Saturday, May 11, 2013

ತೆಲುಗು ಶ್ರೀ ಸಾಯಿ ಸಚ್ಚರಿತ್ರೆಯ ಹರಿಕಾರ ದಿವಂಗತ ಶ್ರೀ ಪ್ರತ್ತಿ ನಾರಾಯಣ ರಾವ್ - ಕೃಪೆ: ಸಾಯಿಅಮೃತಧಾರಾ.ಕಾಂ



ದಿವಂಗತ ಶ್ರೀ ಪ್ರತ್ತಿ ನಾರಾಯಣ ರಾವ್ ರವರು ಹೇಮಾಡಪಂತರ ಮರಾಠಿ ಸಾಯಿ ಸಚ್ಚರಿತ್ರೆಯನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ ದಿವಂಗತ ಶ್ರೀ.ಗುಣಾಜಿಯವರ "ಶ್ರೀ ಸಾಯಿ ಸಚ್ಚರಿತ್ರೆ"ಯನ್ನು ತೆಲುಗು ಭಾಷೆಗೆ ಅನುವಾದ ಮಾಡುವ ಮುಖಾಂತರ  ಶಿರಡಿ ಸಾಯಿಬಾಬಾರವರ ಸಾಹಿತ್ಯ ಲೋಕದಲ್ಲಿ ಅಮರರಾಗಿದ್ದಾರೆ. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ ಈ ಗ್ರಂಥವು ಸಾಯಿಬಾಬಾರವರ ಬಗ್ಗೆ ರಚಿತವಾದ ಪ್ರಥಮ ತೆಲುಗು ಗ್ರಂಥವಾಗಿದ್ದು ಸಾಯಿ ಸಾಹಿತ್ಯವೆನ್ನುವ ತಾರಾಲೋಕದಲ್ಲಿ ಗ್ರಹಣವೇ ಹಿಡಿಯದ ಸೂರ್ಯನಂತೆ ರಾರಾಜಿಸುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಶ್ರೀ ಪ್ರತ್ತಿ ನಾರಾಯಣ ರಾವ್ ರವರ ಬಗ್ಗೆ ನಮ್ಮ ಬಳಿ ಹೆಚ್ಚಿನ ಮಾಹಿತಿ ಲಭ್ಯವಿರುವುದಿಲ್ಲ. ಶ್ರೀ ಪ್ರತ್ತಿ ನಾರಾಯಣ ರಾವ್ ರವರೇ ಸ್ವತಃ ತಮ್ಮ ತೆಲುಗು ಸಾಯಿ ಸಚ್ಚರಿತ್ರೆಯ ಮುನ್ನುಡಿಯಲ್ಲಿ "ಗುಬ್ಬಿಯ ಕಾಲಿಗೆ ದಾರ ಕಟ್ಟಿ ಎಳೆಯುವಂತೆ, ಸಾಯಿಬಾಬಾರವರು ತಮ್ಮನ್ನು ಪಶ್ಚಿಮ ತೀರದಿಂದ ಪೂರ್ವ ತೀರಕ್ಕೆ ತಮ್ಮೆಡೆಗೆ ಸೆಳೆದುಕೊಂಡರು" ಎಂದು ಹೇಳಿರುವುದು ಬಹಳ ಅರ್ಥಗರ್ಭಿತವಾದ ಉಕ್ತಿಯಾಗಿರುತ್ತದೆ.

ಶ್ರೀ ಪ್ರತ್ತಿ ನಾರಾಯಣ ರಾವ್ ರವರು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರಂ ಎಂಬ ಪಟ್ಟಣದಲ್ಲಿ ವೈಶ್ಯ ಮನೆತನದಲ್ಲಿ ಜನಿಸಿದರು. ಇವರ ತಾಯಿ ಶ್ರೀಮತಿ.ಪ್ರತ್ತಿ ರಾಮರತ್ನಂ ಹಾಗೂ ತಂದೆ ಶ್ರೀ.ಪ್ರತ್ತಿ ಕಾಮಯ್ಯ. ಇವರಿಗೆ ಒಬ್ಬ ಸಹೋದರ ಹಾಗೂ ಒಬ್ಬ ಸಹೋದರಿಯರಿದ್ದರು. ಇವರು ತಮ್ಮ ಜೀವನೋಪಾಯಕ್ಕೋಸ್ಕರವಾಗಿ ವಿಜಯನಗರಂ ಗೆ ವಲಸೆ ಹೋಗಿ ಅಲ್ಲಿ ಒಂದು ಟ್ಯುಟೋರಿಯಲ್ ಕಾಲೇಜ್ ಪ್ರಾರಂಭಿಸಿ ಪಾಠವನ್ನು ಹೇಳಿಕೊಡಲು ಪ್ರಾರಂಭಿಸಿದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಇವರ ದೊಡ್ಡ ಮಗನಾದ ಶ್ರೀ.ಪ್ರತ್ತಿ ಸತ್ಯನಾರಾಯಣ ವಿಜಯನಗರಂ ನಲ್ಲಿ ಶಾಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು; ಹಾಗೂ ಇವರ ಚಿಕ್ಕ ಮಗನಾದ ದಿವಂಗತ ಶ್ರೀ.ಪ್ರತ್ತಿ ಕೃಷ್ಣರಾವ್ ರವರು ಭಿಲಾಯ್ ನ ಉಕ್ಕು ಕಾರ್ಖಾನೆಯಲ್ಲಿ ಇಂಜಿನೀಯರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದರು.

ಇವರ ಮಗನು ಕೇವಲ ಐದು ವರ್ಷದವನಾಗಿದ್ದಾಗ, ಜೀವನದ ಮೇಲೆ ಜಿಗುಪ್ಸೆ ಬಂದು ಶ್ರೀ.ಪ್ರತ್ತಿ ನಾರಾಯಣ ರಾವ್ ರವರು ಮನೆಯನ್ನು ಬಿಟ್ಟು ಸತ್ಯದ ಶೋಧನೆಗಾಗಿ ಹೊರಟರು. ಕೊನೆಗೆ ಇವರು ಶಿರಡಿಗೆ ಬಂದು ಶಿರಡಿಯನ್ನೇ ತಮ್ಮ ಶಾಶ್ವತ ವಾಸ ಸ್ಥಾನವಾಗಿ ಮಾಡಿಕೊಂಡರೆಂದು ತಿಳಿದುಬಂದಿರುತ್ತದೆ. ಇವರು ಶಿರಡಿಯಲ್ಲಿ ಕಳೆದ ಕೆಲವು ದಿನಗಳ ಮಾಹಿತಿಗಳು ಇವರನ್ನು 1950ನೇ ಇಸವಿಯಲ್ಲಿ ಭೇಟಿ ಮಾಡಿದ ಪ್ರಖ್ಯಾತ ಸಾಯಿಭಕ್ತರಾದ ದಿವಂಗತ ಶ್ರೀ.ಶಿವನೇಶನ್ ಸ್ವಾಮೀಜಿಯವರಿಂದ ನಮಗೆ ಲಭ್ಯವಾಗಿರುತ್ತದೆ. ಸುಮಾರು ಒಂದೂವರೆ ತಿಂಗಳುಗಳ ಕಾಲ ಈ ಇಬ್ಬರೂ ಮಹಾ ಭಕ್ತರು ಚಾವಡಿಯಲ್ಲಿ ಭೇಟಿಯಾಗಿ ಸಾಯಿಬಾಬಾರವರ ಬಗ್ಗೆ ಧೀರ್ಘಕಾಲ ಸಮಾಲೋಚನೆ ನಡೆಸುತ್ತಿದ್ದರು. ಶ್ರೀ ಪ್ರತ್ತಿ ನಾರಾಯಣ ರಾವ್ ರವರು ಪ್ರತಿ ದಿನ ಚಾವಡಿಯಲ್ಲಿ ಕುಳಿತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದ ಮಾಡುತ್ತಿದ್ದರು ಎಂದು ಶ್ರೀ ಶಿವನೇಶನ್ ಸ್ವಾಮೀಜಿಯವರು ಹೇಳುತ್ತಾರೆ.ಕೆಲವು ದಿನ ಒಂದು ಅಧ್ಯಾಯಕ್ಕಿಂತ ಹೆಚ್ಚು ಅನುವಾದ ಮಾಡುತ್ತಿದ್ದರೆಂದು ತಿಳಿದುಬಂದಿರುತ್ತದೆ. ಆದ ಕಾರಣ, ಶ್ರೀ ಪ್ರತ್ತಿ ನಾರಾಯಣ ರಾವ್ ರವರು ಕೇವಲ 40 ದಿನಗಳಲ್ಲಿ ಸಂಪೂರ್ಣ ಸಾಯಿ ಸಚ್ಚರಿತ್ರೆಯನ್ನು ಅನುವಾದ ಮಾಡಿರುವುದು ಒಂದು ದಾಖಲೆಯೆಂದೇ ಹೇಳಬಹುದು.

ಅನುವಾದ ಪೂರ್ಣಗೊಳಿಸಿದ ನಂತರ ಹೇಮಾಡಪಂತರು ತಮ್ಮನ್ನು ತಾವು ಶುಚಿಗೊಳಿಸಿಕೊಳ್ಳಲು "ಸಾಯಿನಾಮ ಜಪ" ವನ್ನು ಮಾಡಿದಂತೆ ಶ್ರೀ ಪ್ರತ್ತಿ ನಾರಾಯಣ ರಾವ್ ರವರು ಸಹ ಅದೇ ಪದ್ಧತಿಯನ್ನು ಅನುಸರಿಸಿ 3 ಕೋಟಿ ಸಾಯಿನಾಮ ಜಪವನ್ನು ಮಾಡಿ ಪೂರ್ಣಗೊಳಿಸಿ ನಂತರ ತೆಲುಗು ಸಾಯಿ ಸಚ್ಚರಿತ್ರೆಯನ್ನು ಮುದ್ರಣ ಮಾಡಿಸಿದರು. ಮುದ್ರಣ ಪೂರ್ಣವಾದ ನಂತರ ಪವಿತ್ರ ತೀರ್ಥಕ್ಷೇತ್ರಗಳಾದ ಕಾಶಿ, ಕೊಲ್ಹಾಪುರ, ಕರ್ನೂಲ್, ಮಹೂರಘಡ, ಕುರುವಪುರ, ಗಾಣಗಾಪುರ, ಹುಮ್ನಾಬಾದ್, ಅಕ್ಕಲಕೋಟೆ, ಶಿರಡಿ, ಸೋಮನಾಥ, ಶ್ರೀಶೈಲ, ಉಜ್ಜಯಿನಿ, ಮಹಾಬಲೇಶ್ವರ, ಪರಲಿ, ಡಾಕಿಣಿ, ರಾಮೇಶ್ವರ, ಔಂದ್, ತ್ರಯಂಬಕೇಶ್ವರ, ಘೃಷ್ಮೇಶ್ವರ, ಜುನಾಗಢ, ಭದ್ರಾಚಲ, ದ್ವಾರಕಾ, ಪಂಢರಾಪುರ, ವೇಮಪಲ್ಲಿ, ಪುರಿ, ತಿರುಪತಿ, ಶ್ರೀರಂಗ ಮತ್ತು ತಿರುವನಂತಪುರ ಗಳಿಗೆ ತೆರಳಿ ಅಲ್ಲಿ ಆ ಪವಿತ್ರ ಗ್ರಂಥವನ್ನು ಸ್ವಯಂ ಪಾರಾಯಣ ಮಾಡಿದರು.

ನಂತರ, 19ನೇ ಮೇ 1953 ರಂದು ತೆಲುಗು ಸಾಯಿ ಸಚ್ಚರಿತ್ರೆಯ ಮೊದಲ ಮುದ್ರಣವನ್ನು ಲೋಕಾರ್ಪಣೆ ಮಾಡಿದರು. ಅಷ್ಟೇ ಅಲ್ಲದೇ, ಆಂಧ್ರಪ್ರದೇಶದಾದ್ಯಂತ ಸಂಚರಿಸಿ ತೆಲುಗು ಭಾಷೆಯಲ್ಲಿ ಸಾಯಿಬಾಬಾರವರ ಬಗ್ಗೆ ಪ್ರವಚನಗಳನ್ನು ನೀಡುತ್ತಾ ತಮ್ಮದೇ ಆದ ರೀತಿಯಲ್ಲಿ ಸಾಯಿ ಪ್ರಚಾರವನ್ನು ಮಾಡಿದರು.

ಹೀಗೆ ಸಾಯಿ ಪ್ರಚಾರವನ್ನು ಮಾಡುತ್ತಾ ಶ್ರೀ ಪ್ರತ್ತಿ ನಾರಾಯಣ ರಾವ್ ರವರು ಸಮಾಧಿಸ್ಥರಾದರು. ಅವರು ಸಮಾಧಿಯಾದ ದಿನದ ಬಗ್ಗೆ ಕೂಡ ಖಚಿತ ಮಾಹಿತಿ ಲಭ್ಯವಿರುವುದಿಲ್ಲ. ಅವರ ಅಂತಿಮ ಸಂಸ್ಕಾರವನ್ನು ಸಾಯಿಬಂಧುಗಳೆಲ್ಲರೂ ಸೇರಿ ಬಹಳ ಅರ್ಥಪೂರ್ಣವಾಗಿ ಮಾಡಿದರೆಂದು ಮಾತ್ರ ತಿಳಿದುಬಂದಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment