Thursday, October 21, 2010

ಪ್ರಥಮ ವಾರ್ಷಿಕೋತ್ಸವ ಆಚರಿಸಿದ ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣ - ಕೃಪೆ : ಸಾಯಿಅಮೃತಧಾರಾ.ಕಾಂ 

ಸಾಯಿಅಮೃತವಾಣಿ ಬ್ಲಾಗ್ ನ ಮಾತೃ ಅಂತರ್ಜಾಲ ತಾಣವಾದ ಸಾಯಿಅಮೃತಧಾರಾ.ಕಾಂ 17ನೇ ಅಕ್ಟೋಬರ್ 2010 ರ ವಿಜಯದಶಮಿಯಂದು ತನ್ನ ಪ್ರಥಮ ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಬೆಂಗಳೂರಿನ ಜಯನಗರ 9 ನೇ ಬಡಾವಣೆಯ ಸಾಯಿ ಧನ್ವಂತರಿ ಧ್ಯಾನ ಮಂದಿರದಲ್ಲಿ ಆಚರಿಸಿಕೊಂಡಿತು. ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣವನ್ನು ಕಳೆದ ವರ್ಷದ 28ನೇ ಸೆಪ್ಟೆಂಬರ್ 2009 ರ ವಿಜಯದಶಮಿಯಂದು ಬೆಂಗಳೂರಿನ ರಾಜಾಜಿನಗರದ ಸಾಯಿಮಂದಿರದಲ್ಲಿ ಪ್ರಾರಂಭ ಮಾಡಲಾಗಿತ್ತು. 

ಸಾಯಿಬಾಬಾರವರಿಗೆ ಅಭಿಷೇಕ ಮಾಡುತ್ತಿರುವ ದೃಶ್ಯ 

ಸಾಯಿಭಕ್ತರು ಸಾಯಿಸಹಸ್ರನಾಮ ಭಸ್ಮಾರ್ಚನೆ ಮಾಡುತ್ತಿರುವ ದೃಶ್ಯ 

ಸಾಯಿಬಾಬಾರವರಿಗೆ ಬೆಳಗಿನ ಕಾಕಡಾ ಆರತಿ ಮಾಡುವುದರೊಂದಿಗೆ ಆ ದಿನದ ಕಾರ್ಯಕ್ರಮಗಳು ಆರಂಭವಾದವು. ಅನಂತರ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ರುದ್ರ ಮಂತ್ರಗಳು ಹಾಗೂ ಕೃಷ್ಣ ಯಜುರ್ವೇದದ ಮಂತ್ರ ಪುರಸ್ಸರವಾಗಿ ನೆರೆದ ಎಲ್ಲಾ ಸಾಯಿಭಕ್ತರಿಂದ  ಮಂಗಳಸ್ನಾನ ಕಾರ್ಯಕ್ರಮ ನಡೆಯಿತು. ಇದಾದ ನಂತರ ಸಾಯಿ ಸಹಸ್ರನಾಮಪೂರ್ವಕ ಭಸ್ಮಾರ್ಚನೆಯಲ್ಲಿ ಎಲ್ಲಾ ಸಾಯಿಭಕ್ತರು ಭಾಗವಹಿಸಿದರು. ಇದರ ಜೊತೆಜೊತೆಯಲ್ಲಿ ಸಹಸ್ರಬಿಲ್ವಾರ್ಚನೆಯನ್ನು ಕೂಡ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಮಾಡಲಾಯಿತು. ಭಸ್ಮಾರ್ಚನೆಯ ಬಳಿಕ ಅನಂತಕೋಟಿ ಬ್ರಹ್ಮಾಂಡನಾಯಕರಾದ ಸಾಯಿಬಾಬಾರವರ ಬಗ್ಗೆ ಡಾ.ಪಿ.ವಿ.ಶಿವಚರಣ್ ರವರು ಮಾತನಾಡಿ ಋಗ್ವೇದ, ಯಜುರ್ವೇದ,ಸಾಮವೇದ,ಅಥರ್ವವೇದ ಮತ್ತು ತೈತ್ತರೀಯ ಉಪನಿಷತ್ತಿನ ಭಾಗವಾದ ಭೃಗುವಲ್ಲಿಯನ್ನು ಉಲ್ಲೇಖಿಸಿ ಅವುಗಳಲ್ಲಿ ಅಡಕವಾಗಿರುವ ಸಾಯಿತತ್ವವನ್ನು ಬಹಳ ಸುಂದರವಾಗಿ ವರ್ಣಿಸಿದರು. ನಂತರ  ಡಾ.ಪಿ.ವಿ.ಶಿವಚರಣ್ ರವರು ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣದಲ್ಲಿ ಸಿಗುವ ಎಲ್ಲಾ ಮಾಹಿತಿಗಳ ಬಗ್ಗೆ ನೆರೆದಿದ್ದ ಎಲ್ಲಾ ಸಾಯಿಭಕ್ತರಿಗೆ ತಿಳಿಯಪಡಿಸಿದರು. ಆಲ್ಲದೇ, ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣವನ್ನು ಉತ್ತಮ ಅಂತರ್ಜಾಲ ತಾಣವನ್ನಾಗಿ ಮಾಡಲು ಸಹಾಯ ಮಾಡಿದ ಮತ್ತು ಮಾಡುತ್ತಿರುವ ಶಿರಡಿ ಸಾಯಿಬಾಬಾ ಸಂಸ್ಥಾನ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮಾಡಿದ ಮತ್ತು ಮಾಡುತ್ತಿರುವ ನೂರಾರು ಸಾಯಿಬಂಧುಗಳ ಸಹಾಯವನ್ನು ಸ್ಮರಿಸಿದರು ಮತ್ತು ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣವನ್ನು ಇನ್ನು ಹೆಚ್ಚು ಉತ್ತಮವಾಗಿ  ಮಾಡಲು ಎಲ್ಲಾ ಸಾಯಿಬಂಧುಗಳ ಸಹಕಾರವನ್ನು ಕೋರಿದರು. ನಂತರ ವಿಜಯದಶಮಿಯ ಕಡೆಯ ದಿವಸವಾದ ಪ್ರಯುಕ್ತ ವಾಡಿಕೆಯಂತೆ "ಮಹಿಷಾಸುರ ಮರ್ಧಿನಿ ಸ್ತೋತ್ರ" ವನ್ನು ನೆರೆದಿದ್ದ ಎಲ್ಲಾ ಸಾಯಿಭಕ್ತರು ಒಕ್ಕೊರೊಲಿನಿಂದ ಹಾಡಿದರು. ಸಾಯಿಬಾಬಾರವರೇ ಭಗವತಿ ದುರ್ಗಾ ಸ್ವರೂಪವನ್ನು ಪಡೆದಂತೆ ಮತ್ತು ಎಲ್ಲರನ್ನು ಹರಸಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಯಿಭಕ್ತರಿಗೆ ಅನುಭವವಾಯಿತು. ಮಧ್ಯಾನ್ಹ ಆರತಿಯೊಂದಿಗೆ ಬೆಳಗಿನ ಕಾರ್ಯಕ್ರಮ ಸುಸಂಪನ್ನವಾಯಿತು. ಬಿಲ್ವ ದಳಗಳಿಂದ ಪೂಜಿಸಲ್ಪಟ್ಟ ಶಿರಡಿ ಸಾಯಿಬಾಬಾರವರು ಸಾಕ್ಷಾತ್ ಈಶ್ವರನಂತೆ ಕಂಗೊಳಿಸುತ್ತಿದ್ದರು. 

ಸಂಜೆಯ ಕಾರ್ಯಕ್ರಮಗಳು 6 ಘಂಟೆಗೆ  ಧೂಪಾರತಿಯೊಂದಿಗೆ ಪ್ರಾರಂಭವಾಯಿತು. ನಂತರ ಎಲ್ಲಾ ಭಕ್ತರು ವಿಷ್ಣು ಸಹಸ್ರನಾಮ ಪಾರಾಯಣವನ್ನು ಅತ್ಯಂತ ಶ್ರದ್ದೆ ಮತ್ತು ಭಕ್ತಿಯಿಂದ ಮಾಡಿದರು. ಆನಂತರ ಶ್ರೀ.ಗಂಗಾಧರ ತಿಲಕ್, ಶ್ರೀ. ಕಾರ್ತಿಕ್  ಹಾಗೂ ಶ್ರೀ.ಶಿವಚರಣ್ ಮತ್ತು ವೃಂದದವರು ಸುಮಾರು ಒಂದೂವರೆ ಘಂಟೆಗಳ ಕಾಲ "ಸಾಯಿ ಭಜನ ಸಂಧ್ಯಾ" ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೆರೆದ ಎಲ್ಲಾ ಸಾಯಿಭಕ್ತರು ಸಾಯಿ ಭಜನೆಗಳನ್ನು ಏಕಕಂಠದಿಂದ ಹಾಡಿ ಆನಂದಿಸಿದರು. ರಾತ್ರಿಯ ಆರತಿಯೊಂದಿಗೆ ದಿನದ ಕಾರ್ಯಕ್ರಮಗಳು ಪೂರ್ಣವಾದವು. 

"ಭಜನ ಸಂಧ್ಯಾ" ಕಾರ್ಯಕ್ರಮ ನಡೆಸಿಕೊಡುತ್ತಿರುವ ಶ್ರೀ.ಗಂಗಾಧರ ತಿಲಕ್,ಶ್ರೀ.ಶಿವಚರಣ್,ಶ್ರೀ.ಕಾರ್ತಿಕ್ ಮತ್ತು ವೃಂದ 

ಸಾಯಿಅಮೃತಧಾರಾ.ಕಾಂ ಬಳಗವು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಅನುವು ಮಾಡಿಕೊಟ್ಟ ಸಾಯಿ ಧನ್ವಂತರಿ ಧ್ಯಾನ ಮಂದಿರದ ಮಾಲಿಕರಾದ ಶ್ರೀಮತಿ ಮತ್ತು ಶ್ರೀ.ಸತೀಶ್ ದಂಪತಿಗಳಿಗೆ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸಲು ಮರೆಯಲಿಲ್ಲ. 

ಕನ್ನಡ ಅನುವಾದ : ಶ್ರೀಕಂಠ ಶರ್ಮ


No comments:

Post a Comment