Monday, May 23, 2011

ದಾಬೋಲ್ಕರ್ ಆಲಿಯಾಸ್ ಹೇಮಾಡಪಂತರ ಮುಂಬೈನ  ಮನೆ  - "ಸಾಯಿ ನಿವಾಸ್" - ಕೃಪೆ: ಸಾಯಿಅಮೃತಧಾರಾ.ಕಾಂ 

ಸಾಯಿ ಸಚ್ಚರಿತೆಯ 40ನೇ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿರುವ ಹೇಮಾಡಪಂತರ ಹೋಳಿ ಹುಣ್ಣಿಮೆಯ ಔತಣ ಮುಂಬೈನ ಬಾಂದ್ರಾದ ಈ ಮನೆಯಲ್ಲೇ ನಡೆಯಿತು. ಈ ಮನೆಯಲ್ಲಿ ಈಗಲೂ ಎಲ್ಲ ವಸ್ತುಗಳನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿರುತ್ತಾರೆ ಮತ್ತು  ಸಾಯಿ ಭಕ್ತರು ಅವುಗಳನ್ನು ಹೋಗಿ ನೋಡಿಕೊಂಡು ಬರಬಹುದಾಗಿದೆ. 


ಮೆಟ್ಟಿಲುಗಳು:

ಅಂದು ಹೋಳಿ ಹುಣ್ಣಿಮೆಯ ದಿನ. ಮಧ್ಯಾನ್ಹದ ಹೊತ್ತಿಗೆ ಅಡಿಗೆ ತಯಾರಾಗಿತ್ತು. ದೇವರ ಪೂಜೆ ನೆರವೇರಿಸಿ ಊಟಕ್ಕೆ ಎಳೆಯನ್ನು ಹಾಕಿದ್ದರು. ಮನೆಯವರೆಲ್ಲ  ಊಟಕ್ಕೆ ತಮ್ಮ ತಮ್ಮ ಮನೆಗಳ ಮೇಲೆ ಕುಳಿತಿದ್ದರು. ಎಲೆಗಳಿಗೆ ಆಹಾರವನ್ನು ಬಡಿಸಿದ್ದರು. ಎಲ್ಲರು ಹೇಮಾಡಪಂತರು ಹೇಳಿದ್ದ ಅತಿಥಿಯ ಬರುವನ್ನೇ ನಿರೀಕ್ಷಿಸುತ್ತಿದ್ದರು. ಮಧ್ಯಾನ್ಹ ಮೀರುತ್ತಿತ್ತು. ಆದರೂ ಅತಿಥಿಯ ಸುಳಿವೇ ಇರಲಿಲ್ಲ. ನಂತರ ಬಾಗಿಲು ಹಾಕಿ ಎಲ್ಲ ಎಲೆಗಳಿಗೂ ತುಪ್ಪವನ್ನು ಬಡಿಸಿದರು. ಎಲ್ಲರೂ ಇನ್ನೇನು ಊಟವನ್ನು ಪ್ರಾರಂಭಿಸಬೇಕು ಎಂದುಕೊಳ್ಳುವಷ್ಟರಲ್ಲಿ ಬಾಗಿಲು ಬಡಿದ ಸಪ್ಪಳ ಕೇಳಿಸಿತು. ಮೆಟ್ಟಿಲುಗಳನ್ನು ಯಾರೋ ಹತ್ತಿಬರುತ್ತಿರುವ ಶಬ್ದ ಕೇಳಿಸಿತು. ಹೇಮಾಡಪಂತರು ಹೋಗಿ ಬಾಗಿಲು ತೆರೆದು ನೋಡಲಾಗಿ ಆಲಿ ಮಹಮ್ಮದ್ ಮತ್ತು ಇಸ್ಮೂ ಮುಜಾವರ್ ಅವರನ್ನು ಕಂಡರು. ಮನೆಯವರೆಲ್ಲ ಊಟಕ್ಕೆ ಕುಳಿತಿರುವುದನ್ನು ನೋಡಿ ತೊಂದರೆ ಕೊಟ್ಟಿದ್ದಕ್ಕಾಗಿ ಅವರು ಕ್ಷಮೆ ಬೇಡಿ "ಊಟ ಮಾಡಲು ನಿಮಗೆ ಎಲ್ಲರೂ ಕಾಯುತ್ತಿದ್ದಾರೆ. ಇದನ್ನು ತೆಗೆದುಕೊಳ್ಳಿ" ಎಂದು ಹಳೆ ಕಾಗದದಲ್ಲಿ ಸುತ್ತಿದ್ದ ಫೋಟೋ ಒಂದನ್ನು ಹೇಮಾಡಪಂತರ ಕೈಗಿತ್ತು "ನಂತರ ವಿವರವಾಗಿ ತಿಳಿಸುವೆವು. ಊಟ ಮುಗಿಸಿ ಬನ್ನಿ" ಎಂದು ಹೇಳಿ ಹೋದರು. 


ಪವಿತ್ರ ಸಾಯಿ ಸಚ್ಚರಿತೆ ಗ್ರಂಥ: 

ಹೇಮಾಡಪಂತರು "ಸಾಯಿ ಸಚ್ಚರಿತೆ" ಗ್ರಂಥವನ್ನು 1910 ರಲ್ಲಿ ಬರೆಯಲು ಪ್ರಾರಂಭಿಸಿದರು. ಪ್ರಥಮ ಆವೃತ್ತಿಯು 1929 ರಲ್ಲಿ ಹೊರಬಂದಿತು. ಈ ಪವಿತ್ರ ಗ್ರಂಥವು ಎಲ್ಲಾ ಸಾಯಿ ಭಕ್ತರ ಮನೆಯಲ್ಲೂ ಇರಲೇಬೇಕು ಮತ್ತು ಈ ಗ್ರಂಥವು ಮನೆಯವರೆಲ್ಲ ಅತ್ಯಂತ ಪ್ರೀತಿ ಮತ್ತು ಭಕ್ತಿಯಿಂದ ಪಾರಾಯಣ ಮಾಡಲೇಬೇಕಾದ ಗ್ರಂಥವಾಗಿರುತ್ತದೆ. ಪ್ರತಿನಿತ್ಯ ಒಂದು ಅಧ್ಯಾಯವನ್ನಾದರೂ ಪಾರಾಯಣ ಮಾಡಿದರೆ ಅಮಿತ ಸುಖ ಲಭಿಸುತ್ತದೆ. ಗುರುಪೂರ್ಣಿಮೆ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಈ ಗ್ರಂಥದ ಪಾರಾಯಣ ಮಾಡುವುದು ಅತ್ಯಂತ ಶ್ರೇಯಸ್ಕರ. ಈ ಗ್ರಂಥವನ್ನು ಪಾರಾಯಣ ಮಾಡಿದರೆ ಸಾಯಿಬಾಬಾರವರು ಭಕ್ತನನ್ನು ಈ ಭವಸಾಗರದಿಂದ ಪಾರು ಮಾಡುವರು. ಅಲ್ಲದೆ, ಖಾಯಿಲೆಯಿಂದ ನರಳುತ್ತಿರುವವರಿಗೆ ಆರೋಗ್ಯ, ಬಡವರಿಗೆ ಧನ ದೊರೆಯುತ್ತದೆ.

ಸಾಯಿ ಸಚ್ಚರಿತ್ರೆ ರಚಿಸಿದ ಡೆಸ್ಕ್:

ಈ ಡೆಸ್ಕ್ ಮೇಲೆ ಹೇಮಾಡಪಂತರು ಪವಿತ್ರ ಸಾಯಿ ಸಚ್ಚರಿತ್ರೆಯನ್ನು ರಚಿಸಿರುತ್ತಾರೆ. ಈ ಡೆಸ್ಕ್ ಪೂಜಾ ಕೋಣೆಯ ಕೊನೆಯಲ್ಲಿ  ಸಾಯಿಬಾಬಾರವರ ಚಿತ್ರಪಟದ ಕೆಳಗಡೆ ಇರಿಸಲಾಗಿತ್ತು. ಈ ಡೆಸ್ಕ್ ನ ಮುಂದೆ ಹೇಮಾಡಪಂತರು ಅನೇಕ ವರ್ಷಗಳು ಗಂಟೆಗಟ್ಟಲೆ ಕುಳಿತು ಸಾಯಿ ಸಚ್ಚರಿತ್ರೆಯನ್ನು ರಚಿಸಿ ಸಾಯಿಬಾಬಾರವರ ಅನೇಕ ಲೀಲೆಗಳನ್ನು ರಚಿಸಿ ಆ ಪವಿತ್ರ ಅಮೃತವನ್ನು ನಮಗೆ ಉಣಬಡಿಸಿದ್ದಾರೆ. 

ಸಾಯಿಬಾಬಾರವರ ವಿಗ್ರಹ: 

ಈ ವಿಗ್ರಹದ ಮುಂದೆ ಹೇಮಾಡಪಂತರು ಧ್ಯಾನ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಈ ವಿಗ್ರಹದ "ಜೀವಂತ ಕಣ್ಣುಗಳು" ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತದೆ. ಈ ವಿಗ್ರಹದಿಂದ ಅನೇಕ ಲೀಲೆಗಳು ಘಟಿಸಿವೆಯೆಂದು ಹೇಮಾಡಪಂತರ ಧರ್ಮಪತ್ನಿ ಹೇಳುತ್ತಾರೆ. 

ಸಾಯಿಬಾಬಾರವರ ಹೋಳಿ ಹುಣ್ಣಿಮೆಯ ಚಿತ್ರಪಟ: 

ಈ ಚಿತ್ರಪಟವನ್ನು ಆಲಿ ಮಹಮ್ಮದ್ ಮತ್ತು ಇಸ್ಮೂ ಮುಜಾವರ್ ರವರು ಹೋಳಿ ಹುಣ್ಣಿಮೆಯ ದಿನ ಹೇಮಾಡಪಂತರಿಗೆ ತಂದು ಕೊಟ್ಟಿರುತ್ತಾರೆ. ಈ ಚಿತ್ರಪಟವನ್ನು ಔತಣದ ದಿನ ಅತಿಥಿಗೆ ಎಂದು ಮೀಸಲಾಗಿಟ್ಟಿದ್ದ ಸ್ಥಳದಲ್ಲಿ ಇರಿಸಿರುತ್ತಾರೆ. ಹೇಮಾಡಪಂತರಿಗೆ ಕನಸಿನಲ್ಲಿ ಸಾಯಿಬಾಬಾರವರು ಕಾಣಿಸಿಕೊಂಡು ನಿಮ್ಮ ಮನೆಗೆ ಔತಣಕ್ಕೆ ಬರುತ್ತೇನೆ ಎಂದು ಹೇಳಿ ಈ ಚಿತ್ರಪಟದ ರೂಪದಲ್ಲಿ ಬಂದು ತಮ್ಮ ಭಕ್ತನ ಆಸೆಯನ್ನು ಪೂರೈಸಿ ತಮ್ಮ ಮಾತನ್ನು ಉಳಿಸಿಕೊಂಡಿರುತ್ತಾರೆ. 


ಇತರ ಪವಿತ್ರ ವಸ್ತುಗಳು: 

ಪೂಜಾ ಕೋಣೆಯ ಎಡಬದಿಯಲ್ಲಿ ಅನೇಕ ಪವಿತ್ರ ವಸ್ತುಗಳನ್ನು ಇರಿಸಲಾಗಿದೆ. ಒಂದು ಗಾಜಿನ ಪೆಟ್ಟಿಗೆಯಲ್ಲಿ ಸಾಯಿಬಾಬಾರವರು ನೀಡಿದ ಎರಡು ಪವಿತ್ರ ನಾಣ್ಯಗಳು, ಪವಿತ್ರ ಪಾದುಕೆಗಳು, ಹೇಮಾಡಪಂತರು ಉಪಯೋಗಿಸುತ್ತಿದ್ದ ಕನ್ನಡಕವನ್ನು ಇರಿಸಲಾಗಿದೆ. 



ಬಾಬಾರವರ ಚಿತ್ರಪಟ: 

ಈ ಕಲ್ಲಿನ ಮೇಲೆ ಕುಳಿತ ಸಾಯಿಬಾಬಾರವರ ಚಿತ್ರಪಟವನ್ನು ಸಾಯಿಯವರ ಭಕ್ತರಾದ ಶ್ರೀ.ಶ್ಯಾಮರಾವ್ ಜಯಕರ್ ರವರು ರಚಿಸಿರುತ್ತಾರೆ. ಹೇಮಾಡಪಂತರ ಮನೆಯ ಒಳಗೆ ಹೋದ ಕೂಡಲೇ ಎಡಭಾಗದಲ್ಲಿ ಈ ಚಿತ್ರಪಟವನ್ನು ಕಾಣಬಹುದು. ಈ ಚಿತ್ರಪಟವನ್ನು 26ನೇ ಡಿಸೆಂಬರ್ 1916 ರಂದು ರಚಿಸಲಾಯಿತೆಂದು ತಿಳಿದುಬಂದಿದೆ ಮತ್ತು ಚಿತ್ರಪಟದಲ್ಲಿ ಈ ದಿನಾಂಕ ಮತ್ತು ಸಹಿಯನ್ನು ಕೂಡ ನೋಡಬಹುದು. ಈ ಚಿತ್ರಪಟದಲ್ಲಿ ಅನೇಕ ವಿಶೇಷಗಳನ್ನು ಕಾಣಬಹುದು. 80 ವರ್ಷಗಳಿಗೂ ಹಳೆಯದಾದ ಈ ಚಿತ್ರಪಟದಲ್ಲಿ ಬಾಬಾರವರ ಹಿಂದೆ "ಶೇಷನಾಗ" ನನ್ನು, ಬಾಬಾರವರ ಎದೆಯ ಭಾಗದಲ್ಲಿ "ಸ್ವಸ್ತಿಕ್" ಚಿನ್ಹೆಯನ್ನು ಕಾಣಬಹುದು. ಯಾರೋ ಭಕ್ತರು ಚಂದನದಿಂದ ಸ್ವಸ್ತಿಕ್ ಚಿನ್ಹೆಯನ್ನು ಬರೆದಂತೆ ನಮಗೆ ಕಾಣುತ್ತದೆ. ಅಲ್ಲದೆ, ಮತ್ತೊಂದು "ಸ್ವಸ್ತಿಕ್" ಚಿನ್ಹೆಯನ್ನು ಬಾಬಾರವರ ಬಲಗಾಲಿನಲ್ಲಿ ಕಾಣಬಹುದು. 


1997 ರಲ್ಲಿ ಸದ್ಗುರು ಶ್ರೀ.ಅನಿರುದ್ಧ ಬಾಪುರವರು ಸಾಯಿ ನಿವಾಸ್ ನಲ್ಲಿ ಧ್ಯಾನಕ್ಕೊಸ್ಕರವಾಗಿ ಸಾಯಿಬಾಬಾರವರ ಒಂದು ವಿಗ್ರಹವನ್ನು ಸ್ಥಾಪಿಸಿದರು. ಅಂದಿನಿಂದ ಸಾಯಿಬಾಬಾರವರ ಈ ವಿಗ್ರಹದ ಮುಂದೆ "ಓಂ ಕೃಪಾಸಿಂಧು ಶ್ರೀ ಸಾಯಿನಾಥಾಯ ನಮಃ" ಎಂಬ ಸಾಯಿ ಮಂತ್ರವನ್ನು ಜಪಿಸುತ್ತ ಧ್ಯಾನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗಿದೆ.



28ನೇ ಮಾರ್ಚ್ 1996 ರಂದು ಹೇಮಾಡಪಂತರ ಮೊಮ್ಮಗ ಶ್ರೀ.ಅಪ್ಪಾಸಾಹೇಬ್ ದಾಬೋಲ್ಕರ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಮೀನಾವಾಹಿನಿ ದಾಬೋಲ್ಕರ್ ರವರಿಗೆ ಸದ್ಗುರು ಶ್ರೀ.ಅನಿರುದ್ಧ ಬಾಪುರವರು ಕುಳಿತುಕೊಂಡಿದ್ದ ಸ್ಥಳದಲ್ಲಿ ಶಿರಡಿ ಸಾಯಿಬಾಬಾರವರ ದರ್ಶನವಾಯಿತೆಂದು ಹೇಳಲಾಗುತ್ತದೆ. ಅಂದಿನಿಂದ ಶ್ರೀ ಸಾಯಿ ನಿವಾಸ್ ದ್ವಾರಕಾಮಾಯಿಯಾಗಿ ಪರಿವರ್ತನೆಗೊಂದು ಇಲ್ಲಿಗೆ ಬರುವ ಅಸಂಖ್ಯಾತ ಸಾಯಿ ಭಕ್ತರನ್ನು ರಕ್ಷಿಸುತ್ತಿದೆ.

ಶ್ರೀ ಸಾಯಿ ನಿವಾಸ್ ನ ದರ್ಶನದ ಸಮಯ:
ಪ್ರತಿದಿನ ಬೆಳಿಗ್ಗೆ 8 ಘಂಟೆಯಿಂದ 1 ಘಂಟೆಯವರೆಗೆ ಮತ್ತು ಸಂಜೆ 4:30 ರಿಂದ ರಾತ್ರಿ 10 ಘಂಟೆಯವರೆಗೆ ಮತ್ತು ಗುರುವಾರದಂದು ಬೆಳಿಗ್ಗೆ 8 ಘಂಟೆಯಿಂದ ಸಂಜೆ 4:30ರವರೆಗೆ ಶ್ರೀ ಸಾಯಿ ನಿವಾಸ್ ದರ್ಶನಕ್ಕೆ ತೆರೆದಿರುತ್ತದೆ. 

ಆರತಿಯ ಸಮಯ: 
ಪ್ರತಿದಿನ ರಾತ್ರಿ 7 ಘಂಟೆಗೆ ಆರತಿಯನ್ನು ಮಾಡಲಾಗುತ್ತದೆ. ಆರತಿಯ ನಂತರ ಹರಿ ನಾಮಸ್ಮರಣೆ, ಈಶ್ವರ ನಾಮಸ್ಮರಣೆ, ಅನಿರುದ್ಧರವರ ನಾಮಜಪ  ಅಥವಾ ಗಣೇಶ ಅಥರ್ವಶೀರ್ಷದ ಪಠಣವನ್ನು ಮಾಡಲಾಗುತ್ತದೆ. 


ವಿಶೇಷ ಉತ್ಸವದ ದಿನಗಳು:
1. ಹೋಳಿ ಹುಣ್ಣಿಮೆ - ಈ ದಿನ ಸಾಯಿಬಾಬಾರವರು ವಿಗ್ರಹದ ರೂಪದಲ್ಲಿ ಶ್ರೀ ಸಾಯಿ ನಿವಾಸ್ ಗೆ ಬಂದ ದಿನ. 
2. ಸದ್ಗುರು ನವರಾತ್ರಿ ಉತ್ಸವ (ಆಶ್ವಯುಜ ನವರಾತ್ರಿ ಉತ್ಸವ)


ಸಾಯಿ ನಿವಾಸದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:  
ಬಾಂದ್ರಾ ರೈಲ್ವೇ ನಿಲ್ದಾಣದಿಂದ 10 ನಿಮಿಷದ ನಡೆದರೆ ಶ್ರೀ ಸಾಯಿ ನಿವಾಸ ಸಿಗುತ್ತದೆ. 


ವಿಳಾಸ:
ಶ್ರೀ.ಸಾಯಿ ನಿವಾಸ್ 
ಸಂತ ಮಾರ್ಟಿನ್ ರಸ್ತೆ, 
ಬಾಂದ್ರಾ (ಪಶ್ಚಿಮ), 
ಮುಂಬೈ-400 053. ಭಾರತ. 


ಮುಖ್ಯ ಕಾರ್ಯಾಲಯ:
ಶ್ರೀ.ಅನಿರುದ್ಧ ಉಪಾಸನಾ ಫೌನ್ಡೇಶನ್, 
2ನೇ ಮಹಡಿ, ಹ್ಯಾಪಿ ಹೋಂ, ಪ್ಲಾಟ್ ನಂ.551,
ಟಿಪಿಯೆಸ್-3, 8ನೇ ರಸ್ತೆ, ಖಾರ್ ದೂರವಾಣಿ ವಿನಿಮಯ ಕೇಂದ್ರದ ಹಿಂಭಾಗ, 
ಖಾರ್ (ಪಶ್ಚಿಮ), ಮುಂಬೈ-400 052. ಭಾರತ.


ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಸುನೀಲ್ ಸಿನ್ಹಾ ಮಂತ್ರಿ / ಶ್ರೀ.ಮಹೇಶ್ ಸಿನ್ಹಾ ಜಂತಿಯೇ - ಮುಖ್ಯ ಕಾರ್ಯಕಾರಿ ಅಧಿಕಾರಿಗಳು. 


ದೂರವಾಣಿ ಸಂಖ್ಯೆ:

+91 98690 22971 / +91 98210 75164 

ಈ ಮೇಲ್ ವಿಳಾಸ: 

ಅಂತರ್ಜಾಲ ತಾಣ: 


ಮಾರ್ಗಸೂಚಿ: 
ಬಾಂದ್ರಾ ರೈಲ್ವೇ ನಿಲ್ದಾಣದಿಂದ 10 ನಿಮಿಷದ ನಡೆದರೆ ಶ್ರೀ ಸಾಯಿ ನಿವಾಸ ಸಿಗುತ್ತದೆ.

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment