Thursday, September 30, 2010

ಸಾಯಿ ಮಹಾಭಕ್ತ - ಕುಶಾ ಭಾವ್ ಆಲಿಯಾಸ್ ಕೃಷ್ಣಾಜಿ ಕಾಶೀನಾಥ ಜೋಷಿ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ


ಇವರು ಕಾಶಿನಾಥ ಪದಮಕರ ಜೋಷಿ ಅವರ ಪುತ್ರರು. ಇವರು ಅಹ್ಮದ್ ನಗರದಿಂದ 70 ಮೈಲಿ ದೂರವಿದ್ದ ಮೀರಜ್ ಗವ್ ನಲ್ಲಿ ವಾಸಿಸುತ್ತಿದ್ದರು. ಕುಶಾ ಭಾವ್ ರವರು 1866 ರಲ್ಲಿ ಜನಿಸಿದರು.

ಸಾಯಿಬಾಬಾರವರು ಇವರಿಗೆ ತಮ್ಮ ಗೂಢವಾದ ಶಕ್ತಿಗಳನ್ನು ದಯಪಾಲಿಸಿದ್ದರು. ಇವರು ತಮ್ಮ ಶಾಲಾ ವ್ಯಾಸಂಗ ಮುಗಿಸಿ 5 ರಿಂದ 7 ರುಪಾಯಿಗಳ ಸಂಬಳದ ಮೇಲೆ ಸ್ಕೂಲ್ ಮಾಸ್ಟರ್ ಕೆಲಸ ಮಾಡುತ್ತಿದ್ದರು ಮತ್ತು ಬಹಳ ಬಡವರಾಗಿದ್ದರು. ಹಳ್ಳಿಯ ಪುರೋಹಿತರಾಗಲು ಶಿಕ್ಷಣವನ್ನು ಪಡೆಯುತ್ತಿದ್ದರು. ಆದರೆ ಇವರಿಗೆ ಸ್ಕೂಲ್ ಮಾಸ್ಟರ್ ಕೆಲಸವಾಗಲಿ ಅಥವಾ ಪುರೋಹಿತರ ಕೆಲಸವಾಗಲಿ ಇಷ್ಟವಾಗಲಿಲ್ಲ. ಆಗ ಇವರು ಓರ್ವ ಗುರು ಮತ್ತು ಮಹಾರಾಜರ ಬಳಿ ತೆರಳಿ ಆಸನ, ಪ್ರಾಣಾಯಾಮ ಮತ್ತು ಕುಂಡಲಿನಿ ವಿದ್ಯೆಯಲ್ಲಿ ಶಿಕ್ಷಣ ಪಡೆದರು. ಆ ಗುರುವು ಇವರಿಗೆ ಸಾಮಾನ್ಯವಾದ ಶಿಕ್ಷಣ ಮಾತ್ರ ನೀಡಿದರು. ಇದರಿಂದ ಕುಶಾ ಭಾವ್ ಗೆ ತೃಪ್ತಿಯಾಗಲಿಲ್ಲ. ಆದ್ದರಿಂದ ಇವರು ತಮ್ಮ ಗುರುಗಳಿಗೆ ಮಾರಣ, ಉಚ್ಚಾಟನ ಮತ್ತು ವಶೀಕರಣ ವಿದ್ಯೆಗಳನ್ನು ಬೋಧಿಸಬೇಕೆಂದು ಕೇಳಿಕೊಂಡರು. ಇವರ ಇಚ್ಚೆಯಂತೆ ಇವರ ಗುರುಗಳು ಇವರಿಗೆ ಆ ವಿದ್ಯೆಗಳನ್ನು ಹೇಳಿಕೊಟ್ಟರು. ಕುಶಾ ಭಾವ್ ರವರು ದುಷ್ಟಶಕ್ತಿಗಳೊಡನೆ ವ್ಯವಹರಿಸಬೇಕಾಗಿದ್ದರಿಂದ ಕೈಗಳಿಗೆ ಕಬ್ಬಿಣದ ಬಳೆಗಳನ್ನು ತೊಟ್ಟು ಮಂತ್ರಗಳನ್ನು ಹೇಳುತ್ತಿದ್ದರು. ಆ ಮಂತ್ರಗಳನ್ನು ಪುನರುಚ್ಚಾರ ಮಾಡಿ ಮಾಡಿ ಅದರಲ್ಲಿ ಪರಿಣತೆ ಪಡೆದು ಕೇವಲ ಮಂತ್ರ ಜಪದಿಂದ ಕುಳಿತಲ್ಲೇ ಸಿಹಿ ತಿಂಡಿಗಳನ್ನು ತರಿಸಬಲ್ಲ ಶಕ್ತಿಯನ್ನು ಪಡೆದಿದ್ದರು. ಅವರು ಸುಮ್ಮನೆ ಕೈಚಾಚಿದರೆ ಕೈ ತುಂಬಾ ಪೇಡ ಬರುವಂತೆ ಮಾಡುತ್ತಿದ್ದರು. ಅದನ್ನು ಜನಗಳಿಗೆ ತೋರಿಸಿ ಅದನ್ನು ಅವರುಗಳಿಗೆ ತಿನ್ನಲು ಕೊಡುತ್ತಿದ್ದರು. ಆದರೆ ಆ ಸಿಹಿಯನ್ನು ಅವರೇ ತಿನ್ನಲು ಆಗುತ್ತಿರಲಿಲ್ಲ. ಇವರು ದುಷ್ಟ ಶಕ್ತಿಗಳನ್ನು ಓಡಿಸುವ ಶಕ್ತಿಯನ್ನು ಪಡೆದಿದ್ದರು. ತಮ್ಮ 22 ನೇ ವಯಸ್ಸಿನ ಹೊತ್ತಿಗೆ ಇವರು ಈ ಎಲ್ಲಾ ಮಂತ್ರಶಕ್ತಿಯಲ್ಲಿ ಪರಿಣತಿಯನ್ನು ಪಡೆದಿದ್ದರು. ಆಗ ಇವರ ಗುರುಗಳು ಇವರನ್ನು ಬಿಟ್ಟು ಹಿಮಾಲಯಕ್ಕೆ ಹೋಗಿ ತಮ್ಮ ಕೊನೆಗಾಲದ ತನಕ ಅಲ್ಲಿಯೇ ಇದ್ದರು. ಕುಶಾ ಭಾವ್ ರವರು ಇವರ ಗುರುಗಳ ಜೊತೆಗೆ ದೆಹಲಿಯವರೆಗೆ ಬಂದು ಅವರನ್ನು ಬೀಳ್ಕೊಟ್ಟರು. ಗುರುಗಳು ಇವರನ್ನು ಬಿಟ್ಟು ಹೊರಡುವಾಗ ಇವರಿಗೆ ಶಿರಡಿಯ ಸಾಯಿಬಾಬಾರವರ ಬಳಿಗೆ ಹೋಗಿ ಅವರು ಹೇಳಿದಂತೆ ನಡೆಯುವಂತೆ ಆಜ್ಞಾಪಿಸಿ ಅದೃಶ್ಯರಾದರು.

ತಮ್ಮ ಗುರುಗಳ ಆಜ್ಞೆಯಂತೆ ಕುಶಾ ಭಾವ್ ರವರು 1908 ರಲ್ಲಿ ಶಿರಡಿಗೆ ಬಂದು ಸಾಯಿಬಾಬಾರವರನ್ನು ಭೇಟಿ ಮಾಡಿದರು. ಕುಶಾ ಭಾವ್ ಮಸೀದಿಯ ಬಳಿಗೆ ಬರುವಾಗಲೇ ಸಾಯಿಯವರಿಗೆ ವಿಷಯ ತಿಳಿದು ಇವರನ್ನು ಒಳಗೆ ಬರಲು ಬಿಡಲಿಲ್ಲ. ಸಾಯಿಯವರು ಕುಶಾ ಭಾವ್ ರವರಿಗೆ ಅವರು ತೊಟ್ಟಿದ್ದ ಕಬ್ಬಿಣದ ಬಳೆಗಳನ್ನು ಎಸೆಯುವಂತೆ ಮತ್ತು ಅವರು ಕಲಿತ ವಿದ್ಯೆಯಿಂದ ಸಿಹಿ ತಿಂಡಿಗಳನ್ನು ತರಿಸುವ ವಿದ್ಯೆಗಳನ್ನು ಬಿಟ್ಟರೆ ಮಾತ್ರ ಮಸೀದಿಯ ಒಳಗಡೆ ಬಿಡುವುದಾಗಿ ತಿಳಿಸಿದರು. ಸಾಯಿಯವರ ಆಜ್ಞೆಯಂತೆ ಕುಶಾ ಭಾವ್ ರವರು ಕಬ್ಬಿಣದ ಬಳೆಗಳನ್ನು ಮುರಿದು ಹಾಕಿ ಬಿಸಾಡಿದರು. ಆಗ ಇವರು ಭಿಕ್ಷೆ ಬೇಡಿ ಜೀವನ ಮಾಡಲು ಶುರು ಮಾಡಿದರು. ಸಾಯಿಬಾಬಾರವರು ಇವರಿಗೆ ಮಸೀದಿಯ ಕೊನೆಯಲ್ಲಿ ಕುಳಿತು ರಾಮದಾಸ ಸ್ವಾಮಿ ಅವರು ರಚಿಸಿದ್ದ "ದಾಸಭೋಧ  " ಎಂಬ ಗ್ರಂಥವನ್ನು ಪಾರಾಯಣ ಮಾಡಲು ಹೇಳಿದರು. ರಾತ್ರಿಯ ವೇಳೆ ಎಲ್ಲಿ ಸ್ಥಳ ಸಿಕ್ಕರೆ ಅಲ್ಲಿ ಮಲಗುತ್ತಿದ್ದರು. ಬಾಬಾರವರು ಇವರಿಗೆ ಯಾವುದೇ ಉಪದೇಶವನ್ನಾಗಲಿ ಅಥವಾ ಮಂತ್ರವನ್ನಾಗಲಿ ನೀಡಲಿಲ್ಲ. ಕುಶಾ ಭಾವ್ ಸಾಯಿಯವರ ಬಳಿಗೆ ಬಂದಾಗ ಸಾಯಿಬಾಬಾರವರ ಬಳಿ ಹೆಚ್ಚಿಗೆ ಭಕ್ತರು ಬರುತ್ತಿರಲಿಲ್ಲ. ಸಾಯಿಯವರು ದಕ್ಷಿಣೆಯನ್ನು ಕೂಡ ಆಗ ಕೇಳುತ್ತಿರಲಿಲ್ಲ. ಆದರೆ ಕೆಲವರಿಂದ ಸ್ವಲ್ಪ ಹಣವನ್ನು ಧುನಿಯ ಕಟ್ಟಿಗೆಗೊಸ್ಕರ ತೆಗೆದುಕೊಳ್ಳುತ್ತಿದ್ದರು. ಸಾಯಿಯವರು ಇವರಿಗೆ ಸದಾಕಾಲ 3 ತಲೆಯ ಮನುಷ್ಯನನ್ನು ನೋಡು ಎನ್ನುತ್ತಿದ್ದರು. ಅಂದರೆ ಗಾಣಗಾಪುರದ ದತ್ತಾತ್ರೇಯರ ದರ್ಶನ ಮಾಡುವಂತೆ ಹೇಳುತ್ತಿದ್ದರು. ಸಾಯಿಯವರ ಆಜ್ಞೆಯಂತೆ ಇವರು ಪ್ರತಿವರ್ಷ 2 ಬಾರಿ ಗಾಣಗಾಪುರಕ್ಕೆ ಹೋಗಿ ದತ್ತನ ದರ್ಶನ ಮಾಡುತ್ತಿದ್ದರು. ಪ್ರತಿವರ್ಷ ಗುರು ಪೌರ್ಣಮಿ ಮತ್ತು ಮಾಘ ಮಾಸದ ಪೌರ್ಣಮಿ ಯಂದು ತಪ್ಪದೆ ಗಾಣಗಾಪುರ ದರ್ಶನ ಮಾಡುತ್ತಿದ್ದರು. ಬಾಬಾರವರು ಒಮ್ಮೆ ಇವರಿಗೆ ಗುರುಚರಿತ್ರೆಯನ್ನು 108 ಸಲ ಪಾರಾಯಣ ಮಾಡುವಂತೆ ಮತ್ತು ಒಂದೊಂದು ಪಾರಯನವು 3 ದಿನಗಳಲ್ಲಿ ಮುಗಿಸುವಂತೆ ಆಜ್ಞಾಪಿಸಿದರು. ಸಾಯಿಯವರ ಆಜ್ಞೆಯಂತೆ ಕುಶಾ ಭಾವ್ ರವರು ಗಾಣಗಾಪುರಕ್ಕೆ ತೆರಳಿ ಅಲ್ಲಿ 11 ತಿಂಗಳು ತಂಗಿದ್ದು ಗುರುಚರಿತ್ರೆಯನ್ನು 108 ಸಲ ಪಾರಾಯಣ ಮಾಡಿದರು.

ಕುಶಾ ಭಾವ್ ರವರು ತಮ್ಮ ಮಂತ್ರ ಶಕ್ತಿಯನ್ನು ಬಳಸಲು ಸಾಯಿಬಾಬಾರವರು ಬಿಡಲಿಲ್ಲ. ಸಾಯಿಯವರ ಆಜ್ಞೆಯಂತೆ ಕುಶಾ ಭಾವ್ ರವರು ತಮ್ಮ ಮಂತ್ರ ಶಕ್ತಿಯನ್ನು ಬಳಸುತ್ತಿರಲಿಲ್ಲ.

ಒಮ್ಮೆ ಏಕಾದಶಿಯ ದಿನದಂದು ಸಾಯಿಬಾಬಾರವರು ಕುಶಾ ಭಾವ್ ರವರನ್ನು "ಈ ದಿನ ಏನನ್ನು ತಿಂದೆ" ಎಂದು ಕೇಳಿದರು. ಅದಕ್ಕೆ ಕುಶಾ ಭಾವ್ ರವರು ಈ ದಿನ ಏಕಾದಶಿಯಾದ್ದರಿಂದ ಏನನ್ನು ತಿನ್ನಲಿಲ್ಲ ಎಂದರು. ಆಗ ಬಾಬಾರವರು ಏಕಾದಶಿ ಎಂದರೇನು ಎಂದು ಕೇಳಿದರು. ಕುಶಾಭಾವ್ ರವರು ಏಕಾದಶಿಯೆಂದರೆ ಉಪವಾಸ ಮಾಡುವುದು ಎಂದು ಹೇಳಿದರು. ಪುನಃ ಬಾಬಾರವರು ಉಪವಾಸ ಎಂದರೇನು ಎಂದು ಕೇಳಿದರು. ಅದಕ್ಕೆ ಇವರು ರೋಜಾ ಎಂದು ಉತ್ತರಿಸಿದರು. ಸಾಯಿಯವರು ಪುನಃ ರೋಜಾ ಎಂದರೆ ಏನು ಎಂದು ಕೇಳಿದರು. ಅದಕ್ಕೆ ಕುಶಾಭಾವ್ ರವರು ಗೆಡ್ಡೆ ಗೆಣಸುಗಳನ್ನು ಬಿಟ್ಟು ಬೇರೆ ಎನನ್ನು ಆ ದಿನ ತಿನ್ನಬಾರದು ಎಂದು ಹೇಳಿದರು. ಆಗ ಬಾಬಾರವರು ಅಲ್ಲಿಯೇ ಇದ್ದ ಈರುಳ್ಳಿಯನ್ನು ಇವರಿಗೆ ಕೊಟ್ಟು ತಿನ್ನಲು ಹೇಳಿದರು. ಕುಶಾಭಾವ್ ರವರು "ಬಾಬಾ ನೀವು ತಿಂದರೆ ನಾನು ತಿನ್ನುತ್ತೇನೆ" ಎಂದರು. ಬಾಬಾರವರು ಸ್ವಲ್ಪ ತಿಂದರು. ಆಗ ಕುಶಾಭಾವ್ ರವರು ಸಹ ತಿಂದರು. ಆಗ ಅಲ್ಲಿ ನೆರೆದಿದ್ದ ಭಕ್ತರಿಗೆ ಸಾಯಿಬಾಬಾರವರು "ಈ ಬ್ರಾಹ್ಮಣನನ್ನು ನೋಡಿ. ಇವನು ಏಕಾದಶಿಯ ದಿನ ಈರುಳ್ಳಿ ತಿನ್ನುತ್ತಿದ್ದಾನೆ" ಎಂದು ಹೇಳಿದರು. ಆಗ ಕುಶಾಭಾವ್ ರವರು "ಬಾಬಾರವರು ತಿಂದರು. ಅದಕ್ಕೆ ನಾನು ಸಹ ತಿಂದೆ" ಎಂದರು. ಆಗ ಬಾಬಾರವರು "ಇಲ್ಲ, ನಾನು ಏನು ತಿಂದಿದ್ದೇನೆ ನೋಡು" ಎಂದು ವಾಂತಿ ಮಾಡಿಕೊಂಡರು ಮತ್ತು ಅದರಲ್ಲಿ ಆಲೂಗೆಡ್ಡೆ ಇತ್ತು. ಕುಶಾಭಾವ್ ರವರಿಗೆ ಇದನ್ನು ನೋಡಿ ಅಚ್ಚರಿಯಾಯಿತು ಮತ್ತು ಇದನ್ನೇ ಸದಾವಕಾಶ ಎಂದು ತಿಳಿದುಕೊಂಡು ಆ ಆಲೂಗೆಡ್ಡೆಯನ್ನು ತೆಗೆದುಕೊಂಡು ನುಂಗಿದರು. ಬಾಬಾರವರು ಇವರನ್ನು ತೆಗಳಿ, ಹೊಡೆದು ಬಯ್ದರು. ಆದರೆ ಕುಶಾಭಾವ್ ಏನು ಉತ್ತರ ನೀಡಲಿಲ್ಲ. ಕೂಡಲೇ ಬಾಬಾರವರು ತಮ್ಮ ಮನಸ್ಸನ್ನು ಬದಲಾಯಿಸಿ ಕುಶಾಭಾವ್ ರವರಿಗೆ ಉಧಿಯನ್ನು ಉತ್ಪಾದಿಸುವ ಶಕ್ತಿಯನ್ನು ವರವಾಗಿ ನೀಡಿದರು. "ನೀನು ನನ್ನನ್ನು ಸ್ಮರಿಸಿ ಕೈಗಳನ್ನು ಹಿಡಿದರೆ ಶಿರಡಿಯ ಧುನಿ ಮಾತೆಯ ಉಧಿ ನಿನ್ನ ಕೈಗೆ ಬರುತ್ತದೆ. ಅದನ್ನು ಧಾರಾಳವಾಗಿ ಜನರಿಗೆ ಕೊಡು. ಮತ್ತು ಅದರಿಂದ ಜನರುಗಳಿಗೆ ಉಪಕಾರವಾಗಿ ನಿನಗೆ ಪುಣ್ಯ ಬರುತ್ತದೆ" ಎಂದು ತಿಳಿಸಿದರು. ತಮ್ಮ ಈ ಶಕ್ತಿಯಿಂದ ಕುಶಾಭಾವ್ ಅನೇಕ ಜನರ ರೋಗಗಳನ್ನು ಗುಣಪಡಿಸಿದರು.

ಒಮ್ಮೆ ಬಾಬಾರವರು ಕುಶಾಭಾವ್ ರವರಿಗೆ "ಮುಂದಿನ ಸಾರಿ ನೀನು ಬರುವಾಗ ಇಬ್ಬರು ಬನ್ನಿ" ಎಂದರು. ಕುಶಾಭಾವ್ ರವರ ತಂದೆಯವರು ಆ ಸಮಯದಲ್ಲಿ ಅಲ್ಲೇ ಇದ್ದರು ಮತ್ತು ಬಾಬಾರವರ ಮಾತಿನ ಅರ್ಥ ಕುಶಾಭಾವ್ ರವರು ಮದುವೆ ಮಾಡಿಕೊಂಡು ಬರಬೇಕೆಂದು ಇತ್ತು ಎಂದು ಹೇಳಿದ್ದಾರೆ. ಸ್ವಲ್ಪ ದಿನಗಳಲ್ಲೇ ಸಾಯಿಯವರು ನುಡಿದಂತೆ ಕುಶಾಭಾವ್ ರವರು ಮದುವೆಯಾದರು. ಆಗ ಅವರು ಶಿರಡಿಗೆ ಪತ್ನಿ ಸಮೇತ ಹೋಗಿ ಬಂದರು. ಅವರಿಗೆ ಮಕ್ಕಳು, ಮೊಮ್ಮಕ್ಕಳು ಕೂಡ ಹುಟ್ಟಿದರು.

ಒಮ್ಮೆ ಬಾಬಾರವರು "ನೀನು ನನ್ನನ್ನು ನೋಡಲು ಇಷ್ಟು ದೂರ ಏಕೆ ಬರುತ್ತೀಯ. ನಾನು ಅಲ್ಲಿಯೇ ಇದ್ದೇನೆ" ಎಂದರು. ಕುಶಾಭಾವ್ ರವರಿಗೆ ಅರ್ಥವಾಗಲಿಲ್ಲ. ಆಗ ಬಾಬಾರವರು ಮೀರಜ್ ಗಾವ್ ನಲ್ಲಿ ಒಂದು ಜಾಗದಲ್ಲಿ ಅಲ್ಲಿನ ಒಂದು ತರಹ ಹಣ್ಣಿನ ಗಿಡವನ್ನು ಕಿತ್ತರೆ ಅಲ್ಲಿ ಒಂದು ಸಮಾಧಿ ಇರುವುದಾಗಿ ಮತ್ತು ಅದನ್ನು ಪೂಜಿಸಲು ಅಜ್ಞಾಪಿಸಿದರು. ಅದರಂತೆ ಕುಶಾಭಾವ್ ರವರು ಆ ಸಮಾಧಿಯನ್ನು ಪೂಜಿಸಲು ಆರಂಭಿಸಿದರು. ಅಲ್ಲಿ ಅವರು ಬಾಬಾರವರ ದರ್ಶನ ಪಡೆದರು. ಒಮ್ಮೆ ದತ್ತ ಜಯಂತಿಯ ದಿನ ಬಾಬಾರವರು ಇವರಿಗೆ ದರ್ಶನ ನೀಡಿದರು. ಅಂದಿನಿಂದ "ದತ್ತ ಜಯಂತಿ" ಯ ದಿನ ಸಾಯಿಯವರು ಇಲ್ಲಿ ದರ್ಶನ ನೀಡುತ್ತಾರೆ. ಈ ಸ್ಥಳವನ್ನು "ದತ್ತ ಬಾಬಾ ಸಮಾಧಿ" ಎಂದು ಕರೆಯುತ್ತಾರೆ. ಅಲ್ಲಿ ಫಕೀರ್ ಶಾ ಎಂಬ ಸಂತರು ಸುಮಾರು 200 ವರ್ಷಗಳು ವಾಸ ಮಾಡಿರುತ್ತಾರೆ. ಇದೇ ಸ್ಥಳದ ಬಳಿ ಅವರ ಗೋರಿ ಇದೆ. ಈ ಫಕೀರ್ ಶಾ ಅಥವಾ ದತ್ತ ಅವರು ಆಗಾಗೆ ಸಾಯಿಬಾಬಾರವರ ಬಗ್ಗೆ ಮಾತನಾಡುತ್ತಿದ್ದರು. ಜನಗಳು ಅವರನ್ನು ವರ್ಷಕ್ಕೊಮ್ಮೆ ಭೇಟಿ ಮಾಡಲು ಬರುತ್ತಿದ್ದರು. ಫಕೀರ್ ಶಾ ರವರು ಯಾರಿಗೂ ಯಾವ ಉಪದೇಶಗಳನ್ನು ನೀಡುತ್ತಿರಲಿಲ್ಲ. ಅವರನ್ನು ನೋಡಿದರೆ ಸಾಕು, ಜನಗಳಿಗೆ ಒಂದು ರೀತಿಯ ವಿಶ್ವಾಸ ಉಂಟಾಗುತ್ತಿತ್ತು. ಭಕ್ತರು ಅವರನ್ನು ಪೂಜಿಸುತ್ತಿದ್ದರು ಮತ್ತು ಅವರು ಸಾಯಿಬಾಬಾರವರು ಜೀವಂತವಾಗಿದ್ದಾರೆ ಎಂದು ಯಾವಾಗಲೂ ಹೇಳುತ್ತಿದ್ದರು. ಆದರೆ ಯಾವ ಅವತಾರವಾಗಿ ಎಂದು ತಿಳಿಸಲಿಲ್ಲ. ಫಕೀರ್ ಶಾ ರವರು ತಾವು ಮತ್ತು ಬಾಬಾರವರು ಒಂದೇ ಮಾರ್ಗದ ಸಂಬಂಧಿಗಳು ಎಂದು ಹೇಳಿದ್ದಾರೆ.

ಸಾಯಿಯವರು ಕುಶಾಭಾವ್ ರವರನ್ನು ಓರ್ವ ದತ್ತಾತ್ರೇಯ ಮಹಾರಾಜರಿಂದ ಸ್ವೀಕರಿಸಿ ಮತ್ತೋರ್ವ ದತ್ತ ಫಕೀರ್ ಬಾಬಾ ವಶಕ್ಕೆ ಒಪ್ಪಿಸಿದರು. ಕುಶಾಭಾವ್ ರವರು ಸ್ವಲ್ಪ ವರ್ಷಗಳಲ್ಲೇ ಗತಿಸಿದರು. ಅವರ ಗೋರಿ ಶಿವಾಜಿ ಬೆಟ್ಟದ ಹತ್ತಿರ ಇದೆ. ಈಗಲೂ ಕೂಡ ಅವರ ಭಕ್ತರು ಅವರನ್ನು ಪೂಜಿಸುತ್ತಿದ್ದಾರೆ.

No comments:

Post a Comment