Tuesday, June 15, 2010


ಸಾಯಿ ಭಜನ ಗಾಯಕಿ - ಶ್ರೀಮತಿ ಎಂ.ಡಿ.ಪಲ್ಲವಿ -  ಕೃಪೆ - ಸಾಯಿ ಅಮೃತಧಾರಾ.ಕಾಂ 



ಶ್ರೀಮತಿ ಎಂ.ಡಿ. ಪಲ್ಲವಿಯವರದು ಬಹುಮುಖ ಪ್ರತಿಭೆ.ಶ್ರೀಮತಿ ಎಂ.ಡಿ.ಪಲ್ಲವಿ ಯವರು ಇಂಗ್ಲೀಷ್, ಪತ್ರಿಕೋದ್ಯಮ ಹಾಗೂ ಮನಶಾಸ್ತ್ರದಲ್ಲಿ ಪದವೀಧರರಾಗಿದ್ದಾರೆ. ಆಲ್ಲದೇ, ಹಿಂದುಸ್ತಾನಿ ಶಾಸ್ತ್ರಿಯ ಸಂಗೀತದಲ್ಲಿ ಬನಾರಸ್ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. ಪಲ್ಲವಿಯವರು ತಮ್ಮ ಸಂಗೀತ ಹಾಗೂ ಕಲಾ ಪ್ರಪಂಚದ ಬದುಕನ್ನು ರಂಗಭೂಮಿ, ಬೀದಿ ನಾಟಕಗಳೊಂದಿಗೆ ಪ್ರಾರಂಭ ಮಾಡಿದರು. ಇವರು ಟ್ರಾನ್ಸ್ಲೇಶನ್, ಹಾಮ್ಲೆಟ್, ಮಾನಿಷಾಧ, ಫೈರ್ ಅಂಡ್ ರೈನ್, ಬಲಿದಾನ, ಮೈ ಫೈರ್ ಲೇಡಿ, ಗಾಜಿನ ಗೊಂಬೆಗಳು, ವಕ್ರ ಮತ್ತು ಗುಡ್ ವಿಮೆನ್ ಆಫ್ ಶುಜೆನ್ ಮತ್ತು ಇನ್ನು ಹಲವಾರು ಜನಪ್ರಿಯ ನಾಟಕಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. 

ಶ್ರೀಮತಿ ಎಂ.ಡಿ.ಪಲ್ಲವಿಯವರು ಬಾಲ್ಯದಲ್ಲಿ ತಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಿರಾನಾ ಘರಾನಾದ ಪ್ರಸಿದ್ದ ಹಿಂದೂಸ್ತಾನಿ ಸಂಗೀತಗಾರರಾದ ಪಂಡಿತ್ ರಾಮ ರಾವ್ ನಾಯಕ್ ರವರ ಬಳಿ ಕಲಿತರು. ನಂತರದ ದಿನಗಳಲ್ಲಿ ಬೆಂಗಳೂರಿನಲ್ಲಿ ಗ್ವಾಲಿಯರ್ ಘರಾನಾ ದ ಪ್ರಸಿದ್ದ ಹಿಂದುಸ್ತಾನಿ ವಿದ್ವಾಂಸರಾದ ಪಂಡಿತ್ ಓಂಕಾರ್ ನಾಥ್  ಠಾಕೂರ್ ರವರ ಶಿಷ್ಯರಾದ ಪಂಡಿತ್ ರಾಜ್ ಬಾವು ಸೊಂಟಕ್ಕೆ ಯವರ ಬಳಿ ಕಲಿತರು. ಇವರು ಸುಗಮ ಸಂಗೀತವನ್ನು ಕನ್ನಡದ ಪ್ರಸಿದ್ದ ಸುಗಮ ಸಂಗೀತ ಗಾಯಕರಾದ ದಿವಂಗತ ಮೈಸೂರು ಅನಂತಸ್ವಾಮಿ ಹಾಗೂ ಅವರ ಪುತ್ರರಾದ ದಿವಂಗತ ರಾಜು ಅನಂತಸ್ವಾಮಿಯವರ ಬಳಿ ಕಲಿತರು.

ಶ್ರೀಮತಿ ಪಲ್ಲವಿಯವರು "ಬಿಂಬ" ಎಂಬ ಪ್ರಸಿದ್ದ ಸಾಂಸ್ಕೃತಿಕ ಕಲಾ ಶಾಲೆಯಲ್ಲಿ ಶನಿವಾರದ ದಿನ ಮಕ್ಕಳಿಗೆ ಸಂಗೀತವನ್ನು ಹೇಳಿಕೊಟ್ಟು ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ತಮ್ಮ ಸಂಗೀತಗಾರ ಪತಿ ಶ್ರೀಯುತ ಅರುಣ್ ಕುಮಾರ್ ರವರ ಜೊತೆ ಸೇರಿ "ಸಮುದ್ರ" ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಕೂಡ ಆರಂಭಿಸಿದ್ದಾರೆ.

ಶ್ರೀಮತಿ ಪಲ್ಲವಿಯವರು ಜಾಹೀರಾತು ಗಳಿಗೆ ತಮ್ಮ ದ್ವನಿಯನ್ನು ನೀಡಿದ್ದಾರೆ. ಆಲ್ಲದೇ, ಸುಗಮ ಸಂಗೀತ, ಭಕ್ತಿ ಗೀತೆಗಳು, ನಾಟಕಗಳು ಹಾಗೂ ಚಲನಚಿತ್ರ ಗೀತೆಗಳಲ್ಲಿ ಹಾಡಿದ್ದಾರೆ. ಇವರ ದ್ವನಿಯಲ್ಲಿನ ಮಾಧುರ್ಯವನ್ನು ಜನರು ಪ್ರಸಿದ್ದ ಚಲನಚಿತ್ರ ನಿರ್ದೇಶಕ ಶ್ರೀಯುತ ನಾಗಾಭರಣ ರವರ "ಸಿಂಗಾರೆವ್ವ" ದಲ್ಲಿ ಗುರುತಿಸಿದರು.  ಅವರ ಇತ್ತೀಚೆಗೆ ಹಾಡಿದ್ದ "ದುನಿಯಾ" ಚಿತ್ರದ "ನೋಡಯ್ಯ ಕ್ವಾಟೆ ಲಿಂಗವೇ" ಎಂಬ ಹಾಡು ಬಹಳ ಜನಪ್ರಿಯವಾಯಿತಷ್ಟೇ ಆಲ್ಲದೇ ಪಲ್ಲವಿಯವರಿಗೆ ರಾಜ್ಯ ಸರ್ಕಾರದ "ಶ್ರೇಷ್ಟ ಗಾಯಕಿ" ಪ್ರಶಸ್ತಿಯನ್ನು ತಂದು ಕೊಟ್ಟಿದೆ. ಶ್ರೀಮತಿ ಪಲ್ಲವಿಯವರು ಪ್ರಸಿದ್ದ ನೃತ್ಯ ಪಟುಗಳಾದ ಶ್ರೀಮತಿ ಶೋಭನ ಚಂದ್ರಕುಮಾರ್, ಶ್ರೀಮತಿ ಪದ್ಮಿನಿ ರವಿ, ಶ್ರೀಮತಿ ನಿರುಪಮ ರಾಜೇಂದ್ರ ಇವರುಗಳ ನೃತ್ಯಗಳಿಗೆ ತಮ್ಮ ಸುಮಧುರ ಧ್ವನಿಯನ್ನು ನೀಡಿದ್ದಾರೆ. ಆಲ್ಲದೇ, ಇವರು ಅಂತರಾಷ್ಟ್ರೀಯ ಕಲಾ ಉತ್ಸವಗಳಲ್ಲಿ ಪಾಲ್ಗೊಂಡು ಒಳ್ಳೆಯ ಹೆಸರನ್ನು ಗಳಿಸಿದ್ದಾರೆ.

ಇವರು ಭಾರತದ ಪ್ರಸಿದ್ದ ಸಂಗೀತ ದಿಗ್ಗಜರಾದ ದಿವಂಗತ ಮೈಸೂರು ಅನಂತ ಸ್ವಾಮಿ, ಎಸ್.ಪಿ. ಬಾಲಸುಬ್ರಮಣ್ಯಂ, ಕೆ.ಜೆ.ಜೇಸುದಾಸ್, ದಿವಂಗತ ಸಿ. ಅಶ್ವಥ್, ಅಮಿತ್ ಹೇರಿ, ರಂಜಿತ್ ಬರೋಟ್, ಗಣೇಶ್ ಕುಮರೇಶ್, ಕೀತ್ ಪೀಟರ್ಸ್, ಆನೂರ್ ಅನಂತ ಕೃಷ್ಣ ಶರ್ಮ, ತೌಫಿಕ್ ಕುರೇಶಿ, ವಿಕ್ರಂ ಘೋಷ್, ಅಮಾನ್ ಮತ್ತು ಅಯ್ಯನ್ ಅಲಿ ಸಹೋದರರು, ರಾಜೇಶ್ ವೈದ್ಯ ಇನ್ನು ಮುಂತಾದವರೊಂದಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಇವರ ಕೆಲವು ಸಾಧನೆಗಳು ಈ ಕೆಳಕಂಡಂತೆ ಇವೆ:


  • ವಿದೂಷಿ ಕಾಂಚನ ಶ್ರೀರಂಜಿನಿ ಹಾಗೂ ವಿದೂಷಿ ಮಾನಸಿ ಪ್ರಸಾದ್ ರವರೊಂದಿಗೆ ದ್ವಂದ್ವ ಗಾಯನ ಹಾಗೂ ಜುಗಲ್ ಬಂದಿಗಳಲ್ಲಿ ಪಾಲ್ಗೊಂಡಿದ್ದಾರೆ.

  • ಕನ್ನಡದ ಪ್ರಸಿದ್ದ ಸಂಗೀತ ನಿರ್ದೇಶಕರುಗಳಾದ ದಿವಂಗತ ವಿಜಯ ಭಾಸ್ಕರ್, ಹಂಸಲೇಖ, ಪಂಡಿತ್ ವಿಶ್ವ ಮೋಹನ್ ಭಟ್, ಮನೋಹರ್, ದಿವಂಗತ ಮೈಸೂರು ಅನಂತ ಸ್ವಾಮಿ, ದಿವಂಗತ ಸಿ. ಅಶ್ವಥ್ ರವರ ಸಂಗೀತ ನಿರ್ದೇಶನಗಳಲ್ಲಿ ಹಾಡಿದ್ದಾರೆ.

  • ಕಳೆದ ೧೨ ವರ್ಷಗಳಿಂದ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಕರ್ನಾಟಕದಾದ್ಯಂತ ಆಲ್ಲದೇ ದೇಶ ವಿದೇಶಗಳಲ್ಲೂ ನೀಡುತ್ತ ಬಂದಿದ್ದಾರೆ.

  • ಹಲವು ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳಿಗೆ ತಮ್ಮ ದ್ವನಿಯನ್ನು ನೀಡಿದ್ದಾರೆ.

  • ಪ್ರಸಿದ್ದ ರಂಗಭೂಮಿ ಪ್ರಯೋಗಗಳಾದ ತುಘಲಕ್, ಮೊಢ ಇದು ನಂಬಿಕೆ, ಮಿಸ್. ಸೇವಂತಿ, ಮೊಕಬಲಿ, ಮತ್ತು ಮಾನಿಷಾಧ ಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

  • ತಮ್ಮ ಬಾಲ್ಯದಿಂದಲೇ ರಂಗಭೂಮಿ ಕಲಾವಿದರಾಗಿ ಅಭಿನಯಿಸಿದ್ದಾರೆ. ಹಲವು ಪ್ರಸಿದ್ದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

  • ಬೀದಿ ನಾಟಕಗಳಲ್ಲಿ ಭಾಗವಹಿಸಿದ್ದಾರೆ.

  • ಅನೇಕ ರಂಗಭೂಮಿ ಕಾರ್ಯಾಗಾರಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದ್ದಾರೆ.

  • ತಮ್ಮ ತಾತನವರಾದ ಪ್ರಸಿದ್ದ ರಂಗಭೂಮಿ ಕಲಾವಿದ ಶ್ರೀಯುತ ಎ.ಎಸ್.ಮೊರ್ತಿ ಯವರ ಕಲಾ ಶಾಲೆಯಾದ "ಅಭಿನಯ ತರಂಗ" ದಲ್ಲಿ ನಡೆಯುವ ಎಲ್ಲ ನಾಟಕಗಳಲ್ಲಿ ಇವರು ಚಿಕ್ಕಂದಿನಿಂದ ಸಕ್ರೀಯವಾಗಿ ಭಾಗವಹಿಸಿದ್ದಾರೆ.

  • ಹಲವಾರು ಜನಪ್ರಿಯ ಟಿವಿ ಧಾರಾವಾಹಿಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

  • ಪ್ರಸಿದ್ದ ಕನ್ನಡ ಧಾರಾವಾಹಿಗಳಾದ ಟಿ.ಎನ್.ಸೀತಾರಾಂ ರವರ  "ಮಾಯಾಮೃಗ"  "ಮುಕ್ತ ಮುಕ್ತ" ದಲ್ಲಿ ತಮ್ಮ ಮನೋಜ್ಞ ಅಭಿನಯ ನೀಡಿದ್ದಾರೆ.

  • ಪ್ರಸಿದ್ದ ಟಿವಿ ಕಾರ್ಯಕ್ರಮವಾದ "ಗರ್ವ" ದಲ್ಲಿ ಭಾಗವಹಿಸಿದ್ದೆ ಆಲ್ಲದೇ ಪ್ರಸಿದ್ದ "ಆರ್ಯಭಟ ಶ್ರೇಷ್ಠ ನಟಿ" ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

  • ೨೦೦೩ ರ ಪ್ರಸಿದ್ದ ಇಂಗ್ಲೀಷ್ ಚಲನಚಿತ್ರ ವಾದ "ಸ್ಟಂಬಲ್" ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  • ಕನ್ನಡದ ಪ್ರಸಿದ್ದ ನಟಿ ಆರತಿಯವರ ನಿರ್ದೇಶನದ "ಮಿಠಾಯಿ ಮನೆ" ಚಿತ್ರದಲ್ಲಿ ಅಭಿನಯಿಸಿದ್ದಾರೆ.

  • ಜೀ ಟಿವಿ ಕನ್ನಡದ ಪ್ರಸಿದ್ದ ಕಾರ್ಯಕ್ರಮವಾದ "ಸರಿಗಮಪ" ದ ನಿರ್ವಹಣೆಯನ್ನು ೩ ಬಾರಿ  ಹಾಗೂ ಮತ್ತೊಂದು ಪ್ರಸಿದ್ದ ಕಾರ್ಯಕ್ರಮವಾದ  "ಗುಣಗಾನ" ಕಾರ್ಯಕ್ರಮವನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ.

  • ಪ್ರಸಿದ್ದ ನಿರ್ದೇಶಕ ಪ್ರಕಾಶ್ ಬೆಳವಾಡಿ ಯವರ ಟಿವಿ ಧಾರಾವಾಹಿ "ಇಲ್ಲಿರುವುದು ಸುಮ್ಮನೆ" ಯಲ್ಲಿ ಅಭಿನಯಿಸಿದ್ದಾರೆ.
ಶ್ರೀಮತಿ ಎಂ.ಡಿ.ಪಲ್ಲವಿಯವರಿಗೆ ಬಂದಿರುವ ಪ್ರಶಸ್ತಿಗಳು ಈ ಕೆಳಕಂಡಂತೆ ಇವೆ:

  1. ೨೦೦೨ ರ ಅತ್ಯುತ್ತಮ ಗಾಯಕಿ ಅತ್ರಿ ಪ್ರಶಸ್ತಿ.
  2. ೨೦೦೩ ರ ಅತ್ಯುತ್ತಮ ಗಾಯಕಿ ಸೂರ್ಯೋದಯ ಟ್ರಸ್ಟ್ ಪ್ರಶಸ್ತಿ.
  3. ೨೦೦೪ ರ ಚಿತ್ರ ರಸಿಕರ ಸಂಘದ ಅತ್ಯುತ್ತಮ ಉದಯೋನ್ಮುಖ ಗಾಯಕಿ ಪ್ರಶಸ್ತಿ.
  4. ೨೦೦೬ ರ ಅತ್ಯುತ್ತಮ ಗಾಯಕಿ ಸಿನಿಗಂಧ ಪ್ರಶಸ್ತಿ.
  5. ೨೦೦೭ ರ ಅತ್ಯುತ್ತಮ ಗಾಯಕಿ ಆರ್ಯಭಟ ಪ್ರಶಸ್ತಿ.
  6. ೨೦೦೭ ರ ಅತ್ಯುತ್ತಮ ಗಾಯಕಿ ರಾಜ್ಯ ಪ್ರಶಸ್ತಿ.
ಶ್ರೀಮತಿ ಎಂ.ಡಿ.ಪಲ್ಲವಿಯವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:

ವಿಳಾಸ: ನಂ.೫, ಕಲಾಮಂದಿರ, ಎ.ಎನ್. ಸುಬ್ಬರಾವ್ ರಸ್ತೆ, ಹನುಮಂತ ನಗರ, ಬೆಂಗಳೂರು-೫೬೦ ೦೧೯.

ದೂರವಾಣಿ: ೯೮೪೫೦ - ೬೮೫೬೬

ವೆಬ್ ಸೈಟ್ : http://mdpallavi.com/

No comments:

Post a Comment