Wednesday, November 2, 2011

ಸಾಯಿ ಮಹಾಭಕ್ತ - ಶ್ರೀ.ಚಾಂದ್ ಭಾಯಿ ಪಾಟೀಲ್  - ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ.ಚಾಂದ್ ಭಾಯಿ ಪಾಟೀಲ್ ರವರು ಧೂಪಖೇಡ ಗ್ರಾಮದ ಮುಖ್ಯಸ್ಥರಾಗಿದ್ದರು. ಈ ಗ್ರಾಮವು ಔರಂಗಾಬಾದ್ ಜಿಲ್ಲೆಯ ಪೈಠಾಣಾ ತಾಲ್ಲೂಕಿನಲ್ಲಿ ಇದ್ದು ಔರಂಗಾಬಾದ್ ನಿಂದ ಅಜಂತಾಗೆ ಹೋಗುವ ಮಾರ್ಗದಲ್ಲಿ ಸುಮಾರು 15 ಕಿಲೋಮೀಟರ್ ಕ್ರಮಿಸಿದರೆ ಸಿಗುತ್ತದೆ. 

ಸಾಯಿಬಾಬಾರವರು ಶಿರಡಿಯಲ್ಲಿ ಬಂದು ಶಾಶ್ವತವಾಗಿ ನೆಲೆಸಲು ಕಾರಣರು ಮುಸ್ಲಿಂ ಕುಲಕ್ಕೆ ಸೇರಿದ ಶ್ರೀ.ಚಾಂದ್ ಭಾಯಿ ಪಾಟೀಲ್ ರವರು. ಒಮ್ಮೆ ಇವರು ಔರಂಗಾಬಾದ್ ಗೆ ಪ್ರಯಾಣ ಮಾಡುತ್ತಿದ್ದಾಗ ದಾರಿಯಲ್ಲಿ ತಮ್ಮ ಹೆಣ್ಣು ಕುದುರೆಯನ್ನು ಕಳೆದುಕೊಂಡರು. ಕುದುರೆ ಕಳೆದು ಎರಡು ತಿಂಗಳುಗಳಾದರೂ ಎಷ್ಟು ಹುಡುಕಾಡಿದರೂ ಕುದುರೆ ಸಿಗಲಿಲ್ಲ. ಎಲ್ಲಾ ಕಡೆಯಲ್ಲಿ ಹುಡುಕಿ ಬೇಸತ್ತ ಶ್ರೀ.ಚಾಂದ್ ಭಾಯಿ ಪಾಟೀಲ್ ರವರು ವಾಪಸ್ ಔರಂಗಾಬಾದ್ ಕಡೆಗೆ ತಮ್ಮ  ಪ್ರಯಾಣವನ್ನು ಪ್ರಾರಂಭಿಸಿದರು. ಔರಂಗಾಬಾದಿನಿಂದ ಸುಮಾರು ನಾಲ್ಕೂವರೆ ಕಿಲೋಮೀಟರ್ (ಅಂದಾಜು 9 ಮೈಲಿ ದೂರ) ಕ್ರಮಿಸಿದ ನಂತರ ಮಾವಿನ ಮರದ ಕೆಳಗಡೆ ಕುಳಿತಿದ್ದ ಸುಂದರನಾದ ಎಳೆಯ ಹುಡುಗನನ್ನು ಕಂಡರು. ಫಕೀರನಂತೆ ವಸ್ತ್ರವನ್ನು ಧರಿಸಿದ್ದ ಆ ಹುಡುಗ ಇವರನ್ನು ಕೂಗಿ ಕರೆದು ಚಿಲ್ಲಂ ಅನ್ನು ಸೇದಿ ನಂತರ ಪ್ರಯಾಣವನ್ನು ಮುಂದುವರೆಸುವಂತೆ ಹೇಳಿದನು. ಕೇವಲ ಕಫ್ನಿಯನ್ನು ಧರಿಸಿದ್ದ ಮತ್ತು ಕಂಕುಳಲ್ಲಿ ಸಟಕಾ ಹಿಡಿದುಕೊಂಡಿದ್ದ ಆ ಹುಡುಗ ಚಿಲ್ಲಂ ಅನ್ನು ಸೇದಲು ತಯಾರಿ ನಡೆಸುತ್ತಿದ್ದನು. ಚಾಂದ್ ಭಾಯಿಯ ಹೆಗಲ ಮೇಲೆ ಇದ್ದ ಕುದುರೆಯ ಜೀನನ್ನು ನೋಡಿ ಆ ಹುಡುಗ "ಈ ಜೀನನ್ನು ಏತಕ್ಕೆ ಹೆಗಲ ಮೇಲೆ ಹಾಕಿಕೊಂಡಿದ್ದೀರಿ?" ಎಂದು ಪ್ರಶ್ನಿಸಿದನು. ಆಗ ಚಾಂದ್ ಭಾಯಿ ತಾವು ಕುದುರೆ ಕಳೆದುಕೊಂಡ ವಿಷಯವನ್ನು ಅರುಹಿದರು. ಆ ಬಾಲ ಫಕೀರನು ಅಲ್ಲಿಯೇ ಇದ್ದ ಹಳ್ಳದ ಕಡೆಗೆ ತನ್ನ ಕೈಯನ್ನು ತೋರಿಸಿ "ಅಲ್ಲಿ ಹೋಗಿ ನೋಡಿ, ಅಲ್ಲಿ ನೀವು ಕಳೆದುಕೊಂಡ ಕುದುರೆ ನಿಮಗೆ ಸಿಗುತ್ತದೆ" ಎಂದನು. ಚಾಂದ್ ಭಾಯಿ ಅಲ್ಲಿ ಹೋಗಿ ನೋಡಲು ನಿಜವಾಗಿಯೂ ಅವರ ಕುದುರೆ ಅಲ್ಲಿ ಮೇಯುತ್ತಿರುವುದನ್ನು ಕಂಡರು. ನಡೆದ ಘಟನೆಯನ್ನು ನೋಡಿ ಚಾಂದ್ ಭಾಯಿ ಗೆ ಆಶ್ಚರ್ಯವಾಯಿತು. ತಕ್ಷಣವೇ ಚಾಂದ್ ಭಾಯಿ ಈ ಹುಡುಗ ಸಾಮಾನ್ಯನಲ್ಲ. ಇವನು ಔಲಿಯಾ (ಅಸಾಮಾನ್ಯ ವ್ಯಕ್ತಿ) ಎಂದು ಮನಗಂಡರು. ಆ ಕುದುರೆಯನ್ನು ಕರೆದುಕೊಂಡು ಫಕೀರನ ಬಳಿಗೆ ಬಂದರು. ಫಕೀರನು ತನ್ನ ಹತ್ತಿರ ಕುಳಿತುಕೊಳ್ಳುವಂತೆ ಇವರಿಗೆ ಹೇಳಿದನು. ನಂತರ ಇಕ್ಕಳವನ್ನು ಕೈಗೆ ತೆಗೆದುಕೊಂಡು ನೆಲಕ್ಕೆ ಹೊಡೆದನು. ಉರಿಯುತ್ತಿರುವ ಕೆಂಡವನ್ನು ತನ್ನ ಚಿಲ್ಲಂನಲ್ಲಿ ಇರಿಸಿದನು. ಚಿಲ್ಲಂನನ್ನು ಮುಚ್ಚಲು ಬಟ್ಟೆಯ ಅವಶ್ಯಕತೆ ಇದ್ದಿತು ಮತ್ತು ಅದನ್ನು ಒದ್ದೆ ಮಾಡಲು ನೀರು ಬೇಕಾಗಿತ್ತು. ಆಗ ಆ ಫಕೀರನ್ನು ತನ್ನ ಕಂಕುಳಲ್ಲಿ ಇದ್ದ ಸಟಕಾವನ್ನು ತೆಗೆದುಕೊಂಡು ನೆಲಕ್ಕೆ ಹೊಡೆದ ಕೂಡಲೇ ನೀರು ಚಿಮ್ಮಿ ಬಂದಿತು. ಆ ನೀರಿನಿಂದ ಬಟ್ಟೆಯನ್ನು ಒದ್ದೆ ಮಾಡಿ, ಹೆಚ್ಚಿನ ನೀರನ್ನು ಬಟ್ಟೆಯನ್ನು ಹಿಂಡುವ ಮುಖಾಂತರ ತೆಗೆದು ಹಾಕಿ, ಚಿಲ್ಲಂನ್ನು ಸುತ್ತಿದನು. ತಾನು ಒಮ್ಮೆ ಚಿಲ್ಲಂನ್ನು ಎಳೆದು ನಂತರ ಅದನ್ನು ಚಾಂದ್ ಭಾಯಿಯವರಿಗೆ ಸೇದಲು ನೀಡಿದನು. 

ಬಾಲ ಫಕೀರನು ಮಾಡಿದ ಈ ಎಲ್ಲಾ ಲೀಲೆಗಳನ್ನು ನೋಡಿ ಚಾಂದ್ ಭಾಯಿಗೆ ದಂಗುಬಡಿದಂತೆ ಆಯಿತು. ಸ್ವಾಭಾವಿಕವಾಗಿ ಆ ಫಕೀರನು ತಮ್ಮ ಮನೆಗೆ ಬಂದು ಮನೆಯವರೆಲ್ಲರನ್ನು ಹರಸಲು ಕರೆದುಕೊಂಡು ಹೋಗುವ ಆಸೆಯಾಯಿತು. ಚಾಂದ್ ಭಾಯಿಯವರ ಒತ್ತಾಯದ ಮೇರೆಗೆ ಆ ಬಾಲ ಫಕೀರನು ಅವರ ಮನೆಗೆ ಮಾರನೆಯ ದಿನ ಹೋದನು. ಅಲ್ಲಿ ಸ್ವಲ್ಪ ದಿನಗಳು ತಂಗಿದ್ದನು. ನಂತರ ಚಾಂದ್ ಭಾಯಿ ಪಟೇಲನ ಸಂಬಂಧಿಯ ಮದುವೆಯ ದಿಬ್ಬಣದ ಜೊತೆಯಲ್ಲಿ ಶಿರಡಿಗೆ ಬಂದನು. 

ಚಾಂದ್ ಭಾಯಿಗೆ ಮಕ್ಕಳಿರಲಿಲ್ಲ. ಇವರ ಹೆಂಡತಿಯ ಸೋದರಳಿಯನ ಮದುವೆಯು ಶಿರಡಿಯ "ವಾಜಿರ್ಬಿ" ಎಂಬ ಹುಡುಗಿಯೊಡನೆ ನಿಶ್ಚಯವಾಗಿತ್ತು. ಆ ಮದುವೆಯ ಸಲುವಾಗಿ ಚಾಂದ್ ಭಾಯಿಯ ಕುಟುಂಬದವರು ಮತ್ತು ಅವರ ಸ್ನೇಹಿತರುಗಳು ಕುದುರೆ ಮತ್ತು ಎತ್ತಿನ ಗಾಡಿಗಳನ್ನು ಮಾಡಿಕೊಂಡು ಶಿರಡಿಗೆ ಹೊರಟರು. ಆ ಮದುವೆಯ ದಿಬ್ಬಣದ ಜೊತೆಯಲ್ಲಿ ಒಂದು ಎತ್ತಿನ ಗಾಡಿಯಲ್ಲಿ ಕುಳಿತು ಬಾಬಾರವರು ಕೂಡ ಪ್ರಯಾಣ ಬೆಳೆಸಿದರು. 

ಶಿರಡಿಯನ್ನು ತಲುಪಿದ ನಂತರ ಮದುವೆಯ ದಿಬ್ಬಣವು  ಖಂಡೋಬಾ ಮಂದಿರದ ಎದುರುಗಡೆ ಇದ್ದ ಮೈದಾನದಲ್ಲಿ ಬೀಡು ಬಿಟ್ಟಿತು. ಈ ದೇವಾಲಯ ಅಕ್ಕಸಾಲಿಗ ಜಾತಿಗೆ ಸೇರಿದ ಭಗತ್ ಮಹಾಳಸಾಪತಿಯವರಿಗೆ ಸೇರಿತ್ತು. ಎತ್ತಿನ ಗಾಡಿಯಿಂದ ಇಳಿಯುತ್ತಿದ್ದ ಈ ಬಾಲ ಫಕೀರನನ್ನು ನೋಡಿ ಭಗತ್ ಮಹಾಳಸಾಪತಿಯವರು "ಆವೋ ಸಾಯಿ" ಎಂದು ಸ್ವಾಭಾವಿಕವಾಗಿ ಉಚ್ಚರಿಸಿದರು. ಅಂದಿನಿಂದ ಶಿರಡಿಯ ಎಲ್ಲಾ ಗ್ರಾಮಸ್ಥರೂ ಇವರನ್ನು "ಸಾಯಿಬಾಬಾ" ಎಂದು ಸಂಬೋಧಿಸಲು ಪ್ರಾರಂಭಿಸಿದರು. 

ಶ್ರೀ.ಚಾಂದ್ ಭಾಯಿಯವರು ತಮ್ಮ ಹೆಣ್ಣು ಕುದುರೆಯನ್ನು ಕಳೆದುಕೊಂಡ ವಿಚಾರವನ್ನು ಶಿರಡಿಯ ರಾಮಗೀರಬುವಾ (ಸಾಯಿಬಾಬಾರವರು ಬಾಪುಗೀರ್ ಬುವಾ ಎಂದು ಸಂಬೋಧಿಸುತ್ತಿದ್ದರು) ಗೆ ತಾವೇ ಸ್ವತಃ ತಿಳಿಸಿರುತ್ತಾರೆ. 1936ನೇ ಇಸವಿಯಲ್ಲಿ ರಾಮಗೀರಬುವಾರವರು ಪರಮ ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರಿಗೆ ತಿಳಿಸಿರುತ್ತಾರೆ. ಆಗ ರಾಮಗೀರಬುವಾರವರಿಗೆ 76 ವರ್ಷಗಳಾಗಿತ್ತು. 

ಚಾಂದ್ ಭಾಯಿ ಪಾಟೀಲ್ ರವರ ಕನಸಿನಲ್ಲಿ ಬಂದು ಅವರ ಮನಸ್ಸಿನಲ್ಲಿ ಇದ್ದುದನ್ನು ಸಾಯಿಬಾಬಾರವರು ತಿಳಿದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿರುತ್ತದೆ.

ಚಾಂದ್ ಪಾಟೀಲ್ ರವರ  ಸಹೋದರ ಅನ್ಸರ್ ಖಾನ್ ಮತ್ತು ಅವನ ಹೆಂಡತಿ ಉಮರ್ಬಿಗೆ ಗುಲಾಬ್ ಖಾನ್ ಎಂಬ ಮಗನಿದ್ದನು. ಗುಲಾಬ್ ಖಾನ್ ನ ಮಗ ಲಾಲ್ ಖಾನ್ಇದೇ ಹಳ್ಳಿಯಲ್ಲಿ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದನು. 

ಚಾಂದ್ ಭಾಯಿ ಪಾಟೀಲನ ಮನೆಯ ಹತ್ತಿರದಲ್ಲಿ ಒಂದು ಸಾಯಿಬಾಬಾ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಅದರ ಪಕ್ಕದಲ್ಲಿ ಬಾಬಾರವರು ಧ್ಯಾನ ಮಾಡುತ್ತಿದ್ದ ಹಾಗೂ ವಿಶ್ರಮಿಸಿಕೊಳ್ಳುತ್ತಿದ್ದ ಪವಿತ್ರ ಬೇವಿನ ಮರವಿದೆ. ಈ ಬೇವಿನ ಮರದ ಎಲೆಗಳು ಶಿರಡಿಯ ಗುರುಸ್ಥಾನದಲ್ಲಿರುವ ಬೇವಿನ ಮರದ ಎಲೆಗಳಂತೆಯೇ ಸಿಹಿಯಾಗಿರುತ್ತವೆ.


ಚಾಂದ್ ಭಾಯಿ ಪಾಟೀಲನ ಹಳೆಯ ಮನೆಯನ್ನು ಕಾಲಾನಂತರದಲ್ಲಿ ಕೆಡವಿ ಅದೇ ಸ್ಥಳದಲ್ಲಿ ಹೊಸ ಮನೆಯನ್ನು ಕಟ್ಟಲಾಗಿರುತ್ತದೆ. ಇದೇ ಮನೆಯಲ್ಲಿ ಪ್ರಸ್ತುತ ಅವರ ಮರಿಮಗನಾದ ಶ್ರೀ.ಬಾಬುಲಾಲ್ ನಾದಾನ್ ಪಠಾಣ್ ರವರು (ನಾಲ್ಕನೇ ಪೀಳಿಗೆ) ವಾಸಿಸುತ್ತಿದ್ದಾರೆ. 

ಚಾಂದ್ ಭಾಯಿ ಪಾಟೀಲರ ಸಮಾಧಿಯನ್ನು ಅವರ ಮನೆಯ ಪಕ್ಕದಲ್ಲೇ ಮಾಡಲಾಗಿದೆ.


ಸಾಯಿಬಾಬಾರವರು ಸುಮಾರು ಎರಡು ತಿಂಗಳ ಕಾಲ ಚಾಂದ್ ಭಾಯಿ ಪಾಟೀಲರ ಈ ಮನೆಯಲ್ಲಿ ಇದ್ದರೆಂದು ಶ್ರೀ.ಬಾಬುಲಾಲ್ ನಾದಾನ್ ಪಠಾಣ್ ರವರು ಹೇಳುತ್ತಾರೆ. ಸಾಯಿಬಾಬಾರವರಿಂದ ಸ್ಪರ್ಶಿಸಲ್ಪಟ್ಟ ಬೀಸುವ ಕಲ್ಲು, ಹೆಣ್ಣು ಕುದುರೆ "ಬಿಜಲಿ" ಯ ವಸ್ತುಗಳು, ಸಾಯಿಬಾಬಾರವರು ಚಾಂದ್ ಭಾಯಿ ಪಾಟೀಲರೊಂದಿಗೆ ಇರುವ ವರ್ಣಚಿತ್ರಗಳನ್ನು ಅವರ ಮನೆಯಲ್ಲಿ ಈಗಲೂ ನೋಡಬಹುದಾಗಿದೆ.





ವಿಳಾಸ: 

ಶ್ರೀ.ಬಾಬುಲಾಲ್ ನಾದಾನ್ ಪಠಾಣ್ 
ಧೂಪಖೇಡಾ ಗ್ರಾಮ, 
ಪೈಠಾಣ್  ತಾಲೂಕು, 
ಔರಂಗಾಬಾದ್ ಜಿಲ್ಲೆ, 
ಮಹಾರಾಷ್ಟ್ರ, ಭಾರತ, 
ದೂರವಾಣಿ ಸಂಖ್ಯೆ:  +91 98818 22212

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment