Friday, August 6, 2010

ಸಾಯಿ ಮಹಾಭಕ್ತ - ದಾಮೋದರ ಸಾವಲ್ ರಾಮ್ ರಾಸನೆ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಸಾಯಿಬಾಬಾ ಭಕ್ತರ ಅನುಭವಗಳು


ದಾಮೋದರ್ ಸಾವಲ್ ರಾಮ್ ರಾಸನೆ

ದಾಮೋದರ್ ರಾಸನೆ ಸಾಯಿಬಾಬಾರವರನ್ನು ಮೊದಲು ಭೇಟಿಯಾದಾಗ ಇವರಿಗೆ ಇಬ್ಬರು ಹೆಂಡತಿಯರಿದ್ದರು ಮತ್ತು ಇಬ್ಬರು ಜೀವಂತರಾಗಿದ್ದರು. ಇವರು ಅನೇಕ ಜ್ಯೋತಿಷಿಗಳನ್ನು ಭೇಟಿ ಮಾಡಿ ವಿಚಾರಿಸಿದಾಗ ಇವರ ಜಾತಕದಲ್ಲಿ ಕೇತು ೫ ನೇ ಮನೆಯಲ್ಲಿ ಇರುವುದರಿಂದ ಸಂತಾನವಾಗುವುದು ಕಷ್ಟ ಎಂದು ಹೇಳಿದ್ದರು. ಆದರೆ ಸಂತ ಶಿರೋಮಣಿಯಾದ ಸಾಯಿಬಾಬಾರವರ ಆಶೀರ್ವಾದದಿಂದ ಇವರಿಗೆ ಸಂತಾನ ಫಲಿಸಿತು. ದಾಮೋದರ್ ರಾಸನೆ ಇನ್ನು ಕೋಪರ್ ಗಾವ್ ನ ಬಳಿ ಇರುವಾಗಲೇ ಇದನ್ನು ತಮ್ಮ ದಿವ್ಯ ದೃಷ್ಟಿಯಿಂದ ಇದನ್ನು ತಿಳಿದ ಸಾಯಿಬಾಬಾರವರು ಇವರಿಗೋಸ್ಕರ ಮಾವಿನ ಹಣ್ಣುಗಳನ್ನು ತರಿಸಿ ಅದರಲ್ಲಿ ೪ ಮಾವಿನ ಹಣ್ಣುಗಳನ್ನು ಬೇರೆ ತೆಗೆದಿಟ್ಟರು. ದಾಮೋದರ್ ರಾಸನೆ ಬಂದು ಸಾಯಿಬಾಬಾರವರಿಗೆ ನಮಸ್ಕರಿಸಿದ ನಂತರ ಸಾಯಿಯವರು ಆ ೪ ಹಣ್ಣುಗಳನ್ನು ಅವರಿಗೆ ಆಶೀರ್ವಾದ ಪೂರ್ವಕವಾಗಿ ಕೊಟ್ಟು ಅದನ್ನು ಚಿಕ್ಕ ಹೆಂಡತಿಗೆ ಕೊಡಬೇಕೆಂದು ಮತ್ತು ಮೊದಲಿಗೆ ೨ ಗಂಡು ಮಕ್ಕಳು ಹುಟ್ಟುವರೆಂದು ನಂತರ ಇನ್ನು ೬ ಮಕ್ಕಳು ಹುಟ್ಟುವರೆಂದು ತಿಳಿಸಿದರು. ಸಾಯಿಬಾಬಾರವರ ನಿರ್ದೇಶನದಂತೆ ರಾಸನೆಯವರ ಚಿಕ್ಕ ಹೆಂಡತಿ ಆ ಮಾವಿನ ಹಣ್ಣುಗಳನ್ನು ತಿಂದರು. ೧೫ ತಿಂಗಳ ಒಳಗಾಗಿ ಮೊದಲನೇ ಗಂಡು ಮಗ ಹುಟ್ಟಿದನು. ನಂತರ ಪುನಃ ೧ ವರ್ಷದ ಒಳಗಾಗಿ ಮತ್ತೊಬ್ಬ ಗಂಡು ಮಗ ಹುಟ್ಟಿದನು. ಇಬ್ಬರು ಮಕ್ಕಳಿಗೆ ಸಾಯಿಬಾಬಾರವರು ಮೊದಲೇ ಹೆಸರನ್ನು ಕೂಡ ಇಟ್ಟಿದ್ದರು. ಸಾಯಿಯವರು ಹೇಳಿದ ಹೆಸರುಗಳನ್ನು ಒಂದು ಡೈರಿಯಲ್ಲಿ ಬರೆದುಕೊಂಡು ರಾಸನೆ ಅದೇ ಹೆಸರುಗಳನ್ನು ತನ್ನ ಮಕ್ಕಳಿಗೆ ಇಟ್ಟರು.

ರಾಸನೆ ಮೊದಲು ಶಿರಡಿಗೆ ಸಾಯಿಯವರನ್ನು ದರ್ಶಿಸಲು ಹೋದಾಗ ನೇವಾಸ ಗ್ರಾಮದ ಬಾಳಾ ಪಟೇಲ್ ಮಸೀದಿಯನ್ನು ಗುಡಿಸುತ್ತಿದ್ದುದನ್ನು ಮತ್ತು ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿರುವುದನ್ನು ರಾಸನೆ ನೋಡಿದರು.

ರಾಸನೆಯವರು ಯಾವಾಗಲೂ ಸಾಯಿಬಾಬಾರವರನ್ನು ಭೇಟಿ ಮಾಡಿ ಅವರೊಡನೆ ವಿಷಯಗಳನ್ನು ಚರ್ಚಿಸಿ ಅವರ ಆದೇಶದಂತೆ ನಡೆಯುತ್ತಿದ್ದರು. ಒಮ್ಮೆ ರಾಸನೆ ಯಾವುದೋ ಅಪೀಲ್ ಗೋಸ್ಕರ ಮುಂಬೈ ಹೈಕೋರ್ಟ್ ಗೆ ಹೋಗಬೇಕಾಗಿತ್ತು. ಆದರೆ ಸಾಯಿಬಾಬಾರವರು ಅವರನ್ನು ಮುಂಬೈಗೆ ಹೋಗುವುದರಿಂದ ತಡೆದರು. ಆದರೆ ಕೋರ್ಟ್ ನ ಫಲಿತಾಂಶ ರಾಸನೆಯವರ ಪರವಾಗಿಯೇ ಆಯಿತು.

ಒಮ್ಮೆ ನಾನಾ ಸಾಹೇಬ್ ಡೆಂಗಳೆ ಒಂದು ಬೆಳ್ಳಿಯ ತಟ್ಟೆಯಲ್ಲಿ ಅನೇಕ ವಿಧವಾದ ಭಕ್ಷ್ಯಗಳನ್ನು ತಂದು ಸಾಯಿಯವರ ಮುಂದೆ ಇರಿಸಿದರು. ಸಾಯಿಯವರು ಕೂಡಲೇ ಒಂದು ನಾಯಿಯನ್ನು ಕರೆದರು. ಅದು ಕೂಡಲೇ ಓಡಿ ಬಂದು ಸ್ವಲ್ಪ ತಿಂದು ಹೊರಟುಹೋಯಿತು. ಇದನ್ನು ನೋಡುತ್ತಿದ್ದ ನಾನಾ ಸಾಹೇಬ್ ಗೆ ತುಂಬಾ ಬೇಸರವಾಯಿತು. ಒಂದು ನಾಯಿ ತಿನ್ನುವುದಕೊಸ್ಕರ ತಾನು ಇಷ್ಟು ಕಷ್ಟ ಯಾಕೆ ಪಡಬೇಕಿತ್ತೆ ಎಂದು ಮನದಲ್ಲೇ ಅಂದುಕೊಂಡರು. ಸಾಯಿಯವರು ಇದನ್ನು ಅರಿತು ಕೂಡಲೇ ಉಗ್ರರಾಗಿ ಬೆಳ್ಳಿ ತಟ್ಟೆಯನ್ನು ನಾನಾ ಸಾಹೇಬ್ ಕಡೆಗೆ ಎಸೆದು ತೆಗೆದುಕೊಂಡು ಹೋಗುವಂತೆ ಜೋರಾಗಿ ಗರ್ಜಿಸಿದರು. ಆ ಸಮಯದಲ್ಲಿ ರಾಸನೆಯವರು ಮಸೀದಿಯಲ್ಲೇ ಇದ್ದರು.

ಸಾಯಿಬಾಬಾರವರು ಪ್ರಾಣಿಗಳಿಗೆ ಮತ್ತು ಸಮಾಜದ ಹಿಂದುಳಿದ ಮತ್ತು ಬಡ ಜನರಿಗೆ ತೋರಿಸುತ್ತಿದ್ದ ಪ್ರೀತಿಯನ್ನು ರಾಸನೆಯವರು ಚೆನ್ನಾಗಿ ತಿಳಿದಿದ್ದರು. ಒಮ್ಮೆ ದಾಮೋದರ್ ರಾಸನೆ ಬಾಬಾ ಬಳಿಗೆ ಹೋಗಿ ಬಾಳಾ ಪಟೇಲ್ ರನ್ನು ತಮ್ಮ ಮನೆಗೆ ಊಟಕ್ಕೆ ಕಳುಹಿಸಲು ಕೋರಿಕೊಂಡರು. ಸಾಯಿಬಾಬಾರವರು ಬಾಳಾ ಹಿಂದುಳಿದ ವರ್ಗಕ್ಕೆ ಸೇರಿದವರೆಂದು ಅವರನ್ನು ಮನೆಯ ಹೊರಗಡೆ ಊಟಕ್ಕೆ ಕೂರಿಸಬಾರದೆಂದು, ಬದಲು ತಮ್ಮ ಜೊತೆಯಲ್ಲೇ ಊಟಕ್ಕೆ ಕೂರಿಸಿಕೊಂಡರೆ ಮಾತ್ರ ಕಳುಹಿಸುವೆನೆಂದು ಷರತ್ತು ವಿಧಿಸಿದರು. ರಾಸನೆಯವರು ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸಿದರು. ಸಾಯಿಯವರು ತಮ್ಮ ಅಭ್ಯಂತರ ಇಲ್ಲವೆಂದು ಒಪ್ಪಿಗೆ ನೀಡಿದರು. ಅಡಿಗೆ ಎಲ್ಲಾ ಸಿದ್ದವಾದ ಮೇಲೆ ರಾಸನೆ ಒಂದು ತಟ್ಟೆ ತುಂಬಾ ಭಕ್ಷ್ಯಗಳನ್ನು ಸಾಯಿಬಾಬಾರವರ ಪಟದ ಮುಂದೆ ಇಟ್ಟು ಸಾಯಿಬಾಬಾರವರನ್ನು ಸ್ವೀಕರಿಸುವಂತೆ ಜೋರಾಗಿ ಕೂಗಿದರು. ಆಗ ಒಂದು ಕರಿ ನಾಯಿಯು ಓಡಿ ಬಂದು ತಟ್ಟೆಯಲ್ಲಿದ್ದ ಸ್ವಲ್ಪ ಊಟವನ್ನು ತಿಂದು ಹೋಯಿತು. ರಾಸನೆಯವರು ಆ ನಾಯಿಯು ತನ್ನ ಊಟವನ್ನು ಮುಗಿಸುವ ತನಕ ಕಾದಿದ್ದು, ನಂತರ ಬೇರೆ ಎಲ್ಲರಿಗೂ ಊಟಕ್ಕೆ ಬಡಿಸಿ ನಂತರ ತಾವು ಕೂಡ ಪ್ರಸಾದವನ್ನು ತೆಗೆದುಕೊಂಡರು. ಸಾಯಿಯವರ ಆದೇಶದಂತೆ ರಾಸನೆಯವರು ಬಾಳಾರನ್ನು ಹೊರಕ್ಕೆ ಕೂಡಿಸದೆ ತಮ್ಮ ಪಕ್ಕದಲ್ಲೇ ಊಟಕ್ಕೆ ಕೂಡಿಸಿಕೊಂಡರು.

ಕೆಲವೊಮ್ಮೆ ಸಾಯಿಬಾಬಾರವರು ರಾಸನೆಯವರನ್ನು ಚೆನ್ನಾಗಿ ಬೈದು ಮತ್ತು ಹೊಡೆದು ಮಾಡುತ್ತಿದ್ದರು. ರಾಸನೆಯವರು ಅಕ್ಕಲಕೋಟೆ ಮಹಾರಾಜರಂತೆ ಸಾಯಿಯವರು ಕೂಡ ಬೈದು ಮತ್ತು ಹೊಡೆದು ಮಾಡುವುದು ಮುಂದೆ ಒಳ್ಳೆಯದಾಗುವುದರ ಸೂಚನೆ ಎಂದು ಚೆನ್ನಾಗಿ ಅರಿತಿದ್ದರು. ಆದ್ದರಿಂದ ರಾಸನೆಯವರು ಒಂದು ಬಾರಿಯಾದರೂ ಸಾಯಿಬಾಬಾರವರ ಮೇಲೆ ಬೇಜಾರಾಗಲಿ ಅಥವಾ ಕೋಪವನ್ನಾಗಲಿ ಮಾಡಿಕೊಳ್ಳುತ್ತಿರಲಿಲ್ಲ. ಆಲ್ಲದೇ, ಸಾಯಿಯವರೊಂದಿಗೆ ತಮ್ಮ ಸಂಬಂಧವನ್ನು ಹಾಗೆಯೇ ಮುಂದುವರಿಸಿದರು.

ರಾಸನೆಯವರು ಮೊದಲ ಬಾರಿಗೆ ಕ್ರಿ.ಶ.೧೮೯೫ ರಲ್ಲಿ ಸಾಯಿಬಾಬಾರವರನ್ನು ಭೇಟಿಯಾದರು. ಅದರ ಮುಂದಿನ ವರ್ಷದಿಂದ ಶಿರಡಿಯಲ್ಲಿ ಶ್ರೀರಾಮ ನವಮಿ ಉತ್ಸವ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಕೂಡ ರಾಸನೆ ವಂಶಸ್ಥರು ಪ್ರತಿ ವರ್ಷ ರಾಮನವಮಿ ಸಂದರ್ಭದಲ್ಲಿ ಒಂದು ಆಭರಣವನ್ನು ನೀಡುತ್ತಾ ಬಂದಿದ್ದಾರೆ.

ಒಮ್ಮೆ ರಾಸನೆಯವರು ಒಂದು ಹತ್ತಿ ವ್ಯಾಪಾರವನ್ನು ಪಾಲುಗಾರಿಕೆಯಲ್ಲಿ ಮಾಡಲು ಇಚ್ಚಿಸಿ ಸಾಯಿಯವರ ಅನುಮತಿ ಬೇಡಲು ಶಿರಡಿಗೆ ಬಂದರು. ಆಗ ಅಲ್ಲಿ ಸಾಯಿಬಾಬಾ ಮತ್ತು ಮಹಳಸಾಪತಿ ಬಿಟ್ಟರೆ ಬೇರೆ ಯಾರು ಇರಲಿಲ್ಲ. ರಾಸನೆಯವರು ಸಾಯಿಯವರ ಪಾದಗಳನ್ನು ಒತ್ತುತ್ತಾ ಮನದಲ್ಲೇ ಹತ್ತಿಯ ವ್ಯಾಪಾರದಲ್ಲಿ ತಮಗೆ ಲಾಭವಾದರೆ ಅದರ ಒಂದು ಪಾಲನ್ನು ಸಾಯಿಯವರಿಗೆ ನೀಡುವುದಾಗಿ ಅಂದುಕೊಂಡರು. ಇದನ್ನು ತಿಳಿದ ಸರ್ವಾಂತರ್ಯಾಮಿ ಸಾಯಿಬಾಬಾರವರು ತಾವು ಲಾಭದ ಹಂಚಿಕೆಯಲ್ಲಿ ಸಿಕ್ಕಳು ಇಚ್ಚಿಸುವುದಿಲ್ಲ ಎಂದು ತಿಳಿಸಿದುದೇ ಆಲ್ಲದೇ ಆ ವ್ಯಾಪಾರವನ್ನು ಮಾಡಿದರೆ ರಾಸನೆಯವರಿಗೆ ನಷ್ಟವಾಗುವುದೆಂದು ತಿಳಿಸಿದರು. ಸಾಯಿಬಾಬಾರವರ ಆದೇಶದಂತೆ ರಾಸನೆ ಹತ್ತಿ ವ್ಯಾಪಾರದ ಯೋಚನೆಯನ್ನು ಕೈಬಿಟ್ಟರು.

ಇನ್ನೊಂದು ಸಂದರ್ಭದಲ್ಲಿ ರಾಸನೆಯವರು ಅಕ್ಕಿ, ಗೋಧಿ ಮತ್ತು ಬೇಳೆ ಕಾಳುಗಳ ವ್ಯಾಪಾರ ಮಾಡಲು ಇಚ್ಚಿಸಿ ಸಾಯಿಯವರ ಅನುಮತಿ ಬೇಡಿದರು. ಆಗಲೂ ಕೂಡ ಸಾಯಿಯವರು ತಮ್ಮ ಅಂತರ್ ದೃಷ್ಟಿಯಿಂದ ಕಿರಾಣಿ ವ್ಯಾಪಾರದಲ್ಲಿ ನಷ್ಟವಾಗುವುದೆಂದು ತಾನು ಕೊಂಡಿದ್ದಕ್ಕಿಂತ ಕಡಿಮೆ ಬೆಲೆಗೆ ಪದಾರ್ಥಗಳನ್ನು ಮಾರಬೇಕಾಗುವುದೆಂದು ತಮ್ಮ ಅಸಮ್ಮತಿಯನ್ನು ಸೂಚಿಸಿದರು. ರಾಸನೆ ಆ ವ್ಯಾಪಾರವನ್ನು ಕೂಡ ಸಾಯಿಯವರ ಆದೇಶದಂತೆ ಕೈಬಿಟ್ಟರು. ಸ್ವಲ್ಪ ದಿನಗಳು ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಾಗುತ್ತಲೇ ಹೋಯಿತು. ರಾಸನೆಯವರ ಮಿತ್ರರು ಇದನ್ನು ಅವರಿಗೆ ತೋರಿಸಿ ಅವರನ್ನು ಮತ್ತು ಬಾಬಾರವರನ್ನು ತೆಗಳಿದರು ಮತ್ತು ಬಾಬಾರವರ ಭವಿಷ್ಯ ಸುಳ್ಳಾಯಿತು ಎಂದು ಲೇವಡಿ ಮಾಡಿದರು. ಆದರೆ ಶ್ರಾವಣ ಮಾಸದಲ್ಲಿ ಅಕಾಲಿಕ ಮಳೆಯಿಂದ ವರ್ತಕರು ಶೇಖರಿಸಿ ಇಟ್ಟಿದ್ದ ಧಾನ್ಯವೆಲ್ಲ ಹಾಳಾಗಿ ಹೋಯಿತು. ಬೆಳೆಗಳು ಇಳಿದು ಹೋಗಿ, ವರ್ತಕರಿಗೆಲ್ಲ ಭಾರಿ ನಷ್ಟವಾಯಿತು. ಆದರೆ ರಾಸನೆಯವರು ಅಂತಹ ತೊಂದರೆಯಿಂದ ಪಾರಾದರು.

ರಾಸನೆಯವರು ಸಾಯಿಯವರ ಒಪ್ಪಿಗೆ ಇಲ್ಲದೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸಾಯಿಯವರು ಜೀವಂತರಾಗಿದ್ದಾಗ ಅವರನ್ನು ಮುಖತಃ ಭೇಟಿ ಮಾಡಿ ವಿಚಾರಿಸುತ್ತಿದ್ದರು. ಕ್ರಿ.ಶ.೧೯೧೮ ರಲ್ಲಿ ಸಾಯಿಯವರ ಸಮಾಧಿಯಾದ  ನಂತರ ಸಾಯಿಯವರ ಪಟದ ಮುಂದೆ ಚೀಟಿ ಹಾಕಿ ಅದರಲ್ಲಿದ್ದಂತೆ ನಡೆಯುತ್ತಿದ್ದರು. ಅದೇ ರೀತಿ ಸಾಯಿಬಾಬಾರವರೂ ಕೂಡ ಇವರಿಗೆ ಮಾರ್ಗದರ್ಶನ ನೀಡುತ್ತಿದ್ದರು.

ಕ್ರಿ.ಶ.೧೯೧೦-೧೯೧೧ ರಲ್ಲಿ ರಾಸನೆಯವರ ಸಹೋದರರು ಇವರಿಂದ ಬೇರೆಯಾದರು. ಇವರ ಸಹೋದರಿಯು ಮರಣ ಹೊಂದಿದರು ಮತ್ತು ಇವರ ಮನೆಯಲ್ಲಿ ಕಳ್ಳತನವಾಯಿತು. ಹೀಗೆ ಒಮ್ಮೆಲೇ ಎಲ್ಲಾ ಆಘಾತಗಳು ಬಂದು ರಾಸನೆಯವರು ತುಂಬಾ ಕಷ್ಟ ಅನುಭವಿಸಿದರು. ಮನದಲ್ಲಿ ತೀವ್ರವಾದ ನೋವನ್ನು ಅನುಭವಿಸುತ್ತಿದ್ದರು. ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಈ ಮನಸ್ಥಿತಿಯಲ್ಲಿ ರಾಸನೆಯವರು ಸಾಯಿಬಾಬಾರವರನ್ನು ಭೇಟಿ ಮಾಡಿದಾಗ ಸಾಯಿಬಾಬಾರವರು ಇವರನ್ನು ಸಂತೈಸಿ ಇವರಿಗೆ ಉಪದೇಶ ನೀಡಿ ಇವರು ಚಂದನದಿಂದ ತಮ್ಮ ಪೂಜೆಯನ್ನು ಮಾಡುವಂತೆ ಹೇಳಿ ಅಪ್ಪ ಕುಲಕರ್ಣಿಯವರ ಮನೆಯಲ್ಲಿ ಹಬ್ಬದ ಊಟ ಮಾಡಲು ಆದೇಶಿಸಿದರು.

ರಾಸನೆಯವರ ಮನೆಯಲ್ಲಿ ಒಮ್ಮೆ ಕಳ್ಳತನವಾಯಿತು. ೩೦ ವರ್ಷಗಳಿಂದ ರಾಸನೆಯವರ ಸ್ನೇಹಿತನಾಗಿದ್ದ ಒಬ್ಬ ಇವರ ಹೆಂಡತಿಯ ಎಲ್ಲಾ ಒಡವೆಗಳನ್ನು ಮತ್ತು ಮಂಗಳಸೂತ್ರವನ್ನು ಕೂಡ ಕದ್ದುಕೊಂಡು ಓಡಿಹೋದನು. ರಾಸನೆಯವರು ಬಾಬಾರವರ ಫೋಟೋದ ಮುಂದೆ ಕಣ್ಣೀರಿಟ್ಟು ತಮ್ಮ ವೇದನೆಯನ್ನು ತೋಡಿಕೊಂಡರು. ಮಾರನೇ ದಿನವೇ ಓಡಿಹೋಗಿದ್ದ ರಾಸನೆಯವರ ಮಿತ್ರ ವಾಪಸ್ ಬಂದು ಇವರ ಹೆಂಡತಿಯ ಒಡವೆಗಳನ್ನು ಹಿತಿರುಗಿಸಿ ತನ್ನ ತಪ್ಪನ್ನು ಒಪ್ಪಿಕೊಂಡು ರಾಸನೆಯವರ ಕ್ಷಮೆ ಬೇಡಿದನು.

No comments:

Post a Comment