Tuesday, April 8, 2014

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ರಾಮನವಮಿ ಉತ್ಸವದ ಆಚರಣೆ - ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಶಿರಡಿ ಆಯೋಜಿಸಿರುವ ಶ್ರೀ ರಾಮನವಮಿ ಉತ್ಸವವು ಇದೇ ತಿಂಗಳ 7ನೇ ಏಪ್ರಿಲ್ 2014, ಸೋಮವಾರ  ದಂದು ಸೂಕ್ತ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು. ಮಹಾರಾಷ್ಟ್ರದ ಎಲ್ಲಾ ಭಾಗಗಳಿಂದ ಹಾಗೂ ದೇಶದ ಎಲ್ಲಾ ಕಡೆಗಳಿಂದ ಪಲ್ಲಕ್ಕಿಯನ್ನು ಹೊತ್ತುಕೊಂಡು ಬಾಬಾರವರ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತರ ಸಾಯಿ ನಾಮ ಜಯಕಾರವು  ಶಿರಡಿಯನ್ನು ಸಂಪೂರ್ಣವಾಗಿ ವ್ಯಾಪಿಸಿತ್ತು.

ಉತ್ಸವದ ಮೊದಲನೆಯ ದಿನದ ಅಂಗವಾಗಿ ಇಂದು ಬೆಳಗಿನ ಕಾಕಡಾ ಆರತಿಯಾದ ನಂತರ ಬಾಬಾರವರ ಭಾವಚಿತ್ರ, ವಿಗ್ರಹ, ವೀಣೆ ಹಾಗೂ ಪವಿತ್ರ ಸಾಯಿ ಸಚ್ಚರಿತ್ರೆಯನ್ನು ದ್ವಾರಕಾಮಾಯಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿಗಳಾದ ಶ್ರೀ.ಅಜಯ್ ಮೋರೆಯವರು ಪವಿತ್ರ ಸಾಯಿ ಸಚ್ಚರಿತ್ರೆಯನ್ನು, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಸಂಸ್ಥಾನದ ಅಧೀಕ್ಷಕರಾದ ಶ್ರೀ.ರಾಮರಾವ್ ಶೆಲ್ಕೆಯವರುಗಳು ಬಾಬಾರವರ ಭಾವಚಿತ್ರವನ್ನು ಹಿಡಿದುಕೊಂಡಿದ್ದರು. ಸಂಸ್ಥಾನದ ಪುರೋಹಿತರಾದ ಶ್ರೀ.ಉಪೇಂದ್ರ ಪಾಠಕ್ ರವರು ವೀಣೆಯನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 


ಮೆರವಣಿಗೆಯು ದ್ವಾರಕಾಮಾಯಿಯನ್ನು  ತಲುಪಿದ ನಂತರ, ಅಲ್ಲಿ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣವನ್ನು ಪ್ರಾರಂಭಿಸಲಾಯಿತು. ಶ್ರೀ.ಅಜಯ್ ಮೋರೆಯವರು ಮೊದಲನೆಯ ಅಧ್ಯಾಯವನ್ನು ಮತ್ತು ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಎರಡನೇಯ ಅಧ್ಯಾಯವನ್ನು ವಿಧ್ಯುಕ್ತವಾಗಿ ಪಾರಾಯಣ ಮಾಡುವ ಮುಖಾಂತರ ಅಖಂಡ ಪಾರಾಯಣವನ್ನು ಪ್ರಾರಂಭಿಸಿದರು.


ಬೆಳಗಿನ ಕಾಕಡಾ ಆರತಿಯ ನಂತರ ಶ್ರೀ.ಅಜಯ್ ಮೋರೆಯವರು ಬಾಬಾರವರ ಪಾದ ಪೂಜೆಯನ್ನು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು.


ಮುಂಬೈನ ಶ್ರೀ ದ್ವಾರಕಾಮಾಯಿ ಮಂಡಳಿಯವರು ಪ್ರತಿ ವರ್ಷದಂತೆ ಈ ವರ್ಷವೂ ಭಗವಾನ್  ಶ್ರೀ ರಾಮನ ಪ್ರತಿಕೃತಿಯಿರುವ ಬೃಹತ್ ಮಹಾದ್ವಾರವನ್ನು ಸಮಾಧಿ ಮಂದಿರದ ಆವರಣದಲ್ಲಿ ನಿರ್ಮಿಸಿದ್ದರು. ಅಂತೆಯೇ ಸಮಾಧಿ ಮಂದಿರ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಈ ಸುಂದರ ಸೃಷ್ಟಿಯನ್ನು ನೋಡಲು ಸಾಯಿ ಭಕ್ತ ಸಾಗರವೇ ಶಿರಡಿಗೆ ಹರಿದುಬಂದಿತ್ತು. 



ಶ್ರೀ. ಸತ್ಯ ಖಡ್ಗ ರಾಯ್ ಮತ್ತು ಕಟಕ್ ನ ರವೀಶ್ ವಿದ್ಯಾಪೀಠದ ಮುಖ್ಯಸ್ಥರಾದ ಡಾ.ಸಂಜಯ್ ಕುಮಾರ್ ಸತ್ಪತಿಯವರು ಜಂಟಿಯಾಗಿ ಮರಾಠಿಯಿಂದ ಒರಿಯಾಗೆ ಭಾಷಾಂತರ ಮಾಡಿರುವ  ಶ್ರೀ ಸಾಯಿಬಾಬಾರವರ ಆರತಿಯ ಪುಸ್ತಕವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸಮಾಧಿ ಮಂದಿರದ ಆವರಣದಲ್ಲಿ ಲೋಕಾರ್ಪಣೆ ಮಾಡಿದರು.


7ನೇ ಏಪ್ರಿಲ್ 2014, ಸೋಮವಾರವು ಉತ್ಸವದ ಮೊದಲನೆ ದಿನವಾದ ಕಾರಣ ದ್ವಾರಕಾಮಾಯಿಯನ್ನು ರಾತ್ರಿಯಿಡೀ ಪಾರಾಯಣ ಮಾಡುವ ಸಲುವಾಗಿ ತೆರೆದಿಡಲಾಗಿತ್ತು.

ಶ್ರೀ ಸಾಯಿಬಾಬಾ ಸಂಸ್ಥಾನದ ಆಡಳಿತ ಮಂಡಳಿಯು ಸಾಯಿ ಭಕ್ತರು ಯಾವುದೇ ತೊಂದರೆಯಿಲ್ಲದೇ ಆರಾಮವಾಗಿ ಸಾಯಿಬಾಬಾರವರ ದರ್ಶನ ಮಾಡಲು ಅನೂಕೂಲ ಮಾಡಿಕೊಟ್ಟಿದ್ದು ಸಾಯಿಭಕ್ತರಿಗೆ ಬಹಳ ಸಹಾಯಕವಾಯಿತೆಂದು ಹೇಳಬಹುದು. ಶಿರಡಿಯಲ್ಲಿ ಬಿಸಿಲಿನ ಬೇಗೆ ಹೆಚ್ಚಿದ್ದ ಕಾರಣ ಸಂಸ್ಥಾನದ ಆಡಳಿತ ಮಂಡಳಿಯು ದರ್ಶನದ ಸಾಲಿನಲ್ಲಿ ಹಲವಾರು ಕಡೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಡಿತ್ತು.

ಶ್ರೀ ರಾಮನವಮಿ ಉತ್ಸವದ 2ನೇ ದಿನದ ಹಾಗೂ ಮುಖ್ಯ ದಿನದ ಕಲಾಪಗಳನ್ನು 8ನೇ ಏಪ್ರಿಲ್  2014, ಮಂಗಳವಾರ ದಂದು ನೆರವೇರಿಸಲಾಯಿತು.

ಕಾಕಡಾ ಆರತಿಯಾದ ನಂತರ ದ್ವಾರಕಾಮಾಯಿಯಲ್ಲಿ 7ನೇ ಏಪ್ರಿಲ್ 2014 ರಂದು ಆರಂಭಿಸಲಾಗಿದ್ದ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣವನ್ನು ಸುಸಂಪನ್ನಗೊಳಿಸಲಾಯಿತು. ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಗುರುಸ್ಥಾನದ ಮುಖಾಂತರ ಬಾಬಾರವರ ಭಾವಚಿತ್ರ ಹಾಗೂ ವೀಣೆಯೊಂದಿಗೆ ಮೆರವಣಿಗೆಯಲ್ಲಿ ಸಮಾಧಿ ಮಂದಿರಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶ್ರೀ ಸಾಯಿಬಾಬಾ ಸಂಸ್ಥಾನದ ಅದ್ಯಕ್ಷರಾದ ಶ್ರೀ.ಬಾಲಚಂದ್ರ ದೇಬದ್ವಾರ್ ರವರು ಪವಿತ್ರ ಪೋತಿಯನ್ನು ಹಿಡಿದುಕೊಂಡಿದ್ದರೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆ ಹಾಗೂ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರುಗಳು ಬಾಬಾರವರ ಭಾವಚಿತ್ರವನ್ನು ಹಾಗೂ ಮಂದಿರದ ಅಧೀಕ್ಷಕರಾದ ಶ್ರೀ.ರಾಮರಾವ್ ಶೆಲ್ಕೆಯವರು ವೀಣೆಯನ್ನು ಹಿಡಿದುಕೊಂಡಿದ್ದರು.

ನಂತರ ಸಮಾಧಿ ಮಂದಿರದಲ್ಲಿ ಗೋಧಿಯ ಚೀಲಕ್ಕೆ ಶ್ರೀ ಸಾಯಿಬಾಬಾ ಸಂಸ್ಥಾನದ ಅದ್ಯಕ್ಷರಾದ ಶ್ರೀ.ಬಾಲಚಂದ್ರ ದೇಬದ್ವಾರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ.ಸುವರ್ಣ ದೇಬದ್ವಾರ್ ರವರು ಪೂಜೆಯನ್ನು ಸಲ್ಲಿಸಿದರು. 


ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳಿಗೆ ಶ್ರೀ ಸಾಯಿಬಾಬಾ ಸಂಸ್ಥಾನದ ಅದ್ಯಕ್ಷರಾದ ಶ್ರೀ.ಬಾಲಚಂದ್ರ ದೇಬದ್ವಾರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ.ಸುವರ್ಣ ದೇಬದ್ವಾರ್ ರವರು ಪೂಜೆಯನ್ನು ಸಲ್ಲಿಸಿದರು.



ಸುಮಾರು 4000ಕ್ಕೂ ಹೆಚ್ಚು ಸಾಯಿ ಭಕ್ತರು ಪಾದಯಾತ್ರೆಯಲ್ಲಿ ಪವಿತ್ರ ಗೋದಾವರಿಯಿಂದ ಕಾವಡಿಯಲ್ಲಿ ಹೊತ್ತು ತಂದ ಪವಿತ್ರ ಗೋದಾವರಿ ಜಲದಿಂದ ಶ್ರೀ ಸಾಯಿಬಾಬಾರವರ ಸಮಾಧಿ ಹಾಗೂ ವಿಗ್ರಹಕ್ಕೆ ಜಲಾಭಿಷೇಕವನ್ನು ಮಾಡಲಾಯಿತು.

ಬೆಳಿಗ್ಗೆ 10:30ಕ್ಕೆ ಸರಿಯಾಗಿ ಶ್ರೀ.ಹೆಚ್.ಬಿ.ಪಿ.ವಿಕ್ರಮ್ ನಂದೇಡ್ಕರ್ ರವರು ಶ್ರೀ ರಾಮನ ಜನನವನ್ನು ಕುರಿತ ಕೀರ್ತನೆಯನ್ನು ಸಮಾಧಿ ಮಂದಿರದ ಪ್ರಾಂಗಣದಲ್ಲಿ ಮಾಡಿದರು.



ಮಧ್ಯಾನ್ಹ ಆರತಿಗೆ ಮುಂಚೆ ಹೊಸ ಧ್ವಜದ ಪೂಜೆಯನ್ನು ನೆರವೇರಿಸಲಾಯಿತು. ಈ ಪೂಜೆಯಲ್ಲಿ ಸಾಯಿ ಮಹಾಭಕ್ತ ದಿವಂಗತ ರಾಸನೆ ಹಾಗೂ ದಿವಂಗತ ನಾನಾ ಸಾಹೇಬ್ ನಿಮೋಣ್ಕರ್ ರವರ ವಂಶಸ್ಥರು ಭಾಗವಹಿಸಿ ಧ್ವಜಗಳಿಗೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆಯನ್ನು ಸಲ್ಲಿಸಿದರು. ಸಂಜೆ 4:00 ಗಂಟೆಗೆ ಧ್ವಜದ ಮೆರವಣಿಗೆಯನ್ನು ನೆರವೇರಿಸಲಾಯಿತು. ಸಂಜೆ 5:00 ಗಂಟೆಗೆ ಸಮಾಧಿ ಮಂದಿರದಿಂದ ಪ್ರಾರಂಭಿಸಿ ಶಿರಡಿ ಗ್ರಾಮದ ಸುತ್ತಲೂ ಬಾಬಾರವರ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಸಾಯಿ ಭಕ್ತರು ಭಾಗವಹಿಸಿದ್ದರು.

ಸಮಾಧಿ ಮಂದಿರ ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನು ಸುಂದರವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು. ಈ ಅಲಂಕಾರದ ಸಂಪೂರ್ಣ ವೆಚ್ಚವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಹಿಂದಿನ ಟ್ರಸ್ಟಿಯಾಗಿದ್ದ ಶ್ರೀಮತಿ.ರಿಂಪಲ್ ಲೋಹಿಯಾರವರು ವಹಿಸಿಕೊಂಡಿದ್ದರು.





8ನೇ ಏಪ್ರಿಲ್  2014, ಮಂಗಳವಾರ ವು ಉತ್ಸವದ ಪ್ರಮುಖ ದಿನವಾದ ಕಾರಣ ಸಮಾಧಿ ಮಂದಿರವನ್ನು ರಾತ್ರಿಯಿಡೀ ಸಾಯಿ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗಿತ್ತು. ಲಕ್ಷಾಂತರ ಸಾಯಿ ಭಕ್ತರು ಸಾಯಿಬಾಬಾರವರ ದರ್ಶನವನ್ನು ಪಡೆದರು. 

ಶ್ರೀ ರಾಮನವಮಿ ಉತ್ಸವದ 3ನೇ ದಿನದ ಹಾಗೂ ಕೊನೆಯ  ದಿನದ ಕಲಾಪಗಳನ್ನು 9ನೇ ಏಪ್ರಿಲ್  2014, ಬುಧವಾರ ದಂದು ನೆರವೇರಿಸಲಾಯಿತು.

7ನೇ ಏಪ್ರಿಲ್ 2014 ರಂದು ಆರಂಭಿಸಲಾಗಿದ್ದ ಶ್ರೀ ರಾಮನವಮಿ ಉತ್ಸವಕ್ಕೆ ಶ್ರೀ.ಹೆಚ್.ಬಿ.ಪಿ.ವಿಕ್ರಮ್ ನಂದೇಡ್ಕರ್ ರವರು 12:00 ಗಂಟೆಗೆ ಸರಿಯಾಗಿ ಕಲ್ಯಾಚಿ ಕೀರ್ತನೆಯನ್ನು ಮಾಡುವ ಮುಖಾಂತರ ಮಂಗಳ ಹಾಡಿದರು. ಈ ಕೀರ್ತನೆಯಲ್ಲಿ ಸಾವಿರಾರು ಸಾಯಿ ಭಕ್ತರು ತುಂಬು ಉತ್ಸಾಹದಿಂದ ಭಾಗವಹಿಸಿದ್ದರು.

ಬೆಳಿಗ್ಗೆ ಗುರುಸ್ಥಾನದಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕವನ್ನು ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ನೆರವೇರಿಸಿದರು.



ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಹಾಗೂ ಅವರ ಧರ್ಮಪತ್ನಿ ಡಾ.ಶ್ರೀಮತಿ.ಶುಭಾಂಗಿ ಶಿಂಧೆಯವರು ಸಮಾಧಿ ಮಂದಿರದಲ್ಲಿ ಸಾಯಿಬಾಬಾರವರ ಪವಿತ್ರ ಪಾದುಕೆಗಳ ಪೂಜೆಯನ್ನು ನೆರವೇರಿಸಿದರು.



ಮಧ್ಯಾನ್ಹ ಆರತಿಯ ನಂತರ ದಹಿ ಹಂಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.



ವಿಜಯವಾಡದ ಪಿ.ಪದ್ಮಲತಾ ಶ್ರೀನಿವಾಸ್, ಭೂಪಾಲ್ ನ ಮುಕೇಶ್ ಭಾರದ್ವಾಜ್, ಮಿತೇಶ್ ಕ್ಲಾಸಸ್, ಔರಂಗಾಬಾದ್ ನ ದಿನೇಶ್ ಚಂದ್ರ, ಸುರೇಶ ಚಂದ್ರ ವಡೆಗಾವಂಕರ್, ಚೆನ್ನೈ ನ ಟಿ.ವಿಜಯ್, ಮುಂಬೈ ನ ಸುನೀಲ್ ಅಗರವಾಲ್, ಅಹಮದಾಬಾದ್ ನ ಸುಶೀಲಾದೇವಿ ಘನಶ್ಯಾಮದಾಸ್ ಮಸಾನಿ ಗೋಧಿಯಾ, ದಿಲೀಪ್ ಮೆಹತಾ, ಬೆಂಗಳೂರಿನ ಶ್ರೀನಿವಾಸ್ ಶಿರಗೂರ್ಕರ್, ಭುವನೇಶ್ವರ್ ನ ಎಸ್. ದುಷ್ಮಂತ ಕುಮಾರ್, ಡೆಹ್ರಾಡೂನ್ ನ ಸಚಿನ್ ಕುಮಾರ್, ಅಮೇರಿಕಾದ ಸೀತಾ ಹರಿಹರನ್,  ಕೊಲ್ಹಾಪುರದ ಶ್ರೀ.ಮನೋಹರ ಲಾಲ್  ಕರ್ದಾ ಮತ್ತು ಹೈದರಾಬಾದ್ ನ ಪಿ.ಸೂರ್ಯನಾರಾಯಣ ಮೂರ್ತಿ - ಈ ಎಲ್ಲಾ ಮಹನೀಯರುಗಳು ನೀಡಿದ ಉದಾರ ದೇಣಿಗೆಯಿಂದ ಉತ್ಸವದ ಎಲ್ಲಾ 3 ದಿನಗಳೂ ಎಲ್ಲಾ ಸಾಯಿಭಕ್ತರಿಗೂ ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು.

ಶ್ರೀ ಸಾಯಿಬಾಬಾ ಸಂಸ್ಥಾನವು  2 ಲಕ್ಷಕ್ಕೂ ಹೆಚ್ಚು ಲಾಡು ಪ್ರಸಾದ ಪೊಟ್ಟಣಗಳನ್ನು ದರ್ಶನ ಮಾಡಿದ ಎಲ್ಲಾ ಭಕ್ತರಿಗೂ ಉಚಿತವಾಗಿ ವಿತರಣೆ ಮಾಡಿತು. ಅದೇ ರೀತಿ ಬೆಳಗಿನ ಹೊತ್ತು ಸುಮಾರು 43,000 ಭಕ್ತರಿಗೆ ಉಚಿತವಾಗಿ ಉಪಾಹಾರ ಪ್ರಸಾದದ ಪೊಟ್ಟಣಗಳನ್ನು ವಿತರಿಸಿತು.


ಶಿರಡಿಯ ಸಾಯಿ ನಗರ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಸಾಯಿ ಭಕ್ತರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಮುಂಬೈನ ಶ್ರೀ ದ್ವಾರಕಾಮಾಯಿ ಮಂಡಳಿಯವರು ಕಳೆದ 36 ವರ್ಷಗಳಿಂದ  ಶ್ರೀ ರಾಮನವಮಿ, ವಿಜಯದಶಮಿ ಉತ್ಸವಗಳ ಸಂದರ್ಭದಲ್ಲಿ ವಿವಿಧ ಪೌರಾಣಿಕ ಹಿನ್ನೆಲೆಯುಳ್ಳ ಪ್ರತಿಕೃತಿಗಳನ್ನು ಒಳಗೊಂಡ ಬೃಹತ್ ಮಹಾದ್ವಾರವನ್ನು ಸಮಾಧಿ ಮಂದಿರದ ಆವರಣದಲ್ಲಿ ನಿರ್ಮಿಸುತ್ತಾ ಬಂದಿದ್ದಾರೆ. ಅಂತೆಯೇ ಸಮಾಧಿ ಮಂದಿರ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾ ಬಂದಿದ್ದಾರೆ. ಅವರ ಮಹತ್ತರ ಸೇವೆಯನ್ನು ಗುರುತಿಸುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಆ ಮಂಡಳಿಯ ಸದಸ್ಯರನ್ನು ವಿಶೇಷವಾಗಿ ಗೌರವಿಸಿತು.


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್


ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment