Saturday, March 13, 2010

ಸಾಯಿ ಮಹಾಭಕ್ತ - ಅಬ್ದುಲ್ ರಹೀಂ ಶಂಶುದ್ದೀನ್ ರಂಗಾರಿ - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ 


ಅಬ್ದುಲ್ ರಹೀಂ ಶಂಶುದ್ದೀನ್ ರಂಗಾರಿ ಥಾಣೆಯಲ್ಲಿ ವಾಸಿಸುತ್ತಿದ್ದರು. ಇವರು ಸಾಯಿಬಾಬಾರವರನ್ನು ೧೯೧೩ ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಇವರ ಪತ್ನಿಯು ಯಾವುದೋ ಕಾಯಿಲೆಯಿಂದ ನೆರಳುತ್ತಿದರು. ಅವರ ಪತ್ನಿಯ ಗಂಟಲು ಹಾಗೂ ಕೆನ್ನೆಗಳು ಊದಿಕೊಂಡು ಏನನ್ನು ತಿನ್ನಲಾರದ ಸ್ಥಿತಿಯಲ್ಲಿದರು. ಯಾವುದೇ ವೈದ್ಯಕೀಯ ಉಪಚಾರಗಳು ಪ್ರಯೋಜನಕಾರಿಯಾಗಲಿಲ್ಲ.  ಆಗ ಅಬ್ದುಲ್ ರಹೀಂ ಶಂಶುದ್ದೀನ್ ರಂಗಾರಿ ತಮ್ಮ ಊರಿನ ಪರಿಚಯದವರ ಸಲಹೆಯ ಮೇರೆಗೆ ತಮ್ಮ ಪತ್ನಿಯನ್ನು ಕರೆದುಕೊಂಡು ಸಾಯಿಬಾಬಾರವರಲ್ಲಿಗೆ ಹೋದರು. ಅವರು ಪ್ರಯಾಣ ಆರಂಭಿಸಿದಾಗ ಅವರ ಪತ್ನಿಯು ಏನು ತಿನ್ನಲಾರದ ಸ್ಥಿತಿಯಲ್ಲಿದ್ದರು. ಆದರೆ ಮಾರ್ಗ ಮಧ್ಯದಲ್ಲಿ ಇಗಟಪುರಿಯ ಹತ್ತಿರಕ್ಕೆ ಬಂದಾಗ ಅವರು ತಮ್ಮ ಪತ್ನಿಗೆ ಟೀ ಕುಡಿಯಲು ಕೊಟ್ಟರು. ಏನು ಆಗಲಿಲ್ಲ. ನಂತರ ನಾಸಿಕ್ ತಲುಪಿದಾಗ ಮತ್ತೆ ಸ್ವಲ್ಪ ಟೀ ಕುಡಿಯಲು ಕೊಟ್ಟರು. ಆಗಲು ಏನು ತೊಂದರೆ ಆಗಲಿಲ್ಲ. ಶಿರಡಿಯನ್ನು ತಲುಪುವ ಹೊತ್ತಿಗೆ ಅವರ ಪತ್ನಿಗೆ ಬಹಳ ಗುಣ ಕಂಡು ಬಂದಿತು. ಶಿರಡಿ ತಲುಪಿ ಮಸೀದಿಗೆ ಹೋಗಿ ದಂಪತಿಗಳು ಸಾಯಿಬಾಬಾರವರಿಗೆ ಭಕ್ತಿಯಿಂದ ವಂದಿಸಿದರು. ಸಾಯಿಬಾಬಾರವರು "ಇಲ್ಲಿಗೆ ಏಕೆ ಬಂದೆ? ನಿನಗೇನು ಬೇಕು?" ಎಂದು ಕೇಳಿದರು. ಅಬ್ದುಲ್ ರಹೀಂ ಶಂಶುದ್ದೀನ್ ರಂಗಾರಿಯವರು ತಮ್ಮ ಪತ್ನಿಯವರಿಗೆ ಗಂಟಲು ಹಾಗೂ ಕೆನ್ನೆಗಳು ಊದಿಕೊಂಡು ಏನನ್ನು ತಿನ್ನಲಾರದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು. ಆಗ ಸಾಯಿಬಾಬಾರವರು ಅವರ ಪತ್ನಿಗೆ ತಮ್ಮ ಹತ್ತಿರ ಬರಲು ತಿಳಿಸಿದರು ಮತ್ತು ಅವರು ಹತ್ತಿರ ಬಂದಾಗ ಅವರ ತಲೆಯ ಮೇಲೆ ತಮ್ಮ ಹಸ್ತವನ್ನಿರಿಸಿ ಆಶೀರ್ವದಿಸುತ್ತ "ಖುದಾ ಅಚ್ಚಾ ಕರೇಗಾ" ಎಂದರು. ನಂತರ ರಂಗಾರಿಯವರು ದಕ್ಷಿಣೆಯನ್ನು ಬಾಬಾರವರಿಗೆ ಕೊಡಲು ಅದನ್ನು ಬಾಬಾರವರು ಸ್ವೀಕರಿಸಿ ಅವರಿಗೆ ಉಧಿ  ನೀಡಿ ಆಶೀರ್ವದಿಸಿದರು. ಶಿರಡಿಯಲ್ಲಿ ೨ ಘಂಟೆಗಳ ಕಾಲ ಇದ್ದು ಅವರ ಪತ್ನಿಯವರಿಗೆ ಊತ ಕಡಿಮೆಯಾದ ಮೇಲೆ ಬಾಬಾರವರ ಅನುಮತಿಯಿಲ್ಲದೆ ಶಿರಡಿಯನ್ನು ಬಿಟ್ಟು ಹೊರಟರು. ಆದರೆ ಅದಕ್ಕೆ ಅವರು ಸರಿಯಾದ ದಂಡವನ್ನೇ ತೆರಬೇಕಾಯಿತು. ಅವರು ಪ್ರಯಾಣಿಸುತ್ತಿದ್ದ ಟಾಂಗ ರಾತ್ರಿ  ಹತ್ತು ಘಂಟೆಯ ಹೊತ್ತಿಗೆ ಮಾರ್ಗ ಮಧ್ಯದಲ್ಲಿ ಮುರಿದು ಬಿದ್ದಿತು. ಆ ಸಮಯದಲ್ಲಿ ಆ ಜಾಗದಲ್ಲಿ ಬೇರೆ ಯಾವ ವಾಹನ ಸೌಕರ್ಯವಿರಲಿಲ್ಲ. ಅವರು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಸುಮಾರು ಮೈಲು ದೂರವಿರುವ ಮುಂದಿನ ಹಳ್ಳಿಗೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಆ ಸ್ಥಳವು ನಿರ್ಜನ ಪ್ರದೇಶವಾಗಿದ್ದಿತು ಮತ್ತು ಹಾವಾಮಾನ ಕೂಡ ಪ್ರತಿಕೂಲವಾಗಿದ್ದಿತು. ರಂಗಾರಿಯವರು ಸಾಯಿಬಾಬಾರವರಿಗೆ ಹೇಳದೆ ಬಂದಿದ್ದು ತಪ್ಪಾಯಿತು ಎಂದು ಅರಿವಾಗಿ ಏನು ಮಾಡಲು ತೋಚದೆ ಮತ್ತು ಮುಂದೇನಾಗುವುದೋ ಎಂದು ತಿಳಿಯದೆ ಪರಿತಪಿಸುತ್ತಿದ್ದರು. ಮಧ್ಯರಾತ್ರಿಯ ಹೊತ್ತಿಗೆ ಯಾವುದು ಟಾಂಗ ಬರುವ ಶಬ್ದ ಕೇಳಿಸಿತು. "ಥಾನವಾಲ, ಥಾನವಾಲ" ಎಂದು ಕೂಗುತ್ತ ಒಬ್ಬ ಇವರಿದ್ದ ಬಳಿಗೆ ಬಂದನು. ರಂಗಾರಿಯವರು ತಾವೇ "ಥಾನಾವಾಲ" ಎಂದು ಟಾಂಗವಾಲನಿಗೆ ಹೇಳಿದರು.  ಅವನು "ಸಾಯಿಬಾಬಾರವರಿಗೆ ನಿಮ್ಮ ಟಾಂಗ ಮುರಿದು ಬಿದ್ದಿರುವುದು ತಿಳಿದು ನಿಮ್ಮನ್ನು ಕರೆತರಲು ನನ್ನನ್ನು ಕಳುಹಿಸಿದ್ದಾರೆ" ಎಂದು ಹೇಳಿದನು.  ನಂತರ ಟಾಂಗವಾಲ ಅವರನ್ನು ಕರೆದುಕೊಂಡು  ಸುಮಾರು ೨ ಘಂಟೆಯ ಸಮಯಕ್ಕೆ ಶಿರಡಿ ತಲುಪಿಸಿದನು. ಸಾಯಿಬಾಬಾರವರು "ನನಗೆ ಹೇಳದೆ ನೀವುಗಳು ಹೊರಟಿದ್ದಕ್ಕೆ ಮಾರ್ಗ ಮಧ್ಯದಲ್ಲಿ ಕಷ್ಟಪಡಬೇಕಾಯಿತು" ಎಂದು ತಿಳಿ ಹೇಳಿದರು. ರಂಗಾರಿ ಸಾಯಿಬಾಬಾರವರ ಕ್ಷಮೆ ಯಾಚಿಸಿದರು. ಆಗ ಬಾಬಾರವರು "ಬೆಳಗಾಗುವ ತನಕ ಇಲ್ಲೇ ಇರಿ" ಎಂದು ಸೂಚಿಸಿದರು. ಮಾರನೇಯ ದಿನ ತಮ್ಮ ಬೆಳಗಿನ ಭಿಕ್ಷೆಯಿಂದ ಹಿಂತಿರುಗಿದ ನಂತರ ರಂಗಾರಿಯವರಿಗೆ ಸ್ವಲ್ಪ ಬ್ರೆಡ್, ತರಕಾರಿ ಹಾಗೂ ಸ್ವಲ್ಪ ಆಹಾರವನ್ನು ತಿನ್ನಲು ನೀಡಿದರು. ನಂತರ ಬಾಬಾರವರು "ನೀನಿನ್ನು ಹೊರಡಬಹುದು" ಎಂದು ತಿಳಿಸಿದರು. ರಂಗಾರಿಯವರು ಮಸೀದಿಯ ಹೊರಗೆ ತೆರಳಿ ಅಲ್ಲಿ ಟಾಂಗ ಇಲ್ಲದಿದ್ದನ್ನು  ಕಂಡು ಪುನಃ ಬಂದು ಸಾಯಿಬಾಬಾರವರಿಗೆ ಆ ವಿಷಯವನ್ನು ತಿಳಿಸಿದರು. ಸಾಯಿಬಾಬಾರವರು "ಈಗ ಹೋಗಿ ನೋಡು, ಟಾಂಗ ಅಲ್ಲೇ ಇದೆ" ಎಂದು ತಿಳಿಸಿದರು. ರಂಗಾರಿಯವರು ಮತ್ತೆ ಹೊರಗೆ ಹೋಗಿ ನೋಡಲು ಅಲ್ಲೇ ಟಾಂಗ ಇರುವುದನ್ನು ಕಂಡು ಆಶ್ಚರ್ಯ ಚಕಿತರಾದರು ಮತ್ತು ನಡೆದಿದ್ದನ್ನು ಅರ್ಥೈಸಲು ಅಸಮರ್ಥರಾದರು.

ರಂಗಾರಿಯವರು ಸಾಯಿಬಾಬಾರವರ ಹಣೆಗೆ ಮತ್ತು ಕೈಗಳಿಗೆ ಚಂದನ ಲೇಪನವನ್ನು ಭಕ್ತರು ಮಾಡಿರುವುದನ್ನು ಕಂಡು ಅದು ಮುಸ್ಲಿಂ ಸಂಪ್ರದಾಯಕ್ಕೆ ವಿರುದ್ದವಲ್ಲವೇ ಎಂದು ಬಾಬಾರವರನ್ನು ಕೇಳಿದರು. ಆಗ ಬಾಬಾರವರು "ರೋಮಿನಲ್ಲಿದ್ದಾಗ ರೋಮನ್ ರಂತೆ ಇರಬೇಕು ಮತ್ತು ಅಲ್ಲಿನ ಪದ್ದತಿಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಶಿರಡಿಯ ಜನರು ತಮ್ಮ ಕುಲದೇವರನ್ನು ಪೂಜಿಸದೇ ತಮ್ಮನ್ನು ಶ್ರದ್ದೆಯಿಂದ ಪೂಜಿಸುತ್ತಿದ್ದಾರೆ. ಅದಕ್ಕೆ ಬೇಡವೆಂದು ಹೇಳಿ ಅವರ ಮನಸ್ಸನ್ನು ನೋಯಿಸಲು ನಾನು ಇಷ್ಟಪಡುವುದಿಲ್ಲ ಮತ್ತು ತಾವು ಕೂಡ ದೇವರ ಅನನ್ಯ ಭಕ್ತರು " ಎಂದು ಹೇಳಿದರು.  ನಂತರ ಸಾಯಿಬಾಬಾರವರು ಸಂಗೀತದ ಬಗ್ಗೆ ರಂಗಾರಿಯವರಿಗೆ ತಿಳಿಸಿದರು. "ನೀನು ಬರುವ ಹಿಂದಿನ ರಾತ್ರಿ ಮಸೀದಿಯಲ್ಲಿ ರಾತ್ರಿಯಿಡಿ ಸಂಗೀತ ಹಾಗೂ ನೃತ್ಯ ನಡೆಯುತ್ತಿತ್ತು ಮತ್ತು ನಾನು ಅದರಲ್ಲಿ ಸಂಪೂರ್ಣ ತಲ್ಲೀನನಾಗಿದ್ದೆ" ಎಂದು ಹೇಳಿದರು. ಆಗ ರಂಗಾರಿಯವರು ಬಾಬಾರವರಿಗೆ "ಯಾರು ದೇವರನ್ನು ಪ್ರೀತಿಸುತ್ತಾರೋ ಅವರು ಸಂಗೀತ,ನೃತ್ಯಗಳು  ನಡೆಯುತ್ತಿದ್ದಾಗ ಅದಕ್ಕೆ ತಾವು ಹೆಜ್ಜೆ ಹಾಕುತ್ತ ಆನಂದಭಾಷ್ಪವನ್ನು ಸುರಿಸುತ್ತಾರೆ" ಎಂದು ಹೇಳಿದರು. ಆಗ ಸಾಯಿಬಾಬಾರವರು "ನಿನ್ನ ಗುರು ಯಾರು" ಎಂದು ಕೇಳಿದರು. ಅದಕ್ಕೆ ರಂಗಾರಿಯವರು ತಮ್ಮ ಗುರುಗಳು ಹಾಬಿ ಬಾಲೀಶ ಚಿಸ್ಥಿ ನಿಜಾಮಿ ಎಂದು ತಿಳಿಸಿದರು. ಆಗ ಬಾಬಾರವರು "ಆದುದರಿಂದಲೇ ನಿನಗೆ ಸಂಗೀತದ ಪ್ರಾಮುಖ್ಯತೆ ತಿಳಿದಿರುವುದು. ಹಾಬಿ ಬಾಲೀಶ ಚಿಸ್ಥಿ ನಿಜಾಮಿಯವರು ಕೂಡ ಸಂಗೀತ ಪ್ರಿಯರಾಗಿದ್ದು ಸಂಗೀತ ಕೇಳುತ್ತಿದ್ದಾಗ ತಾವು ಹೆಜ್ಜೆ ಹಾಕುತ್ತ ಆನಂದಭಾಷ್ಪವನ್ನು  ಸುರಿಸುತ್ತ ಸದಾಕಾಲವೂ ಆತ್ಮಾನಂದದಲ್ಲಿ ತಲ್ಲೀನರಾಗಿರುತ್ತಿದರು " ಎಂದರು.

No comments:

Post a Comment