Monday, February 1, 2010

ಸಾಯಿ ಮಹಾಭಕ್ತ -  ರಘುವೀರ ಭಾಸ್ಕರ ಪುರಂಧರೆ (ಅರ್.ಬಿ.ಪುರಂಧರೆ) - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ


ಪುರಂಧರೆಯವರು ಪ್ರಥಮ ಬಾರಿಗೆ ೧೯೦೯ ರಲ್ಲಿ ಸಾಯಿಬಾಬಾರವರ ಹೆಸರನ್ನು ಕೇಳಿದರು ಮತ್ತು ಅವರು ದೊಡ್ಡ ಸಂತರೆಂದು ತಿಳಿದು ಅವರನ್ನು ಕಾಣಲು ಶಿರಡಿಗೆ ಬಂದರು. ಪುರಂಧರೆಯವರಿಗೆ ಸಾಧು ಸಂತರೆಂದರೆ ಬಹಳ ಇಷ್ಟ ಹಾಗೂ ಸದಾಕಾಲ ಅವರ ಒಡನಾಟ ಬಯಸುತ್ತಿದ್ದರು.  ಸಾಯಿಬಾಬಾರವರು ಪುರಂಧರೆಯವರ ಕನಸಿನಲ್ಲಿ ಬಂದು ಶಿರಡಿಗೆ ಬರುವಂತೆ ಕರೆದರು. ಆ ಸಮಯದಲ್ಲಿ ಪುರಂಧರೆಯವರ  ೬ ತಿಂಗಳ ದೊಡ್ಡ ಮಗಳು ತುಂಬಾ ಖಾಯಿಲೆಯಿಂದ ನರಳುತ್ತಿದ್ದಳು. ಆದ್ದರಿಂದ ಪುರಂಧರೆಯವರ ಹೆಂಡತಿ ಶಿರಡಿಗೆ ಹೋಗುವುದು ಬೇಡವೆಂದು ಹೇಳಿದರು. ಆದರೆ ಸಾಯಿಬಾಬಾರವರಲ್ಲಿ ಸಂಪೂರ್ಣ ವಿಶ್ವಾಸವಿಟ್ಟು ಪುರಂಧರೆಯವರು ತಮ್ಮ ತಾಯಿ, ಹೆಂಡತಿ ಮತ್ತು ಹಿರಿಯ ಮಗಳೊಡನೆ ಶಿರಡಿಗೆ ಪ್ರಯಾಣ ಬೆಳೆಸಿದರು. ಶಿರಡಿಯಲ್ಲಿ ಪುರಂಧರೆಯವರ ಕುಟುಂಬ ೧೩ ದಿನಗಳಿದ್ದರು. ಶಿರಡಿಯಲ್ಲಿದ್ದ ಮೂರನೇ ದಿನಕ್ಕೆ ಅವರ ಮಗಳ ಆರೋಗ್ಯ ಸರಿಯಾಯಿತು. ಆದರೆ, ಬಾಬಾರವರು ೧೩ ನೇ ದಿನದವರೆಗೂ ಪುರಂಧರೆಯವರಿಗೆ ಹೋಗಲು ಅನುಮತಿ ನೀಡಲಿಲ್ಲ. ಪುರಂಧರೆಯವರ ತಾಯಿಯವರಿಗೆ ಸಾಯಿಬಾಬಾರವರು ತಾವು ಮತ್ತು ಪುರಂಧರೆ ಕಳೆದ ೭ ಶತಮಾನಗಳಿಂದಲೂ ಪರಿಚಯವಿರುವುದಾಗಿ ಹೇಳಿದರು.



ಒಮ್ಮೆ ಪುರಂಧರೆಯವರ ಹೆಂಡತಿ ಕಾಲರಾದಿಂದ ಬಳಲುತ್ತಿದ್ದರು ಮತ್ತು ಅವರನ್ನು ನೋಡಿದ ಡಾಕ್ಟರ್ ಇನ್ನೇನು ಉಪಯೋಗವಿಲ್ಲ ಎಂದು ಕೈಚೆಲ್ಲಿ ಕುಳಿತರು. ಪುರಂಧರೆಯವರು ತಮ್ಮ ದಾದರ್ ನಿವಾಸದ ಬಳಿಯ ದತ್ತ ಮಂದಿರದ ಹತ್ತಿರ ಸಾಯಿಬಾಬಾರವರನ್ನು ಕಂಡರು ಮತ್ತು ಬಾಬಾರವರು ಪುರಂಧರೆಯವರ ಹೆಂಡತಿಗೆ ಉಧಿ ಮತ್ತು ತೀರ್ಥ ಕೊಡಬೇಕೆಂದು ಆಜ್ಞಾಪಿಸಿದರು. ಸಾಯಿಬಾಬಾರವರ ಆಜ್ಞೆಯಂತೆ ಪುರಂಧರೆಯವರು ಉಧಿ ಮತ್ತು ತೀರ್ಥವನ್ನು ಅವರ ಹೆಂಡತಿಗೆ ನೀಡಿದರು. ಅರ್ಧ ಘಂಟೆಯ ಬಳಿಕ ಪುರಂಧರೆಯವರ ಹೆಂಡತಿಗೆ ಖಾಯಿಲೆ ಕಡಿಮೆಯಾಗಹತ್ತಿತು ಮತ್ತು ಡಾಕ್ಟರ್ ಅವರನ್ನು ಪರೀಕ್ಷಿಸಿ ಅವರು ಶೀಘ್ರದಲ್ಲೇ ಗುಣಮುಖರಾಗುವರೆಂದು ತಿಳಿಸಿದರು ಮತ್ತು ಹಾಗೆಯೇ ಪುರಂಧರೆಯವರ ಹೆಂಡತಿ ಸಂಪೂರ್ಣ ಗುಣಮುಖರಾದರು.



ಪುರಂಧರೆಯವರು ಅನಾಥರಾಗಿದ್ದರು ಮತ್ತು ಬಹಳ ಬಡವರಾಗಿದ್ದರು. ಆದರೆ ಸಾಯಿಬಾಬಾರವರು ಯಾವಾಗಲೂ ಪುರಂಧರೆಯವರ ಬಳಿ ೨ ರುಪಾಯಿ ದಕ್ಷಿಣೆಯನ್ನೇ ಕೇಳುತ್ತಿದ್ದರು. ಇದರಿಂದ ಆಶ್ಚರ್ಯಗೊಂಡ ಪುರಂಧರೆಯವರು ಒಮ್ಮೆ ಸಾಯಿಬಾಬಾರವರನ್ನು ಇದರ ಬಗ್ಗೆ ವಿಚಾರಿಸಲಾಗಿ ಸಾಯಿಬಾಬಾರವರು ತಮಗೆ ಬೇಕಾದುದು ಹಣವಲ್ಲ, ಅದರ ಬದಲು ನಿಷ್ಠೆ (ಶ್ರದ್ಧೆ) ಮತ್ತು ಸಬೂರಿ(ತಾಳ್ಮೆ) ಎಂಬ ೨ ಗುಣಗಳು ಎಂದು ಹೇಳಿದರು ಎನ್ನಲಾಗಿದೆ.



ಒಮ್ಮೆ ಸಾಯಿಬಾಬಾರವರು ಪುರಂಧರೆಯವರಿಗೆ ಸ್ವಂತ ಮನೆಯನ್ನು ಮಾಡಿಕೊಳ್ಳುವಂತೆ ಹೇಳಿದರು. ಆಗ ಪುರಂಧರೆಯವರಿಗೆ ಕೇವಲ ೩೫ ರುಪಾಯಿ ಸಂಬಳ ಬರುತ್ತಿತ್ತು.  ಆದರೆ ಸಾಯಿಬಾಬಾರವರ ದಯೆಯಿಂದ ಮತ್ತು ಆಶೀರ್ವಾದದಿಂದ ೩ ವರ್ಷಗಲ್ಲಿ ಸ್ವಂತ ಮನೆಯನ್ನು ಕಟ್ಟಿಕೊಂಡರು. ಅದು ನಗರದಿಂದ ಬಹಳ ದೂರದಲ್ಲಿತ್ತು ಮತ್ತು ಒಂದು ದೊಡ್ಡ ಜಾಗದಲ್ಲಿ ಒಂದೇ ಮನೆಯಿತ್ತು. ಆದುದರಿಂದ ಪುರಂಧರೆಯವರು ಅಲ್ಲಿ ವಾಸಮಾಡಲು  ಸಾಧ್ಯವಿಲ್ಲವೆಂದು ಸಾಯಿಬಾಬಾರವರಿಗೆ ಹೇಳಿದರು. ಆದರೆ ಸಾಯಿಬಾಬಾರವರು ತಾವೇ ಆ ಜಾಗದಲ್ಲಿದ್ದು ಕಾಯುತ್ತಿರುವರೆಂದು ಮತ್ತು ಯಾವುದೇ ಭಯಪಡದೆ ಆ ಮನೆಗೆ ತೆರಳಲು ಸೂಚಿಸಿದರು. ಪುರಂಧರೆಯವರು ಸಾಯಿಬಾಬಾ ಹೇಳಿದ ಹಾಗೆ ಮಾಡಿದರು ಮತ್ತು ಮುಂದೆ ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. 



ಪುರಂಧರೆಯವರು ತಮ್ಮ ಹೆಂಡತಿಯನ್ನು ೧೯೨೦ ರಲ್ಲಿ ಕಳೆದುಕೊಂಡರು. ಇವರು ಸಾಯಿಬಾಬಾ ಸಂಸ್ಥಾನದ ಜಂಟಿ ಖಚಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಮ್ಮೆ ೧೯೧೩ ರಲ್ಲಿ ಪುರಂಧರೆಯವರ ತಾಯಿಯವರು ತಮ್ಮ ಮಗನಿಗೆ ಪಂಡರಾಪುರಕ್ಕೆ ಹೋಗಲು ಹೇಳಿದರು. ಆಗ ಸಾಯಿಬಾಬಾರವರು ಪುರಂಧರೆಯವರ ತಾಯಿ ಹಾಗೂ ಹೆಂಡತಿಗೆ ಶಿರಡಿಯ ಮಸೀದಿಯಲ್ಲಿ ಪಂಡರಾಪುರದ ಪಾಂಡುರಂಗ ಹಾಗೂ ರುಕ್ಮಾಯಿಯ ಹಾಗೆ ದರ್ಶನ ನೀಡಿದರು. ಇದರಿಂದ ಆನಂದಭರಿತರಾದ ಅವರುಗಳು ಪಂಡರಾಪುರಕ್ಕೆ ಹೋಗಲೇ ಇಲ್ಲ ಮತ್ತು ಯಾರಾದರು ಅದರ ಬಗ್ಗೆ ವಿಚಾರಿಸಿದರೆ ಪಂಡರಾಪುರದ ಪಾಂಡುರಂಗ ಶಿರಡಿಯಲ್ಲೇ ಇದ್ದಾನೆಂದು, ಸಾಯಿಬಾಬಾನೆ ಪಾಂಡುರಂಗನೆಂದು ಮತ್ತು ಶಿರಡಿಯೇ ತಮಗೆ ಪಾಂಡರಾಪುರವೆಂದು ಹೇಳುತ್ತಿದ್ದರು.



ಒಮ್ಮೆ ಪುರಂಧರೆಯವರ ಹೆಂಡತಿ ಹೆರಿಗೆ ಸಮಯದಲ್ಲಿ ಹುಷಾರು ತಪ್ಪಿದಾಗ ಸಾಯಿಬಾಬಾರವರು ಅವರ ಕನಸಿನಲ್ಲಿ ಬಂದು ಉಧಿಯನ್ನು ಹಣೆಗೆ ಹಚ್ಚಿ ಆಶೀರ್ವದಿಸಿದರು. ಅದಾದ ಕೆಲವು ದಿನಗಳಲ್ಲಿ ಪುರಂಧರೆಯವರ ಹೆಂಡತಿ ಸಂಪೂರ್ಣ ಗುಣ ಹೊಂದಿದರು. ಪುರಂಧರೆಯವರು ತಮಗೆ ಯಾವುದೇ ತೊಂದರೆ ಬಂದಾಗ ತಮ್ಮ ಮನೆಯಲ್ಲಿನ ಸಾಯಿಬಾಬಾರವರ ಚಿತ್ರಪಟದ ಮುಂದೆ ನಿಂತು ಕಣ್ಣೀರಿಟ್ಟ ಕೂಡಲೇ ಸಾಯಿಬಾಬಾ ಅವರಿಗೆ ದರ್ಶನ ನೀಡಿ ಅವರನ್ನು ಸಂತೈಸುತ್ತಿದ್ದರು.



ಒಮ್ಮೆ ೧೯೩೨ ರಲ್ಲಿ ಪುರಂಧರೆಯವರು ಸೊಂಟನೋವು ಹಾಗೂ ಸಂಧಿವಾತದಿಂದ ಬಳಲುತ್ತಿದ್ದರು ಹಾಗೂ ಬದುಕುವ ಬರವಸೆಯನ್ನೇ ಕಳೆದುಕೊಂಡಿದ್ದರು. ಆದರೆ ಸಾಯಿಬಾಬಾರವರು ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದರು.



ಪುರಂಧರೆಯವರು ಶೀಘ್ರ ಕೋಪಿಯಾಗಿದ್ದರು. ಸಾಯಿಬಾಬಾರವರು ಅವರಿಗೆ ಯಾರೊಡನೆ ಜಗಳವಾಡದೆ ಮತ್ತು ಯಾರನ್ನು ನಿಂದಿಸದೆ ಇರಲು ಉಪದೇಶಿಸುತ್ತಿದ್ದರು.



೧೯೨೬ ರಲ್ಲಿ ಒಂದು ಏಕಾದಶಿಯ ದಿನ ಸಾಯಿಬಾಬಾರವರ  ಬಗ್ಗೆ ಮಾತನಾಡುತ್ತಾ ಕಾಕಾ ದೀಕ್ಷಿತ್ ತಮ್ಮ ಪ್ರಾಣವನ್ನು ಬಿಟ್ಟರು. ಇದೇ ರೀತಿ ಸಾಯಿಬಾಬಾರವರ ಹಲವು ಭಕ್ತರು ಏಕಾದಶಿಯ ದಿನವೇ ಪ್ರಾಣ ಬಿಟ್ಟಿದ್ದುದನ್ನು ಪುರಂಧರೆಯವರು ಸ್ವತಃ ನೋಡಿದ್ದಾರೆ.



ಒಮ್ಮೆ ಸಾಯಿಬಾಬಾರವರು ಪುರಂಧರೆಯವರ ಬಳಿಯಿದ್ದ ಎಲ್ಲ ಹಳೆಯ ತಾಮ್ರದ ನಾಣ್ಯಗಳನ್ನು ತಮಗೇ ಕೊಡುವಂತೆ ಕೇಳಿದರು. ಪುರಂಧರೆಯವರು ತಮ್ಮ ಬಳಿಯಿದ್ದ ಎಲ್ಲ ನಾಣ್ಯಗಳನ್ನು ಬಾಬಾರವರಿಗೆ ನೀಡಿದರು. ಆದರೆ ಸಾಯಿಬಾಬಾರವರು ಏಕೆ ಆ ಹಳೆಯ ನಾಣ್ಯಗಳನ್ನು ಕೇಳಿದರು ಮತ್ತು ಅದನ್ನು ಏನು ಮಾಡಿದರು ಎಂದು ಪುರಂಧರೆಯವರಿಗೆ ತಿಳಿಯಲಿಲ್ಲ.



೧೯೧೫ ರಲ್ಲಿ ಒಮ್ಮೆ ಸಾಯಿಬಾಬಾರವರು ಬಹಳ ಹುಷಾರು ತಪ್ಪಿದರು. ಅವರು ಆಸ್ತಮಾದಿಂದ ಬಳಲುತ್ತಿದ್ದರು. ಇದನ್ನು ನೋಡಿ ಪುರಂಧರೆಯವರು ಚಿಕ್ಕ ಮಕ್ಕಳಂತೆ ಅತ್ತುಬಿಟ್ಟರು. ಆದರೆ ಸಾಯಿಬಾಬಾರವರು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಲು ಸಮ್ಮತಿಸಲಿಲ್ಲ. ಅವರು ಹುಷಾರಿಲ್ಲದ ಸಮಯದಲ್ಲಿ ಕೂಡ ಭಿಕ್ಷೆಯನ್ನು ಬೇಡಲು ಯಾರಾದರೂ ಸಹಾಯ ಪಡೆದು ಹೋಗಿಬರುತ್ತಿದ್ದರು. ತಮ್ಮ ದಿನ ನಿತ್ಯದ ಎಲ್ಲ ಕೆಲಸಗಳನ್ನು ಚಾಚೂ ತಪ್ಪದೆ ಮಾಡಿಕೊಳ್ಳುತ್ತಿದ್ದರು.

೧೯೨೦ ರಲ್ಲಿ ಪುರಂಧರೆಯವರ ಪತ್ನಿ ವಿಪರೀತವಾದ ಶೀತ ಜ್ವರದಿಂದ ಬಳಲುತ್ತಿದ್ದು ಸಾಯುವ ಹಂತ ತಲುಪಿದ್ದರು. ಅವರಿಗೆ ಶಿರಡಿಯ ರಾಮನವಮಿಯ ಉರುಸ್ ಗೆ ತೆರಳಲಾಗುವುದಿಲ್ಲವೆಂದು ಬಹಳ ಬೇಜಾರಾಯಿತು. ಅದೇ ದಿನ ರಾತ್ರಿ ಸಾಯಿಬಾಬಾರವರು ಅವರ ಕನಸಿನಲ್ಲಿ ಬಂದು ಅವರೇ ಸ್ವತಃ ಉರುಸ್ ಗೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದರು. ಪುರಂಧರೆಯವರ ಪತ್ನಿಯ ಖಾಯಿಲೆ ರಾಮನವಮಿಯ ದಿನದವರೆಗೂ ಮುಂದುವರೆಯಿತು ಮತ್ತು ರಾಮನವಮಿಯ ದಿನ "ಸಾಯಿಬಾಬ, ಸಾಯಿಬಾಬ" ಎಂದು ನುಡಿಯುತ್ತ ತಮ್ಮ ದೇಹತ್ಯಾಗ ಮಾಡಿದರು.

ಸಾಯಿಬಾಬಾರವರು ಬಹಳ ಸುಂದರವಾಗಿ ಹಾಡುವುದನ್ನು ಮತ್ತು ಬೇರೆಯವರು ತಮ್ಮ ಮುಂದೆ ಹಾಡುವುದನ್ನು ಆನಂದದಿಂದ ಆಲಿಸುವುದನ್ನು ಪುರಂಧರೆಯವರು ಬಹಳ ಸಲ ನೋಡಿರುವುದಾಗಿ ತಿಳಿಸಿದ್ದಾರೆ.

ಒಮ್ಮೆ ಪುರಂಧರೆಯವರು ಬಾಂದ್ರದಲ್ಲಿನ ತಮ್ಮ ಆಫೀಸಿನಿಂದ ಮತ್ತು ತಮ್ಮ ತಾಯಿಯವರಿಂದ ಅನುಮತಿ ಪಡೆದು ಮಾರನೆಯ ದಿನ ಶಿರಡಿಗೆ ಹೊರಡಲು ನಿಶ್ಚಯಿಸಿದರು. ಆದರೆ ಅದೇ ದಿನ ರಾತ್ರಿ ಸಾಯಿಬಾಬಾರವರು ಪುರಂಧರೆಯವರ ಕನಸಿನಲ್ಲಿ ಬಂದು ಶಿರಡಿಗೆ ಬರುವುದು ಬೇಡವೆಂದು ತಿಳಿಸಿದರು. ಪುರಂಧರೆಗೆ ಬಹಳ ಆಶ್ಚರ್ಯವಾಯಿತು. ಮಾರನೇಯ ದಿನ ಅವರ ಆಫೀಸಿನ ಕಾರ್ಯಗಾರದಲ್ಲಿ ಮುಷ್ಕರ ನಡೆಯಿತು. ಸಾಯಿಬಾಬಾರವರ ಮಾತನ್ನು ಕೇಳದೆ ಪುರಂಧರೆಯವರು ಏನಾದರು ಶಿರಡಿಗೆ ತೆರಳಿದ್ದರೆ ಆ ಮುಷ್ಕರದ ಹಿಂದೆ ಪುರಂಧರೆಯವರು ಇದ್ದಾರೆಂಬ ಅನುಮಾನ ಅವರ ಆಫೀಸಿನವರಿಗೆ ಬಂದು ಅವರ ಕೆಲಸಕ್ಕೆ ಸಂಚಕಾರ ಬರುತ್ತಿತ್ತು. ಈ ರೀತಿ ಸಾಯಿಬಾಬಾರವರು ಪುರಂಧರೆಯವರನ್ನು ತೊಂದರೆಯಾಗದಂತೆ ಕಾಪಾಡಿದರು.

ಒಮ್ಮೆ ಸಾಯಿಬಾಬಾರವರು ಪುರಂಧರೆಯವರನ್ನು ಮುಂಬಯಿಗೆ ಸಂಜೆ ೪:೩೦ ರ ನಂತರವೂ ತೆರಳದಂತೆ ಆಜ್ಞಾಪಿಸಿದರು. ಕೋಪರ್ ಗಾವ್ ನಿಂದ ಮನ್ಮಾಡ್ ಗೆ ೬:೩೦ ಕ್ಕೆ ಕೊನೆಯ ರೈಲುಬಂಡಿ ಹೊರಡುತ್ತಿತ್ತು. ಅಂದು ಸೋಮವಾರವಾಗಿತ್ತು ಮತ್ತು ಸಂತೆಯ ದಿನವಾಗಿತ್ತು.  ತುಂಬಾ ತಡವಾಗಿ ಸಾಯಿಬಾಬಾ ರೇಗೆಯವರ ಜೊತೆ ಹೊರಡಲು ಅನುಮತಿ ನೀಡಿದರು. ಅವರಿಬ್ಬರೂ ಒಂದು ಎತ್ತಿನ ಬಂಡಿ ಮಾಡಿಕೊಂಡು ನದಿಯ ಬಳಿಗೆ ಬರುವಷ್ಟರಲ್ಲಿ ೬:೪೫ ಆಗಿತ್ತು ಮತ್ತು ಅಲ್ಲಿಂದ ಕೋಪರ್ ಗಾವ್ ಗೆ ತೆರಳುವಷ್ಟರಲ್ಲಿ ೭:೪೫ ಆಗಿತ್ತು. ಎಲ್ಲ ರೈಲು ಬಂಡಿಗಳು ಹೊರಟು ಹೋಗಿದ್ದವು. ಆದರೆ ಅಂದು ಒಂದು ವಿಶೇಷ ರೈಲು ಸುಮಾರು ೮:೧೫ ರ ಸಮಯಕ್ಕೆ ಕೋಪರ್ ಗಾವ್ ಗೆ ಬಂದು ಇವರಿಬ್ಬರನ್ನು ಹತ್ತಿಸಿಕೊಂಡು ಮನ್ಮಾಡ್ ತಲುಪಿಸಿತು. ಅಲ್ಲಿಂದ ಮುಂಬೈ ರೈಲು ಬಂಡಿ ಹಿಡಿದು ಸುಖವಾಗಿ ತಮ್ಮ ಮನೆಯನ್ನು ತಲುಪಿದರು. ಆ ದಿನಗಳಲ್ಲಿ ಕೋಪರ್ ಗಾವ್ ನಿಂದ ಮನ್ಮಾಡ್ ಗೆ ಸಂಜೆ ೬:೩೦ ರ ನಂತರ ಯಾವುದೇ ರೈಲು ಬಂಡಿ ಇರಲಿಲ್ಲ. ಇದಲ್ಲವೇ ಸಾಯಿಬಾಬಾರವರ ಲೀಲೆ?