Monday, July 8, 2013

ಅಪ್ರತಿಮ ಬರಹಗಾರ ಹಾಗೂ ಸಾಯಿಬಂಧು ಶ್ರೀ.ಸೈರಸ್ ಜಹಂಗೀರ್ ಸತಾರಾವಾಲ ಆಲಿಯಾಸ್ "ಸಾಯಿ-ರಸ್" - ಕೃಪೆ: ಸಾಯಿಅಮೃತಧಾರಾ.ಕಾಂ


 
ಶ್ರೀ.ಸೈರಸ್ ಜಹಂಗೀರ್ ಸತಾರಾವಾಲ ರವರು ಆಂಗ್ಲ ಭಾಷೆಯಲ್ಲಿ ಸ್ವಸಹಾಯದ ಬಗ್ಗೆ ಪ್ರೇರೇಪಣೆ ನೀಡುವ "ಬಿಯಾಂಡ್ ಗಟ್ಸ್" ಎಂಬ ಹೆಸರಿನ 1000 ಪುಟಗಳ ಪುಸ್ತಕವನ್ನು ರಚಿಸಿರುವ ಅಪ್ರತಿಮ ಬರಹಗಾರ, ಉಪನ್ಯಾಸಕ ಹಾಗೂ  ಸಾಯಿ ಭಕ್ತರು. 

ತಮ್ಮ ಪ್ರೀತಿಪಾತ್ರರಿಂದ ಹಾಗೂ ಸ್ನೇಹಿತರಿಂದ "ಸಾಯಿ-ರಸ್" ಎಂದು ಕರೆಸಿಕೊಳ್ಳುವ ಶ್ರೀ.ಸೈರಸ್ ಜಹಂಗೀರ್ ಸತಾರಾವಾಲ ರವರು ಲೆಫ್ಟಿನೆಂಟ್ ಜನರಲ್ ದಿವಂಗತ ಜಹಂಗೀರ್ ಟಿ.ಸತಾರಾವಾಲ (M.B.E; M.C.) ಮತ್ತು ಶ್ರೀಮತಿ.ಪೆರಿನ್ ಜೆ. ಸತಾರಾವಾಲ ರವರ ಮಗನಾಗಿ 2ನೇ ಜನವರಿ 1958 ರಂದು ಜನಿಸಿದರು. "ನನ್ನ ತಾಯಿ ನನಗೆ ಜೀವ, ನಡೆದಾಡುವ ಹಾಗೂ ಮಾರ್ಗದರ್ಶನ ನೀಡುವ ದೇವರು, ಗುರು, ದೇವತೆ ಹಾಗೂ ನನ್ನ ಸರ್ವಸ್ವ" ಎಂದು ಸೈರಸ್ ರವರು ಭಾವುಕರಾಗಿ ನುಡಿಯುತ್ತಾರೆ. 

ಬಾಲ್ಯದಿಂದಲೂ ಕಷ್ಟಗಳ ಸರಮಾಲೆಯನ್ನೇ ಎದುರಿಸಿದ್ದರೂ ಸಹ ತಮಗೆ ಪ್ರತಿಯೊಂದು ಹಂತದಲ್ಲೂ ಸಾಯಿಬಾಬಾರವರು ಬಂದು ಸಹಾಯ ಹಸ್ತವನ್ನು ಚಾಚಿದ್ದಾರೆ ಎಂದು ಅವರು ನಂಬಿದ್ದಾರೆ.

ಕೇವಲ 8 ವರ್ಷದವರಾಗಿದ್ದಾಗ ಇವರು ತೀವ್ರವಾದ ಖಾಯಿಲೆಯಿಂದ ಹಾಸಿಗೆ ಹಿಡಿದರು. ಪುನಃ ಇವರ 18ನೇ  ವಯಸ್ಸಿನಲ್ಲಿ ತೀವ್ರ ಖಾಯಿಲೆಯಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅಮೇರಿಕಾಕ್ಕೆ ಕರೆದುಕೊಂಡು ಹೋದರು. ಅಲ್ಲಿ 15ನೇ ಮಾರ್ಚ್ 1977 ರಂದು ಇವರಿಗೆ 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಮಾಡಿ 5 ಅಡಿ ಉದ್ದದ ದೊಡ್ಡಕರುಳು, ಗುದದ್ವಾರಗಳನ್ನು ತೆಗೆದುಹಾಕಲಾಯಿತು. ನಂತರ ಪುನಃ 1991 ರಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿ 2 ಅಡಿ ಉದ್ದದ ಸಣ್ಣಕರುಳನ್ನು ತೆಗೆದುಹಾಕಲಾಯಿತು. 

ಇವರು ದೆಹಲಿಯ ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಇತಿಹಾಸ ವಿಷಯದಲ್ಲಿ ಬಿ.ಎ.(ಹಾನರ್ಸ್) ಪದವಿಯನ್ನು ಗಳಿಸಿರುತ್ತಾರೆ. ಸೋಲೂರಿನ ಟೀ ಎಸ್ಟೆಟ್ ನಲ್ಲಿ ಬಹಳ ವರ್ಷಗಳ ಕಾಲ ಕೆಲಸ ಮಾಡಿದ ನಂತರ ಪುಣೆಗೆ ಹಿಂತಿರುಗಿದ ಇವರು ತಮ್ಮ ವಾಕ್ಚಾತುರ್ಯದ ಮುಖಾಂತರ ಅತ್ಯುತ್ತಮ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ಸರಿಯಾದ ಆಲೋಚನೆಯನ್ನು ಮಾಡುವುದರಿಂದ ಮಾನವನು ಏನನ್ನು ಬೇಕಾದರೂ ಸಾಧಿಸಬಹುದು ಎಂದು ಇವರು ಅಭಿಪ್ರಾಯ ಪಡುತ್ತಾರೆ.

ಇವರು ಆಲೋಚನಾ ಶಕ್ತಿ ಮತ್ತು ಸೃಜನಶೀಲ ಕಲ್ಪನೆಯ ಬಗ್ಗೆ ಉಪನ್ಯಾಸಗಳನ್ನು ನೀಡುವಾಗ "ಸೈರಸ್, ನೀವು ಸಮ್ಮೋಹನ ಮಾಡುತ್ತೀರಾ?" ಎಂದು ಅನೇಕರು ಪ್ರಶ್ನಿಸಿದ್ದಾರೆ. ಅದಕ್ಕೆ ನಗುತ್ತಾ ಸೈರಸ್ ರವರು "ಇಲ್ಲ ನಾನು ನಿಮ್ಮ ಸೀಮಿತ ಆಲೋಚನೆಗಳಿಗೆ ವ್ಯತಿರಿಕ್ತ ಸಮ್ಮೋಹನವನ್ನು ಮಾಡುವ ಮುಖಾಂತರ ನಿಮ್ಮಲ್ಲಿ ಸ್ವಯಂ ನಂಬಿಕೆಯನ್ನು ಹುಟ್ಟುಹಾಕಿ ಅದರ ಮುಖಾಂತರವಾಗಿ ನಿಮ್ಮೊಳಗಿರುವ ಗುರು-ದೇವರುಗಳನ್ನು ಜಾಗೃತಗೊಳಿಸುತ್ತೇನೆ. ಅದು ನಿಮ್ಮ ಎಲ್ಲಾ ನ್ಯಾಯ ಸಮ್ಮತವಾದ ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತವೆ" ಎಂದು ಉತ್ತರಿಸುತ್ತಾರೆ.

ನಾನು ಚಿಕ್ಕವನಿದ್ದಾಗ ನನ್ನ ತಂದೆಯವರು "ಎಂದಿಗೂ ಬಾಗದ ಆಶಯವನ್ನು ಹೊಂದಿದ್ದಾಗ ಮತ್ತು ಅದರೊಂದಿಗೆ ಮನೋಬಲವೆಂಬ ಬೆಂಕಿಯು ಸೇರಿಕೊಂಡಾಗ, ಅದು ರತ್ನದಂತೆ ಪ್ರಕಾಶಮಾನವಾಗಿ ಬೆಳಗಿ ಅನೇಕ ನದಿಗಳ ಸಂಗಮವನ್ನೂ ಸಹ ಕೇವಲ ಒಂದು ಕಲ್ಲಿನಿಂದಲೇ ಹಿಂಡಿಹಾಕಬಹುದು" ಎಂದು ಹೇಳುತ್ತಿದ್ದರು ಎಂದು ಸೈರಸ್ ಆವೇಶದಿಂದ ನುಡಿಯುತ್ತಾರೆ. 

2004 ನೇ ಇಸವಿಯಲ್ಲಿ ಆಂಗ್ಲ ಭಾಷೆಯಲ್ಲಿ ಸ್ವಸಹಾಯದ ಬಗ್ಗೆ ಪ್ರೇರೇಪಣೆ ನೀಡುವ "ಬಿಯಾಂಡ್ ಗಟ್ಸ್" ಎಂಬ ಹೆಸರಿನ 1000 ಪುಟಗಳ ಪುಸ್ತಕವನ್ನು ರಚಿಸಿರುತ್ತಾರೆ. ಈ ಅತ್ಯುತ್ತಮವಾದ ಪುಸ್ತಕದಲ್ಲಿ ಸೈರಸ್ ರವರು ಜೀವನವು ತಮ್ಮ ಎದುರು  ಪ್ರತಿಯೊಂದು ಬಾರಿಯೂ ನಿಂಬೆಹಣ್ಣನ್ನು ಎಸೆದಾಗ ಹೇಗೆ ಅದನ್ನು ಸಿಹಿಯಾದ ನಿಂಬೆಯ ರಸವನ್ನಾಗಿ ಪರಿವರ್ತನೆ ಮಾಡಿದರು ಎಂಬ ವಿಷಯವನ್ನು ಪುಸ್ತಕದ ಉದ್ದಕ್ಕೂ ವಿವರಿಸಿದ್ದಾರೆ. ಈ ಸವಿಯಾದ ರಸವನ್ನು ಓದುಗರು ಸಹ ಸವಿಯಬಹುದಾಗಿರುತ್ತದೆ. 

ಈ ಪುಸ್ತಕವು ಸರಳ ಸುಲಲಿತವಾದ ಭಾಷೆಯಿಂದ ಕೂಡಿದ್ದು ಅಲ್ಲಲ್ಲಿ ಅತ್ಯುತ್ತಮ ಉದಾಹರಣೆಗಳನ್ನು ನೀಡಿರುವ ಕಾರಣ ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕೆನ್ನುವ ಹಂಬಲ ಬೆಳೆಯುವಂತೆ ಸೈರಸ್ ರವರು ಬರೆದಿದ್ದಾರೆ.

ಸೈರಸ್ ರವರ ಜೀವನದಲ್ಲಿ ಶಿರಡಿ ಸಾಯಿಬಾಬಾರವರ ಅನೇಕ ಲೀಲೆಗಳು ಸಂಭವಿಸಿರುತ್ತವೆ. ಅದರಲ್ಲಿ ಒಂದು ಘಟನೆಯನ್ನು ಸೈರಸ್ ರವರು ಸಾಯಿ ಭಕ್ತರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ : "ಕೆಲವು  ವರ್ಷಗಳ ಹಿಂದೆ ಶಿರಡಿಯ ಖಂಡೋಬ ಮಂದಿರದ ಶ್ರೀ ಮನೋಹರ ಮಾರ್ತಾಂಡ ನಗರೆಯವರು ತಾವಾಗಿಯೇ ಪುಣೆಯಲ್ಲಿರುವ ನನ್ನ ಮನೆಗೆ ಸಾಯಿಬಾಬಾರವರ ಪವಿತ್ರ ಚರಣ ಪಾದುಕೆಗಳನ್ನು ತೆಗೆದುಕೊಂಡು ಬಂದಿದ್ದರು. ಇದರಿಂದ ನನಗೆ ಅತೀವ ವಿಸ್ಮಯವಾಯಿತು. ಈ ಘಟನೆಯನ್ನು ನನ್ನ ಜೀವಮಾನದಲ್ಲಿ ಮರೆಯುವುದಿಲ್ಲ. ಶಿರಡಿ ಸಾಯಿಬಾಬಾರವರು ಮನಸ್ಸು ಮಾಡಿ ನನ್ನ ಮೇಲೆ ಕರುಣೆ ತೋರಿದರೆ ನಾನು ಅವರ ಪಾದದ ಹೆಬ್ಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಡುತ್ತೇನೆ. ಆಗ ನನಗೆ ಸಾಯಿಬಾಬಾರವರ ಬಳಿ ಬೇಡಲು ಬೇರೆ ಏನೂ ಇರುವುದಿಲ್ಲ" ಎಂದು ಭಾವುಕರಾಗಿ ನುಡಿಯುತ್ತಾರೆ. 

ಋಣಾನುಬಂಧದಿಂದ ತಾವು ಸಾಯಿಬಾಬಾ ಭಕ್ತರಾಗಿರುವುದು ಹಾಗೂ ತಮ್ಮ ತಾಯಿಯವರ ಸೇವೆಯನ್ನು ಮಾಡುವುದರಿಂದ ತಮಗೆ ದೊರೆತಿರುವ ಪ್ರತಿಫಲವೇ ತಮಗೆ ಸಂದಿರುವ ಪ್ರಶಸ್ತಿಯಾಗಿದ್ದು ಅದರ ಮುಂದೆ ಬೇರೆ ಯಾವ ಪ್ರಶಸ್ತಿಗಳೂ  ಸಮನಾಗುವುದಿಲ್ಲ ಎಂದು ನುಡಿಯುತ್ತಾರೆ. 

ಶ್ರೀ.ಸೈರಸ್ ಜಹಂಗೀರ್ ಸತಾರಾವಾಲ ರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 

ವಿಳಾಸ:
ಶ್ರೀ.ಸೈರಸ್ ಜಹಂಗೀರ್ ಸತಾರಾವಾಲ
ಇ-4, ಅಶೋಕ, 3, ನೈಲಾರ್ ರಸ್ತೆ, 
ಪುಣೆ-411 001, ಮಹಾರಾಷ್ಟ್ರ, ಭಾರತ. 

ದೂರವಾಣಿ ಸಂಖ್ಯೆಗಳು: 
+91 98231 10144/020-2612 5457

ಇ-ಮೈಲ್ ವಿಳಾಸ:

ಅಂಗ್ಲ  ಭಾಷೆ ಅನುವಾದ ಹಾಗೂ ಭಾವಚಿತ್ರ ಕೃಪೆ: ಕುಮಾರಿ.ಶಂಶಾದ್ ಆಲಿ ಬೇಗ್
ಕನ್ನಡ  ಅನುವಾದ: ಶ್ರೀಕಂಠ ಶರ್ಮ

No comments:

Post a Comment