Tuesday, April 27, 2010

ಸಾಯಿ ಮಹಾಭಕ್ತ - ಆದಮ್ ದಲಾಲಿ - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ 

ಆದಮ್ ದಲಾಲಿಯವರು ಮುಂಬೈನ ಬಾಂದ್ರದಲ್ಲಿ ಮನೆ ನಿವೇಶನ ಕೊಡಿಸುವ ದಳ್ಳಾಳಿಯಾಗಿದ್ದರು. ಇವರು ಸಾಯಿಬಾಬಾರವರ ಬಳಿ ತಮ್ಮ ಲೌಕಿಕ ಆಸೆಗಳನ್ನು ಈಡೇರಿಸಿಕೊಳ್ಳಲು ಬಂದರು. ಇವರಿಗೆ ಅನೇಕ ಗಂಡು ಮಕ್ಕಳಿದ್ದರು. ಪ್ರತಿಯೊಬ್ಬ ಮಗನ ಮದುವೆಯ ಸಮಯದಲ್ಲಿ ಆದಮ್ ದಲಾಲಿಯವರಿಗೆ ಹಣದ ಕೊರತೆ ಉಂಟಾಗುತ್ತಿತು. ಮುಸ್ಲಿಂ ಧರ್ಮದ ಪ್ರಕಾರ ಮದುವೆ ಗಂಡಿನ ತಂದೆಯೇ ಮದುವೆಯ ಖರ್ಚನ್ನು ಭರಿಸಬೇಕಾಗಿತ್ತು. ಹಾಗಾಗಿ, ಪ್ರತಿ ಮದುವೆಯ ಸಂಧರ್ಭದಲ್ಲಿ ಆದಮ್ ದಲಾಲಿಯವರು ಸಾಯಿಬಾಬಾರವರ ಬಳಿ ಆಶೀರ್ವಾದ ಪಡೆಯಲು ಹೋಗುತ್ತಿದ್ದರು. ಹೀಗೆ ಪ್ರತಿ ಬಾರಿ ಶಿರಡಿಗೆ ಹೋಗಿ ಬಾಬಾರವರ ಆಶೀರ್ವಾದ ಪಡೆದು ಬಂದ ನಂತರ ಆದಮ್ ದಲಾಲಿಯವರಿಗೆ ಒಳ್ಳೆಯ ದಳ್ಳಾಳಿ ರುಸುಮು ದೊರೆತು ಮದುವೆಗೆ ಯಾವುದೇ ತೊಂದರೆ ಆಗದೆ ಸುಸೂತ್ರವಾಗಿ ನೆರವೇರುತ್ತಿತ್ತು.

ಒಮ್ಮೆ ಆದಮ್ ದಲಾಲಿಯವರು ಯಾವುದೋ ಮನೆಯ ಭೋಗ್ಯದ ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿದ್ದರು. ಆ ಮನೆಯ ಹಕ್ಕು ಪತ್ರಗಳು
ಸುಳ್ಳು ಪತ್ರಗಳೆಂದು ಪೋಲಿಸಿನವರು ಪರಿಗಣಿಸಿ ಕ್ರಿಮಿನಲ್ ಮೊಕದ್ದಮ್ಮೆಯನ್ನು ಹೂಡಿದರು. ಆದಮ್ ದಲಾಲಿಯವರು ಕೂಡ ಇದರಲ್ಲಿ ಶಾಮೀಲಾಗಿರುವರೆಂದು ಮೊದಲು ಅವರ ಹೆಸರನ್ನು ಕೂಡ ಪೋಲಿಸಿನವರು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿದರು. ಆಗ, ತೆಂಡೂಲ್ಕರ್ ಮತ್ತು ಅವರ ಪತ್ನಿಯ ಸಲಹೆಯ ಮೇರೆಗೆ ಆದಮ್ ದಲಾಲಿಯವರು ಸಾಯಿಬಾಬಾರವರನ್ನು ಪ್ರಾರ್ಥಿಸಿದರು. ತೆಂಡೂಲ್ಕರ್ ದಂಪತಿಗಳೂ ಕೂಡ ಸಾಯಿಬಾಬಾರವರನ್ನು ಪ್ರಾರ್ಥಿಸಿದರು. ನಂತರ ಸಾಯಿಬಾಬಾರವರ ಆಶೀರ್ವಾದದ ಫಲದಿಂದ ಆದಮ್ ದಲಾಲಿಯವರು ಬಿಡುಗಡೆ ಹೊಂದಿದರು.

ಆದಮ್ ದಲಾಲಿಯವರೇ ಹೇಳುವಂತೆ ಅವರು ಬಾಬಾರವರಿಂದ ಲೌಕಿಕ ಸುಖಗಳನ್ನು ಪಡೆಯಲು ಮಾತ್ರ ಆಶ್ರಯಿಸುತ್ತಿದ್ದರು. ಅವರು ತಮ್ಮ ಜೀವಮಾನದಲ್ಲಿ ಕುರಾನ್ ಪಠಣವನ್ನು ಮಾಡಲಿಲ್ಲ ಅಥವಾ ಆಧ್ಯಾತ್ಮಿಕ ಪ್ರಗತಿಯನ್ನು ಬಯಸಲಿಲ್ಲ. ಸಾಯಿಬಾಬಾರವರು ಅನೇಕ ಬಾರಿ ಬೇರೆ ಬೇರೆ ರೂಪಗಳಲ್ಲಿ ಬಂದು ಆದಮ್ ದಲಾಲಿಯವರನ್ನು ಪರೀಕ್ಷೆ ಮಾಡಿದರು. ಒಮ್ಮೆ ಸಾಯಿಬಾಬಾರವರು ಒಬ್ಬ ಮಾರವಾಡಿಯ ವೇಷದಲ್ಲಿ ಬಂದು ತಮಗೆ ಹಸಿವಾಗಿದೆ ಎಂದು ಹೇಳಿ ತಿನ್ನಲು ಏನನ್ನಾದರೂ ಕೊಡಿ ಎಂದು ಆದಮ್ ದಲಾಲಿಯವರನ್ನು ಬೇಡಿದರು. ಆಗ ಆದಮ್ ದಲಾಲಿಯವರು ಆ ಮಾರವಾಡಿಗೆ ನಾಲ್ಕು ಆಣೆಗಳನ್ನು ನೀಡಿ ಮಾರವಾಡಿಯ ಹೋಟಲಿಗೆ ಹೋಗಿ ಏನಾದರು ತಿನ್ನಲು ಹೇಳಿದರು. ಈ ಘಟನೆ ನಡೆದ ಕೆಲವು ದಿನಗಳ ನಂತರ ಆದಮ್ ದಲಾಲಿಯವರು ಶಿರಡಿಗೆ ಹೋದಾಗ ಸಾಯಿಬಾಬಾರವರು ದ್ವಾರಕಮಾಯಿಯಲ್ಲಿ ನೆರೆದಿದ್ದ ತಮ್ಮ ಭಕ್ತರಿಗೆ "ನಾನು ಇವನನ್ನು ಪರೀಕ್ಷಿಸಲು ಹೋದರೆ ಇವನು ನನ್ನನ್ನು ಮಾರವಾಡಿ ಹೋಟಲಿಗೆ ಕಳುಹಿಸಿದ" ಎಂದು ಹೇಳಿದರು.

ಆದಮ್ ದಲಾಲಿಯವರು ಸಾಯಿಬಾಬಾರವರ ಫೋಟೋವನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಪ್ರತಿನಿತ್ಯ ಅದರ ಮುಂದೆ ಧೂಪವನ್ನು ಬೆಳಗಿ ಪೂಜೆಯನ್ನು ಸಲ್ಲಿಸುತ್ತಿದ್ದರು. ಸಾಮಾನ್ಯವಾಗಿ ಫೋಟೋ, ವಿಗ್ರಹ ಪೂಜೆಯನ್ನು ಮುಸ್ಲಿಮರು ಮಾಡುವುದಿಲ್ಲ ಹಾಗೂ ಅದನ್ನು ತೀವ್ರವಾಗಿ ವಿರೋಧಿಸುತ್ತಾರೆ.