Tuesday, October 22, 2013

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿಬಾಬಾರವರ 95ನೇ ಪುಣ್ಯತಿಥಿ ಉತ್ಸವದ ಆಚರಣೆಯ ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ  12ನೇ ಅಕ್ಟೋಬರ್  2013, ಶನಿವಾರ ದಿಂದ 14ನೇ ಅಕ್ಟೋಬರ್  2013, ಸೋಮವಾರ ದವರೆಗೆ  ಶ್ರೀ ಸಾಯಿಬಾಬಾರವರ 95ನೇ ಪುಣ್ಯತಿಥಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು.


ಶ್ರೀ ಸಾಯಿಬಾಬಾರವರ 95ನೇ ಪುಣ್ಯತಿಥಿ ಉತ್ಸವವು  ಪವಿತ್ರ ಸಾಯಿ ಸಚ್ಚರಿತ್ರೆ ಗ್ರಂಥ, ಸಾಯಿಬಾಬಾರವರ ಭಾವಚಿತ್ರ ಹಾಗೂ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದರೊಂದಿಗೆ ಆರಂಭಗೊಂಡಿತು. 


ದ್ವಾರಕಾಮಾಯಿ ಮಂಡಳದವರು ಗೇಟ್ ಸಂಖ್ಯೆ 4 ರ ಬಳಿ 70 ಅಡಿ ಎತ್ತರದ ಸುಂದರ ಆಳೆತ್ತರದ ವಿಠಲನ ವಿಗ್ರಹವನ್ನು ನಿರ್ಮಾಣ ಮಾಡಿದ್ದುದು ಈ ವರ್ಷದ ವಿಶೇಷವಾಗಿತ್ತು. 


ಉತ್ಸವದ ಮೊದಲನೇ ದಿನವಾದ 12ನೇ ಅಕ್ಟೋಬರ್  2013, ಶನಿವಾರ ಪವಿತ್ರ ಸಾಯಿ ಸಚ್ಚರಿತ್ರೆ ಗ್ರಂಥ, ಸಾಯಿಬಾಬಾರವರ ಭಾವಚಿತ್ರ ಹಾಗೂ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದರೊಂದಿಗೆ ಬೆಳಗಿನ ಜಾವ 5.00 ಗಂಟೆಗೆ ಆರಂಭಗೊಂಡಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಾದ ಶ್ರೀ.ಅಜಯ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿ ಹಾಗೂ ತಹಸೀಲ್ದಾರ್ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಸಂಸ್ಥಾನದ ಅಧಿಕಾರಿಗಳು ಹಾಗೂ ಸಾವಿರಾರು ಶಿರಡಿ ಗ್ರಾಮಸ್ಥರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಅಖಂಡ ಸಾಯಿ ಸಚ್ಚರಿತ್ರೆಯ ಪಾರಾಯಣ ದ್ವಾರಕಾಮಾಯಿಯಲ್ಲಿ ಆರಂಭಗೊಂಡಿತು. ಶ್ರೀ.ಅಜಯ್ ಮೋರೆಯವರು 1ನೇ ಅಧ್ಯಾಯ, ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು 2ನೇ ಅಧ್ಯಾಯ, ಶ್ರೀ.ಅರುಣ್ ರಾಣೆ 3ನೇ ಅಧ್ಯಾಯ, ಶ್ರೀ.ಶಶಿಕಾಂತ್ ಗೋಂದ್ಕರ್ 4ನೇ ಅಧ್ಯಾಯ ಹಾಗೂ ಶ್ರೀಮತಿ.ಮನೀಷಾ ಶಿಂಧೆಯವರು 5ನೇ ಅಧ್ಯಾಯದ ಪಾರಾಯಣವನ್ನು ಮಾಡಿದರು. ಅಖಂಡ ಪಾರಾಯಣದ ಅಂಗವಾಗಿ ರಾತ್ರಿ ಪೂರ್ತಿ ದ್ವಾರಕಾಮಾಯಿಯನ್ನು ತೆರೆದಿಡಲಾಗಿತ್ತು. ಆ ದಿನದ ಅನ್ನದಾನದ  ಪ್ರಾಯೋಜಕತ್ವವನ್ನು ಅಮೇರಿಕಾದ ಸಾಯಿ ಭಕ್ತೆಯಾದ ಶ್ರೀಮತಿ.ಸೀತಾ ಹರಿಹರನ್ ರವರು ವಹಿಸಿಕೊಂಡಿದ್ದರು. 



ಶ್ರೀ.ಅಜಯ್ ಮೋರೆಯವರು ಸಮಾಧಿ ಮಂದಿರದಲ್ಲಿ ಸಾಯಿಬಾಬಾರವರ ಪಾದ ಪೂಜೆಯನ್ನು ಬೆಳಿಗ್ಗೆ 7.15 ನೆರವೇರಿಸಿದರು. ಮಧ್ಯಾನ್ಹ 12.30 ಕ್ಕೆ ಮಧ್ಯಾನ್ಹದ ಆರತಿಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ 4.00 ಗಂಟೆಗೆ ಶ್ರೀ.ಮನೋಹರ್ ಬುವಾ ಬಾಲಕೃಷ್ಣ ದೀಕ್ಷಿತ್ ರವರು ಸುಂದರವಾಗಿ ಕೀರ್ತನೆಗಳನ್ನು ಹಾಡಿದರು. ಸಂಜೆ 6.15 ಕ್ಕೆ ಧೂಪಾರತಿಯನ್ನು  ಹಮ್ಮಿಕೊಳ್ಳಲಾಗಿತ್ತು.  ಸಂಜೆ 7.30 ರಿಂದ ರಾತ್ರಿ 9.00 ಗಂಟೆಯವರೆಗೆ ಶಿರಡಿ ಬಳಿಯ ಶ್ರೀರಾಮಪುರದ ಶ್ರೀ. ಬಾಲಕೃಷ್ಣ ಓಜಾರವರು "ಸಾಯಿ ಮಿಲನ" ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ರಾತ್ರಿ 9.00 ರಿಂದ 10.00 ಗಂಟೆಯವರೆಗೆ ಖ್ಯಾತ ಒಡಸ್ಸಿ ನೃತ್ಯ ಕಲಾವಿದೆ ಡಾ.ಮಧುಮತಿ ದೀಕ್ಷಿತ್ ರವರು ಅಮೋಘವಾದ ಒಡಸ್ಸಿ ನೃತ್ಯವನ್ನು ನಡೆಸಿಕೊಟ್ಟರು. ನಂತರ ಇಬ್ಬರೂ ಕಲಾವಿದರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ರಾತ್ರಿ 9.15 ಕ್ಕೆ ಸಾಯಿಬಾಬಾರವರ ಪಲ್ಲಕ್ಕಿ ಉತ್ಸವ ಆರಂಭಗೊಂಡಿತು.

ಉತ್ಸವದ ಎರಡನೇ ಹಾಗೂ ಮುಖ್ಯ ದಿನವಾದ 13ನೇ ಅಕ್ಟೋಬರ್  2013, ಭಾನುವಾರ ಒಂದು ವಿಶೇಷ ಘಟನೆಗೆ ಸಾಕ್ಷಿಯಾಯಿತು. ಅದೇನೆಂದರೆ, ಶಿರಡಿ ಸಾಯಿಬಾಬಾ ಪ್ರಸಾದಾಲಯವು ISO-22000-2005 ಪ್ರಮಾಣ ಪತ್ರವನ್ನು ಪಡೆದುಕೊಂಡಿತು. ಈ ಪ್ರಮಾಣ ಪತ್ರವನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ. ಜಯಂತ್ ಕುಲಕರ್ಣಿಯವರು ಖುದ್ದಾಗಿ ಸ್ವೀಕರಿಸಿದರು. ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಾದ ಶ್ರೀ.ಅಜಯ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿ ಹಾಗೂ ತಹಸೀಲ್ದಾರ್ ಶ್ರೀ.ಅಪ್ಪಾ ಸಾಹೇಬ್ ಶಿಂಧೆ,ಸಂಸ್ಥಾನದ ಹಿಂದಿನ ಸದಸ್ಯರಾಗಿದ್ದ ಡಾ. ಯಶವಂತ್ ರಾವ್ ಮಾನೆ,  ಹೈದರಾಬಾದ್ ನ ಆಹಾರ ಸುರಕ್ಷತೆ ಸಲಹೆ ಗಾರರಾದ ಶ್ರೀ.ದಿಲೀಪ್ ಕುಮಾರ್ ನಂದಿಕೊಂಡ,  TCL ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್  ನ ಮುಖ್ಯ ಆಡಿಟರ್ ಆದ ಶ್ರೀ. ಚಂದ್ರಶೇಖರ ರೆಡ್ಡಿ, ಆಡಳಿತಾಧಿಕಾರಿಯಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಉತ್ತಮ ರಾವ್ ಗೋಂದ್ಕರ್, ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ದಿಲೀಪ್ ಉಗಳೆ ಹಾಗೂ ಮುಖ್ಯ ಅಧಿಕಾರಿ ಶ್ರೀ.ಹೇಮಂತ್ ಜಾಧವ್ ರವರುಗಳು ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 



ಎಲ್ಲಾ ಸಾಯಿ ಭಕ್ತರು ಯಾವುದೇ ತೊಂದರೆಯಿಲ್ಲದೆ ಸಾಯಿಬಾಬಾ ಪ್ರಸಾದಾಲಯದಲ್ಲಿ ಪ್ರಸಾದ ಭೋಜನವನ್ನು ಸ್ವೀಕರಿಸಿದರು.

ಉತ್ಸವದ ಎರಡನೇ ಹಾಗೂ ಮುಖ್ಯ ದಿನವಾದ 13ನೇ ಅಕ್ಟೋಬರ್  2013, ಭಾನುವಾರ ವು  ಬೆಳಿಗ್ಗೆ ದ್ವಾರಕಾಮಾಯಿಯಲ್ಲಿ ಅಖಂಡ ಪಾರಾಯಣ ಮುಕ್ತಾಯಗೊಳ್ಳುವುದರೊಂದಿಗೆ ಪ್ರಾರಂಭವಾಯಿತು. ನಂತರ  ಬೆಳಗಿನ ಜಾವ 5.00 ಗಂಟೆಗೆ  ಪವಿತ್ರ ಸಾಯಿ ಸಚ್ಚರಿತ್ರೆ ಗ್ರಂಥ, ಸಾಯಿಬಾಬಾರವರ ಭಾವಚಿತ್ರ ಹಾಗೂ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುಲಾಯಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಾದ ಶ್ರೀ.ಅಜಯ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿ ಹಾಗೂ ತಹಸೀಲ್ದಾರ್ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಸಂಸ್ಥಾನದ ಅಧಿಕಾರಿಗಳು ಹಾಗೂ ಸಾವಿರಾರು ಶಿರಡಿ ಗ್ರಾಮಸ್ಥರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ 9.00 ಗಂಟೆಗೆ ಸಂಸ್ಥಾನದ ಟ್ರಸ್ಟಿಗಳು  ಭಿಕ್ಷಾ ಜೋಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಸಂಜೆ 5.00 ಗಂಟೆಗೆ ಸಂಸ್ಥಾನದಿಂದ ಖಂಡೋಬ ಮಂದಿರದವರೆಗೆ ಭವ್ಯ ಮೆರವಣಿಗೆ ಹಾಗೂ ಸೀಮೋಲ್ಲಂಘನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಯಲ್ಲಿ ಸಾವಿರಾರು ಸಾಯಿ ಭಕ್ತರು ಪಾಲ್ಗೊಂಡಿದ್ದರು. ಸಂಜೆ 6.15 ಕ್ಕೆ ಧೂಪಾರತಿಯನ್ನು  ಹಮ್ಮಿಕೊಳ್ಳಲಾಗಿತ್ತು. ರಾತ್ರಿ  7.30 ರಿಂದ 10.00 ಗಂಟೆಯವರೆಗೆ ನಾಗಪುರದ ಪ್ರಖ್ಯಾತ ಸಾಯಿ ಭಜನ ಗಾಯಕರಾದ ಶ್ರೀ.ಕೈಲಾಶ್ ಹರೇ ಕೃಷ್ಣ ದಾಸ್ ರವರು ಬಹಳ ಸುಂದರವಾಗಿ ಸಾಯಿ ಉಪದೇಶ ಹಾಗೂ ಭಜನೆಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಾತ್ರಿ 9.15 ಕ್ಕೆ ಸಾಯಿಬಾಬಾರವರ ರಥ ಯಾತ್ರೆಯು ಆರಂಭಗೊಂಡಿತು.ಈ ರಥೋತ್ಸವದಲ್ಲಿ ಸಾವಿರಾರು ಸಾಯಿ ಭಕ್ತರು ಪಾಲ್ಗೊಂಡಿದ್ದರು.  ಸಾಯಿ ಭಕ್ತರು ಮಾಡಿದ ಸಾಯಿ ಜಯಕಾರವು ನೆರೆದಿದ್ದ ಎಲ್ಲ ಸಾಯಿ ಭಕ್ತರ ಮೈನವಿರೇಳುವಂತೆ ಮಾಡಿತು.

ದೆಹಲಿಯ ಸಾಯಿ ಭಕ್ತರಾದ ಶ್ರೀ.ಮುಕೇಶ್ ಗುಪ್ತಾರವರು ಸಮಾಧಿ ಮಂದಿರ ಹಾಗೂ ದೇವಾಲಯದ ಪ್ರಾಂಗಣವನ್ನೆಲ್ಲಾ ಸುಂದರವಾದ ಹೂಗಳಿಂದ ಅಲಂಕರಿಸಿದ್ದರು.




ಉತ್ಸವದ ಮಖ್ಯ ದಿನವಾದ ಕಾರಣ, ಸಮಾಧಿ ಮಂದಿರವನ್ನು ದರ್ಶನಕ್ಕಾಗಿ ರಾತ್ರಿಯಿಡೀ ತೆರೆದಿಡಲಾಗಿತ್ತು.

12ನೇ ಅಕ್ಟೋಬರ್  2013, ಶನಿವಾರ ದಂದು ಆರಂಭವಾದ  95ನೇ ಪುಣ್ಯತಿಥಿ ಉತ್ಸವವು 14ನೇ ಅಕ್ಟೋಬರ್  2013, ಸೋಮವಾರ ದಂದು ಬೆಳಿಗ್ಗೆ ಗೋಪಾಲಕಾಲ ಹಾಗೂ ದಹಿ ಹಂಡಿ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು. ಉತ್ಸವದ ಸಂಪೂರ್ಣ ಉಸ್ತುವಾರಿಯನ್ನು ಶ್ರೀ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರು ವಹಿಸಿಕೊಂಡಿದ್ದರು. 



ಆ ದಿನದ ಕಾರ್ಯಕ್ರಮಗಳು ಬೆಳಿಗ್ಗೆ ಗುರುಸ್ಥಾನದಲ್ಲಿ ರುದ್ರಾಭಿಷೇಕ  ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ರುದ್ರಾಭಿಷೇಕವನ್ನು ನೆರವೇರಿಸಿದರು.  ನಂತರ ಉಪ ಕಾರ್ಯಕಾರಿ ಅಧಿಕಾರಿ ಹಾಗೂ ತಹಸೀಲ್ದಾರ್ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಅವರ ಧರ್ಮಪತ್ನಿಯವರು ಸಮಾಧಿ ಮಂದಿರದಲ್ಲಿ ಪಾದ ಪೂಜೆಯನ್ನು ನೆರವೇರಿಸಿದರು. ಬೆಳಿಗ್ಗೆ 10.00 ಗಂಟೆಗೆ ಶ್ರೀ.ಮನೋಹರ್ ಬುವಾ ಬಾಲಕೃಷ್ಣ ದೀಕ್ಷಿತ್ ರವರು ಸುಂದರವಾಗಿ ಕೀರ್ತನೆಗಳನ್ನು ಹಾಡಿದರು.ನಂತರ 12.00 ಗಂಟೆಗೆ ಗೋಪಾಲಕಾಲ ಹಾಗೂ ದಹಿ ಹಂಡಿ ಕಾರ್ಯಕ್ರಮಗಳು ನಡೆದವು. ಮಧ್ಯಾನ್ಹ 12.15 ಕ್ಕೆ ಮಧ್ಯಾನ್ಹ ಆರತಿ ಮಾಡಲಾಯಿತು. ಸಂಜೆ 6.15ಕ್ಕೆ ಧೂಪಾರತಿ ನೆರವೇರಿಸಲಾಯಿತು. ರಾತ್ರಿ  7.30 ರಿಂದ 10.00 ಗಂಟೆಯವರೆಗೆ ಏಲೂರಿನ ಶ್ರೀ. ಕೆ.ವಿ.ಸತ್ಯನಾರಾಯಣರವರು ಬಹಳ ಸುಂದರವಾಗಿ ಕೂಚುಪುಡಿ ನೃತ್ಯವನ್ನು ಮಾಡಿ ಸಾಯಿ ಭಕ್ತರನ್ನು ರಂಜಿಸಿದರು. 

 

ಸಾಯಿ ಭಕ್ತರು ಉದಾರವಾಗಿ ದೇಣಿಗೆಯನ್ನು ನೀಡಿದ ಕಾರಣ  ಉತ್ಸವದ 3 ದಿನಗಳೂ ಸಾಯಿಬಾಬಾ ಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತವಾಗಿ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು. 1,50,000ಕ್ಕೂ ಹೆಚ್ಚು ಸಾಯಿ ಭಕ್ತರು ಈ ಪ್ರಸಾದ ಭೋಜನವನ್ನು ಸ್ವೀಕರಿಸಿದರು. 

ದೇಶ ವಿದೇಶಗಳಿಂದ 3 ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಭಕ್ತರು ಸಾಯಿ ದರ್ಶನಕ್ಕೆಂದು ಹರಿದುಬಂದಿದ್ದರು. ಸಾಯಿ ದರ್ಶನ ಮಾಡಿದ ಎಲ್ಲಾ ಸಾಯಿ ಭಕ್ತರಿಗೂ ಉಚಿತವಾಗಿ ಲಾಡು ಪ್ರಸಾದವನ್ನು ವಿತರಿಸಲಾಯಿತು. 

ಉತ್ಸವ ಮುಖ್ಯ ದಿನ ನಡೆದ ಭಿಕ್ಷಾ ಜೋಳಿ  ಕಾರ್ಯಕ್ರಮದಲ್ಲಿ ಸಾವಿರಾರು ಸಾಯಿ ಭಕ್ತರು ಪಾಲ್ಗೊಂಡು ಅಕ್ಕಿ, ಗೋಧಿ, ಜೋಳ ಹಾಗೂ ಇನ್ನೂ ಅನೇಕ ವಿಧವಾದ ಪದಾರ್ಥಗಳನ್ನು ಯಥೇಚ್ಚವಾಗಿ ಸಾಯಿಬಾಬಾರವರ ಹೆಸರಿನಲ್ಲಿ ನೀಡಿದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ


No comments:

Post a Comment