Tuesday, December 23, 2014

ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜ್ ನ ವತಿಯಿಂದ ವಾರ್ಷಿಕ ಕ್ರೀಡಾ ದಿನದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿಯ ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜ್ ನ ವತಿಯಿಂದ ಇದೇ ತಿಂಗಳ 12ನೇ ಡಿಸೆಂಬರ್ 2014, ಶುಕ್ರವಾರದಂದು ವಾರ್ಷಿಕ ಕ್ರೀಡಾ ದಿನವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದ ಉದ್ಘಾಟನೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನ ಶಿರಡಿಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ವಿಕಾಸ್ ಶಿವಗಜೆಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 


ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ.ರಾಜೇಂದ್ರ ಜಾಧವ್ ರವರು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ವೈದ್ಯಕೀಯ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ಅಲ್ಲದೇ ಯುವ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನಕ್ಕೆ ಬೇಕಾದ ಸರಿಯಾದ ಮಾರ್ಗದರ್ಶನವನ್ನು ಈ ಕ್ರೀಡೆಗಳು ನೀಡುತ್ತವೆ. ಆದ ಕಾರಣ, ಎಲ್ಲಾ ಶಾಲೆಗಳಲ್ಲೂ ಕ್ರೀಡಾಕೂಟವನ್ನು ತಪ್ಪದೇ ಆಯೋಜಿಸಬೇಕು ಎಂದು ತಿಳಿಸಿದರು. 

ಶ್ರೀ.ರಾಜೇಂದ್ರ ಜಾಧವ್ ರವರು ತಮ್ಮ ಮಾತನ್ನು ಮುಂದುವರಿಸುತ್ತಾ ಭಾರತದ 30 ರಿಂದ 40 ವರ್ಷದ ಒಳಗಿನ 70 ಪ್ರತಿಶತ ಜನರು ಪ್ರತಿನಿತ್ಯ  ದೈಹಿಕ ವ್ಯಾಯಾಮಗಳನ್ನು ಮಾಡುವ ಅಭ್ಯಾಸವನ್ನು ಇರಿಸಿಕೊಂಡಿಲ್ಲ. ಹಾಗಾಗಿ, ಬಹಳಷ್ಟು ಯುವ ಜನರು ಹೃದಯಾಘಾತಕ್ಕೆ  ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು. 

ಕ್ರೀಡಾಕೂಟಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ದೈಹಿಕ  ಸಾಮರ್ಥ್ಯ ಹೆಚ್ಚುವುದಲ್ಲದೇ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳಿಗೆ ಆಟದ ಮೈದಾನದ ಅವಶ್ಯಕತೆ ಇದೆ ಎಂದು ತಿಳಿಸಿದ ಶ್ರೀ.ರಾಜೇಂದ್ರ ಜಾಧವ್ ರವರು ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆಟದ ಮೈದಾನದ ಸೌಲಭ್ಯವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.  ಅಷ್ಟೇ ಅಲ್ಲದೆ "ನೀವು ಆಟಗಳಲ್ಲಿ ಭಾಗವಹಿಸಿ ಅದರಲ್ಲಿ ಸೋತರೆ ಅದನ್ನು ಸೋಲೆಂದು ಪರಿಗಣಿಸಬೇಡಿ. ಬದಲಿಗೆ ನೀವು ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಂಡಲ್ಲಿ ಅದು ನಿಜವಾದ ಸೋಲು ಎಂಬುದನ್ನು ತಿಳಿಯಿರಿ" ಎಂಬ ಮಹೋನ್ನತ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು. 

ಶ್ರೀ ಸಾಯಿಬಾಬಾ ಜ್ಯೂನಿಯರ್  ಕಾಲೇಜ್ ತನ್ನ ವಿದ್ಯಾರ್ಥಿಗಳಿಗಾಗಿ ವಾಲಿಬಾಲ್, ಕಬಡ್ಡಿ, ನಿಧಾನಗತಿಯ ಸೈಕಲ್ ತುಳಿತ ಕ್ರೀಡೆಗಳನ್ನು ಆಯೋಜಿಸಿದ್ದರು. ಅಲ್ಲದೇ ಅಡಿಗೆ ಮತ್ತು ರಂಗೋಲಿ ಸ್ಪರ್ಧೆಗಳನ್ನು ಸಹ ಆಯೋಜಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ಕುಮಾರಿ ಶ್ರದ್ಧಾ ಶೇಲರ್, ಕುಮಾರಿ ಸ್ವರೂಪ ಸೊಂಟಕ್ಕೆ, ಕುಮಾರಿ ಭಾಗ್ಯಶ್ರೀ ಸೋನಾವಾನೆ ಕ್ರಮವಾಗಿ ಮೊದಲನೇ, ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿದರು. ಅಡಿಗೆ ಸ್ಪರ್ಧೆಯಲ್ಲಿ ಕುಮಾರಿ ಸ್ನೇಹಾ ತೋರಟ್, ಕುಮಾರಿ ರುಚಿತಾ ಓಸ್ವಾಲ್ ಮತ್ತು ಶ್ರೀ.ಹಿತೇಶ್ ಘಡಿವಾಲ್ ರವರು ಕ್ರಮವಾಗಿ ಮೊದಲನೇ, ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿದರು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು, 
ಕನ್ನಡಕ್ಕೆ: ಶ್ರೀಕಂಠ ಶರ್ಮ 

No comments:

Post a Comment