Saturday, February 26, 2011

ಶಿರಡಿ ದೇವಾಲಯದ ಪ್ರಾಂಗಣದಲ್ಲಿದ್ದ ಪವಿತ್ರ ಸ್ಥಳ - ಸಾಥೆವಾಡ - ಕೃಪೆ: ಸಾಯಿಅಮೃತಧಾರಾ.ಕಾಂ    

ಸಾಥೆವಾಡ ಗುರುಸ್ಥಾನದ ಹಿಂಭಾಗದಲ್ಲಿ ಮತ್ತು ಸಮಾಧಿ ಮಂದಿರದ ನಿರ್ಗಮನ ದ್ವಾರದ ಪಕ್ಕದಲ್ಲಿ ಇದ್ದಿತು. ಸಾಯಿಬಾಬಾರವರು ಒಮ್ಮೆ ಹರಿ ವಿನಾಯಕ ಸಾಥೆಯವರಿಗೆ "ಶಿರಡಿ ಗ್ರಾಮದ ಗೋಡೆಯನ್ನು ಕೆಡವಿ ಮತ್ತೆ ಕಟ್ಟು" ಎಂದು ಆಜ್ಞಾಪಿಸಿದರು. ಸಾಯಿಬಾಬಾರವರ  ಮಾತಿನ ಅರ್ಥ ಆ ಸ್ಥಳದಲ್ಲಿ ಒಂದು ವಾಡವನ್ನು ಗೋಡೆಯನ್ನು ಸೇರಿಸಿಕೊಂಡು ಕಟ್ಟಿಸಬೇಕೆಂಬುದು. ಬಾಬಾರವರ ಆಜ್ಞೆಯಂತೆ ಸಾಥೆಯವರು ಆ ಸ್ಥಳವನ್ನು ಕೊಂಡುಕೊಂಡು ಒಂದು ವಾಡ ನಿರ್ಮಿಸಿದರು. ಈ ವಾಡವು ಶಿರಡಿಗೆ ಬರುವ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಬಹಳ ಉಪಯೋಗವಾಗುತ್ತಿತ್ತು (ಸಾಯಿ ಸಚ್ಚರಿತ್ರೆ ಅಧ್ಯಾಯ 4).


ಶಿರಡಿ ಸಾಯಿಬಾಬಾ ಸಂಸ್ಥಾನದ ದೇವಾಲಯದ ಪ್ರಾಂಗಣದಲ್ಲಿ ಮೊದಲು ನಿರ್ಮಾಣವಾದ ಕಟ್ಟಡ ಸಾಥೆವಾಡ. ನಂತರ ದೀಕ್ಷಿತ್ ವಾಡಾ ನಿರ್ಮಾಣವಾಯಿತು. ನಂತರ ಬೂಟಿವಾಡ ನಿರ್ಮಾಣವಾಯಿತು. ಈ ವಾಡವನ್ನು ಸಾಥೆಯವರು ಬಾಬಾರವರ ಆಜ್ಞೆಯ ಮೇರೆಗೆ 1908 ರಲ್ಲಿ ಕಟ್ಟಿಸಿದರು. ಸಾಥೆವಾಡ ನಿರ್ಮಿಸುವ ಸಮಯದಲ್ಲಿ ಗೋಡೆಯನ್ನು ಎತ್ತರಿಸುವ ಸಲುವಾಗಿ ಬೇವಿನ ಮರದ ಕೆಲವು ಕೊಂಬೆಗಳನ್ನು ಕಡಿಯುವ ಪ್ರಸಂಗ ಒದಗಿಬಂದಿತು. ಆಗ ಬಾಬಾರವರು ನಿರ್ಮಾಣಕ್ಕೆ ಅಡ್ಡವಾಗಿರುವ ಕೆಲವು ರಂಬೆ ಕೊಂಬೆಗಳನ್ನು ಕಡಿಯಲು ಆಜ್ಞಾಪಿಸಿದರು. ಆದರೆ ಯಾರೂ ಪವಿತ್ರ ಬೇವಿನ ಮರವನ್ನು ಕಡಿಯಲು ಮುಂದೆ ಬರಲಿಲ್ಲ. ಆಗ ಬಾಬಾರವರೇ ಸ್ವತಃ ಮುಂದೆ ಬಂದು ನಿರ್ಮಾಣಕ್ಕೆ ಅಡ್ಡವಾಗಿದ್ದ ಕೊಂಬೆಗಳನ್ನು ಕಡಿದು ಹಾಕಿದರು. 

ಈ ವಾಡದಲ್ಲಿ ಅನೇಕ ಪ್ರಸಿದ್ದ ಸಾಯಿ ಮಹಾಭಕ್ತರು ವಾಸಿಸುತ್ತಿದ್ದರು. ಸಾಯಿಬಾಬಾರವರು ತಾತ್ಯಾ ಸಾಹೇಬ್ ನೂಲ್ಕರ್ ರವರಿಗೆ ಇದೇ ವಾಡಾದಲ್ಲಿ ಸದ್ಗತಿಯನ್ನು ನೀಡಿದರು. ಆ ಸಮಯದಲ್ಲಿ ನೂಲ್ಕರ್ ರವರ ಬಾಲ್ಯ ಸ್ನೇಹಿತ ನೀಲಕಂಠ ಸಹಸ್ರಬುದ್ಧೆ ಅವರ ಜೊತೆಗಿದ್ದರು. ನೀಲಕಂಠರವರು ಶಿರಡಿಗೆ ಬಂದಾಗಲೆಲ್ಲ ಈ ವಾಡಾದಲ್ಲೇ ತಂಗುತ್ತಿದ್ದರು. ದಾದಾ ಕೇಳ್ಕರ್ ಮತ್ತು ಹರಿ ವಿನಾಯಕ ಸಾಥೆಯವರು ತಮ್ಮ ಕುಟುಂಬದವರೊಡನೆ ಈ ವಾಡಾದಲ್ಲಿ ವಾಸ ಮಾಡುತ್ತಿದ್ದರು. 

ಎಲ್ಲರಿಗಿಂತ ಹೆಚ್ಚಾಗಿ ಮೇಘಾ ಮತ್ತು ದಾದಾ ಸಾಹೇಬ್ ಕಾಪರ್ಡೆಯವರು ಅತಿ ಹೆಚ್ಚು ಕಾಲ ಈ ವಾಡದಲ್ಲಿ ತಂಗಿದ್ದರು. ಸಾಯಿ ಸಚ್ಚರಿತ್ರೆಯ 28ನೇ ಅಧ್ಯಾಯದಲ್ಲಿ ಮೇಘಾರವರ ವಿಷಯವನ್ನು ಉಲ್ಲೇಖಿಸಲಾಗಿದೆ. ಮೇಘಾರವರು ಗುಜರಾತಿ ಬ್ರಾಹ್ಮಣರಾಗಿದ್ದರು. ಮೇಘಾರವರು ಬಾಬಾರವರನ್ನು ಬಹಳ ಇಷ್ಟಪಡುತ್ತಿದ್ದರು ಮತ್ತು ಸಾಕ್ಷಾತ್ ಶಿವನೆಂದೇ ಪೂಜಿಸುತ್ತಿದ್ದರು.  ಮೇಘಾರವರು ಬಾಬಾರವರನ್ನು ದ್ವಾರಕಾಮಾಯಿ ಮಸೀದಿಯಲ್ಲಿ ಮತ್ತು ಈ ವಾಡಾದಲ್ಲಿ ಪೂಜಿಸುತ್ತಿದ್ದರು. ಮೇಘಾರವರು ದೀಕ್ಷಿತ್ ತಮಗೆ ನೀಡಿದ್ದ ಬಾಬಾರವರ ಚಿತ್ರಪಟವನ್ನು ಸಾಥೆವಾಡದ ಕೊನೆಯಲ್ಲಿ ಇಟ್ಟುಕೊಂಡು ಪ್ರತಿನಿತ್ಯ ತಪ್ಪದೆ ಪೂಜಿಸುತ್ತಿದ್ದರು. ಒಮ್ಮೆ ಬಾಬಾರವರು ಇವರ ಕನಸಿನಲ್ಲಿ ಬಂದು "ಮೇಘಾ, ತ್ರಿಶೂಲವನ್ನು ಬರೆ" ಎಂದು ಹೇಳಿ ಮಾಯವಾದರು. ಮೇಘಾರವರಿಗೆ ಆಶ್ಚರ್ಯವಾಯಿತು. ಏಕೆಂದರೆ ಕೋಣೆಯ ಬಾಗಿಲು ಹಾಕಿದ್ದು ಹಾಗೆಯೇ ಇತ್ತು. ಬಾಬಾರವರು ಹೇಗೆ ಒಳಗೆ ಬಂದರೆಂದು ಮೇಘಾರವರಿಗೆ ಆಶ್ಚರ್ಯವಾಯಿತು. ಈ ಬಗ್ಗೆ ಮಾರನೇ ದಿನ ಬಾಬಾರವರನ್ನು ಕೇಳಲಾಗಿ ಬಾಬಾರವರು "ಮೇಘಾ, ನನ್ನ ಪ್ರವೇಶಕ್ಕೆ ಯಾವುದೇ ಬಾಗಿಲುಗಳ ಅವಶ್ಯಕತೆಯಿಲ್ಲ. ನಾನು ಸಕಲ ಚರಾಚರಗಳಲ್ಲಿ ವಾಸವಾಗಿದ್ದೇನೆ" ಎಂದು ಹೇಳಿ ತಮಗೆ ರಾಮದಾಸಿ ಭಕ್ತನೊಬ್ಬ ನೀಡಿದ್ದ ಶಿವಲಿಂಗವನ್ನು ನೀಡಿ ಅದನ್ನು ತಪ್ಪದೆ ಪೂಜಿಸಲು ಹೇಳಿದರು. 

ದಾದಾ ಸಾಹೇಬ್ ಕಾಪರ್ಡೆಯವರು ಈ ವಾಡದಲ್ಲಿ ತಂಗಿದ್ದು ಪ್ರಸಿದ್ದ "ಶಿರಡಿ ಡೈರಿ" ಯನ್ನು ಬರೆದರು. ಜಗದೀಶ್ವರ್ ಭೀಷ್ಮರವರು ಇಲ್ಲಿಯೇ ವಾಸ ಮಾಡುತ್ತಿದ್ದು ಪ್ರಸಿದ್ದ "ಶ್ರೀ ಸಾಯಿನಾಥ ಸಗುಣೋಪಾಸನಾ" (ಆರತಿಯ ಪುಸ್ತಕ) ವನ್ನು ರಚಿಸಿದರು. ಬಾಬಾ ಸಾಹೇಬ್ ತರ್ಕಡ ಮತ್ತು ಅವರ ಕುಟುಂಬದವರು ಇಲ್ಲಿಯೇ ತಂಗುತ್ತಿದ್ದರು ಮತ್ತು ಜ್ಯೋತಿಂದ್ರ ತರ್ಕಡ ರವರು ಶಿರಡಿಗೆ ಬಂದಾಗಲೆಲ್ಲಾ ಇಲ್ಲಿಯೇ ಇಳಿದುಕೊಳ್ಳುತ್ತಿದ್ದರು. ಇಲ್ಲಿ ಉಳಿದುಕೊಂಡಿದ್ದ ಎಲ್ಲ ಭಕ್ತರು ಸಮಾನ ಮನಸ್ಕರಾಗಿದ್ದು ಪ್ರತಿದಿನ ಒಂದು ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಪ್ರತಿದಿನ ಬೆಳಗಿನ ಜಾವ ಬೇಗನೆ ಎದ್ದು ಕಾಕಡಾ ಆರತಿಗೆ ಹಾಜರಾಗುತ್ತಿದ್ದರು. ಕಾಕಡಾ ಆರತಿಯ ನಂತರ ವಾಡಾಕ್ಕೆ ಹಿಂತಿರುಗಿ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ಹೋಗುವುದನ್ನು ಎದುರು ನೋಡುತ್ತಿದ್ದರು. ಬಾಬಾರವರ ಮೆರವಣಿಗೆ ವಾಡಾದ ಹತ್ತಿರ ಬರುತ್ತಿದ್ದಂತೆ ಹೊರಗೆ ಬಂದು ಬಾಬಾರವರ ದರ್ಶನ ಮಾಡುತ್ತಿದ್ದರು. ಬಾಬಾರವರು ಲೇಂಡಿ ಉದ್ಯಾನವನದಿಂದ ಹಿಂತಿರುಗುವಾಗಲೂ ಸಹ ಬಾಬಾರವರ ದರ್ಶನ ಮಾಡುತ್ತಿದ್ದರು. ಅಲ್ಲದೆ, ಪ್ರತಿದಿನ ನಡೆಯುತ್ತಿದ್ದ ಎಲ್ಲಾ ಆರತಿಗಳಿಗೂ ತಪ್ಪದೆ ಹಾಜರಾಗುತ್ತಿದ್ದರು.  

ಪ್ರತಿದಿನ ಸಂಜೆ ಪವಿತ್ರ ಗ್ರಂಥಗಳಾದ ರಾಮಾಯಣ, ಏಕನಾಥ ಭಾಗವತ ಮತ್ತು ಯೋಗ ವಾಸಿಷ್ಠ ಗಳನ್ನು ಪಾರಾಯಣ  ಮಾಡುತ್ತಿದ್ದರು ಮತ್ತು ಅದರಲ್ಲಿ ಅಡಕವಾದ ಸೂಕ್ಷ್ಮ ವಿಚಾರಗಳನ್ನು ಕುರಿತು ಚರ್ಚಿಸುತ್ತಿದ್ದರು. ಅಲ್ಲದೆ, ಪ್ರತಿದಿನ ರಾತ್ರಿ ಭೀಷ್ಮರವರು ಮಾಡುತ್ತಿದ್ದ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. 

ಮತ್ತೊಬ್ಬ ಮಹೋನ್ನತ ಸಾಯಿಭಕ್ತರಾದ ಸ್ವಾಮಿ ಶರಣಾನಂದರು ಶಿರಡಿಗೆ ಬಂದಾಗಲೆಲ್ಲಾ ಇದೇ ವಾಡದಲ್ಲಿ ಇಳಿದುಕೊಳ್ಳುತ್ತಿದ್ದರು. ಇವರು ತಮ್ಮ 94ನೇ ವಯಸ್ಸಿನಲ್ಲಿ 1983 ರಲ್ಲಿ ಸ್ವರ್ಗಸ್ಥರಾದರು. 



ಈ ಪವಿತ್ರ ವಾಡಾವನ್ನು ಶ್ರೀ.ಆರ್ ಎಸ್.ನಾವಲ್ಕರ್ ರವರು 30ನೇ ಸೆಪ್ಟೆಂಬರ್ 1924 ರಂದು ಖರೀದಿಸಿದರು. ನಂತರದ ದಿನಗಳಲ್ಲಿ  ಶ್ರೀ.ವಿ.ಎನ್.ಗೋರಕ್ಷಾಕರ್ ರವರು ನಾವಲ್ಕರ್ ರವರ ಕುಟುಂಬವರ್ಗದವರ ಮನವೊಲಿಸಿ ಈ ಪವಿತ್ರ ವಾಡವನ್ನು ಸಾಯಿಬಾಬಾ ಸಂಸ್ಥಾನದವರಿಗೆ ಕೊಡಿಸುವುದರಲ್ಲಿ  ಪ್ರಮುಖ ಪಾತ್ರವನ್ನು ವಹಿಸಿದರು. 1939 ರಲ್ಲಿ ನಾವಲ್ಕರ್ ಕುಟುಂಬದವರು ಈ ವಾಡವನ್ನು ಸಾಯಿಬಾಬಾ ಸಂಸ್ಥಾನಕ್ಕೆ ಕೊಡುಗೆಯಾಗಿ ನೀಡಿದರು. 1941 ರಲ್ಲಿ ಸಾಯಿಬಾಬಾ ಸಂಸ್ಥಾನದವರು ಯಾತ್ರಿಕರು ಉಳಿದುಕೊಳ್ಳಲು ಅನುಕೂಲವಾಗುವಂತೆ ಇನ್ನು ನಾಲ್ಕು ದೊಡ್ಡ ಕೋಣೆಗಳನ್ನು ನಿರ್ಮಿಸಿದರು. 1980 ರ ವರೆಗೂ ಈ ವಾಡದಲ್ಲಿ ಯಾತ್ರಿಕರು ತಂಗುತ್ತಿದ್ದರು. ನಂತರದ ದಿನಗಳಲ್ಲಿ ಸ್ವಲ್ಪ ಕಾಲ ಈ ಸ್ಥಳವನ್ನು ಸಾರ್ವಜನಿಕ ಸಂಪರ್ಕ ಕೇಂದ್ರವನ್ನಾಗಿ ಮಾರ್ಪಡಿಸಿದ್ದರು. ಆದರೆ 1998-1999 ರಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದವರು ದೇವಾಲಯದ ಜೀರ್ಣೋದ್ದಾರ ಕಾರ್ಯವನ್ನು  ಕೈಗೊಂಡಾಗ ಈ ವಾಡಾವನ್ನು ಕೆಡವಲಾಯಿತು. 

ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment