಇರಬೇಕೆಂದರೆ ಆಕೆ ತಮ್ಮ ಹಿಂದಿನ ಜನ್ಮದಲ್ಲಿ ಅದೆಷ್ಟು ಪುಣ್ಯದ ಕೆಲಸಗಳನ್ನು ಮಾಡಿರಬೇಕು?. ಆ ದಿನಗಳಲ್ಲಿ ಶಿರಡಿಯಲ್ಲಿ ವಾಸವಾಗಿದ್ದ ಹೆಂಗಳೆರೇನೂ ಬಹಳ ಓದಿದವರಲ್ಲ ಅಥವಾ ಸಮಾಜದ ಉನ್ನತ ಮಟ್ಟದ ಜನರಿಂದ ಸುಸಂಸ್ಕೃತರೆಂದು ಪರಿಗಣಿಸಲ್ಪಟ್ಟವರಲ್ಲ. ಆದಾಗ್ಯೂ ಅವರುಗಳು ಬಾಬಾರವರಿಗೆ  ತೋರಿಸುತ್ತಿದ್ದ ಭಕ್ತಿ ಹಾಗೂ ಪ್ರೀತಿಗೆ ನಾವುಗಳು ವಂದನೆಯನ್ನು ಸಲ್ಲಿಸಲೇಬೇಕು!

ಬಾಬಾರವರು ಎರಡನೇ ಬಾರಿ ಶಿರಡಿಗೆ ಬಂದ ಎರಡು ವರ್ಷಗಳ ನಂತರ ಅಂದರೆ 1876ನೇ ಇಸವಿಯಲ್ಲಿ ಅಹಮದ್ ನಗರ ಜಿಲ್ಲೆಯಲ್ಲಿ ಕ್ಷಾಮ ಪರಿಸ್ಥಿತಿ ತಲೆದೋರಿತ್ತು. ಆ ಸಮಯದಲ್ಲಿ ಬಾಬಾರವರು ಶ್ರೀಮಂತರಾಗಿದ್ದ ನಂದೂರಾಮ್ ಮಾರವಾಡಿ ಹಾಗೂ ಬಾಯಜಾಬಾಯಿಯವರ ಮನೆಗಳಲ್ಲಿ ಮಾತ್ರ ಭಿಕ್ಷೆ ಬೇಡುತ್ತಿದ್ದರು. ಆ ಸಮಯದಲ್ಲಿ ಇವರುಗಳ ಮನೆಯಿಂದ ಕೇವಲ ಅರ್ಧ ರೊಟ್ಟಿಯನ್ನು ಮಾತ್ರ ಭಿಕ್ಷೆಯಾಗಿ ಸ್ವೀಕರಿಸುತ್ತಿದ್ದರು.  

ನಂತರದ ದಿನಗಳಲ್ಲಿ ಬಾಬಾರವರ ದೈವತ್ವವನ್ನು ಮನಗಂಡು ಎಲ್ಲರೂ ಗುಂಪು ಗುಂಪಾಗಿ ಶಿರಡಿಗೆ ಬರಲಾರಂಭಿಸಿದರು.   ಅನೇಕ ಶ್ರೀಮಂತ ಭಕ್ತರು ಬಗೆಬಗೆಯಾದ ಭೋಜನ ಪದಾರ್ಥಗಳನ್ನು ಹಾಗೂ ಸಿಹಿ ತಿಂಡಿಗಳನ್ನು ತಂದು ಬಾಬಾರವರ ಮುಂದೆ ಇರಿಸಿದರೂ ಸಹ ಬಾಬಾರವರು ಮೊದಲಿನಂತೆಯೇ ಭಿಕ್ಷೆ ಬೇಡಿ ಅದರಿಂದ ಬಂದಿದ್ದನ್ನೇ ತಿಂದು ಹೊಟ್ಟೆ  ತುಂಬಿಸಿಕೊಳ್ಳುತ್ತಿದ್ದರು. ಭಕ್ತರು  ತಮ್ಮ ಸುತ್ತಲೂ ತಂದಿರಿಸಿದ್ದ ವೈಭವೋಪೇತ ವಸ್ತುಗಳ ಕಡೆ ಕಣ್ಣೆತ್ತಿ ಸಹ ನೋಡುತ್ತಿರಲಿಲ್ಲ. ಈ  ಪ್ರಪಂಚಕ್ಕೆ ಫಕೀರನಾಗಿ ಬಂದ ಬಾಬಾರವರು ತಮ್ಮ ಸಮಾಧಿಯವರೆಗೂ ಫಕೀರನಾಗಿಯೇ ಜೀವಿಸಿದರು. ಅವರು ಎಂದಿಗೂ ತಮಗೊಬ್ಬರಿಗೆಂದು ಆಹಾರವನ್ನು ಬೇಯಿಸಿಕೊಳ್ಳಲಿಲ್ಲ ಅಥವಾ ನಾಳೆಗೆಂದು ಕೂಡಿಡಲಿಲ್ಲ. ಬಾಬಾರವರು ತಮ್ಮ ಅಂತಿಮ ದಿನಗಳಲ್ಲಿ ಅಸ್ವಸ್ಥರಾಗಿ ಮಲಗಿದ್ದಾಗ ಕೂಡ ತಮ್ಮ ಬದಲಿಗೆ ಬೇರೆಯವರನ್ನು ಭಿಕ್ಷೆ ಬೇಡಲು ಕಳುಹಿಸಿ ಅವರು ತಂದ ಆಹಾರವನ್ನೇ ಸಂತೃಪ್ತಿಯಿಂದ ಸ್ವೀಕರಿಸುತ್ತಿದ್ದರು. 

ಬಾಬಾರವರು ಕೆಲವೊಮ್ಮೆ ಮಲಬದ್ಧತೆ ಹಾಗೂ ಕರುಳುಬೇನೆಯಿಂದ ಬಳಲುತ್ತಿದ್ದ್ದರು. ಆಗ ಅವರು ಸೋನಾಮುಖಿ  ಹಾಗೂ ಮತ್ತಿತರ ಎಲೆಗಳಿಂದ ಕಷಾಯವನ್ನು ಮಾಡಿ ಅವರೂ ಕುಡಿದು ಆ ಸಮಯದಲ್ಲಿ ಮಸೀದಿಯಲ್ಲಿದ್ದ ಇತರ ಭಕ್ತರಿಗೂ ಕುಡಿಯಲು ನೀಡುತ್ತಿದ್ದರು. ಅವರು ಕಣ್ಣಿನ ಬೇನೆಯಿಂದ ಬಳಲುತ್ತಿದ್ದಾಗ ಕಪ್ಪು ಮೆಣಸನ್ನು ಚೆನ್ನಾಗಿ ಅರೆದು ಅಂಟಿನಂತೆ ಮಾಡಿ ಅದನ್ನು ಕಣ್ಣುಗಳಿಗೆ ಹಚ್ಚಿಕೊಳ್ಳುತ್ತಿದ್ದರು. ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಈ ಎರಡು ಖಾಯಿಲೆಗಳನ್ನು ಹೊರತುಪಡಿಸಿ ಅವರು ಬಹಳವೇ ಆಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರು. ಅವರು ಹೀಗೆ ಆಸ್ತಮಾ ಖಾಯಿಲೆಯಿಂದ ನರಳುತ್ತಿದ್ದುದನ್ನು ನೊಡಿ ಅವರ ಸನ್ನಿಹಿತ ಮಹಾಭಕ್ತರಿಗೆ ತಡೆಯಲಾಗುತ್ತಿರಲಿಲ್ಲ.  ಒಮ್ಮೆ ಬಾಬಾರವರು ಆಸ್ತಮಾದಿಂದ ಬಳಲತ್ತಿದ್ದುದನ್ನು ನೋಡಿ ರಘುವೀರ ಪುರಂದರೆ ಎಂಬ ಮಹಾಭಕ್ತರು ಜೋರಾಗಿ ಅಳಲು ಪಾರಂಭಿಸಿದರು. ಆಗ ಬಾಬಾ ಅವರಿಗೆ ಸಮಾಧಾನ ಮಾಡುತ್ತಾ "ಎಲೈ ಸಹೋದರನೇ, ನನಗೆ ಏನಾಗಿದೆಯೆಂದು ತಿಳಿದಿದ್ದೀಯೇ? ಯೋಚನೆ ಮಾಡಬೇಡ. ಸ್ವಲ್ಪವೇ ಸಮಯದಲ್ಲಿ ನನ್ನ ಖಾಯಿಲೆ ಕಡಿಮೆಯಾಗುತ್ತದೆ" ಎಂದು ಹೇಳಿದರು. ಬಾಬಾರವರು ಹುಷಾರಿಲ್ಲವೆಂಬ ಕಾರಣದಿಂದ  ಭಿಕ್ಷೆ ಬೇಡುವುದಕ್ಕೆ ಹೋಗದೇ ಇರುತ್ತಿರಲಿಲ್ಲ. ಅವರಿಗೆ ಬಹಳ ಹುಷಾರಿಲ್ಲದೇ ನಡೆಯಲೂ ಆಗದೇ ಇದ್ದ ಸಮಯದಲ್ಲಿ ಭಕ್ತರು ಅವರ ಕೈಹಿಡಿದುಕೊಂಡು ಐದು ಮನೆಗಳಿಗೆ ಭಿಕ್ಷೆ  ಬೇಡುವುದಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆ ಬಾಬಾರವರಿಗೆ ಬಹಳವೇ ಹುಷಾರಿಲ್ಲದ ಸಮಯದಲ್ಲಿ ಭಕ್ತರೊಬ್ಬರು ಅವರಿಗೆಂದು ಗಾಲಿ ಕುರ್ಚಿಯನ್ನು ನೀಡಿದರು. ನಾವುಗಳು ಈಗಲೂ ಈ ಗಾಲಿ ಕುರ್ಚಿಯನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು. ಬಾಬಾರವರ ಅವತರಣ ಕಾಲದಲ್ಲಿ ಈ ಗಾಲಿ ಕುರ್ಚಿಯು ಚಾವಡಿಯಲ್ಲಿ ಇತ್ತು. ಬಾಬಾ ಆ ಕುರ್ಚಿಯನ್ನು ಒಮ್ಮೆ ತಮ್ಮ ಕೈಯಿಂದ ಮುಟ್ಟಿ ಪಕ್ಕಕ್ಕೆ ಇರಿಸಿದರು. ಅವರೆಂದೂ ಆ ಗಾಲಿ ಕುರ್ಚಿಯನ್ನು ಉಪಯೋಗಿಸಲೇ ಇಲ್ಲ. ಬಾಬಾರವರಿಗೆ ಬಹಳವೇ ಹುಷಾರಿಲ್ಲದೆ  ಭಿಕ್ಷೆಗೆ ಹೋಗಲು ಆಗದೇ ಇದ್ದ ಸಮಯದಲ್ಲಿ ಮಾತ್ರ  ಅವರಿಗೆ ಬಹಳ ಹತ್ತಿರವಾಗಿದ್ದ ಭಕ್ತರು ಅವರ ಪರವಾಗಿ ಭಿಕ್ಷೆಗೆ ಹೋಗುತ್ತಿದ್ದರು. ಆ ಸುಯೋಗವನ್ನು ಹೊಂದಿದ್ದ ಸಾಯಿ ಭಕ್ತರುಗಳೆಂದರೆ ಶ್ರೀ.ಮಾಧವ ರಾವ್ ದೇಶಪಂಡೆ (ಶ್ಯಾಮ), ಶ್ರೀ.ಬಾಲಕರಾಮ, ಶ್ರೀ.ವಾಮನ ರಾವ್ ಪಟೇಲ್ (ಶ್ರೀ.ಸಾಯಿ ಶರಣಾನಂದ) ಹಾಗೂ ಪ್ರೊ.ಜಿ.ಜಿ.ನಾರ್ಕೆ. 

ಶ್ರೀ ಸಾಯಿ ಶರಣಾನಂದರು ತಮ್ಮ ಅನುಭವಗಳನ್ನು ಹೀಗೆ ಹಂಚಿಕೊಳ್ಳುತ್ತಾರೆ: “ಒಮ್ಮೆ ಬಾಲಕರಾಮ ಶಿರಡಿಯಲ್ಲಿ ಇಲ್ಲದಿರುವ ಸಮಯದಲ್ಲಿ ಬಾಬಾರವರ ಮಧ್ಯಾನ್ಹದ ಭಿಕ್ಷೆಯ ಸುತ್ತಿಗೆ ನಾನು ಹೋಗುವ ಸುಯೋಗವನ್ನು ಬಹಳ ದಿನಗಳ ಕಾಲ ಪಡೆದಿದ್ದೆ. ಆಗ ನಾನು ಶ್ರೀ.ಬಾಪು ಸಾಹೇಬ್ ಜೋಗ್ ರವರ ಮನೆಯಿಂದ ಭಿಕ್ಷೆಯನ್ನು ಹಾಗೂ ಇನ್ನೊಬ್ಬರ ಮನೆಯಿಂದ ಹಾಲನ್ನು ತೆಗೆದುಕೊಂಡು  ಬರುತ್ತಿದ್ದೆ" ಎಂದು ಅವರು ಹೇಳುತ್ತಾರೆ. ಶ್ರೀ ಸಾಯಿ ಶರಣಾನಂದರ ಈ ಸುಯೋಗವನ್ನು ನೋಡಿದ ಜಿ.ಜಿ.ನಾರ್ಕೆಯವರಿಗೆ ತಮಗೂ ಕೂಡ ಬಾಬಾರವರಿಗೋಸ್ಕರ ಭಿಕ್ಷೆ ಬೇಡುವ ಸುಯೋಗ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತದೆ ಎಂಬ ಆಲೋಚನೆ ಮನದಲ್ಲಿ ಬಂದಿತು. ಒಮ್ಮೆ ನಾರ್ಕೆಯವರಿಗೆ ಬಟ್ಟೆಯನ್ನು ಬದಲಿಸಲು ಸಮಯವಾಗದೇ ತಾವು ಯಾವಾಗಲೂ ಹೊರಗೆ ಹೋಗುವಾಗ ಧರಿಸುತ್ತಿದ್ದ ಸೂಟು ಹಾಗೂ ಟೋಪಿಯನ್ನು ಧರಿಸಿ ಮಸೀದಿಗೆ ಬಂದರು. ಅವರನ್ನು ನೋಡಿದ ಕೂಡಲೇ ಬಾಬಾರವರು “ಈ ದಿನ ಈ ಮನುಷ್ಯ ನನ್ನ ಬದಲಿಗೆ ಭಿಕ್ಷೆಗೆ ಹೋಗುತ್ತಾನೆ” ಎಂದು ಹೇಳಿದರು. ನಾರ್ಕೆಯವರು ಅದೇ ಬಟ್ಟೆಗಳನ್ನು ಧರಿಸಿಯೇ ಸಂತೋಷದಿಂದ ಭಿಕ್ಷೆಗೆ ತೆರಳಿದರು. ನಾರ್ಕೆಯವರಿಗೆ ಸುಮಾರು ನಾಲ್ಕು ತಿಂಗಳ ಕಾಲ ಬಾಬಾರವರ ಪರವಾಗಿ ಭಿಕ್ಷೆಯನ್ನು ಬೇಡುವ ಅಪರೂಪದ ಅವಕಾಶ ಪಡೆದಿದ್ದರು. 

ಬಾಬಾರವರು ಭಿಕ್ಷೆಗೆ ಹೋಗುವ ಸಮಯದಲ್ಲಿ ತಮ್ಮ ಭುಜಕ್ಕೆ ಬಟ್ಟೆಯಿಂದ ಮಾಡಿದ ಜೋಳಿಗೆಯನ್ನು ಸಿಕ್ಕಿಸಿಕೊಂಡು ಬಲಗೈಯಲ್ಲಿ ತಗಡಿನ ಪಾತ್ರೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು. ಗಟ್ಟಿ ಪದಾರ್ಧಗಳಾದ ರೊಟ್ಟಿ ಹಾಗೂ ಪಲ್ಯಗಳನ್ನು ಜೋಳಿಗೆಗೆ ಮತ್ತು ಸಾರು, ಸಾಂಬಾರು, ಹಾಲು, ಮೊಸರು  ಮುಂತಾದ ದ್ರವ ಪದಾರ್ಥಗಳನ್ನು ತಗಡಿನ ಪಾತ್ರೆಯಲ್ಲೂ ಹಾಕಿಸಿಕೊಂಡು ಬರುತ್ತಿದ್ದರು. ಅವರೆಂದಿಗೂ ರುಚಿಯ ಕಡೆಗೆ ಗಮನವಿಡುತ್ತಿರಲಿಲ್ಲ. ಅಲ್ಲದೆ ತಮ್ಮ ಬಳಿ ಬರುತ್ತಿದ್ದ ಭಕ್ತರಿಗೂ ರುಚಿಯ ಕಡೆ ಗಮನ ಹರಿಸದಂತೆ ತಿಳಿಸುತ್ತಿದ್ದರು. 

ಬಾಬಾರವರು ಪ್ರತಿನಿತ್ಯ ಭಿಕ್ಷೆಗೆ ತೆರಳುವಾಗ ಒಂದೇ ದಾರಿಯನ್ನು ಬಳಸುತ್ತಿದ್ದರು. ಅವರು ದ್ವಾರಕಾಮಾಯಿಯಿಂದ ಹೊರಟು ಚಾವಡಿ ಮುಂದಿನ ರಸ್ತೆಯನ್ನು ದಾಟಿ ಮೊದಲು ಸಖಾರಾಮ್ ಶೆಲ್ಕೆ ಹಾಗೂ ವಾಮನ ರಾವ್ ಗೋಂದ್ಕರ್ ರವರ ಮನೆಗೆ ಹೋಗುತ್ತಿದ್ದರು. ನಂತರ ಅಲ್ಲಿಂದ ಸ್ವಲ್ಪ ದೂರ ಮುಂದಿದ್ದ ಬಯ್ಯಾಜಿ ಅಪ್ಪಾಜಿ ಪಾಟೀಲ ಮತ್ತು ತಾತ್ಯಾ ಕೋತೆ ಪಾಟೀಲರ ಮನೆಗೆ ಹೋಗುತ್ತಿದ್ದರು. ಕೊನೆಗೆ ದ್ವಾರಕಾಮಾಯಿಯ ಎದುರುಗಡೆ ಇದ್ದ ನಂದೂರಾಮ ಮಾರವಾಡಿಯ ಮನೆಗೆ ಭಿಕ್ಷೆಗೆ ಹೋಗುತ್ತಿದ್ದರು. ಆ ದಿನಗಳಲ್ಲಿ ಬಯ್ಯಾಜಿ ಅಪ್ಪಾಜಿ ಪಾಟೀಲರ ಮನೆಯಿಂದ ಬರುವ ದಾರಿಯಲ್ಲಿ ಸಣ್ಣ  ಕಲ್ಲು ಬಂಡೆಗಳಿದ್ದವು. ಬಾಬಾರವರು ಆ ಸ್ಥಳದಲ್ಲಿ ಸ್ವಲ್ಪ ಸಮಯ ನಿಂತು ತಮಗೆ ಭಿಕ್ಷೆಯಿಂದ ಬಂದ ಆಹಾರದಲ್ಲಿ ಸ್ವಲ್ಪ ಆಹಾರವನ್ನು ಜೋಳಿಗೆಯಿಂದ ತೆಗೆದು  ಅಲ್ಲಿದ್ದ ಕಾಗೆ ಹಾಗೂ ನಾಯಿಗಳಿಗೆ ತಮ್ಮ ಸ್ವಹಸ್ತದಿಂದ ನೀಡುತ್ತಿದ್ದರು. ಅದರ ಗುರುತಿಗಾಗಿ ಅಲ್ಲಿ ಬಾಬಾರವರ ಕಲ್ಲಿನ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿತ್ತು. ಶ್ರೀ ಸಾಯಿಬಾಬಾ ಸಂಸ್ಥಾನದವರು ಪಲ್ಲಕ್ಕಿ ರಸ್ತೆಯ ಅಗಲೀಕರಣ ಕೈಗೆತ್ತಿಕೊಂಡಾಗ ಆ ಪಾದುಕೆಗಳನ್ನು ಶ್ರೀಮತಿ.ವಿನ್ನಿ ಚಿಟ್ಲೂರಿಯವರು ತೆಗೆದುಕೊಂಡು ಹೋಗಿ ಶಿರಡಿಗೆ ಸಮೀಪದಲ್ಲಿರುವ ಕೊರಾಳೆ ಬಾಬಾ ಮಂದಿರದಲ್ಲಿ ಪ್ರತಿಷ್ಟಾಪಿಸಿರುತ್ತಾರೆ. ಬಾಬಾರವರು ತಮ್ಮ ಭಿಕ್ಷೆಯ ಸುತ್ತನ್ನು ಮುಗಿಸಿಕೊಂಡು ದ್ವಾರಕಾಮಾಯಿಗೆ ಹಿಂತಿರುಗಿದ ಕೂಡಲೇ ತಮ್ಮ ಜೋಳಿಗೆಯಿಂದ ಸ್ವಲ್ಪ ಆಹಾರವನ್ನು ಉರಿಯುತ್ತಿರುವ ಧುನಿಗೆ ಹಾಕಿ ಉಳಿದುದನ್ನು ಮಸೀದಿಯ ಒಳಗಡೆ ಇರಿಸಲಾಗಿದ್ದ ಮಣ್ಣಿನ ಕೊಲಂಬಾದಲ್ಲಿ ಹಾಕುತ್ತಿದ್ದರು. ಕೊಲಂಬಾದ ಮೇಲೆ ಏನೂ ಮುಚ್ಚದಿದ್ದ ಕಾರಣ ನಾಯಿ, ಬೆಕ್ಕು, ಇರುವೆ ಹಾಗೂ ನೊಣಗಳು ಅಲ್ಲಿಂದ ಆಹಾರವನ್ನು ತೆಗೆದುಕೊಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಆ ಕೊಲಂಬಾದಿಂದ ಯಾರೂ ಬೇಕಾದರೂ ಆಹಾರವನ್ನು ತೆಗೆದುಕೊಳ್ಳಬಹುದಾಗಿತ್ತು. ಬಾಬಾ ಯಾರಿಗೂ ಬೇಡವೆಂದು ಹೇಳುತ್ತಿರಲಿಲ್ಲ. ಮಸೀದಿಯನ್ನು ಗುಡಿಸಿ ಸಾರಿಸಲು ಬರುತ್ತಿದ್ದ ಹೆಂಗಳೆಯರು ಪ್ರತಿನಿತ್ಯ ಏಳೆಂಟು ರೊಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.

ಬಾಬಾರವರು ಪ್ರತಿನಿತ್ಯ ಬೆಳಿಗ್ಗೆ 8.30 ರಿಂದ 9.30 ರ ನಡುವೆ ತಪ್ಪದೇ ಲೇಂಡಿ ಉದ್ಯಾನವನಕ್ಕೆ ಹೋಗುತ್ತಿದ್ದರು. ಅವರು ಲೇಂಡಿ ಉದ್ಯಾನವನಕ್ಕೆ ಹೋಗುವಾಗ ಅದೂ ಅವರಿಗೆ ಮನಸ್ಸು ಬಂದಾಗ ಮಾತ್ರ ಕಾಲಿಗೆ ಪಾದರಕ್ಷೆಗಳನ್ನು ಉಪಯೋಗಿಸುತ್ತಿದ್ದರು.  ಅವರು ಮೊದಲು ಮಸೀದಿಯಿಂದ ಹೊರಗೆ ಬಂದು ಹೊರಗಡೆಯಿದ್ದ ಗೋಡೆಗೆ ಒರಗಿಕೊಂಡು ಸ್ವಲ್ಪ ಹೊತ್ತು ನಿಂತುಕೊಳ್ಳುತ್ತಿದ್ದರು. ನಂತರ ಅಲ್ಲಿಂದ ಮಾರುತಿ ಮಂದಿರದ ಬಳಿಗೆ ತೆರಳಿ ಮಂದಿರದ ಒಳಗಿದ್ದ ಹನುಮಂತನನ್ನೇ ದಿಟ್ಟಿಸಿ ನೋಡುತ್ತಾ ಕೈಯಿಂದ ಏನೋ ಸನ್ನೆಗಳನ್ನು ಮಾಡುತ್ತಿದ್ದರು.  ನಂತರ ಗುರುಸ್ಥಾನಕ್ಕೆ ಅಡ್ಡಲಾಗಿದ್ದ ರಸ್ತೆಯ ಬಳಿ ನಿಂತು ಯಾರೊಡನೆಯೋ ಮಾತನಾಡುತ್ತಿರುವಂತೆ ಸ್ವಲ್ಪ ಹೊತ್ತು ನಿಂತಿದ್ದು ನಂತರ ಅಲ್ಲಿಂದ ಮುಂದೆ ಹೋಗುತ್ತಿದ್ದರು. ಗುರುಸ್ಥಾನದ ಹತ್ತಿರದ ಮನೆಗಳಲ್ಲಿ ವಾಸಿಸುತ್ತಿದ್ದ ಭಕ್ತರು ಹಾಗೂ ಆಗಷ್ಟೇ ಶಿರಡಿಗೆ ಬರುತ್ತಿದ್ದ ಭಕ್ತರು ದಾರಿಯಲ್ಲಿಯೇ ಬಾಬಾರವರ ದರ್ಶನ ಮಾಡಿಕೊಳ್ಳುತ್ತಿದ್ದರು. ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನಿಂತು  ಬಾಬಾರವರು ಮಸೀದಿಯಿಂದ ಹೊರಬರುವುದನ್ನೇ ಕಾಯುತ್ತಿದ್ದರು. ಬಾಬಾರವರು ನಿಧಾನವಾಗಿ ದಾರಿಯಲ್ಲಿ ಸಾಗುತ್ತಾ ಪ್ರತಿಯೊಬ್ಬ ಭಕ್ತರ ಹೆಸರು ಹಿಡಿದು ಕರೆಯುತ್ತಾ ಪ್ರೀತಿಯಿಂದ ನಗುನಗುತಾ ಮಾತನಾಡಿಸಿ ನಂತರವಷ್ಟೇ ಮುಂದೆ ಸಾಗುತ್ತಿದ್ದರು.



ನಂತರ ಅವರು ಎಡಕ್ಕೆ ತಿರುಗಿ ಬಾಲಾಜಿ ಪಿಲಾಜಿ ಗುರವ್ ರವರ ಮನೆಯ ಬಳಿಗೆ ಹೋಗುತ್ತಿದ್ದರು. ಅಲ್ಲಿಂದ ಹೊರಟು ವಿಠಲನ ಮಂದಿರದ ಹತ್ತಿರ ಹೋಗಿ  ಅಲ್ಲಿ ರಸ್ತೆಯನ್ನು ದಾಟಿ ಬಲಕ್ಕೆ ತಿರುಗಿ ಹಳೆಯ ಅಂಚೆ ಕಛೇರಿಯ ಬಳಿಯಿದ್ದ ಕನೀಫನಾಥ ಮಂದಿರಕ್ಕೆ ಹೋಗುತ್ತಿದ್ದರು.  ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಪುನಃ ಬಲಕ್ಕೆ ತಿರುಗಿ ಲೇಂಡಿ ಉದ್ಯಾನವನವನ್ನು ಪ್ರವೇಶಿಸುತ್ತಿದ್ದರು. ಲೇಂಡಿ ಉದ್ಯಾನವನದಲ್ಲಿ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿಕೊಳ್ಳುತ್ತಿದ್ದರು.

ಪ್ರಸ್ತುತ ಲೇಂಡಿ ಉದ್ಯಾನವನದಲ್ಲಿ ಬೇವಿನ ಹಾಗೂ ಔದುಂಬರ ವೃಕ್ಷಗಳಿರುವ ಸ್ಥಳದಲ್ಲಿನ ನೆಲದಲ್ಲಿ ಮೊದಲು ಒಂದು ಸಣ್ಣ ಹಳ್ಳದಂತಿದ್ದು ಅಲ್ಲಿ ನಿರಂತರ ಉರಿಯುತ್ತಿರುವ ನಂದಾ ದೀಪವನ್ನು ಹಚ್ಚಿ ಇರಿಸಲಾಗಿತ್ತು. ಅದರ ಸುತ್ತಲೂ ಸೆಣಬಿನ ಚೀಲಗಳಿಂದ ಪರದೆಯನ್ನು ಮಾಡಿ ಮುಚ್ಚಲಾಗಿತ್ತು. ಬಾಬಾರವರು ಯಾವಾಗಲೂ ನಂದಾದೀಪಕ್ಕೆ ಎದುರಾಗಿ ಕುಳಿತುಕೊಳ್ಳದೆ  ಬದಲಿಗೆ ಬೆನ್ನು ಮಾಡಿಕೊಂಡು ಸ್ವಲ್ಪ ಸಮಯ ಅಲ್ಲಿಯೇ ಕುಳಿತಿರುತ್ತಿದ್ದರು. ಅಬ್ದುಲ್ ಬಾಬಾರವರು ಆ ಸ್ಥಳವನ್ನು ಶುದ್ಧ ಮಾಡಿ ದೀಪಗಳಿಗೆ ಎಣ್ಣೆಯನ್ನು ಹಾಕಿ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಬಾಬಾ ಲೇಂಡಿಯೊಳಗೆ ಬರುತ್ತಿದ್ದಂತೆಯೇ ಅವರು ಎರಡು ಮಡಕೆಗಳಲ್ಲಿ ನೀರು ತುಂಬಿ ಇರಿಸುತ್ತಿದ್ದರು. ಬಾಬಾರವರು ಆ ಮಡಕೆಗಳಿಂದ ನೀರನ್ನು ತಮ್ಮ ಕೈಗೆತ್ತಿಕೊಂಡು ಏನೋ ಸನ್ನೆಗಳನ್ನು ಮಾಡುತ್ತಾ ಎಲ್ಲಾ ದಿಕ್ಕುಗಳಿಗೂ ನೀರನ್ನು ಸಿಂಪಡಿಸುತ್ತಿದ್ದರು. ಬಾಬಾರವರು ಈ ರೀತಿ ಮಾಡುವಾಗ ಅಲ್ಲಿ ಯಾರೂ ಇರಲು ಬಿಡುತ್ತಿರಲಿಲ್ಲ. ಅಬ್ದುಲ್ ಬಾಬಾರವರು ಕೂಡ ಅಲ್ಲಿರುತ್ತಿರಲಿಲ್ಲ. ಅಲ್ಲದೇ ಬಾಬಾರವರೊಂದಿಗೆ ಲೇಂಡಿ ಉದ್ಯಾನವನಕ್ಕೆ ಬರುತ್ತಿದ್ದ ಭಕ್ತರೂ ಸಹ ಉದ್ಯಾನವನದ ಹೊರಗಡೆ ನಿಂತು ಬಾಬಾರವರಿಗಾಗಿ ಕಾಯುತ್ತಿದ್ದರು. 

ಲೇಂಡಿ ಉದ್ಯಾನವನದಲ್ಲಿರುವ ಬೇವಿನ ಹಾಗೂ ಔದುಂಬರ ವೃಕ್ಷಗಳನ್ನು ಸ್ವತಃ ಬಾಬಾರವರೇ ನೆಟ್ಟು ನೀರೆರೆದು ಬೆಳೆಸಿದ್ದರು. ಮೊದಲಿಗೆ ಒಂದು ಗಿಡವು ಬಾಡಿಹೋದಂತೆ ಇತ್ತು. ಆದರೆ ಬಾಬಾರವರು ಅದನ್ನು ತಮ್ಮ  ಅಮೃತ ಹಸ್ತದಿಂದ ನಿತ್ಯ ಪೋಷಣೆ ಮಾಡಿ ಅದು ಚೆನ್ನಾಗಿ ಬೆಳೆಯುವಂತೆ ಮಾಡಿದರು. ಲೇಂಡಿಯಲ್ಲಿ ಸ್ವಲ್ಪ ಸಮಯ ಕಳೆದ ನಂತರ ಬಾಬಾರವರು ಬೆಳಿಗ್ಗೆ ಬರುವಾಗ ಯಾವ ದಾರಿಯಲ್ಲಿ ಬಂದರೋ ಅದೇ ದಾರಿಯಲ್ಲಿ ಹಿಂತಿರುಗಿ ಮಸೀದಿಗೆ ವಾಪಸಾಗುತ್ತಿದ್ದರು. ಅವರೆಂದೂ ತಾವು ಹೋಗಿ ಬರುತ್ತಿದ್ದ ಮಾರ್ಗವನ್ನು ಬದಲಿಸುತ್ತಿರಲಿಲ್ಲ. ಬಾಬಾರವರು ತಮ್ಮ ಸಮಾಧಿಯವರೆಗೂ ನಿತ್ಯ ದಿನಚರಿಯನ್ನು ಯಾವುದೇ ಕಾರಣಕ್ಕೂ ಬದಲಿಸದೆ ತಾವು ಪ್ರತಿನಿತ್ಯ ಮಾಡುತ್ತಿದ್ದ ಎಲ್ಲಾ ಕಾರ್ಯಗಳನ್ನೂ ನಿಯಮಿತವಾಗಿ ಮಾಡಿಕೊಂಡು ಬಂದರು. ಆ ಕಾರ್ಯವು ಎಷ್ಟೇ ಸಣ್ಣದ್ದಾಗಿರಲೀ ಅಥವಾ ದೊಡ್ಡ ಕೆಲಸವಾಗಿರಲೀ ಮಾಡುವ ಕ್ರಮವನ್ನು ಬಾಬಾರವರು ಎಂದಿಗೂ ಬದಲಿಸುತ್ತಿರಲಿಲ್ಲ.

ಶಿರಡಿಗೆ ಹರಿದು ಬರುವ ಭಕ್ತರ ಸಂಖ್ಯೆ ಹೆಚ್ಚಾದಂತೆಲ್ಲಾ ಬಾಬಾರವರು ಲೇಂಡಿ ಉದ್ಯಾನವನಕ್ಕೆ ವಿಹಾರಕ್ಕೆ ಬರುವುದು  ಒಂದು ವಿಧ್ಯುಕ್ತ ಹಬ್ಬದ ಮೆರವಣಿಗೆಯಾಗಿ ಮಾರ್ಪಟ್ಟಿತು.ಬಾಬಾರವರು ಮಸೀದಿಯಿಂದ ಲೇಂಡಿ ಉದ್ಯಾನವನಕ್ಕೆ ಹೊರಡುತ್ತಿದ್ದಂತೆ  ಭಾಗೋಜಿ ಶಿಂಧೆ ಅವರ ತಲೆಯ ಮೇಲೆ ವರ್ಣರಂಜಿತವಾದ ಛತ್ರಿಯನ್ನು ಹಿಡಿಯುತ್ತಿದ್ದರು. ನಾನಾ ಸಾಹೇಬ್ ನಿಮೋಣ್ಕರ್ ಮತ್ತು ಬೂಟಿಯವರು ಬಾಬಾರವರ ಬಲ ಹಾಗೂ ಎಡ ಭಾಗಗಳಲ್ಲಿ ನಡೆದುಕೊಂಡು ಅವರೊಂದಿಗೆ ಬರುತ್ತಿದ್ದರು. ಆಗ ಬಾಬಾರವರ ವದನಾರವಿಂದವನ್ನು ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲವೆಂಬತ್ತಿತ್ತು. ಬಾಬಾರವರ ಲೇಂಡಿ ಉದ್ಯಾನವನದ ಮೆರವಣಿಗೆಯ ಈ ಚಿತ್ರವು ಇನ್ನೂ ಪ್ರಚಲಿತದಲ್ಲಿದೆ. 

ಬಾಬಾರವರು ಸುಮಾರು 10 ಗಂಟೆಗೆ ಲೇಂಡಿಯಿಂದ ಮಸೀದಿಗೆ ಹಿಂತಿರುಗುತ್ತಿದ್ದರು. ಆಗಿನಿಂದ 11.30 ರವರೆಗೂ ಬಾಬಾರವರ ರಾಜ ದರ್ಬಾರು ನಡೆಯುತ್ತಿತ್ತು. ಆ ಸಮಯದಲ್ಲಿ ಕೆಲವು  ಭಕ್ತರು ಅವರಿಗಿದ್ದ ಖಾಯಿಲೆ, ಅನುಮಾನಗಳನ್ನು ಬಾಬಾರವರ ಬಳಿ ಹೇಳಿಕೊಂಡರೆ, ಮತ್ತೆ ಕೆಲವು ಭಕ್ತರು ಅವರ ತೊಂದರೆಗಳಿಗೆ ಮಾರ್ಗದರ್ಶನ ನೀಡುವಂತೆ ಕೇಳಿಕೊಳ್ಳುತ್ತಿದ್ದರು. ಇನ್ನೂ ಕೆಲವು ಭಕ್ತರು ತಮ್ಮ ಮನದ ಬಯಕೆಗಳನ್ನು ಪೂರೈಸುವಂತೆ ಕೇಳಿಕೊಳ್ಳುತ್ತಿದ್ದರು.ಆ ಸಮಯದಲ್ಲಿ ಗಾಯಕರು, ನೃತ್ಯಪಟುಗಳು, ಜಾದೂಗಾರರು ಬಂದು ತಮ್ಮ ಪ್ರತಿಭೆಗಳನ್ನು ಬಾಬಾರವರ ಮುಂದೆ ಪ್ರದರ್ಶಿಸಿ ಅವರಿಂದ ಸೂಕ್ತ ಬಹುಮಾನವನ್ನು ಪಡೆಯುತ್ತಿದ್ದರು. ಸಾಮಾನ್ಯವಾಗಿ ಬಾಬಾರವರು ಅವರುಗಳಿಗೆ ಎರಡು ರೂಪಾಯಿಗಳನ್ನು ನೀಡುತ್ತಿದ್ದರು.

ಭಕ್ತರು ಬಾಬಾರವರಿಗೆ ನೀಡಲೆಂದು ಕಾಣಿಕೆಗಳನ್ನು ತಂದಾಗ ಅವರು ಅದನ್ನು ತಮ್ಮ ಕೈಯಿಂದ ಸ್ವೀಕರಿಸಿದಂತೆ ಮುಟ್ಟಿ ನಂತರ ಅದನ್ನು ಆಶೀರ್ವದಿಸಿ ಭಕ್ತರಿಗೆ ಪ್ರಸಾದವೆಂದು ವಾಪಸ್ ನೀಡುತ್ತಿದ್ದರು. ಕೆಲವೊಮ್ಮೆ ಅವರಿಗೆ ನೀಡಿದ್ದನ್ನು ಅಲ್ಲಿದ್ದ ಎಲ್ಲಾ ಭಕ್ತರಿಗೂ ತಮ್ಮ ಕೈಯಾರೆ ಹಂಚುತ್ತಿದ್ದರು. ಬಹಳ ಅಪರೂಪವಾಗಿ ಅವರು ಭಕ್ತರು ತಂದಿದ್ದರಲ್ಲಿ ಸ್ವಲ್ಪವನ್ನು ತಮ್ಮ ಬಾಯಿಗೆ ಹಾಕಿಕೊಳ್ಳುತ್ತಿದ್ದರು. ಭಕ್ತರು ನೀಡಿದ್ದನ್ನು ಬಾಬಾರವರು ಸ್ವೀಕರಿಸಿದಾಗ ಆ ಭಕ್ತರಿಗೆ ಆಗುತ್ತಿದ್ದ ಆನಂದಕ್ಕೆ ಪಾರವೇ ಇಲ್ಲವೆಂದು ಹೇಳಬಹುದು. ಮಾವಿನ ಹಣ್ಣುಗಳು ಬಿಡುತ್ತಿದ್ದ ಋತುವಿನ ಸಮಯದಲ್ಲಿ ಬಾಬಾರವರು ಸ್ವಲ್ಪ ಹಣ್ಣಿನ ರುಚಿಯನ್ನು ನೋಡಿ ಉಳಿದ ಹಣ್ಣುಗಳನ್ನು ಮಸೀದಿಯಲ್ಲಿ ನೆರೆದಿದ್ದ ಎಲ್ಲಾ ಭಕ್ತರಿಗೂ ನೀಡುವಂತೆ ಆದೇಶಿಸುತ್ತಿದ್ದರು. ಇನ್ನಿತರ ಸಮಯದಲ್ಲಿ ಅವರೇ ಸ್ವತಃ ಮಾವಿನ ಹಣ್ಣುಗಳನ್ನು ಖರೀದಿಸಿ ಅದನ್ನು ಎಲ್ಲರಿಗೂ ಹಂಚುತ್ತಿದ್ದರು. 

ಬಾಬಾರವರು ಭಕ್ತರು ತಮಗೆ ನೀಡುತ್ತಿದ್ದ ಬಹುಪಾಲು ಸಿಹಿ ತಿಂಡಿಗಳನ್ನು ಪ್ರತಿನಿತ್ಯ ಮಸೀದಿಗೆ ಬರುತ್ತಿದ್ದ ಮಕ್ಕಳಿಗೆ ಹಂಚುತ್ತಿದ್ದರು. ಮಕ್ಕಳು ಇಲ್ಲದಿದ್ದ ಸಮಯದಲ್ಲಿ ಯಾರಾದರೂ ಭಕ್ತರು ಸಿಹಿ ತಿಂಡಿಗಳನ್ನು ತಂದ ಪಕ್ಷದಲ್ಲಿ, ಬಾಬಾರವರು ಆ ಸಿಹಿ ತಿಂಡಿಗಳನ್ನು ಪಕ್ಕಕ್ಕೆ ಇರಿಸಿದ್ದು ನಂತರ ಮಕ್ಕಳಿಗೆ ನೀಡುತ್ತಿದ್ದರು. ಬಾಬಾರವರಿಗೆ ಮಕ್ಕಳೆಂದರೆ ಪಂಚಪ್ರಾಣ.ಅವರು ಮಕ್ಕಳನ್ನು ಮೆಲುದನಿಯಲ್ಲಿ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಯಾರಾದರೂ ಭಕ್ತರು ಅವರೆದುರಿಗೆ ಮಕ್ಕಳನ್ನು ಜೋರು ದನಿಯಲ್ಲಿ ಬೈದರೆ ಅಥವಾ ಹೊಡೆದರೆ ಬಾಬಾರವರು ಸ್ವಲ್ಪವೂ ಸಹಿಸುತ್ತಿರಲಿಲ್ಲ. 

ಮಕ್ಕಳೊಂದಿಗೆ ಮೃದುವಾಗಿ ನಗುನಗುತ್ತಾ ಮಾತನಾಡುತ್ತಿದ್ದ ಬಾಬಾರವರು ದೊಡ್ಡವರೊಂದಿಗೆ ವ್ಯವಹರಿಸುವಾಗ ಬಹಳ ಗಾಂಭೀರ್ಯತೆಯಿಂದ ವರ್ತಿಸುತ್ತಿದ್ದರು. ಬಾಬಾರವರು ಯಾವಾಗಲೂ ಮುಗುಳ್ನತ್ತಿದರೇ ವಿನಃ ಜೋರಾಗಿ ನಗುತ್ತಿರಲಿಲ್ಲ. ಅವರು ಸಂತೋಷವಾಗಿರುವಾಗ ಸಣ್ಣ ನೀತಿ ಕಥೆಗಳನ್ನು ಹೇಳುತ್ತಿದ್ದರು. ಆ ನೀತಿ ಕಥೆಗಳು ಬೇರೆ ಯಾರದೋ ಆಗಿರದೇ ಆ ಸಮಯದಲ್ಲಿ ಮಸೀದಿಯಲ್ಲಿ ನೆರೆದಿರುತ್ತಿದ್ದ ಯಾರೊಬ್ಬ ಭಕ್ತರದ್ದೇ ಆಗಿರುತ್ತಿತ್ತು. ಹಾಗಾಗಿ ಆ ಭಕ್ತರು ಬಾಬಾರವರ ಸರ್ವಜ್ಞತೆಯನ್ನು ಕಂಡು ಆಶ್ಚರ್ಯಚಕಿತರಾಗುತ್ತಿದ್ದರು. ಈ ನೀತಿ ಕಥೆಗಳ ಮುಖಾಂತರ ಬಾಬಾರವರು ತಮ್ಮ ಭಕ್ತರಿಗೆ ಕೆಲವೊಮ್ಮೆ ಬಯ್ದು ಬುದ್ಧಿ ಹೇಳಿದ್ದೂ ಉಂಟು. ಬಾಬಾ ಯಾವ ಭಕ್ತರನ್ನು ಕುರಿತು ಬಯ್ದು ಬುದ್ಧಿ ಹೇಳಿದ್ದರೋ ಆ ಭಕ್ತರಿಗೆ ಮಾತ್ರ ಅದು ಅರ್ಥವಾಗುವಂತೆ ಅವರು ಬೋಧಿಸುತ್ತಿದ್ದರು.ಇತರ ಭಕ್ತರು ಅದು ಬೇರೆ ಯಾರದೋ ಭಕ್ತರ ಈ ಜನ್ಮದ  ಅಥವಾ ಹಿಂದಿನ ಜನ್ಮದ ಕಥೆಯೆಂದು ಭಾವಿಸುತ್ತಿದ್ದರು.  ಇನ್ನು ಕೆಲವೊಮ್ಮೆ ಬಾಬಾರವರು ಹೇಳಿದ ನೀತಿ ಕಥೆಗಳು ಭಕ್ತರು ಒಬ್ಬರೇ ಅಥವಾ ಗುಂಪುಗೂಡಿಕೊಂಡು ಎಷ್ಟೇ ನೆನಪಿಸಿಕೊಳ್ಳಲು ಪ್ರಯತ್ನಪಟ್ಟರೂ ಅವರ  ಮನಸ್ಸಿನಲ್ಲಿ ಉಳಿಯುತ್ತಿರಲೇ ಇಲ್ಲ. ಆಗ  ಪ್ರತಿಯೊಬ್ಬ ಭಕ್ತರೂ ಬೆಕ್ಕಸ ಬೆರಗಾಗುತ್ತಿದ್ದರು. 

11.30ಕ್ಕೆ ಸರಿಯಾಗಿ ಭಕ್ತರಿಗೆ ಮಧ್ಯಾನ್ಹದ ಆರತಿಯ ಸಮಯವಾಯಿತೆಂದು ಸೂಚಿಸಲು ಮಸೀದಿಯಲ್ಲಿದ್ದ ಗಂಟೆಯು ಮೊಳಗುತ್ತಿತ್ತು. ಭಕ್ತರು ಆ ಸಮಯದಲ್ಲಿ ಎಲ್ಲಿ ಇದ್ದರೂ ಸರಿಯೇ ಅಲ್ಲಿಂದ ಅವಸರವಸರವಾಗಿ ಮಸೀದಿಗೆ ಓಡಿ ಬಂದು ಮಧ್ಯಾನ್ಹದ ವೇಳೆಗೆ ಸರಿಯಾಗಿ ನಡೆಯುತ್ತಿದ್ದ ಆರತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಸಮಯದಲ್ಲಿ ಭಕ್ತರು ಬಾಬಾರವರನ್ನು ಪುಷ್ಪ ಹಾಗೂ ಚಂದನಗಳಿಂದ ಪೂಜಿಸುತ್ತಿದ್ದರು. ಆರತಿ ನೆಡೆಯುವ ಸಮಯದಲ್ಲಿ ಹೆಂಗಳೆಯರು ಬಾಬಾರವರ ಮುಂದುಗಡೆ ಯಲ್ಲಿ ಹಾಗೂ ಗಂಡಸರು ಸಭಾಮಂಟಪದಲ್ಲಿ ನಿಂತುಕೊಂಡಿರುತ್ತಿದ್ದರು. ಆ ಸಮಯದಲ್ಲಿ ಬಾಬಾರವರ ವದನಾರವಿಂದವು ಅರುಣೊದಯದ ಕಾಂತಿಯಂತೆ ಬಹಳ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿತ್ತು. ಬಹಳ ಜನ ಸಾಯಿ ಮಹಾಭಕ್ತರು ತಾವು ಬರೆಯುತ್ತಿದ್ದ ಡೈರಿಯಲ್ಲಿ ಆರತಿಯ ಸಮಯದಲ್ಲಿ ಬಾಬಾರವರ ದಿವ್ಯ ತೇಜಸ್ಸನ್ನು ವೀಕ್ಷಿಸಲು ಅವರ  ಎರಡು ಕಣ್ಣುಗಳು ಸಾಲುತ್ತಿರಲಿಲ್ಲವೆಂದು ಬರೆದುಕೊಂಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಾಯಿ ಭಕ್ತರು ಕಾಪರ್ಡೆಯವರ ಡೈರಿಯನ್ನು ನೋಡಬಹುದಾಗಿದೆ.  ಇದರಿಂದ ಬಾಬಾರವರ ಅವತರಣ ಕಾಲದಲ್ಲಿ ನೆಡೆಯುತ್ತಿದ್ದ ಆರತಿಯ ವೈಭವ ಎಷ್ಟಿತ್ತೆಂಬುದನ್ನು ಸಾಯಿ ಭಕ್ತರು ಕಲ್ಪನೆ ಮಾಡಿಕೊಳ್ಳಬಹುದಾಗಿದೆ. 

ಮಧ್ಯಾನ್ಹ ಆರತಿಯಾದ ನಂತರ ಬಾಬಾರವರು ಎಲ್ಲಾ ಭಕ್ತರನ್ನೂ ಆಶೀರ್ವದಿಸಿ, ಉಧಿಯನ್ನು ನೀಡಿ ಮನೆಗೆ ಕಳುಹಿಸಿಕೊಡುತ್ತಿದ್ದರು. ಅವರು ಪ್ರತಿಯೊಬ್ಬ ಭಕ್ತರಿಗೂ ಪ್ರೀತಿಯಿಂದ ಮಾತನಾಡಿಸಿ ಮನೆಗೆ ತೆರಳಿ ಭೋಜನ ಮುಗಿಸಿ ನಂತರ ಮಸೀದಿಗೆ ವಾಪಸ್ ಬರುವಂತೆ ಹೇಳುತ್ತಿದ್ದರು. 

ನಂತರ ಅವರು ತಾವು ತಂದ ಭಿಕ್ಷೆಯನ್ನು ಭಕ್ತರು ತಂದ ಆಹಾರದೊಂದಿಗೆ ಬೆರೆಸಿ ಸುಮಾರು ಹತ್ತರಿಂದ ಹನ್ನೆರಡು ಸಾಯಿ ಭಕ್ತರೊಂದಿಗೆ ಒಟ್ಟಿಗೆ ಕುಳಿತು ಭೋಜನ ಸವಿಯುತ್ತಿದ್ದರು. ಆ ಸಮಯದಲ್ಲಿ ಬಾಬಾರವರ ಎಡಭಾಗದಲ್ಲಿ ತಾತ್ಯಾ ಪಾಟೀಲ, ರಾಮಚಂದ್ರ ದಾದಾ ಪಾಟೀಲ ಮತ್ತು ಬಯ್ಯಾಜಿ ಅಪ್ಪಾ ಪಾಟೀಲರವರು ಕುಳಿತುಕೊಂಡರೆ ಮಾಲೇಗಾವ್ ನ ಫಕೀರನಾದ ಬಡೇಬಾಬಾ, ಶ್ಯಾಮ, ಬೂಟಿ ಮತ್ತು ಕಾಕಾ ಸಾಹೇಬ್ ದೀಕ್ಷಿತ್ ಅವರ ಬಲಗಡೆ ಕುಳಿತುಕೊಳ್ಳುತ್ತಿದ್ದರು. ತಾತ್ಯಾ ಪಾಟೀಲ, ರಾಮಚಂದ್ರ ದಾದಾ ಪಾಟೀಲ ಮತ್ತು ಬಯ್ಯಾಜಿ ಅಪ್ಪಾ ಪಾಟೀಲರವರು ಒಂದೇ ತಟ್ಟೆಯಲ್ಲಿ ಭೋಜನ ಸ್ವೀಕರಿಸಿದರೆ ಬಾಬಾ ಹಾಗೂ ಬಡೇಬಾಬಾ ಹಾಗೂ ಸಾಯಿಬಾಬಾ ಒಬ್ಬರ ತಟ್ಟೆಯಿಂದ ಮತ್ತೊಬ್ಬರು ತೆಗೆದುಕೊಂಡು ತಿನ್ನುತ್ತಿದ್ದರು. ಬಾಬಾ ಎಂದೂ ಒಬ್ಬರೇ ಕುಳಿತು ಮಧ್ಯಾನ್ಹದ ಊಟ ಮಾಡಿದ್ದೇ ಇಲ್ಲ. ಬಡೇಬಾಬಾ ಮಸೀದಿಯಲ್ಲಿ ಇಲ್ಲದಿದ್ದರೆ ಬಾಬಾರವರು ಊಟಕ್ಕೆ ಕುಳಿತು ಭೋಜನ ಸ್ವೀಕರಿಸುತ್ತಲೇ ಇರಲಿಲ್ಲ. 

ಇತರ ಭಕ್ತರು ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಬಾಬಾರವರ ಎರಡೂ ಬದಿಗಳಲ್ಲಿ ಕುಳಿತುಕೊಂಡು ಎಲ್ಲಾ ನೈವೇದ್ಯಗಳನ್ನು ಚೆನ್ನಾಗಿ ಬೆರೆಸಿ ನೈವೇದ್ಯದ ಪಾತ್ರೆಯನ್ನು ಬಾಬಾರವರ ಮುಂದೆ ಇರಿಸುತ್ತಿದ್ದರು. ಎಲ್ಲರೂ ಊಟಕ್ಕೆ ಕುಳಿತ ನಂತರ ಮಸೀದಿಯ ಮುಂದೆ ಹಾಕಲಾಗಿದ್ದ ಪರದೆಯನ್ನು ಇಳಿಬಿಡಲಾಗುತ್ತಿತ್ತು. ಆ ನಂತರ ಮಸೀದಿಯ ಒಳಗೆ ಹೋಗಲು ಯಾರಿಗೂ ಅನುಮತಿ ಇರಲಿಲ್ಲ. ಬಾಬಾರವರು ತಮ್ಮ ಮುಂದಿದ್ದ ನೈವೇದ್ಯವನ್ನು ದೇವರಿಗೆ ನೈವೇದ್ಯ ಮಾಡಿ ನಂತರ ಸ್ವಲ್ಪ ಪ್ರಸಾದವನ್ನು ಹೊರಗಡೆ ಕಾದುಕೊಂಡಿದ್ದ ಭಕ್ತರಿಗೆ ಹಂಚುವಂತೆ ಹೇಳಿ ಕಳುಹಿಸುತ್ತಿದ್ದರು. ನಂತರ ಪಾತ್ರೆಯಲ್ಲಿ ಉಳಿದಿದ್ದ ನೈವೇದ್ಯಕ್ಕೆ ಸ್ವಲ್ಪ ಹಾಲು, ಸಕ್ಕರೆ ಹಾಗೂ ರೊಟ್ಟಿಯನ್ನು ಬೆರೆಸಿ ಚೆನ್ನಾಗಿ ಹಿಸುಕುತ್ತಿದ್ದರು. ನಂತರ ಅದನ್ನು ಮಸೀದಿಯ ಒಳಗಡೆ ಇದ್ದ ಎಲ್ಲಾ ಭಕ್ತರಿಗೂ ಹಂಚುತ್ತಿದ್ದರು. 

ನಂತರ ನಿಮೋಣ್ಕರ್ ಹಾಗೂ ಶ್ಯಾಮರವರು ಮಸೀದಿಯಲ್ಲಿ ಬಾಬಾರವರ ಜೊತೆಯಲ್ಲಿ ಊಟಕ್ಕೆ ಕುಳಿತಿದ್ದ ಎಲ್ಲರಿಗೂ ಬಡಿಸುತ್ತಿದ್ದರು. ಯಾವ ಭಕ್ತರಾದರೂ ಒಂದು ಪ್ರತ್ಯೇಕ ಬಗೆಯ ಖಾದ್ಯವನ್ನು ಬಹಳ ಇಷ್ಟಪಟ್ಟಲ್ಲಿ ಬಾಬಾರವರು ಆ ಭಕ್ತರಿಗೆ ಅದೇ ಖಾದ್ಯವನ್ನು ಹೆಚ್ಚು ಬಡಿಸುವಂತೆ ಹೇಳುತ್ತಿದ್ದರು. ಶ್ಯಾಮರವರಿಗೆ ರವೆಯಿಂದ ಮಾಡಿದ ಕಡುಬು ಎಂದರೆ ಪಂಚಪ್ರಾಣ ಎಂದು ತಿಳಿದಿದ್ದ ಬಾಬಾರವರು ಅವರಿಗೆ ಹೆಚ್ಚಾಗಿ ರವೆ ಕಡುಬನ್ನು ನೀಡುತ್ತಿದ್ದರು. ಎಂ.ಡಬ್ಲ್ಯೂ. ಪ್ರಧಾನ್  ರವರು ಆ ಸುಂದರ ಸಂದರ್ಭವನ್ನು ಈ ರೀತಿ ವಿವರಿಸುತ್ತಾರೆ:  “ನಾನು ಬಾಬಾರವರೊಂದಿಗೆ ಮಸೀದಿಯಲ್ಲಿ ಆಗಾಗ್ಗೆ ಭೋಜನ ಸ್ವೀಕರಿಸುತ್ತಿದ್ದೆ. ಸ್ವತಃ ಬಾಬಾರವರೇ ತಮ್ಮ ಕೈಯಾರೆ ನಮ್ಮ ತಟ್ಟೆಯ ತುಂಬಾ ಭೋಜನವನ್ನು ಬಡಿಸುತ್ತಿದ್ದರು. ಬಾಬಾರವರು ನನಗೆ ಬಡಿಸಿದ್ದರಲ್ಲಿ ಸ್ವಲ್ಪವನ್ನು ತೆಗೆದು ನನ್ನ ಮನೆಗೆ ಕಳುಹಿಸುತ್ತಿದ್ದೆ. ಅದು ನಮ್ಮ ಮನೆಯವರಿಗೆಲ್ಲಾ ಸಾಕಾಗುತ್ತಿತ್ತು. ಊಟವಾದ ನಂತರ ಬಾಬಾರವರು ಎಲ್ಲರಿಗೂ ಹಣ್ಣನ್ನು ತಿನ್ನಲು ನೀಡುತ್ತಿದ್ದರು. ನನ್ನ ಮಗನಾದ ಬಾಬುವಿಗೆ ಬೇಯಿಸಿದ ಆಹಾರ ಇಷ್ಟವಿಲ್ಲವೆಂದು ಮನಗಂಡಿದ್ದ ಬಾಬಾ ಅವನಿಗೆ ಹಣ್ಣು ತಿನ್ನಲು ನೀಡುತ್ತಿದ್ದರು" ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. 

ಕೆಲವೊಮ್ಮೆ ಮನಸ್ಸು ಬಂದಾಗ ಬಾಬಾರವರೇ ಸ್ವತಃ ಅಡಿಗೆ ಮಾಡಿ ತಮ್ಮ ಕೈಯಾರೆ ಭಕ್ತರಿಗೆ ಬಡಿಸುತ್ತಿದ್ದರು. ಮಸೀದಿಯಲ್ಲಿ ಒಂದು ಚಿಕ್ಕ ಹಾಗೂ ಮತ್ತೊಂದು ದೊಡ್ಡ ಹಂಡೆಯಿತ್ತು. ಅದರಲ್ಲಿ ಸುಮಾರು ಐವತ್ತರಿಂದ ನೂರು ಜನರಿಗೆ ಅಡಿಗೆ ಮಾಡಿ ಬಡಿಸಬಹುದಾಗಿತ್ತು. ಬಾಬಾ  ಅಡಿಗೆ ಮಾಡಲು ಮನಸ್ಸು ಮಾಡಿದಾಗ ಅವರೇ ಮಾರುಕಟ್ಟೆಗೆ ಹೋಗಿ ಎಲ್ಲಾ ಪದಾರ್ಥಗಳನ್ನೂ ತಾವೇ ತರುತ್ತಿದ್ದರು. ಅಲ್ಲದೇ ಅವರೇ ಒಲೆ ಹೊತ್ತಿಸಿ, ತರಕಾರಿಗಳನ್ನು ಹೆಚ್ಚಿ ಅಡಿಗೆ ಮಾಡುತ್ತಿದ್ದರು. ಇಂದಿಗೂ ಮಸೀದಿಗೆ ಹೋದರೆ ಬಾಬಾರವರು ಅಡುಗೆ ಮಾಡಲು ಬಳಸುತ್ತಿದ್ದ ಒಲೆಯನ್ನು ನೋಡಬಹುದು. ಅವರು ಕೆಲವೊಮ್ಮೆ ಸಿಹಿ ಅನ್ನ, ಪಲಾವ್ ಅಥವಾ ಮಾಂಸ ಮಿಶ್ರಿತ ಪಲಾವ್ ತಯಾರಿಸುತ್ತಿದ್ದರು. ಅವರು ತಮ್ಮ ಕೈಯನ್ನು ಕುದಿಯುತ್ತಿರುವ ಹಂಡೆಯೊಳಗೆ ಹಾಕಿ ಕಲಕುತ್ತಿದ್ದರು. ಆಶ್ಚರ್ಯವೆಂದರೆ ಅವರ ಕೈ ಸುಡುತ್ತಿರಲಿಲ್ಲ. ಕೆಲವೊಮ್ಮೆ ಮಾಂಸದ ಸಾರನ್ನು ತಯಾರಿಸಿ ಅದರಲ್ಲಿ ರೊಟ್ಟಿಯನ್ನು ಹಾಕುತ್ತಿದ್ದರು. ಇನ್ನು ಕೆಲವು ಸಲ ಅವರು ಗಂಜಿಯನ್ನು ತಯಾರಿಸಿ ಅದನ್ನು ಮಜ್ಜಿಗೆಯೊಂದಿಗೆ ಭಕ್ತರಿಗೆ ಬಡಿಸುತ್ತಿದ್ದರು. ಇಲ್ಲವೇ ಗೋಧಿಯನ್ನು ಅರೆದು ಧುನಿಯ ಅಗ್ನಿಯ ಸಹಾಯದಿಂದ ಅದರಲ್ಲಿ ಹೇರಳವಾಗಿ ರೊಟ್ಟಿಯನ್ನು ತಯಾರು ಮಾಡಿ ಬಡಿಸುತ್ತಿದ್ದರು. ಆ ರೊಟ್ಟಿಗಳು ಬಹಳ ದೊಡ್ಡ ಗಾತ್ರದ್ದಾಗಿರುತ್ತಿತ್ತು ಹಾಗೂ ಒಂದು ರೊಟ್ಟಿಯನ್ನು ತಿಂದರೆ ಸಾಕು ಬಹಳ ಹೊಟ್ಟೆ ಹಸಿದವನ ಹಸಿವನ್ನೂ ನೀಗಿಸುತ್ತಿತ್ತು. 

ಬಾಬಾರವರು ಸಸ್ಯಾಹಾರಿಗಳಿಗೆ ಎಂದೂ  ಮಾಂಸಾಹಾರವನ್ನು ನೀಡುತ್ತಿರಲಿಲ್ಲ. ಆಹಾರವನ್ನು ತಯಾರಿಸಿದ ನಂತರ ಮೌಲ್ವಿಯನ್ನು ಕರೆದು ಅವರ ಕೈಯಲ್ಲಿ ಆ ಆಹಾರವನ್ನು ದೇವರಿಗೆ ಅರ್ಪಣೆ  ಮಾಡಿಸಿ ನಂತರ ಅದರಲ್ಲಿ ಸ್ವಲ್ಪ ಆಹಾರವನ್ನು ತಾತ್ಯಾ ಹಾಗೂ ಮಹಾಳಸಾಪತಿಯವವರ ಮನೆಗೆ ಕಳುಹಿಸುತ್ತಿದ್ದರು. ನಂತರ ಉಳಿದ ಆಹಾರವನ್ನು ಮಸೀದಿಯಲ್ಲಿದ್ದ ಎಲ್ಲಾ ಭಕ್ತರಿಗೂ ಹಂಚುತ್ತಿದ್ದರು. ಆದರೆ 1910ನೇ ಇಸವಿಯ ನಂತರದಿಂದ ಶಿರಡಿಗೆ ಭೇಟಿ ನೀಡುತ್ತಿದ್ದ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿ ಭಕ್ತರೇ ಎಲ್ಲಾ ರೀತಿಯ ಪದಾರ್ಥಗಳನ್ನು ಅರ್ಪಿಸಲು ಪ್ರಾರಂಭಿಸಿದ ಮೇಲೆ ಬಾಬಾರವರು ಮಸೀದಿಯಲ್ಲಿ ಅಡುಗೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಭಕ್ತರು ಬಾಬಾರವರಿಗೆ ನೈವೇದ್ಯವಾಗಿ ಅರ್ಪಿಸುತ್ತಿದ್ದ ಆಹಾರವು ಪ್ರತಿದಿನ 150-200 ಭಕ್ತರಿಗೆ ಸಾಕಾಗುತ್ತಿತ್ತು.

ಮಸೀದಿಯಲ್ಲಿ ಎಲ್ಲಾ ಭಕ್ತರ ಊಟವಾದ ಮೇಲೆ ಸಗುಣ ಮೇರು ನಾಯಕ್ ಮಸೀದಿಯನ್ನು ಶುಭ್ರಗೊಳಿಸುತ್ತಿದ್ದರು. ಬಾಬಾ ತಮ್ಮ ಸ್ಥಳದಲ್ಲಿ ಕುಳಿತುಕೊಂಡ ನಂತರ ಸಗುಣ ಮೇರು ನಾಯಕ್ ರವರು ಬಾಬಾರವರಿಗೆ ವಿಳ್ಳೆಯದೆಲೆ ಹಾಗೂ ಅಡಿಕೆಯನ್ನು ಒಂದು ಲೋಟಾ ನೀರು ಹಾಗೂ ಎರಡು ರೂಪಾಯಿ ದಕ್ಷಿಣೆಯೊಂದಿಗೆ ನೀಡುತ್ತಿದ್ದರು. 

ಮಧ್ಯಾನ್ಹ ಊಟವಾದ ನಂತರ ಮಸೀದಿಯ ಒಳಗೆ ಯಾರಿಗೂ ಉಳಿದುಕೊಳ್ಳಲು ಬಿಡುತ್ತಿರಲಿಲ್ಲ. ಬಾಬಾರವರು ಎಲ್ಲಾ ಭಕ್ತರನ್ನೂ ಹೊರಗೆ ಕಳುಹಿಸಿ ಮಧ್ಯಾನ್ಹ  1.00 ರಿಂದ  2.30 ರವರೆಗೆ ಒಂಟಿಯಾಗಿರುತ್ತಿದ್ದರು. ಬಾಬಾರವರ ಬಳಿ ಒಂದು ಇಟ್ಟಿಗೆಯಿದ್ದು ಅದನ್ನು ಅವರು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು. ಅವರು ಆ ಇಟ್ಟಿಗೆಯು ತಮ್ಮ ಗುರುವಿನ ಪ್ರಸಾದವೆಂದು ಎಲ್ಲರಿಗೂ ಹೇಳುತ್ತಿದ್ದರು. ಅವರು ನಿದ್ರಿಸುವಾಗ ತಮ್ಮ ತಲೆಯನ್ನು ಆ ಇಟ್ಟಿಗೆಯ ಮೇಲೆ ಇರಿಸಿಕೊಂಡು ಮಲಗಿಕೊಳ್ಳುತ್ತಿದ್ದರು. ಅವರು ಕುಳಿತುಕೊಂಡಿದ್ದಾಗ  ಆ ಇಟ್ಟಿಗೆಯನ್ನು ತಮ್ಮ ಬಲಭಾಗದಲ್ಲಿ ಇಟ್ಟುಕೊಂಡು ತಮ್ಮ ಬಲಗೈಯನ್ನು ಅದರ ಮೇಲೆ ಇರಿಸಿಕೊಂಡು ಕುಳಿತುಕೊಳ್ಳುತ್ತಿದ್ದರು. ಬಾಬಾರವರು ಬೆಳಗಿನ ಹೊತ್ತು ಎಂದೂ ಮಲಗಿಕೊಳ್ಳುತ್ತಿರಲಿಲ್ಲ ಹಾಗೂ ಕುಳಿತುಕೊಂಡಾಗ ಗೋಡೆಗೆ ಬೆನ್ನು ಮಾಡುತ್ತಿರಲಿಲ್ಲ. ಅವರು ಯಾರಿಗೂ ಕಾಣದಂತೆ ಒಬ್ಬರೇ ಕುಳಿತುಕೊಂಡು ತಮ್ಮ ಬಳಿಯಿದ್ದ ಹಳೆಯ ಗೋಣಿ ಚೀಲವನ್ನು ಹೊರತೆಗೆಯುತ್ತಿದ್ದರು. ಆ ಗೋಣಿ ಚೀಲದಲ್ಲಿ ಹಳೆಯದಾಗಿದ್ದ ನಾಲ್ಕು ಆಣೆ, ಎರಡೂವರೆ ಆಣೆ, ಒಮ್ಂದು ಪೈಸೆ ಮತ್ತಿತರ ಕೆಲವು ನಾಣ್ಯಗಳಿರುತ್ತಿದ್ದವು. (ಆಗಿನ ಕಾಲದಲ್ಲಿ ಒಂದು ರೂಪಾಯಿ ಹದಿನಾರು ಆಣೆಗೆ ಸಮನಾಗಿತ್ತು). ಬಾಬಾರವರು ಆ ನಾಣ್ಯಗಳನ್ನು ಹೊರತೆಗೆದು ಒಂದೊಂದನ್ನೂ ಚೆನ್ನಾಗಿ ಉಜ್ಜುತ್ತಾ  “ಇದು ನಾನಾ ದು; ಇದು ಕಾಕನದು; ಇದು ಸುಮ್ಯನದು; ಇದು ದಾಮ್ಯನದು" ಎಂದು ಹೇಳುತ್ತಿದ್ದರು. ಆ ಸಮಯದಲ್ಲಿ ಬಾಬಾರವರಿಗೆ ಯಾರಾದರೂ ಬರುವ ಸಪ್ಪಳವಾದಂತೆ ಅನುಭವವಾದಲ್ಲಿ ಅವರು ಕೂಡಲೇ ಆ ನಾಣ್ಯಗಳನ್ನೂ ವಾಪಸ್ ಗೋಣಿಚೀಲದಲ್ಲಿ ಮುಚ್ಚಿಡುತ್ತಿದ್ದರು. ಆ ನಾಣ್ಯಗಳು ಏನನ್ನು ಸೂಚಿಸುತ್ತಿದ್ದವು ಹಾಗೂ ಬಾಬಾ ಆ ನಾಣ್ಯಗಳನ್ನು  ಏಕೆ ಆ ರೀತಿ ಉಜ್ಜುತ್ತಿದ್ದರು ಎಂಬುದು ಯಾರೂ ತಿಳಿಯದ ರಹಸ್ಯವಾಗಿತ್ತು. ಬಾಬಾರವರು ಯಾರಿಗೂ ಈ ನಾಣ್ಯದ ವಿಷಯವನ್ನು ತಿಳಿಸಿರಲಿಲ್ಲ. ಅಲ್ಲದೇ ಬಾಬಾರವರು ಈ ರೀತಿ ಏಕಾಂತದಲ್ಲಿದ್ದಾಗ ತಮ್ಮ ಹಳೆಯದಾಗಿ ಹರಿದುಹೋಗಿ ತೂತಾಗಿದ್ದ  ಕಫ್ನಿಯನ್ನು ರಿಪೇರಿ ಮಾಡಿಕೊಳ್ಳುತ್ತಿದ್ದರು.  

ಬಾಬಾರವರು ಪುನಃ ಮಧ್ಯಾನ್ಹ 2.30 ಕ್ಕೆ ಲೇಂಡಿ ಉದ್ಯಾನವನಕ್ಕೆ ಹೋಗಿ ಬರುತ್ತಿದ್ದರು. ಲೇಂಡಿಯಿಂದ ಹಿಂತಿರುಗಿದ ನಂತರ ಮಸೀದಿಯಲ್ಲಿ ದರ್ಬಾರು ನಡೆಸುತ್ತಿದ್ದರು.  ದರ್ಬಾರು ಮುಗಿಸಿದ ನಂತರ ಸಾಯಂಕಾಲದ ಸಮಯದಲ್ಲಿ ಮಸೀದಿಯ ಮುಂದಿದ್ದ ಸಭಾಮಂಟಪದಲ್ಲಿ ನಡೆದಾಡುತ್ತಿದ್ದರು. ನಂತರ ಮಸೀದಿಯ ಹೊರಗೋಡೆಯ ಪಕ್ಕದಲ್ಲಿದ್ದ ಗೋಡೆಗೆ ಒರಗಿ ನಿಂತುಕೊಂಡು ಹೋಗಿಬರುತ್ತಿದ್ದ ಶಿರಡಿಯ ಗ್ರಾಮಸ್ಥರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕೆಲವೊಮ್ಮೆ ಅವರಾಡುತ್ತಿದ್ದ ಸಾಂಕೇತಿಕ ಮಾತುಗಳು ಯಾರಿಗೂ ಅರ್ಥವಾದೇ ಬದಲಿಗೆ ಅವರೊಬ್ಬರಿಗೆ ತಿಳಿದಿರುತ್ತಿತ್ತು. ಅವರು "ಹತ್ತು ಹಾವುಗಳು ಹೊರಟು ಹೋಯಿತು. ಇನ್ನೂ ಅನೇಕ ಹಾವುಗಳು ಬರುತ್ತವೆ", "ವ್ಯಾಪಾರಿಗಳು ಮತ್ತು ಎಣ್ಣೆ ಮಾರುವವರು ನನಗೆ ತುಂಬಾ ತೊಂದರೆ ನೀಡಿದ್ದಾರೆ. ನಾನು ಈ ಮಸೀದಿಯಲ್ಲಿ ಇನ್ನು ಹೆಚ್ಚು ಕಾಲ ಇರಲಾರೆ. ನಾನು ಇಲ್ಲಿಂದ ದೂರ ಹೋಗುತ್ತೇನೆ" ಎಂದು ನುಡಿಯುತ್ತಿದ್ದರು. ಕೆಲವೊಮ್ಮೆ ಇದ್ದಕ್ಕಿದ್ದಂತೆ ಅವರು ಮಸೀದಿ ಹಾಗೂ ಶಿರಡಿಯನ್ನು ಬಿಟ್ಟು ಹೊರಟು ಬಿಡುತ್ತಿದ್ದರು. ಬಾಬಾರವರು ಹಾಗೆ ಮಾಡಿದಾಗ ಭಕ್ತರು ಬಂದು ತಾತ್ಯಾರವರಿಗೆ ವಿಷಯ ತಿಳಿಸಲು ಅವರು ಓಡಿ ಬಂದು ಬಾಬಾರವರಿಗೆ "ಬಾಬಾ ನಿಮಗೆ ತೊಂದರೆ ನೀಡಿದವರಿಗೆ ನಾನು ಶಿಕ್ಷೆ ನೀಡುತ್ತೇನೆ. ನೀವು ಶಿರಡಿಯನ್ನು ಬಿಟ್ಟು ಹೋಗಲು ನಾನು ಬಿಡುವುದಿಲ್ಲ. ಏನೇ ಆಗಲಿ ಇಂದು ನೀವು ಹೊರಡಬೇಡಿ. ನೀವು ಹೊರಡುವ ಬಗ್ಗೆ ನಾಳೆ ನೋಡೋಣ” ಎಂದು ಸಮಾಧಾನ ಮಾಡುತ್ತಿದ್ದರು. ತಾವು ಶಿರಡಿಯನ್ನು ಬಿಟ್ಟು ಹೋಗುತ್ತೇನೆಂದು  ಏಕೆ ಹೆದರಿಸಿದರೆಂಬ ವಿಷಯ ಬಾಬಾರವರೊಬ್ಬರಿಗೇ ತಿಳಿದಿರುತ್ತಿತ್ತು.  ಹೀಗೆ ತಾತ್ಯಾ ಬಾಬಾರವರ ಮನ ಒಲಿಸುವುದರಲ್ಲಿ ಯಶಸ್ವಿಯಾದ ನಂತರ ಬಾಬಾ ಮಸೀದಿಯಲ್ಲಿ ಕುಳಿತು ಏನೂ ಆಗಲೇ ಇಲ್ಲವೆಂಬಂತೆ  ಭಕ್ತರೊಡನೆ ಮಾತುಕತೆ ನೆಡೆಸುತ್ತಿದ್ದರು. ಬಾಬಾರವರು ಹಾಗೆ ಮಸೀದಿಯ ಹೊರಗೆ ನಿಂತು ಭಕ್ತರೊಡನೆ ಮಾತನಾಡುತ್ತಿದ್ದ ಸ್ಥಳದಲ್ಲಿ ಪವಿತ್ರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಅದನ್ನು ಈಗಲೂ ಭಕ್ತರು ನೋಡಬಹುದಾಗಿದೆ. ಈ ಪಾದುಕೆಗಳನ್ನು ಬಾಬಾರವರು ಕೈಗಳನ್ನು ಇರಿಸುತ್ತಿದ್ದ ಗೋಡೆಯ ಕೆಳಗೆ ಸ್ಥಾಪಿಸಲಾಗಿದೆ. ಬಾಬಾರವರು  ಬಾಬಾರವರು ಕೆಲವೊಮ್ಮೆ ಈ ಸ್ಥಳದಲ್ಲಿ ನಿಂತು ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದರೆಂದು ಹೇಳಲಾಗುತ್ತದೆ. 

ಬಾಬಾರವರು ಮಸೀದಿಗೆ ಅಂಟಿಕೊಂಡಂತೆ ಇದ್ದ ರಸ್ತೆಯಲ್ಲಿ ಸಂಜೆಯ ಸಮಯದಲ್ಲಿ ನಡೆದಾಡುತ್ತಿದ್ದರು. ಆ ಸಮಯದಲ್ಲಿ ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊಂಡಿರುತ್ತಿದ್ದರು. ಬಾಬಾರವರು ನಿಧಾನವಾಗಿ ಹೆಜ್ಜೆ ಹಾಕುತ್ತಾ ಪ್ರತಿಯೊಬ್ಬ ಭಕ್ತರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. 

ಸಾಯಂಕಾಲ 6 ರಿಂದ 6.30 ರ ಸಮಯದಲ್ಲಿ ಬಾಬಾರವರಿಗೆ ಸಂಜೆಯ ಧೂಪಾರತಿಯನ್ನು ಮಾಡಲಾಗುತ್ತಿತ್ತು. ಆರತಿಯ ನಂತರ ಬಾಬಾರವರು ಮತ್ತೆ ದರ್ಬಾರು ನೆಡೆಸುತ್ತಿದ್ದರು. ಆಗ ಭಕ್ತರು ಬಾಬಾರವರ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಅವರಿಂದ ಸಮಂಜಸವಾದ ಉತ್ತರ ಹಾಗೂ ಅವರ ಆಶೀರ್ವಾದವನ್ನು ಪಡೆಯುತ್ತಿದ್ದರು. 

ಬಾಬಾರವರು ತಮ್ಮ ಬಳಿಗೆ ಬರುತ್ತಿದ್ದ ಭಕ್ತರಿಂದ ದಕ್ಷಿಣೆಯನ್ನು ಕೇಳಿ ಪಡೆಯುತ್ತಿದ್ದರು. ಪ್ರತಿ ರಾತ್ರಿ ಸುಮಾರು 8 ಗಂಟೆಯ ಸಮಯದಲ್ಲಿ ಬಾಬಾರವರು ತಾವು ಆ ದಿನ ಪಡೆದ ಎಲ್ಲಾ ದಕ್ಷಿಣೆಯನ್ನು ಮಸೀದಿಯಲ್ಲಿ ಇದ್ದ ಎಲ್ಲಾ ಭಕ್ತರಿಗೂ ಹಂಚಿಬಿಡುತ್ತಿದ್ದರು. ಬಾಬಾರವರು ಈ ರೀತಿಯಲ್ಲಿ ದಾನ-ಧರ್ಮವನ್ನು  ತಮ್ಮ ಜೀವನ ಪೂರ್ತಿ ಮಾಡಿದರು. ಅವರು ಪ್ರತಿಯೊಬ್ಬ ಭಕ್ತರಿಗೂ ತಾವು ಮೊದಲೇ ನಿಗದಿಪಡಿಸಿದಷ್ಟು ಹಣವನ್ನು ನೀಡುತ್ತಿದ್ದರು. ಭಕ್ತರು ಆ ಹಣವನ್ನು ತಮಗೆ ಬರುತ್ತಿದ್ದ ಸಂಬಳವೆಂದು ಭಾವಿಸುತ್ತಿದ್ದರು. ಅವರು ಬಡೇ ಬಾಬಾರವರಿಗೆ 55 ರೂಪಾಯಿ, ತಾತ್ಯಾರವರಿಗೆ 35 ರೂಪಾಯಿ, ಜಾಂಟೆ ಮುಸ್ಲಿಮನಿಗೆ 7 ರೂಪಾಯಿ, ಬಯ್ಯಾಜಿ ಅಪ್ಪಾ ಕೋತೆ  ಪಾಟೀಲ, ಭಾಗೋಜಿ ಶಿಂಧೆ ಮತ್ತು ರಾಮಚಂದ್ರ ದಾದಾ ಪಾಟೀಲರಿಗೆ 4 ರೂಪಾಯಿಗಳನ್ನು ನೀಡುತ್ತಿದ್ದರು. ಹೀಗೆ ಬಾಬಾರವರು ಇನ್ನೂ ಅನೇಕ ಭಕ್ತರಿಗೆ ಹಣ ನೀಡುತ್ತಿದ್ದರು. ರಾಮಚಂದ್ರ ದಾದಾ ಪಾಟೀಲರು ತಾವು ಪಡೆದ ನಾಲ್ಕು ರೂಪಾಯಿಗಳಿಗೆ ಬದಲಾಗಿ ಬಾಬಾರವರಿಗೆ ನಾಲ್ಕು ಕಲ್ಲು ಸಕ್ಕರೆಯ ತುಂಡುಗಳನ್ನು ನೀಡುತ್ತಿದ್ದರು. ಬಾಬಾರವರು ಹೊಸದಾಗಿ ಮದುವೆಯಾಗಿ ತಮ್ಮ ದರ್ಶನ ಹಾಗೂ ಆಶೀರ್ವಾದವನ್ನು ಪಡೆಯಲು ಬರುತ್ತಿದ್ದ ದಂಪತಿಗಳಿಗೆ ತಲಾ ಒಂದು ರೂಪಾಯಿಗಳನ್ನು ನೀಡಿ ಆಶೀರ್ವದಿಸುತ್ತಿದ್ದರು. ರಾಮನವಮಿ ಹಾಗೂ ಇತರ ಉತ್ಸವದ ಸಂದರ್ಭಗಳಲ್ಲಿ ದಾದಾ ಕೇಳ್ಕರ ಹಾಗೂ ಬಡೇ ಬಾಬಾರವರಿಗೆ ಎರಡು ಕಂತೆ ಒಂದು ರೂಪಾಯಿಯ  ನೋಟುಗಳನ್ನು ನೀಡಿ ಎಲ್ಲರಿಗೂ ಹಂಚುವಂತೆ ತಿಳಿಸುತ್ತಿದ್ದರು. ಅನೇಕ ಫಕೀರರು ಹಾಗೂ ಭಿಕ್ಷುಕರು ಭಕ್ತರು ಬಾಬಾರವರಿಗೆ ನೀಡುತ್ತಿದ್ದ ಆಹಾರವನ್ನು ತಿಂದು ತಮ್ಮ ಜೀವನ ನಡೆಸುತ್ತಿದ್ದರು. ಬಾಬಾರವರು ಅವರುಗಳಿಗೆ ಪ್ರತಿನಿತ್ಯ ತಲಾ ಇಪ್ಪತೈದು ಪೈಸೆಗಳನ್ನು ನೀಡುತ್ತಿದ್ದರು. ಪ್ರತಿದಿನ ಸಂಜೆಯ ಸಮಯದಲ್ಲಿ ಕೀರ್ತನಕಾರರು, ಚಿತ್ರ ಕಲಾವಿದರು, ನೃತ್ಯಪಟುಗಳು ಹಾಗೂ ಇನ್ನಿತರರು ಬಂದು ತಮ್ಮ ಕಲೆಯನ್ನು ಬಾಬಾರವರ ಮುಂದೆ ಪ್ರದರ್ಶಿಸಿ ಅವರಿಂದ ಎರಡು ರೂಪಾಯಿಗಳನ್ನು ಆಶೀರ್ವಾದಪೂರ್ವಕವಾಗಿ ಸ್ವೀಕರಿಸಿ ಹೋಗುತ್ತಿದ್ದರು. 

ಈ ಪ್ರಕ್ರಿಯೆಗಳೆಲ್ಲಾ ಮುಗಿದ ನಂತರ ತಾತ್ಯಾ ಪಾಟೀಲರು ರೊಟ್ಟಿ ಮತ್ತು ಹಾಲನ್ನು ಬಾಬಾರವರ ರಾತ್ರಿ ಭೋಜನಕ್ಕೆಂದು ತರುತ್ತಿದ್ದರು.  ಬಾಬಾರವರು ಅದರಿಂದ ಸ್ವಲ್ಪವೇ ಆಹಾರವನ್ನು ತೆಗೆದುಕೊಂಡು ಉಳಿದುದನ್ನು ಭಕ್ತರಿಗೆ ಪ್ರಸಾದವೆಂದು ನೀಡುತ್ತಿದ್ದರು. ಆಗ ಬಾಬಾರವರು ತಾತ್ಯಾರವರಿಗೆ 35 ರೂಪಾಯಿಗಳನ್ನು ನೀಡುತ್ತಿದ್ದರು.  ಆ  ದಿನ ಬಾಬಾರವರು ದ್ವಾರಕಾಮಾಯಿಯಲ್ಲಿ ನಿದ್ರಿಸುತ್ತಿದ್ದ ಪಕ್ಷದಲ್ಲಿ  ಭಕ್ತರೆಲ್ಲರೂ ಅವರಿಂದ ಆಶೀರ್ವಾದ ಹಾಗೂ ಉಧಿಯನ್ನು ಪಡೆದುಕೊಂಡು ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಮಹಾಳಸಾಪತಿ ಹಾಗೂ ತಾತ್ಯಾರವರನ್ನು ಬಿಟ್ಟು ಮತ್ಯಾರಿಗೂ  ರಾತ್ರಿಯ ವೇಳೆ ಮಸೀದಿಯಲ್ಲಿ ಸಾಯಿಬಾಬಾರವರೊಂದಿಗೆ ಮಲಗಲು ಬಾಬಾರವರು ಅನುಮತಿ ನೀಡುತ್ತಿರಲಿಲ್ಲ.     

ಒಮ್ಮೆ ಶಿರಡಿ ಗ್ರಾಮದಲ್ಲಿ ಭಯಂಕರವಾದ ಬಿರುಗಾಳಿ ಹಾಗೂ ಮಳೆ ಸುರಿಯಿತು. ಮಸೀದಿಯು ಹಳೆಯದಾಗಿದ್ದರಿಂದ ಭಕ್ತರು ಬಾಬಾರವರಿಗೆ ಚಾವಡಿಯಲ್ಲಿ ನಿದ್ರಿಸುವಂತೆ ಬೇಡಿಕೊಂಡರು. ಅವರುಗಳು ಎಷ್ಟೇ ಒತ್ತಾಯ ಮಾಡಿದರೂ ಬಾಬಾರವರು ಬಡಪಟ್ಟಿಗೆ ಒಪ್ಪಲಿಲ್ಲ. ಆಗ ನಾರಾಯಣ ತೇಲಿ ಎಂಬ ಭಕ್ತರೊಬ್ಬರು ಬಾಬಾರವರನ್ನು ಅನಾಮತ್ತಾಗಿ ಎತ್ತಿ ತಮ್ಮ ಹೆಗಲ ಮೇಲೆ ಹಾಕಿಕೊಂಡು ಬಾಬಾರವರು ಕೋಪದಿಂದ ಕಿರುಚಿಕೊಳ್ಳುತ್ತಿದ್ದರೂ ಲೆಕ್ಕಿಸದೇ ಅವರನ್ನು ಚಾವಡಿಗೆ ಕರೆತಂದರು. ಹಾಗಾಗಿ ಬಾಬಾರವರು ಆ ರಾತ್ರಿ ಚಾವಡಿಯಲ್ಲೇ ನಿದ್ರಿಸಿದರು. ಆ ದಿನದಿಂದ ಬಾಬಾರವರು ದಿನ ಬಿಟ್ಟು ದಿನ ಚಾವಡಿಯಲ್ಲಿ ನಿದ್ರಿಸಲು ಪ್ರಾರಂಭಿಸಿದರು. 

ಬಾಬಾರವರು ಚಾವಡಿಯ ಬಲಭಾಗದಲ್ಲಿ ಮಲಗುತ್ತಿದ್ದರು. ಚಾವಡಿಯ ಎಡ ಭಾಗದಲ್ಲಿ ಕೆಲವು ಭಕ್ತರು ಮಲಗಿಕೊಳ್ಳುತ್ತಿದ್ದರು. ಈ ಎರಡೂ ಭಾಗಗಳ  ನಡುವೆ ಕಬ್ಬಿಣದ ಸರಪಳಿಯನ್ನು ಹಾಕಿ ಬೇರ್ಪಡಿಸಲಾಗಿತ್ತು. ಬಾಬಾರವರು ಚಾವಡಿಯಲ್ಲಿ ಮಲಗುತ್ತಿದ್ದ ದಿನದಂದು ದೊಡ್ಡ ಉತ್ಸವವೇ ನಡೆಯುತ್ತಿತ್ತು. ರಾಧಾಕೃಷ್ಣ ಮಾಯಿ ಹಾಗೂ ಅಬ್ದುಲ್ ಬಾಬಾರವರು ಮಸೀದಿಯಿಂದ ಚಾವಡಿಯವರೆಗಿನ ರಸ್ತೆಯನ್ನು ಚೆನ್ನಾಗಿ ನೀರಿನಿಂದ ತೊಳೆದು ಶುಭ್ರಗೊಳಿಸಿ ಧೂಳು ಮೇಲೆಳದಂತೆ ನೋಡಿಕೊಳ್ಳುತ್ತಿದ್ದರು. ನಂತರ ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ವಿವಿಧ ಬಗೆಯ  ರಂಗೋಲಿಯನ್ನು ಹಾಕಿ ಅಲಂಕರಿಸಲಾಗುತ್ತಿತ್ತು. ಬಾಬಾರವರು ನಡೆದು ಬರುತ್ತಿದ್ದ ಹಾದಿಯಲ್ಲಿ ಬಟ್ಟೆಯನ್ನು ಹಾಸಿ ಅವರಿಗೆ ರಾಜ ಮರ್ಯಾದೆ ನೀಡಲಾಗುತ್ತಿತ್ತು. ಇಷ್ಟೆಲ್ಲಾ ವ್ಯವಸ್ಥೆ ಮಾಡಿದ ನಂತರ ತಾತ್ಯಾರವರು ಮಸೀದಿಗೆ ಬಂದು  ಬಾಬಾರವರಿಗೆ ಎಬ್ಬಿಸಿ ಚಾವಡಿಗೆ ಹೊರಡಲು ತಯಾರಾಗುವಂತೆ  ಹೇಳುತ್ತಿದ್ದರು. ಆದರೆ ಬಾಬಾ ಅಲ್ಲಿಂದ ಮೇಲೆಳುತ್ತಿರಲಿಲ್ಲ. ಆಗ ತಾತ್ಯಾರವರು ತಮ್ಮ ಕೈಗಳನ್ನು ಬಾಬಾರವರ ತೋಳಿನ ಸುತ್ತಲೂ ಹಾಕಿದವರೇ ಅವರನ್ನು ಎಬ್ಬಿಸಿ ನಿಲ್ಲಿಸುತ್ತಿದ್ದರು. ಬಾಬಾರವರು ಹೊರಡುತ್ತಿದ್ದಂತೆ ಅವರ ಭುಜದ ಮೇಲೆ ಚಿನ್ನದ ಬಣ್ಣದ ಕಸೂತಿಯಿರುವ ಶಾಲನ್ನು ಹೊದಿಸುತ್ತಿದ್ದರು. ತಾತ್ಯಾರವರು ಬಾಬಾರವರ ಎಡಗಡೆಯಲ್ಲಿ ಹಾಗೂ ಮಹಾಳಸಾಪತಿಯವರು ಬಾಬಾರವರ ಬಲಗಡೆಯಲ್ಲಿ ನಡೆದುಕೊಂಡು ಚಾವಡಿಯವರೆಗೂ ಬರುತ್ತಿದ್ದರು. ಬಾಬಾರವರು ದ್ವಾರಕಾಮಾಯಿಯಿಂದ ಹೊರಡುವ ಮೊದಲು ಧುನಿಗೆ ಬೇಕಾದ ಕಟ್ಟಿಗೆಯನ್ನು ತಮ್ಮ ಬಲಗಾಲಿನಿಂದ ಹಾಕಿ ಉರಿಯುವಂತೆ ಮಾಡಿ, ತಮ್ಮ ಬಲಗೈನಿಂದ ದೀಪವನ್ನು ಆರಿಸಿ ನಂತರವಷ್ಟೇ ಚಾವಡಿಗೆ ಹೊರಡುತ್ತಿದ್ದರು. ತಾತ್ಯಾರವರು ಬಾಬಾರವರ ಎಡಗೈಯನ್ನೂ ಹಾಗೂ ಮಹಾಳಸಾಪತಿಯವರು ಬಾಬಾರವರ ಬಲಗೈಯನ್ನೂ ಹಿಡಿದುಕೊಂಡು ಅವರನ್ನು ಚಾವಡಿಗೆ ಕರೆತರುತ್ತಿದ್ದರು. 

ಬಾಬಾರವರು ದ್ವಾರಕಾಮಾಯಿಯ ಮೆಟ್ಟಿಲುಗಳನ್ನು ಇಳಿಯುತ್ತಿರುವಾಗ ಬಾಲಾಜಿ ಪಿಲಾಜಿ ಗುರವ್ ಶೆಹನಾಯ್ ವಾದ್ಯವನ್ನು ಬಾರಿಸುತ್ತಿದ್ದರು. ಭಕ್ತರೆಲ್ಲರೂ ಸೇರಿಕೊಂಡು ಭಜನೆ ಮಾಡಲು ಪ್ರಾರಂಭಿಸುತ್ತಿದ್ದರು. ಸುಂದರವಾಗಿ ಶೃಂಗರಿಸಿಕೊಂಡ ಶ್ಯಾಮಕರ್ಣ ಎಂಬ ಹೆಸರಿನ ಕುದುರೆಯು ಮೆರವಣಿಗೆಯ ಮುಂದಾಳತ್ವವನ್ನು ವಹಿಸಿಕೊಳ್ಳುತ್ತಿತ್ತು  ಅದರ ಹಿಂದೆಯೇ ಬಾಬಾರವರ ಪವಿತ್ರ  ಪಾದುಕೆಗಳನ್ನು ಪಲ್ಲಕ್ಕಿಯಲ್ಲಿ ಇರಿಸಿ ತರಲಾಗುತ್ತಿತ್ತು. ಮೆರವಣಿಗೆಯು ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡು ನೋಡಲು ಕಣ್ಣುಗಳಿಗೆ ಹಬ್ಬದಂತ್ತಿತ್ತು.  ಒಂದು ಕಡೆ ಸಂಗೀತ ವಾದ್ಯಗಳ ಮೊಳಗುವಿಕೆ, ಮತ್ತೊಂದು ಕಡೆ ಭಕ್ತರ ಭಜನೆ ಹಾಗೂ ಇನ್ನೊಂದು ಕಡೆ "ಸಾಯಿನಾಥ್ ಮಹಾರಾಜ್ ಕೀ ಜೈ" ಎಂಬ ಜಯಕಾರಗಳು ಮುಗಿಲನ್ನು ಮುಟ್ಟುತ್ತಿದ್ದವು. ಬ್ರಹ್ಮಾಂಡದ ರಾಜನಂತೆ ರಾಜಗಾಂಭೀರ್ಯದಿಂದ  ಬಾಬಾರವರು ಹೆಜ್ಜೆ ಹಾಕಿ ನೆಲಹಾಸುಗಳ ಮೇಲೆ ನೆಡೆದು ಬರುತ್ತಿದ್ದರೆ ಭಕ್ತರು ಅವರ ಮೇಲೆ ಹೂವುಗಳು ಹಾಗೂ ಬಣ್ಣದ ಪುಡಿಗಳನ್ನು ಎರೆಚುತ್ತಿದ್ದರು. ಬಾಬಾರವರು ನಿಧಾನವಾಗಿ ನಡೆಯುತ್ತಲೇ ಎಲ್ಲಾ ಭಕ್ತರ ಮೇಲೆ ತಮ್ಮ ಕೃಪಾ ದೃಷ್ಟಿಯನ್ನು ಹರಿಸಿ ಆಶೀರ್ವದಿಸುತ್ತಿದ್ದರು. ಬಾಬಾರವರ ತಲೆಯ ಮೇಲೆ ಬಣ್ಣದ ಕಸೂತಿಯನ್ನು ಮಾಡಿರುವ ಛತ್ರಿಯನ್ನು ಬಾಪು ಸಾಹೇಬ್ ಜೋಗ್ ರವರು ಹಿಡಿದು ಆಗಾಗ್ಗೆ ತಿರುಗಿಸುತ್ತಿದ್ದರು. ಬಾಬಾರವರು ಚಾವಡಿಯ ಹತ್ತಿರ ಬಂದ ಕೂಡಲೇ ಮಾರುತಿ ಮಂದಿರದ ಕಡೆಗೆ ತಿರುಗಿಕೊಂಡು ಅತೀಂದ್ರಿಯ ಚಿನ್ಹೆಗಳನ್ನು ಮಾಡುತ್ತಾ ತಮ್ಮ ಕೈಗಳನ್ನು ಆಡಿಸುತ್ತಿದ್ದರು. ಸಾಯಿಬಾಬಾರವರನ್ನು ಸ್ವಾಗತಿಸುವ ಸಲುವಾಗಿ ಚಾವಡಿಯನ್ನು ಬಣ್ಣ ಬಣ್ಣದ ದೀಪಗಳು ಹಾಗೂ ಕನ್ನಡಿಗಳಿಂದ ಶೃಂಗರಿಸಲಾಗಿರುತ್ತಿತ್ತು. ಬಾಬಾರವರು ಚಾವಡಿಯನ್ನು ತಲುಪಿದ ನಂತರ ತಾತ್ಯಾ ಮೊದಲು ಒಳಗೆ ಹೋಗಿ ಬಾಬಾರವರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನವನ್ನು ಸಿದ್ಧಪಡಿಸಿ ಅವರಿಗೆ ನಿಲುವಂಗಿಯನ್ನು ತೊಡಿಸುತ್ತಿದ್ದರು. ಆಗ ನಾನಾ ಸಾಹೇಬ್ ನಿಮೋಣ್ಕರ್  ರವರು ಬಾಬಾರವರ ತಲೆಯ ಮೇಲೆ ಛತ್ರಿಯನ್ನು ಹಿಡಿದು ತಿರುಗಿಸುತ್ತಿದ್ದರು. ಬಾಬಾರವರು ಬಾಗಿಲಿಗೆ ಎದುರಾಗಿ ಕುಳಿತುಕೊಳ್ಳುತ್ತಿದ್ದರು. ಜೋಗ್ ರವರು ಬಾಬಾರವರ ಪಾದಗಳನ್ನು ಬೆಳ್ಳಿಯ ತಟ್ಟೆಯಲ್ಲಿ ಇರಿಸಿ ಕಾಲುಗಳನ್ನು ತೊಳೆದು, ಚಂದನವನ್ನು ಲೇಪಿಸಿ ಅವರಿಗೆ ವಿಳ್ಳೆಯದೆಲೆ ಹಾಗೂ ಅಡಿಕೆಯನ್ನು ನೀಡುತ್ತಿದ್ದರು. ನಂತರ ಭಕ್ತರು ಬಾಬಾರವರ ಪಾದಗಳಿಗೆ ಎರಗಿ ಪ್ರಣಾಮಗಳನ್ನು ಸಲ್ಲಿಸುತ್ತಿದ್ದರು. ನಂತರ ಶ್ಯಾಮರವರು ಚಿಲುಮೆಯನ್ನು ಹೊತ್ತಿಸಿ ಬಾಬಾರವರಿಗೆ ನೀಡುತ್ತಿದ್ದರು. ಬಾಬಾರವರು ಆ ಚಿಲುಮೆಯನ್ನು ಒಂದೆರಡು ಬಾರಿ ಸೇದಿ ನಂತರ ಅದನ್ನು ಮಹಾಳಸಾಪತಿಯವರಿಗೆ ನೀಡುತ್ತಿದ್ದರು. ನಂತರ ಆ ಚಿಲುಮೆಯನ್ನು ಅಲ್ಲಿದ್ದ ಇತರ ಎಲ್ಲಾ  ಭಕ್ತರು ತೆಗೆದುಕೊಂಡು  ಸೇದುತ್ತಿದ್ದರು. ಕೊಂಡಾಜಿ ಕೆಲವು ವಿಳ್ಳೆಯದೆಲೆ ಹಾಗೂ ಅಡಿಕೆಯನ್ನು ಬಾಬಾರವರಿಗೆ ಅರ್ಪಿಸುತ್ತಿದ್ದರು. ಸಾಯಿಬಾಬಾರವರು ಸ್ವಲ್ಪವೇ ತಿಂದು ಉಳಿದುದನ್ನು ಅಲ್ಲಿದ್ದ ಭಕ್ತರಿಗೆ ನೀಡುತ್ತಿದ್ದರು. ನಂತರ ಚಾವಡಿಯಲ್ಲಿ ಶೇಜಾರತಿ ನಡೆಯುತ್ತಿತ್ತು. ಶೇಜಾರತಿಯಾದ ನಂತರ ಭಕ್ತರು ಬಾಬಾರವರ ಅಪ್ಪಣೆ ಪಡೆದು ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದರು. ಅಂತೆಯೇ ಬಾಬಾರವರು ಎಲ್ಲರಿಗೂ ಮನೆಗೆ ಹೋಗಲು ಅಪ್ಪಣೆ ನೀಡುತ್ತಿದ್ದರು. ಆದರೆ, ತಾತ್ಯಾರನ್ನು ಹತ್ತಿರಕ್ಕೆ ಕರೆದು  “ನೀನು ಈಗ ಹೋಗಲೇ ಬೇಕಾದಲ್ಲಿ ಹೋಗು. ಆದರೆ ರಾತ್ರಿ ಬಂದು ನನ್ನ ಯೋಗಕ್ಷೇಮ ನೋಡಿಕೋ” ಎಂದು ಹೇಳುತ್ತಿದ್ದರು. ತಾತ್ಯಾ ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸಿ ಬಾಬಾರವರ ಅಪ್ಪಣೆ ಪಡೆದು ಹೊರಡುತ್ತಿದ್ದರು. 

ಇಡೀ ಬ್ರಹ್ಮಾಂಡದ ನಾಯಕರಾಗಿ ವಿಶ್ವವನ್ನೇ ಕಾಪಾಡುತ್ತಿರುವ ಸಾಯಿಬಾಬಾರವರು ಮಾನವ ರೂಪವನ್ನು ಧಾರಣೆ ಮಾಡಿರುವುದರಿಂದ ಪ್ರಕೃತಿಯ ನಿಯಮವನ್ನು ಪಾಲಿಸಬೇಕಾಗಿರುವುದರಿಂದ ನಮಗೆ ನಿದ್ರಿಸಿದಂತೆ ಕಾಣಿಸುತ್ತಾರೆ.ಆದರೆ ನಿಜವಾಗಿ ಹೇಳಬೇಕೆಂದರೆ ಅವರು ಸದಾ ಎಚ್ಚರವಾಗಿ ತಮ್ಮ ದಯಾಪೂರಿತ ದೃಷ್ಟಿಯನ್ನು ನಮ್ಮ ಮೇಲೆ ಹರಿಸುತ್ತಲೇ ಇರುತ್ತಾರೆ. ಅವರು ತಮ್ಮ ಮಕ್ಕಳಂತೆ ನಮ್ಮ ಮೇಲೆ ದಯೆ ತೋರಿ ಎಂದೆಂದಿಗೂ ಕಾಪಾಡುತ್ತಾರೆ. (ಆಧಾರ:ಸಾಯಿ ಪಥಂ  ಪತ್ರಿಕೆ - ಮೇ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ 2001).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment