Tuesday, December 13, 2011

ಸಾಯಿ ಮಹಾಭಕ್ತ - ಶ್ರೀ.ಬಾಳಾರಾಮ್ ಮಾನಕರ - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ.ಬಾಳಾರಾಮ್ ಮಾನಕರ್ ರವರು ಶಿರಡಿ ಸಾಯಿಬಾಬಾರವರ ಪರಮ ಭಕ್ತರಾಗಿದ್ದರು. ತಮ್ಮ ಪತ್ನಿಯು ಕಾಲವಾದ ನಂತರ ಮನೆಯ ಜವಾಬ್ದಾರಿಯನ್ನು ತಮ್ಮ ಮಗನಿಗೆ ಒಪ್ಪಿಸಿ ಶಿರಡಿಗೆ ಬಂದು ನೆಲೆಸಿದರು. ಇವರ ಅಚಲವಾದ ಭಕ್ತಿಯನ್ನು ಕಂಡು ಬಾಬಾರವರಿಗೆ ಬಹಳ ಸಂತೋಷವಾಯಿತು. 

ಸಾಯಿಬಾಬಾರವರು ಬಾಳಾರಾಮ್ ರವರಿಗೆ ಅನುಗ್ರಹ ಮಾಡಬೇಕೆಂದು ಇಚ್ಚಿಸಿ ಅವರಿಗೆ ಹನ್ನೆರಡು ರುಪಾಯಿಗಳನ್ನು ಕೊಟ್ಟು ಮಚ್ಚೀಂದ್ರಗಡದಲ್ಲಿ ವಾಸಿಸುವಂತೆ ಹೇಳಿದರು. ಮಾನಕರರಿಗೆ ಅಲ್ಲಿಗೆ ಹೋಗಲು ಇಷ್ಟವಿರಲಿಲ್ಲ. ಆದರೆ, ಬಾಬಾರವರು ಅಲ್ಲಿಗೆ ಹೋಗುವುದರಿಂದ ಪ್ರಯೋಜನವಿದೆ ಎಂದು ಹೇಳಿ ದಿನಕ್ಕೊಮ್ಮೆಯಾದರೂ ಗಡದ ಮೇಲೆ ಕುಳಿತು ಧ್ಯಾನಾಸಕ್ತರಾಗಲು ಅವರಿಗೆ ಹೇಳಿದರು. ಮಾನಕರರು ಬಾಬಾರವರ ಮಾತಿನಲ್ಲಿ ನಂಬಿಕೆ ಇಟ್ಟು ಮಚ್ಚೀಂದ್ರಗಡಕ್ಕೆ ಬಂದರು. 

ಅಲ್ಲಿನ ಪ್ರಕೃತಿಯ ರಮ್ಯವಾದ ಸೊಬಗನ್ನೂ ಮತ್ತು ಪ್ರಶಾಂತವಾದ ವಾತಾವರಣವನ್ನೂ ನೋಡಿ ಬಾಬಾರವರು ಹೇಳಿದಂತೆ ಧ್ಯಾನ ಮಾಡಲು ಯೋಗ್ಯಸ್ಥಳವೆಂದು ಭಾವಿಸಿದರು. ಕೆಲವು ದಿನಗಳ ನಂತರ ಅವರಿಗೆ ಜ್ಞಾನೋದಯವಾಯಿತು. ಸಾಮಾನ್ಯವಾಗಿ ಭಕ್ತರಿಗೆ ಸಮಾಧಿ ಸ್ಥಿತಿಯಲ್ಲಿ ದೇವರ ಸಾಕ್ಷಾತ್ಕಾರವಾಗುತ್ತದೆ. ಆದರೆ ಮಾನಕರರಿಗೆ ಸಾಮಾನ್ಯ ಸ್ಥಿತಿಯಲ್ಲಿ ದೇವರ ಸಾಕ್ಷಾತ್ಕಾರವಾಯಿತು. ಅವರಿಗೆ ಬಾಬಾರವರ ದರ್ಶನವಾಯಿತು. ಮಾನಕರರು ಬಾಬಾರವರನ್ನು ನೋಡಿ "ನನ್ನನ್ನೇಕೆ ಇಲ್ಲಿಗೆ ಬರಮಾಡಿದಿರಿ?" ಎಂದು ಕೇಳಲು ಬಾಬಾರವರು "ಶಿರಡಿಯಲ್ಲಿದ್ದಾಗ ನಿನ್ನ ಮನಸ್ಸಿನಲ್ಲಿ ಅನೇಕ ಯೋಚನೆಗಳು ಬರಲಾರಂಭಿಸಿದವು; ನಿನ್ನ ಮನಸ್ಸನ್ನು ಸ್ಥಿಮಿತಕ್ಕೆ ತರಲೋಸುಗವೇ ನಿನ್ನನ್ನು ಇಲ್ಲಿಗೆ ಬರಮಾಡಿದೆ. ಪಂಚಭೂತಗಳನ್ನೊಳಗೊಂಡ ಈ 3-1/2 ಅಡಿಯ ವ್ಯಕ್ತಿ ಶಿರಡಿಯಲ್ಲಿ ಮಾತ್ರ ಇರುವನೆಂದು ತಿಳಿದುಕೊಂಡೆಯಾ? ನೀನು ಈಗ ನೋಡುತ್ತಿರುವುದು ಬಾಬಾ ಅವರನ್ನೋ ಅಥವಾ ಬೇರೆಯವರನ್ನೋ ಎಂಬುದನ್ನು ನೀನೇ ನಿರ್ಧರಿಸು" ಎಂದರು.

ಕೆಲವು ದಿನಗಳ ನಂತರ ಮಾನಕರ ಅವರು ಬಾಂದ್ರಾಕ್ಕೆ ಪ್ರಯಾಣ ಬೆಳೆಸಿದರು. ಪುಣೆಯಿಂದ ದಾದರಿಗೆ ರೈಲಿನಲ್ಲಿ ಹೋಗಬೇಕೆಂದು ರೈಲ್ವೇ ನಿಲ್ದಾಣಕ್ಕೆ ಬಂದರು. ಟಿಕೆಟ್ಟು ಕೊಳ್ಳುವ ಜಾಗದಲ್ಲಿ ಬಹಳ ನೂಕುನುಗ್ಗಲಿತ್ತು.ಬೇಗನೆ ಟಿಕೆಟ್ಟು ದೊರೆಯಲಿಲ್ಲ. ಆಗ ಹಳ್ಳಿಯವನೊಬ್ಬನು ಮಾನಕರರ ಹತ್ತಿರ ಬಂದು "ಎಲ್ಲಿಗೆ ಹೋಗಬೇಕು" ಎಂದು ಕೇಳಲು "ದಾದರಿಗೆ" ಎಂದು ಮಾನಕರರು ಹೇಳಿದರು. ಆಗ ಆ ಹಳ್ಳಿಯವನು "ನನಗೆ ಬಹಳ ಜರೂರಾದ ಕೆಲಸವಿದೆ. ನಾನು ಈಗ ಹೋಗಲಾರೆ. ದಯಮಾಡಿ ನನ್ನ ಟಿಕೆಟ್ಟನ್ನು ತೆಗೆದುಕೊಳ್ಳಿರಿ" ಎಂದನು. ಮಾನಕರ ಟಿಕೆಟ್ಟನ್ನು ತೆಗೆದುಕೊಂಡು ಅವನಿಗೆ ಹಣವನ್ನು ಕೊಡುವಷ್ಟರಲ್ಲಿ ಅವನು ಗದ್ದಲದಲ್ಲಿ ಎಲ್ಲಿಯೋ ಮಾಯವಾದನು. ಮಾನಕರ ಹುಡುಕಿದರೂ ಕಾಣಲೇ ಇಲ್ಲ. ರೈಲು ಹೊರಡುವ ತನಕ ಅವನನ್ನು ಹುಡುಕಿದರು. ಆದರೂ ಅವನ ಪತ್ತೆಯೇ ಆಗಲಿಲ್ಲ. ಮಾನಕರರಿಗೆ ಇದು ಎರಡನೇ ಸಾರಿ ಆದ ಸಾಕ್ಷಾತ್ಕಾರ. 

ಮಾನಕರ ತಮ್ಮ ಮನೆಗೆ ಹೋಗಿ ಅಲ್ಲಿ ಕೆಲವು ದಿನಗಳ ಕಾಲ ಇದ್ದು ನಂತರ ಶಿರಡಿಗೆ ಬಂದು ಬಾಬಾರವರ ಬಳಿಯೇ ಇದ್ದು ತಮ್ಮ ಕೊನೆಯ ದಿನಗಳವರೆಗೆ ಅವರ ಸೇವೆ ಮಾಡಹತ್ತಿದರು. ಕೊನೆಗೆ ಬಾಬಾರವರ ಆಶೀರ್ವಾದದಿಂದ ಅವರ ಸಮ್ಮುಖದಲ್ಲಿಯೇ ಇಹಲೋಕವನ್ನು ತ್ಯಜಿಸುವ ಯೋಗ ಅವರಿಗೆ ದೊರಕಿತು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment