ಸಾಯಿ ಮಹಾಭಕ್ತ - ರಾವ್ ಸಾಹೇಬ್ ಯಶವಂತ್ ಜನಾರ್ದನ ಗಲ್ವಂಕರ್-ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ
ಶ್ರೀ ರಾವ್ ಬಹದ್ದೂರ್ ಗಲ್ವಂಕರ್ ರವರು ಶಿರಡಿ ಸಾಯಿಬಾಬಾ ಸಂಸ್ಥಾನದ ಸದಸ್ಯರಾಗಿ ಮತ್ತು "ಸಾಯಿ ಲೀಲಾ" ಮಾಸ ಪತ್ರಿಕೆಯ ಸಂಪಾದಕರಾಗಿ ಬಹಳ ವರ್ಷ ಕೆಲಸ ಮಾಡಿದರು. ಇವರು ಅಣ್ಣಾ ಸಾಹೇಬ್ ದಾಬೋಲ್ಕರ್ ಆಲಿಯಾಸ್ ಹೇಮಾಡಪಂತ ಅವರ ಅಳಿಯಂದಿರು. ಗಲ್ವಂಕರ್ ರವರು ಮುಂಬೈ ಸರ್ಕಾರದಲ್ಲಿ ಗೃಹ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡಿದರು. ಇವರ ಮಾವನವರು ಸಾಯಿಬಾಬಾರವರಿಗೆ ಅತ್ಯಂತ ನಿಕಟರಾಗಿದ್ದರಿಂದ ಮತ್ತು ಸಾಯಿಬಾಬಾರವರ ಅನನ್ಯ ಸಾಯಿ ಭಕ್ತರಾಗಿದ್ದರಿಂದ ಇವರೂ ಕೂಡ ಸಾಯಿಬಾಬಾರವರ ಬಳಿಗೆ ಸೆಳೆಯಲ್ಪಟ್ಟರು. ಇವರು 4-5 ಬಾರಿ ಮಾವನವರ ಜೊತೆ ಸಾಯಿಬಾಬಾರವರನ್ನು ಕಾಣಲು ಬಂದಿದ್ದರು. ಮೊದಲ ಸಾರಿ ಇವರಿಗೆ ಅಷ್ಟು ಪರಿಣಾಮ ಆಗಲಿಲ್ಲ. ಆದರೆ ಕಾಲ ಕ್ರಮೇಣ ಸಾಯಿಬಾಬಾರವರಲ್ಲಿ ಆಸಕ್ತಿಯನ್ನು ವಹಿಸಿದರು. ಒಮ್ಮೆ ಬಾಬಾರವರೇ ಇವರ ಕನಸಿನಲ್ಲಿ ಕಾಣಿಸಿಕೊಂಡು 2 ರುಪಾಯಿ ದಕ್ಷಿಣೆ ಕೇಳಿದರು. ಆನಂತರ ಬೆಳಗ್ಗೆ ಎಚ್ಚರವಾಗಿ ಎರಡು ರುಪಾಯಿಗಳನ್ನು ಶಿರಡಿಗೆ ಕಳುಹಿಸಿದರು. ಸಾಯಿಬಾಬಾರವರು ಇವರಿಗೆ ಕನಸಿನಲ್ಲಿ 2 ಆಜ್ಞೆಯನ್ನು ನೀಡಿದರು. ಅವು ಯಾವುವೆಂದರೆ:
- ಪ್ರಾಮಾಣಿಕತನದಿಂದ ಮತ್ತು ಸತ್ಯದಿಂದ ನಡೆಯುವುದು.
- ಸದ್ಗುಣವುಳ್ಳವನಾಗಿ ಮತ್ತು ಕಾಮರಹಿತನಾಗಿರುವುದು.
ಗಲ್ವಂಕರ್ ರವರು ಈ ಮೇಲಿನ ಸಾಯಿಬಾಬಾರವರ ಎರಡು ಆಜ್ಞೆಗಳನ್ನು ಚಾಚೂ ತಪ್ಪದೆ ಪಾಲಿಸಿದೆ ಎಂದು ಹೇಳುತ್ತಾರೆ.
ಗಲ್ವಂಕರ್ ರವರಿಗೆ ಒಂದು ವಿಶೇಷ ಅನುಭವ ಆಗಿದ್ದು 1917 ರಲ್ಲಿ. ಅದೇನೆಂದರೆ, 1917 ರಲ್ಲಿ ಗಲ್ವಂಕರ್ ಶಿರಡಿಗೆ ಹೋದಾಗ ಬಾಬಾರವರು ತಮ್ಮ ಹಸ್ತಗಳಿಂದ ಇವರ ತಲೆಯನ್ನು ಸವರಿದರು. ಇದು ಅವರ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿತು. ಇವರು ಸ್ವತಃ ತಮ್ಮನ್ನು ತಾವೇ ಮರೆತರು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಕ್ಷಣಕಾಲ ಮರೆತು ಆನಂದದಿಂದ ತನ್ಮಯರಾಗಿದ್ದರು. ಆಗ ಇತರ ಸಾಯಿ ಭಕ್ತರ ಸಮ್ಮುಖದಲ್ಲಿ ಸಾಯಿಬಾಬಾರವರು ಗಲ್ವಂಕರ್ ರವರು ತಮ್ಮ ಹಿಂದಿನ ಜನ್ಮಗಳಲ್ಲಿ ಕೂಡ ಬಹಳ ಸದ್ಗುಣವುಳ್ಳವರಾಗಿ ಮತ್ತು ಸತ್ಯತನದಿಂದ ಇದ್ದರು ಎಂದು ಹೇಳಿ ಇವರ ಹಿಂದಿನ ಜನ್ಮದ ವಿವರಗಳನ್ನು ಕೂಡ ತಿಳಿಸಿದರು. ಆಲ್ಲದೇ, ಈ ಜನ್ಮದಲ್ಲೂ ಕೂಡ ಗಲ್ವಂಕರ್ ರವರು ಆದೇ ಶುದ್ದ ಮನಸ್ಸು ಹೊಂದಿದ್ದಾರೆ ಎಂದು ತಿಳಿಸಿದರು. ಯಾವುದೇ ರಜೆ ಸಿಕ್ಕರೆ ಸಾಕು, ಗಲ್ವಂಕರ್ ಶಿರಡಿಗೆ ಸಾಯಿಬಾಬಾರವರ ದರ್ಶನಕ್ಕೆ ಬಂದು ಬಿಡುತ್ತಿದ್ದರು. ಆದರೂ ಕೂಡ ಬಾಬಾರವರು ಇವರಿಗೆ ಯಾವುದೇ ಆತ್ಮಜ್ಞಾನವನ್ನಾಗಲಿ, ಧರ್ಮ ಅಥವಾ ನೀತಿಶಾಸ್ತ್ರದ ಪಾಠವನ್ನಾಗಲಿ ಹೇಳಿಕೊಡಲಿಲ್ಲ. ಇವರಿಗೆ ಸಾಯಿಯವರು ಗೀತೆ, ಭಾಗವತ ಮತ್ತು ಏಕನಾಥ ಭಾಗವತವನ್ನು ಪಾರಾಯಣ ಮಾಡಲು ಆದೇಶಿದರೆಂದು ಸ್ವತಃ ಗಲ್ವಂಕರ್ ಅವರೇ ಹೇಳಿದ್ದಾರೆ. ಇವರು ಸಾಯಿಬಾಬಾರವರ ಬಳಿಗೆ ಅತ್ಯಂತ ನಿಕಟವಾಗಿದ್ದುದು 1918 ಮತ್ತು ಅದರ ನಂತರದಲ್ಲಿ ಮಾತ್ರ. ಅದಕ್ಕೆ ಮುಂಚೆ ಇವರಿಗೆ ಸಾಯಿಯವರ ಸಮೀಪ ಬರಲು ಆಗಲಿಲ್ಲ. ಇವರಿಗೆ ಅಷ್ಟು ಆಸಕ್ತಿಯು ಕೂಡ ಇರಲಿಲ್ಲ. ಆದರೆ, ಬಾಬಾರವರ ಮಹಾಸಮಾಧಿಯ ನಂತರ ಬಹಳ ಆಸಕ್ತಿ ವಹಿಸಿದರು.
1921 ರಲ್ಲಿ ಇವರು ಸಂಸಾರ ಸಮೇತ ಪ್ರಯಾಗದಲ್ಲಿ ಭಾರದ್ವಾಜ ಆಶ್ರಮದಲ್ಲಿ ಸಾಯಿಬಾಬಾರವರನ್ನು ಪ್ರಾರ್ಥಿಸಿ ಯಾರಾದರೂ ಸಂತರ ದರ್ಶನ ತಮಗೆ ಆಗಬೇಕೆಂದು ಬೇಡಿದರು. ಇವರು ಆಶ್ರಮ ಬಿಟ್ಟ ಕೆಲವೇ ನಿಮಿಷಗಳಲ್ಲಿ ಓರ್ವ ಸಂತನ ದರ್ಶನ ದಾರಿಯಲ್ಲಿ ಆಯಿತು. ಇವರ ಜೊತೆಯಲ್ಲಿ ಇದ್ದ ಮಾರ್ಗದರ್ಶಕನು ಆ ಸಂತರನ್ನು ತೋರಿಸಿ ಸಾಮಾನ್ಯವಾಗಿ 7 ವರ್ಷಗಳಿಗೊಮ್ಮೆ ಈ ಸಂತರು ಪ್ರಯಾಗಕ್ಕೆ ಬರುತ್ತಾರೆ. ಅವರುಗಳು ಯಾರನ್ನು ಹತ್ತಿರ ಸೇರಿಸುವುದಿಲ್ಲ ಮತ್ತು ಯಾರಿಂದಲೂ ದಕ್ಷಿಣೆ ಪಡೆಯುವುದಿಲ್ಲ ಎಂದನು. ಆದರೆ ಬಾಬಾರವರ ಸಂಪರ್ಕದಿಂದ ಧೈರ್ಯವಂತರಾಗಿದ್ದ ಗಲ್ವಂಕರ್ ಅವರು ಆ ಸಂತರನ್ನು ಭೇಟಿಯಾಗಲು ಹೋದರು. ಆ ಸಂತರು ಇವರನ್ನು ನೋಡಿ ಕೋಪಿಸಿಕೊಳ್ಳುವ ಬದಲು ಕೈಗಳನ್ನು ಮೇಲಕ್ಕೆತ್ತಿ "ಬಾ ನನ್ನ ಮಗುವೆ" ಎಂದರು. ಗಲ್ವಂಕರ್ ಅವರ ಪತ್ನಿ, ತಾಯಿ ಮತ್ತು ಇವರೊಂದಿಗಿದ್ದ ಇತರ ಸ್ತ್ರೀಯರೂ ಕೂಡ ಸಂತರಿಗೆ ನಮಸ್ಕಾರ ಮಾಡಿದರು. ಅವರೆಲ್ಲರಿಗೂ ಈ ಸಂತರು ಆಶೀರ್ವಾದ ಮಾಡಿದರು. ಗಲ್ವಂಕರ್ ಅವರ ಬಳಿ 3 ಆಣೆಗಳು ಮಾತ್ರ ಇದ್ದವು. ಅವುಗಳನ್ನೇ ಇವರು ಭಕ್ತಿಯಿಂದ ಸಂತರಿಗೆ ಅರ್ಪಿಸಿದರು. ಸಂತರು ಅದನ್ನು ಸಂತೋಷದಿಂದ ಸ್ವೀಕರಿಸಿದರು. ಹೀಗೆ ಸಾಯಿಬಾಬಾರವರು ಗಲ್ವಂಕರ್ ಅವರ ಪ್ರಾರ್ಥನೆಗೆ 1921 ರಲ್ಲಿ ಉತ್ತರಿಸಿದರು.
ಸಾಯಿಬಾಬಾರವರ ಆಶೀರ್ವಾದ ಮತ್ತು ನೀತಿ ಪಾಠಗಳಿಂದ ಗಲ್ವಂಕರ್ ರವರು ಆನಂದಭರಿತರಾಗಿ ಕ್ರಮೇಣ ಆಧ್ಯಾತ್ಮಿಕದ ಕಡೆಗೆ ತಮ್ಮ ಒಲವು ತೋರಿಸಿದರು. 1932 ರಲ್ಲಿ ಒಂದು ದಿನ ಗಲ್ವಂಕರ್ ಅವರಿಗೆ ಒಂದು ಕನಸಾಯಿತು. ಕನಸಿನಲ್ಲಿ ಸಾಯಿಬಾಬಾರವರು ಇವರ ಹತ್ತಿರ ಬಂದು "ನಿನಗೇನು ಬೇಕು?" ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಗಲ್ವಂಕರ್ ಅವರು "ನನಗೆ ನಿಮ್ಮ ಪ್ರೇಮ ಮಾತ್ರವೇ ಬೇಕು" ಎಂದರು. ಅದಕ್ಕೆ ಸಾಯಿಯವರು "ನೀನು ಖಂಡಿತವಾಗಿ ಪ್ರೇಮವನ್ನು ಹೊಂದುವೆ" ಎಂದು ಆಶೀರ್ವದಿಸಿ ಅದೃಶ್ಯರಾದರು. ಈ ಘಟನೆಯಾದ ನಂತರ ಗಲ್ವಂಕರ್ ಅವರಿಗೆ ಆಗಾಗ್ಗೆ ಪ್ರೇಮವು ಹರಿಯುವಂತೆ ಭಾಸವಾಗುತ್ತಿತ್ತು. ಅವರು ಓದುವಾಗ, ಧ್ಯಾನ ಮಾಡುವಾಗ ಮತ್ತು ಇನ್ನಿತರ ಸಮಯಗಳಲ್ಲಿ ಪ್ರೇಮವು ಉಕ್ಕಿ ಹರಿಯುವಂತೆ ಭಾಸವಾಗುತ್ತಿತ್ತು. ಹೀಗೆ ಗಲ್ವಂಕರ್ ಅವರಿಗೆ ಬಾಬಾರವರ ಮಹಾಸಮಾಧಿಯ ಮುಂಚೆ ಹಸ್ತ ಸ್ಪರ್ಶದಿಂದಲೂ ಮತ್ತು ಮಹಾ ಸಮಾಧಿಯ ನಂತರ ಸಾಯಿಯವರ ಅಶೀರ್ವಾದವು ಸದಾ ಅವರೊಂದಿಗೆ ಇದ್ದು ಅದು ಇನ್ನಷ್ಟು ಪಕ್ವವಾಗಿ ಅವರ ಜೀವನ ಉದಾತ್ತವಾಗಿ ಮತ್ತು ಶ್ರೇಷ್ಠತೆಯಿಂದ ಕೂಡಿತ್ತು.
No comments:
Post a Comment