Thursday, October 25, 2012

ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ ವತಿಯಿಂದ  ಸಾಯಿ ಭಕ್ತರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಚಯ "ಸಾಯಿ ಆಶ್ರಮ" -  ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರ - ಕೃಪೆ:ಸಾಯಿಅಮೃತಧಾರಾ.ಕಾಂ

ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ ವತಿಯಿಂದ  ಸಾಯಿ ಭಕ್ತರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಚಯ "ಸಾಯಿ ಆಶ್ರಮ" ವನ್ನು ಇದೇ ತಿಂಗಳ ಪವಿತ್ರ ವಿಜಯದಶಮಿಯ ದಿನವಾದ 24ನೇ ಅಕ್ಟೋಬರ್ 2012, ಬುಧವಾರದಂದು ಮಧ್ಯಾನ್ಹ 3:00 ಗಂಟೆಗೆ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರ ಮಾಡಲಾಯಿತು. ಮಧ್ಯಾನ್ಹ ಆರತಿಯ ನಂತರ ಶಿರಡಿಯ ಸಮಾಧಿ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿರಡಿ ಸಾಯಿ ಟ್ರಸ್ಟ್ ನ ಸಂಸ್ಥಾಪಕರೂ ಹಾಗೂ ಟ್ರಸ್ಟಿಗಳಾದ ಶ್ರೀ.ಕೆ.ವಿ.ರಮಣಿಯವರು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಜಯಂತ್ ಡಿ.ಕುಲಕರ್ಣಿಯವರಿಗೆ ವಸತಿ ಸಮುಚ್ಚದ ದಾಖಲೆ ಪತ್ರಗಳನ್ನು ನೀಡಿದರು. ಸಂಸತ್ ಸದಸ್ಯರಾದ ಶ್ರೀ.ಬಿ.ಆರ್.ವಾಕ್ಚುರೆ, ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಯಾದ ಶ್ರೀ.ಕಿಶೋರ್ ಮೋರೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಹಿಂದಿನ ಅಧ್ಯಕ್ಷರೂ ಹಾಗೂ ತಮ್ಮ ಕಾರ್ಯಾವಧಿಯಲ್ಲಿ ಸಾಯಿ ಆಶ್ರಮದ ನಿರ್ಮಾಣಕ್ಕೆ ಚಾಲನೆಯನ್ನು ಪ್ರಾರಂಭಿಸಿದ ಕೀರ್ತಿಗೆ ಭಾಜನರಾದ ಶ್ರೀ.ಜಯಂತ್ ಮುರಳೀಧರ ಸಾಸನೆ ಹಾಗೂ ಹಲವಾರು ಗಣ್ಯವಕ್ತಿಗಳು ಈ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಕೆ.ವಿ.ರಮಣಿಯವರು ಪ್ರಪಂಚದ ಎಲ್ಲಾ ಮೂಲೆಗಳಿಂದ ಸಾಯಿಬಾಬಾರವರ ದರ್ಶನಕ್ಕೆಂದು ಶಿರಡಿಗೆ ಹರಿದು ಬರುತ್ತಿರುವ ಸಾಯಿಭಕ್ತ ಸಾಗರಕ್ಕೆ ಅತ್ಯಂತ ಕಡಿಮೆ ದರದಲ್ಲಿ ವಸತಿಯನ್ನು ಒದಗಿಸುವ ಸಲುವಾಗಿ ಈ ದತ್ತಿ ಸೇವಾ ಯೋಜನೆಯನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು. 25 ಕೋಟಿ ರೂಪಾಯಿ ವೆಚ್ಚದಲ್ಲಿ 6 ಲಕ್ಷ ಚದರ ಅಡಿಯ ವಿಶಾಲ ಪ್ರದೇಶದಲ್ಲಿ 18 ತಿಂಗಳುಗಳಲ್ಲಿ 10000 ಕ್ಕೂ ಹೆಚ್ಚು ಸಾಯಿಭಕ್ತರಿಗೆ ವಸತಿಯನ್ನು ಕಲ್ಪಿಸುವ ಸಲುವಾಗಿ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದ್ದ ಈ ಸಾಯಿ ಆಶ್ರಮದ ನಿರ್ಮಾಣದ ಒಡಂಬಡಿಕೆ ಪತ್ರಕ್ಕೆ 4ನೇ ಫೆಬ್ರವರಿ 2006 ರಂದು ಸಹಿ ಹಾಕಲಾಯಿತು. ವಸತಿ ಸಮುಚ್ಚಯ ನಿರ್ಮಾಣಕ್ಕೆ ಬೇಕಾದ 19.68 ಎಕರೆ ಭೂಮಿಯನ್ನು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಶಿರಡಿಯ ಎರಡು ಕಡೆಗಳಲ್ಲಿ ಜುಲೈ 2007 ರಲ್ಲಿ ನೀಡಿತು.

ಶಿರಡಿ ಸಾಯಿ ಟ್ರಸ್ಟ್ ಸೆಪ್ಟೆಂಬರ್ 2007 ರಲ್ಲಿ ನಿರ್ಮಾಣ ಕಾರ್ಯವನ್ನು ಆರಂಭಿಸಿ ಈಗ ಈ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ಸಾಯಿ ಆಶ್ರಮ - 1 ರಲ್ಲಿ 1536 ಕೊಠಡಿಗಳು ಮತ್ತು ಸಾಯಿ ಅಶ್ರಮ - 2 ರಲ್ಲಿ 192 ವಿಶಾಲವಾದ ಹಾಲ್ ಗಳನ್ನು ನಿರ್ಮಿಸಲಾಗಿದ್ದು ಒಟ್ಟು 14,000 ಸಾಯಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ. ಈ ವಸತಿ ಸಮುಚ್ಚಯಗಳನ್ನು 9.60 ಲಕ್ಷ ಚದರ ಅಡಿಯಷ್ಟು ವಿಶಾಲವಾದ ಭೂಪ್ರದೇಶದಲ್ಲಿ ಸುಮಾರು 110 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ನಿರ್ಮಾಣ ಮಾಡಲಾಗಿದೆ.  

ಈ ಸಾಯಿ ಆಶ್ರಮ ಯೋಜನೆಗೆ ತಗುಲಿರುವ ಸಂಪೂರ್ಣ ನಿರ್ಮಾಣ ವೆಚ್ಚವನ್ನು ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳಿಂದ ದೇಣಿಗೆಯನ್ನು ಸ್ವೀಕರಿಸದೇ ಚನ್ನೈನ ಶಿರಡಿ ಸಾಯಿ ಟ್ರಸ್ಟ್ ಸ್ವತಃ ಭರಿಸಿರುತ್ತದೆ.

ಈ ವಸತಿ ಯೋಜನೆಯಲ್ಲಿ 12 ಗುತ್ತಿಗೆದಾರರು ಕಾರ್ಯ ನಿರ್ವಹಿಸಿರುತ್ತಾರೆ.  18 ತಿಂಗಳುಗಳಲ್ಲಿ ಪೂರ್ಣಗೊಳಿಸಬೇಕೆಂದುಕೊಂಡಿದ್ದ ಈ ಯೋಜನೆಯು ನಿರ್ಮಾಣ ಉದ್ಯಮದಲ್ಲಿನ ಆರ್ಥಿಕ ಹಿಂಜರಿತ, ಉಕ್ಕು, ಸಿಮೆಂಟ್ , ಮರಳು, ಇಟ್ಟಿಗೆ,ನುರಿತ ಕಾರ್ಮಿಕರ ಕೊರತೆ, ಯೋಜನೆಯ ಗಾತ್ರ 6 ಲಕ್ಷ ಚದರ ಅಡಿಯಿಂದ 9.60 ಲಕ್ಷ ಚದರ ಅಡಿಗಳಿಗೆ ಹೆಚ್ಚಾದದ್ದು ಮತ್ತು ಯೋಜನೆಯ ಮೊತ್ತ 25 ಕೋಟಿ ರೂಪಾಯಿಗಳಿಂದ 110 ಕೋಟಿ ರೂಪಾಯಿಗಳಿಗೆ ಹೆಚ್ಚಾದ ಕಾರಣಗಳಿಂದ ತಡವಾಗಿ ಪೂರ್ಣಗೊಂಡಿತು.  ಶಿರಡಿ ಸಾಯಿ ಟ್ರಸ್ಟ್ ಯೋಜನೆ ಮೊತ್ತವನ್ನು ಕಡಿತಗೊಳಿಸದೇ ನಿರ್ಮಾಣದಲ್ಲಿ ಉತ್ತಮ ಗುಣಮಟ್ಟದ ನಿರ್ಮಾಣ ಸಾಮಗ್ರಿಗಳನ್ನು ಬಳಸಿ ಎರಡೂ ವಸತಿ ಸಮುಚ್ಚಯಗಳನ್ನು ಉತ್ತಮವಾಗಿ ನಿರ್ಮಾಣ ಮಾಡಿರುತ್ತದೆ ಎಂದು ಶ್ರೀ.ಕೆ.ವಿ.ರಮಣಿಯವರು ತಿಳಿಸಿದರು.

ಶಿರಡಿ ಸಾಯಿಬಾಬಾ ಸಂಸ್ಥಾನವು ಬಾಹ್ಯ ಸೇವೆಗಳಾದ ಉತ್ತಮ ರಸ್ತೆ, ಪಾದಚಾರಿ ಮಾರ್ಗ, ವಿದ್ಯುತ್, ಬೀದಿ ದೀಪ ಹಾಗೂ ನೀರಿನ ವ್ಯವಸ್ಥೆಗಳನ್ನು 45 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಮಾಡಿರುತ್ತದೆ.

ಸಾಯಿ ಆಶ್ರಮ - 1 ರಲ್ಲಿ 1536 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದ್ದು ಸುಮಾರು 9000 ಭಕ್ತರು ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ. ಒಂದು ಸಾಮಾನ್ಯ ಸೇವಾ ಬ್ಲಾಕ್ ಅನ್ನು ನಿರ್ಮಿಸಲಾಗಿದ್ದು ಅಲ್ಲಿ ಭಕ್ತರಿಗೆ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಒಂದು ಓಪನ್ ಏರ್ ಥಿಯೇಟರ್ ಅನ್ನು ಕೂಡ ನಿರ್ಮಾಣ ಮಾಡಲಾಗಿದ್ದು ಇಲ್ಲಿ ಸುಮಾರು 2000 ಸಾಯಿ ಭಕ್ತರು ಒಂದೆಡೆ ಕುಳಿತು ಸಾಯಿ ಭಜನೆ, ಕೀರ್ತನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಗಳು ಇಲ್ಲದ ಸಮಯದಲ್ಲಿ ಈ ಸ್ಥಳದಲ್ಲಿ ಸಾಯಿಬಾಬಾ ಪಲ್ಲಕ್ಕಿ ಯಾತ್ರಿಗಳು ಮತ್ತು ಪಾದಯಾತ್ರಿಗಳು ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ.

ಸಾಯಿ ಅಶ್ರಮ - 2 ರಲ್ಲಿ 192 ವಿಶಾಲವಾದ ಹಾಲ್ ಗಳನ್ನು ನಿರ್ಮಿಸಲಾಗಿದ್ದು ಸುಮಾರು 5000 ಸಾಯಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ. ಅಲ್ಲದೇ, ಒಂದು ಸಾಮಾನ್ಯ ಸೇವಾ ಬ್ಲಾಕ್ ಅನ್ನು ನಿರ್ಮಿಸಲಾಗಿದ್ದು ಅಲ್ಲಿ ಭಕ್ತರಿಗೆ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ.

ಸಾಯಿ ಆಶ್ರಮ - 1 ಮತ್ತು 2 ರ ಖಾಲಿ ಸ್ಥಳದಲ್ಲಿ ವಿವಿಧ ಬಗೆಯ 1,350 ಮರಗಳು, 50,000 ಗಿಡಗಳು ಮತ್ತು 27,000 ಚದರ ಅಡಿಯಲ್ಲಿ ವಿಶಾಲವಾದ ಹುಲ್ಲುಗಾವಲನ್ನು ನಿರ್ಮಿಸಲಾಗಿದ್ದು ಭಕ್ತರಿಗೆ ಉಳಿದುಕೊಳ್ಳಲು ಒಳ್ಳೆಯ ವಾತಾವರಣವನ್ನು ನಿರ್ಮಿಸಲಾಗಿದೆ.

ಸಾಯಿ ಆಶ್ರಮ - 1 ರ ಮೂರು ಬ್ಲಾಕ್ ಗಳಲ್ಲಿ ನಿರ್ಮಾಣ ಮಾಡಲಾಗಿರುವ 384 ಕೊಠಡಿಗಳು ಸಂಪೂರ್ಣ ಹವಾನಿಯಂತ್ರಿತವಾಗಿರುತ್ತವೆ.  ಸಾವಿರಾರು ದ್ವಿಚಕ್ರ ವಾಹನಗಳು, ಕಾರ್ ಗಳು ಹಾಗೂ ಬಸ್ ಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ನೈಸರ್ಗಿಕ ಸಮತೋಲವನ್ನು ಕಾಯ್ದುಕೊಳ್ಳುವ ಸಲುವಾಗಿ ಎರಡು ಬೃಹತ್ ಸೆಪ್ಟಿಕ್ ಟ್ಯಾಂಕ್ ಗಳನ್ನು ನಿರ್ಮಿಸಲಾಗಿದ್ದು ಶುದ್ಧೀಕರಣಗೊಳಿಸಿದ ನೀರನ್ನು ಶೌಚಾಲಯ ಹಾಗೂ ಇನ್ನಿತರ ಕಾರ್ಯಗಳಿಗೆ ಬಳಸಲಾಗುವಂತೆ ವ್ಯವಸ್ಥೆ ಮಾಡಲಾಗಿದೆ. ವಸತಿ ಸಮುಚ್ಚಯದ ಎಲ್ಲಾ ಕೊಠಡಿಗಳಲ್ಲಿ ಸೌರಶಕ್ತಿ ಚಾಲಿತ ನೀರಿನ ಹೀಟರ್ ಗಳನ್ನು ಇರಿಸಲಾಗಿದೆ.

ಶ್ರೀ ಸಾಯಿಬಾಬಾ ಸಂಸ್ಥಾನವು ಈ ಎರಡೂ ವಸತಿ ಸಮುಚ್ಚಯಗಳ ಮೇಲ್ವಿಚಾರಣೆಯನ್ನು ಹಾಗೂ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳಲು ಸಿಬ್ಬಂದಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದ್ದು ಅತಿ ಶೀಘ್ರದಲ್ಲಿಯೇ ಈ ವಸತಿ ಸಮುಚ್ಚಯಗಳನ್ನು ಲೋಕಾರ್ಪಣೆ ಮಾಡಲಿದೆ.

ಈ ವಸತಿ ಸಮುಚ್ಚಯಗಳನ್ನು ಪ್ರಾರಂಭಿಸಿದ ನಂತರ ಸಾಯಿ ಭಕ್ತರು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಾಲಯದಲ್ಲಿ ಇಲ್ಲಿನ ಕೊಠಡಿಗಳನ್ನು ಕಾದಿರಿಸಬಹುದಾಗಿದೆ. ಅಲ್ಲದೆ, ಮುಂಬೈ, ಚನ್ನೈ, ಸಿಕಂದರಾಬಾದ್ ಮತ್ತು ಬೆಂಗಳೂರಿನಲ್ಲಿರುವ ಸಂಸ್ಥಾನದ ಮಾಹಿತಿ ಕೇಂದ್ರಗಳ ಮುಖಾಂತರ ಹಾಗೂ ಸಂಸ್ಥಾನದ ಅಂತರ್ಜಾಲ ತಾಣದ ಮೂಲಕ ಆನ್ ಲೈನ್ ಮುಖಾಂತರ ಕೂಡ ಇಲ್ಲಿನ ಕೊಠಡಿಗಳನ್ನು ಕಾದಿರಿಸಬಹುದಾಗಿದೆ.

ಶಿರಡಿ ಸಾಯಿ ಟ್ರಸ್ಟ್, ಚನ್ನೈ ಈ ವಸತಿ ಸಮುಚ್ಚಯಗಳ ನಿರ್ಮಾಣ ಕಾರ್ಯವನ್ನು ಸಂಪೂರ್ಣಗೊಳಿಸಿ ಶಿರಡಿ ಸಾಯಿಬಾಬಾರವರ ಪಾದಗಳಿಗೆ ಸಮರ್ಪಣೆಯನ್ನಾಗಿ ನೀಡಿರುತ್ತದೆ. ಶಿರಡಿ ಸಾಯಿ ಟ್ರಸ್ಟ್, ತಾನು ಯಾವುದೇ ಅಧಿಕಾರವನ್ನು  ಇಟ್ಟುಕೊಳ್ಳದೇ ಈ ಎರಡೂ ವಸತಿ ಸಮುಚ್ಚಯಗಳ ಎಲ್ಲಾ ಜಾಗವನ್ನು ಹಾಗೂ ಎಲ್ಲಾ ಸಂಬಂಧಪಟ್ಟ ದಾಖಲೆಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರ ಮಾಡಿರುತ್ತದೆ. ಕೇವಲ ಸೇವಾ ಮನೋಭಾವದಿಂದ ಈ ಕಾರ್ಯವನ್ನು ಶಿರಡಿ ಸಾಯಿ ಟ್ರಸ್ಟ್ ಮಾಡಿರುತ್ತದೆ.

ಶಿರಡಿ ಸಾಯಿ ಟ್ರಸ್ಟ್ ನ ಈ ಉತ್ತಮ ಕಾರ್ಯದಿಂದ ಪ್ರಪಂಚದ ಎಲ್ಲಾ ಮೂಲೆಗಳಿಂದ ಪ್ರತಿನಿತ್ಯ ಸಾಯಿಬಾಬಾರವರ ದರ್ಶನಕ್ಕೆಂದು ಶಿರಡಿಗೆ ಹರಿದು ಬರುತ್ತಿರುವ ಸಾಯಿಭಕ್ತ ಸಾಗರಕ್ಕೆ ಅತ್ಯಂತ ಕಡಿಮೆ ದರದಲ್ಲಿ ವಸತಿಯನ್ನು ಒದಗಿಸುವ  ಶಿರಡಿ ಸಾಯಿಬಾಬಾ ಸಂಸ್ಥಾನದ ಬಹುದಿನಗಳ ಕನಸು ನನಸಾಗುತ್ತಿದೆ.

ಶಿರಡಿ ಸಾಯಿಬಾಬಾರವರಿಗೆ, ಸಾಯಿಬಾಬಾ ಸಂಸ್ಥಾನಕ್ಕೆ ಹಾಗೂ ಸಾಯಿ ಭಕ್ತರಿಗೆ ಸೇವೆಯನ್ನು ಸಲ್ಲಿಸುವ ಈ ಜೀವಮಾನದ ಅವಕಾಶವನ್ನು ನೀಡಿದ್ದಕ್ಕಾಗಿ ಶಿರಡಿ ಸಾಯಿ ಟ್ರಸ್ಟ್, ಚನ್ನೈ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ತನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment