Tuesday, June 29, 2010

ಶಿರಡಿಗೆ ಹೋಗಬೇಕಾದ ಅವಶ್ಯಕತೆಯೇನು? - ಕೃಪೆ - ಸಾಯಿ ಅಮೃತಧಾರಾ.ಕಾಂ


ನಮಗೆಲ್ಲ ತಿಳಿದಿರುವಂತೆ ಸಾಯಿಬಾಬ ಸರ್ವಾಂತರ್ಯಾಮಿ ಅಲ್ಲವೇ? ಸಾಯಿಬಾಬಾರವರು ವಿಶ್ವದೆಲ್ಲೆಡೆ ಇರುವರು. ಹಾಗಿದ್ದಾಗ, ಶಿರಡಿಗೆ ಹೋಗಿ ಸಾಯಿಬಾಬಾರವರನ್ನು ಪೂಜಿಸುವ ಅವಶ್ಯಕತೆಯೇನು? ನಾವಿರುವ ಜಾಗದಲ್ಲೇ ಅವರನ್ನು ಪೂಜಿಸಬಹುದಲ್ಲವೇ? ಈ ರೀತಿಯ ಪ್ರಶ್ನೆಗಳನ್ನು ಪದೇ ಪದೇ ಶಿರಡಿಗೆ ಹೋಗಿ ಸಾಯಿಬಾಬಾರವರನ್ನು ಸಂದರ್ಶಿಸಿ ಬರುವ ಭಕ್ತರಿಗೆ ಅವರ ಹಿರಿಯರು, ಸ್ನೇಹಿತರು ಮತ್ತು ಬಂಧುಗಳು ಕೇಳುವುದನ್ನು ನಾವೆಲ್ಲರೂ ನೋಡಿರಬಹುದು.

ಪ್ರಪಂಚದ ಎಲ್ಲಾ ಧರ್ಮಗಳೂ ಭಕ್ತರು ಪವಿತ್ರ ನದಿಗಳಲ್ಲಿ ಸ್ನಾನ, ತೀರ್ಥ ಕ್ಷೇತ್ರಗಳನ್ನು, ದೇವಾಲಯಗಳನ್ನು, ಸಾಧು ಸಂತರನ್ನು ಹಾಗೂ ಅವರ ಸಮಾಧಿಗಳನ್ನು ಸಂದರ್ಶನ ಮಾಡಬೇಕೆಂದು ಹೇಳುತ್ತವೆ. ಭಾರತದ ಎಲ್ಲಾ ಪುರಾಣ ಗ್ರಂಥಗಳೂ ಇದನ್ನೇ ಪ್ರತಿಪಾದಿಸುತ್ತವೆ. ಇಸ್ಲಾಂ ಧರ್ಮವು ಪ್ರತಿಯೊಬ್ಬ ಮುಸಲ್ಮಾನನು ಜೀವನದಲ್ಲಿ ಒಂದು ಬಾರಿಯಾದರೂ ಮೆಕ್ಕಾ (ಹಜ್ ಯಾತ್ರೆ) ಯಾತ್ರೆ ಮಾಡಲೇಬೇಕೆಂದು ಹೇಳುತ್ತವೆ. ಹಿಂದೂ ಧರ್ಮವು ಪ್ರತಿಯೊಬ್ಬ ಹಿಂದುವೂ ಜೀವನದಲ್ಲಿ ಒಂದು ಬಾರಿಯಾದರೂ ಕಾಶಿ ಯಾತ್ರೆಯನ್ನು ಮಾಡಬೇಕೆಂದು ಹೇಳುತ್ತವೆ. ಸೂಫಿ ಧರ್ಮವು ಭಕ್ತರು ಸಾಧು ಸಂತರಲ್ಲಿ ಶರಣಾಗುವಂತೆ ಹಾಗೂ ಅವರ ಸಮಾಧಿ ದರ್ಶನ ಮಾಡುವಂತೆ ಹೇಳುತ್ತವೆ. ಐತರೀಯ ಬ್ರಾಹ್ಮಣ ಉಪನಿಷತ್ತು ಯಾವ ಮನುಷ್ಯನು ಜೀವನದಲ್ಲಿ ಪುಣ್ಯ ಕ್ಷೇತ್ರಗಳ ಯಾತ್ರೆಯನ್ನು ಮಾಡುವುದಿಲ್ಲವೋ ಅವನು ಸುಖಿಯಾಗಿರಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಯಾಕೆಂದರೆ ಪ್ರತಿಯೊಬ್ಬ ಮನುಷ್ಯನು ಅವನು ಎಷ್ಟೇ ದೊಡ್ದವನಾಗಿರಲಿ ಅಥವಾ ಪಂಡಿತೊತ್ತಮನಾಗಿರಲಿ ಅವನು ಒಮ್ಮೆಯಾದರೂ ತಪ್ಪು ಮಾಡದೆ ಇರಲು ಸಾಧ್ಯವೇ ಇಲ್ಲವೆಂದು ಮತ್ತು ಅದಕ್ಕಾಗಿ ಪರಿಹಾರಾರ್ಥವಾಗಿ ಯಾತ್ರೆಯನ್ನು ಕೈಗೊಂಡು ಸ್ವಲ್ಪವಾದರೂ ಪಾಪವನ್ನು ತೊಳೆದುಕೊಳ್ಳಲು ಪ್ರಯತ್ನಪಡುವಂತೆ ಹೇಳುತ್ತದೆ.

ಭಾರತದ ಪ್ರಸಿದ್ದ ಋಷಿ, ಮುನಿಗಳೂ ಕೂಡ ತಾವೇ ಸ್ವತಃ ತೀರ್ಥ ಯಾತ್ರೆಗಳನ್ನು ಕೈಗೊಂಡು ತಮ್ಮ ಭಕ್ತರಿಗೆಲ್ಲ ದಾರಿ ದೀಪವಾಗಿದ್ದಾರೆ. ಪುರಾಣಗಳು ಅನೇಕ ಋಷಿಗಳು, ದೇವತೆಗಳು ಪುಣ್ಯ ಕ್ಷೇತ್ರಗಳಿಗೆ ತೆರಳಿ ಅಲ್ಲಿ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿರುವುದನ್ನು ಧೃಡಪಡಿಸುತ್ತವೆ. ಭಾರತ ಕಂಡ ಪ್ರಸಿದ್ದ ಸಾಧು ಪುಂಗವರಾದ ಆದಿ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ಚೈತನ್ಯ ಮಹಾಪ್ರಭು, ಮೀರಾಬಾಯಿ, ಸಂತ ಜ್ಞಾನೇಶ್ವರ ಮಹಾರಾಜ, ಸಂತ ನಾಮದೇವ, ಸಂತ ತುಕಾರಾಮ, ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಇನ್ನು ಹಲವಾರು ಸಾಧು ಸಂತರು ದೇಶದ ಉದ್ದಗಲಕ್ಕೂ ಸಂಚರಿಸಿ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ತಪಸ್ಸನ್ನಾಚರಿಸಿ ಆ ಕ್ಷೇತ್ರಗಳನ್ನು ಪಾವನ ಗೊಳಿಸಿರುವುದು ನಮಗೆಲ್ಲ ತಿಳಿದಿದೆ. ಈ ಮಹಾ ಮಹಿಮರೆಲ್ಲ ತಾವು ಇರುವೆಡೆಯಲ್ಲಿ ದೇವರನ್ನು ಕಾಣಲಾಗದೆ ತೀರ್ಥ ಯಾತ್ರೆ ಕೈಗೊಳ್ಳಲಿಲ್ಲ. ಸಾಮಾನ್ಯ ಜನರಿಗೆ ತೀರ್ಥ ಯಾತ್ರೆಯ ಮಹತ್ವವನ್ನು ತಿಳಿಸುವುದಕ್ಕೊಸ್ಕರವಾಗಿ ತೀರ್ಥ ಯಾತ್ರೆ ಕೈಗೊಂಡರು.

ಪ್ರಸಿದ್ದ ಸಂತರಾದ ಜ್ಞಾನೇಶ್ವರ ಮಹಾರಾಜ ಹಾಗೂ ನಾಮದೇವ ರವರು ಪ್ರಾರಂಭಿಸಿದ "ವಾರಕರಿ ಸಂಪ್ರದಾಯ" ವು ದೇಶದಾದ್ಯಂತ ಪಾಂಡುರಂಗನ ಮಹಿಮೆಯನ್ನು ಕೊಂಡಾಡುತ್ತಾ ಪ್ರತಿ ವರ್ಷವೂ ಭಕ್ತರು ಪಂಡರಾಪುರ ಯಾತ್ರೆ ಮಾಡುವ ಪದ್ದತಿಯನ್ನು ಆಚರಣೆಗೆ ತಂದರು. ಈ ಸಂಪ್ರದಾಯವನ್ನು ಮುಂದೆ ಸಂತ ಏಕನಾಥ ಮತ್ತು ಸಂತ ತುಕಾರಾಮ ಜನಪ್ರಿಯಗೊಳಿಸಿದರು. ಮರಾಠಿಯಲ್ಲಿ "ವಾರಕರಿ" ಎಂದರೆ "ಯಾತ್ರೆಯನ್ನು ಕೈಗೊಳ್ಳುವವನು" ಎಂದು ಅರ್ಥ. ತೀರ್ಥಯಾತ್ರೆಯ ಉದ್ದೇಶವೇನೆಂದರೆ ಭಕ್ತನು ದೇವರನ್ನು ಹೊರಗಿನ ಕಣ್ಣುಗಳಿಂದ ನೋಡಿ ಅಂತಚಕ್ಷುಗಳಿಂದ ಪ್ರತಿಯೊಬ್ಬ ಮನುಷ್ಯನಲ್ಲೂ ದೇವರನ್ನು ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು.  

ಆದರೆ ನಾವುಗಳು ಒಂದು ವಿಷಯವನ್ನು ಚೆನ್ನಾಗಿ ಗಮನಿಸಬೇಕು. ಅದೇನೆಂದರೆ, ಪುರಾಣಗಳು ಹಾಗೂ ಸಂತರು, ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಮತ್ತು ನಮ್ಮನ್ನು ನಾವು ಅರಿತುಕೊಳ್ಳಲು ತೀರ್ಥಯಾತ್ರೆ ಕೈಗೊಳ್ಳಬೇಕೆಂದು ಹೇಳಿದರೇ ವಿನಹ  ನಮ್ಮ ಪಾಪ ಕರ್ಮಗಳನ್ನು ತೊಳೆದುಕೊಳ್ಳುವುದಕ್ಕಾಗಿ ಅಥವಾ ಮೋಕ್ಷಕ್ಕಾಗಿ ಅಲ್ಲ. ಈ ರೀತಿಯ ಮೂಢನಂಬಿಕೆಗಳನ್ನು ತೀರ್ಥಕ್ಷೇತ್ರಗಳ ಪುರೋಹಿತರು ಹೆಚ್ಹು ಹೆಚ್ಹು ಜನರು ಬರಲೆಂದು ಹುಟ್ಟು ಹಾಕಿದರು. ಮನುಷ್ಯನು ಪ್ರತಿಕ್ಷಣವೂ ಪಾಪ ಕರ್ಮಗಳನ್ನೇ ಮಾಡಿ ತೀರ್ಥಕ್ಷೇತ್ರಗಳಲ್ಲಿ ಮಿಂದು ಬಂದರೆ ಅವನ ಪಾಪ ತೊಳೆದು ಹೋಗುವುದಿಲ್ಲವೆಂದು ಶ್ರೇಷ್ಠ ಸಂತರು ಹಾಗೂ ಪುರಾಣಗಳು ಖಡಾಖಂಡಿತವಾಗಿ ತಿಳಿಸುತ್ತಾರೆ. ದೇವಿ ಭಾಗವತವು "ಯಾವ ಮನುಷ್ಯನು ಅಂತರಂಗ ಶುದ್ದಿಯಿಂದ ತೀರ್ಥ ಯಾತ್ರೆ ಮಾಡುವನೋ ಅವನು ಮಾತ್ರ ಯಾತ್ರೆಯ ಪ್ರಯೋಜನ ಪಡೆಯುತ್ತಾನೆ. ಪಾಪಿಷ್ಟನು ಯಾತ್ರೆ ಮಾಡಿದರೆ ಅವನ ಪಾಪ ಇನ್ನಷ್ಟು ಹೆಚ್ಚುತ್ತದೆ ಹೊರತು ಪಾಪ ತೊಳೆದು ಹೋಗುವುದಿಲ್ಲ" ಎಂದು ತಿಳಿಸುತ್ತದೆ.

ಪ್ರಸಿದ್ದ ಗೋದಾವರಿ ನದಿಯ ತೀರದಲ್ಲಿರುವ ಶಿರಡಿ ಕ್ಷೇತ್ರದಲ್ಲಿ ೬೦ ವರ್ಷಗಳಿಗೂ ಹೆಚ್ಚು ಕಾಲ  ಪರಬ್ರಹ್ಮ ಸ್ವರೂಪಿಯಾದ, ದತ್ತವತಾರಿಯಾದ ಸಾಯಿಬಾಬಾರವರು ಜೀವಿಸಿ ಆ ಕ್ಷೇತ್ರವನ್ನು ಅತ್ಯಂತ ಪವಿತ್ರವಾದ ಪುಣ್ಯಭೂಮಿಯನ್ನಾಗಿಸಿದ್ದಾರೆ. ಆದುದರಿಂದ ಸಾಯಿಭಕ್ತರು ಪರಿಶುದ್ದವಾದ ಮನಸ್ಸಿನಿಂದ ಶಿರಡಿಯ ಯಾತ್ರೆಯನ್ನು ಪ್ರತಿ ವರ್ಷವೂ ತಪ್ಪದೆ ಮಾಡಿದರೆ, ಅವರ ಇಷ್ಟಾರ್ಥಗಳೆಲ್ಲವೂ ಸಿದ್ದಿಸುವುದು ಎಂಬುದರಲ್ಲಿ ಸಂಶಯವೇ ಇಲ್ಲ.

No comments:

Post a Comment