Saturday, December 14, 2013

ಶಿರಡಿ ಸಾಯಿಬಾಬಾ ಸಂಸ್ಥಾನದ ಸೌರ ಉಗಿ ಅಡುಗೆ ಯೋಜನೆ ಧಾರ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ ಬೃಹತ್ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರ ಹಾಗೂ ಪ್ರಶಸ್ತಿಗೆ ಪಾತ್ರ - ಕೃಪೆ: ಸಾಯಿಅಮೃತಧಾರಾ.ಕಾಂ



ಶಿರಡಿ ಸಾಯಿಬಾಬಾ ಸಂಸ್ಥಾನದ ಸೌರ ಉಗಿ ಅಡುಗೆ ಯೋಜನೆಯನ್ನು ಭಾರತ ಸರ್ಕಾರದ ಅಸಂಪ್ರದಾಯಿಕ ಇಂಧನಗಳ ಸಚಿವಾಲಯವು ಧಾರ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ ಬೃಹತ್ ಯೋಜನೆ ಎಂದು ಗುರುತಿಸಿದೆ.ಇದೇ ತಿಂಗಳ 17ನೇ ಡಿಸೆಂಬರ್ 2013, ಮಂಗಳವಾರ ದಂದು ಅಸಂಪ್ರದಾಯಿಕ ಇಂಧನಗಳ ಖಾತೆಯ ಸಚಿವರಾದ ಶ್ರೀ. ಫರೂಕ್ ಅಬ್ದುಲ್ಲಾರವರು ಶಿರಡಿಗೆ ಸಾಯಿಬಾಬಾ ಸಂಸ್ಥಾನಕ್ಕೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ಸುದ್ಧಿಗಾರರಿಗೆ ತಿಳಿಸಿದರು.

ಸಾಯಿ ಪ್ರಸಾದಾಲಯವು  ಪ್ರಸಾದದ ಅಡುಗೆಯನ್ನು ಮಾಡಲು ಪ್ರತಿನಿತ್ಯ ಬಳಸಲಾಗುತ್ತಿದ್ದ ಇಂಧನದ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಪ್ರಪಂಚದಲ್ಲಿಯೇ ಅತಿ ಬೃಹತ್ ಸೌರ ಅಡುಗೆ ಯೋಜನೆಯನ್ನು 30ನೇ ಜುಲೈ 2009 ರಂದು ಶ್ರೀ ಸಾಯಿಬಾಬಾ ಸಂಸ್ಥಾನವು ಪ್ರಾರಂಭಿಸಿತು. ಈ ಯೋಜನೆಯನ್ನು ಪ್ರಾರಂಭಿಸಿದ್ದರಿಂದ ಪ್ರತಿನಿತ್ಯ ಸುಮಾರು 21,000 ರೂಪಾಯಿ ಬೆಲೆಬಾಳುವ 20 ಕೆಜಿ ಅಡುಗೆ ಅನಿಲದ ಉಳಿತಾಯವಾಗುತ್ತಿದೆ. ಹಾಗಾಗಿ, ಯೋಜನೆಯ ಪ್ರಾರಂಭದ ದಿನದಿಂದ ಇಲ್ಲಿಯವರೆಗೆ ಸುಮಾರು 39 ಲಕ್ಷ ರೂಪಾಯಿಗಳ ಉಳಿತಾಯವಾಗಿದೆ. ಮುಂಬರುವ ವರ್ಷಗಳಲ್ಲಿ ಅಡುಗೆ ಅನಿಲವು ಇನ್ನಷ್ಟು ದುಬಾರಿಯಾಗಲಿರುವ ಕಾರಣ ಉಳಿತಾಯದ ಮೊತ್ತವು ಮತ್ತಷ್ಟು ಹೆಚ್ಚಾಗಲಿದೆ ಎಂದು ಶ್ರೀ.ಅಜಯ್ ಮೋರೆಯವರು ತಿಳಿಸಿದರು.

ಭಾರತೀಯ ಬಾಯ್ಲರ್ ಕಾಯಿದೆಯ ಅಡಿಯಲ್ಲಿ ರೂಪಿಸಲಾದ ಈ ಯೋಜನೆಯನ್ನು ಇತ್ತೀಚೆಗಷ್ಟೇ ಸಂಪೂರ್ಣಗೊಳಿಸಲಾಯಿತು. ಹಲವಾರು ಯೋಜನಾ ಸಲಹೆಗಾರರು ಯೋಜನೆಯಲ್ಲಿನ ಸುರಕ್ಷತೆಯ ಲೋಪ-ದೋಷಗಳನ್ನು ಸರಿಪಡಿಸುವ ಸಲುವಾಗಿ  ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರಲ್ಲಿ ಕೊಲ್ಹಾಪುರದ  ಡಾ.ಎಂ.ಜಿ.ತಕ್ವಾಲೆ, ಶ್ರೀ.ಬಿ.ಎನ್.ವಾಕ್ಚುರೆ, ಶ್ರೀ.ಬದ್ಧೆ, ಶ್ರೀ.ಜಿ.ಟಿ.ಚೌಗಲೆ,ಶ್ರೀ.ಬೊಕಾರೆ, ಶ್ರೀ.ಮಾನಕರ್ ಬಷ್ಪಾಕೆ ಸಂಚಲನಾಲಯ್, ಇಂಧನ ಖಾತೆ ಕಾರ್ಯದರ್ಶಿಗಳಾದ ಶ್ರೀ.ತರುಣ್ ಕಪೂರ್, UNDP ಯೋಜನೆಯ ಮ್ಯಾನೇಜರ್ ಡಾ.ಎ.ಕೆ.ಸಿಂಘಾಲ್, ಕೇಂದ್ರ ಬಾಯ್ಲರ್ ಬೋರ್ಡ್ ನ ಕಾರ್ಯದರ್ಶಿಗಳಾದ ಶ್ರೀ.ಟಿ.ಜಿ.ನಾರಾಯಣ್ ಮತ್ತು ಇನ್ನು ಹಲವಾರು ಸಲಹೆಗಾರರು ಪ್ರಮುಖ ಪಾತ್ರವನ್ನು ವಹಿಸಿದ್ದರು. 

ಈ ಯೋಜನೆಯನ್ನು ಒಂದು ಅನನ್ಯ ಪ್ರದರ್ಶನಾತ್ಮಕ ಯೋಜನೆಯೆಂದು ಗುರುತಿಸಿ 13,30,000/- ರೂಪಾಯಿಗಳ ಸಬ್ಸಿಡಿಯನ್ನು ಮಂಜೂರು ಮಾಡಲಾಗಿದೆ. ಅಲ್ಲದೇ, ಶಿರಡಿ ಸಾಯಿಬಾಬಾ ಸಂಸ್ಥಾನವು ಈ ಬೃಹತ್   ಸೌರ ಅಡುಗೆ ಯೋಜನೆಯನ್ನು ಪ್ರಾರಂಭಿಸಿರುವುದನ್ನು ಗುರುತಿಸಿ ಅಸಂಪ್ರದಾಯಿಕ ಇಂಧನಗಳ ಖಾತೆಯ ಸಚಿವರಾದ ಶ್ರೀ.ಫರೂಕ್ ಅಬ್ದುಲ್ಲಾರವರು ಶಿರಡಿಗೆ ಸಾಯಿಬಾಬಾ ಸಂಸ್ಥಾನಕ್ಕೆ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ.  ಈ ಪ್ರಶಸ್ತಿಯನ್ನು 17ನೇ ಡಿಸೆಂಬರ್ 2013, ಮಂಗಳವಾರ ದಂದು ನವದೆಹಲಿಯ ಅಶೋಕ ಹೋಟೆಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ನೀಡಲಾಗುವುದು. ಆ ದಿನ ನಡೆಯಲಿರುವ ಸಮಾರಂಭದಲ್ಲಿ ಉಪಸ್ಥಿತರಿರುವಂತೆ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳಿಗೆ ಅಸಂಪ್ರದಾಯಿಕ ಇಂಧನಗಳ ಸಚಿವಾಲಯವು ತಾಕೀತು ಮಾಡಿದೆ.

ಈ ಯೋಜನೆಯಲ್ಲಿ ಪಾಲ್ಗೊಂಡ ನಿರ್ವಾಹಕ ಅಧಿಕಾರಿ ಶ್ರೀ.ಉತ್ತಮ್ ಗೋಂದ್ಕರ್, ಮುಖ್ಯ ಯಾಂತ್ರಿಕ ಅಧಿಕಾರಿ ಶ್ರೀ.ಅಮೃತ್  ಜಗ್ತಪ್ ಮತ್ತು ಇನ್ನಿತರ ಕೆಲಸಗಾರರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಹಾಗೂ ಮುಖ್ಯ ನ್ಯಾಯಾಧೀಶರಾದ ಶ್ರೀ.ಜಯಂತ್ ಕುಲಕರ್ಣಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಸಂಜಯ್ ಕುಮಾರ್ ಮತ್ತು ತಹಶೀಲ್ದಾರ್ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ವಿಶೇಷವಾಗಿ ಅಭಿನಂದಿಸಿದ್ದಾರೆ.


ಮರಾಠಿಯಿಂದ ಆಂಗ್ಲ ಭಾಷೆಗೆ ತರ್ಜುಮೆ: ಶ್ರೀ.ರಾಜೇಶ್ ಶೇಲಾತ್ಕರ್, ಮುಂಬೈ
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
 

No comments:

Post a Comment