Tuesday, May 28, 2013

ಸಾಯಿ ಮಹಾಭಕ್ತ - ಸ್ವಾಮಿ ಸಾಯಿ ಶರಣಾನಂದ ಆಲಿಯಾಸ್ ವಾಮನ ರಾವ್ ಪಟೇಲ್- 5ನೇ ಏಪ್ರಿಲ್ 1889 ರಿಂದ 25ನೇ ಆಗಸ್ಟ್ 1982 - ಕೃಪೆ:ಸಾಯಿಅಮೃತಧಾರಾ.ಕಾಂ



ಒಮ್ಮೆ ಶ್ರೀ.ಪ್ರಂಗೋಡ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಮಣಿ ಗೌರಿಯವರು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದವನ್ನು ಪಡೆದರು. ನಂತರ 5ನೇ ಏಪ್ರಿಲ್ 1889 ರಂದು ಶ್ರೀ.ವಾಮನರಾವ್ ಪಟೇಲ್ ರವರು ಗುಜರಾತ್ ನ ಸೂರತ್ ಜಿಲ್ಲೆಯ ಮೋಟಾ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ಶ್ರೀ.ವಾಮನರಾವ್ ಪ್ರಾಣ ಗೋವಿಂದ್ ಪಟೇಲ್. ಕಾಲಾನಂತರದಲ್ಲಿ  ಸಾಯಿಬಾಬಾರವರ ಆಶೀರ್ವಾದದಿಂದ ಶ್ರೀ.ಸ್ವಾಮಿ ಸಾಯಿ ಶರಣಾನಂದರೆಂದು ನಾಮಾಂಕಿತರಾದರು.

ಇವರು ಕೇವಲ 3 ವರ್ಷದ ಮಗುವಾಗಿದ್ದಾಗ ತೀರ್ವವಾದ ಖಾಯಿಲೆಯಿಂದ ಬಳಲುತ್ತಿದ್ದರು. ಇವರ ತಂದೆ ತಾಯಿಗಳಿಗೆ ಸಾಯಿಬಾಬಾರವರಲ್ಲಿ ಸಂಪೂರ್ಣ ವಿಶ್ವಾಸವಿತ್ತು. ಅದರಂತೆ ಸಾಯಿಬಾಬಾರವರು ಒಬ್ಬ ಫಕೀರನ ರೂಪದಲ್ಲಿ ಇವರ ಮನೆಗೆ ಬಂದು ನೀರಿನಲ್ಲಿ ಉಧಿಯನ್ನು ಬೆರೆಸಿ ಮಗುವಿಗೆ ನೀಡುವಂತೆ ಹೇಳಿದರು ಮತ್ತು ಆ ಮಗುವನ್ನು ನೋಡಿ "ಇವನ ಹಿಂಭಾಗದ ಬಲಭಾಗದಲ್ಲಿ ಒಂದು ಮಚ್ಚೆಯಿದ್ದು ಮುಂದೆ ಈ ಹುಡುಗ ಒಬ್ಬ "ಸತ್ಪುರುಷ" ನಾಗುತ್ತಾನೆ" ಎಂದು ಭವಿಷ್ಯ ನುಡಿದಿದ್ದರು. ಬಾಬಾರವರು ಹೇಳಿದಂತೆ ಹುಡುಗನಿಗೆ ಉಧಿಯನ್ನು ನೀರಿನಲ್ಲಿ ಬೆರೆಸಿ ನೀಡಲಾಯಿತು. ಹುಡುಗನು ಆಶ್ಚರ್ಯಕರ ರೀತಿಯಲ್ಲಿ ಬಾಬಾರವರ ಆಶೀರ್ವಾದದಿಂದ ಗುಣಹೊಂದಿದನು.

ಇವರ ಪ್ರೈಮರಿ ಶಾಲೆಯ ವ್ಯಾಸಂಗವು ಸೂರತ್ ಮತ್ತು ಅಹಮದಾಬಾದ್ ನಲ್ಲಿ ನಡೆದವು. ಇವರು ಕೇವಲ 13 ವರ್ಷದವರಾಗಿದ್ದಾಗ, ಸಾಯಿಬಾಬಾರವರು ಇವರಿಗೆ ಸೋಮನಾಧ ಮಂದಿರದಲ್ಲಿ ಒಬ್ಬ ಫಕೀರನ ರೂಪದಲ್ಲಿ ಬಂದು ದರ್ಶನ ನೀಡಿದ್ದರು. ನಂತರ 1910ನೇ ಇಸವಿಯಲ್ಲಿ ಮುಂಬೈನಲ್ಲಿ ಬಿ.ಎ.ಪದವಿಯನ್ನು ಪೂರ್ಣಗೊಳಿಸಿ ನಂತರ 1912ನೇ ಇಸವಿಯಲ್ಲಿ ಎಲ್.ಎಲ್.ಬಿ ಯನ್ನು ಕೂಡ ಪೂರ್ಣಗೊಳಿಸಿದರು. ಇವರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ದೇವರ ಅಸ್ತಿತ್ವವು ಒಂದು ಅದ್ಭುತ ಚಮತ್ಕಾರವೋ ಅಥವಾ ನಿಜವೋ ಎಂದು ಹಲವಾರು ಬಾರಿ ಪ್ರಧ್ಯಾಪಕರನ್ನು ವಿಚಾರಿಸಿದ್ದರು. ಆದರೆ, ಆ ವಿಚಿತ್ರ ಪ್ರಶ್ನೆಗೆ ಪ್ರಾಧ್ಯಾಪಕರ ಬಳಿ ಉತ್ತರ ಇರುತ್ತಿರಲಿಲ್ಲ.

ಒಮ್ಮೆ ಇವರು ತಮ್ಮ ತಂದೆಯವರ ಜೊತೆಯಲ್ಲಿ ಅಕ್ಕಲಕೋಟೆ ಮಹಾರಾಜರ ಶಿಷ್ಯರಾದ ಶ್ರೀ ಬಾಲಕೃಷ್ಣ ಮಹಾರಾಜರ ದರ್ಶನಕ್ಕೆಂದು ಮುಂಬೈಗೆ ಹೋಗಿದ್ದರು. ಅಲ್ಲಿ ಇವರು ಮಹಾರಾಜರಿಗೆ ಅದೇ ಪ್ರಶ್ನೆಯನ್ನು ಕೇಳಿದರು. ಈ ಘಟನೆ ನಡೆದಿದ್ದು 1904ನೇ ಇಸವಿಯಲ್ಲಿ. ಆಗ ವಾಮನ ರಾವ್ ರವರಿಗೆ ಕೇವಲ 15 ವರ್ಷ. ಈ ವಿಚಿತ್ರ ಪ್ರಶ್ನೆಯನ್ನು ಮಾಡುತ್ತಿರುವ ವಾಮನ ರಾವ್ ರವರನ್ನು ನೋಡಿ ಮಹಾರಾಜರು ಮೊದಲು ಕೋಪಗೊಂಡರು. ಆದರೆ ಸ್ವಲ್ಪ ಸಮಯದ ನಂತರ ಇವರಿಗೆ ಅಕ್ಕಲಕೋಟೆ ಮಹಾರಾಜರ ಜೀವನ ಚರಿತ್ರೆ ಹಾಗೂ ಮರಾಠಿ ಏಕನಾಥ ಭಾಗವತ ಗ್ರಂಥಗಳನ್ನು ನೀಡಿ ಅವುಗಳನ್ನು ಪಾರಾಯಣ ಮಾಡುವಂತೆ ಸೂಚನೆ ನೀಡಿದರು. ವಾಮನ ರಾವ್ ರವರು "ಯಾವ ಸಂತರು ನನಗೆ ದೇವರ ದರ್ಶನವನ್ನು ಮಾಡಿಸುತ್ತಾರೋ ಅಂತಹ ಸಂತರನ್ನು ನಾನು ನನ್ನ ಗುರುವೆಂದು ಸ್ವೀಕರಿಸುವೆ" ಎಂದು ಮಹಾರಾಜರಿಗೆ ಉತ್ತರಿಸಿದರು. ಅಕ್ಕಲಕೋಟೆ ಮಹಾರಾಜರ ಜೀವನ ಚರಿತ್ರೆಯನ್ನು ಪಾರಾಯಣ ಮಾಡಿದ ಬಳಿಕ ಇವರಿಗೆ ದೇವರ ದರ್ಶನವನ್ನು ಮಾಡಿಸಲು ಶಕ್ಯರಿರುವ ಸಂತರು ಇನ್ನೂ ಈ ಭೂಮಿಯ ಮೇಲೆ ಇದ್ದಾರೆ ಎಂಬ ನಂಬಿಕೆ ಹುಟ್ಟಿತು. ಅಕ್ಕಲಕೋಟೆ ಮಹಾರಾಜರನ್ನು ದತ್ತಾತ್ರೇಯರ ನಾಲ್ಕನೇ ಅವತಾರವೆಂದು ಪರಿಗಣಿಸಲಾಗಿದ್ದು ಇವರು 1878ರಲ್ಲಿ ಸಮಾಧಿ ಹೊಂದಿರುತ್ತಾರೆ. ನಂತರ ಇವರ ಸ್ಥಾನಕ್ಕೆ ಬಾಲಕೃಷ್ಣ ಮಹಾರಾಜರು ಬಂದರು ಮತ್ತು ಅವರ ದರ್ಶನಕ್ಕೆ ವಾಮನ ರಾವ್ ರವರ ತಂದೆಯವರು ಆಗಾಗ್ಗೆ ಹೋಗುತ್ತಿದ್ದರು.

ಈ ಮಧ್ಯೆ ವಾಮನ ರಾವ್ ರವರ ತಂದೆಯ ಬಂಧುಗಳಾದ ಸಾಕಾರ್ ಲಾಲ್ ಕೇಶವ ಲಾಲ್ ಭಟ್ ಎಂಬುವರು ಅಪಘಾತಕ್ಕೆ ಈಡಾದರು. ಅಪಘಾತದಲ್ಲಿ ಅವರ ಕಾಲುಗಳಿಗೆ ತುಂಬ ಪೆಟ್ಟು ಬಿದ್ದು ಎಡಗಾಲಿನ ಮೊಣಕಾಲಿನ ನರಗಳು ಬಹಳವಾಗಿ ಘಾಸಿಗೊಂಡಿದ್ದವು. ಅವರು ಎಲ್ಲಾ ರೀತಿಯ ವೈದ್ಯೋಪಚಾರಗಳನ್ನು ಮಾಡಿದ್ದರೂ ಸಹ ಸ್ವಲ್ಪವೂ ಗುಣವಾಗಿರಲಿಲ್ಲ. ಕಾಲಿಗೆ ತೀವ್ರ ಪಟ್ಟಾದದ್ದರಿಂದ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಆಗ ವಾಮನ್ ರಾವ್ ರವರು ಸಾಕಾರ್ ಲಾಲ್ ರವರ ಕಾಲಿನ ತೊಂದರೆ ಒಬ್ಬ ನಿಜವಾದ ಸಂತರ ಮೊರೆ ಹೋದರೆ ಪರಿಹಾರವಾಗುತ್ತದೆ ಎಂದು ಯೋಚಿಸಿದರು. ಆದ ಕಾರಣ, ಅವರು ಒಬ್ಬ ನಿಜವಾದ ಸಂತರನ್ನು ಹುಡುಕಲು ಪ್ರಾರಂಭಿಸಿದರು.

ಒಮ್ಮೆ ಖೇಡಾ ಜಿಲ್ಲೆಯ ಉಪ ಕಲೆಕ್ಟರ್ ಹಾಗೂ ಅನನ್ಯ ಸಾಯಿ ಭಕ್ತರಾದ ಶ್ರೀ.ಹರಿ ವಿನಾಯಕ ಸಾಥೆಯವರನ್ನು ಪ್ರಾಣ ಗೋವಿಂದ ದಾಸ್ ರವರು ಭೇಟಿ ಮಾಡಿದರು. ಸಾಥೆಯವರು ಸಾಯಿಬಾಬಾರವರ ಬಗ್ಗೆ ಅನೇಕ ಕಥೆಗಳನ್ನು ಹಾಗೂ ಅವರು ಮಾಡುತ್ತಿರುವ ಅನೇಕ ಲೀಲೆಗಳನ್ನು ಇವರಿಗೆ ವಿವರಿಸಿದರು. ಇದರಿಂದ ಪ್ರಭಾವಿತರಾದ ಪ್ರಾಣ ಗೋವಿಂದ ದಾಸ್ ಹಾಗೂ ಸಾಕಾರ್ ಲಾಲ್ ರವರು ಸಾಥೆಯವರಿಂದ ಪರಿಚಯ ಪತ್ರವನ್ನು ಪಡೆದು ಕೂಡಲೇ ಶಿರಡಿಗೆ ಪ್ರಯಾಣ ಬೆಳೆಸಿದರು. 1911ನೇ ಇಸವಿಯ ಮೇ ತಿಂಗಳಿನಲ್ಲಿ ಸಾಥೆಯವರು ಶಿರಡಿಯಲ್ಲಿ ಹೋಟೆಲ್ ನಡೆಸುತ್ತಿದ್ದ ನಾನಾ ಸಾಹೇಬ್ ಚಂದೋರ್ಕರ್ ರವರ ಬಂಧುಗಳಾದ ಬಾಳಾಭಾವು ಚಂದೋರ್ಕರ್ ರವರಿಗೆ ಪರಿಚಯ ಪತ್ರವನ್ನು ಕೊಟ್ಟು ಇವರನ್ನು ಶಿರಡಿಗೆ ಕಳುಹಿಸಿದ್ದರು. ಆಗ ವಾಮನ ರಾವ್ ರವರ ತಂದೆಯವರ ಹಲ್ಲುಗಳನ್ನು ಕೀಳಲಾಗಿದ್ದ ಕಾರಣ ಅವರ ಹಲ್ಲಿನ ಒಸಡುಗಳು ದುರ್ಬಲವಾಗಿದ್ದವು. ಆದ ಕಾರಣ, ಅವರಿಗೆ ಚಪಾತಿ ಅಥವ ಮತ್ತಿತರ ಯಾವುದೇ ರೀತಿಯ ಗಟ್ಟಿ ಪದಾರ್ಥಗಳನ್ನು ತಿನ್ನಲು ಆಗುತ್ತಿರಲಿಲ್ಲ. ಅವರು ತಮ್ಮ ಮನೆಯಲ್ಲಿ ಕೇವಲ ಉಪ್ಪಿಟ್ಟನ್ನು ತಿನ್ನುತ್ತಿದ್ದರು. ಆದರೆ, ಶಿರಡಿಯಲ್ಲಿ ತಮಗೆ ಯಾರು ಸಹಾಯ ಮಾಡುತ್ತಾರೆ ಎಂದು ಇವರು ಯೋಚನಾಮಗ್ನರಾಗಿದ್ದರು. ಆದರೂ ಧೈರ್ಯ ಮಾಡಿ ವಾಮನರಾವ್ ಪಟೇಲ್ ರವರ ತಂದೆ ಹಾಗೂ ಸಾಕಾರ್ ಲಾಲ್ ರವರು ಸಾಯಿಬಾಬಾರವರ ಆಶೀರ್ವಾದವನ್ನು ಪಡೆಯಲು ಮತ್ತು ಸಾಕಾರ್ ಲಾಲ್ ರವರ ತೊಂದರೆಯನ್ನು  ಹೋಗಲಾಡಿಸಿಕೊಳ್ಳುವ ಸಲುವಾಗಿ ಶಿರಡಿಗೆ ಹೋದರು. ಶಿರಡಿಯಲ್ಲಿ ಭೋಜನ ಮಾಡುವಾಗ ಇವರಿಗೆ ಗಟ್ಟಿಯಾದ ಚಪಾತಿಯನ್ನು ಬಡಿಸಲಾಯಿತು. ಆ ಗಟ್ಟಿ ಚಪಾತಿಯನ್ನು ಹೇಗೆ ತಿನ್ನುವುದು ಎಂಬ ಗೊಂದಲದಲ್ಲಿ ಪ್ರಾಣ ಗೋವಿಂದ ದಾಸ್ ರವರು ಬಿದ್ದರು. ಇವರು ಹೀಗೆ ಯೋಚಿಸುತ್ತಿರುವಾಗ, ದ್ವಾರಕಾಮಾಯಿಯ ಕಡೆಯಿಂದ ಓಡಿಬಂದ ವ್ಯಕ್ತಿಯೊಬ್ಬ "ಬಾಬಾರವರು ಒಂದು ಪಾತ್ರೆಯ ತುಂಬಾ ಶಿರಾ ತರಲು ಹೇಳಿದ್ದಾರೆ. ಇಲ್ಲಿ ಊಟಕ್ಕೆ ಕುಳಿತಿರುವ ಯಾರೂ ಊಟವನ್ನು ಪ್ರಾರಂಭಿಸಬೇಡಿ ಮತ್ತು ಶಿರಾವನ್ನು ತಿನ್ನದೇ ಹೋಗಬೇಡಿ. ದಯಮಾಡಿ ಶಿರಾ ಬರುವವರೆಗೂ ಕಾಯ್ದು ಕುಳಿತಿರಿ" ಎಂದು ವಿನಂತಿ ಮಾಡಿಕೊಂಡನು. ಈ ಮಾತನ್ನು ಕೇಳಿ ಪ್ರಾಣ ಗೋವಿಂದ ದಾಸ್ ರವರಿಗೆ ಅಚ್ಚರಿಯಾಯಿತು. ಆಗ ಅವರಿಗೆ ಶಿರಡಿಯ ಸಾಯಿಬಾಬಾರವರು ಅನನ್ಯ ಸಂತರು ಹಾಗೂ ತಮಗಿದ್ದ ತೊಂದರೆಯನ್ನು ನಿವಾರಿಸುವ ಸಲುವಾಗಿ ಸಾಯಿಬಾಬಾರವರು ಶಿರಾವನ್ನು ಕಳುಹಿಸಿದ್ದಾರೆ ಎಂದು ಮನದಟ್ಟಾಯಿತು. ಆದರೆ ಅವರು ಶಿರಡಿಗೆ ಬಂದ ಮುಖ್ಯ ಕಾರಣ ಸಾಕಾರ್ ಲಾಲ್ ರವರ ಕಾಲಿನ ಕುಂಟುತನದ ನಿವಾರಣೆ ಆಗಿತ್ತು.ಹೀಗೆಯೇ ಎರಡು ದಿನಗಳನ್ನು ಶಿರಡಿಯಲ್ಲಿ ಕಳೆದರು. ನಂತರ ಊರಿಗೆ ಹಿಂತಿರುಗುವ ಸಲುವಾಗಿ ಬಾಬಾರವರ ಅಪ್ಪಣೆಯನ್ನು ಪಡೆಯಲು ಅವರ ಬಳಿ ಬಂದರು. ಕೋಪರಗಾವ್ ಗೆ ತೆರಳಲು ಕುದುರೆಯ ಗಾಡಿಯನ್ನು ಹತ್ತುವ ಸಲುವಾಗಿ ಬಾಳಾಭಾವುವಿನ ಅಂಗಡಿಯ ಹತ್ತಿರ ಬಂದರು. ಇನ್ನೇನು ಕುದುರೆಯ ಗಾಡಿಯನ್ನು ಹತ್ತಬೇಕೆಂದುಕೊಂಡು ಸಾಕಾರ್ ಲಾಲ್ ಗಾಡಿಯನ್ನು ಹತ್ತುತ್ತಿರುವಾಗ ಅವರ ಕಾಲು ನೋವು ತೀವ್ರವಾಯಿತು. ಅವರು ತಮ್ಮ ಕಾಲುಗಳು ಇನ್ನು ಉಪಯೋಗಕ್ಕೆ ಬರುವುದಿಲ್ಲ ಎಂದು ಮನದಲ್ಲಿ ಅಂದುಕೊಂಡರು. ಆದರೂ ಕೂಡ ಪ್ರಯತ್ನಪೂರ್ವಕವಾಗಿ ತಮ್ಮ ಕಾಲುಗಳನ್ನು ಹಿಂದೆ ಮುಂದೆ ಆಡಿಸಿದರು. ಅಚ್ಚರಿಯ ಸಂಗತಿ ಏನೆಂದರೆ, ಆ ಕ್ಷಣದಲ್ಲಿ ಅವರ ಕಾಲು ನೋವು ಸಂಪೂರ್ಣ ಗುಣವಾಗಿ ಅವರು ಮೊದಲಿನಂತೆ ನಡೆದಾಡಲು ಪ್ರಾರಂಭಿಸಿದರು. ಹೀಗೆ ಸಾಯಿಬಾಬಾರವರ ಆಶೀರ್ವಾದದಿಂದ ಅವರ ಕಾಲು ನೋವು ಸಂಪೂರ್ಣ ಗುಣವಾಯಿತು. ಮುಂಬೈಗೆ ಬಂದಿಳಿದ ಕೂಡಲೇ ಪ್ರಾಣ ಗೋವಿಂದ ದಾಸ್ ಹಾಗೂ ಸಾಕಾರ್ ಲಾಲ್ ರವರು ಶಿರಡಿಯಲ್ಲಿ ತಮಗಾದ ದಿವ್ಯ ಅನುಭವಗಳನ್ನು ಕುರಿತು ವಾಮನ ರಾವ್ ರ ಬಳಿ ಹೇಳಿಕೊಂಡರು. ಅಲ್ಲದೇ, ಸಾಯಿಬಾಬಾರವರು ಒಬ್ಬ ನಿಜವಾದ ಸಂತರೆಂದು ಹಾಗೂ ಒಮ್ಮೆ ಶಿರಡಿಗೆ ಭೇಟಿ ಕೊಟ್ಟರೆ ಇವರಿಗಿದ್ದ ಎಲ್ಲಾ ಅನುಮಾನಗಳು ಪರಿಹಾರವಾಗುವುದೆಂದು ಅವರುಗಳು ತಿಳಿಸಿದರು.

ನಾನಾ ಸಾಹೇಬ್ ಚಂದೋರ್ಕರ್ ರವರು ಆ ಸಮಯದಲ್ಲಿ ಮುಂಬೈನಲ್ಲಿದ್ದರು. ಅವರು ತಮ್ಮ ಬಂಧುಗಳಾದ ಬಾಳಾಭಾವು ಚಂದೋರ್ಕರ್ ರವರಿಗೆ ಪರಿಚಯ ಪತ್ರವನ್ನು ಕೊಟ್ಟು ಇವರನ್ನು ಶಿರಡಿಗೆ ಕಳುಹಿಸಿದರು. ತಮ್ಮ ಮಗ ಕಾನೂನು ವ್ಯಾಸಂಗ ಮಾಡಿದ್ದ ಕಾರಣ ವಿಚಾರಣೆ ಮಾಡದೇ ಹಾಗೂ ತಾವೇ ಪ್ರತ್ಯಕ್ಷ  ನೋಡದೇ ಏನನ್ನೂ ನಂಬುವುದಿಲ್ಲ ಎಂದು ಪ್ರಾಣ ಗೋವಿಂದ ದಾಸ್ ರವರಿಗೆ ಚೆನ್ನಾಗಿ ತಿಳಿದಿತ್ತು. ಅಲ್ಲದೇ, ವಾಮನ ರಾವ್ ರವರು ಯಾವಾಗಲೂ "ನನಗೆ ನೇರವಾಗಿ ದೇವರ ದರ್ಶನವಾಗುವ ತನಕ ನಾನು ದೇವರ ಅಸ್ತಿತ್ವವನ್ನು ನಂಬುವುದಿಲ್ಲ"  ಎಂದು ನುಡಿಯುತ್ತಿದ್ದರು. ಪ್ರಾಣ ಗೋವಿಂದ ದಾಸ್ ರವರು ವಾಮನ ರಾವ್ ರವರಿಗೆ "ಮಗನೇ, ಆಕಾಶದಲ್ಲಿರುವ ನಕ್ಷತ್ರ, ಸೂರ್ಯ ಹಾಗೂ ಚಂದ್ರರನ್ನು ನೋಡು. ಅವುಗಳು ಕಾಲಕ್ಕೆ ಸರಿಯಾಗಿ ಉದಯಿಸುತ್ತವೆ ಹಾಗೂ ಅಸ್ತಮಿಸುತ್ತವೆ. ನಮಗೆ ಜೀವನಾಧಾರವಾದ ಬೆಳಕನ್ನು ನೀಡುತ್ತವೆ.  ಇದಕ್ಕೆಲ್ಲಾ ಆ ಪರಮಾತ್ಮನೊಬ್ಬನೇ ಕಾರಣ. ನಾವುಗಳು ಅಂದುಕೊಂಡಂತೆ ಏನೂ ನಡೆಯುವುದಿಲ್ಲ" ಎಂದು ಉಪದೇಶ ಮಾಡಿದರು. ಆದರೆ ಇದರಿಂದ ವಾಮನ ರಾವ್ ರವರಿಗೆ ಸಮಾಧಾನ ವಾಗುತ್ತಿರಲಿಲ್ಲ. ಬದಲಿಗೆ, ಅವರು "ಈ ಕಾರ್ಯಗಳೆಲ್ಲ ತಂತಾನೇ ಸಮಯಕ್ಕೆ ಸರಿಯಾಗಿ ನಡೆಯುತ್ತವೆ. ಈ ಕ್ರಿಯೆಗಳಲ್ಲಿ ದೇವರು ಎಲ್ಲಿದ್ದಾನೆ" ಎಂದು ಪ್ರಶ್ನೆ ಮಾಡುತ್ತಿದ್ದರು. ಆದುದರಿಂದ ಇವರು ಶಿರಡಿಗೆ ಹೋಗುವ ಮೊದಲೇ ಪ್ರಾಣ ಗೋವಿಂದ ದಾಸ್ ರವರು ಸಾಯಿಬಾಬಾರವರ ಬಗ್ಗೆ ಹಾಗೂ ಅವರು ಯಾವ ರೀತಿಯಲ್ಲಿ ತಮ್ಮ ಭಕ್ತರನ್ನು ಆಶೀರ್ವದಿಸುತ್ತಾರೆ ಎಂಬ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವರಿಗೆ ನೀಡುತ್ತಾ "ನೋಡು ವಾಮನ, ಸಾಯಿಬಾಬಾರವರು ಒಬ್ಬ ವಿಲಕ್ಷಣ ವ್ಯಕ್ತಿ. ಅವರಿಗೆ ಎದುರುತ್ತರ ನೀಡಬೇಡ. ಬದಲಿಗೆ ಅವರ ಮಾತುಗಳಲ್ಲಿರುವ ಗೂಡಾರ್ಥವನ್ನು ಕುರಿತು ಯೋಚಿಸು. ಸಾಯಿಬಾಬಾರವರು ನೀಡುವುದು ಒಳ್ಳೆಯದೇ ಆಗಿರಲಿ, ಕೆಟ್ಟದ್ದೇ ಆಗಿರಲಿ, ಪ್ರೀತಿಯಿಂದ ನೀಡಲಿ ಅಥವಾ ಕೋಪದಿಂದ ನೀಡಲಿ, ಅದನ್ನು ಕೃತಜ್ಞತೆಯಿಂದ ಸ್ವೀಕರಿಸು. ಸಂತರೂ ಏನೇ ನೀಡಲಿ ಅದು ನಮ್ಮ ಒಳಿತಿಗಾಗಿ ಎಂದು ತಿಳಿ". ತಂದೆಯವರು ಹೇಳಿದನ್ನು ಶ್ರದ್ಧೆಯಿಂದ ಕೇಳಿದ ವಾಮನ ರಾವ್ ರವರು ನಾನಾರವರು ಬಾಳಾಭಾವುರವರಿಗೆ ನೀಡಿದ ಪರಿಚಯ ಪತ್ರವನ್ನು ಹಿಡಿದುಕೊಂಡು 10ನೇ ಡಿಸೆಂಬರ್ 1911 ರಂದು ಮೊದಲ ಬಾರಿಗೆ ಶಿರಡಿಗೆ ತೆರಳಿದರು. ಅವರು ಶಿರಡಿಯನ್ನು ತಲುಪಿದಾಗ "ಸಾಯಿಬಾಬಾರವರಿಗೆ ಜಯವಾಗಲಿ" ಎಂದು ಜಯಘೋಷ ಮಾಡುತ್ತಿರುವ ಸಣ್ಣ ಗುಂಪೊಂದನ್ನು ಕಂಡರು. ಮಾರವಾಡಿ ಕುದುರೆಗಾಡಿ ಮಾಲೀಕನು ಗಾಡಿಯನ್ನು ನಿಲ್ಲಿಸಿ "ಜನಗಳ ಮಧ್ಯದಲ್ಲಿ ಹೋಗುತ್ತಿರುವವರೆ ಸಾಯಿಬಾಬಾ. ಅವರು ಲೇಂಡಿ ಉದ್ಯಾನವನಕ್ಕೆ ವಿಹಾರಕ್ಕಾಗಿ ತೆರಳುತ್ತಿದ್ದಾರೆ". ಹೀಗೆ ನುಡಿಯುತ್ತಾ ಆ ಕುದುರೆಗಾಡಿ ಮಾಲೀಕನು ಗಾಡಿಯಿಂದ ಕೆಳಗೆ ಇಳಿದು ಸಾಯಿಬಾಬಾರವರಿಗೆ ನಮಸ್ಕರಿಸಿದನು. ವಾಮನ ರಾವ್ ರವರೂ ಕೂಡ ನಂತೆ ತಾವೂ ಬಾಬಾರವರಿಗೆ ನಮಸ್ಕಾರ ಮಾಡಿದರು. ವಾಮನ ರಾವ್ ರವರನ್ನು ನೋಡಿ ಸಾಯಿಬಾಬಾರವರು " ಕೇವಲ ಹುಲು ಮಾನವನಾಗಿರುವ ನೀನು ದೇವರ ಅಸ್ತಿತ್ವವನ್ನೇ ಪ್ರಶ್ನಿಸುತ್ತೀಯಾ? ಇಲ್ಲಿಂದ ಹೊರಟುಹೋಗು. ಆ ಕ್ಷಣದಲ್ಲಿ ವಾಮನ ರಾವ್ ರವರಿಗೆ "ಇವರೇ ತಾವು ಹುಡುಕುತ್ತಿರುವ ದೇವರು" ಎಂದು ಮನದಟ್ಟಾಯಿತು. ಇವರಿಗೆ ತಂದೆಯವರು ಹೇಳಿದ ಅವರ ಅನುಭವಗಳೆಲ್ಲಾ ನೆನಪಾದವು. ನಾನಾ ಸಾಹೇಬರು ಪರಿಚಯ ಪತ್ರವನ್ನು ನೀಡಿದ್ದರಿಂದ ಬಾಳಾಭಾವು ಇವರಿಗೆ ದೀಕ್ಷಿತವಾಡಾದಲ್ಲಿ ಉಳಿದುಕೊಳ್ಳಲು ಸ್ಥಳವನ್ನು ಏರ್ಪಾಡು ಮಾಡಿ ಸಾಯಿಬಾಬಾರವರ ದರ್ಶನಕ್ಕೆ ಕರೆದುಕೊಂಡು ಹೋದರು.ಒಂದು ದರ್ಶನದಿಂದ ತೃಪ್ತಿಯಾಗದೇ, ವಾಮನ ರಾವ್ ಮತ್ತೊಮ್ಮೆ ಒಬ್ಬ ಮಾರವಾಡಿ ಭಕ್ತರೊಡನೆ ಸಾಯಿಬಾಬಾರವರ ದರ್ಶನಕ್ಕೆಂದು ದ್ವಾರಕಾಮಾಯಿಗೆ ತೆರಳಿದರು. ಆದರೆ ಬಾಬಾರವರು ಇವರ ಮೇಲೆ ಕೋಪ ಮಾಡಿಕೊಂಡಂತೆ ನಟಿಸುತ್ತಾ ಇವರಿಗೆ ದ್ವಾರಕಾಮಾಯಿಯ ಒಳಗಡೆ ಬರಲು ಅನುಮತಿ ನೀಡಲಿಲ್ಲ. ಸಾಯಿಬಾಬಾರವರ ವರ್ತನೆಯಿಂದ ಹೆದರಿ ಈ ಇಬ್ಬರೂ ಭಕ್ತರೂ ಮಧ್ಯಾನ್ಹದ ಆರತಿಗೆ ಹೋಗಲೇ ಇಲ್ಲ. ಬದಲಿಗೆ ರಾಧಾಕೃಷ್ಣ ಮಾಯಿಯ ಕುಟೀರದೊಳಗೆ ಕುಳಿತುಕೊಂಡು ಅಲ್ಲಿಂದಲೇ ಮಧ್ಯಾನ್ಹ ಆರತಿಯನ್ನು ವೀಕ್ಷಿಸಿದರು. ಮಧ್ಯಾನ್ಹ ಊಟದ ನಂತರ ವಾಮನ ರಾವ್ ರವರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ.ಶಿಂಗಣೆಯವರೊಂದಿಗೆ ದ್ವಾರಕಾಮಾಯಿಗೆ ಬಾಬಾರವರ ದರ್ಶನಕ್ಕೆಂದು ತೆರಳಿದರು. ಆಗ ಬಾಬಾರವರು ಇವರಿಗೆ ರಾಧಾಕೃಷ್ಣಮಾಯಿ ಕಳುಹಿಸಿದ್ದ ದ್ರಾಕ್ಷಿಯನ್ನು ಪ್ರಸಾದವಾಗಿ ನೀಡಿದರು. ಬಾಬಾರವರು ತಮ್ಮ ಆಸನದಲ್ಲಿ ಕುಳಿತು ತಮ್ಮ ಬಲಗೈಯನ್ನು ದಿಂಬಿನ ಮೇಲಿರಿಸಿಕೊಂಡು ಕುಳಿತಿದ್ದರು. ವಾಮನ ರಾವ್ ರವರು ದಿಂಬಿನ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಕುಳಿತುಕೊಂಡರು. ಸ್ವಲ್ಪವೇ ಹೊತ್ತಿನಲ್ಲಿ ದ್ವಾರಕಾಮಾಯಿಗೆ ಭಕ್ತರು ಬಂದು ಸೇರಲು ಪ್ರಾರಂಭಿಸಿದರು. ಬಂದ ಭಕ್ತರೆಲ್ಲರೂ ಶಿರಡಿಗೆ ಬಂದಿರುವ ಪ್ಲೇಗ್ ಮಹಾಮಾರಿಯಿಂದ ತಮ್ಮನ್ನು ರಕ್ಷಿಸುವಂತೆ ಪ್ರಾರ್ಥನೆ ಮಾಡಿಕೊಂಡರು.

ವಾಮನ ರಾವ್ ರವರು 1913ನೇ ಇಸವಿಯಲ್ಲಿ ಒಂದು ಪ್ರತಿಷ್ಟಿತ ವಕೀಲಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಮೇ ತಿಂಗಳಿನಲ್ಲಿ ನ್ಯಾಯಾಲಯದ ರಜೆ ಇದ್ದ ಕಾರಣ ಶಿರಡಿಗೆ ಸಾಯಿಬಾಬಾರವರ ದರ್ಶನ ಮಾಡಲು ಬಂದರು. ನ್ಯಾಯಾಲಯದ ರಜೆ ಮುಗಿದಿದ್ದರಿಂದ ವಾಮನ ರಾವ್ ಮುಂಬೈಗೆ ತೆರಳಲು ಸಾಯಿಬಾಬಾರವರ ಅಪ್ಪಣೆ ಪಡೆಯಲು ಅವರ ಬಳಿಗೆ ಬಂದರು. ಆದರೆ ಸಾಯಿಬಾಬಾರವರು ಇವರಿಗೆ ಅಪ್ಪಣೆ ನೀಡಲಿಲ್ಲ. ಬದಲಿಗೆ ಮಾರ್ಚ್ 1914 ರವರೆಗೆ ಸುಮಾರು ಹನ್ನೊಂದು ತಿಂಗಳ ಕಾಲ ಯಾವುದಾದರೂ ಒಂದು ಕಾರಣ ನೀಡಿ ಇವರನ್ನು ಶಿರಡಿಯಲ್ಲೇ ಉಳಿಸಿಕೊಂಡರು. ಇವರು ಮುಂಬೈಗೆ ವಾಪಸಾಗದಿದ್ದರಿಂದ ಚಿಂತಾಕ್ರಾಂತರಾದ ಇವರ ಮನೆಯವರು ಇವರ ಬಗ್ಗೆ ಜ್ಯೋತಿಷಿಗಳನ್ನು ವಿಚಾರಿಸಲು, ಅವರುಗಳು ಇವರು ಒಂದು ಪುಣ್ಯಕ್ಷೇತ್ರದಲ್ಲಿ ಸುಖವಾಗಿರುವರೆಂದು ಮತ್ತು ಇವರ ಬಗ್ಗೆ ಯಾವುದೇ ಚಿಂತೆ ಮಾಡುವ ಅವಶ್ಯಕತೆಯಿಲ್ಲವೆಂದು ಭವಿಷ್ಯ ನುಡಿದರು. ನಂತರ ಬಾಬಾರವರು ಇವರಿಗೆ ಮನೆಗೆ ಹೋಗಲು ಅನುಮತಿ ನೀಡಿದರು.

ಮತ್ತೊಮ್ಮೆ ಅಕಸ್ಮಾತ್ತಾಗಿ 1916ನೇ ಇಸವಿಯಲ್ಲಿ ಶಿರಡಿಗೆ ತೆರಳುತ್ತಿದ್ದ ತಮ್ಮ ಸ್ನೇಹಿತರನ್ನು ಕಳುಹಿಸಿಕೊಡಲು ನಿಲ್ದಾಣಕ್ಕೆ ಬಂದವರು ಇದ್ದಕಿದ್ದಂತೆ ತಾವೂ ಶಿರಡಿಗೆ ಹೊರಟುಬಿಟ್ಟರು. ಇವರ ಬರುವಿಕೆಯನ್ನೇ ಎದುರುನೋಡುತ್ತಿದ್ದುದಾಗಿ ಹೇಳಿದ ಸಾಯಿಬಾಬಾರವರು ಇಪ್ಪತ್ತೊಂದು ದಿನಗಳ ಕಾಲ ಇವರನ್ನು ಶಿರಡಿಯಲ್ಲಿ ಇರಿಸಿಕೊಂಡು ನಂತರ ಮುಂಬೈಗೆ ತೆರಳಲು ಅನುಮತಿ ನೀಡಿದರು. ಇವರು ಶಿರಡಿಯಲ್ಲಿದ್ದ ಸಮಯದಲ್ಲಿ ಬೂಟಿವಾಡದ ನಿರ್ಮಾಣವಾಗುತ್ತಿತ್ತು. ಆ ಸಮಯದಲ್ಲಿ ದೊಡ್ಡ ಕಲ್ಲೊಂದು ಇವರ ತಲೆಗೆ ತಗುಲಿ ಪೆಟ್ಟಾಯಿತು. ಆಗ ಸಾಯಿಬಾಬಾರವರು ಇವರಿಗೆ ಔಷಧವನ್ನು ನೀಡಿ ತಲೆಯಲ್ಲಿ ಒಂದೂ ಕಲೆ ಸಹ ಇರದಂತೆ ಸಂಪೂರ್ಣ ಗುಣಪಡಿಸಿದರು. ತಲೆಗೆ ಕಲ್ಲಿನಿಂದ ಪಟ್ಟುಬಿದ್ದಾಗ ತಮಗೆ ಒಂದು ರೀತಿಯ ದಿವ್ಯ ಅನುಭವ ಹಾಗೂ ಅನುಭೂತಿಯಾಯಿತೆಂದು ವಾಮನ ರಾವ್ ನಂತರ ಹೇಳಿದರು. ಈ ಘಟನೆಯಾದ ನಂತರ ವಾಮನ ರಾವ್ ಸಾಯಿಬಾಬಾರವರ ಪರಮ ಭಕ್ತರಾಗಿ ರೂಪುಗೊಂಡರು. ಸಾಯಿಬಾಬಾರವರು ಧರಿಸುತ್ತಿದ್ದ ವಸ್ತ್ರಗಳಲ್ಲಿ ಅತೀವ ಶಕ್ತಿಯಿದ್ದಿತು. ಒಮ್ಮೆ ಬಾಬಾರವರು ತಾವು ಧರಿಸುತ್ತಿದ್ದ ಕಫ್ನಿಯನ್ನು ಮಹಾಳಸಾಪತಿಯವರಿಗೆ ಉಡುಗೊರೆಯಾಗಿ ನೀಡಿದರು. ಇದರಿಂದ ಮಹಾಳಸಾಪತಿಯವರು ತಮ್ಮ ಕೊನೆಗಾಲದವರೆಗೂ ಸನ್ಯಾಸಿಯಂತೆ ಜೀವನ ನಡೆಸಿದರು. ಆದರೆ, ಮನೆಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಸಹ ಅಷ್ಟೇ ಸಮರ್ಥವಾಗಿ ನಿಭಾಯಿಸಿದರು. ಇನ್ನೊಮ್ಮೆ ಸಾಯಿಬಾಬಾರವರು ಮುಕ್ತಾರಾಂ ಎಂಬ ಭಕ್ತರಿಗೆ ತಮ್ಮ ಕಫ್ನಿಯನ್ನು ಉಡುಗೊರೆಯಾಗಿ ನೀಡಿದರು. ಕೊಳೆಯಾಗಿದ್ದ ಕಾರಣ ಮುಕ್ತಾರಾಂ ಆ ಕಫ್ನಿಯನ್ನು ತೊಳೆದು ದೀಕ್ಷಿತವಾಡದಲ್ಲಿ ಅದನ್ನು ಒಣಗಲು ಹಾಕಿದ್ದರು. ನಂತರ ಮುಕ್ತಾರಾಂ ಬಾಬಾರವರ ದರ್ಶನಕ್ಕೆಂದು ಹೋದರು. ಆಗ ವಾಮನ ರಾವ್ ದೀಕ್ಷಿತವಾಡದಲ್ಲಿಯೇ ಇದ್ದರು. ಒಣಗಿ ಹಾಕಿದ್ದ ಆ ಕಫ್ನಿಯಿಂದ "ನೋಡು, ಮುಕ್ತಾರಾಂ ನನ್ನನ್ನು ಇಲ್ಲಿ ತಂದು ತಲೆಕೆಳಗು ಮಾಡಿ ತೂಗುಹಾಕಿದ್ದಾನೆ" ಎಂಬ ವಾಣಿಯನ್ನು ವಾಮನ ರಾವ್ ಕೇಳಿಸಿಕೊಂಡರು. ವಾಮನ ರಾವ್ ಕೂಡಲೇ ಆ ಕಫ್ನಿಯನ್ನು ತೆಗೆದು ತಾವೇ ಹಾಕಿಕೊಂಡುಬಿಟ್ಟರು. ನಂತರ, ವಾಮನ ರಾವ್ ದ್ವಾರಕಾಮಾಯಿ ಮಸೀದಿಗೆ ಬಾಬಾರವರ ದರ್ಶನಕ್ಕೆ ತೆರಳಿದರು.  ವಾಮನ ರಾವ್ ಕಫ್ನಿಯನ್ನು ಧರಿಸಿರುವುದನ್ನು ನೋಡಿದ ಬಾಬಾರವರು ಇವರ ಮೇಲೆ ಕೋಪಗೊಂಡರು. ಆದರೆ, ಮುಂದೆ ಒಂದು ದಿನ ವಾಮನ ರಾವ್ ಸಂತರಾಗುವುದನ್ನು ಅರಿತಿದ್ದ ಬಾಬಾರವರು ಅವರಿಗೆ ಏನೂ ಅನ್ನಲಿಲ್ಲ. ಈ ಘಟನೆಯಾದ ದಿನದಿಂದ ವಾಮನ ರಾವ್ ರವರ ಅಧ್ಯಾತ್ಮಿಕ ಉನ್ನತಿ ಪ್ರಾರಂಭವಾಯಿತು.

1917ನೇ ಇಸವಿ ಮಾರ್ಚ್ ನಲ್ಲಿ ಇವರು ಅಹಮದಾಬಾದ್ ನ ಮಾದರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದರು ಮತ್ತು ಜನವರಿ 1921 ನೇ ಇಸವಿಯವರೆವಿಗೂ ಅದೇ ಹುದ್ದೆಯಲ್ಲಿ ಮುಂದುವರೆದರು. ನಂತರ ಅದೇ ವರ್ಷದಲ್ಲಿ ಮುಂಬೈಗೆ ಬಂದು ಗಂಗಾ ಅಂಡ್ ಸಯನಿ ಎಂಬ ಸಂಸ್ಥೆಯಲ್ಲಿ ಮುಖ್ಯ ನಿರ್ವಾಹಕ ಗುಮಾಸ್ತರಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು.

ಒಮ್ಮೆ ಒಬ್ಬ ಭಕ್ತರು ಇವರಿಗೆ ಸಾಯಿಬಾಬಾರವರ ಪಾದುಕೆಗಳನ್ನು ನೀಡಿ ಸಾಯಿಬಾಬಾರವರು ಅದನ್ನು ಇವರ ಉಸ್ತುವಾರಿಗೆ ನೀಡುವಂತೆ ಆದೇಶ ನೀಡಿರುತ್ತಾರೆ ಎಂದು ಹೇಳಿದರು. ಪಾದುಕೆಗಳನ್ನು ಮೊದಲು ತೆಗೆದುಕೊಳ್ಳಲು ಇವರು ನಿರಾಕರಿಸಿದರು. ನಂತರ ಕೊನೆಗೆ ಅದನ್ನು ಸ್ವೀಕರಿಸಿ ಅಹಮದಾಬಾದ್ ನಲ್ಲಿ "ವಿಷ್ಣು ಧರ್ಮಾಲಯ" ಎಂಬ ಹೆಸರಿನಲ್ಲಿ ಸಾಯಿಬಾಬಾರವರ ಮಂದಿರವನ್ನು ನಿರ್ಮಿಸಿ ಅಲ್ಲಿ ಈ ಪಾದುಕೆಗಳನ್ನು ಪ್ರತಿಷ್ಟಾಪಿಸಿದರು. ಈಗಲೂ ಸಾವಿರಾರು ಭಕ್ತರು ಈ ಪಾದುಕೆಗಳ ದರ್ಶನವನ್ನು ಮಾಡುತ್ತಾ ಇದ್ದಾರೆ.

ಇವರು ಸಾಯಿಬಾಬಾರವರ ಬಗ್ಗೆ ಅನೇಕ ಪುಸ್ತಕಗಳನ್ನು ಗುಜರಾತಿ ಭಾಷೆಯಲ್ಲಿ ಬರೆದಿರುತ್ತಾರೆ. ಇವರು 1932 ನೇ ಇಸವಿಯಲ್ಲಿ "ಗುರುಸ್ಮೃತಿ" ಎಂಬ ಪುಸ್ತಕವನ್ನು ರಚಿಸಿದರು. 1946ನೇ ಇಸವಿಯಲ್ಲಿ ಸಾಯಿಬಾಬಾರವರ ಜೀವನವನ್ನು ಕುರಿತು ಗುಜರಾತಿ ಭಾಷೆಯಲ್ಲಿ "ಸಾಯಿಬಾಬಾ" ಎಂಬ ಪುಸ್ತಕವನ್ನು ರಚಿಸಿರುತ್ತಾರೆ. ಸಾಯಿಬಾಬಾರವರ ಆಶೀರ್ವಾದದಿಂದ 1952-1953 ನೇ ಇಸವಿಯಲ್ಲಿ ಡಾಕೋರ್ ನಲ್ಲಿ ಸನ್ಯಾಸವನ್ನು ವಿಧ್ಯುಕ್ತವಾಗಿ ಸ್ವೀಕರಿಸಿ ಅಂದಿನಿಂದ "ಸ್ವಾಮಿ ಸಾಯಿ ಶರಣಾನಂದ" ರೆಂದು ನಾಮಾಂಕಿತರಾದರು. 1961ನೇ ಇಸವಿಯಲ್ಲಿ ಆಂಗ್ಲ ಭಾಷೆಯಲ್ಲಿ "ಸಾಯಿಬಾಬಾ, ದಿ ಸೂಪರ್ ಮ್ಯಾನ್" ಎಂಬ ಪುಸ್ತಕವನ್ನು ರಚಿಸಿದರು.

ಸಾಯಿಬಾಬಾರವರ ಮಹಾಸಮಾಧಿಯಾಗಿ ಸರಿಯಾಗಿ 36 ವರ್ಷಗಳ ನಂತರ 7ನೇ ಅಕ್ಟೋಬರ್ 1954 ರ ಪವಿತ್ರ ವಿಜಯದಶಮಿಯ ದಿನದಂದು ಶಿರಡಿಯ ಸಮಾಧಿ ಮಂದಿರದಲ್ಲಿ ಪ್ರಖ್ಯಾತ ಶಿಲ್ಪಿ ಹಾಗೂ ಸಾಯಿ ಮಹಾಭಕ್ತ ದಿವಂಗತ ಶ್ರೀ.ಬಾಲಾಜಿ ವಸಂತ ತಾಲೀಮ್ ರವರು ಕೆತ್ತನೆ ಮಾಡಿದ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹವನ್ನು ಸ್ವಾಮಿ ಸಾಯಿ ಶರಣಾನಂದರು ಪ್ರತಿಷ್ಟಾಪನೆ ಮಾಡಿದರು.

ಸ್ವಾಮಿ ಶರಣಾನಂದರು ಅಹಮದಾಬಾದ್ ನಲ್ಲಿ ಸ್ಥಾಪಿಸಿರುವ "ವಿಷ್ಣು ಧರ್ಮಾಲಯ" ಸಾಯಿ ಮಂದಿರಕ್ಕೆ ದರ್ಶನಕ್ಕೆಂದು ದೇಶ ವಿದೇಶಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. 












ಹಲವಾರು ವರ್ಷಗಳು ಸಾಯಿಬಾಬಾ ಹಾಗೂ ಸಾಯಿ ಭಕ್ತರ ನಿಸ್ವಾರ್ಥ ಸೇವೆಯನ್ನು ಮಾಡಿದ ನಂತರ 25ನೇ ಆಗಸ್ಟ್ 1982 ರಂದು ತಮ್ಮ 93ನೇ ವಯಸ್ಸಿನಲ್ಲಿ ಸ್ವಾಮಿ ಸಾಯಿ ಶರಣಾನಂದರು ಸಾಯಿಬಾಬಾರವರ ಪಾದಕಮಲಗಳಲ್ಲಿ ಲೀನವಾದರು.

ಸ್ವಾಮಿ ಸಾಯಿ ಶರಣಾನಂದ ರವರ ಸಮಾಧಿ ಮಂದಿರವು ಗುಜರಾತ್ ರಾಜ್ಯದ ಅಹಮದಾಬಾದ್ ನ ಈ ಕೆಳಕಂಡ ವಿಳಾಸದಲ್ಲಿರುತ್ತದೆ:

ಸ್ವಾಮಿ ಸಾಯಿ ಶರಣಾನಂದ ಸಮಾಧಿ ಮಂದಿರ
ಶ್ರೀಮತಿ.ಉಷಾ ಬೆನ್ ಭಟ್ ಹಾಗೂ ಶ್ರೀ.ಪ್ರತೀಕ್ ಎಂ.ತ್ರಿವೇದಿ,
14/15, ಪ್ರಾಕೃತ್ ಕುಂಜ್ ಸೊಸೈಟಿ,
ನ್ಯೂ ಶರದ್ ಮಂದಿರ ರಸ್ತೆ,
ಬುಡೇರ್ ಪುರ ರಸ್ತೆ,
ಶ್ರೇಯಸ್ ಪ್ರೌಢಶಾಲೆ ಎದುರುಗಡೆ,
ಅಹಮದಾಬಾದ್ - 380 015,
ಗುಜರಾತ್, ಭಾರತ
ದೂರವಾಣಿ ಸಂಖ್ಯೆ; +91 79 2663 0118

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment