Friday, August 10, 2012

ಶಿರಡಿಯ ಸುತ್ತಮುತ್ತ ನೋಡಬೇಕಾದ ಸ್ಥಳ - ಗುರು ಶುಕ್ರಾಚಾರ್ಯ ಮಂದಿರ - ಕೃಪೆ: ಸಾಯಿಅಮೃತಧಾರಾ.ಕಾಂ

ದೈತ್ಯಗುರು ಶುಕ್ರಾಚಾರ್ಯರ ಈ ವಿಶೇಷ ಮಂದಿರವು ಶಿರಡಿಯಿಂದ ಕೇವಲ 15 ಕಿಲೋಮೀಟರ್ ಗಳ ಅಂತರದಲ್ಲಿ ಅಹಮದ್ ನಗರ ಮನಮಾಡ ಮುಖ್ಯ ರಸ್ತೆಯಲ್ಲಿದೆ.ಈ ಮಂದಿರವು 400 ವರ್ಷಗಳಿಗೂ ಹಳೆಯದಾಗಿದ್ದು ಪ್ರಪಂಚದಲ್ಲೇ ಮೊದಲ ಮಂದಿರವಾಗಿರುತ್ತದೆ.  ಈ ಪುರಾಣ ಪ್ರಸಿದ್ಧ ಸ್ಥಳಕ್ಕೆ ಶಿರಡಿಯಿಂದ ಹೇರಳವಾಗಿ ಆಟೋಗಳು ಸಿಗುತ್ತವೆ.



ಶುಕ್ರಾಚಾರ್ಯರ ಹಿನ್ನೆಲೆ:

ಶುಕ್ರಾಚಾರ್ಯರು ಅಥರ್ವಣ ವೇದಕ್ಕೆ ಸೇರಿದ ಮತ್ತು ಋಷಿ ಕವಿಯ ವಂಶಕ್ಕೆ ಸೇರಿದ ಭಾರ್ಗವ ಋಷಿಗಳು. ದೇವಿ ಭಾಗವತ ಪುರಾಣದ ಪ್ರಕಾರ ಇವರ ತಾಯಿ ಕಾವ್ಯಮಾತ. ಶುಕ್ರ ಗ್ರಹವು ಸ್ತ್ರೀ ಜಾತಿಗೆ ಸೇರಿದ್ದು, ಬ್ರಾಹ್ಮಣ ವರ್ಣವಾಗಿರುತ್ತದೆ. ಇವರು ಪಾರ್ಥಿವ ನಾಮ ಸಂವತ್ಸರದ ಶ್ರಾವಣ ಶುದ್ಧ ಅಷ್ಟಮಿಯ ಶುಕ್ರವಾರದಂದು ಸ್ವಾತಿ ನಕ್ಷತ್ರ ಮತ್ತು ಲಗ್ನದಲ್ಲಿ ಜನಿಸಿದರು. ಆದುದರಿಂದ ಶುಕ್ರವಾರವೆಂಬ ಹೆಸರು ಬಂದಿರುತ್ತದೆ. ಇವರು ಋಷಿ ಆಂಗೀರಸರ ಬಳಿ ವೇದವನ್ನು ಕಲಿಯಲು ಸೇರಿದರು. ಆದರೆ, ಅವರು ತಮ್ಮ ಮಗನಾದ ಬೃಹಸ್ಪತಿಗೆ ಹೆಚ್ಚಿನ ಮಹತ್ವವನ್ನು ನೀಡುವುದು ಇವರಿಗೆ ಸರಿ ಬೀಳಲಿಲ್ಲ. ಆದುದರಿಂದ, ಇವರು ಋಷಿ ಗೌತಮರ ಬಳಿ ವೇದವನ್ನು ಕಲಿಯಲು ಸೇರಿದರು. ನಂತರ ಶಿವನನ್ನು ಕುರಿತು ಅತ್ಯಂತ ಕಠಿಣ ತಪಸ್ಸನ್ನು ಆಚರಿಸಿ ಮೃತ ಸಂಜೀವಿನಿ ಮಂತ್ರವನ್ನು ಪಡೆಯುತ್ತಾರೆ. ಇದರಿಂದ ಸತ್ತವರನ್ನು ಬದುಕಿಸಲು ಶುಕ್ರಾಚಾರ್ಯರು ಸಮರ್ಥರಾಗುತ್ತಾರೆ. ಇವರು ಪ್ರಿಯವ್ರಜರ ಮಗಳಾದ ಊರ್ಜಸ್ವಾತಿಯನ್ನು ವಿವಾಹವಾಗುತ್ತಾರೆ. ಇವರಿಗೆ ದೇವಯಾನಿ ಎಂಬ ಹೆಣ್ಣು ಮಗಳು ಹಾಗೂ ಚಂದ, ಅಮಾರ್ಕ, ತ್ವಸ್ತರ, ಧರಾತ್ರ  ಎಂಬ 4 ಗಂಡು ಮಕ್ಕಳು ಜನಿಸುತ್ತಾರೆ. 



ಈ ಸಮಯದಲ್ಲಿ ಬೃಹಸ್ವತಿಯು ದೇವತೆಗಳ ಗುರುವಾಗುತ್ತಾರೆ.ತನ್ನ ತಾಯಿಯು ವಿಷ್ಣುವು ಹುಡುಕುತ್ತಿದ್ದ ಅನೇಕ ರಾಕ್ಷಸರಿಗೆ ಆಶ್ರಯ ನೀಡಿದ್ದರಿಂದ ಕುಪಿತಗೊಂಡ ವಿಷ್ಣುವು ಅವರನ್ನು ಸಂಹಾರ ಮಾಡಿದ್ದಾನೆಂದು ತಪ್ಪು ತಿಳಿದ ಶುಕ್ರಾಚಾರ್ಯರು ವಿಷ್ಣುವಿನ ಮೇಲಿನ ದ್ವೇಷದಿಂದ ದೈತ್ಯರ ಗುರುವಾಗಲು ಇಚ್ಚಿಸುತ್ತಾರೆ. ತಾನು ಶಿವನಿಂದ ಪಡೆದ ಸಂಜೀವಿನಿ ಮಂತ್ರದ ಪ್ರಭಾವದಿಂದ ದೇವತೆಗಳಿಂದ ಸಂಹಾರವಾಗುತ್ತಿದ್ದ ರಾಕ್ಷಸರನ್ನು ಬದುಕಿಸಲು ಪ್ರಾರಂಭಿಸುತ್ತಾರೆ ಹಾಗೂ ದೈತ್ಯರು ದೇವತೆಗಳ ಮೇಲೆ ವಿಜಯ ಸಾಧಿಸಲು ಸಹಾಯ ಮಾಡುತ್ತಾರೆ. 




ಶುಕ್ರಾಚಾರ್ಯರ ಮಗಳಾದ ದೇವಯಾನಿಯನ್ನು ಬೃಹಸ್ಪತಿಗಳ ಪುತ್ರನಾದ ಕಚನು ಗುರುಪುತ್ರಿ ಎಂಬ ಕಾರಣದಿಂದ ವಿವಾಹವಾಗಲು ಒಪ್ಪುವುದಿಲ್ಲ. ನಂತರ ದೇವಯಾನಿಯು ಕುರುವಂಶದ ಯಯಾತಿಯನ್ನು ವಿವಾಹವಾಗುತ್ತಾಳೆ. 







ಮಹಾಭಾರತದ ಸಮಯದಲ್ಲಿ, ಶುಕ್ರಾಚಾರ್ಯರನ್ನು ಭೀಷ್ಮರ ಗುರುವೆಂದು ಹೇಳಲಾಗುತ್ತದೆ. ಶುಕ್ರಾಚಾರ್ಯರು ಭೀಷ್ಮಾಚಾರ್ಯರ ಚಿಕ್ಕ ವಯಸ್ಸಿನಲ್ಲಿ ರಾಜನೀತಿಯ ಪಾಠವನ್ನು ಹೇಳಿಕೊಟ್ಟರು ಎಂದು ಹೇಳಲಾಗುತ್ತದೆ.

ಶುಕ್ರಾಚಾರ್ಯ ಮಂದಿರದ ಇತಿಹಾಸ:

ಪೇಶ್ವೇ ವಂಶದ ಕಡೆಯ ಪೀಳಿಗೆಯವರಾದ 2ನೇ ಬಾಜೀರಾವ್ ರವರ ತಂದೆ ರಘುನಾಥ ರಾವ್ ಆಲಿಯಾಸ್ ರಾಘೋಬ  ರವರು ಕೋಪರಗಾವ್ ನ ನಿವಾಸಿಯಾಗಿದ್ದರು. ಅವರ ಮರಣದ ನಂತರ ಕೋಪರಗಾವ್ ನಿಂದ 3 ಮೈಲು ದೂರದ ಹಿಂಗ್ನಿಯಲ್ಲಿ ಅವರ ದೇಹವನ್ನು ಸಂಸ್ಕಾರ ಮಾಡಲಾಯಿತು. ಈ ಸ್ಥಳದಲ್ಲಿ ಇದ್ದ ಇವರ ಅರಮನೆಯ ಫಲಕಗಳಲ್ಲಿ ಇದರ ಉಲ್ಲೇಖವಿದೆ. 1804 ನೇ ಇಸವಿಯಲ್ಲಿ ಕಾಂದೇಶದ ರಾಜ್ಯಪಾಲನಾಗಿದ್ದ ಬಾಲಾಜಿ ಲಕ್ಷ್ಮಣ ಮತ್ತು ಮನೋಹರಗೀರ್ ಗೋಸಾವಿ ಜೊತೆಗೂಡಿ ಕೋಪರಗಾವ್ ನಲ್ಲಿ ಅಧಿಕಾರದಲ್ಲಿದ್ದ ಸುಮಾರು 7000 ಕ್ಕೂ ಹೆಚ್ಚು ಬಿಲ್ಲರನ್ನು ಮೋಸದಿಂದ ಸೋಲಿಸಿ ಅವರಲ್ಲಿ ಹೆಚ್ಚಿನವರನ್ನು ಅಲ್ಲಿದ ಎರಡು ಬಾವಿಗಳಿಗೆ ಎಸೆಯುತ್ತಾರೆ. 1818 ನೇ ಇಸವಿಯಲ್ಲಿ ಕೋಪರಗಾವ್ ಅನ್ನು ಮದ್ರಾಸಿನ ಪಡೆಗಳು ಆಕ್ರಮಿಸುತ್ತಾರೆ. ದೈತ್ಯ ರಾಜನಾದ ವೃಷಪರ್ವನ ಗುರುವಾದ ಶುಕ್ರಾಚಾರ್ಯರು ಮೃತ ಸಂಜೀವಿನಿ ವಿದ್ಯೆಯನ್ನು ಕೋಪರಗಾವ್ ನಲ್ಲಿ ಶಿವನಿಂದ ಪಡೆದರು ಎಂದು ಹೇಳಲಾಗುತ್ತದೆ.

ಕೋಪರಗಾವ್ ನ ಹತ್ತಿರದಲ್ಲಿರುವ ಈ ಸ್ಥಳದಲ್ಲಿ ಶುಕ್ರಾಚಾರ್ಯ, ದೇವಯಾನಿ ಮತ್ತು ಕಾಚೇಶ್ವರರ ಮಂದಿರಗಳಿವೆ.

ಶುಕ್ರಾಚಾರ್ಯ ಹಾಗೂ ಶಿವನಿಗೆ ಅವಿನಾಭಾವ ಸಂಬಂಧವಿದೆ. ಹಾಗಾಗಿ, ಮಹಾಶಿವರಾತ್ರಿಯ ಪವಿತ್ರ ದಿನ ಅಥವಾ ಇನ್ನಿತರ ವಿಶೇಷ ಹಬ್ಬದ ದಿನಗಳಲ್ಲಿ ಈ ಸ್ಥಳದಲ್ಲಿರುವ ಶುಕ್ರಾಚಾರ್ಯರ ಮಂದಿರವನ್ನು ಸಂದರ್ಶಿಸಿದರೆ ವಿಶೇಷವಾಗಿ ಆಶೀರ್ವದಿಸಲ್ಪಡುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಆದ ಕಾರಣ, ಪ್ರಪಂಚದ ಅನೇಕ ಸ್ಥಳಗಳಿಂದ ಭಕ್ತರು ಮಹಾಶಿವರಾತ್ರಿ ಹಾಗೂ ಇನ್ನಿತರ ವಿಶೇಷ ಹಬ್ಬದ ದಿನಗಳಲ್ಲಿ ಇಲ್ಲಿಗೆ ಬರುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬೇಟ್ ಕೋಪರಗಾವ್ ನಲ್ಲಿರುವ ಈ ಶುಕ್ರಾಚಾರ್ಯರ ಮಂದಿರ ಪ್ರಪಂಚದ ಒಂದು ವಿಶೇಷ ಮಂದಿರವೆಂದರೆ ತಪ್ಪಾಗಲಾರದು.

ಮುಖ್ಯ ದೇವಾಲಯದಲ್ಲಿ ಶುಕ್ರಾಚಾರ್ಯರ ವಿಗ್ರಹ ಹಾಗೂ ಶಿವಲಿಂಗ ಇದೆ. ದೇವಾಲಯದ ಹೊರಭಾಗದಲ್ಲಿ ಕಪ್ಪು ಶಿಲೆಯ ನಂದಿಯ ಹಾಗೂ ಆಮೆಯ ವಿಗ್ರಹಗಳಿವೆ.

ಆಮೃತ ಶಿಲೆಯ ಘಾಟ್ ಗಣಪತಿ, ದುರ್ಗೆ, ವಿಷ್ಣು ಮತ್ತು ದತ್ತಾತ್ರೇಯ ದೇವರುಗಳನ್ನು ದೇವಾಲಯದ ಹೊರ ಆವರಣದಲ್ಲಿ ನಿರ್ಮಿಸಲಾಗಿರುವ ಪುಟ್ಟ ಗುಡಿಗಳಲ್ಲಿ ಇರಿಸಲಾಗಿದೆ. ದೇವಾಲಯವನ್ನು ಶಿವ ಪಂಚಾಯತನ ಪದ್ಧತಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಈ ದೇವಾಲಯದ ಹೊರ ಭಾಗದಲ್ಲಿ ಸ್ವಲ್ಪವೇ ದೂರದಲ್ಲಿ ಕಾಚೇಶ್ವರ ಮತ್ತು ದೇವಯಾನಿಯ ದೇವಾಲಯಗಳನ್ನು ಕೂಡ ನಿರ್ಮಿಸಲಾಗಿದ್ದು, ಈ ಮಂದಿರಗಳನ್ನು ಕೂಡ ಶ್ರೀ.ಬೇಟ್ ಕೋಪರಗಾವ್ ದೇವಸ್ಥಾನ ಸಮಿತಿಯವರೇ ನೋಡಿಕೊಳ್ಳುತ್ತಿದ್ದಾರೆ.

ದೈತ್ಯ ಗುರು ಶುಕ್ರಾಚಾರ್ಯರ ವಂಶವೃಕ್ಷವನ್ನು ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:



ದೇವಾಲಯದಲ್ಲಿ ನಡೆಯುವ ದಿನನಿತ್ಯದ ಪೂಜಾ ಕೈಂಕರ್ಯಗಳು:

ಬೆಳಿಗ್ಗೆ 5:00          - ನಿರ್ಮಾಲ್ಯ ವಿಸರ್ಜನೆ, ದೇವಾಲಯದ ಶುಚೀಕರಣ.
ಬೆಳಿಗ್ಗೆ 6:00         - ಶೋಡಷೋಪಚಾರ ಪೂಜೆ, ರುದ್ರಾಭಿಷೇಕ ಮತ್ತು ಅಲಂಕಾರ.
ಬೆಳಿಗ್ಗೆ 10:30       - ದೇವರಿಗೆ ಮಹಾನೈವೇದ್ಯದ ಸಮರ್ಪಣೆ.
ಮಧ್ಯಾನ್ಹ 12:00  - ಆರತಿ ಮತ್ತು ಮಹಾಪ್ರಸಾದ.
ಸಂಜೆ 4:00        - ಸಾಯಂಕಾಲದ ಪೂಜೆ,ನಿರ್ಮಾಲ್ಯ ವಿಸರ್ಜನೆ, ದೇವಾಲಯದ ಶುಚೀಕರಣ.
ಸಂಜೆ 7:00        - ದೇವಾಲಯದ ಆವರಣದಲ್ಲಿ ದೀಪಗಳನ್ನು ಹಾಕುವುದು.
ರಾತ್ರಿ 8:00        - ಶೋಡಷೋಪಚಾರ ಪೂಜೆ, ರುದ್ರಾಭಿಷೇಕ,ಅಲಂಕಾರ ಮತ್ತು ಮಹಾನೈವೇದ್ಯದ ಸಮರ್ಪಣೆ.
ರಾತ್ರಿ 9:30        - ಧೂಪಾರತಿ ಮತ್ತು ಶೇಜಾರತಿ. ಮಂದಿರ ಮುಚ್ಚುತ್ತದೆ.


ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವದ ದಿನಗಳು:

ಚೈತ್ರ ಶುದ್ಧ ಪ್ರತಿಪತ್, ಗುಡಿ ಪಾಡ್ವ, ಗುರು ಶುಕ್ರಾಚಾರ್ಯರಿಂದ ಶಿಷ್ಯ ಕಚನ ಭೇಟಿ.
ವೈಶಾಖ ಶುದ್ಧ ತೃತೀಯ - ಅಕ್ಷಯ ತೃತೀಯ.
ಜ್ಯೇಷ್ಟ ಮಾಸ - ಶ್ರೀ ಗಂಗಾಮಾಯಿಯ 10 ದಿನಗಳ ಉತ್ಸವ.
ಆಷಾಢ ಮಾಸ - ಪ್ರತಿದಿನ ವಿಶೇಷ ಪೂಜೆ.
ಶ್ರಾವಣ ಮಾಸ - ತಿಂಗಳ 4 ಸೋಮವಾರಗಳಂದು ವಿಶೇಷ ಪೂಜೆ. ಸಂಜೆ 4 ರಿಂದ 6 ರವರೆಗೆ ಮಂದಿರದಿಂದ ಗೋದಾವರಿ ನದಿಯ ದಡದವರೆಗೆ ಮತ್ತು ಪುನಃ ಮಂದಿರದವರೆಗೆ ಪಲ್ಲಕ್ಕಿ ಉತ್ಸವ. ನಂತರ ದೇವರಿಗೆ ವಿಶೇಷ ಆರತಿಯ ಸಮರ್ಪಣೆ.
ಭಾದ್ರಪದ ಶುದ್ಧ ಚತುರ್ಥಿ - ಗಣೇಶ ಚತುರ್ಥಿ - ಪಲ್ಲಕ್ಕಿ ಉತ್ಸವ.
ಆಶ್ವಯುಜ ಶುದ್ಧ ದಶಮಿ - ವಿಜಯದಶಮಿ - ಪಲ್ಲಕ್ಕಿ ಉತ್ಸವ.
ಕಾರ್ತೀಕ ಮಾಸ - ಕಾರ್ತೀಕ ಪೂರ್ಣಿಮಾ - ಪಲ್ಲಕ್ಕಿ ಉತ್ಸವ.
ಮಾರ್ಗಶೀರ್ಷ ಮಾಸ - ಪ್ರತಿದಿನ ವಿಶೇಷ ಪೂಜೆ ಮತ್ತು ನೈವೇದ್ಯದ ಸಮರ್ಪಣೆ.
ಪುಷ್ಯ ಮಾಸ - ಮಕರ ಸಂಕ್ರಾಂತಿ ಉತ್ಸವ - ಶುಕ್ರಾಚಾರ್ಯರ ವಿಗ್ರಹಕ್ಕೆ ಪ್ರತಿನಿತ್ಯ ತೈಲಾಭಿಷೇಕದ ಸಮರ್ಪಣೆ.
ಮಾಘ ಮಾಸ - ಮಹಾಶಿವರಾತ್ರಿ ಉತ್ಸವ - ಪಲ್ಲಕ್ಕಿ ಉತ್ಸವ. ಕೋಪರಗಾವ್ ನಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ 10,000 ಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುತ್ತಾರೆ.
ಫಾಲ್ಗುಣ ಮಾಸ - ಹೋಳಿ ಹುಣ್ಣಿಮೆಯ ಹಬ್ಬದ ಆಚರಣೆ.

ದೇವಾಲಯದ ಸಂಪರ್ಕದ ವಿವರಗಳು:

ಗುರು ಶುಕ್ರಾಚಾರ್ಯ ಮಂದಿರ
ಶ್ರೀ ಬೇಟ್ ಕೋಪರಗಾವ್ ದೇವಸ್ಥಾನ ಸಮಿತಿ,
ಬೇಟ್ ಕೋಪರಗಾವ್ ಗ್ರಾಮ,
ಕೋಪರಗಾವ್ ತಾಲ್ಲೂಕು,
ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ,
ಪಿನ್ ಕೋಡ್- 423 601.
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀ.ಬಾಳಾಸಾಹೇಬ್ ಮಾಲೋಜಿ ಅವಧ್ - ಸದಸ್ಯರು / ಶ್ರೀ.ಎ.ಎಲ್.ಕುಲಕರ್ಣಿ - ಅಧ್ಯಕ್ಷರು / ಶ್ರೀ.ನರೇಂದ್ರ ಪುರುಷೋತ್ತಮ ಜೋಷಿ - ಗುರೂಜಿ / ಶ್ರೀ.ರಮೇಶ್ ಭಾಗವತ್ ಗುರಾವ್ - ಪುರೋಹಿತರು.
ದೂರವಾಣಿ ಸಂಖ್ಯೆಗಳು: + 91 92262 17730 / +91 93710 35877 / +91 92262 17730 / +91 99752 24281 /+91 2423 223255 

ಕನ್ನಡ ಅನುವಾದ ಶ್ರೀಕಂಠ ಶರ್ಮ 

No comments:

Post a Comment