Thursday, June 24, 2010

ಸಾಯಿ ಭಜನ ಗಾಯಕ - ಶ್ರೀ. ಸುರೇಶ ವಾಡೆಕರ್ - ಕೃಪೆ - ಸಾಯಿ ಅಮೃತಧಾರಾ.ಕಾಂ 



ಶ್ರೀ. ಸುರೇಶ ವಾಡೆಕರ್ ರವರು ಭಾರತದ ಸುಪ್ಪ್ರಸಿದ್ದ ಸಾಯಿ ಭಜನ ಗಾಯಕರಲ್ಲಿ ಒಬ್ಬರು. ಇವರ ಅಪ್ರತಿಮ ಪ್ರತಿಭೆಯನ್ನು ಬಾಲ್ಯದಲ್ಲೇ ಇವರ ತಂದೆಯವರ ಸ್ನೇಹಿತರು ಹಾಗೂ ಖ್ಯಾತ ಭಜನ ಗಾಯಕರಾದ ಶ್ರೀಯುತ ಪಾರ್ಶ್ವನಾಥ್ ದಿಗ್ರಾಜ್ಕರ್ ರವರು ಗುರುತಿಸಿದರು. ದಿಗ್ರಾಜ್ಕರ್ ರವರು ಹಬ್ಬ ಹರಿದಿನಗಳಲ್ಲಿ ಇವರ ಮನೆಯಲ್ಲಿ ಭಜನೆ ಕಾರ್ಯಕ್ರಮ ನೀಡಲು ಬರುತ್ತಿದ್ದಾಗ ಸುರೇಶ ವಾಡೆಕರ್ ರವರಿಗೆ ಕೇವಲ ೪ ವರ್ಷಗಳಾಗಿತ್ತು. ಆಗಲೇ ಸುರೇಶ ರವರು ದಿಗ್ರಾಜ್ಕರ್ ರವರು ಹಾಡಿದ ಭಜನೆಗಳನ್ನು ಹಾಗೆಯೇ ಪುನರುಚ್ಚರಿಸುತ್ತಿದರು. ಅದನ್ನು ಕಂಡ ದಿಗ್ರಾಜ್ಕರ್ ರವರು ಇವರಿಗೆ ಸಂಗೀತ ತರಬೇತಿಯನ್ನು ನೀಡಲು ಆರಂಭಿಸಿದರು. ಸತತವಾಗಿ ೪ ವರ್ಷಗಳ ಕಾಲ ಸುರೇಶ ವಾಡೆಕರ್ ರವರಿಗೆ ಸಂಗೀತದ ತರಬೇತಿಯನ್ನು ನೀಡಿದರು.

ಇವರ ಮನೆ ವೈದ್ಯರಾದ ಡಾ.ಷಾ ರವರ ಒತ್ತಾಯದ ಮೇರೆಗೆ ಇವರನ್ನು ಸುಪ್ರಸಿದ್ದ ಹಿಂದೂಸ್ತಾನಿ ಗಾಯಕರಾದ ಶ್ರೀ. ಆಚಾರ್ಯ ಜಿಯಲಾಲ್ ವಸಂತ್ ರವರ "ಸಂಗೀತ ನಿಕೇತನ" ಕ್ಕೆ ಸಾಂಪ್ರದಾಯಿಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯಲು ಸೇರಿಸಿದರು. ಶ್ರೀ.ವಸಂತ್ ರವರು ಸುರೇಶ ವಾಡೆಕರ್ ರವರು ಹಾಡಿದ ಒಂದು ನಾಟ್ಯ ಸಂಗೀತ ಗಾಯನವನ್ನು ಕೇಳಿ ಇವರನ್ನು ತಮ್ಮ ಬಳಿಯೇ ಇರಿಸಿಕೊಂಡು ಕೇವಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವಷ್ಟೇ ಅಲ್ಲದೇ ಇವರ ವಿದ್ಯಾಭ್ಯಾಸದ ಹೊಣೆಯನ್ನು ವಹಿಸಿಕೊಂಡರು. ಸಂಗೀತ ನಿಕೇತನದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಕಾರ್ಯಕ್ರಮ ನೀಡಲು ಆಹ್ವಾನಿಸುತ್ತಿದ್ದರು. ಹಾಗೆಯೇ ಸುರೇಶ ರವರಿಗೂ ದೇಶದಾದ್ಯಂತ ಸಂಗೀತ ಕಾರ್ಯಕ್ರಮ ನೀಡುವ ಅವಕಾಶ ದೊರೆಯುತ್ತಿತ್ತು. ಇದೇ ಸಮಯದಲ್ಲಿ ಸುರೇಶ ವಾಡೆಕರ್ ರವರು ತಬಲಾ ವಾದನವನ್ನು ಕೂಡ ಕಲಿತರು. ದೇಶದಾದ್ಯಂತ ಇವರು ನೀಡಿದ ಕಾರ್ಯಕ್ರಮಗಳು ಜನರ ಹಾಗೂ ಪತ್ರಿಕೆಯವರ ಪ್ರಶಂಸೆಗೆ ಪಾತ್ರವಾಯಿತು. ಇವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ತಬಲಾ ವಾದನದಲ್ಲಿ ಪದವಿಯನ್ನು "ಪ್ರಯಾಗ್ ಸಂಗೀತ ಸಮಿತಿ" ಅಲಹಾಬಾದ್ ನಿಂದ ಪಡೆದರು. ಇವರ ಪ್ರತಿಭೆಯಿಂದ ಪ್ರೇರೇಪಿತರಾಗಿ ಇವರ ಗುರುಗಳು ಸುರೇಶ ವಾಡೆಕರ್ ರವರಿಗೆ ಸಿತಾರ್ ವಾದನ ಹಾಗೂ ಕಥಕ್ ನೃತ್ಯವನ್ನು ಕೂಡ ಹೇಳಿಕೊಟ್ಟರು. ಹೀಗೆ ಸುರೇಶ ವಾಡೆಕರ್ ರವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ತಬಲಾ, ಸಿತಾರ್ ಹಾಗೂ ಕಥಕ್ ನೃತ್ಯದಲ್ಲಿ ಸಂಪೂರ್ಣ ತರಬೇತಿಯನ್ನು ಪಡೆದರು.

೧೯೭೬ ರಲ್ಲಿ ಸುರೇಶ ರವರು ತಮ್ಮ ಗುರುಗಳ ಮಗಳಾದ ಪ್ರೇಮ ವಸಂತ್ ರವರ ಜೊತೆಯಲ್ಲಿ ಸೇರಿ ಜರ್ಮನಿ, ಯುರೋಪ್ ದೇಶಗಳಲ್ಲಿ ಸಿತಾರ್ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿದರು. ಇವರು ಯುರೋಪ್ ನಿಂದ ಭಾರತಕ್ಕೆ ಮರಳಿದ ನಂತರ ಇವರನ್ನು "ಸುರ್ ಸಿಂಗಾರ್ ಸಂಸದ್" ನವರು "ಹರಿದಾಸ ಸಂಗೀತ ಸಮ್ಮೇಳನ" ದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಲು ಆಹ್ವಾನಿಸಿದರು. ಸುರ್ ಸಿಂಗಾರ್ ಸಂಸದ್ ನ ನಿರ್ದೇಶಕರಾದ ಶ್ರೀ.ಬ್ರಿಜ್ ನಾರಾಯಣ್ ವರು ಏರ್ಪಡಿಸಿದ ಮೊದಲನೇ ಚಲನಚಿತ್ರ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಲು ಸುರೇಶ ವಾಡೆಕರ್ ರವರಿಗೆ ಆಹ್ವಾನ ನೀಡಿದರು. ಆ ಸಮ್ಮೇಳನದಲ್ಲಿ ಒಲ್ಲದ ಮನಸ್ಸಿನಿಂದಲೇ ಸುರೇಶ ವಾಡೆಕರ್ ರವರು ಪಾಲ್ಗೊಂಡರು. ಸುರೇಶ ವಾಡೆಕರ್ ರವರು "ಮದನ ಮೋಹನ ಉತ್ತಮ ಗಾಯಕ" ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೇ ಆ ಸಮ್ಮೇಳನದಲ್ಲಿ ಭಾಗವಹಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ರವೀಂದ್ರ ಜೈನ್ ರವರಿಂದ ತಮ್ಮ ಮುಂದಿನ ಚಲನಚಿತ್ರಕ್ಕೆ ಹಾಡುವ ಅವಕಾಶವನ್ನು ಪಡೆದರು. ಅದರಂತೆ ಸುರೇಶ ವಾಡೆಕರ್ ರವರು ರಾಜಶ್ರಿ ಪ್ರೊಡ ಕ್ಶನ್ ರವರ "ಪಹೇಲಿ" ಚಿತ್ರಕ್ಕೆ ರವೀಂದ್ರ ಜೈನ್ ರವರ ಸಂಗೀತ ನಿರ್ದೇಶನದಲ್ಲಿ ಪ್ರಥಮ ಬಾರಿಗೆ ಹಾಡಿದರು.  ಅಲ್ಲಿಂದ ಮುಂದೆ ಇವರು ಹಿಂತಿರುಗಿ ನೋಡಲಿಲ್ಲ.

ಸುರೇಶ ವಾಡೆಕರ್ ರವರು ಹೊಸ ಸಂಗೀತ ನಿರ್ದೇಶಕರು ಮತ್ತು ಪ್ರಸಿದ್ದ ಸಂಗೀತ ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಿದ್ದಾರೆ. ಅನೇಕ ಪ್ರತಿಷ್ಟಿತ ಪ್ರಶಸ್ತಿಗಳು ಇವರ ಪಾಲಾಗಿವೆ. ಮಹಾರಾಷ್ಟ್ರ ಸರ್ಕಾರದಿಂದ ೯ ಪ್ರಶಸ್ತಿಗಳು, ಗುಜರಾತ್ ಸರ್ಕಾರದಿಂದ ೩ ಪ್ರಶಸ್ತಿಗಳು, ಪಂಜಾಬ್ ಸರ್ಕಾರದಿಂದ ೨ ಪ್ರಶಸ್ತಿಗಳನ್ನು ಅತ್ಯುತ್ತಮ ಹಿನ್ನಲೆ ಗಾಯನಕ್ಕಾಗಿ ಪಡೆದುಕೊಂಡಿದ್ದಾರೆ. ಅಲ್ಲದೇ ಇನ್ನು ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.  ಇವರ ಬಳಿ ಸಾವಿರಾರು ಉತ್ತಮ ಹಾಡುಗಳ ಸಂಗ್ರಹವೇ ಇದೆ. ಇಂದು ಸುರೇಶ ವಾಡೆಕರ್ ರವರು ಒಬ್ಬ ಪ್ರತಿಭಾನ್ವಿತ ಸಂಗೀತಗಾರರೆಂದು ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ. ಇವರು ಸಂಗೀತ ನಿರ್ದೇಶನದಲ್ಲೂ ತಮ್ಮನ್ನು ತೊಡಗಿಸಿಕೊಂಡು ಹೆಸರನ್ನು ಗಳಿಸಿದ್ದಾರೆ. ಇವರು ತಮ್ಮ ಪ್ರಥಮ ಸಂಗೀತ ನಿರ್ದೇಶನ ಮಾಡಿದ "ಆಶಿ ಹೀ ಧ್ಯಾನೇಶ್ವರಿ" ಚಿತ್ರಕ್ಕೆ ಮಹಾರಾಷ್ಟ್ರ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕ  ಪ್ರಶಸ್ತಿಯನ್ನು ಪಡೆದಿದ್ದಾರೆ.

ಇವರು ತಾವು ನಡೆದು ಬಂದ ಹೆಜ್ಜೆಯನ್ನು  ಮರೆಯದೆ ತಮ್ಮ ಗುರುಗಳ ಇಚ್ಚೆಯಂತೆ ಗುರು-ಶಿಷ್ಯ ಪರಂಪರೆಯನ್ನು ಮುಂದುವರಿಕೊಂಡು ಬರುತ್ತಾ "ಆಚಾರ್ಯ ಜಿಯಾಲಾಲ್ ವಸಂತ್ ಸಂಗೀತ ನಿಕೇತನ್" ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಕ್ರಮಬದ್ದವಾಗಿ ಸಂಗೀತ ಶಿಕ್ಷಣವನ್ನು ನೀಡುವುದೇ ಅಲ್ಲದೇ ನರ್ಸರಿ ಯಿಂದ ಜೂನಿಯರ್ ಕಾಲೇಜ್ ವರಗೆ ವಿದ್ಯಾಭ್ಯಾಸವನ್ನು ಕೂಡ ನೀಡುತ್ತಾ ಬಂದಿದೆ. ಈ ಸಂಸ್ಥೆಯು ತನ್ನದೇ ಆದ ವಾಯ್ಸ್ ಕಲ್ಚರ್ ಸ್ಟೂಡಿಯೋ ವನ್ನು ಹೊಂದಿದ್ದು ಅಲ್ಲಿ ವಿದ್ಯಾರ್ಥಿಗಳಿಗೆ ವಾಯ್ಸ್ ಕಲ್ಚರ್ ಬಗ್ಗೆ ಉತ್ತಮ ತರಬೇತಿಯನ್ನು ನೀಡಲಾಗುತ್ತಿದೆ. ಇಲ್ಲಿ ತರಬೇತಿಯನ್ನು ಪಡೆದ ಸಾವಿರಾರು ವಿದ್ಯಾರ್ಥಿಗಳು ಬಹಳ ಒಳ್ಳೆಯ ಹೆಸರನ್ನು ಪಡೆದಿರುವುದಷ್ಟೇ ಅಲ್ಲದೇ ತಮ್ಮ ಗುರುಗಳಿಗೂ ಕೂಡ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾರೆ.

ಸುರೇಶ ವಾಡೆಕರ್ ರವರು ಜೀ ಟಿವಿ ಯ "ಸರಿಗಮಪ" ಪ್ರತಿಷ್ಟಿತ "ಸ್ಕ್ರೀನ್ ಅವಾರ್ಡ್ಸ್", "ಸಹಾರಾ ಅವಾರ್ಡ್ಸ್", "ಮಹಾರಾಷ್ಟ್ರ ಸರ್ಕಾರದ ಗೌರವ ಪುರಸ್ಕಾರ" ಮುಂತಾದ ಪುರಸ್ಕಾರಗಳನ್ನು ನೀಡುವ ಸಮಿತಿಗಳ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರಿಗೆ ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಟಿತ  "ಲತಾ ಮಂಗೇಶ್ಕರ್ ಪ್ರಶಸ್ತಿ" ಮತ್ತು ಮೊದಲನೇ "ವಿಕ್ರಮಾದಿತ್ಯ ಪ್ರಶಸ್ತಿ" ಗಳು ಕೂಡ ಸಂದಿವೆ.

ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ  ಇವೆ:

ವಿಳಾಸ : ಸುರೇಶ ವಾಡೆಕರ್'ಸ್ ಅಜೀವಸನ್ ಮ್ಯುಸಿಕ್ ಅಕಾಡೆಮಿ, ಜುಹೂ ರಸ್ತೆ, ಎಸ್.ಏನ್.ಡಿ.ಟಿ ಹತ್ತಿರ, ಮುಂಬೈ-೪೦೦ ೦೪೯.

ದೂರವಾಣಿ : ೯೧-೦೨೨-೨೬೬೦ ೪೩೪೫, ೨೬೬೦ ೭೭೩೧, ೨೬೬೦ ೧೯೮೬ (ಎಕ್ಷ್ತೆನ್ಶನ್ - ೧೧೩)

ಇ ಮೇಲ್ : mailto:sureshwadkarmusic@gmail.com

ವೆಬ್ ಸೈಟ್ : http://www.sureshwadkarmusic.com/

ಆಲ್ಬಮ್ : ಹೇ ಸಾಯಿ ರಾಮ್, ಓಂ ನಮೋ ಸಾಯಿನಾಥಾಯ ನಮಃ, ಓಂ ಸಾಯಿ ರಾಮ್, ಸಾಯಿ ಭಜನ್, ತೆರಿ ಕರು ಮೇ ಪೂಜಾ, ಸಾಯಿಬಾಬಾ ಮಂತ್ರ, ಸಾಯಿ ಧುನ್, ಸಾಯಿಬಾಬಾ ನೇ ಬುಲಾಯ ಹೈ, ಶಿರಡಿವಾಲೆ ಸಾಯಿಬಾಬಾ ಹಾಗೂ ಇನ್ನು ಹತ್ತು ಹಲವು ಆಲ್ಬಮ್ ಗಳು.

ಇವರ ಸಾಯಿ ಭಜನೆಗಳನ್ನು youtube ನಲ್ಲಿ ನೋಡಲು ಈ ಕೆಳಕಂಡ ಜೋಡಣೆಗಳನ್ನು ಕ್ಲಿಕ್ಕಿಸಿ:

http://www.youtube.com/watch?v=W1WIQ-lh_r8&feature=player_embedded

http://www.youtube.com/watch?v=WOisqM2BqR8&feature=player_embedded

http://www.youtube.com/watch?v=QvA1TeOu7Mc&feature=player_embedded

No comments:

Post a Comment