Monday, March 17, 2014

ಮುಂಬೈನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ ಮಂದಿರ, ಶ್ರೀ.ಮೋಹಿತೆ ಬಾಬಾ ಮಂದಿರ, ಗಾಂಧಿ ಮೈದಾನ, ವೊರ್ಲಿ, ಮುಂಬೈ, ಮಹಾರಾಷ್ಟ್ರ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ಬಹಳ ಹಿಂದಿನ ದಿನಗಳಲ್ಲಿ ವೊರ್ಲಿ ಪ್ರದೇಶವು ಮೀನುಗಾರಿಕೆ ಕೃಷಿಯನ್ನು ಆಧರಿಸಿದ್ದ ಒಂದು ಹಳ್ಳಿಯಾಗಿತ್ತು. ಮುಂಬೈ ನಗರ ಪ್ರದೇಶ ಬೆಳೆದಂತೆ ವೊರ್ಲಿ ಕೂಡ ಒಂದು ಪ್ರತಿಷ್ಟಿತ ಪ್ರದೇಶವಾಗಿ ರೂಪುಗೊಂಡಿದೆ. 

ಸಿಮೆಂಟ್ ಅಂಗಡಿಗಳಿಂದ ಕೂಡಿರುವ ಈ ಪ್ರದೇಶವನ್ನು ಬಿ.ಡಿ.ಡಿ.ಚಾಲ್ಸ್ ಎಂತಲೂ ಕರೆಯುತ್ತಾರೆ. ಇವು ಬಹಳ ವರ್ಷಗಳಿಂದ ಇಲ್ಲಿ ತಲೆಯೆತ್ತಿ ನಿಂತಿರುತ್ತವೆ. ಈ ಸಿಮೆಂಟ್ ಮಳಿಗೆಗಳು ಜಂಬೂರಿ ಮೈದಾನ ಎಂಬ ಪ್ರದೇಶದ ಸುತ್ತಮುತ್ತ ಇದ್ದು ಈ ಸ್ಥಳವನ್ನು ಈಗ ಗಾಂಧಿ ಮೈದಾನ ಎಂದು ಪುನರ್ನಾಮಕರಣ ಮಾಡಲಾಗಿದೆ. ಈ ಮೈದಾನದ ದಕ್ಷಿಣ ದಿಕ್ಕಿಗೆ ಇರುವ ಸಿಮೆಂಟ್ ಮಳಿಗೆ 21 ಮತ್ತು 30 ರ ಮಧ್ಯ ಇರುವ ಖಾಲಿ ಸ್ಥಳದಲ್ಲಿ ಒಂದು ಪುಟ್ಟ ಸಾಯಿಬಾಬಾ ಮಂದಿರ ಬಹಳ ವರ್ಷಗಳಿಂದ  ತಲೆಯೆತ್ತಿ ನಿಂತಿದೆ. ಈ ಪ್ರದೇಶದಲ್ಲಿ ಇದೊಂದೆ ಸಾಯಿಬಾಬಾ ಮಂದಿರ ಇರುವುದರಿಂದ ಬಹಳ ಜನ ಭಕ್ತರು ಈ ಮಂದಿರಕ್ಕೆ ಬರುವ ಪರಿಪಾಠ ಇಟ್ಟುಕೊಂಡಿದ್ದಾರೆ. ಈ ಮಂದಿರವನ್ನು ಪ್ರಾರಂಭಿಸಿದವರು ಸಂತ ಶ್ರೀ. ಮೋಹಿತೆ ಬಾಬಾ. 

ಶ್ರೀ ಮೋಹಿತೆ ಬಾಬಾರವರ ಪೂರ್ಣ ಹೆಸರು ಗುಣಾಜಿ ದೇವಜಿ ಮೋಹಿತೆ. ಇವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೋಪಿ ಎಂಬ ಗ್ರಾಮದವರು. 1914 ರಿಂದ 1918 ನೇ ಇಸವಿಯವರೆಗೆ ನಡೆದ ಪ್ರಥಮ ವಿಶ್ವ ಮಹಾಯುದ್ಧದಲ್ಲಿ ಇವರು ಭಾಗವಹಿಸಿದ್ದರು. ಆ ಸಮಯದಲ್ಲಿ ಇವರು ಇರಾನ್, ಬಾಗ್ದಾದ್, ಪಾಲೆಸ್ಟೈನ್, ಗ್ರೀಸ್ ಹಾಗೂ ಆಸ್ಟ್ರಿಯಾ ದೇಶಗಳನ್ನು ಸುತ್ತಿ ಬಂದಿದ್ದರು. ಇವರು 1947 ರವರೆಗೆ ಕಾರ್ಯ ನಿರ್ವಹಿಸಿ 1948 ರಲ್ಲಿ ನಿವೃತ್ತಿ ಹೊಂದಿದ ಬಳಿಕ ವೊರ್ಲಿಯಲ್ಲಿ ವಾಸಿಸುತ್ತಿದ್ದರು. ಇವರು ಸೇನಾ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಸಂತ ಗಾಡ್ಗೆ ಮಹಾರಾಜರ ಶಿಷ್ಯರಾದ ಶ್ರೀ.ಪಾಂಡುರಂಗ ಮಹಾರಾಜ್ ರವರನ್ನು ಭೇಟಿಯಾದರು. ಅವರು ಇವರನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಇವರಿಗೆ ಮಂತ್ರೋಪದೇಶ ಮಾಡಿದರು. ಈ ರೀತಿಯಲ್ಲಿ ಶ್ರೀ.ಮೋಹಿತೆ ಬಾಬಾರವರು ಆಧ್ಯಾತ್ಮಿಕ ಪ್ರಪಂಚಕ್ಕೆ ಕಾಲಿಟ್ಟು ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು. 

ಒಮ್ಮೆ ಶ್ರೀ.ಮೋಹಿತೆ ಬಾಬಾರವರು ಭಕ್ತನೊಬ್ಬನ ಜೊತೆಯಲ್ಲಿ ಶಿರಡಿಗೆ ಹೋಗಿದ್ದರು. ಒಂದು ದಿನ ಲೇಂಡಿ ಉದ್ಯಾನವನದಲ್ಲಿ ಒಬ್ಬರೇ ತಿರುಗಾಡುತ್ತಿದ್ದಾಗ ತೋಟದಲ್ಲಿರುವ ಅರಳಿ ಮರದ ಕೆಳಗೆ ಸಾಧು ಒಬ್ಬರು ಧ್ಯಾನದಲ್ಲಿ ಕುಳಿತಿರುವುದನ್ನು ಕಂಡರು. ಮೋಹಿತೆ ಬಾಬಾ ಅವರಿಗೆ ತಲೆಬಾಗಿ ನಮಸ್ಕರಿಸಲು ಆ ಕೂಡಲೇ ಸಾಧುವು ಇವರ ತಲೆಯ ಮೇಲೆ ಅಭಯ ಹಸ್ತವನ್ನು ಇರಿಸಿ ಆಶೀರ್ವದಿಸಿದರು. ತಕ್ಷಣವೇ ಅಲ್ಲಿಂದ ಹೊರಗಡೆ ಬಂದ ಮೋಹಿತೆ ಬಾಬಾ ತಮ್ಮೊಂದಿಗೆ ಶಿರಡಿಗೆ ಬಂದಿದ್ದ ಭಕ್ತರನ್ನು ಕರೆದುಕೊಂಡು ಪುನಃ ಲೇಂಡಿ ಉದ್ಯಾನವನಕ್ಕೆ ಬಂದರು. ಆದರೆ, ಸಾಧುವು ಆ ಮರದ ಕೆಳಗಡೆ ಇರಲಿಲ್ಲ.  ಸ್ವಲ್ಪ ಸಮಯದ ನಂತರ ಪುನಃ ಒಬ್ಬರೇ ಲೇಂಡಿ ಉದ್ಯಾನವನಕ್ಕೆ ಮತ್ತೆ ಬಂದು ನೋಡಲು ಆ ಸಾಧುವು ಅದೇ ಮರದ ಕೆಳಗಡೆ ಕುಳಿತಿರುವುದನ್ನು ಕಂಡರು. ಮೋಹಿತೆ ಬಾಬಾರವರು ಆ ಸಾಧುವು ಬೇರೆ ಯಾರೋ ಆಗಿರದೆ ಸ್ವತಃ ಶಿರಡಿ ಸಾಯಿಬಾಬಾರವರೇ ತಮಗೊಬ್ಬರಿಗೆ ದರ್ಶನ ನೀಡಲು ಹಾಗೆ ಮಾಡಿದ್ದಾರೆ ಎಂದು ಹೇಳುತ್ತಾರೆ.

ಈ ಘಟನೆಯಾದ ನಂತರ ಮೋಹಿತೆ ಬಾಬಾರವರು ಮುಂಬೈಗೆ ಹಿಂತಿರುಗಿದರು ಹಾಗೂ ಹಲವಾರು ವರ್ಷಗಳು ಧ್ಯಾನದಲ್ಲಿ ಕಳೆದರು. ಆ ರೀತಿ ಧ್ಯಾನ ಮಾಡುವಾಗ ಅವರು ಗ್ಲಾಕ್ಸೋ ಕಂಪೆನಿಯ ಹಿಂಭಾಗದಲ್ಲಿದ್ದ ಅರಳಿ ಮರದ ಕೆಳಗೆ ಅಥವಾ ಅದರ ಹತ್ತಿರವೇ ಇದ್ದ ವೊರ್ಲಿಯ ಸ್ಮಶಾನದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ರೀತಿ ನಿರಂತರ ಧ್ಯಾನದಲ್ಲಿ ಅವರಿಗೆ ಸಾಯಿಬಾಬಾರವರ ದರ್ಶನವಾಗಿ ಅವರ ಮಾರ್ಗದರ್ಶನದಂತೆ ಮುಂಬೈ ನಗರದಲ್ಲಿ ಸಾಯಿಬಾಬಾರವರ ಪೂಜೆಯನ್ನು  ಮಾಡಲು ಪ್ರಾರಂಭಿಸಿದರು. ದ್ವಾರಕಾಮಾಯಿ ಭಂಗಿಯಲ್ಲಿರುವ ಸಾಯಿಬಾಬಾರವರ ಭಾವಚಿತ್ರವನ್ನು ಕಲೆಗಾರರೊಬ್ಬರಿಂದ ರಚನೆ ಮಾಡಿಸಿ ಅದನ್ನು ತಂದಿರಿಸಿ ಅನನ್ಯ ಭಕ್ತಿಯಿಂದ ಪೂಜೆ ಮಾಡಲು ಪ್ರಾರಂಭಿಸಿದರು. ಬಿ.ಡಿ.ಡಿ.ಚಾಲ್ಸ್ ನ ಸಿಮೆಂಟ್ ಮಳಿಗೆ 21 ಮತ್ತು 30 ರ ಮಧ್ಯ ಇರುವ ಖಾಲಿ ಸ್ಥಳದಲ್ಲಿ ಮೊದಲು ಯಾವುದೇ ರೀತಿಯ ಸೂರು ಹೊದೆಸಿರಲಿಲ್ಲ. ಆದ ಕಾರಣ, ಮಳೆಗಾಲ ಹಾಗೂ ಚಳಿಗಾಲದಲ್ಲಿ ಮೋಹಿತೆ ಬಾಬಾರವರಿಗೆ ತುಂಬ ತೊಂದರೆಯಾಗುತ್ತಿತ್ತು. ಆದರೆ ಕಾಲಾನಂತರದಲ್ಲಿ ಸಾಯಿಬಾಬಾರವರು ಸ್ಥಳೀಯ ನಿವಾಸಿಗಳಿಗೆ ಸದ್ಬುದ್ಧಿಯನ್ನು ನೀಡಿದ ಸಲುವಾಗಿ ಅವರುಗಳು ಮೋಹಿತೆ ಬಾಬಾರವರಿಗೆ ಸಹಾಯವನ್ನು ಮಾಡಲು ಪ್ರಾರಂಭಿಸಿದರು.

ಸ್ಥಳೀಯ ಭಕ್ತರು ನೀಡಿದ ದೇಣಿಗೆಯ ಸಹಾಯದಿಂದ ಮೋಹಿತೆ ಬಾಬಾರವರು 1962 ನೇ ಇಸವಿಯಲ್ಲಿ ಒಂದು ಪುಟ್ಟ ಮಂದಿರವನ್ನು ಪ್ರಾರಂಭಿಸಿದರು. ನಂತರ 1969ನೇ ಇಸವಿಯಲ್ಲಿ ಸುಂದರ ಅಮೃತಶಿಲೆಯ ವಿಗ್ರಹವನ್ನು ಸ್ಥಾಪಿಸಲಾಯಿತು. ಶ್ರೀ.ಬಾವುಸಾಹೇಬ್ ಹೀರೆ ಎಂಬುವರ ಪುತ್ರರಾದ ಶ್ರೀ.ವೆಂಕಟರಾವ್ ಹೀರೆ ಎಂಬುವರು  ಪ್ರತಿಷ್ಠಾಪನೆಯನ್ನು ನೆರವೇರಿಸಿದರು. ಶ್ರೀಮತಿ. ಸರಸ್ವತಿ ಶಿರ್ಕೆ ಎಂಬ ಸಾಯಿಭಕ್ತೆ ನೀಡಿರುವ ದೇಣಿಗೆಯಿಂದ 2.9 ಅಡಿ ಎತ್ತರದ ಅಮೃತಶಿಲೆಯ ವಿಗ್ರಹವನ್ನು ಎತ್ತರವಾದ ವೇದಿಕೆಯ ಮೇಲೆ ಪ್ರತಿಷ್ಟಾಪಿಸಲಾಗಿದೆ. ಈ ವಿಗ್ರಹವನ್ನು ಬಲ್ಸಾದ್ ನಿಂದ ತರಲಾಗಿರುತ್ತದೆ. ಒಂದು ತ್ರಿಶೂಲ ಹಾಗೂ ಒಂದು ಜೊತೆ ಚಿಮಟಾವನ್ನು ವಿಗ್ರಹದ ಹತ್ತಿರ ಇರಿಸಲಾಗಿದೆ. ವಿಗ್ರಹದ ಎರಡೂ ಬದಿಗಳಲ್ಲಿ ನಂದಾದೀಪವನ್ನು ಇರಿಸಲಾಗಿದೆ. ಮಂದಿರದ ಒಳಗಡೆಯ ಆವರಣ ಬಹಳ ಚಿಕ್ಕದಾಗಿದ್ದು ಕೇವಲ ಎಪತ್ತೈದು ಭಕ್ತರಿಗೆ ಮಾತ್ರ ಕೂರಲು ಸ್ಥಳವಿರುತ್ತದೆ. ಮೊದಲು ಶ್ರೀ.ಮೋಹಿತೆ ಬಾಬಾರವರು ತಮ್ಮ ಉದರ ಪೋಷಣೆಗಾಗಿ ಭಿಕ್ಷೆಯನ್ನು ಬೇಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಮಂದಿರದಲ್ಲಿಯೇ ನೈವೇದ್ಯವನ್ನು ತಯಾರು ಮಾಡಿ ಬಾಬಾರವರಿಗೆ ಅರ್ಪಣೆ ಮಾಡಿ ಅದರಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳಲು ಪ್ರಾರಂಭಿಸಿದರು.

ಶ್ರೀ.ಮೋಹಿತೆ ಬಾಬಾರವರು ನೀಡಿರುವ ಮಾರ್ಗದರ್ಶನದಂತೆ ಪ್ರತಿನಿತ್ಯ ಪೂಜೆ, ಆರತಿ ಹಾಗೂ ನೈವೇದ್ಯವನ್ನು ನಿಯಮಿತವಾಗಿ ಮಾಡಲಾಗುತ್ತಿದೆ. ಶಿರಡಿಯಲ್ಲಿ ಆಚರಿಸುವಂತೆ ಈ ಸ್ಥಳದಲ್ಲಿ ಕೂಡ ಗುಡಿ ಪಾಡ್ವ, ಶ್ರೀರಾಮನವಮಿ, ಗುರುಪೂರ್ಣಿಮೆ ಹಾಗೂ ವಿಜಯದಶಮಿ ಉತ್ಸವಗಳನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಅದರಲ್ಲೂ  ವಿಶೇಷವಾಗಿ ಶ್ರೀರಾಮನವಮಿ ಉತ್ಸವವನ್ನು ಸ್ಥಳೀಯ ಭಕ್ತರೆಲ್ಲರೂ ಸೇರಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ. ಮಂದಿರವನ್ನು ಉತ್ತಮವಾಗಿ ನಡೆಸಲು ಬೇಕಾದ ದೇಣಿಗೆಯನ್ನು ನೀಡುವಂತೆ ಶ್ರೀ.ಮೋಹಿತೆ ಬಾಬಾರವರು ಯುವ ಜನಾಂಗಕ್ಕೆ ಅಗಿಂದಾಗ್ಗೆ ಮನವಿ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಹಲವಾರು ಸ್ಥಳೀಯ ಭಕ್ತರು ಮಂದಿರದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡು ಶ್ರೀ. ಮೋಹಿತೆ ಬಾಬಾರವರಿಗೆ ತಮ್ಮ ಸಹಾಯ ಹಸ್ತವನ್ನು ಚಾಚುತ್ತಾ ಬಂದಿದ್ದಾರೆ.

ಮಂದಿರದಲ್ಲಿ ಪ್ರತಿನಿತ್ಯ ಸಂಜೆ 7 ಗಂಟೆಗೆ ವಿಶೇಷ ಧೂಪಾರತಿಯನ್ನು ನೆರವೇರಿಸಲಾಗುತ್ತದೆ. ಆಗ ಚಿಕ್ಕ ಮಕ್ಕಳು, ಯುವಕರು, ಮುದುಕರು ಮತ್ತು ಹೆಂಗಸರೆಲ್ಲರು ಕೂಡಿಕೊಂಡು ಒಕ್ಕೊರಲಿನಿಂದ ಆರತಿಯನ್ನು ಹಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಬಾಲ್ಯದಿಂದಲೇ ಸಾಯಿಬಾಬಾರವರ ಭಕ್ತರಾದರೆ ಜೀವಮಾನ ಪೂರ್ತಿ ಸಾಯಿಭಕ್ತರಾಗಿ ಮುಂದುವರಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಗುರುವಾರದ ದಿನವಂತೂ ಆರತಿಯ ಸಮಯ ಹಬ್ಬದ ವಾತಾವರಣವನ್ನು ನೆನಪಿಸುತ್ತದೆ. ಇಂತಹ ಉತ್ತಮ ಕೆಲಸ ಮಾಡಿರುವ ಶ್ರೀ.ಮೋಹಿತೆ ಬಾಬಾರವರಿಗೆ ನಾವುಗಳು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ!!!!

ಶ್ರೀ.ಮೋಹಿತೆ ಬಾಬಾರವರ ವಯಸ್ಸು ಎಪ್ಪತ್ತು ದಾಟಿರುತ್ತದೆ. ಅವರಿಗೆ ಓದಲು, ಬರೆಯಲು ಕೂಡ ಬರುವುದಿಲ್ಲ. ಆದುದರಿಂದ ಯಾವುದೇ ಆಧ್ಯಾತ್ಮಿಕ ಗ್ರಂಥಗಳನ್ನು ಅವರು ಪಠಣ ಮಾಡಿರುವುದಿಲ್ಲ. ಆದರೆ, ಅವರು ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಹೇಳಿರುವಂತೆ ಎಲ್ಲಾ ಕಾರ್ಯವನ್ನು ಭಗಂತನಿಗೆ ಸಮರ್ಪಣೆ ಮಾಡುವುದನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದಾರೆ. ಬಡವರನ್ನು ಸಲಹುವುದು ದೇವರ ಸೇವೆಯನ್ನು ಮಾಡಿದಂತೆ ಎಂದು ಅವರು ನಂಬಿದ್ದಾರೆ. ಅಲ್ಲದೇ, ತಾವು ಏನೂ ಮಾಡುತ್ತಿಲ್ಲ, ಎಲ್ಲವನ್ನೂ ಸಾಯಿಬಾಬಾರವರೇ ತಮ್ಮ ಕೈಲಿ ಮಾಡಿಸುತ್ತಿದ್ದಾರೆ ಎಂದೂ ವಿನೀತರಾಗಿ ನುಡಿಯುತ್ತಾರೆ. ತಾವು ತಮ್ಮ ಉಸಿರಿರುವ ತನಕ ಈ ಸೇವೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಅವರು ಹೇಳುತ್ತಾರೆ.

ಶ್ರೀ.ಮೋಹಿತೆ ಬಾಬಾರವರ ವೊರ್ಲಿಯಲ್ಲಿನ ಈ ಸಾಯಿ ಮಂದಿರವು ದಿನೇ ದಿನೇ ಹೆಚ್ಚು ಹೆಚ್ಚು ಸಾಯಿ ಭಕ್ತರನ್ನು ಆಕರ್ಷಿಸುತ್ತಿದೆ.



ಶ್ರೀ. ಮೋಹಿತೆ ಬಾಬಾ ಮಂದಿರದ ವಿಳಾಸ ಈ ಕೆಳಕಂಡಂತೆ ಇದೆ:


ಶ್ರೀ.ಮೋಹಿತೆ ಬಾಬಾ ಮಂದಿರ, 
ಗಾಂಧಿ ಮೈದಾನ, ವೊರ್ಲಿ, 
ಜಂಬೂರಿ ಮೈದಾನ ಅಥವಾ ಗಾಂಧಿ ಮೈದಾನದ ಹತ್ತಿರ,
ಮುಂಬೈ-400 019, 
ಮಹಾರಾಷ್ಟ್ರ, ಭಾರತ 

ಆಧಾರ: ಶ್ರೀ.ಸಾಯಿಲೀಲಾ ದ್ವೈಮಾಸಿಕ ಪತ್ರಿಕೆ, ಫೆಬ್ರವರಿ 1975 ಸಂಚಿಕೆ. ಕನ್ನಡ ಅನುವಾದ: ಶ್ರೀಕಂಠ ಶರ್ಮ. 

No comments:

Post a Comment