Wednesday, June 1, 2011

ಶಿರಡಿ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ತೆರಳಲು ಬಳಸುತ್ತಿದ್ದ ಮಾರ್ಗ - ಕೃಪೆ: ಸಾಯಿಅಮೃತಧಾರಾ.ಕಾಂ  


ಶಿರಡಿ ಸಾಯಿಬಾಬಾರವರು ಪ್ರತಿನಿತ್ಯ ಎರಡು ಬಾರಿ ಮೆರವಣಿಗೆಯಲ್ಲಿ ವಾದ್ಯಸಂಗೀತ ಮತ್ತು ನೃತ್ಯಗಳೊಂದಿಗೆ ಲೇಂಡಿ ಉದ್ಯಾನವನಕ್ಕೆ ವಿಹಾರಕ್ಕಾಗಿ ತೆರಳುತ್ತಿದ್ದರು. ಬೆಳಗಿನ ಜಾವ 9 ಘಂಟೆಗೆ ದ್ವಾರಕಮಾಯಿಯಲ್ಲಿ ಭಕ್ತರ ದರ್ಶನ ಮುಗಿದ ನಂತರ ತಮಗೆ ಅತ್ಯಂತ ನಿಕಟರಾದ ಬೆರಳಣಿಕೆಯಷ್ಟು ಸಾಯಿ ಭಕ್ತರೊಂದಿಗೆ ಲೇಂಡಿ ಉದ್ಯಾನವನಕ್ಕೆ ತೆರಳುತ್ತಿದ್ದರು. ನಾನಾ ಸಾಹೇಬ್ ನಿಮೋಣ್ಕರ್ ರವರು ಸಾಯಿಬಾಬಾರವರ ಬಲಭಾಗದಲ್ಲಿ, ಗೋಪಾಲ್ ರಾವ್ ಬೂಟಿ ಸಾಯಿಬಾಬಾರವರ ಎಡಭಾಗದಲ್ಲಿ, ಭಾಗೋಜಿ ಶಿಂಧೆ ಶ್ವೇತಛತ್ರಿಯನ್ನು ಹಿಡಿದುಕೊಂಡು ಬಾಬಾರವರ ಹಿಂಭಾಗದಲ್ಲಿ ಮತ್ತು ಚೋಪಾದಾರರು ಸಮವಸ್ತ್ರವನ್ನು ಧರಿಸಿ ಸಾಯಿಬಾಬಾರವರ ಎರಡೂ ಬದಿಯಲ್ಲಿ ಜಯಘೋಷವನ್ನು ಮಾಡುತ್ತಾ ನಡೆದು ಬರುತ್ತಿದ್ದರು. ಹೀಗೆ ದ್ವಾರಕಾಮಾಯಿಯಿಂದ ಹೊರಗೆ ಬಂದ ಕೂಡಲೇ ಸಾಯಿಬಾಬಾರವರು ದ್ವಾರಕಾಮಾಯಿಯ ಪಕ್ಕದಲ್ಲಿದ್ದ ಗೋಡೆಗೆ ಒರಗಿಕೊಂಡು ಸ್ವಲ್ಪ ಕಾಲ ನಿಲ್ಲುತ್ತಿದ್ದರು. ನಂತರ ಮೆರವಣಿಗೆ ಮುಂದುವೆರೆದು ಗುರುಸ್ಥಾನದ ಮುಂಭಾಗಕ್ಕೆ ಬಂದು ನಿಲ್ಲುತ್ತಿತ್ತು. ಸಾಯಿಬಾಬಾರವರು ಗುರುಸ್ಥಾನದ ಮುಂದೆ ನಿಂತು ತಮ್ಮ ಬಲಗೈನಿಂದ ಏನೋ ಒಂದು ರೀತಿಯ ಸಂಜ್ಞೆಯನ್ನು ಮಾಡುತ್ತಿದ್ದರು. ಸಾಥೆವಾಡಾದಲ್ಲಿ ಉಳಿದುಕೊಂಡಿದ್ದ ಸಾಯಿ ಭಕ್ತರು ಮೆರವಣಿಗೆ ಬರುವುದನ್ನೇ ಕಾಯ್ದುಕೊಂಡಿದ್ದು ಸಾಯಿಬಾಬಾರವರಿಗೆ ವಂದನೆಗಳನ್ನು ಸಲ್ಲಿಸುತ್ತಿದ್ದರು. 

ನಂತರ ಮೆರವಣಿಗೆ ಎಡಕ್ಕೆ ತಿರುಗಿ ಪಿಲಾಜಿ ಗುರಾವ್ ನ ಮನೆಯ ಬಳಿಗೆ ಬಂದು ನಿಲ್ಲುತ್ತಿತ್ತು. ಈ ಸ್ಥಳದಲ್ಲಿ ಸಾಯಿಬಾಬಾರವರು ಸ್ವಲ್ಪ ಕಾಲ ವಿರಮಿಸುತ್ತಿದ್ದರು. ಈ ಪವಿತ್ರ ಸ್ಥಳದಲ್ಲಿ ಗುರುತಿಗಾಗಿ ಸಾಯಿಬಾಬಾರವರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ನಂತರ ಮೆರವಣಿಗೆಯು ಸೇವಾಧಾಮ್ ಕಟ್ಟಡದ ಎದುರುಗಡೆ ಇದ್ದ ವಿಠಲನ ಮಂದಿರದ ಬಳಿಗೆ ತೆರಳುತ್ತಿತ್ತು. ಅಲ್ಲಿಂದ ಮುಂದೆ ಬಲಕ್ಕೆ ತಿರುಗಿ ಕನೀಫ್ ನಾಥ್ ಮಂದಿರದ ಬಳಿಗೆ ಮೆರವಣಿಗೆ ಬರುತ್ತಿತ್ತು. ಈ ಮಂದಿರವು ಹಳೆಯ ಅಂಚೆ ಕಚೇರಿಯ ಬಳಿ ಇರುತ್ತದೆ. 


ಅಲ್ಲಿಂದ ಮುಂದೆ ಬಲಕ್ಕೆ ತಿರುಗಿ ಮೆರವಣಿಗೆಯು ಅಹಮದ್ ನಗರ್ - ಮನಮಾಡದ ಹೆದ್ದಾರಿಯಲ್ಲಿ ಬಂದು ಲೇಂಡಿ ಉದ್ಯಾನವನದ ಬಳಿ ಬಂದು ನಿಲ್ಲುತ್ತಿತ್ತು. ಲೇಂಡಿ ಉದ್ಯಾನವನದ ಒಳಗೆ ಸಾಯಿಬಾಬಾ ಒಬ್ಬರೇ ಪ್ರವೇಶಿಸುತ್ತಿದ್ದರು. ಮೆರವಣಿಗೆಯಲ್ಲಿ ಬಂದ ಯಾರಿಗೂ ಒಳಗಡೆ ಪ್ರವೇಶ ಇರಲಿಲ್ಲ. ಭಕ್ತರೆಲ್ಲಾ ಸಾಯಿಬಾಬಾರವರು ಲೇಂಡಿಯಿಂದ ಹೊರಗಡೆ ಬರುವವರೆಗೂ ಕಾದುಕೊಂಡಿರುತ್ತಿದ್ದರು. ಲೇಂಡಿಯಿಂದ ಹೊರಬಂದ ನಂತರ ಸಾಯಿಬಾಬಾರವರು ಪುನಃ ಮೆರವಣಿಗೆಯಲ್ಲಿ ಬಂದ ದಾರಿಯಲ್ಲೇ ದ್ವಾರಕಮಾಯಿಗೆ ಹಿಂತಿರುಗುತ್ತಿದ್ದರು. 

ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment