ಅಣ್ಣಾ ಬಾಬರೆ
ಅಣ್ಣಾ ಚಿಂಚಿಣಿಕರ್ ಆಲಿಯಾಸ್ ದಾಮೋದರ ಘನಶ್ಯಾಮ ಬಾಬರೆ ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಇವರು ಮಾತು ಒರಟಾದರೂ ಕೂಡ ಹೃದಯ ಬಹಳ ಒಳ್ಳೆಯದಾಗಿತ್ತು. ಇವರು ತಮ್ಮ ನೇರ ನುಡಿಗಳಿಂದ ಜನರಿಗೆ ಇಷ್ಟವಾಗಿದ್ದರು. ಇವರು ಯಾರಿಗೂ ಹೆದರುತ್ತಿರಲಿಲ್ಲ. ಆಲ್ಲದೇ, ತಮ್ಮ ಎಲ್ಲಾ ವ್ಯವಹಾರಗಳನ್ನು ಚೊಕ್ಕಟವಾಗಿ ಇಟ್ಟುಕೊಂಡಿದ್ದರು ಮತ್ತು ತಮ್ಮ ಎಲ್ಲಾ ವ್ಯವಹಾರಗಳಿಗೆ ಸಾಲವನ್ನು ಮಾಡದೇ ಹಣವಿದ್ದರೆ ಮಾತ್ರ ವ್ಯವಹಾರ ಮಾಡುತ್ತಿದ್ದರು. ಹೊರನೋಟಕ್ಕೆ ನಿರ್ದಯ ವ್ಯಕ್ತಿಯಂತೆ ಕಂಡರೂ ಕೂಡ ಬಹಳ ಒಳ್ಳೆಯ ಸ್ವಭಾವ ಹೊಂದಿದ್ದರು. ಆದ್ದರಿಂದ ಸಾಯಿಬಾಬಾರವರು ಇವರನ್ನು ಕಂಡರೆ ಬಹಳ ಪ್ರೀತಿಯನ್ನು ತೋರಿಸುತ್ತಿದ್ದರು.ಒಂದು ದಿನ ಮಸೀದಿಯಲ್ಲಿ ಬಹಳ ಜನ ಸಾಯಿ ಭಕ್ತರು ನೆರೆದಿದ್ದರು. ಎಲ್ಲರು ಅವರದೇ ಆದ ರೀತಿಯಲ್ಲಿ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದರು. ಅಣ್ಣಾ ಬಾಬರೆಯವರು ಸಾಯಿಬಾಬಾರವರ ಎಡ ಬದಿಯಲ್ಲಿ ಸಾಯಿಯವರು ಕುಳಿತುಕೊಳ್ಳುತ್ತಿದ್ದ ಸರಳುಗಳ ಪಕ್ಕದಲ್ಲಿ ನಿಂತುಕೊಂಡು ಸಾಯಿಬಾಬಾರವರ ಎಡಗೈಯನ್ನು ಎಣ್ಣೆ ಹೆಚ್ಚಿ ನೀವುತ್ತಿದ್ದರು. ಸಾಯಿಬಾಬಾರವರ ಬಲಭಾಗದಲ್ಲಿ ವೇಣುಭಾಯಿ ಕೌಜಲಗಿ ಎಂಬ ಮುದುಕಿಯು ಕುಳಿತಿದ್ದಳು. ಇವಳೊಬ್ಬ ವಿಧವೆ. ಇವಳನ್ನು ಸಾಯಿಬಾಬಾರವರು ತಾಯಿ ಎಂದು ಮತ್ತು ಮಸೀದಿಗೆ ಬರುತ್ತಿದ್ದ ಜನರು ಮಾವಸೀಬಾಯಿ ಎಂದು ಕರೆಯುತ್ತಿದ್ದರು. ಇವಳಿಗೆ ಬಹಳ ವಯಸ್ಸಾಗಿತ್ತು. ಆಲ್ಲದೇ ಇವಳ ಆತ್ಮ ಪರಿಶುದ್ದವಾಗಿತ್ತು. ತನ್ನ ಎರಡು ಕೈಗಳಿಂದ ಸಾಯಿಬಾಬಾರವರ ಹೊಟ್ಟೆಯನ್ನು ಬಳಸಿಕೊಂಡು ಚೆನ್ನಾಗಿ ನೀವುತ್ತಿದ್ದಳು. ಅವಳು ಹೊಟ್ಟೆಯನ್ನು ತಿಕ್ಕುತ್ತಿದ್ದ ರಭಸಕ್ಕೆ ಹೊಟ್ಟೆ ಮತ್ತು ಬೆನ್ನು ಸೇರಿಕೊಂಡು ಒಂದೇ ಸಮ ಕಾಣುತ್ತಿತ್ತು. ಅವಳು ನೀವುತ್ತಿದ್ದ ರಭಸಕ್ಕೆ ಸಾಯಿಬಾಬಾರವರು ಎಡದಿಂದ ಬಲಕ್ಕೆ ಓಲಾಡುತ್ತಿದ್ದರು. ಎಡಭಾಗದಲ್ಲಿದ್ದ ಅಣ್ಣಾ ಬಾಬರೆ ಅಲುಗಾಡದೆ ಬಾಬಾರವರ ಸೇವೆ ಮಾಡುತ್ತಿದ್ದರು. ಆದರೆ ಮಾವಸೀಬಾಯಿಯ ಮುಖವು ಅತ್ತಿತ್ತ ಹೊರಳಾಡುತ್ತಿತ್ತು. ಹೀಗೆಯೇ ಹೊರಳಾಡು ತ್ತಿದ್ದಾಗ ಅವಳ ಮುಖವು ಅಣ್ಣಾ ಬಾಬರೆಯವರ ಮುಖಕ್ಕೆ ತಗುಲಿತು. ಹಾಸ್ಯ ಪ್ರವೃತ್ತಿಯ ಮಾವಸೀಬಾಯಿ "ಈ ಅಣ್ಣಾ ಎಷ್ಟು ಕೆಟ್ಟವನು. ನನ್ನ ಮುಖಕ್ಕೆ ಮುತ್ತಿಡಲು ಪ್ರಯತ್ನಿಸುತ್ತಿದ್ದಾನೆ. ವಯಸ್ಸಾಗಿ ತಲೆ ಕೂದಲೆಲ್ಲ ಬೆಳ್ಳಗಾಗಿವೆ. ಆದರೂ ಕೂಡ ಇವನಿಗೆ ಸ್ವಲ್ಪವೂ ನಾಚಿಕೆಯಿಲ್ಲ" ಎಂದು ರೇಗಿಸಿದಳು. ಈ ಮಾತುಗಳು ಅಣ್ಣಾ ಬಾಬರೆಯವರಿಗೆ ಕೋಪವನ್ನು ತರಿಸಿತು. ಅವರು ತಮ್ಮ ಅಂಗಿಯ ತೋಳುಗಳನ್ನು ಮೇಲೆ ಸರಿಸುತ್ತ ಕೋಪದಿಂದ "ಏನು, ನೀನು ನನಗೆ ಕೆಟ್ಟ ಮನಸ್ಸಿನ ಮುದುಕನೆಂದೆಯಾ? ನನಗೇನು ಅಷ್ಟು ಕೂಡ ಬುದ್ಧಿ ಇಲ್ಲವೇ? ನಾನೇನು ಜಗಳಗಂಟನಲ್ಲ. ನೀನೇ ಕಾಲು ಕೆರೆದುಕೊಂಡು ಜಗಳ ಆಡುತ್ತಿರುವೆ" ಎಂದು ಕಿರುಚಾಡಿದರು. ಮಸೀದಿಯಲ್ಲಿ ನೆರೆದಿದ್ದ ಎಲ್ಲರು ಈ ದೃಶ್ಯವನ್ನು ನೋಡಿ ಆನಂದಿಸುತ್ತಿದ್ದರು. ಸಾಯಿಬಾಬಾರವರು ಇವರಿಬ್ಬರನ್ನು ಬಹಳ ಪ್ರೀತಿಸುತ್ತಿದ್ದರು ಮತ್ತು ಇಬ್ಬರನ್ನು ತಮ್ಮ ಮಾತುಗಳಿಂದ ಸಮಾಧಾನ ಮಾಡಲು ಯತ್ನಿಸಿದರು. ಸಾಯಿಬಾಬಾರವರು ಪ್ರೀತಿಯಿಂದ "ಓ ಅಣ್ಣಾ, ಏಕೆ ನೀನು ಸುಮ್ಮನೆ ಕೂಗಾಡುತ್ತಿರುವೆ? ಮಗನು ತನ್ನ ತಾಯಿಗೆ ಮುತ್ತಿಡುವುದರಲ್ಲಿ ತಪ್ಪೇನಿದೆ?" ಎಂದರು. ಸಾಯಿಯವರ ಈ ಮಾತುಗಳನ್ನು ಕೇಳಿ ಇಬ್ಬರು ಸಮಾಧಾನ ಹೊಂದಿದರು. ಮಸೀದಿಯಲ್ಲಿ ಆಗ ನೆರೆದಿದ್ದ ಎಲ್ಲಾ ಸಾಯಿಭಕ್ತರು ಈ ವಿನೋದವನ್ನು ಕಂಡು ಮನಸಾರೆ ನಕ್ಕು ಆನಂದಿಸಿದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment