Thursday, September 23, 2010

ಸಾಯಿ ಮಹಾಭಕ್ತ - ಪ್ರೊ.ಜಿ.ಜಿ.ನಾರ್ಕೆ - ಆಧಾರ - ಪೂಜ್ಯ ಶ್ರೀ. ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ 

ಪ್ರೊ.ಜಿ.ಜಿ.ನಾರ್ಕೆ

ಪ್ರೊ.ಜಿ.ಜಿ.ನಾರ್ಕೆಯವರು ಭೂವಿಜ್ಞಾನ ಮತ್ತು ರಾಸಾಯನಿಕ ಶಾಸ್ತ್ರಜ್ಞರಾಗಿದ್ದರು. ಸಾಯಿಬಾಬಾರವರ ನೇರ ಸಂಪರ್ಕ ಪಡೆದ ಮತ್ತು ಸಾಯಿಬಾಬಾ ಸಂಸ್ಥಾನಕ್ಕೆ ಒಳ್ಳೆಯ ಸೇವೆ ಸಲ್ಲಿಸಿದ ಪ್ರಸಿದ್ದ ಸಾಯಿಭಕ್ತರಲ್ಲಿ ಒಬ್ಬರಾಗಿದ್ದರು. ಇವರು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟೀ ಆಗಿ ಬಹಳ ದಿನ ಸೇವೆ ಸಲ್ಲಿಸಿದರು. ಅತ್ಯಂತ ವಿದ್ಯಾವಂತರಾದ ಇವರು ಸಾಯಿ ಭಕ್ತರಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಇವರು ಸಾಯಿಬಾಬಾರವರಿಂದ ಅನೇಕ ಅನುಕೂಲತೆಗಳನ್ನು ಪಡೆದರು. ಇವರು ಸಾಯಿಬಾಬಾರವರ ಬಳಿ ಬರಲು ಕಾರಣ ಇವರ ಪತ್ನಿ, ಮಾವ ಹಾಗೂ ಇವರ ತಾಯಿ. ಇವರ ಮಾವನವರು ನಾಗಪುರದ ಲಕ್ಷಾಧೀಶರಾದ ಶ್ರೀಯುತ.ಬೂಟಿಯವರು.

ನಾರ್ಕೆಯವರು ಧಾರ್ಮಿಕ ಗ್ರಂಥಗಳನ್ನು ಪಾರಾಯಣ ಮಾಡಿದ್ದರು. ಇವರು ಜ್ಞಾನೇಶ್ವರಿಯನ್ನು ಓದಿದ್ದರು. 1909 ರಲ್ಲಿ ಭಾರತ ಸರ್ಕಾರದಿಂದ ಶಿಫಾರಸು ಮಾಡಲ್ಪಟ್ಟು ಲಂಡನ್ ಗೆ ಹೋಗಿ ವಿದ್ಯಾಭ್ಯಾಸ ಮುಗಿಸಿ 1912 ರಲ್ಲಿ ಮರಳಿ ಭಾರತಕ್ಕೆ ಬಂದರು. ಇವರ ಪತ್ನಿ, ಮಾವ ಮತ್ತು ಇವರ ತಾಯಿಯವರು ಸಾಯಿಬಾಬಾರವರನ್ನು ನೋಡಲು ಶಿರಡಿಗೆ ಹೋಗಲು ಬಲವಂತ ಮಾಡಲಾಗಿ, ನಾರ್ಕೆಯವರು ಸಾಯಿಬಾಬಾರವರು ಇಚ್ಛೆ ಪಟ್ಟರೆ ಮಾತ್ರ ತಾನು ಹೋಗುವೆನೆಂದು ಉತ್ತರ ಬರೆದು ಹಾಕಿದರು. ಆಗ ಇವರ ಮಾವನಾದ ಬೂಟಿಯವರು ಸಾಯಿಬಾಬಾರವರನ್ನು ವಿಚಾರಿಸಿ ಅವರ ಅಪ್ಪಣೆ ಪಡೆದು, ಈ ವಿಷಯವನ್ನು ನಾರ್ಕೆಯವರಿಗೆ ತಿಳಿಸಿ ಸಾಯಿಯವರು ನಿನ್ನನ್ನು ಕಾಣಲು ಬಯಸುತ್ತಾರೆ ಎಂದು ತಿಳಿಸಿದರು. ಕಡೆಗೆ 1913 ರ  ಏಪ್ರಿಲ್ ತಿಂಗಳಿನಲ್ಲಿ ಇವರು ಮೊದಲ ಬಾರಿಗೆ ಸಾಯಿಬಾಬಾರವರನ್ನು ಕಾಣಲು ಶಿರಡಿಗೆ ತೆರಳಿದರು. ಶ್ಯಾಮರವರು ಇವರನ್ನು ಸಾಯಿಯವರಿಗೆ ಪರಿಚಯ ಮಾಡಿಸಿದರು. ಆಗ ಸಾಯಿಬಾಬಾರವರು ಶ್ಯಾಮನಿಗೆ "ಇವನನ್ನು ಕಳೆದ 30 ಜನ್ಮಗಳಿಂದ ನೋಡುತ್ತಿದ್ದೇನೆ" ಎಂದರು. ಈ ಮಾತನ್ನು ಕೇಳಿ ನಾರ್ಕೆಯವರಿಗೆ ಆಶ್ಚರ್ಯವಾಯಿತು. ಸಾಯಿಬಾಬಾರವರ ತೀಕ್ಷ್ಣವಾದ ಕಣ್ಣುಗಳನ್ನು ನಾರ್ಕೆಯವರು ನೋಡಿದರು. ಸಾಯಿಯವರ ನೋಟ ನಾರ್ಕೆಯವರ ಮೇಲೆಯೇ ಇತ್ತು. ಸಾಯಿಯವರ ಮಹಾಸಮಾಧಿಯಾದ ಅನೇಕ ವರ್ಷಗಳ ನಂತರ ಅಂದರೆ 1836 ರಲ್ಲಿ ಈ ಮಾತನ್ನು ನಾರ್ಕೆಯವರು ಧೃಡಪಡಿಸಿದ್ದಾರೆ. "ಸಾಯಿಯವರು ಚಾವಡಿಯಲ್ಲಿ ಕುಳಿತು ತೀಕ್ಷವಾದ ಕಣ್ಣುಗಳಿಂದ ನೋಡುತ್ತಿದ್ದುದು ನನಗೆ ಅಚ್ಚಳಿಯದೆ ಮನದಲ್ಲಿ ಉಳಿದಿದೆ" ಎಂದು ನಾರ್ಕೆಯವರು ಹೇಳಿದ್ದಾರೆ. ನಾರ್ಕೆಯವರು ಭಕ್ತರನ್ನು ಕ್ರೋಡಿಕರಿಸಿ ಸಾಯಿಬಾಬಾರವರ ಸೇವೆಯನ್ನು ಆದಷ್ಟು ಮಾಡಿದುದೇ ಆಲ್ಲದೇ ಆರತಿ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಒಂದು ದಿನ ಆರತಿಯ ಸಮಯದಲ್ಲಿ ಸಾಯಿಬಬಾರವರು ಬಹಳ ಕೋಪಗೊಂಡು ಅಲ್ಲಿ ನೆರೆದಿದ್ದ ಎಲ್ಲರನ್ನು ಬಯ್ಯುತ್ತಾ ಗದರಿಸುತ್ತಿದ್ದರು. ಇದನ್ನು ನೋಡಿ ನಾರ್ಕೆಯವರಿಗೆ "ಸಾಯಿಬಾಬಾ ಹುಚ್ಚರೇ?" ಎಂಬ ಅನುಮಾನ ಮನದಲ್ಲಿ ಸುಳಿಯಿತು. ಆರತಿಯಾದ ನಂತರ ನಾರ್ಕೆಯವರು ಮನೆಗೆ ತೆರಳಿ ಪುನಃ ಮಸೀದಿಗೆ ಬಂದು ಸಾಯಿಬಾಬಾರವರ ಕಾಲುಗಳನ್ನು ನೀವುತ್ತಾ ಕುಳಿತರು. ಸಾಯಿಯವರು ಆಗ ತಮ್ಮ ತಲೆಯನ್ನು ಅಲ್ಲಾಡಿಸುತ್ತಾ "ಅರೆ ನಾರ್ಕೆ, ನಾನು ಹುಚ್ಚನಲ್ಲಾ" ಎಂದರು. ನಾರ್ಕೆಯವರಿಗೆ ಆಗ ಸಾಯಿಯವರ ಅಂತರ್ಯಾಮಿತ್ವದ ಅರಿವಾಯಿತು. ನಾರ್ಕೆಯವರು "ಬಾಬಾರವರಿಂದ ಏನನ್ನು ಮುಚ್ಚಿಡಲಾಗುವುದಿಲ್ಲ, ಎಲ್ಲಾ ವಿಷಯ ಅವರಿಗೆ ತಿಳಿಯುತ್ತದೆ. ಅವರು ಅಂತರ್ಯಾಮಿ" ಎಂದು ಹೇಳಿದ್ದಾರೆ. ಸಾಯಿಯವರ ಒಡನಾಟದಿಂದ ನಾರ್ಕೆಯವರು "ಸಾಯಿಬಾಬಾರವರು ಭೂತ, ವರ್ತಮಾನ ಹಾಗೂ ಭವಿಷ್ಯದ ಎಲ್ಲಾ ವಿಷಯಗಳನ್ನು ಬಲ್ಲವರಾಗಿದ್ದಾರೆ" ಎಂದು ಮನಗಂಡರು.

ಸಾಯಿಬಾಬಾರವರು 1913 ರಲ್ಲಿ ಒಂದು ದಿನ ಮಾತನಾಡುತ್ತಾ ನಾರ್ಕೆಯವರ ಮಾವ ಬೂಟಿಯವರು ಕಲ್ಲಿನಿಂದ ವಾಡಾ ನಿರ್ಮಾಣ ಮಾಡುತ್ತಾರೆ ಮತ್ತು ನಾರ್ಕೆಯವರು ಅದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇದಾದ ಸುಮಾರು 3 ವರ್ಷಗಳ ನಂತರ ಅಂದರೆ 1915 - 1916 ರಲ್ಲಿ ಬೂಟಿಯವರು ಕಲ್ಲಿನ ಕಟ್ಟಡದ ನಿರ್ಮಾಣ ಕಾರ್ಯ ಆರಂಭಿಸಿದರು. 1920 ರಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಪ್ರಾರಂಭವಾಗಿ ನಾರ್ಕೆಯವರು ಅದರ ಟ್ರಸ್ಟಿ ಆಗಿ ಸಮಾಧಿಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.

ಇನ್ನೊಂದು ಮುಖ್ಯ ಸಂಗತಿಯೆಂದರೆ, ನಾರ್ಕೆಯವರ ತಾಯಿ ಅವರ ಮಗನ ಕೆಲಸದ ಬಗ್ಗೆ ಬಹಳ ಚಿಂತೆಯಿಂದ ಇದ್ದರು. ನಾರ್ಕೆಯವರು ಪತ್ರಿಕೆಗಳಲ್ಲಿ ಬರುತ್ತಿದ್ದ ಜಾಹೀರಾತುಗಳಿಗೆ ಅರ್ಜಿಯನ್ನು ಹಾಕುತ್ತ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಇದ್ದರು. ಅವರು ಬರ್ಮಾ ಮತ್ತು ಬಾಲಾಘಾಟ್ ನಲ್ಲಿ ಕೆಲಸ ಮಾಡಿದರು. ಒಮ್ಮೆ ಅವರು ಕೆಲಸ ಎಲ್ಲೂ ಸಿಗದೇ 13  ತಿಂಗಳುಗಳ ಕಾಲ ಶಿರಡಿಯಲ್ಲಿ ತಂಗಿದ್ದರು. ಆಗ ಅವರಿಗೆ ಬೇಜಾರು ಬಂದು ವಕೀಲಿ ವೃತ್ತಿಯನ್ನು ಆರಂಭಿಸಲು ಯೋಚನೆ ಮಾಡಿದರು. 1914 ರಲ್ಲಿ ಸಾಯಿಬಾಬಾರವರನ್ನು ಭೇಟಿಯಾದಾಗ ಅವರು ಫಕೀರರಿಗೆಲ್ಲ ಕಫ್ನಿ ಕೊಡುತ್ತಿದ್ದುದನ್ನು ನೋಡಿ ತಮಗೂ ಕಫ್ನಿ ನೀಡುವರೆಂದು ಭಾವಿಸಿದರು. ಆದರೆ, ಸಾಯಿಬಾಬಾರವರು ಇವರಿಗೆ ಮಾತ್ರ ಕೊಡಲಿಲ್ಲ. ಈ ಘಟನೆಯಾದ ಸ್ವಲ್ಪ ಸಮಯದ ಬಳಿಕ ಬಾಬಾರವರು ನಾರ್ಕೆಯವರನ್ನು ಕರೆದು ಅವರ ತಲೆಯ ಮೇಲೆ ಕೈ ಸವರಿ ತಟ್ಟಿ "ನಾನು ನಿನಗೆ ಕಫ್ನಿ ಕೊಡಲಿಲ್ಲ ಎಂದು ನನ್ನನ್ನು ನಿಂದಿಸಬೇಡ. ಆ ದೇವರು ನಿನಗೆ ಅದನ್ನು ಕೊಡಲು ಒಪ್ಪಲಿಲ್ಲ." ಎಂದರು. ಆಗ ನಾರ್ಕೆಯವರ ತಾಯಿಯವರು ಇವನು ಮುಂದೆ ಏನಾಗುವನೆಂದು ತಿಳಿಸಬೇಕೆಂದು ಬಾಬಾರವರನ್ನು ಕೇಳಲು, ಸಾಯಿಯವರು "ನಾನು ಇವನನ್ನು ಪುಣೆಯಲ್ಲಿರುವ ಹಾಗೆ ಮಾಡುತ್ತೇನೆ" ಎಂದರು. ಪ್ರತಿ ಬಾರಿ ಕೆಲಸದ ವಿಷಯವನ್ನು ಕೇಳಿದಾಗ ಬಾಬಾರವರು ತಮ್ಮ ಮಾತಿನಲ್ಲಿ ಪುಣೆ ಪದವನ್ನು ಸೇರಿಸುತ್ತಿದ್ದರು. ಬಹಳ ದಿನಗಳವರೆಗೆ ಈ ರೀತಿ ನಡೆಯಿತು. 1917 ರಲ್ಲಿ ಪುಣೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭೂವಿಜ್ಞಾನ ಶಾಸ್ತ್ರಜ್ಞ ಕೆಲಸ ಖಾಲಿ ಇದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೋಡಿದ ನಾರ್ಕೆಯವರು ಬಾಬಾರವರಲ್ಲಿಗೆ ಹೋಗಿ ಅದಕ್ಕೆ ಅರ್ಜಿ ಸಲ್ಲಿಸಲೇ ಎಂದು ಕೇಳಲು ಬಾಬಾರವರು ತಮ್ಮ ಒಪ್ಪಿಗೆ ಸೂಚಿಸಿದರು. ನಾರ್ಕೆಯವರು ಪುಣೆಗೆ ತೆರಳಿ ಅಲ್ಲಿ ಸಂಬಂಧಪಟ್ಟವರನ್ನು ನೋಡಿದರು. ಯಾವ ಶಿಫಾರಸು ಕೂಡ ಇರಲಿಲ್ಲ. ಬಹಳ ಜನ ಅಭ್ಯರ್ಥಿಗಳು ಇದ್ದಿದ್ದರಿಂದ ಕೆಲಸ ಸಿಗುವುದು ಕಷ್ಟಕರವಾಗಿದ್ದಿತು. ಅದೇ ಸಮಯದಲ್ಲಿ ಬಾಬಾರವರು ಮಸೀದಿಯಲ್ಲಿದ್ದವರನ್ನು "ಈ ನಾರ್ಕೆ ಎಲ್ಲಿಗೆ ಹೋದ" ಎಂದು ಕೇಳಲು ಅಲ್ಲಿದ್ದವರು ಅವನು ಪುಣೆಗೆ ಕೆಲಸ ಹುಡುಕಿಕೊಂಡು ಹೋಗಿದ್ದಾನೆ ಎಂದು ತಿಳಿಸಿದರು. ಕೂಡಲೇ ಬಾಬಾರವರು "ನಾರ್ಕೆಯವರಿಗೆ ಮಕ್ಕಳು ಇವೆಯೇ ಎಂದು ಸಾಯಿಯವರು ಕೇಳಿದರು. ಅಲ್ಲಿದ್ದವರು ಇಲ್ಲವೆಂದು, ಮಕ್ಕಳು ಹುಟ್ಟಿ ಸತ್ತು ಹೋದವೆಂದು ಹೇಳಿದರು". "ಅಲ್ಲಾ, ಅವನನ್ನು ಅಶೀರ್ವದಿಸುತ್ತಾನೆ" ಎಂದರು. 1918 ರಲ್ಲಿ ನಾರ್ಕೆಯವರಿಗೆ ಪುಣೆಯಲ್ಲಿ ಭೂವಿಜ್ಞಾನ ಮತ್ತು ಗಣಿಯ ಪ್ರಾಧ್ಯಾಪಕರ ಕೆಲಸ ಸಿಕ್ಕಿತು. ಅನಂತರ 4 ಮಕ್ಕಳು ಹುಟ್ಟಿದರು. ಹೀಗೆ ಸಾಯಿಯವರ ಆಶೀರ್ವಾದ ಫಲಿಸಿತು ಮತ್ತು ನಾರ್ಕೆಯವರಿಗೆ ಸಾಯಿಬಾಬಾರವರ ಸಹಾಯ ದೊರೆಯಿತು.

ಸಾಯಿಬಾಬಾರವರು ನಾರ್ಕೆಯವರನ್ನು ಹೋಶಿಯಾರ್ ಅಥವಾ ಜಾಣ ಎಂದು ಆಗಾಗ್ಗೆ ಹೊಗಳುತ್ತಿದ್ದರು. ಸಾಯಿಯವರು ಎಂದಿಗೂ ಅಗತ್ಯವಾದ ವಾದ ಅಥವಾ ವಿಚಾರಣೆಯನ್ನು ಬೇಡವೆನ್ನುತ್ತಿರಲಿಲ್ಲ. ಸಾಯಿಯವರು ಹೇಳಿದ ಪ್ರತಿಯೊಂದು ವಿಷಯಗಳು ಅರ್ಥಗರ್ಭಿತವಾಗಿರುತ್ತಿದ್ದವು ಮತ್ತು ಜನ ಸಾಮಾನ್ಯರೂ ಕೂಡ ಅರ್ಥ ಮಾಡಿಕೊಳ್ಳುತ್ತಿದ್ದರು ಎಂದು ನಾರ್ಕೆಯವರು ಹೇಳಿದ್ದಾರೆ.

ನಾರ್ಕೆಯವರು ಸಾಯಿಬಾಬಾರವರು ಈ ಪ್ರಪಂಚದಲ್ಲಿ ಅಷ್ಟೇ ಆಲ್ಲದೇ ಬೇರೆ ಪ್ರಪಂಚದಲ್ಲೂ ಕೂಡ ಕಾರ್ಯ ನಿರ್ವಹಿಸುತ್ತಿದರು ಎಂದು ಹೇಳಿದ್ದಾರೆ. ಸಾಯಿಯವರು ಆಗಾಗ್ಗೆ ಇತರ ಲೋಕದ ದೃಶ್ಯಗಳನ್ನು ವಿವರಿಸುತ್ತಿದರು ಎಂದು ಹೇಳಿದ್ದಾರೆ. ಉದಾಹರಣೆಗೆ ಒಮ್ಮೆ ಒಬ್ಬ ಮಾರವಾಡಿಯ ಮಗನು ಸತ್ತಾಗ ಅವನ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದಾಗ ಬಾಬಾರವರು ಹೇಳುತ್ತಿದ್ದುದನ್ನು ನಾರ್ಕೆಯವರು ಕೇಳಿಸಿಕೊಂಡರು. ಬಾಬಾರವರು "ಅವನು ಈಗ ನದಿಯ ಹತ್ತಿರ ಇರಬಹುದು. ಇಲ್ಲವೇ ನದಿಯನ್ನು ದಾಟುತ್ತಿರಬಹುದು" ಎಂದು ಹೇಳಿದ್ದನ್ನು ಕೇಳಿಸಿಕೊಂಡ ನಾರ್ಕೆಯವರು ಆ ನದಿಯನ್ನು ವೈತರಿಣಿ ನದಿಗೆ ಹೋಲಿಸಿಕೊಂಡು ಮೃತರ ಆತ್ಮಗಳು ಇದನ್ನು ದಾಟುವ ಬಗ್ಗೆ ಸಾಯಿಯವರು ಹೇಳಿದುದು ಎಂದು ಅರ್ಥೈಸಿದ್ದಾರೆ.

ನಾರ್ಕೆಯವರು ಸಾಯಿಯವರಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದರು. ಬಾಬಾ ಇವರಿಗೆ ಹಿಂದಿನ ನಾಲ್ಕು ಜನ್ಮದ ವಿಷಯಗಳನ್ನು ತಿಳಿಸಿದರು. ಇದನ್ನು ಬಾಬಾ ಇತರರ ಉಪಸ್ಥಿತಿಯಲ್ಲಿ ಹೇಳುತ್ತಿದ್ದರು. ಆದರೆ ಇದು ಸಂಬಂಧಪಟ್ಟವರಿಗೆ ಮಾತ್ರವೇ ಗೊತ್ತಾಗುತ್ತಿತ್ತೆ ವಿನಹ ಇತರರಿಗೆ ತಿಳಿಯುತ್ತಿರಲಿಲ್ಲ.

ನಾರ್ಕೆಯವರು ಯೋಗ ವಾಸಿಷ್ಠವನ್ನು ಪಾರಾಯಣ ಮಾಡುತ್ತಿದ್ದರು. ಆಗ ಬಾಬಾರವರು ಒಮ್ಮೆ ಇವರಿಂದ 15 ರುಪಾಯಿಗಳ ದಕ್ಷಿಣೆಯನ್ನು ಕೇಳಿದರು. ಆಗ ನಾರ್ಕೆಯವರು "ಬಾಬಾ, ನನ್ನಲ್ಲಿ ಅಷ್ಟು ಹಣ ಇಲ್ಲವೆಂದು ನಿಮಗೆ ತಿಳಿದಿದೆ. ಆದರೂ ನನ್ನನ್ನೇಕೆ ದಕ್ಷಿಣೆ ಕೇಳುತ್ತಿದ್ದೀರಿ" ಎಂದರು. ಆಗ ಸಾಯಿಬಾಬಾರವರು "ಅಹುದು, ಅದು ನನಗೆ ತಿಳಿದಿದೆ. ಆದರೆ ನೀನು ಈಗ ಶ್ರೇಷ್ಠವಾದ ಗ್ರಂಥವನ್ನು ಓದುತ್ತಿರುವೆ. ಅದರಿಂದ ನನಗೆ 15 ರುಪಾಯಿಗಳ ದಕ್ಷಿಣೆ ಕೊಡು" ಎಂದರು. ನಾರ್ಕೆಯವರಿಗೆ ಸಾಯಿಬಾಬಾ ಅಂತರ್ಯಾಮಿ ಎಂದು ತಿಳಿದಿತ್ತು. ಆದುದರಿಂದ ಸಾಯಿಯವರು ಹೇಳಿದುದು ಯೋಗವಾಸಿಷ್ಠ ದಲ್ಲಿ ಬರುವ ಮನುಷ್ಯನ ವ್ಯಕ್ತಿತ್ವದಲ್ಲಿನ 15 ಭೂತಗಳನ್ನು ಎಂದು ವಿಶ್ಲೇಷಿಸಿದರು ಮತ್ತು ಅದರ ಅರ್ಥ ತಾವು ಸಂಪೂರ್ಣವಾಗಿ ಸಾಯಿಬಾಬಾರವರಲ್ಲಿ ಲಯವಾಗಬೇಕೆಂದು ಬಾಬಾ ಇಚ್ಚಿಸುತ್ತಿದ್ದಾರೆ ಎಂದು ಅರ್ಥೈಸಿದರು.

1916 ರಲ್ಲಿ ಶಿರಡಿಯಲ್ಲಿ ಪ್ಲೇಗ್ ರೋಗ ಬಂದಾಗ ಸಾಮಾನ್ಯವಾದ ಹಲ್ವ ಮುಂತಾದ ಸಿಹಿ ತಿಂಡಿಗಳನ್ನು ನೈವೇದ್ಯಕ್ಕೆ ದ್ವಾರಕಾಮಾಯಿಗೆ ಯಾರೂ ತರುತ್ತಿರಲಿಲ್ಲ. ಆಗ ಒಮ್ಮೆ ಬಾಬಾರವರು ನಾರ್ಕೆಯವರನ್ನು ಸಿಹಿ ತಿಂಡಿ ಮಾರುವ ಅಂಗಡಿಗೆ ಹೋಗಿ ಹಲ್ವ ತೆಗೆದುಕೊಂಡು ಬರುವಂತೆ ಆಜ್ಞಾಪಿಸಿದರು. ನಾರ್ಕೆಯವರು ಸಿಹಿ ತಿಂಡಿಯ ಅಂಗಡಿಗೆ ಹೋಗಿ ಮಾಲೀಕನಿಗೆ ಬಾಬಾರವರ ಆಜ್ಞೆಯನ್ನು ತಿಳಿಸಿದರು. ಆಗ ಅವಳು ತನ್ನ ಪತಿಯ ಮೃತ ದೇಹವನ್ನು ತೋರಿಸಿ ನಾರ್ಕೆಯವರಿಗೆ ಕಪಾಟಿನಲ್ಲಿರುವ ಸಿಹಿ ತಿಂಡಿಗಳನ್ನು ತೆಗೆದುಕೊಳ್ಳಲು ಹೇಳಿದಳು. ಅವರು ತೆಗೆದುಕೊಂಡರು. ಆದರೆ ಅದನ್ನು ಪ್ರಸಾದ ಎಂದು ಕೊಟ್ಟ ಎಲ್ಲರಿಗೂ ಪ್ಲೇಗ್ ತಗಲುವುದೇನೋ ಎಂದು ಭಯಭೀತರಾದರು. ಆಗ ಬಾಬಾರವರು ನೀನು ಶಿರಡಿಯ ಹೊರಗಡೆ ಇದ್ದರೆ ಬದುಕುವೆ ಎಂದು ತಿಳಿದಿರುವೆಯಾ ಅಥವಾ ಶಿರದಿಯಲ್ಲಿದ್ದರೆ ಸಾಯುವೆ ಎಂದು ತಿಳಿದಿರುವೆಯಾ, ಅದು ಹಾಗೆ ಆಗುವುದಿಲ್ಲ. ಯಾರು ಯಾವಾಗ ಸಾಯಬೇಕೋ ಆಗ ಅವರು ಸಾಯುವರು. ಯಾರು ಉಳಿಯಬೇಕೋ ಅವರು ಖಂಡಿತ ಉಳಿಯುವರು ಎಂದು ಆ ಹಲ್ವವನ್ನು ಪ್ರಸಾದ ಎಂದು ಎಲ್ಲರಿಗೂ ಕೊಟ್ಟರು. ಯಾರಿಗೂ ಪ್ಲೇಗ್ ಅಂಟಿಕೊಳ್ಳಲಿಲ್ಲ. ಆಗ ನಾರ್ಕೆಯವರಿಗೆ ಸಾಯಿಬಾಬಾರವರ ಅಪಾರ ಜ್ಞಾನದ ದರ್ಶನವಾಯಿತು.

ಇಷ್ಟೆಲ್ಲಾ ನಿಕಟ ಸಂಪರ್ಕವನ್ನು ನಾರ್ಕೆಯವರು ಹೊಂದಿದ್ದರೂ ಕೂಡ ಅವರು ಸಾಯಿಯವರಲ್ಲಿ ಆಳವಾದ ವಿಶ್ವಾಸ ಮತ್ತು ಗಾಢವಾದ ಪ್ರೀತಿಯನ್ನು ಹೊಂದಿರಲಿಲ್ಲ. ಆದುದರಿಂದ ದೀಕ್ಷಿತ್, ಪುರಂಧರೆ ಮತ್ತು ಇತರ ಅಂಕಿತ ಭಕ್ತರಂತೆ ನಾರ್ಕೆಯವರು ಇರಲಿಲ್ಲ.

No comments:

Post a Comment