Tuesday, August 10, 2010

ಸಾಯಿ ಮಹಾಭಕ್ತ - ದತ್ತಾತ್ರೇಯ ದಾಮೋದರ ರಾಸನೆ ಅಲಿಯಾಸ್ ನಾನಾಸಾಹೇಬ್ ರಾಸನೆ- ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಸಾಯಿಬಾಬಾ ಭಕ್ತರ ಅನುಭವಗಳು

ದತ್ತಾತ್ರೇಯ ದಾಮೋದರ ರಾಸನೆ

ದತ್ತಾತ್ರೇಯ ರಾಸನೆಯವರು ದಾಮೋದರ ಸಾವಲ್ ರಾಮ್ ರಾಸನೆಯವರ ಮೊದಲನೇ ಪುತ್ರ. ಕ್ರಿ.ಶ.೧೯೦೦ ರಲ್ಲಿ ಇವರ ೫ ನೇ ವರ್ಷದಲ್ಲಿ ಇವರ ಚೌಲ ಕಾರ್ಯ ಮಾಡಿಸಲು ಮತ್ತು ಅಕ್ಷರಾಭ್ಯಾಸ ಮಾಡಿಸಲು ಇವರ ತಂದೆಯವರು ಇವರನ್ನು ಶಿರಡಿಗೆ ಕರೆದುಕೊಂಡು ಹೋದರು. ಸಾಯಿಬಾಬಾರವರು ಇವರ ಕೈಹಿಡಿದು ಅಕ್ಷರಾಭ್ಯಾಸ ಮಾಡಿಸಿದರು. ಇವರನ್ನು ನಂತರ ಶಿರಡಿಯಲ್ಲಿನ ಶಾಲೆಗೆ ಸೇರಿಸಲಾಯಿತು. ದತ್ತಾತ್ರೇಯರ ಮದುವೆಯ ಸಮಯದಲ್ಲಿ ಇವರಿಗೆ ೪ ಹೆಣ್ಣುಗಳ ಜಾತಕಗಳು ಬಂದವು. ಇವರ ತಂದೆಯವರು ಸಾಯಿಬಾಬಾರವರ ಅನುಮತಿ ಇಲ್ಲದೆ ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಆದ್ದರಿಂದ ೪ ಜಾತಕಗಳನ್ನು ಹಿಡಿದುಕೊಂಡು ಸಾಯಿಬಾಬಾರವರ ಬಳಿಗೆ ಹೋದರು. ಒಂದು ಹೆಣ್ಣಿನ ಕಡೆಯವರು ೨೫೦೦ ರಿಂದ ೩೦೦೦ ರುಪಾಯಿಗಳ ವರದಕ್ಷಿಣೆಯನ್ನು ಕೂಡ ನೀಡುತ್ತೇವೆಂದು ಹೇಳಿದ್ದರು. ಆದರೆ ಸಾಯಿಯವರು ಒಂದು ಬಡ ಹೆಣ್ಣಿನ ಜಾತಕವನ್ನು ತೋರಿಸಿ ಅದೇ ಹೆಣ್ಣನ್ನು ಕೊಟ್ಟು ಮದುವೆ ಮಾಡುವಂತೆ ದತ್ತಾತ್ರೇಯ ರಾಸನೆಯವರ ತಂದೆಯವರಿಗೆ ಸೂಚಿಸಿದರು. ಅದೇ ಹೆಣ್ಣನ್ನು ದತ್ತಾತ್ರೇಯ ರಾಸನೆಯವರಿಗೆ ಕೊಟ್ಟು ಮದುವೆ ಮಾಡಲಾಯಿತು. ಮದುವೆಯು ಪಂಡರಾಪುರದಲ್ಲಿ ನಡೆಯುವಂತೆ ನಿಶ್ಚಯಿಸಲಾಗಿತ್ತು. ಮದುವೆಗೆ ಸಾಯಿಯವರನ್ನು ಬರುವಂತೆ ದತ್ತಾತ್ರೇಯ ರಾಸನೆಯವರ ತಂದೆ ತುಂಬಾ ಒತ್ತಾಯ ಮಾಡಿದಾಗ ಸಾಯಿಬಾಬಾರವರು "ನಾನು ನಿನ್ನೊಂದಿಗೆ ಸದಾ ಇರುತ್ತೇನೆ. ನನ್ನನ್ನು ನೆನಪು ಮಾಡಿಕೊಂಡಾಗಳೆಲ್ಲ ನಾನು ನಿನ್ನ ಬಳಿ ಬರುತ್ತೇನೆ. ದೇವರ ಅನುಮತಿ ಇಲ್ಲದೆ ನಾನು ಎಲ್ಲಿಯು ಬರಲು ಆಗುವುದಿಲ್ಲ. ನನ್ನ ಬದಲು ಶ್ಯಾಮನನ್ನು ಕಳುಹಿಸುತ್ತೇನೆ" ಎಂದರು. ಅದರಂತೆ, ಶ್ಯಾಮ ಅವರು ಮದುವೆಗೆ ಪಂಡರಾಪುರಕ್ಕೆ ಹೋಗಿಬಂದರು. ದತ್ತಾತ್ರೇಯ ರಾಸನೆಯವರ ತಮ್ಮನಿಗೆ ಕೂಡ ಸಾಯಿಬಾಬಾರವರ ನಿರ್ದೇಶನದಂತೆ ಹಸರು ಇಡಲಾಯಿತು.

ದತ್ತಾತ್ರೇಯ ರಾಸನೆಯವರಿಗೆ ಎರಡು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದನು. ಆದರೆ, ಆ ಮಕ್ಕಳೆಲ್ಲ ಅಪಸ್ಮಾರ ಖಾಯಿಲೆ ಬಂದು ಹುಟ್ಟಿದ ಕೆಲವೇ ದಿನಗಳಲ್ಲಿ ಸತ್ತು ಹೋದರು. ಗಂಡು ಮಗ ಕ್ರಿ.ಶ.೧೯೨೬ ರಲ್ಲಿ ಮರಣ ಹೊಂದಿದನು. ಇವರ ಹೆಂಡತಿ ಬಹಳ ಖಾಯಿಲೆಯಿಂದ ನೆರಳುತ್ತಿದ್ದರು ಮತ್ತು ಇವರಿಗೆ ದಿಕ್ಕೇ ತೋಚದಂತಾಗಿತ್ತು. ಆಗ ಇವರು ಸಯಿಯವರನ್ನು ಮನಸಾರೆ ಪ್ರಾರ್ಥಿಸಿದರು. ಇವರು ಶಿರಡಿಯಲ್ಲಿ ಒಂದು ದಿನ ರಾತ್ರಿಯವೇಳೆ ಮಲಗಿರುವಾಗ ಕನಸಿನಲ್ಲಿ ಸಾಯಿಬಾಬಾರವರು ಬಂದು ಇವರ ಮಗನು ದುಷ್ಟ ನಕ್ಷತ್ರದಲ್ಲಿ ಜನಿಸಿದ್ದರಿಂದ ತಂದೆ ತಾಯಿಗಳಿಗೆ ಅಪಾಯವಿತ್ತೆಂದು, ಆದ್ದರಿಂದ ಆ ಮಗುವನ್ನು ತಾವೇ ತಮ್ಮ ಬಳಿಗೆ ಕರೆದುಕೊಂಡೆ ಎಂದು ಹೇಳಿ, ಅದರ ಬದಲು ಮತ್ತೊಬ್ಬ ಮಗನು ಹುಟ್ಟುವನೆಂದು ಅಭಯವನ್ನಿತ್ತರು. ಅದರಂತೆ ೧೫ ತಿಂಗಳ ಒಳಗಾಗಿ ಅವರಿಗೆ ಮತ್ತೊಬ್ಬ ಮಗನು ಹುಟ್ಟಿದನು. 

ಕ್ರಿ.ಶ.೧೯೨೭ ರಲ್ಲಿ ಖೇಡ್ ಗಾವ್ ಪೇಟ್ ನ ಶ್ರೀ. ನಾರಾಯಣ ಮಹಾರಾಜರವರ ಬಳಿಗೆ ಹೋಗಿ ಅವರಿಗೆ ವಂದಿಸಿದಾಗ ಅವರು "ನಿನ್ನ ಗುರುಗಳು ಶಿರಡಿ ಸಾಯಿಬಾಬಾ. ನೀನು ಒಳ್ಳೆಯ ಗುರುವನ್ನೇ ಆಶ್ರಯಿಸಿದ್ದಿಯೇ. ಇಲ್ಲಿಗೆ ಬರುವ ಅವಶ್ಯಕತೆಯಿರಲಿಲ್ಲ. ನೀನು ಅಲ್ಲಿಗೆ ಹೋಗಿ ನಿನ್ನ ಗುರುಗಳನ್ನು ಪೂಜಿಸು" ಎಂದು ಅಪ್ಪಣೆಯಿತ್ತರು. 

ಕ್ರಿ.ಶ.೧೯೨೭ ರಲ್ಲಿ ಇನ್ನೊಬ್ಬ ಸಾಧು ಸಂತರಾದ ಜಾನಕೀದಾಸ ಎಂಬುವರನ್ನು ಭೇಟಿ ಮಾಡಿ ಅವರಿಗೆ ಸಾಯಿಬಾಬಾರವರ ಹೆಸರನ್ನು ಹೇಳಿಕೊಂಡು ನಮಸ್ಕರಿಸಿದಾಗ ಅವರು ಕೂಡ "ನಿನ್ನ ಗುರುಗಳು ಶಿರಡಿ ಸಾಯಿಬಾಬಾ. ನೀನು ಒಳ್ಳೆಯ ಗುರುವನ್ನೇ ಆಶ್ರಯಿಸಿದ್ದಿಯೇ. ಇಲ್ಲಿಗೆ ಬರುವ ಅವಶ್ಯಕತೆಯಿರಲಿಲ್ಲ. ನೀನು ಅಲ್ಲಿಗೆ ಹೋಗಿ ನಿನ್ನ ಗುರುಗಳನ್ನು ಪೂಜಿಸು" ಎಂದು ಅಪ್ಪಣೆಯಿತ್ತರು. 

ಕ್ರಿ.ಶ.೧೯೨೭ ರಲ್ಲಿ ಇವರು ಖಾಯಿಲೆಯಿಂದ ನೆರಳುತ್ತಿದ್ದಾಗ ಪ್ರತಿ ಭಾನುವಾರ ಜುನ್ನೆರ್ ನಿಂದ ೨ ಮೈಲು ದೂರದಲ್ಲಿದ್ದ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದರು. ಒಂದು ದಿನ ಆ ದೇವರ ಪ್ರತಿಮೆಯಲ್ಲಿ ಶಿವನ ಬದಲು ಸಾಯಿಬಾಬಾರವರೇ ಕುಳಿತಿರುವಂತೆ ಕಂಡು ಭಕ್ತಿಯಿಂದ ನಮಸ್ಕರಿಸಿದರು. ಅಂದಿನಿಂದ ಅವರ ಖಾಯಿಲೆ ಗುಣವಾಯಿತು.

ಕ್ರಿ.ಶ.೧೯೨೮ ರಲ್ಲಿ ದತ್ತಾತ್ರೇಯ ಅವರಿಗೆ ಒಬ್ಬ ಮಗನು ಇವರು ಪಂಡರಾಪುರದಲ್ಲಿದ್ದಾಗ ಹುಟ್ಟಿದನು. ೧೫ ತಿಂಗಳ ನಂತರ ಇವರು ತಮ್ಮ ತಂದೆಯವರೊಂದಿಗೆ ಶಿರಡಿಗೆ ಹೋದಾಗ ಇವರ ತಂದೆಯವರು ಇವರಿಗೆ ಇನ್ನೊಂದು ಮಗನು ಹುಟ್ಟುವಂತೆ ಆಶೀರ್ವಾದ ಮಾಡಲು ಸಾಯಿಬಾಬಾರವರನ್ನು ಪ್ರಾರ್ಥಿಸಿದರು.

ಕ್ರಿ.ಶ.೧೯೩೧ ರಲ್ಲಿ ದತ್ತಾತ್ರೇಯರಿಗೆ ಮತ್ತೊಬ್ಬ ಮಗನು ಹುಟ್ಟಿದನು. ಅವನಿಗೆ ಸಾಯಿದಾಸ ಎಂದು ಹೆಸರಿಟ್ಟರು. ಅವನು ಹುಟ್ಟಿದ ಎರಡನೇ ದಿನವೇ ಅವನಿಗೆ ವಿಪರೀತ ಜ್ವರ ಕಾಣಿಸಿಕೊಂಡಿತು. ಆ ಮಗುವಿಗೆ ಸಾಯಿಬಾಬಾರವರ ಉಧಿ ಮತ್ತು ತೀರ್ಥವನ್ನು ನೀಡಲಾಯಿತು. ಆಲ್ಲದೇ, ಸಾಯಿಬಾಬಾರವರ ಬಟ್ಟೆಯ ಚೂರುಗಳನ್ನು ತಾಯಿತದಲ್ಲಿ ಸೇರಿಸಿ ಮಗುವಿಗೆ ಕಟ್ಟಲಾಯಿತು. ಮಗುವು ಸ್ವಲ್ಪ ದಿನಗಳಲ್ಲಿ ಹುಷಾರಾಯಿತು. ಮಗುವಿಗೆ ಒಂದು ವರ್ಷವಾದ ನಂತರ ಮಗುವಿನೊಂದಿಗೆ ಶಿರಡಿಗೆ ತೆರಳಿದರು. ಸಾಯಿಬಾಬಾರವರಿಗೆ ಅಭಿಷೇಕವನ್ನು ಮಾಡಿಸಿ, ಸಮಾಧಿಗೆ ಶೇಷವಸ್ತ್ರವನ್ನು ಹೊದಿಸಿ, ಅನೇಕ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಕ್ರಿ.ಶ.೧೯೩೧ ರಲ್ಲಿ ದತ್ತಾತ್ರೇಯ ಅವರನ್ನು ಬಳೆಗಳ ವ್ಯಾಪಾರ ಮಾಡಲು ಅವರ ತಂದೆಯವರು ನೇಮಿಸಿದರು. ದತ್ತಾತ್ರೇಯ ಅವರು ಅಂಗಡಿಯ ಹೆಸರಿನಲ್ಲಿ ಸಾಯಿಬಾಬಾರವರ ಹೆಸರು ಇರಬೇಕೆಂದು ಪಟ್ಟು ಹಿಡಿದರು. ಸಾಯಿಬಾಬಾರವರ ಪಟದ ಮುಂದೆ ಅನೇಕ ಹೆಸರುಗಳನ್ನು ಬರೆದು ಚೀಟಿಯನ್ನು ಹಾಕಿ ಅವರ ಅನುಮತಿ ಪಡೆದು ಅಂಗಡಿಗೆ "ಶ್ರೀ ಸಮರ್ಥ ಸಾಯಿನಾಥ್ ಅಂಡ್ ಕಂಪನಿ" ಎಂದು ಹೆಸರಿಟ್ಟರು. ಅಂಗಡಿಯಲ್ಲಿ ವ್ಯಾಪಾರವನ್ನು ಯಾವುದೇ ಮೋಸವಿಲ್ಲದೆ ಸಾಯಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ ನಿಯತ್ತಿನಿಂದ ವ್ಯಾಪಾರ ಮಾಡುತ್ತಿದ್ದರು. 

೧ ನೇ ಸೆಪ್ಟೆಂಬರ್ ೧೯೩೨ ರಂದು ಮಥುರಾ ಯಾತ್ರೆ ಮಾಡುತ್ತಿದ್ದಾಗ ದತ್ತಾತ್ರೇಯರು ಕಾಲರಾದಿಂದ ಬಳಲುತ್ತಿದ್ದರು ಮತ್ತು ಸಾಯುವ ಸ್ಥಿತಿಗೆ ಬಂದಿದ್ದರು. ಇವರ ತಂದೆಯವರು ಇವರ ಕೊನೆಯ ಆಸೆ ಏನೆಂದು ಕೇಳಿದರು. ದತ್ತಾತ್ರೇಯರು ತಮ್ಮನ್ನು ಶಿರಡಿಗೆ ಕೂಡಲೇ ಕರೆದುಕೊಂಡು ಹೋಗಬೇಕೆಂದು, ತಾವು ಒಂದು ವೇಳೆ ಮರಣ ಹೊಂದಿದರೆ ಶಿರಡಿಯಲ್ಲೇ ತಮ್ಮ ಅಂತ್ಯಕ್ರಿಯೆ ಮಾಡಬೇಕೆಂದು ಮತ್ತು ಸಾಯಿಬಾಬಾರವರೇ ತಮ್ಮ ಕೃಷ್ಣ ಎಂದು ಹೇಳಿದರು. ಆದರೆ ದತ್ತಾತ್ರೇಯ ಅವರ ಮಂಚದ ಹಿಂಭಾಗದಲ್ಲಿ ಸಾಯಿಬಾಬಾರವರ ಫೋಟೋವನ್ನು ಇಟ್ಟು ಅದಕ್ಕೆ ಊದುಬತ್ತಿಯನ್ನು ಹಚ್ಚಿ ಮತ್ತು ದತ್ತಾತ್ರೇಯ ಅವರಿಗೆ ಆಗಾಗ ಉಧಿ ಮತ್ತು ಸಾಯಿಬಾಬಾರವರ ತೀರ್ಥವನ್ನು ಕೊಡುತ್ತಾ ಇದ್ದುದರಿಂದ ಮಥುರದಲ್ಲಿಯೇ ಆರೋಗ್ಯದಲ್ಲಿ ಹೇಗೋ ಸ್ವಲ್ಪ ಸುಧಾರಣೆ ಆಯಿತು. ಒಂದು ಮಧ್ಯರಾತ್ರಿಯಲ್ಲಿ ದತ್ತಾತ್ರೇಯರ ನಾದಿನಿ ಸುಭದ್ರಾ ಭಾಯಿಗೆ ಮೈಮೇಲೆ ಪ್ರಸಿದ್ದ ಮುಸ್ಲಿಂ ಸಂತರಾದ ಮೀರಾದಾತಾರ್ ಬಂದು " ನೀವು ಸಾಯಿಬಾಬಾರವರನ್ನು ಕರೆಯುತ್ತಿದ್ದೀರಿ. ದತ್ತಾತ್ರೇಯರಿಗೆ ವಯಸ್ಸಾಗಿದೆ. ಎಲ್ಲಿಗೂ ಹೋಗಲು ಸಾಧ್ಯವಿಲ್ಲ. ಅದಕ್ಕೆ ನನ್ನ ದೊಡ್ಡಪ್ಪ (ಸಾಯಿಬಾಬಾ) ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ. ಆದುದರಿಂದ ನಾನು ಇಲ್ಲಿಗೆ ಬಂದಿದ್ದೇನೆ. ಹೆದರಬೇಡಿ. ಯಾವುದೇ ಭಯವಿಲ್ಲ. ನಾಳೆ ಬೆಳಗ್ಗೆಯ ಹೊತ್ತಿಗೆ ದತ್ತಾತ್ರೇಯ ಎದ್ದು ಓಡಾಡಲು ಶುರು ಮಾಡುತ್ತಾರೆ. ದತ್ತಾತ್ರೇಯನಿಗೆ ಕುಡಿಯಲು ಕಾಫಿಯನ್ನು ಕೊಡಿ" ಎಂದು ಹೇಳಿದರು.  ಅದರಂತೆ ಕಾಫಿಯನ್ನು ಮಾಡಿ ಅದರಲ್ಲಿ ಸ್ವಲ್ಪ ಉಧಿಯನ್ನು ಬೆರೆಸಿ ಕುಡಿಯಲು ಕೊಡಲಾಯಿತು. ದತ್ತಾತ್ರೇಯರ ಜ್ವರ ಸ್ವಲ್ಪ ಹೊತ್ತಿನಲ್ಲೇ ಕಡಿಮೆ ಆಗಿ ವಿರೋಚನ ಕೂಡ ಕಡಿಮೆಯಾಯಿತು. ಮರುದಿನ ವೈದ್ಯರನ್ನು ಕಾಣಲು ಹೋದಾಗ ಅವರಿಗೆ ಆಶ್ಚರ್ಯವಾಯಿತು. ಅವರು ದತ್ತಾತ್ರೇಯ ಅವರನ್ನು ಈ ಬಗ್ಗೆ ವಿಚಾರಿಸಿದಾಗ ಅವರು ಸಾಯಿಬಾಬಾರವರು ಡಾಕ್ಟರ್ ಗಳಿಗೆ ಡಾಕ್ಟರ್ ಆಗಿದ್ದು ಅವರ ಉಧಿಯಿಂದ ತಾನು ಗುಣ ಹೊಂದಿದೆ ಎಂದು ತಿಳಿಸಿದರು. ಈ ಮಾತನ್ನು ಕೇಳಿ ಡಾಕ್ಟರ್ ಗೆ ಆಶ್ಚರ್ಯವಾಯಿತು.

ಒಮ್ಮೆ ದತ್ತಾತ್ರೇಯರಿಗೆ ೭ ವರ್ಷವಾಗಿದ್ದಾಗ ಅವರು ಶಿರಡಿಗೆ ಹೋಗಿದ್ದರು. ಮಸೀದಿಯಲ್ಲಿ ಸಾಯಿಬಾಬಾರವರ ಕಾಲನ್ನು ಒತ್ತುತ್ತಾ ಕುಳಿತಿದ್ದರು. ಆಗ ಸಾಯಿಬಾಬಾರವರು ತಮ್ಮ ಕೈನಿಂದ ಅಲ್ಲಿ ನೆರೆದಿದ್ದ ಎಲ್ಲಾ ಮಕ್ಕಳಿಗೂ ಸಿಹಿತಿಂಡಿಯನ್ನು ಹಂಚುತ್ತಿದ್ದರು. ಅದನ್ನು ನೋಡಿದ ದತ್ತಾತ್ರೇಯರಿಗೂ ಕೂಡ ಗಮನ ಸಿಹಿತಿಂಡಿಯ ಕಡೆ ಹೋಯಿತು. ಆದುದರಿಂದ ಅವರು ಸಾಯಿಯವರ ಪಾದವನ್ನು ಸರಿಯಾಗಿ ಒತ್ತುತ್ತಿರಲಿಲ್ಲ. ಆಗ ಪಕ್ಕದಲ್ಲೇ ಇದ್ದ ಅವರ ತಾಯಿ ದತ್ತಾತ್ರೇಯರಿಗೆ ಹೊಡೆದು "ನಿನ್ನ ಗಮನ ಸಿಹಿತಿಂಡಿಯ ಕಡೆ ಹರಿದು ನೀನು ಸಾಯಿಬಾಬಾರವರ ಸೇವೆಯನ್ನು ಸರಿಯಾಗಿ ಮಾಡುತ್ತಿಲ್ಲ" ಎಂದು ಜೋರಾಗಿ ಗದರಿಸಿದರು. ಕೂಡಲೇ ಸಾಯಿಬಾಬಾರವರು ಉಗ್ರರಾಗಿ ದತ್ತಾತ್ರೇಯರ ತಾಯಿಯನ್ನು "ಏ ಮುದುಕಿ, ಆ ಮಗುವನ್ನು ಏಕೆ ಹೊಡೆಯುತ್ತೀಯ" ಎಂದು ಜೋರಾಗಿ ಗದರಿಸಿದರು. ದತ್ತಾತ್ರೇಯ ಅವರ ತಾಯಿಯವರು ಸಾಯಿಯವರನ್ನು ತಮ್ಮ ಮಗನಿಗೆ ಸಾಯಿಯವರ ಸೇವೆ ಮಾಡುವ ಮನಸ್ಸನ್ನು ಕೊಡುವಂತೆ ಪ್ರಾರ್ಥಿಸಿದರು. ಆಗ ಸಾಯಿಯವರು "ಇವನು ನನ್ನ ಸೇವೆಯನ್ನು ಚೆನ್ನಾಗಿ ಮಾಡುತ್ತಾನೆ. ದೇವರು ಇವನಿಗೆ ಒಳ್ಳೆಯದನ್ನೇ ಬಯಸುವಂತೆ ಮಾಡುತ್ತಾನೆ. ನೀನೇನು ಹೆದರಬೇಡ ಮತ್ತು ಇವನನ್ನು ಹೊಡೆಯಬೇಡ" ಎಂದು ಬುದ್ದಿ ಹೇಳಿದರು.

ಒಮ್ಮೆ ದತ್ತಾತ್ರೇಯರು ೧೨ ವರ್ಷದವರಾಗಿದ್ದಾಗ ಅವರ ಸಹೋದರನೊಂದಿಗೆ ಶಿರಡಿಗೆ ಹೋಗಿದ್ದರು. ಆಗ ಅವರ ಬಳಿ ೧೦೦ ರೂಪಾಯಿಗಳು ಮಾತ್ರ ಇತ್ತು. ಸಾಯಿಬಾಬಾರವರು ಅವರಿಂದ ಒಮ್ಮೆ ಹತ್ತು ರುಪಾಯಿಯನ್ನು, ಮತ್ತೊಮ್ಮೆ ೧೫ ರುಪಾಯಿಯನ್ನು, ಹೀಗೆ ದಕ್ಷಿಣೆ ಕೇಳುತ್ತಲೇ ಇದ್ದರು. ಕಡೆಗೆ ಅವರ ಬಳಿ ಕೇವಲ ೨೫ ರೂಪಾಯಿಗಳು ಉಳಿಯಿತು. ಆಗ ದತ್ತಾತ್ರೇಯರ ಸಹೋದರನು ಅಹಮದ್ ನಗರದಲ್ಲಿದ್ದ ತಮ್ಮ ಮನೆಗೆ ಪತ್ರ ಬರೆದು ಸಾಯಿಬಾಬಾರವರಿಗೆ ಕೊಡಲು ಮತ್ತು ತಾವಿಬ್ಬರು ವಾಪಸಾಗಲು ಹಣವನ್ನು ಕಳುಹಿಸುವಂತೆ ಕೇಳಿದರು. ಅದೇ ದಿನ ಸಂಜೆ ಸಾಯಿಬಾಬಾರವರು ೨೫ ರುಪಾಯಿಗಳ ದಕ್ಷಿಣೆಯನ್ನು ಇವರಿಂದ ಕೇಳಿದರು. ಆಗ ಇವರು ತಮ್ಮ ಬಳಿಯಿದ್ದ ಎಲ್ಲಾ ಹಣವು ಮುಗಿದು ಹೋಗಿದ್ದು ವಾಪಸ್ ತೆರಳಲು ಹಣವಿಲ್ಲ ಎಂದು ಹೇಳಿದರು. ಕೂಡಲೇ ಸಾಯಿಬಾಬಾರವರು "ಏಕೆ ಸುಳ್ಳು ಹೇಳುತ್ತೀರಿ. ನಿಮ್ಮ ಬಳಿ ೨೫ ರುಪಾಯಿಗಳಿದೆ. ಆಲ್ಲದೇ ನೀವು ಮನೆಗೆ ಪತ್ರವನ್ನು ಬರೆದಿದ್ದೀರ. ಆ ಹಣವು ನಿಮಗೆ ಬಂದು ನಾಳೆ ತಲುಪಲಿದೆ. ನೀವುಗಳು ಹೆದರುವ ಅವಶ್ಯಕತೆಯಿಲ್ಲ" ಎಂದು ಹೇಳಿದರು. ಕೂಡಲೇ ಅವರು ತಮ್ಮ ಬಳಿಯಿದ್ದ ೨೫ ರುಪಾಯಿಗಳನ್ನು ಸಾಯಿಬಾಬಾರವರಿಗೆ ಅರ್ಪಿಸಿದರು.


No comments:

Post a Comment