ರಾಯಲ್ ಆಲ್ಬರ್ಟ್ ಹಾಲ್ ಲಂಡನ್ ನಲ್ಲಿ ನಡೆದ ಸಾಯಿ ಭಕ್ತರ ಸಮ್ಮೇಳನದ ಪೂರ್ಣ ವಿವರ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ ಮತ್ತು ಸಾಯಿಅಮೃತಧಾರಾ.ಕಾಂ
ಸಾಯಿಭಜನ ಸಂಧ್ಯಾ ನಡೆದ ರಾಯಲ್ ಆಲ್ಬರ್ಟ್ ಹಾಲ್ ನ ಹೊರನೋಟ
ಶ್ರೀ ಸಾಯಿಬಾಬಾ ಸಂಸ್ಥಾನದವರು ಕಳೆದ ತಿಂಗಳ 19 ನೇ ಸೆಪ್ಟೆಂಬರ್ 2010 ರಂದು ಲಂಡನ್ ನ ವಿಶ್ವವಿಖ್ಯಾತ ರಾಯಲ್ ಆಲ್ಬರ್ಟ್ ಹಾಲ್ ನಲ್ಲಿ ಚರಿತ್ರಾರ್ಹವಾದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದೇ ಪ್ರಥಮ ಬಾರಿಗೆ ಲಂಡನ್ ನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದರಿಂದ ಬಹಳ ದಿನಗಳಿಂದ ಈ ಕಾರ್ಯಕ್ರಮವನ್ನು ನೋಡಲು ಹಾತೊರೆಯುತ್ತಿದ್ದ ಲಂಡನ್ನಿನಲ್ಲಿ ವಾಸಿಸುತ್ತಿದ್ದ ಭಾರತೀಯರ ಮತ್ತು ಸಾಯಿಬಾಬಾ ಭಕ್ತರ ಮಹಾಪೂರವೇ ಕಾರ್ಯಕ್ರಮಕ್ಕೆ ಹರಿದು ಬಂದಿತ್ತು.
ಈ ಕಾರ್ಯಕ್ರಮ ವೀಕ್ಷಿಸಲು 5 ಮತ್ತು 10 ಪೌಂಡ್ ಗಳ ಶುಲ್ಕವನ್ನು ಇಡಲಾಗಿತ್ತು ಮತ್ತು ಕಾರ್ಯಕ್ರಮದ ನಿಗದಿತ ದಿನಾಂಕಕ್ಕೆ 15 ದಿನಗಳ ಮುಂಚೆಯೇ ಎಲ್ಲಾ ಟಿಕೆಟ್ ಗಳು ಮಾರಾಟವಾಗಿದ್ದು ಚಾರಿತ್ರಿಕ ದಾಖಲೆಯೇ ಸರಿ. ಈ ಹಿಂದೆ ಲಂಡನ್ ನಲ್ಲಿ ನಡೆದ ಯಾವುದೇ ಕಾರ್ಯಕ್ರಮಗಳಿಗೆ ಈ ರೀತಿಯ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿರಲಿಲ್ಲ. ಈ ಘಟನೆ ಪ್ರಪಂಚದಾದ್ಯಂತ ಜನರಿಗೆ ಶಿರಡಿ ಸಾಯಿಬಾಬಾರವರ ಮೇಲೆ ಇಟ್ಟಿರುವ ಪ್ರೀತಿ ಮತ್ತು ಭಕ್ತಿಯನ್ನು ಎತ್ತಿ ತೋರಿಸುತ್ತದೆ. ಒಟ್ಟು 5500 ಸಾಯಿಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಸುಂದರ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ಆನಂದಿಸಿದರು. ಇವರಲ್ಲಿ 500 ಮಂದಿ ಬ್ರಿಟಿಷರು ಕೂಡ ಇದ್ದುದು ಒಂದು ವಿಶೇಷತೆಯೇ ಸರಿ.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಾಯಿಭಕ್ತರು ಒಕ್ಕೊರೊಲಿನಿಂದ ಶಿರಡಿ ಸಾಯಿಬಾಬಾರವರ ಆರತಿಯನ್ನು ಹಾಡಿದರು. ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಖ್ಯಾತ ಗಾಯಕರಾದ ಮನಹರ ಉದಾಸ್ ಮತ್ತು ಸುರೇಶ ವಾಡೆಕರ್ ರವರು ಎರಡು ದಿನಗಳ ಮುಂಚೆಯೇ ಅನಿವಾರ್ಯ ಕಾರಣಗಳಿಂದ ತಮ್ಮ ಅನುಪಸ್ಥಿತಿಯನ್ನು ತಿಳಿಸಿದರು ಮತ್ತು ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಆದರೆ, ಸಾಯಿಭಕ್ತರ ಅದೃಷ್ಟವೋ ಏನೋ, ಅದೇ ವೇಳೆಗೆ ಲಂಡನ್ ನಲ್ಲಿ ತಂಗಿದ್ದ ಖ್ಯಾತ ಗಾಯಕ ಶ್ರೀ.ಅನುಪ್ ಜಲೋಟರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಚೇರ್ಮೆನ್ ಶ್ರೀ.ಜಯಂತ್ ಸಾಸನೆಯವರು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಅವರ ಆಹ್ವಾನವನ್ನು ಸಾಯಿಬಾಬಾರವರ ಆದೇಶವೆಂದು ಪರಿಗಣಿಸಿ ಶ್ರೀ.ಅನುಪ್ ಜಲೋಟರವರು ಯಾವುದೇ ಸಂಭಾವನೆಯನ್ನು ಪಡೆಯದೇ ಕಾರ್ಯಕ್ರಮಕ್ಕೆ ಬಂದು ಬಹಳ ಸುಶ್ರಾವ್ಯವಾಗಿ ಸಾಯಿಭಜನೆಗಳನ್ನು ಹಾಡಿ ನೆರೆದಿದ್ದ ಸಾಯಿಭಕ್ತರ ಮನಗಳನ್ನು ತಣಿಸಿದರು.
ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಾಯಿಭಕ್ತರಿಗೆ ಸಾಯಿ ಸಚ್ಚರಿತೆ, ಸಾಯಿಯವರ 3 ಆಯಾಮದ ಸುಂದರ ಭಾವಚಿತ್ರ, ಪವಿತ್ರ ಉಧಿ ಮತ್ತು ಸಾಯಿಬಾಬಾ ಆರತಿಯ ಸಿಡಿಗಳನ್ನು ನೀಡಿದರು. ಈ ಎಲ್ಲಾ ಪವಿತ್ರ ವಸ್ತುಗಳನ್ನು ಶಿರಡಿಯಿಂದ ಲಂಡನ್ನಿಗೆ ತರಲು ಉಚಿತವಾಗಿ ವಿಶೇಷ ವಿಮಾನದ ವ್ಯವಸ್ಥೆಯನ್ನು ಕೇಂದ್ರ ವಿಮಾನಯಾನ ಸಚಿವ ಶ್ರೀ.ಪ್ರಫುಲ್ ಪಟೇಲ್ ರವರು ನೋಡಿಕೊಂಡರು. ಲಂಡನ್ ನ ಸಾಯಿಮಂದಿರದ ಅಧ್ಯಕ್ಷ ಶ್ರೀ.ದಾರಾಸಿಂಗ್, ಶ್ರೀ.ಸುಧೀರ್ ಚೌಧರಿ, ರಾಜ್, ಮಿಲಿಂಡ್ ಪಾಟೀಲ್, ಶ್ರೀಮತಿ. ರೀನಾ ಕಕ್ಕಡ್ ಮತ್ತು ಇತರ ಲಂಡನ್ ಸಾಯಿಭಕ್ತರು ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಅತ್ಯಂತ ಮುತುವರ್ಜಿ ವಹಿಸಿ ನೋಡಿಕೊಂಡರು.
ಶ್ರೀ ಸಾಯಿಬಾಬಾ ಸಂಸ್ಥಾನದ ಚೇರ್ಮೆನ್ ಶ್ರೀ.ಜಯಂತ್ ಸಾಸನೆಯವರು ನೆರೆದಿದ್ದ ಭಕ್ತರಿಗೆ ಸಾಯಿಬಾಬಾ ಸಂಸ್ಥಾನದ ಕಾರ್ಯವೈಖರಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ತಿಳಿಯಪಡಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ರೇಡಿಯೋ ಜಾಕಿ ರಾಮ್ ಭಟ್ ಬಹಳ ಸುಂದರವಾಗಿ ನಡೆಸಿಕೊಟ್ಟರು. ಸಾಯಿಬಾಬಾ ಸಂಸ್ಥಾನದ ಟ್ರಸ್ಟೀ ಶ್ರೀ.ಶೈಲೇಶ್ ಕುಟೆಯವರು ವಂದನಾರ್ಪಣೆಯನ್ನು ಮಾಡಿದರು. ಸಾಯಿಬಾಬಾ ಸಂಸ್ಥಾನದ ಟ್ರಸ್ಟ್ ನ ಸದಸ್ಯರುಗಳಾದ ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀಮತಿ.ಊರ್ಮಿಳ ಜಾಧವ್, ಡಾ.ಪ್ಯಾರೇಲಾಲ್ ತಿವಾರಿ, ಕ್ಯಾಪ್ಟನ್ ಸುರೇಶ ವಾಸುದೇವ, ಸಂಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ.ಕಿಶೋರ್ ಮೊರೆ, ಶ್ರೀಮತಿ.ರಾಜಶ್ರೀ ಸಾಸನೆ, ಸಂಸ್ಥಾನದ ಪುರೋಹಿತರಾದ ಶ್ರೀ.ದಿಲೀಪ್ ಸುಲಾಕ್ಹೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಯಿಭಕ್ತರು ಸಂಸ್ಥಾನದ ಪದಾಧಿಕಾರಿಗಳನ್ನು ಪ್ರತಿವರ್ಷವೂ ಈ ತರಹದ ಕಾರ್ಯಕ್ರಮವನ್ನು ಲಂಡನ್ ನಲ್ಲಿ ಆಯೋಜಿಸುವಂತೆ ವಿನಂತಿ ಮಾಡಿದರು. ಕಾರ್ಯಕ್ರಮದಲ್ಲಿ ಟಿಕೇಟ್ ಮಾರಾಟದಿಂದ ಬಂದ ಹಣವನ್ನು ಶಿರಡಿಯ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಗೆ ದೇಣಿಗೆಯಾಗಿ ನೀಡಲಾಯಿತು.
ಕನ್ನಡ ಅನುವಾದ - ಶ್ರೀಕಂಠ ಶರ್ಮ
No comments:
Post a Comment