Saturday, March 28, 2015

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ರಾಮನವಮಿ ಉತ್ಸವದ ಆಚರಣೆ - ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ  ಸಂಸ್ಥಾನದ ವತಿಯಿಂದ ಆಯೋಜಿಸಲಾಗಿರುವ ಶ್ರೀ ರಾಮನವಮಿ ಉತ್ಸವವು ಇದೇ ತಿಂಗಳ 27ನೇ ಮಾರ್ಚ್ 2015, ಶುಕ್ರವಾರ ದಂದು ಅತ್ಯಂತ ವಿಜೃಂಭಣೆಯಿಂದ ಪ್ರಾರಂಭವಾಯಿತು. ಉತ್ಸವದ ಸಲುವಾಗಿ ಶಿರಡಿಗೆ ಆಗಮಿಸಿರುವ ಲಕ್ಷಾಂತರ ಸಾಯಿ ಭಕ್ತರ ಸಾಯಿ ನಾಮ ಜಯಕಾರದಿಂದ ಶಿರಡಿ ಪಟ್ಟಣವು ಪ್ರತಿಧ್ವನಿಸುತ್ತಿತ್ತು. ಸ್ವತಃ ಶ್ರೀಸಾಯಿಬಾಬಾರವರೇ ತಮ್ಮ ಅವತರಣ ಕಾಲದಲ್ಲಿ ಪ್ರಾರಂಭಿಸಿದ ಈ ಉತ್ಸವದಲ್ಲಿ ಮಹಾರಾಷ್ಟ್ರ ಹಾಗೂ ದೇಶದ ವಿವಿಧ ಭಾಗಗಳಿಂದ ಸಾಯಿ ಭಕ್ತರು ಪಲ್ಲಕ್ಕಿಗಳನ್ನು ಹೊತ್ತುಕೊಂಡು ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನಕ್ಕಾಗಿ ಆಗಮಿಸಿದ್ದರು. 

ಉತ್ಸವದ ಮೊದಲನೆಯ ದಿನವಾದ 27ನೇ ಮಾರ್ಚ್ 2015, ಶುಕ್ರವಾರ ದಂದು ಬೆಳಗಿನ ಕಾಕಡಾ ಆರತಿಯಾದ ನಂತರ ಶ್ರೀ ಸಾಯಿಬಾಬಾರವರ ಭಾವಚಿತ್ರ, ವಿಗ್ರಹ, ವೀಣೆ ಮತ್ತು ಪವಿತ್ರ ಸಾಯಿ ಸಚ್ಚರಿತ್ರೆಯನ್ನು ಸಮಾಧಿ ಮಂದಿರದಿಂದ ಮೆರವಣಿಗೆಯಲ್ಲಿ ದ್ವಾರಕಾಮಾಯಿಗೆ ಕೊಂಡೊಯ್ಯಲಾಯಿತು. ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ , ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆ ಪೋತಿಯನ್ನು, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯ ಮತ್ತು ಮಂದಿರದ ಮುಖ್ಯಸ್ಥರಾದ ಶ್ರೀ.ನವನಾಥ ಕೋತೆಯವರು ಬಾಬಾರವರ ಭಾವಚಿತ್ರವನ್ನು, ಸಂಸ್ಥಾನದ ಪುರೋಹಿತರಾದ ಶ್ರೀ.ನಾರಾಯಣ ಭಿಸೆ ವೀಣೆಯನ್ನು ಹಿಡಿದುಕೊಂಡು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 


ಮೆರವಣಿಗೆಯು ದ್ವಾರಕಾಮಾಯಿಯನ್ನು ತಲಪುತ್ತಿದ್ದಂತೆಯೇ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಪ್ರಾರಂಭಿಸಲಾಯಿತು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮೊದಲನೇ ಅಧ್ಯಾಯವನ್ನು ಹಾಗೂ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಎರಡನೆಯ ಅಧ್ಯಾಯವನ್ನು ಪಾರಾಯಣ ಮಾಡುವುದರ ಮೂಲಕ ಅಖಂಡ ಪಾರಾಯಣಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. 


ಇದಕ್ಕೆ ಮೊದಲು ಸಮಾಧಿ ಮಂದಿರದಲ್ಲಿ ಬೆಳಗಿನ ಕಾಕಡಾ ಆರತಿಯ ನಂತರ ಬಾಬಾರವರ ಪಾದ ಪೂಜೆಯನ್ನು ಶ್ರೀ.ರಾಜೇಂದ್ರ ಜಾಧವ್ ಮತ್ತು ಅವರ ಧರ್ಮಪತ್ನಿಯವರು ನೆರವೇರಿಸಿದರು. 


ಎಂದಿನಂತೆ ಈ ವರ್ಷವೂ ಸಹ ಮುಂಬೈನ ಶ್ರೀ ದ್ವಾರಕಾಮಾಯಿ ಮಂಡಳಿಯವರು ಸಂಸ್ಥಾನದ ಆವರಣದಲ್ಲಿ ಸುಂದರವಾದ ಬೃಹತ್ ಮಹಾದ್ವಾರವನ್ನು ನಿರ್ಮಿಸಿದ್ದಷ್ಟೇ ಅಲ್ಲದೆ ಸಮಾಧಿ ಮಂದಿರ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಶ್ರೀ ದ್ವಾರಕಾಮಾಯಿ ಮಂಡಳಿಯವರು ನಿರ್ಮಿಸಿದ್ದ ಈ ಸುಂದರ ಮತ್ತು ಅದ್ಭುತ ಮಹಾದ್ವಾರವನ್ನು ನೋಡಲು ಸಾಯಿ ಭಕ್ತರು ತಂಡೋಪತಂಡವಾಗಿ ಆಗಮಿಸಿದ್ದರು. 





ಇಂದು ಶ್ರೀ ರಾಮನವಮಿ ಉತ್ಸವದ ಮೊದಲ ದಿನವಾದ ಕಾರಣ ಶ್ರೀ ಸಾಯಿಸಚ್ಚರಿತ್ರೆಯ ಅಖಂಡ ಪಾರಯಣಕ್ಕಾಗಿ ದ್ವಾರಕಾಮಾಯಿಯನ್ನು ಇಡೀ ರಾತ್ರಿ ತೆರೆದಿಡಲಾಗಿತ್ತು. 

ಸಾಯಿ ನಗರ ಮೈದಾನದಲ್ಲಿ ಇಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಯಿ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಸಿಕಂದರಾಬಾದ್ ನ ಡಾ.ವಿ.ವೈ.ಆಚಾರ್ಯರವರ ಕುಂಭರಾತಿ ನೃತ್ಯ ಮತ್ತು ಬಹದಾರಪುರದ ಹರಿ ಭಕ್ತ ಪರಾಯಣ ಶ್ರೀ ಸಾಯಿನಾಥ ಮಹಾರಾಜ್ ರಹಾನೆಯವರ ಸಾಯಿ ಕಥೆ ಕಾರ್ಯಕ್ರಮಗಳು ಸಾಯಿ ಭಕ್ತರ ಮನಸೂರೆಗೊಂಡವು. 

ಬೃಹತ್ ಸಂಖ್ಯೆಯಲ್ಲಿ ಸಾಯಿ ಭಕ್ತರು ಆಗಮಿಸುವುದನ್ನು ಈ ಮೊದಲೇ ನಿರೀಕ್ಷಿಸಿದ್ದ ಶ್ರೀ ಸಾಯಿಬಾಬಾ ಸಂಸ್ಥಾನವು ಶ್ರೀ ಸಾಯಿಬಾಬಾರವರ ದರ್ಶನಕ್ಕಾಗಿ ಉತ್ತಮ ವ್ಯವಸ್ಥೆಯನ್ನು ಮಾಡಿತ್ತು. ಅಲ್ಲದೇ ಅತ್ಯುತ್ತಮ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಡಿತ್ತು. 

ಭೂಪಾಲ್ ನ ಶ್ರೀ.ಸೂರ್ಯಕಾಂತ್ ಅವಸ್ತಿ, ಎಲ್ಲೂರಿನ ಶ್ರೀಮತಿ.ಅನಂತ ಲಕ್ಷ್ಮಿ, ಭಿವಂಡಿಯ ಶ್ರೀಮತಿ.ಸುಧಾ ಭಾಜಿರಾವ್ ಪಾಟೀಲ್, ಕರ್ನಾಲ್ ನ ಶ್ರೀಮತಿ.ಉಷಾ ರಾಣಿ ಕಮಲ್ ಮತ್ತು ಶ್ರೀಮತಿ.ದೀಪಾ ಸೋಲಂಕಿಯವರುಗಳು ನೀಡಿದ ಉದಾರ ದೇಣಿಗೆಯ ಸಹಾಯದಿಂದ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತ ಪ್ರಸಾದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಉತ್ಸವದ ಎರಡನೆಯ ದಿನ ಹಾಗೂ ಮುಖ್ಯ ದಿನವಾದ  28ನೇ ಮಾರ್ಚ್ 2015, ಶನಿವಾರ ದಂದು ಶ್ರೀ ಸಾಯಿಬಾಬಾರವರ ಸಮಾಧಿ,ಪಾದುಕೆ ಹಾಗೂ ಅಮೃತಶಿಲೆಯ ವಿಗ್ರಹಕ್ಕೆ ಭಕ್ತರು ಗೋದಾವರಿ  ನದಿಯಿಂದ ಕಾವಡಿಯಲ್ಲಿ ಹೊತ್ತು ತಂದ ಪವಿತ್ರ ನೀರಿನಿಂದ ಅಭಿಷೇಕ ಮಾಡಲಾಯಿತು. ಹೊಸ ಗೋಧಿಯ ಚೀಲಕ್ಕೆ ಪೂಜೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ವಿನಯ್ ಜೋಶಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ರೇವತಿ ಜೋಶಿಯವರುಗಳು ನೆರವೇರಿಸಿದರು. ಅನಾಮಧೇಯ ಸಾಯಿ ಭಕ್ತರು ನೀಡಿದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರದ ಒಳಗಡೆ ಅಳವಡಿಸಲಾದ  ಸುಮಾರು 90 ಲಕ್ಷ ಬೆಲೆಬಾಳುವ ಹವಾ ನಿಯಂತ್ರಣ ಯಂತ್ರವನ್ನು ಶ್ರೀ.ವಿನಯ್ ಜೋಶಿ ಮತ್ತು ಶ್ರೀಮತಿ.ರೇವತಿ ಜೋಶಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ  ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ವಿದ್ಯುತ್ ವಿಭಾಗದ ಮುಖ್ಯಸ್ಥರಾದ ಶ್ರೀ.ವಿಜಯ್ ರೋಹಮಾರೆ ಮತ್ತು ಯಂತ್ರ ವಿಭಾಗದ ಮುಖ್ಯಸ್ಥರಾದ ಶ್ರೀ.ಅತುಲ್ ವಾಘ್ ರವರುಗಳು ಕೂಡ ಉಪಸ್ಥಿತರಿದ್ದರು.




ಕಾಕಡಾ ಆರತಿಯಾದ ನಂತರ ದ್ವಾರಕಾಮಾಯಿಯಲ್ಲಿ ಶ್ರೀ ಸಾಯಿ ಸಚ್ಚರಿತೆಯ ಪಾರಾಯಣ ಸುಸಂಪನ್ನವಾಯಿತು. ಪವಿತ್ರ ಶ್ರೀ ಸಾಯಿ ಸಚ್ಚರಿತೆ ಗ್ರಂಥವನ್ನು, ಬಾಬಾರವರ ಭಾವಚಿತ್ರ ಮತ್ತು ವೀಣೆಯೊಂದಿಗೆ ದ್ವಾರಕಾಮಾಯಿಯಿಂದ ಗುರುಸ್ಥಾನದ ಮಾರ್ಗವಾಗಿ ಸಮಾಧಿ ಮಂದಿರಕ್ಕೆ ತರಲಾಯಿತು. ಈ ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ವಿನಯ್ ಜೋಶಿ ಮತ್ತು ಅವರ ಧರ್ಮಪತ್ನಿ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆ ಗ್ರಂಥವನ್ನು ಹಿಡಿದುಕೊಂಡಿದ್ದರು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಬಾಬಾರವರ ಭಾವಚಿತ್ರವನ್ನು ಹಿಡಿದುಕೊಂಡಿದ್ದರು. ಹಾಗೂ ಮಂದಿರದ ಮುಖ್ಯಸ್ಥರಾದ ಶ್ರೀ.ನವನಾಥ ಕೋತೆಯವರು ವೀಣೆಯನ್ನು ಹಿಡಿದುಕೊಂಡು ಭಾಗವಹಿಸಿದ್ದರು.



ಸುಮಾರು 3000ಕ್ಕೂ ಹೆಚ್ಚು ಸಾಯಿ ಭಕ್ತರು ಗೋದಾವರಿ ನದಿಯಿಂದ ಕಾವಡಿಯಲ್ಲಿ ಹೊತ್ತು ತಂದ ಪವಿತ್ರ ಜಲದಿಂದ ಸಾಯಿಬಾಬಾರವರ ವಿಗ್ರಹ, ಸಮಾಧಿ ಮತ್ತು ಪಾದುಕೆಗಳಿಗೆ ಅಭಿಷೇಕ ಮಾಡಲಾಯಿತು.

ಬೆಳಿಗ್ಗೆ 10:30 ಹರಿಭಕ್ತ ಪರಾಯಣ ಶ್ರೀ.ವಿಕ್ರಮ್ ನಂಡೇಕರ್ ರವರು ಭಗವಾನ್ ಶ್ರೀರಾಮನ ಜನ್ಮವನ್ನು ಕುರಿತು ಕೀರ್ತನೆಯನ್ನು ಮಾಡಿದರು.

ಮಧ್ಯಾನ್ಹ ಆರತಿಗೆ ಮುಂಚೆ ಸಮಾಧಿ ಮಂದಿರದಲ್ಲಿ ಹೊಸ ಧ್ವಜಗಳಿಗೆ ಪೂಜೆಯನ್ನು ನೆರವೇರಿಸಲಾಯಿತು. ಇದರಲ್ಲಿ ಸಾಯಿ ಮಹಾಭಕ್ತ ದಿವಂಗತ ಶ್ರೀ.ರಾಸನೆ ಮತ್ತು ಶ್ರೀ.ನಾನಾ ಸಾಹೇಬ್ ನಿಮೋಣ್ಕರ್ ರವರ ವಂಶಸ್ಥರುಗಳು ಭಾಗವಹಿಸಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಸಂಜೆ 4:00 ಗಂಟೆಗೆ ಧ್ವಜದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು ಹಾಗೂ ಸಂಜೆ 5:00 ಕ್ಕೆ ಶಿರಡಿ ಗ್ರಾಮದ ಸುತ್ತಾ ಶ್ರೀ ಸಾಯಿಬಾಬಾರವರ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಎರಡೂ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಸಾಯಿ ಭಕ್ತರು ಭಾಗವಹಿಸಿದ್ದರು.

ಕೊಲ್ಕತ್ತಾದ ಶ್ರೀ.ವಿವಾನಿ ರಾಯ್ ಚೌಧರಿ, ಶ್ರೀ.ಭುದ್ಮಾಲ್, ಶ್ರೀ.ಸುರೇಂದ್ರ ತುಳಶಿ, ಶ್ರೀ.ಕಮಲ್ ದುಗ್ಗರ್, ನವದೆಹಲಿಯ ಶ್ರೀ.ವೀರೇಂದ್ರ ಸುಂದರಮ್, ಬೆಂಗಳೂರಿನ ಶ್ರೀಮತಿ.ಸಾಯಿ ವಿಲ್ಲಿ ಶ್ರೀಜಾ ಸುದೀಶ್, ಶ್ರೀಮತಿ.ಭಾರತಿ ಶಿರಗೂರ್ಕರ್ ರವರುಗಳು ನೀಡಿದ ಉದಾರ ದೇಣಿಗೆಯ ಸಹಾಯದಿಂದ ಎಲ್ಲಾ ಸಾಯಿ ಭಕ್ತರಿಗೂ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು.

ನಾಗಪುರದ ಇಂಡೋ ರಾಮ ಸಿಂಥಟಿಕ್ಸ್ ನವರು ನೀಡಿದ ದೇಣಿಗೆಯ ಸಹಾಯದಿಂದ ಶ್ರೀ ಸಾಯಿಬಾಬಾ ಸಂಸ್ಥಾನದ ಆವರಣ, ಸಮಾಧಿ ಮಂದಿರ, ಗುರುಸ್ಥಾನ, ದ್ವಾರಕಾಮಾಯಿ ಹಾಗೂ ಮತ್ತಿತರ ಕಡೆಗಳಲ್ಲಿ ಸುಂದರವಾದ ಹೂವುಗಳಿಂದ ಅಲಂಕರಿಸಲಾಗಿತ್ತು.




28ನೇ ಮಾರ್ಚ್ 2015, ಶನಿವಾರ ವು ಉತ್ಸವದ ಮುಖ್ಯ ದಿನವಾದ ಕಾರಣ ಸಮಾಧಿ ಮಂದಿರವನ್ನು ರಾತ್ರಿಯಿಡೀ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗಿತ್ತು. ಲಕ್ಷಾಂತರ ಸಾಯಿ ಭಕ್ತರು ಶ್ರೀ ಸಾಯಿಬಾಬಾರವರ ದರ್ಶನವನ್ನು ಮಾಡಿದರು.



ಮೂರನೇ ಹಾಗೂ ಕೊನೆಯ ದಿನದ ಶ್ರೀ ರಾಮನವಮಿ ಉತ್ಸವದ ಕಾರ್ಯಕ್ರಮಗಳನ್ನು 29ನೇ ಮಾರ್ಚ್ 2015, ಭಾನುವಾರ ದಂದು ಹಮ್ಮಿಕೊಳ್ಳಲಾಗಿತ್ತು.

 27ನೇ ಮಾರ್ಚ್ 2015, ಶುಕ್ರವಾರ ದಂದು ಪ್ರಾರಂಭವಾದ ಶ್ರೀ ರಾಮನವಮಿ ಉತ್ಸವವು ಹರಿ ಭಕ್ತ ಪರಾಯಣ ಶ್ರೀ.ವಿಕ್ರಂ ನಂದೇಡ್ಕರ್ ರವರ ಕಲ್ಯಾಚಿ ಕೀರ್ತನೆ (ಉತ್ಸವವನ್ನು ಸುಸಂಪನ್ನಗೊಳಿಸಲು ಮಾಡುವ ಕೀರ್ತನೆ) ಯೊಂದಿಗೆ ಅತ್ಯಂತ ಸಂತೋಷಭರಿತವಾಗಿ ಪೂರ್ಣಗೊಂಡಿತು.

ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಶೈಲೇಶ್ ಪಾಟೀಲ್ ರವರು 18 ಲಕ್ಷ ರೂಪಾಯಿ ಬೆಲೆ ಬಾಳುವ ಚಪಾತಿ ತಯಾರಿಸುವ ಯಂತ್ರವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಶ್ರೀ ಸಾಯಿ ಪ್ರಸಾದಾಲಯಕ್ಕೆ ದೇಣಿಗೆಯಾಗಿ ನೀಡಿದರು. ವಿಧ್ಯುಕ್ತ ಪೂಜೆಯ ನಂತರ ಚಪಾತಿ ತಯಾರಿಸುವ ಯಂತ್ರಕ್ಕೆ  ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಸರಿತಾ ಜಾಧವ್ ರವರುಗಳು ಚಾಲನೆ ನೀಡಿದರು. ಈ ಸ್ವಯಂ ಚಾಲಿತ ಯಂತ್ರವು ಗಂಟೆಗೆ ಸುಮಾರು 3000 ಚಪಾತಿಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಈ ಯಂತ್ರವನ್ನು ಶ್ರೀ ಸಾಯಿ ಪ್ರಸಾದಾಲಯದಲ್ಲಿ ಸ್ಥಾಪಿಸಿರುವ ಕಾರಣ ಮುಂದಿನ ದಿನಗಳಲ್ಲಿ ಸಾಯಿ ಭಕ್ತರಿಗೆ ಈಗ ನೀಡುತ್ತಿರುವಂತೆ ಪೂರಿಯ ಬದಲಿಗೆ ಚಪಾತಿಯನ್ನೇ ನೀಡಲು ಸಾಧ್ಯವಾಗುತ್ತದೆ.


ಆ ದಿನ ಬೆಳಗಿನ ಜಾವ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಗುರುಸ್ಥಾನ ಮಂದಿರದಲ್ಲಿ ರುದ್ರಾಭಿಷೇಕವನ್ನು ನೆರವೇರಿಸಿದರು.


ತ್ರಿಸದಸ್ಯ ಸಮಿತಿಯ ಅಧ್ಯಕ್ಷರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ವಿಜಯ್ ಜೋಷಿಯವರು ಶ್ರೀ ಸಾಯಿಬಾಬಾರವರ ಪಾದುಕೆಗಳಿಗೆ ಪಾದ ಪೂಜೆಯನ್ನು ನೆರವೇರಿಸಿದರು.


ಮಧ್ಯಾನ್ಹ 12 ಗಂಟೆಗೆ ಸಮಾಧಿ ಮಂದಿರದ ಆವರಣದಲ್ಲಿ ಹರಿ ಭಕ್ತ ಪರಾಯಣರಾದ ಶ್ರೀ.ವಿಕ್ರಮ್ ನಂದೇಡ್ಕರ್ ರವರು ಕಲ್ಯಾಚಿ ಕೀರ್ತನೆಯನ್ನು ಮಾಡಿದರು. ನಂತರ ದಹಿ ಹಂಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಾದ ನಂತರ ಮಧ್ಯಾನ್ಹ ಆರತಿಯನ್ನು ಹಮ್ಮಿಕೊಳ್ಳಲಾಗಿತ್ತು.


ಹೈದರಾಬಾದ್ ನ ಸಾಯಿ ಭಕ್ತರಾದ ಶ್ರೀ.ಕರ್ಣಂ ನಾರಾಯಣ್ ಮತ್ತು ಮುಂಬೈನ ಶ್ರೀ.ಸುನಿಲ್ ಅಗರವಾಲ್ ರವರು ನೀಡಿದ ಉದಾರ ದೇಣಿಗೆಯ ಸಹಾಯದಿಂದ ಎಲ್ಲಾ ಸಾಯಿ ಭಕ್ತರಿಗೂ  ಶ್ರೀ ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು.

ದೇಶದ ವಿವಿಧ ಭಾಗಗಳಿಂದ ಶ್ರೀ ಸಾಯಿಬಾಬಾರವರ ದರ್ಶನಕ್ಕೆಂದು ಪಲ್ಲಕ್ಕಿಯನ್ನು ಹೊತ್ತು ನಡೆದುಬಂದಿದ್ದ ಪಾದಯಾತ್ರಿಗಳು ತಂಗುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಸಾಯಿ ಆಶ್ರಮ - 2 ರಲ್ಲಿ ಉಚಿತವಾಗಿ ತಂಗುವ ವ್ಯವಸ್ಥೆಯನ್ನು ಮಾಡಿತ್ತು.

ಉತ್ಸವದ ಮುಖ್ಯ ದಿನವಾದ 28ನೇ ಮಾರ್ಚ್ 2015, ಶನಿವಾರ ದಂದು ಸುಮಾರು 70,000 ಸಾಯಿ ಭಕ್ತರಿಗೆ ಉಚಿತ ಪ್ರಸಾದ ಭೋಜನವನ್ನು ನೀಡಲಾಯಿತು. ಅಂತೆಯೇ, ದರ್ಶನದ ಸರತಿ ಸಾಲಿನಲ್ಲಿ ಬಂದು ಶ್ರೀ ಸಾಯಿಬಾಬಾರವರ ದರ್ಶನವನ್ನು ಮಾಡಿದ ಸುಮಾರು 90,000 ಸಾಯಿ ಭಕ್ತರಿಗೆ ಉಚಿತ ಲಾಡು ಪ್ರಸಾದವನ್ನು ವಿತರಿಸಲಾಯಿತು.

ಕಳೆದ 37 ವರ್ಷಗಳಿಂದ ಸತತವಾಗಿ ಸಾಯಿ ಸೇವೆಯಲ್ಲಿ ನಿರತವಾಗಿ ಎಲ್ಲಾ ಉತ್ಸವದ ಸಂದರ್ಭದಲ್ಲಿ ಸಮಾಧಿ ಮಂದಿರ ಹಾಗೂ ಸುತ್ತಮುತ್ತಲಿನ ಪರಿಸರವನ್ನು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಿ ಹಾಗೂ ಗುರುಸ್ಥಾನದ ಮುಂಭಾಗದಲ್ಲಿ ಬೃಹತ್ ಮಹಾದ್ವಾರವನ್ನು ನಿರ್ಮಿಸುತ್ತಾ ಬಂದಿರುವ ಶ್ರೀ ದ್ವಾರಕಮಾಯಿ ಮಂಡಲಿ, ಮುಂಬೈನ ಎಲ್ಲಾ ಪದಾಧಿಕಾರಿಗಳಿಗೆ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ಉತ್ಸವವು ಅತ್ಯಂತ ಯಶಸ್ವಿಯಾಗಿ ನಡೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರು, ಪ್ರಸಾದಾಲಯ ಮತ್ತು ಇತರ ಎಲ್ಲಾ ವಿಭಾಗದ ನೌಕರರು ಹಾಗೂ ಶಿರಡಿ ಗ್ರಾಮಸ್ಥರನ್ನು ಈ ಸಂದರ್ಭದಲ್ಲಿ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಅಭಿನಂದಿಸಿದರು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment