Tuesday, January 21, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ಉಚಿತ ಪ್ರಸಾದ ಭೋಜನ ಯೋಜನೆಯ ಯಶೋಗಾಥೆಯ ಬಗ್ಗೆ ಪತ್ರಿಕಾ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ


ಸಾಯಿ ಭಕ್ತರು ಉದಾರವಾಗಿ ನೀಡುತ್ತಿರುವ ದೇಣಿಗೆಯಿಂದ ಶಿರಡಿಯ ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ಭೋಜನ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಈ ಯೋಜನೆಯ ಅಡಿಯಲ್ಲಿ 1ನೇ ಜನವರಿ 2013 ರಿಂದ 31ನೇ  ಡಿಸೆಂಬರ್ 2013 ರ ಒಳಗೆ ಬರುವ ಒಟ್ಟು 365 ದಿನಗಳಲ್ಲಿ 204 ದಿನಗಳಂದು ಪ್ರಸಾದ ಭೋಜನವನ್ನು ಉಚಿತವಾಗಿ ನೀಡಲಾಗಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ದಿಗಾರರಿಗೆ ತಿಳಿಸಿದರು. 

ಶಿರಡಿ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ತಮ್ಮನ್ನು ಕಾಣಲು ಬರುವ ಭಕ್ತರಿಗೆ ನಿರಂತರ ಅನ್ನದಾನವನ್ನು ಮಾಡುವ ಅತ್ಯುತ್ತಮ ಯೋಜನೆಯನ್ನು ಪ್ರಾರಂಭಿಸಿದ್ದರು. ಶ್ರೀ ಸಾಯಿಬಾಬಾರವರು ಪ್ರಾರಂಭಿಸಿದ ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನವು ನೀಮಗಾವ್- ಕೊರಾಳೆ ಗ್ರಾಮದ ಸರಹದ್ದಿನಲ್ಲಿ ಸರಿ ಸುಮಾರು 8  ಎಕರೆ ವಿಶಾಲವಾದ ಪ್ರದೇಶದಲ್ಲಿ ಸಾಯಿಬಾಬಾ ಪ್ರಸಾದಾಲಯವನ್ನು ನಿರ್ಮಿಸಿರುತ್ತಾರೆ. ಇದು ಏಷಿಯಾದಲ್ಲಿಯೇ ಅತ್ಯಂತ ದೊಡ್ಡದಾದ ಪ್ರಸಾದಾಲಯವೆಂದು ಹೇಳಲಾಗುತ್ತದೆ. ಈ ಭವನದೊಳಗೆ ಬೃಹತ್ ಭೋಜನ ಶಾಲೆಯನ್ನು ನಿರ್ಮಾಣ ಮಾಡಲಾಗಿದ್ದು ಒಂದೇ ಬಾರಿಗೆ 5,500 ಭಕ್ತರಿಗೆ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಪ್ರತಿನಿತ್ಯ ಸುಮಾರು 1 ಲಕ್ಷ ಜನರು ಇಲ್ಲಿ ಭೋಜನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ದಿನದಂದು ಸುಮಾರು 30,000-35,000 ಭಕ್ತರು ಹಾಗೂ ಹಬ್ಬ ಹರಿದಿನಗಳು/ರಜಾದಿನಗಳಂದು ಸುಮಾರು 70,000-80,000 ಭಕ್ತರು ಪ್ರಸಾದ ಭೋಜನವನ್ನು ಸ್ವೀಕರಿಸುತ್ತಿದ್ದಾರೆ. ಹಾಗಾಗಿ, ಪ್ರತಿ ವರ್ಷ ಸುಮಾರು 1 ಕೋಟಿ  ಸಾಯಿ ಭಕ್ತರು ಸಾಯಿಬಾಬಾ ಪ್ರಸಾದಾಲಯದಲ್ಲಿ ಭೋಜನವನ್ನು ಸ್ವೀಕರಿಸುತ್ತಿದ್ದಾರೆ. ಪ್ರಸಾದಾಲಯದ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ  ಸಾಯಿಬಾಬಾ ಸಂಸ್ಥಾನದವರು  ಅಡುಗೆ ಪರಿಕರಗಳು, ಅಡುಗೆ ಕೋಣೆ  ಹಾಗೂ ಭೋಜನ ಶಾಲೆಯ ಸ್ವಚ್ಚತೆ, ಎಲ್ಲ ಕೆಲಸಗಾರರಿಗೆ ಸಮವಸ್ತ್ರ ವಿತರಣೆ ಮತ್ತಿತರ ವ್ಯವಸ್ಥೆಗಳಿಗಾಗಿ ಪ್ರತಿ ವರ್ಷ ಸರಿ ಸುಮಾರು 60 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದ್ದಾರೆ ಎಂದು ಶ್ರೀ. ಅಜಯ್ ಮೋರೆಯವರು ಸುದ್ದಿಗಾರರಿಗೆ ತಿಳಿಸಿದರು.

ಭಕ್ತರು ಸಾಯಿಬಾಬಾ ಪ್ರಸಾದಾಲಯದಲ್ಲಿ ಉತ್ತಮ ಗುಣಮಟ್ಟದ ಭೋಜನವನ್ನು ಸವಿಯಲು ಹೆಚ್ಚು ಹೊತ್ತು ಕಾಯಬೇಕಾದ ಅವಶ್ಯಕತೆಯಿರುವುದಿಲ್ಲ. ಶಿರಡಿ ಸಾಯಿಬಾಬಾ ಸಂಸ್ಥಾನದ ಈ ಉತ್ತಮ ಸೇವೆಯನ್ನು ಗುರುತಿಸಿ ಟ್ರಾನ್ಸ್ ಪೆಸಿಫಿಕ್ ಸರ್ಟಿಫಿಕೇಶನ್ಸ್ ಲಿಮಿಟೆಡ್  (TCL)  ಸಂಸ್ಥೆಯು 30ನೇ ಸೆಪ್ಟೆಂಬರ್ 2013 ರಿಂದ  3 ವರ್ಷಗಳಿಗೆ ಅನ್ವಯವಾಗುವಂತೆ ISO-22000-2005 (Food Safety Standard) ಸರ್ಟಿಫಿಕೇಟ್ ನೀಡಿ ಗೌರವಿಸಿದೆ. ಅಲ್ಲದೆ, ಭಾರತ ಸರ್ಕಾರದ ಅಸಂಪ್ರದಾಯಿಕ ಇಂಧನಗಳ ಸಚಿವರಾದ ಶ್ರೀ.ಫರೂಕ್ ಅಬ್ದುಲ್ಲಾರವರು ಶಿರಡಿ ಸಾಯಿಬಾಬಾ ಸಂಸ್ಥಾನದ ಸೌರ ಉಗಿ ಅಡುಗೆ ಯೋಜನೆಯನ್ನು ಧಾರ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ ಬೃಹತ್ ಯೋಜನೆ ಎಂದು ಗುರುತಿಸಿ  ಇದೇ ತಿಂಗಳ 17ನೇ ಡಿಸೆಂಬರ್ 2013, ಮಂಗಳವಾರ ದಂದು ನವದೆಹಲಿಯ ಅಶೋಕ ಹೋಟೆಲ್ ನಲ್ಲಿ ನಡೆದ  ಸಮಾರಂಭದಲ್ಲಿ  ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ಅಷ್ಟೇ ಅಲ್ಲದೆ, ಶಿರಡಿ ಸಾಯಿಬಾಬಾ ಸಂಸ್ಥಾನವು ಪ್ರಾರಂಭಿಸಿದ ಉಚಿತ ಪ್ರಸಾದ ಭೋಜನ ಯೋಜನೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯ ಅಡಿಯಲ್ಲಿ, 1ನೇ ಜನವರಿ 2013 ರಿಂದ  31ನೇ  ಡಿಸೆಂಬರ್ 2013 ರ ಒಳಗೆ 336 ಸಾಯಿ ಭಕ್ತರು 5,11,88,813 ರೂಪಾಯಿಗಳ ದೇಣಿಗೆಯನ್ನು ದಾರಾಳವಾಗಿ ನೀಡಿರುತ್ತಾರೆ. ಆದ ಕಾರಣ, 365 ದಿನಗಳಲ್ಲಿ 204 ದಿನಗಳಂದು ಸಾಯಿ ಭಕ್ತರಿಗೆ ಪ್ರಸಾದ ಭೋಜನವನ್ನು ಉಚಿತವಾಗಿ ನೀಡಲಾಗಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ದಿಗಾರರಿಗೆ ತಿಳಿಸಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment