Thursday, February 13, 2014

ಸಾಯಿ ಮಹಾಭಕ್ತೆ ಶ್ರೀಮತಿ ಚಂದ್ರಾಬಾಯಿ ಬೋರ್ಕರ್ ರವರ ಸಾಯಿಬಾಬಾ ಮಂದಿರ - ಶ್ರೀ ರಾಮ್ ಸಾಯಿ ನಿವಾಸ, ತಿಲಕ್ ಮಂದಿರ ರಸ್ತೆ, ಅಂಚೆ ಕಚೇರಿ ಹತ್ತಿರ, ವಿಲೇ ಪಾರ್ಲೆ, ಮುಂಬೈ- 400 057, ಮಹಾರಾಷ್ಟ್ರ, ಭಾರತ


ಸಾಯಿ ಭಕ್ತರು ಮುಂಬೈನ ಹಳೆಯ ವಸಾಹತುಗಳಾದ ಬಾಂದ್ರಾ ದಿಂದ ವಿಲೇ ಪಾರ್ಲೆಯವರೆಗೆ ಹುಡುಕಿಕೊಂಡು ಹೋದರೆ ದಾರಿಯಲ್ಲಿ ಹಲವಾರು ಸುಪ್ರಸಿದ್ಧ ಸಾಯಿ ಮಹಾಭಕ್ತರ ಮನೆಗಳು ಸಿಗುತ್ತವೆ. ಶ್ರೀ ಸಾಯಿ ಸಚ್ಚರಿತ್ರೆಯ ಲೇಖಕರಾದ ಶ್ರೀ.ಗೋವಿಂದ ರಘುನಾಥ ದಾಭೋಲ್ಕರ್ ಆಲಿಯಾಸ್ ಹೇಮಾಡಪಂತರು ಬಾಂದ್ರಾದ ನಿವಾಸಿಯಾಗಿದ್ದರು. ವಕೀಲರಾದ ಶ್ರೀ ಹರಿ ಸೀತಾರಾಮ ದೀಕ್ಷಿತ್ ಆಲಿಯಾಸ್ ಕಾಕಾಸಾಹೇಬ್ ದೀಕ್ಷಿತ್ ರವರು ವಿಲೇ ಪಾರ್ಲೆಯ ನಿವಾಸಿಯಾಗಿದ್ದರು ಸಾಯಿ ಸಚ್ಚರಿತ್ರೆ, 20ನೇ  ಅಧ್ಯಾಯ, ಪುಟ ಸಂಖ್ಯೆ 106 ರಿಂದ 110 (7ನೇ  ಆವೃತ್ತಿ, 1974) ಪಾರಾಯಣ ಮಾಡಿದರೆ ಹೇಗೆ ಸಾಯಿಬಾಬಾರವರು ದಾಸಗಣುರವರ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವಿಲೇ ಪಾರ್ಲೆಯಲ್ಲಿದ್ದ  ಶ್ರೀ ಕಾಕಾ ಸಾಹೇಬ್ ದೀಕ್ಷಿತ್ ರವರ ಮನೆಯ ಕೆಲಸದವಳ ಬಳಿಗೆ ಕಳುಹಿಸಿದರು ಎಂಬ ವಿಷಯ ತಿಳಿಯುತ್ತದೆ.

1933ನೇ ಇಸವಿಯಲ್ಲಿ "ಶ್ರೀ ಸಾಯಿಬಾಬಾ ಆಫ್ ಶಿರಡಿ" ಎಂಬ ಆಂಗ್ಲ ಪುಸ್ತಕವನ್ನು ಬರೆದ ರಾವ್ ಬಹದ್ದೂರ್ ಎಂ.ಡಬ್ಲ್ಯೂ. ಪ್ರಧಾನ್ ರವರು ಸಂತಾಕ್ರೂಜ್ ನಲ್ಲಿ ವಾಸಿಸುತ್ತಿದ್ದರು. ಅದೇ ರೀತಿ ಶ್ರೀ ರಘುನಾಥ್ ರಾವ್ ತೆಂಡೂಲ್ಕರ್ ಮತ್ತು ಅವರ ಧರ್ಮಪತ್ನಿ ಸಾವಿತ್ರಿಬಾಯಿ, ಶ್ರೀ ರಾಮಚಂದ್ರ ಅತ್ಮಾರಾಂ ಆಲಿಯಾಸ್ ಬಾಬಾಸಾಹೇಬ್ ತರ್ಕಡ್ , ಶ್ರೀ.ಬಾಳಾರಾಮ್ ಮಾನಕರ್, ಶ್ರೀ ಬಾಳಾರಾಮ್ ಧುರಂಧರ್ ಹಾಗೂ ಶ್ರೀ ಸಾಯಿಬಾಬಾರವರ ದ್ವಾರಕಾಮಾಯಿ ಚಿತ್ರವನ್ನು ರಚಿಸಿದ ಶ್ರೀ.ಶ್ಯಾಮರಾವ್ ಜಯಕರ್ ರವರುಗಳು ಇದೇ ಸ್ಥಳದಲ್ಲಿ ವಾಸಿಸುತ್ತಿದ್ದರು. ಈ ಎಲ್ಲಾ ಮಹಾಭಕ್ತರ ಮನೆಗಳೂ ಇಲ್ಲಿರುವುದರಿಂದ ಈ ಸ್ಥಳವು ಪವಿತ್ರತೆಯನ್ನು ಪಡೆದಿದೆ ಎಂದೇ ಹೇಳಬಹುದು.

ವಿಲೇ ಪಾರ್ಲೆ ಪೂರ್ವದ ತಿಲಕ್ ಮಂದಿರದ ರಸ್ತೆಯಲ್ಲಿ "ಶ್ರೀ ರಾಮ್ ಸಾಯಿ ನಿವಾಸ" ಎಂಬ ಕಟ್ಟಡವಿದೆ. ನೀವು ಈ ಕಟ್ಟಡದ ಕಾಂಪೌಂಡ್ ಒಳಗೆ ಕಾಲಿಟ್ಟ ಕೂಡಲೇ ಕುಳಿತ ಭಂಗಿಯಲ್ಲಿ ಪ್ರತಿಷ್ಟಾಪಿಸಲಾಗಿರುವ ಸಾಯಿಬಾಬಾರವರ ಸುಂದರ ವಿಗ್ರಹವು ನಿಮ್ಮನ್ನು ಸ್ವಾಗತಿಸುತ್ತದೆ. ಈ ವಿಗ್ರಹವನ್ನು ಖ್ಯಾತ ಶಿಲ್ಪಿ ಶ್ರೀ ವಸಂತ್ ಗೋವೇಕರ್ ರವರು ಕೆತ್ತಿದ್ದಾರೆ. ಈ ವಿಗ್ರಹವನ್ನು ಕಟ್ಟಡದ ಮುಂಭಾಗದಲ್ಲಿರುವ ಖಾಲಿ ಸ್ಥಳದಲ್ಲಿನ ನಾಲ್ಕೂವರೆ ಅಡಿ ಎತ್ತರದ ವೇದಿಕೆಯ ಮೇಲೆ ಪ್ರತಿಷ್ಟಾಪಿಸಲಾಗಿದೆ. ಈ ಮಂದಿರವು ವಿಲೇ ಪಾರ್ಲೆಯ ಆಸುಪಾಸಿನಲ್ಲಿ ವಾಸಿಸುವ ಎಲ್ಲಾ ಸಾಯಿ ಭಕ್ತರ ಅಚ್ಚುಮೆಚ್ಚಿನ ತಾಣವಾಗಿದೆ. ಪ್ರತಿದಿನ ಈ ಸ್ಥಳಕ್ಕೆ ನೂರಾರು ಸಾಯಿಭಕ್ತರು ಬಂದು ದರ್ಶನ ಪಡೆದು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಸಾಯಿಬಾಬಾ ಮಂದಿರಗಳ ಹುಟ್ಟಿನ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹೇಗೆ ಸಾಯಿಬಾಬಾರವರು ತಮ್ಮದೇ ಆದ ರೀತಿಯಲ್ಲಿ ಭಕ್ತರಲ್ಲಿ ಸ್ಫೂರ್ತಿಯನ್ನು ತುಂಬಿ ಆಯಾ ಸ್ಥಳಗಳಲ್ಲಿ ಭಕ್ತಿಯನ್ನು ಪುನರುತ್ಥಾನ ಮಾಡಲು ದೇವಾಲಯಗಳ ನಿರ್ಮಾಣಕ್ಕೆ ಕಾರಣೀಭೂತರಾದರು ಎಂಬ ವಿಷಯ ಮನದಟ್ಟಾಗುತ್ತದೆ. ಈ ದೇವಾಲಯದ ಇತಿಹಾಸವೂ ಕೂಡ ಅದೇ ರೀತಿಯದ್ದಾಗಿದೆ. ಶ್ರೀಮತಿ ಚಂದ್ರಾಬಾಯಿ ಬೋರ್ಕರ್ ರವರು ಶ್ರೀ ಸಾಯಿಬಾಬಾರವರ ಅನನ್ಯ ಭಕ್ತೆಯಾಗಿದ್ದರು. ಇವರು ಆಗಾಗ್ಗೆ ಶಿರಡಿಗೆ ಹೋಗಿ ಅಲ್ಲಿ ಹೆಚ್ಚಿನ ಸಮಯವನ್ನು ಸಾಯಿ ಸನ್ನಿಧಿಯಲ್ಲಿ ಕಳೆಯುತ್ತಿದ್ದರು. ವಿಲೇ ಪಾರ್ಲೆಯ ಅನೇಕ ಸಾಯಿ ಭಕ್ತರು ಇವರ ಜೊತೆಯಲ್ಲಿ ಶಿರಡಿಗೆ ಆಗಾಗ್ಗೆ ಹೋಗಿ ಸಾಯಿಬಾಬಾರವರ ದರ್ಶನ, ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದರು. ಮತ್ತೊಬ್ಬ ಸಾಯಿ ಮಹಾಭಕ್ತರಾದ ಶ್ರೀ ನಾನಾ ಸಾಹೇಬ್ ಚಾಂದೋರ್ಕರ್ ರವರ ಧರ್ಮಪತ್ನಿ ಶ್ರೀಮತಿ.ಶಾರದಾಬಾಯಿ ಹಾಗೂ ಚಂದ್ರಾಬಾಯಿ ಬೋರ್ಕರ್ ಒಳ್ಳೆಯ ಸ್ನೇಹಿತೆಯರಾಗಿದ್ದರು. ಇವರಿಬ್ಬರು ಅನೇಕ ಬಾರಿ ಶಿರಡಿಗೆ ಹೋಗಿ ಸಾಯಿಬಾಬಾರವರ ದರ್ಶನ ಮಾಡಿ ಬಂದಿದ್ದೂ ಉಂಟು. ಸಾಯಿಬಾಬಾರವರ ಅಚ್ಚುಮೆಚ್ಚಿನ ಭಕ್ತರಾಗಿದ್ದ ತಾತ್ಯಾ ಕೋತೆ ಪಾಟೀಲ್ ರವರನ್ನು ಚಂದ್ರಬಾಯಿ ಬೋರ್ಕರ್ ರವರು ತಮ್ಮ ಒಡಹುಟ್ಟಿದ ಸಹೋದರನಂತೆ ಕಾಣುತ್ತಿದ್ದರು. ಸಾಯಿಬಾಬಾರವರ ಆಶೀರ್ವಾದದ ಫಲದಿಂದ ತಾತ್ಯಾ ಹಾಗೂ ಚಂದ್ರಬಾಯಿ ಇಬ್ಬರೂ ಒಂದೇ ವರ್ಷದಲ್ಲಿ ಪುತ್ರರನ್ನು ಪಡೆದದ್ದು ಒಂದು ಸೋಜಿಗವೇ ಸರಿ. ಆಗ ಚಂದ್ರಾಬಾಯಿಯವರಿಗೆ ಐವತ್ತು ವರ್ಷಗಳಾಗಿತ್ತು. ಚಂದ್ರಬಾಯಿಯವರ ಅನನ್ಯ ಸಾಯಿಭಕ್ತಿ ಅವರನ್ನು ಹಲವಾರು ಬಾರಿ ಶಿರಡಿಗೆ ಕರೆದುಕೊಂಡು ಹೋಗಿದ್ದಷ್ಟೇ ಅಲ್ಲದೆ, ಸಾಯಿಬಾಬಾರವರ ದೇಹಾವಸನದ ಕೊನೆಯ ಕ್ಷಣಗಳಲ್ಲಿ ಅವರು ಸಾಯಿಯವರ ಬಳಿಯೇ ಇರುವಂತೆ ಮಾಡಿತು. ಸಾಯಿಬಾಬಾರವರ ಮಹಾಸಮಾಧಿಯ ಸಮಯದಲ್ಲಿ ಅವರ ಬಾಯಿಯಲ್ಲಿ ತುಳಸಿಯನ್ನು ಶ್ರೀಮತಿ.ಚಂದ್ರಾಬಾಯಿ ಬೋರ್ಕರ್ ರವರು ಅರ್ಪಣೆ ಮಾಡಿದ್ದರು.



ತಮಗೆ ಸಾಯಿಬಾಬಾರವರೊಂದಿಗೆ ಇದ್ದ ಹಲವಾರು ವರ್ಷಗಳ ಬಾಂಧವ್ಯದ ಕುರುಹಾಗಿ ಮುಂಬೈನ ವಿಲೇ ಪಾರ್ಲೆಯಲ್ಲಿರುವ ತಮ್ಮ ಸ್ಥಳದಲ್ಲಿ ಸಾಯಿಬಾಬಾರವರ ಮಂದಿರವನ್ನು ನಿರ್ಮಾಣ ಮಾಡಬೇಕೆಂದು ಶ್ರೀಮತಿ.ಚಂದ್ರಾಬಾಯಿಯವರು ಹಲವಾರು ವರ್ಷಗಳು ಪ್ರಯತ್ನಪಟ್ಟರೂ ಸಹ ಅವರ ಆಶೆ 1958 ಇಸವಿಯವರೆಗೂ ಕೈಗೂಡಿರಲಿಲ್ಲ. ಆ ವರ್ಷದ ಶ್ರೀರಾಮನವಮಿಯಂದು ಶ್ರೀ ಸಾಯಿಬಾಬಾರವರ ವಿಗ್ರಹವನ್ನು ಪಂಡಿತ್ ಪದ್ಮನಾಭಶಾಸ್ತ್ರೀ ಪಾಯಲೆಯವರು ತಮ್ಮ ಅಮೃತ ಹಸ್ತದಿಂದ ಚಂದ್ರಾಬಾಯಿ ಬೋರ್ಕರ್ ರವರ ಕಟ್ಟಡದ ಕಾಂಪೌಂಡ್ ನ ಒಳಗಡೆ ಪ್ರತಿಷ್ಟಾಪಿಸಿದರು. ಹಿಂದಿನ ರಾತ್ರಿಯಷ್ಟೇ ಚಂದ್ರಾಬಾಯಿ ಹಾಗೂ ಅವರ ಸೊಸೆ ಶ್ರೀಮತಿ.ಮಂಗಳಾಬಾಯಿಯವರಿಗೆ ವಿಗ್ರಹದ ಪ್ರತಿಷ್ಟಾಪನೆಯ ಬಗ್ಗೆ ಕನಸು ಬಿದ್ದಿತ್ತು. ಈ ಘಟನೆ ಶ್ರೀಮತಿ.ಮಂಗಳಾಬಾಯಿಯವರ ಜೀವನದಲ್ಲಿ ಒಂದು ಮಹತ್ವದ ಬದಲಾವಣೆಯನ್ನೇ ತಂದಿತು. ಆ ದಿನದಿಂದ ಶ್ರೀಮತಿ.ಮಂಗಳಾಬಾಯಿಯವರು ಪ್ರಾರ್ಥನಾ ಸಮಾಜವನ್ನು ಬಿಟ್ಟು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆಯಾಗಿ ಪರಿವರ್ತನೆಗೊಂಡರು. ತಮ್ಮ ಮನದ ಆಸೆಯಂತೆ ತಮ್ಮ ಸ್ವಗೃಹದಲ್ಲಿ ಸಾಯಿಬಾಬಾರವರ ವಿಗ್ರಹದ ಪ್ರತಿಷ್ಟಾಪನೆಯನ್ನು ಮಾಡಿದ ಶ್ರೀಮತಿ.ಚಂದ್ರಾಬಾಯಿಯವರು ಸರಿಯಾಗಿ ಎಂಟು ತಿಂಗಳ ನಂತರ ಅಂದರೆ ನವೆಂಬರ್ 1958 ರಲ್ಲಿ ಸಾಯಿಪಾದವನ್ನು ಸೇರಿದರು.



ಶ್ರೀ ಸಾಯಿಬಾಬಾರವರ ಪೂಜೆ ಹಾಗೂ ಆರತಿಯನ್ನು ಮಾಡುವ ಸಲುವಾಗಿ ಒಬ್ಬ ಪುರೋಹಿತರನ್ನು ಈ ಮಂದಿರದಲ್ಲಿ ನೇಮಿಸಲಾಗಿದೆ. ಶಿರಡಿಯಲ್ಲಿ ಆಚರಿಸುವ ಎಲ್ಲಾ ಪ್ರಮುಖ ಉತ್ಸವಗಳನ್ನು ಈ ಮಂದಿರದಲ್ಲೂ ಹಮ್ಮಿಕೊಳ್ಳಲಾಗುತ್ತದೆ. ಪ್ರಖ್ಯಾತ ಕೀರ್ತನಕಾರರಾದ ಶ್ರೀಮತಿ. ಭಾನುತಾಯಿ ದುಖಾಂಡೆ ಹಲವಾರು ವರ್ಷಗಳ ಕಾಲ ಈ ಮಂದಿರದಲ್ಲಿ ಕೀರ್ತನೆ ಹಾಗೂ ಹರಿಕಥೆಯನ್ನು ಮಾಡುತ್ತಿದ್ದರು. ಈ ಕಾರಣದಿಂದ ಹೆಚ್ಚು ಹೆಚ್ಚು ಜನರು ಸಾಯಿ ಭಕ್ತರಾಗಿ ಪರಿವರ್ತನೆಯಾಗುವಲ್ಲಿ ಸಹಾಯಕವಾಯಿತು.

ಪ್ರಸ್ತುತ ಶ್ರೀಮತಿ.ಮಂಗಳ ಬೋರ್ಕರ್ ರವರ ಸೊಸೆಯಾದ ಶ್ರೀಮತಿ.ಉಜ್ವಲ ಬೋರ್ಕರ್ ರವರು ಈ ಮಂದಿರದ ಉಸ್ತುವಾರಿಯನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.   ಪ್ರತಿಯೊಬ್ಬ ಸಾಯಿಭಕ್ತರೂ ಒಮ್ಮೆಯಾದರೂ ಈ ಸಾಯಿ ಮಂದಿರಕ್ಕೆ ಭೇಟಿ ಕೊಟ್ಟು ಸಾಯಿಬಾಬಾರವರ ಅನುಗ್ರಹಕ್ಕೆ ಪಾತ್ರರಾಗಬೇಕೆಂಬುದು ನಮ್ಮ ಹೆಬ್ಬಯಕೆ.

ಈ ಸಾಯಿ ಮಂದಿರದ ವಿಳಾಸ ಈ ಕೆಳಕಂಡಂತೆ ಇದೆ:

ಶ್ರೀ ರಾಮ್ ಸಾಯಿ  ನಿವಾಸ, 
ತಿಲಕ್ ಮಂದಿರ ರಸ್ತೆ, ಅಂಚೆ ಕಚೇರಿ ಹತ್ತಿರ, 
ವಿಲೇ ಪಾರ್ಲೆ, 
ಮುಂಬೈ- 400 057, 
ಮಹಾರಾಷ್ಟ್ರ, ಭಾರತ

(ಆಧಾರ: ಶ್ರೀ ಸಾಯಿಲೀಲಾ ಮಾಸಪತ್ರಿಕೆ (ಮರಾಠಿ) ನವೆಂಬರ್ 1975 ಸಂಚಿಕೆಯಲ್ಲಿ ಶ್ರೀ.ಚಂದ್ರಕಾಂತ್ ಡಿ. ಸಾಮಂತ್ ರವರು ಬರೆದ ಲೇಖನ)

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment