Thursday, September 18, 2014

ರಹತಾದ ವೀರಭದ್ರ ಮಂದಿರ - ಕೃಪೆ: ಸಾಯಿಅಮೃತಧಾರಾ. ಕಾಂ

ಈ ಸುಪ್ರಸಿದ್ಧ ವೀರಭದ್ರ ಮಂದಿರವು ಶಿರಡಿಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿರುವ ರಹತಾ ಗ್ರಾಮದಲ್ಲಿದೆ.



ಶ್ರೀ ಸಾಯಿ ಸಚ್ಚರಿತ್ರೆಯ 5ನೇ ಅಧ್ಯಾಯದಲ್ಲಿ ಈ ಮಂದಿರದ ಬಗ್ಗೆ ವಿಶೇಷ ಉಲ್ಲೇಖವನ್ನು ಮಾಡಲಾಗಿದ್ದು ಅದು ಈ ರೀತಿಯಿದೆ: ಒಮ್ಮೆ ಅಹಮದ್ ನಗರದಿಂದ ಜವಾಹರ ಆಲಿ ಎಂಬ ಫಕೀರನು ತನ್ನ ಶಿಷ್ಯರೊಂದಿಗೆ ರಹತಾಕ್ಕೆ ಬಂದು ಈ ವೀರಭದ್ರ ಮಂದಿರದ ಪಕ್ಕದಲ್ಲಿದ್ದ ದೊಡ್ಡ ಕೊಠಡಿಯಲ್ಲಿ ಬಿಡಾರ ಹೂಡಿದನು. ಆ ಫಕೀರನು ಒಳ್ಳೆಯ ವಿದ್ವಾಂಸನಾಗಿದ್ದು ತನ್ನ ಮಧುರವಾದ ಕಂಠದಿಂದ ಕುರಾನ್ ಅನ್ನು ಕಂಠಪಾಠ  ಮಾಡಿದ ಹಾಗೆ ಹೇಳುತ್ತಿದ್ದನು. ಹಾಗಾಗಿ ಆ ಗ್ರಾಮದ ಅನೇಕ ವಿದ್ವಾಂಸರು ಹಾಗೂ ಜನರು ಅವನ ಬಳಿಗೆ ಬರುತ್ತಿದ್ದರು ಹಾಗೂ ಅವನನ್ನು ಗೌರವದಿಂದ ಕಾಣುತ್ತಿದ್ದರು. ಅಂತಹ ಜನರ ಸಹಾಯದಿಂದ ಇದೇ ವೀರಭದ್ರ ಮಂದಿರದ ಎದುರುಗಡೆಯಲ್ಲಿ ಈದ್ಗಾ (ಮುಸ್ಲಿಮರು ಎದುರಿನಲ್ಲಿ ಕುಳಿತು ಪ್ರಾರ್ಥನೆ ಮಾಡುವ ಗೋಡೆ) ಕಟ್ಟಿಸಲು ಬಹಳ ಪ್ರಯತ್ನಪಟ್ಟನು. ಈ ವಿಷಯದಲ್ಲಿ ಕೆಲವರೊಡನೆ ಮನಸ್ತಾಪವಾದ ಕಾರಣ ಅವನು ರಹತಾವನ್ನು ಬಿಟ್ಟು ಶಿರಡಿಗೆ ಹೋಗಿ ನೆಲೆಸಬೇಕಾಯಿತು. ಅಂತೆಯೇ ಆ ಫಕೀರನು ಶಿರಡಿಗೆ ಬಂದು ಬಾಬಾರವರೊಂದಿಗೆ ಮಸೀದಿಯಲ್ಲಿ ವಾಸಿಸಲು ಪ್ರಾರಂಭಿಸಿದನು. ಫಕೀರನ ಸಿಹಿ ನುಡಿಗಳಿಗೆ ಗ್ರಾಮದ ಹಲವು ಜನರು ಮಾರು ಹೋದರು. ಆ ಫಕೀರನು ಬಾಬಾರವರನ್ನು ತನ್ನ ಶಿಷ್ಯನೆಂದು ಭಾವಿಸಿದನು. ಬಾಬಾ ಇದಕ್ಕೆ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ. ಅಲ್ಲದೇ ಆ ಫಕೀರನ ಶಿಷ್ಯನಾಗಲು ಸಂತೋಷದಿಂದ ಒಪ್ಪಿಕೊಂಡು ಅವನ ಚೇಲಾನಂತೆ ವರ್ತಿಸುತ್ತಿದ್ದರು. ಕೆಲವು ದಿನಗಳ ನಂತರ ಗುರು ಮತ್ತು ಶಿಷ್ಯರಿಬ್ಬರೂ ರಹತಾಕ್ಕೆ ಹೋಗಿ ನೆಲೆಸಬೇಕೆಂದು ತೀರ್ಮಾನಿಸಿದರು. ಗುರುವಿಗೆ ತನ್ನ ಶಿಷ್ಯನ ಯೋಗ್ಯತೆ ತಿಳಿದಿರಲಿಲ್ಲ. ಆದರೆ ಶಿಷ್ಯನಿಗೆ ಮಾತ್ರ ಗುರುವಿನ ಚೆನ್ನಾಗಿ ತಿಳಿದಿತ್ತು. ಆದರೂ ಶಿಷ್ಯನು ಆ ಫಕೀರನನ್ನು ಕೀಳಾಗಿ ಕಾಣದೆ ತನ್ನ ಗುರುವಿನ ಎಲ್ಲಾ ಕೆಲಸಗಳನ್ನು ಜಾಗರೂಕತೆಯಿಂದ ಗಮನಿಸುತ್ತಾ ಅವನು ಹೇಳುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದನು. ಅವರಿಬ್ಬರೂ ಆಗಾಗ್ಗೆ ಶಿರಡಿಗೆ ಬಂದು ಹೋಗುತ್ತಿದ್ದರು. ಆದರೆ ಅವರ ಮುಖ್ಯ ವಾಸಸ್ಥಾನ ರಹತಾ ಆಗಿತ್ತು. ಶಿರಡಿಯ ಬಾಬಾರವರ ಭಕ್ತರಿಗೆ ಇದು ಸಮ್ಮತವಾಗಿರಲಿಲ್ಲ. ಆದ್ದರಿಂದ ಬಾಬಾರವರನ್ನು ಶಿರಡಿಗೆ ವಾಪಸ್ ಕರೆತರುವ ಸಲುವಾಗಿ ಅವರೆಲ್ಲರೂ ಗುಂಪು ಕಟ್ಟಿಕೊಂಡು ಹೋಗಿ ಬಾಬಾರವರು ಇರುವಲ್ಲಿಗೆ ಹೊರಟರು. ಬಾಬಾರವರು ಅವರೆಲ್ಲರನ್ನೂ ಇದ್ಗಾ ಬಳಿ ಸಂದರ್ಶಿಸಿದಾಗ ಅವರು "ನನ್ನ ಫಕೀರನು ಬಹಳ ಕೋಪಿಷ್ಠ. ಅವನು ಬರುವುದರೊಳಗಾಗಿ ಶಿರಡಿಗೆ  ಹಿಂತಿರುಗಿ" ಎಂದು ಬುದ್ಧಿ ಹೇಳಿದರು. ಅವರುಗಳು ಹಾಗೆ ಮಾತನಾಡುವುದರೊಳಗಾಗಿ ಆ ಫಕೀರನು ಅಲ್ಲಿಗೇ ಬಂದನು. ನಂತರ ಅವರಿಗೆ ಹಾಗೂ ಆ ಫಕೇರನಿಗೆ ಬಹಳವೇ ಮಾತುಕತೆಗಳಾದವು. ಕೊನೆಗೆ ಗುರು ಮತ್ತು ಶಿಷ್ಯರಿಬ್ಬರೂ ಶಿರಡಿಗೆ ಹಿಂತಿರುಗಬೇಕೆಂದು ತೀರ್ಮಾನವಾಯಿತು. ಅಂತೆಯೇ ಅವರಿಬ್ಬರೂ ಶಿರಡಿಗೆ ಹಿಂತಿರುಗಿದರು. ಕೆಲವು ದಿನಗಳ ನಂತರ ಶಿರಡಿಯ ದೇವಿದಾಸ ಎಂಬುವರಿಂದ  ಆ ಫಕೀರನು ಸೋಲಿಸಲ್ಪಟ್ಟು ಶಿರಡಿಯನ್ನು ಬಿಟ್ಟು ಓಡಿ ಹೋಗಿ ಬಿಜಾಪುರದಲ್ಲಿ ನೆಲೆಸಿದನು. ಮತ್ತೆ ಕೆಲವು ವರ್ಷಗಳ ನಂತರ ಶಿರಡಿಗೆ ವಾಪಸ್ ಬಂದು ಬಾಬಾರವರ ಮುಂದೆ ತಲೆಬಾಗಿ ಅವರ ಧ್ಯಾನವನ್ನು ಮಾಡತೊಡಗಿದನು. "ನಾನು ಗುರು, ಬಾಬಾರವರು ನನ್ನ ಶಿಷ್ಯ" ಎಂಬ ದುರಭಿಮಾನವು ಆ ಫಕೀರನನ್ನು ಬಿಟ್ಟು ಓಡಿತ್ತು. ಅವನು ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಕೊಂಡನು. ಬಾಬಾರವರು ಸಹ ಅವನನ್ನು ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಸತ್ಕರಿಸಿದರು.  ಈ ಕಥೆಯಲ್ಲಿ ಬಾಬಾರವರು ಮನುಷ್ಯನು ಹೇಗೆ ತನ್ನ ಅಹಂಕಾರವನ್ನು ತೊರೆಯಬಹುದೆಂದು ನಿದರ್ಶಿಸಿದ್ದಾರೆ. ಈ ಕಥೆಯು ಬಾಬಾರವರ ಪರಮ ಭಕ್ತ ಮಹಾಳಸಾಪತಿಯವರಿಂದ ತಿಳಿದುಬಂಡಿರುತ್ತದೆ. 

ಮಂದಿರದ ವಿಳಾಸ: 

ಶ್ರೀ ವೀರಭದ್ರ ಮಂದಿರ  
ರಹತಾ ಗ್ರಾಮ-423 107, 
ಅಹಮದ್ ನಗರ ಜಿಲ್ಲೆ,  
ಮಹಾರಾಷ್ಟ್ರ, ಭಾರತ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment