Tuesday, September 28, 2010

ಸಾಯಿ ಮಹಾಭಕ್ತ - ಶ್ರೀ ನಾರಾಯಣ ಆಶ್ರಮ ವಾಯಿ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ

ನಾರಾಯಣ ಆಶ್ರಮ ವಾಯಿಯವರು ಆಧ್ಯಾತ್ಮಿಕ ಮಾರ್ಗಕ್ಕೆ ಬಂದ ವಿಷಯ ಬಹಳ ಆಶ್ಚರ್ಯಕರವಾಗಿದೆ. ಇವರು 1910 ರಿಂದ 1926 ರ ವರೆಗೆ ಟೋಸರ್ ಕಸ್ಟಮ್ಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆನಂತರ ನಿವೃತ್ತರಾಗಿ ಪಿಂಚಣಿ ಪಡೆಯತೊಡಗಿದರು. 1910 ರಲ್ಲಿ ಇವರಿಗೆ ದಾಸಗಣುರವರ ಕೀರ್ತನೆ ಕೇಳುವ ಅವಕಾಶ ದೊರೆಯಿತು. ಆಗ ದಾಸಗಣು ತಮ್ಮ ಕೀರ್ತನೆಯ ಸಮಯದಲ್ಲಿ ಸಾಯಿಬಾಬಾರವರನ್ನು ಕೊಂಡಾಡುತ್ತಾ ಹರಿಕಥೆ ಮಾಡುತ್ತಿದ್ದುದನ್ನು ಗಮನಿಸಿದ ನಾರಾಯಣ ಆಶ್ರಮವರರು ಪ್ರೇರೇಪಿತರಾಗಿ ಕೀರ್ತನೆ ಮುಗಿದ ನಂತರ ಅವರ ಬಳಿಗೆ ಹೋಗಿ ಸಾಯಿಬಾಬಾರವರ ಬಗ್ಗೆ ವಿಚಾರಿಸಿದಾಗ ದಾಸಗಣುರವರು ಸಾಯಿಬಾಬಾ ಶಿರಡಿಯಲ್ಲಿ ಇರುವುದಾಗಿ ತಿಳಿಸಿದರು. ಈ ವಿಷಯ ತಿಳಿದ 5 ದಿನಗಳಲ್ಲೇ ನಾರಾಯಣ ಆಶ್ರಮರವರು ಶಿರಡಿಗೆ ತೆರಳಿ ಸಾಯಿಬಾಬಾರವರ ದರ್ಶನ ಪಡೆದರು. ಅವರಿಗೆ ಸಾಯಿಯವರ ಮೇಲೆ ಎಷ್ಟು ಪ್ರೀತಿ ಹುಟ್ಟಿತೆಂದರೆ ಕೇವಲ 6 ತಿಂಗಳಿನಲ್ಲಿ 9 ಬಾರಿ ಸಾಯಿಬಾಬಾರವರ ದರ್ಶನ ಪಡೆದರು. ಆನಂತರವೂ ಆಗಾಗ್ಗೆ ಶಿರಡಿಗೆ ತೆರಳಿ ಸಾಯಿಬಾಬಾರವರ ದರ್ಶನ ಪಡೆಯುತ್ತಿದ್ದರು. ಆದರೆ ಅವರ ಮೊದಲನೇ ಭೇಟಿ ಅವಿಸ್ಮರಣೀಯವಾಗಿತ್ತು. ಇದಾದ ಮೇಲೆ 1918 ತನಕವೂ ಕೂಡ ಅವರು ಸಾಯಿಬಾಬಾರವರ ಪ್ರಭಾವಕ್ಕೆ ಒಳಗಾಗಿದ್ದರು. ಸಾಯಿಬಾಬಾರವರ ಮಹಾಸಮಾಧಿಯ ನಂತರ ನಾರಾಯಣ ಆಶ್ರಮರವರು ನಾಂದೇಡ್ ಹತ್ತಿರ ನರ್ಮದ ನದಿಯ ತೀರದಲ್ಲಿದ್ದ ಗುರಡೇಶ್ವರದ ವಾಸುದೇವಾನಂದ ಸರಸ್ವತಿ ಅವರ ಆಶ್ರಮಕ್ಕೆ ತೆರಳಿದರು. ವಾಸುದೇವಾನಂದ ಸರಸ್ವತಿಯವರು 1915 ರಲ್ಲಿ ಸಮಾಧಿ ಹೊಂದಿದರು. ನಾರಾಯಣ ಆಶ್ರಮರವರು ಸಾಯಿಯವರೇ ತಮ್ಮನ್ನು ವಾಸುದೇವಾನಂದ ಸರಸ್ವತಿಯವರ ಆಶ್ರಮಕ್ಕೆ ಕಳುಹಿಸಿರುತ್ತಾರೆ ಮತ್ತು ಅವರ ಅಧೀನಕ್ಕೆ ತಮ್ಮನ್ನು ಬಿಟ್ಟಿದ್ದಾರೆ ಎಂದು ಬಲವಾಗಿ ನಂಬಿದ್ದರು. 1931 ರಲ್ಲಿ ನಾರಾಯಣ ಆಶ್ರಮರವರು ಕಾಶಿಯ ವೇದಾಶ್ರಮ ಸ್ವಾಮಿ (ತಾರಕ ಮಠ ಮತ್ತು ದುರ್ಗಾ ಘಟ್ಟ) ಬಳಿಗೆ ತೆರಳಿ ಅವರಿಂದ ಸನ್ಯಾಸ ದೀಕ್ಷೆ ಪಡೆದರು.

ನಾರಾಯಣ ಆಶ್ರಮರವರು ಸಾಯಿಬಾಬಾರವರ ಬಗ್ಗೆ ಕೆಲವು ಸಂಗತಿಗಳನ್ನು ಈ ಕೆಳಕಂಡಂತೆ ವಿವರಿಸಿದ್ದಾರೆ.

ನಾರಾಯಣ ಆಶ್ರಮರವರ ಪ್ರಕಾರ ಸಾಯಿಯವರು ಬೇರೆ ಬೇರೆ ಭಕ್ತರ ಬಳಿ ಬೇರೆ ಬೇರೆ ರೀತಿ ವ್ಯವಹರಿಸುತ್ತಿದ್ದರು. ಅನೇಕ ಭಕ್ತರು ತಮ್ಮ ಲೌಕಿಕ ಕಾರ್ಯಗಳಿಗಾಗಿ ಮಾತ್ರ ಸಾಯಿಯವರ ಬಳಿ ಬರುತ್ತಿದ್ದರು. ಹರಿ ಸೀತಾರಾಮ್ ದೀಕ್ಷಿತ್, ಚಂದೋರ್ಕರ್ ಮತ್ತು ಧಾಬೋಲ್ಕರ್ ರವರುಗಳು ಸಾಯಿಯವರಿಗೆ ಅತ್ಯಂತ ನಿಕಟವರ್ತಿಗಳಾಗಿದ್ದರು. ಅವರ ಭಕ್ತರ ಅಭಿವೃದ್ದಿಗೆ ಅವರ ನಿಕಟ ಸಂಬಂಧ ಬೇಕಾಗಿರಲಿಲ್ಲ. ಅವರ ಪ್ರಭಾವ ಎಲ್ಲೆಡೆಯಲ್ಲಿ ಇತ್ತು. ಅವರ ಉಪದೇಶಗಳು ಬೇರೆ ಬೇರೆ ರೀತಿಯಾಗಿರುತ್ತಿತ್ತು. ನಾರಾಯಣ ಆಶ್ರಮರವರಿಗೂ ಕೂಡ ಇದೇ ರೀತಿಯ ಅನುಭವವಾಯಿತು. ಸಾಯಿಬಾಬಾರವರ ಕೃಪೆಯಿಂದ ಯಾವ ಮಾತನ್ನು ಆಡದೇ ಅಥವಾ ಅವರನ್ನು ಸ್ಪರ್ಶಿಸದೆ ಅನೇಕ ಆತ್ಮಗಳ ವ್ಯತ್ಯಾಸದ ಅರಿವನ್ನು ಮತ್ತು ಆ ವ್ಯತ್ಯಾಸಗಳು ನಿಜವಲ್ಲವೆಂದು ದೇವತ್ವವೇ ನಿಜವೆಂದು ನಾರಾಯಣ ಅಶ್ರಮರವರಿಗೆ ತಿಳಿಸಿದರು. ಶ್ರೀ ನಾರಾಯಣ ಅಶ್ರಮರವರು ತಮ್ಮ ಈ ಅನುಭವಗಳನ್ನು ದೀಕ್ಷಿತ್ ರವರಿಗಾಗಲಿ ಅಥವಾ ಧಾಬೋಲ್ಕರ್ ರವರಿಗಾಗಲಿ ತಿಳಿಸಲಿಲ್ಲ. ಆದರೆ ದೀಕ್ಷಿತ್ ರವರು ಸಾಯಿಲೀಲಾ ಮಾಸಪತ್ರಿಕೆಯಲ್ಲಿ ಭಕ್ತರ ಅನುಭವಗಳು ಎಂಬ ಶೀರ್ಷಿಕೆಯಲ್ಲಿ ಈ ಅನುಭವವನ್ನು ಬರೆದಿದ್ದಾರೆ ಮತ್ತು ಧಾಬೋಲ್ಕರ್ ರವರು ಕೂಡ ಸಾಯಿ ಸಚ್ಚರಿತೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಬಾಬಾರವರು ನಾರಾಯಣ ಅಶ್ರಮರವರಿಗೆ ಕೆಲವೇ ಕೆಲವು ವಿಷಯಗಳನ್ನು, ಉಪದೇಶಗಳನ್ನು ನೀಡಿದ್ದರು. ಅವು ನೇರವಾಗಿ ಮತ್ತು ಸರಳವಾಗಿ ಇದ್ದಿತು. ಸಾಯಿಯವರು ಎಲ್ಲಾ ಭಕ್ತರು ಒಂದೇ ಗುರುವಿಗೆ ಸೇರಿದವರು ಎಂದು ಹೇಳುತ್ತಿದ್ದರು ಎಂದು ನಾರಾಯಣ ಆಶ್ರಮ ಹೇಳುತ್ತಾರೆ.

ನಾರಾಯಣ ಆಶ್ರಮ ಮತ್ತು ಅವರ ತಂದೆಯವರು ಮಾರುತಿಯ ಆರಾಧಕರಾಗಿ 1918 ರಲ್ಲಿ ವಿಲೇಪಾರ್ಲೆಯಲ್ಲಿ ಹನುಮಾನ್ ರಸ್ತೆಯಲ್ಲಿ ಮಾರುತಿ ಮಂದಿರವನ್ನು ಕಟ್ಟಿ ಬಾಬಾರವರನ್ನು ಹನುಮಾನ್ ಎಂದು ಜ್ಞಾಪಿಸಿಕೊಂಡು ಆ ದೇವರನ್ನು "ಸಾಯಿ ಮಾರುತಿ" ಎಂದು ಕರೆದರು. ಆ ದಿವಸವೇ ವಿಲೇಪಾರ್ಲೆಯಲ್ಲಿ ಸಾಯಿ ಹನುಮಾನ್ ದೇವಸ್ಥಾನದ ಕುಂಭಾಭಿಷೇಕವಾಯಿತು. ಬಾಬಾರವರು ಬ್ರಾಹ್ಮಣ ಕುಲಕ್ಕೆ ಸೇರಿದ ವಾಜೆ ಎಂಬುವರನ್ನು ಕರೆದು 25 ರುಪಾಯಿಗಳನ್ನು ಕೊಟ್ಟು ಸತ್ಯನಾರಾಯಣ ಪೂಜೆ ಮಾಡಲು ಹೇಳಿದರು. ನಾರಾಯಣ ಆಶ್ರಮರವರು ಈ ಘಟನೆಯನ್ನು ಕಾರಣ-ಪರಿಣಾಮ ಎಂದು ಅರ್ಥೈಸಿದ್ದಾರೆ. ಸಾಯಿಯವರು ನಾರಾಯಣ ಅಶ್ರಮರವರಿಗೆ ಸನ್ಯಾಸದ ಅಗತ್ಯವಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ. ಆದರೆ ನಾರಾಯಣ ಆಶ್ರಮರವರೆ ತಮ್ಮ ಸ್ವಂತ ಇಚ್ಚೆಯಿಂದ ಸನ್ಯಾಸ ಸ್ವೀಕರಿಸಿದರೆನ್ನಲಾಗಿದೆ.

ನಾರಾಯಣ ಆಶ್ರಮ ರವರು ತಮ್ಮ ಅನುಭವಗಳಿಂದ ನಮಗೆಲ್ಲ ಸಾಯಿಬಾಬಾರವರು "ಸಚ್ಚಿದಾನಂದ" ಸ್ವರೂಪರೆಂದು ಮನಗಾಣುವಂತೆ ಮಾಡಿದ್ದಾರೆ. ಶ್ರೀ ನಾರಾಯಣ ಆಶ್ರಮ ಪತ್ನಿ ಮತ್ತು ಮಾತೆಯವರೊಡನೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಕೂಡ ಸನ್ಯಾಸದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಸದಾ ಪಾರಮಾರ್ಥಿಕ ವಿಷಯಗಳ ಕಡೆ ತಮ್ಮ ಗಮನವನ್ನು ಹರಿಸುತ್ತಾ ಸಾಯಿ ಭಜನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ತಮ್ಮ ಸುಶ್ರಾವ್ಯವಾದ ಕಂಠದಿಂದ ಸಾಯಿ ಭಜನೆಗಳನ್ನು ಮಾಡುತ್ತಿದ್ದರು. 1952 ರಲ್ಲಿ ನಡೆದ ಅಖಿಲ ಭಾರತ ಸಾಯಿಭಕ್ತರ ಸಮ್ಮೇಳನದಲ್ಲೂ ಕೂಡ ಸಾಯಿಬಾಬಾರವರ ಕೀರ್ತನೆಗಳನ್ನು ಹಾಡಿದರು.

No comments:

Post a Comment