Sunday, October 26, 2014

ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 ಪ್ರಮಾಣಪತ್ರದ ನೀಡಿಕೆ – ಆಧಾರ: ಸಾಯಿಅಮೃತಧಾರಾ. ಕಾಂ

ಇದೇ ತಿಂಗಳ  24ನೇ ಅಕ್ಟೋಬರ್ 2014, ಶುಕ್ರವಾರ ದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು  ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿ ಪ್ರಸಾದಾಲಯದಲ್ಲಿ  ISO 22000-2005 (Food Safety Standard)  ಪ್ರಮಾಣಪತ್ರವನ್ನು ನೀಡುವ ಸಲುವಾಗಿ ಪರಿಶೋಧನೆಯನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ಅಂತಿಮ ತಪಾಸಣೆಯ ನಂತರ ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 (Food Safety Standard)  ಪ್ರಮಾಣಪತ್ರವನ್ನು 15ನೇ ಸೆಪ್ಟೆಂಬರ್ 2014 ರಿಂದ 29ನೇ ಸೆಪ್ಟೆಂಬರ್ 2016 ರವರೆಗೂ ಅನ್ವಯವಾಗುವಂತೆ ನೀಡಲಾಗಿದೆ ಎಂದು ತಿಳಿಸಿದರು.

ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 (Food Safety Standard)  ಪ್ರಮಾಣಪತ್ರವನ್ನು ಇದೇ ತಿಂಗಳ 18ನೇ ಅಕ್ಟೋಬರ್ 2014 ರಂದು ನಡೆದ ಕಾರ್ಯಕ್ರಮದಲ್ಲಿ ನೀಡಲಾಗಿತ್ತು. ಆ ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ISO ಪ್ರಮಾಣಪತ್ರದ ಸಲಹೆಗಾರರೂ ಹಾಗೂ ಬೆಂಗಳೂರಿನ ಸಾಯಿ ಭಕ್ತರೂ ಆದ ಶ್ರೀ.ಕೇಶವ ಮೂರ್ತಿ, ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಡಿ.ಟಿ.ಉಗಳೆ, ಪ್ರಸಾದಾಲಯದ ಹಂಗಾಮಿ ಮೇಲ್ವಿಚಾರಕರಾದ ಶ್ರೀ.ವಿಜಯ ಸಿನ್ನಾರ್, ಲಾಡು ಪ್ರಸಾದ ತಯಾರಿಕಾ ಘಟಕದ ಹಂಗಾಮಿ  ಅಧ್ಯಕ್ಷರಾದ ಶ್ರೀ.ಸಂಜಯ ಧನೇಶ್ವರ್ ಹಾಗೂ ಇನ್ನು ಹಲವಾರು ಗಣ್ಯರು ಭಾಗವಹಿಸಿದ್ದರು. ಪ್ರಸಾದಾಲಯಕ್ಕೆ ಬರುವ ಎಲ್ಲಾ ಸಾಯಿ ಭಕ್ತರು ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ಕಾಯದೇ, ರುಚಿಯಾದ ಹಾಗೂ ಪರಿಶುದ್ಧವಾದ ಪ್ರಸಾದ ಭೋಜನವನ್ನು ಪರಿಶುದ್ಧವಾದ ವಾತವರಣದಲ್ಲಿ ಸ್ವೀಕರಿಸುವಂತೆ ಮಾಡುವ ಬಯಕೆ ಶ್ರೀ ಸಾಯಿಬಾಬಾ ಸಂಸ್ಥಾನದ್ದಾಗಿತ್ತು. ಈ  ISO 22000-2005 (Food Safety Standard)  ಪ್ರಮಾಣಪತ್ರದ ನವೀಕರಣವಾಗಿರುವುದು ಶ್ರೀ ಸಾಯಿಬಾಬಾ ಸಂಸ್ಥಾನದ ಯಶಸ್ಸೆಂಬ ಕಿರೀಟಕ್ಕೆ ಸಿಕ್ಕಿರುವ ಮತ್ತೊಂದು ಹೆಮ್ಮೆಯ ಗರಿಯೆಂದೇ ಹೇಳಬಹುದು.  ಇದರಿಂದ ಶ್ರೀ ಸಾಯಿಬಾಬಾ ಸಂಸ್ಥಾನದ ಖ್ಯಾತಿ ಪ್ರಪಂಚದಾದ್ಯಂತ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಾಯಿಭಕ್ತರ ಅನುಕೂಲಕ್ಕಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ರೂಪಿಸಿದ್ದು ಬೃಹತ್  ಶ್ರೀ ಸಾಯಿ ಪ್ರಸಾದಾಲಯದ ಪ್ರಾರಂಭವು ಅಂತಹ ಯೋಜನೆಗಳಲ್ಲಿ ಒಂದಾಗಿರುತ್ತದೆ. ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಸ್ವತಃ ತಮ್ಮ ಕೈಯಾರೆ ಅಡುಗೆಯನ್ನು ಮಾಡಿ ತಮ್ಮ ಬಳಿಗೆ ಬರುತ್ತಿದ್ದ ಭಕ್ತರಿಗೆ ಬಡಿಸುತ್ತಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಪ್ರಪ್ರಥಮ ಬಾರಿಗೆ 1ನೇ ಜನವರಿ 1973 ರಂದು ದೀಕ್ಷಿತವಾಡದ ಪಕ್ಕದಲ್ಲಿದ್ದ ಸ್ಥಳದಲ್ಲಿ ಸಾಯಿ ಭಕ್ತರಿಗೆ ಪ್ರಸಾದ ಭೋಜನವನ್ನು ನೀಡುವ ವ್ಯವಸ್ಥೆಯನ್ನು ಮಾಡಿತ್ತು.  ಅಂದಿನ ದಿನಗಳಲ್ಲಿ ಪ್ರತಿನಿತ್ಯ ಸರಿ ಸುಮಾರು 500 ರಿಂದ 2500 ಸಾಯಿ ಭಕ್ತರು  ಪ್ರಸಾದ ಭೋಜನವನ್ನು ಸವಿಯುತ್ತಿದ್ದರು.  ಭಕ್ತರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುವ ಸಲುವಾಗಿ ಹಾಗೂ ದಿನೇ ದಿನೇ ಹೆಚ್ಚುತ್ತಿದ್ದ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು  25ನೇ ಜನವರಿ 1980 ರಿಂದ ಅನ್ವಯವಾಗುವಂತೆ  ಪ್ರಸಾದಾಲಯವನ್ನು ಅಲ್ಲಿಂದ ಗೇಟ್ ಸಂಖ್ಯೆ:1 ರ ಪಕ್ಕದಲ್ಲಿರುವ ಸಾಯಿ ಪ್ರಸಾದ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಈ ಸ್ಥಳದಲ್ಲಿ ಪ್ರತಿನಿತ್ಯ ಸರಿ ಸುಮಾರು 22,000 ಭಕ್ತರು ಪ್ರಸಾದ ಭೋಜನವನ್ನು ಸವಿಯುತ್ತಿದ್ದರು. ನಂತರ ಭವಿಷ್ಯದಲ್ಲಿ ಬೃಹತ್ ಆಗಿ ಬೆಳೆಯಲಿದ್ದ ಶಿರಡಿ ಪಟ್ಟಣವನ್ನು ಗಮನದಲ್ಲಿಟ್ಟುಕೊಂಡು ಸಂಸ್ಥಾನದ ಆಡಳಿತ ಮಂಡಳಿಯು  ಒಂದು ಬೃಹತ್ ಪ್ರಸಾದಾಲಯ ಕಟ್ಟಡವನ್ನು ದಾಖಲೆ ಸಮಯದಲ್ಲಿ ನಿರ್ಮಿಸಿತು. ಈ ಹೊಸ ಶ್ರೀ ಸಾಯಿ ಪ್ರಸಾದಾಲಯವನ್ನು 8ನೇ ಜನವರಿ 2009 ರಂದು ಪ್ರಾರಂಭಿಸಲಾಗಿದ್ದು ಇಲ್ಲಿ ಒಂದೇ ಬಾರಿಗೆ ಸುಮಾರು 5000 ಭಕ್ತರು ಕುಳಿತು ಊಟವನ್ನು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ಇಂದು ಏಷಿಯಾದ ಬೃಹತ್ ಪ್ರಸಾದಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಸಾಯಿ ಭಕ್ತರು ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ಕಾಯದೇ, ರುಚಿಯಾದ ಹಾಗೂ ಪರಿಶುದ್ಧವಾದ ಪ್ರಸಾದ ಭೋಜನವನ್ನು ಪರಿಶುದ್ಧವಾದ ವಾತವರಣದಲ್ಲಿ ಸ್ವೀಕರಿಸುತ್ತಿದ್ದಾರೆ. ಹಾಗಾಗಿ ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್  ಲಿಮಿಟೆಡ್ (TCL) ಸಂಸ್ಥೆಯು 30ನೇ  ಸೆಪ್ಟೆಂಬರ್ 2013 ರಂದು ISO-22000-2005 (Food Safety standard) ಪ್ರಮಾಣ ಪತ್ರವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಶ್ರೀ ಸಾಯಿ ಪ್ರಸಾದಾಲಯಕ್ಕೆ  ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ನೀಡಿತ್ತು. ಪ್ರತಿ ವರ್ಷ ಈ ಪ್ರಮಾಣ ಪತ್ರದ ನವೀಕರಣ ಮಾಡುವುದು ಕಡ್ಡಾಯವಾಗಿರುತ್ತದೆ. ಆದ ಕಾರಣ, ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್ ಲಿಮಿಟೆಡ್ (TCL) ಸಂಸ್ಥೆಯ ಪರಿಶೋಧಕರು ಶ್ರೀ ಸಾಯಿ ಪ್ರಸಾದಾಲಯಕ್ಕೆ ಭೇಟಿ ನೀಡಿ ಪರಿಶೋಧನೆ ನಡೆಸಿ ಏನಾದರೂ ನಿಯಮದ ಉಲ್ಲಂಘನೆಯಾಗಿದ್ದ ಪಕ್ಷದಲ್ಲಿ ಅದನ್ನು ಮೇಲಧಿಕಾರಿಗಳಿಗೆ ತಿಳಿಸಿ ಅದನ್ನು ಆ ಕೂಡಲೇ ಸರಿಪಡಿಸಿ ಮತ್ತೊಮ್ಮೆ ಪರಿಶೋಧನೆ ನಡೆಸಿದ ನಂತರ ಪ್ರಮಾಣ ಪತ್ರವನ್ನು ನವೀಕರಿಸಲಾಗುತ್ತದೆ. ಶ್ರೀ ಸಾಯಿ ಪ್ರಸಾದಾಲಯದ ಈ ನವೀಕರಣ ಕಾರ್ಯಕಾಗಿ  ಅಹಾರ ಸುರಕ್ಷತಾ ಸಲಹೆಗಾರರಾದ ಹೈದರಾಬಾದ್ ನ  ಶ್ರೀ.ದಿಲೀಪ್ ಕುಮಾರ್ ನಂದಿಕೊಂಡ, ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್ ಲಿಮಿಟೆಡ್ (TCL) ಸಂಸ್ಥೆಯ ಮುಖ್ಯ ಪರಿಶೋಧಕರಾದ ಶ್ರೀ. ಚಂದ್ರಶೇಖರ ರೆಡ್ದಿಯವರನ್ನು ವಿಶೇಷ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಈ ಇಬ್ಬರು ಮಹನೀಯರ ಮಾರ್ಗದರ್ಶನದಲ್ಲಿ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಸೂಕ್ತ ಬದಲಾವಣೆ ಹಾಗೂ ತಿದ್ದುಪಡಿಗಳನ್ನು ಮಾಡಲಾಯಿತು. ನಂತರ ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್  ಲಿಮಿಟೆಡ್ (TCL) ಸಂಸ್ಥೆಯು  ISO-22000-2005 (Food Safety Standard) ಪ್ರಮಾಣ ಪತ್ರವನ್ನು ನೀಡುವ ಸಲುವಾಗಿ ಪರಿಶೋಧನೆಯನ್ನು ಮಾಡಿತ್ತು. ಇದರ ಅಂಗವಾಗಿ ಇತ್ತೀಚೆಗಷ್ಟೇ  ಅಂತಿಮ ತಪಾಸಣೆಯನ್ನು ನಡೆಸಿದ ಸಂಸ್ಥೆಯು ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 (Food Safety Standard)  ಪ್ರಮಾಣಪತ್ರವನ್ನು 15ನೇ ಸೆಪ್ಟೆಂಬರ್ 2014 ರಿಂದ 29ನೇ ಸೆಪ್ಟೆಂಬರ್ 2016 ರವರೆಗೂ ಅನ್ವಯವಾಗುವಂತೆ ನೀಡಿರುತ್ತದೆ. ಈ ಪ್ರಮಾಣ ಪತ್ರದ ನವೀಕರಣವಾದ  ನಂತರದಲ್ಲಿ ಶ್ರೀ ಸಾಯಿ ಪ್ರಸಾದಾಲಯದಲ್ಲಿ  ಆಹಾರ ಸುರಕ್ಷತಾ ಕ್ರಮಗಳನ್ನು ವ್ಯವಸ್ಥಿತವಾಗಿ ಮಾಡಲಾಗಿರುತ್ತದೆ.  ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ ಕುಲಕರ್ಣಿ, ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ಕಲೆಕ್ಟರ್ ಆದ ಶ್ರೀ.ಅನಿಲ್ ಕಾವಡೆ, ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಸಂಸ್ಥಾನದ ಅಧಿಕಾರಿಗಳು ಹಾಗೂ ಶ್ರೀ ಸಾಯಿ ಪ್ರಸಾದಾಲಯದ ಆಡಳಿತಕ್ಕೆ ಸಂಬಂಧಿಸಿದ ಸಿಬ್ಬಂದಿ ವರ್ಗದವರ ಪ್ರಯತ್ನವನ್ನು ಶ್ಲಾಘಿಸಲಾಯಿತು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ ಅನ್ವೇಕರ್,ಬೆಂಗಳೂರು 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 

No comments:

Post a Comment