Thursday, August 9, 2012

ಶಿರಡಿಯ ಸುತ್ತಮುತ್ತ ನೋಡಬೇಕಾದ ಸ್ಥಳ -  ರಾಷ್ಟ್ರ ಸಂತ ಜನಾರ್ಧನ ಸ್ವಾಮಿ (ಮೌನಗಿರಿ) ಮಹಾರಾಜ್ (24ನೇ  ಸೆಪ್ಟೆಂಬರ್ 1914 – 10ನೇ ಡಿಸೆಂಬರ್ 1989) ಸಮಾಧಿ ಮಂದಿರ- ಕೃಪೆ: ಸಾಯಿಅಮೃತಧಾರಾ.ಕಾಂ


ನಿಷ್ಕಾಮ ಕರ್ಮಯೋಗಿ ಸಂತ ಜನಾರ್ಧನ ಸ್ವಾಮಿ (ಮೌನಗಿರಿ) ಮಹಾರಾಜ್ ರವರು ಭಾರತದ ಸಂತ ಪರಂಪರೆಯಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ಮಹಾನ್ ಸಂತರು. ಸ್ವಾಮೀಜಿಯವರು ತಮ್ಮ ಕೊನೆಯ ದಿನಗಳವರೆಗೆ ಜನ ಸಾಮಾನ್ಯರಲ್ಲಿ ಭಕ್ತಿಯನ್ನು  ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಜಾಗೃತಗೊಳಿಸುವ ಕೆಲಸವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದರು. 





ಸಂತ ಜನಾರ್ಧನ ಸ್ವಾಮಿ (ಮೌನಗಿರಿ) ಮಹಾರಾಜ್ ರವರು 24 ನೇ ಸೆಪ್ಟೆಂಬರ್1914 (ಆಶ್ವಯುಜ ಶುದ್ಧ ಲಲಿತಾ ಪಂಚಮಿ, ಶಕೆ 1836) ರಂದು ಪವಿತ್ರ ಮರಾಠವಾಡಾದ ಔರಂಗಾಬಾದ್ ಜಿಲ್ಲೆಯ ಕನ್ನಾಡ್ ತಾಲ್ಲೂಕಿನ ಟೇಪರಗಾವ್ ನ ರೈತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶ್ರೀ.ಅಪ್ಪಾ ಸಾಹೇಬ್ ಪಾಟೀಲ್ ಉಗಳೆ ಮತ್ತು ತಾಯಿ ಶ್ರೀಮತಿ.ಮಹಾಳಸಾಬಾಯಿ. ತಮ್ಮ ಚಿಕ್ಕ ವಯಸ್ಸಿನಲ್ಲೇ ಇವರು ಆಡುವ ಮಾತುಗಳು, ನಡೆ-ನುಡಿಗಳು ಹಾಗೂ ಇವರ ವರ್ತನೆಯನ್ನು ನೋಡಿದ ಎಲ್ಲರಿಗೂ ಇವರ ದೈವಿಕ ಶಕ್ತಿಯ ಅರಿವಾಗಿತ್ತು. 



ಸ್ವಾಮೀಜಿಯವರು ಸಂಪ್ರದಾಯಬದ್ಧವಾದ "ಸಾಧನೆ" ಹಾಗೂ ಮಹಾರಾಷ್ಟ್ರದ "ವಾರಕರಿ" ಸಂಪ್ರದಾಯವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಅತ್ಯಂತ ಕಡಿಮೆ ಸಮಯದಲ್ಲಿಯೇ ಪಂತಜಲಿ ಮಹರ್ಷಿಗಳ ಯೋಗ ಸೂತ್ರದಲ್ಲಿ ನಿರ್ದೇಶಿಸಿದಂತೆ "ಯೋಗಸಿದ್ಧಿ" ಯನ್ನು ಪಡೆದುಕೊಂಡಿದ್ದರು. 


ಸ್ವಾಮೀಜಿಯವರು ತಮ್ಮ ಬಾಲ್ಯದ ದಿನಗಳಿಂದಲೂ ಹನುಮಾನ್ ಮತ್ತು ಶಿವನ ಅನನ್ಯ ಭಕ್ತರಾಗಿದ್ದರು. ಆದುದರಿಂದ, ಆಗಾಗ್ಗೆ  ಇವರು ನಿಯಮಿತವಾಗಿ ಕಠಿಣ ಉಪವಾಸ ವ್ರತಗಳನ್ನು ಕೈಗೊಳ್ಳುತ್ತಿದ್ದರು. ಇವರಿಗೆ ನಾಗೇಶ್ವರ ಶಿವ, ಪಿನಾಕೇಶ್ವರ ಶಿವ ಮತ್ತು ಪರೇಶ್ವರ ಶಿವನ ಸಾಕ್ಷಾತ್ಕಾರವಾಗಿತ್ತು. ಇವರು ತಮ್ಮ ಬಾಲ್ಯದಿಂದ ಪರಬ್ರಹ್ಮನಲ್ಲಿ ಲೀನವಾಗುವರೆಗೆ ನಿಯಮಿತವಾಗಿ ಪೂಜೆ-ಪುನಸ್ಕಾರಗಳು, ಯಜ್ಞ-ಯಾಗಾದಿಗಳನ್ನು ನೆಡೆಸಿಕೊಂಡು ಬಂದರು. ಇವರು ವೇದ, ಉಪನಿಷತ್ ಹಾಗೂ ಅನೇಕ ಅಧ್ಯಾತ್ಮಿಕ ಗ್ರಂಥಗಳನ್ನು ಅಭ್ಯಾಸ ಮಾಡಿ ದಿನನಿತ್ಯ ನಡೆಸುವ ಪೂಜಾ ಪದ್ಧತಿಯನ್ನು ರೂಪಿಸಿದ್ದರು. ಇವರು ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ 3:30 ಕ್ಕೆ ಹಾಸಿಗೆಯಿಂದ ಎದ್ದು ನಿತ್ಯ ವಿಧಿಗಳನ್ನು ಸೂರ್ಯೋದಯಕ್ಕೆ ಮುಂಚೆಯೇ ಮುಗಿಸುತ್ತಿದ್ದರು. ಅಲ್ಲದೇ, ತಮ್ಮ ಭಕ್ತರ ಜೊತೆಯಲ್ಲಿ ಪೂಜೆ, ಪ್ರಾಣಾಯಾಮ, ಜಪ ಮತ್ತು ಧ್ಯಾನವನ್ನು ಮಾಡುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆಧ್ಯಾತ್ಮಿಕ ವಿಷಯಗಳ ಮೇಲೆ ಪ್ರವಚನವನ್ನು ನೀಡುತ್ತಿದ್ದರು.  


ಸ್ವಾಮೀಜಿಯವರು ತಮ್ಮ ದೈವಿಕ ಶಕ್ತಿಯನ್ನು ಅನೇಕ ಬಾರಿ ತಮ್ಮ ಭಕ್ತರ ಎದುರು ಆಶ್ಚರ್ಯಕರ ರೀತಿಯಲ್ಲಿ ತೋರ್ಪಡಿಸುತ್ತಿದ್ದರು. 

ಸ್ವಾಮೀಜಿಯವರು ಮಹಾರಾಷ್ಟ್ರದ ಅನೇಕ ಸ್ಥಳಗಳಲ್ಲಿ ಪಾಳುಬಿದ್ದಿದ್ದ ಶಿವನ ದೇವಾಲಯಗಳ ಜೀರ್ಣೋದ್ಧಾರವನ್ನು ಕೈಗೊಂಡು ಅವುಗಳ ನವೀಕರಣ ಮಾಡಿದರು. ಅಲ್ಲದೇ, ಮಹಾರಾಷ್ಟ್ರದ 9 ಸ್ಥಳಗಳಲ್ಲಿ ಹೊಸದಾಗಿ ಶಿವನ ದೇವಾಲಯಗಳನ್ನು ನಿರ್ಮಾಣ ಮಾಡಿಸಿದರು. 

ಸ್ವಾಮೀಜಿಯವರು ಶಿಕ್ಷಣ ಕ್ಷೇತ್ರಕ್ಕೆ ಕೂಡ ಮಹತ್ವವನ್ನು ನೀಡಿ ಎಲ್ಲೋರ, ದಮಾನೆ, ಔರಂಗಾಬಾದ್ ಮತ್ತು ಬೇಟ್ ಕೋಪರಗಾವ್ ನಲ್ಲಿ ಗುರುಕುಲ ಪದ್ಧತಿಯಲ್ಲಿ ಶಾಲೆಗಳನ್ನು ಪ್ರಾರಂಭಿಸಿದರು. ಬಡ ಮಕ್ಕಳಿಗಾಗಿ ಉಚಿತ ಊಟ ಮತ್ತು ವಸತಿಯನ್ನು ಕಲ್ಪಿಸುವ ಸಲುವಾಗಿ ತ್ರಯಂಬಕೇಶ್ವರ, ನಾಸಿಕ್, ಔರಂಗಾಬಾದ್ ಮತ್ತು ಬೇಟ್ ಕೋಪರಗಾವ್ ನಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಅಲ್ಲದೇ, ಇವರು ಸ್ಥಾಪಿಸಿದ ಎಲ್ಲಾ ಆಶ್ರಮಗಳಲ್ಲಿ "ಗೋಶಾಲೆ" ಯನ್ನು ಪ್ರಾರಂಭಿಸಿ ಸಾವಿರಾರು ಹಸು-ಕರುಗಳಿಗೆ ಆಶ್ರಯವನ್ನು ನೀಡಿದರು. 

ಸ್ವಾಮೀಜಿಯವರು ಹಬ್ಬದ ದಿನಗಳಾದ ಅಕ್ಷಯ ತೃತೀಯ, ನಾಗಪಂಚಮಿ, ದತ್ತ ಜಯಂತಿ ಹಾಗೂ ಗುರುಪೂರ್ಣಿಮೆಯ ದಿನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಆ ಸಮಯದಲ್ಲಿ ಜಪ ಅನುಷ್ಟಾನವನ್ನು ಹಮ್ಮಿಕೊಳ್ಳುತ್ತಿದ್ದರು. ಅಕ್ಷಯ ತೃತೀಯ ದಿನದಂದು ವಿಶೇಷ ಯಜ್ಞವನ್ನು ಹಮ್ಮಿಕೊಳ್ಳುತ್ತಿದ್ದರು. ಎಲ್ಲಾ ಹಬ್ಬದ ದಿನಗಳಲ್ಲಿ ಆಶ್ರಮದಲ್ಲಿ ಅನ್ನದಾನವನ್ನು ಮಾಡಲಾಗುತ್ತಿತ್ತು. 

ಸ್ವಾಮೀಜಿಯವರು ಐಶ್ವರ್ಯ, ಅಂತಸ್ತು, ಹೆಸರು ಮತ್ತು ಕೀರ್ತಿಗಳಿಗಾಗಿ ಎಂದಿಗೂ ಆಸೆಪಡದೆ ತಮ್ಮ 75ನೇ ವಯಸ್ಸಿನವರೆವಿಗೂ ಅವಿರತವಾಗಿ ತಪಸ್ಸು ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಲೇ ಇದ್ದರು. ಇವರು ಸಾಮಾನ್ಯ ಜನರ ಉನ್ನತಿಗಾಗಿ ಹಾಗೂ ವಿಶ್ವಶಾಂತಿಗಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಹೀಗೆ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ 10ನೇ ಡಿಸೆಂಬರ್ 1989 ರಂದು ಸಂಜೆ 4:35 ಕ್ಕೆ ತಮ್ಮ ನಾಸಿಕ್ ನ ಆಶ್ರಮದಲ್ಲಿ ಪಂಚಭೂತಗಳಲ್ಲಿ ಲೀನವಾದರು. ಆದರೆ, ಸ್ವಾಮೀಜಿಯವರು ಮಾಡಿದ ಅಮೋಘ ಕಾರ್ಯಗಳಿಂದ ಅಮರರಾದರು. 

ಇವರು ತಮ್ಮ ಮಹಾನಿರ್ವಾಣಕ್ಕೆ 3 ದಿನಗಳ ಮುಂಚೆ ತಮಗೆ ಹತ್ತಿರವಾಗಿದ್ದ 10 ಜನ ಶಿಷ್ಯರನ್ನು ಕರೆದು ತಮ್ಮ ದೇಹವನ್ನು ಬೇಟ್ ಕೋಪರಗಾವ್ ನ ಆಶ್ರಮದಲ್ಲಿ ಸಮಾಧಿ ಮಾಡುವಂತೆ ಸೂಚನೆ ನೀಡಿದ್ದರು. ಅವರ ಆದೇಶದಂತೆ ಸ್ವಾಮೀಜಿಯವರ ದೇಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು 11ನೇ ಡಿಸೆಂಬರ್ 1989 ರಂದು ಬೇಟ್ ಕೋಪರಗಾವ್ ನ ಆಶ್ರಮದಲ್ಲಿ ಸಮಾಧಿ ಮಾಡಲಾಯಿತು. ಲಕ್ಷಾಂತರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇವರ ಮಹಾನಿರ್ವಾಣದ 16ನೇ ದಿನದ ಕಾರ್ಯಕ್ರಮದಲ್ಲಿ ಸರಿ ಸುಮಾರು 7 ಲಕ್ಷ ಜನರು ಭಾಗವಹಿಸಿದ್ದರು. 

ಸ್ವಾಮೀಜಿಯವರ ಮೊದಲನೇ ಪುಣ್ಯತಿಥಿಯ ದಿನದಂದು ಸಮಾಧಿ ಮಂದಿರದ ಭೂಮಿಪೂಜೆಯನ್ನು ಪರಮ ಪೂಜ್ಯ ಜಗದ್ಗುರು ಶಂಕರಾಚಾರ್ಯ ಪೀಠಾಧಿಪತಿಗಳಾದ ಶ್ರೀ.ಶ್ರೀ.ಶ್ರೀ ವಾಸುದೇವಾನಂದ ಸರಸ್ವತಿ ಸಾಮೀಜಿಯವರು ನೆರವೇರಿಸಿದರು. ಆ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಸ್ವಾಮೀಜಿಗಳು, ಸಂತರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಆಶ್ರಮದ ಸಂಪರ್ಕದ ವಿವರಗಳು: 

ರಾಷ್ಟ್ರ ಸಂತ ಜನಾರ್ಧನ ಸ್ವಾಮಿ (ಮೌನಗಿರಿ) ಮಹಾರಾಜ್ ಸಮಾಧಿ ಮಂದಿರ
ಬೇಟ್ ಕೋಪರಗಾವ್, ಅಹಮದ್ ನಗರ ಜಿಲ್ಲೆ - 423 601, ಮಹಾರಾಷ್ಟ್ರ,
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀ.ವಿಜಯ ಜಾಧವ್ / ಶ್ರೀ.ಶಂಕರ ಪವಾರ್
ದೂರವಾಣಿ ಸಂಖ್ಯೆಗಳು: +91 2423 223 071 / 226 133 / 226134 / 223 071 (ಫ್ಯಾಕ್ಸ್)
ಮೊಬೈಲ್ ಸಂಖ್ಯೆಗಳು: +91 98222 25990 / +91 90286 87104
ಇ-ಮೈಲ್ ವಿಳಾಸ: janardanswamisamadhisthankop@gmail.com 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment